ಸಾಫ್ಟ್‌ವೇರ್‌ ಲೋಕದ ಸಂಕಟಗಳ ಕಥೆ ‘ಅಯನ’

8 Sep, 2017
ವಿಜಯ್ ಜೋಷಿ

ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕೆಲಸ ಮಾಡುವವರು ಎಂದರೆ ದೊಡ್ಡ ವೇತನ ಪಡೆಯುವವರು, ಬಹಳ ಸಣ್ಣ ವಯಸ್ಸಿನಲ್ಲೇ ಬೆಂಗಳೂರಿನಲ್ಲೊಂದು ಫ್ಲ್ಯಾಟ್‌ ಖರೀದಿಸುತ್ತಾರೆ, ವಿದೇಶಗಳಿಗೆ ಆಗಾಗ ಹೋಗಿಬರುತ್ತಿರುತ್ತಾರೆ ಎಂಬ ಭಾವನೆ ಮೂಡುವುದು ಅಸಹಜವೇನೂ ಅಲ್ಲ. ಆದರೆ, ಸಾಫ್ಟ್‌ವೇರ್‌ ಊದ್ಯೋಗಿಗಳ ಜೀವನ ಇಷ್ಟು ಮಾತ್ರವೇನಾ? ಅವರ ಕಷ್ಟಗಳ ಬಗ್ಗೆ ಜನಸಾಮಾನ್ಯರಿಗೆ ಯಾರಾದರೂ ಹೇಳಿದ್ದಾರಾ?

ಅವರ ಕಷ್ಟ, ದುಃಖ, ಸಂಕಟಗಳ ಬಗ್ಗೆ ಇದುವರೆಗೆ ಎಷ್ಟು ಜನ ಕಥೆ ಹೇಳಿದ್ದಾರೆ ಅಥವಾ ಹೇಳಿಲ್ಲ ಎಂಬ ವಿಚಾರ ಒಂದೆಡೆ ಇಡೋಣ. ಈಗ ‘ಅಯನ’ ಎಂಬ ಸಿನಿಮಾದ ಮೂಲಕ ಈ ಕಥೆಯನ್ನು ಹೇಳುತ್ತಿದ್ದಾರೆ ನಿರ್ದೇಶಕ ಗಂಗಾಧರ ಸಾಲಿಮಠ. ಈ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ಐ.ಟಿ. ಕ್ಷೇತ್ರವನ್ನೇ ಸಿನಿಮಾದ ಕೇಂದ್ರವನ್ನಾಗಿಸಿಕೊಂಡು, ಆ ಕ್ಷೇತ್ರದಲ್ಲಿ ನವೋದ್ಯಮವೊಂದನ್ನು ಸ್ಥಾಪಿಸಲು ಮುಂದಾಗುವ ವ್ಯಕ್ತಿಯ ಸುತ್ತ ಕಥೆ ಹೆಣೆದಿರುವುದು ಇದೇ ಮೊದಲಿರಬೇಕು. ಸಾಲಿಮಠ ನಿರ್ದೇಶನದ ಮೊದಲ ಸಿನಿಮಾ ಇದು.

ಸಾಲಿಮಠ ಅವರು ‘ಚಂದನವನ’ದ ಜೊತೆ ಮಾತಿಗೆ ಸಿಕ್ಕಿದ್ದರು. ‘ಇಂಥದ್ದೊಂದು ಕಥೆಯನ್ನು ಸಿನಿಮಾ ಮೂಲಕ ಹೇಳಬೇಕು ಎಂದು ಅನಿಸಿದ್ದು ಏಕೆ’ ಎಂಬ ಪ್ರಶ್ನೆಯನ್ನು ಮಾತಿನ ಆರಂಭದಲ್ಲಿ ಸಾಲಿಮಠ ಮುಂದಿಡಲಾಯಿತು.

‘ನಾನು ಚಿತ್ರರಂಗಕ್ಕೆ ಹೊಸಬನಾಗಿರುವ ಕಾರಣ ನಾನು ಹೊಸದೇನನ್ನು ಹೇಳಬಲ್ಲೆ ಎಂಬ ಪ್ರಶ್ನೆ ಸಿನಿಮಾ ವೀಕ್ಷಕರಲ್ಲಿ ಇರುತ್ತದೆ. ಈ ಕಥೆಗೆ ಸಂಬಂಧಿಸಿದ ಕೆಲವು ವೈಯಕ್ತಿಕ ಅನುಭವಗಳು ನನ್ನಲ್ಲಿ ಇವೆ. ಹಲವರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾಗುತ್ತಾರೆ. ಹಾಗೆ ಎಂಜಿನಿಯರ್‌ ಆದವರಲ್ಲಿ ‘ನಾನೂ ಒಂದು ಕಂಪೆನಿ ಕಟ್ಟಬೇಕು’ ಎಂಬ ಕನಸು ಇರುತ್ತದೆ. ಕೆಲಸ ಬಿಟ್ಟು ಹೊರಗೆ ಬಂದು, ಕಂಪೆನಿ ಕಟ್ಟಲು ಮುಂದಾದವರ ಕಷ್ಟ, ಸುಖಗಳನ್ನು ನಾನು ಕಂಡಿದ್ದೇನೆ. ಇಂಥವರ ಸಂಕಟ, ಕಷ್ಟಗಳು ಹೆಚ್ಚಾಗಿ ಚರ್ಚೆಗೆ ಒಳಗಾಗಿಲ್ಲ. ಹಾಗಾಗಿ, ಇಂಥವರ ಬದುಕನ್ನು ಸಿನಿಮಾ ಮೂಲಕ ತೋರಿಸಬೇಕು ಎಂದು ನನಗೆ ಅನಿಸಿತು. ಜೊತೆಗೆ ಸಿನಿಮಾ ರಂಗದ ಸೆಳೆತ ಮೊದಲಿನಿಂದಲೂ ಇತ್ತು. ನನಗೆ ಈ ಸಿನಿಮಾ ಮಾಡಲು ಇದೇ ಒಂದು ಪ್ರಚೋದನೆ ಇದ್ದಿರಬಹುದು’ ಎನ್ನುತ್ತಾರೆ ಸಾಲಿಮಠ.

‘ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಅಂದರೆ ದೊಡ್ಡ ಸಂಬಳ, ಕಾರಿನಲ್ಲಿ ಸುತ್ತಾಟ. ಫ್ಲ್ಯಾಟ್‌ ಖರೀದಿ ಮಾತ್ರವೇ ಅಲ್ಲ. ಆದರೆ, ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಎಂದರೆ ಇಷ್ಟು ಮಾತ್ರ ಎಂಬ ಕಲ್ಪನೆ ಹಲವರಲ್ಲಿ ಇದೆ. ಅವರ ಜೀವನದಲ್ಲಿ ಕೂಡ ಬಹಳಷ್ಟು ಒತ್ತಡಗಳಿವೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಇತರ ಕ್ಷೇತ್ರಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡವರು ಅನುಭವಿಸುವ ಒತ್ತಡಗಳಿಗೂ, ಸಾಫ್ಟ್‌ವೇರ್‌ ಉದ್ಯೋಗಿ ಅನುಭವಿಸುವ ಒತ್ತಡಕ್ಕೂ ಬಹಳ ವ್ಯತ್ಯಾಸ ಇದೆ’ ಎಂದು ಮತ್ತೊಂದು ಮಾತನ್ನು ಅವರು ಸೇರಿಸಿದರು.

‘ಹಾಗಾದರೆ, ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ಕಷ್ಟ, ನೋವು, ಸಂಕಟಗಳು ಈ ಸಿನಿಮಾದಲ್ಲಿ ಜಾಗ ಪಡೆದಿವೆಯೇ’ ಎಂಬ ಪ್ರಶ್ನೆಯನ್ನು ಥಟ್ ಎಂದು ಸಾಲಿಮಠ ಅವರ ಮುಂದಿಡಲಾಯಿತು. ‘ಹೌದು. ಅವೆಲ್ಲವೂ ಈ ಸಿನಿಮಾದಲ್ಲಿ ಧ್ವನಿಸಿವೆ. ಬೆಳಿಗ್ಗೆ 10 ಗಂಟೆಗೆ ಆಫೀಸಿಗೆ ಹೋಗಿ, ಸಂಜೆ 6 ಗಂಟೆಗೆ ಆಫೀಸಿನಿಂದ ಮನೆಗೆ ಮರಳುವ ಸಾಫ್ಟ್‌ವೇರ್‌ ಉದ್ಯೋಗಿಯ ಕಥೆ ಇದಲ್ಲ. ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಅಲ್ಲಿಂದ ಹೊರಗೆ ಬಂದು, ತನ್ನ ಉಳಿತಾಯದ ಹಣ ಹೂಡಿಕೆ ಮಾಡಿ ಸಾಫ್ಟ್‌ವೇರ್‌ ಕ್ಷೇತ್ರದಲ್ಲೇ ನವೋದ್ಯಮವೊಂದನ್ನು ಆರಂಭಿಸಲು ಮುಂದಾದಾಗ ಅನುಭವಿಸುವ ಯಾತನೆಗಳ ಕಥೆ ಇದು. ಆತ ನವೋದ್ಯಮ ಆರಂಭಿಸಲು ಅನುಭವಿಸುವ ಕಷ್ಟ, ತನ್ನದೇ ಆದ ಉತ್ಪನ್ನವೊಂದನ್ನು ಸಿದ್ಧಪಡಿಸುವಾಗ ಎದುರಿಸುವ ಸವಾಲು, ತನ್ನ ಕಂಪೆನಿಗಾಗಿ ಒಂದು ತಂಡವನ್ನು ಕಟ್ಟಲು ವಹಿಸುವ ಶ್ರಮದ ಕಥೆ ಇಲ್ಲಿದೆ’ ಎಂಬ ಉತ್ತರ ನೀಡಿದರು ಸಾಲಿಮಠ. ಅಂದಹಾಗೆ, ಸಾಲಿಮಠ ಅವರೂ ಈ ಹಿಂದೆ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದವರು. ಈಗ ಪೂರ್ಣಪ್ರಮಾಣದಲ್ಲಿ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಧ್ಯಮ ವರ್ಗದಲ್ಲಿ ಜನಿಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆದ ಯುವಕರಿಗೆ, ಅವರ ತಂದೆ–ತಾಯಿಗಳಿಗೆ ಇಷ್ಟವಾಗುವಂಥ ಅಂಶಗಳೂ ಈ ಸಿನಿಮಾದಲ್ಲಿ ಇವೆ ಎನ್ನುತ್ತಾರೆ ಅವರು. ‘ಈ ಸಿನಿಮಾದಲ್ಲಿನ ಕಥೆ ಇವರೆಲ್ಲರಿಗೂ ಸಂಬಂಧಿಸಿದ್ದು. ಸಿನಿಮಾ ವೀಕ್ಷಿಸಿದ ನಂತರ, ಈ ಕ್ಷೇತ್ರದಲ್ಲಿ ಹೀಗೆಲ್ಲ ಇದೆಯಾ ಎಂದು ಚಕಿತರಾಗುತ್ತಾರೆ. ಇಲ್ಲಿನ ಪಾತ್ರಗಳ ಜೊತೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ನಾನು ಈ ಸಿನಿಮಾವನ್ನು ಆದಷ್ಟು ಮಟ್ಟಿಗೆ ವಾಸ್ತವಕ್ಕೆ ಹತ್ತಿರವಾಗಿ ರೂಪಿಸಿದ್ದೇನೆ. ಹಾಗಂತ, ಸಿನಿಮಾ ಮಾರುಕಟ್ಟೆಯನ್ನು ಮಾತ್ರ ಆಲೋಚನೆಯಲ್ಲಿ ಇಟ್ಟುಕೊಂಡು ಇದನ್ನು ಮಾಡಿಲ್ಲ. ನನಗೊಂದು ಕಥೆ ಹೇಳಬೇಕಿತ್ತು, ಹೇಳಿದ್ದೇನೆ. ನಾನು ಈ ಹಿಂದೆ ಯಾವುದೇ ಸಿನಿಮಾಗಳಲ್ಲಿ ಕೆಲಸ ಮಾಡಿದವ ಅಲ್ಲ. ಜನ ಏನನ್ನು ಕಂಡು ಚಪ್ಪಾಳೆ ಹೊಡೆಯುತ್ತಾರೆ, ಏನನ್ನು ನೋಡಿ ಶಿಳ್ಳೆ ಹಾಕುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಈ ಕಥೆ ಹೇಳಬೇಕು ಎಂಬ ಉದ್ದೇಶದಿಂದ ಸಿನಿಮಾ ಮಾಡಿದ್ದೇನೆ’ ಎಂದರು.

ಈ ಸಿನಿಮಾದ ಟ್ರೇಲರ್‌ಅನ್ನು ಚಿತ್ರತಂಡ ಈ ಹಿಂದೆಯೇ ಬಿಡುಗಡೆ ಮಾಡಿದೆ. ಟ್ರೇಲರ್ ಗಮನಿಸಿದರೆ, ಈ ಸಿನಿಮಾದಲ್ಲಿ ಹೀರೊ ಇಲ್ಲ. ಬದಲಿಗೆ, ಪ್ರಧಾನ ಪಾತ್ರಗಳು ಮಾತ್ರ ಇವೆ ಎಂದು ಭಾಸವಾಗುತ್ತದೆ. ‘ಹೀರೊ ಇಲ್ಲದಿರುವುದು ಪ್ರಜ್ಞಾಪೂರ್ವಕ ತೀರ್ಮಾನವೇ’ ಎಂದು ಪ್ರಶ್ನಿಸಿದಾಗ: ‘ಹೌದು, ಸಿನಿಮಾವು ವಾಸ್ತವಕ್ಕೆ ಹತ್ತಿರವಾಗಿರಲಿ ಎಂಬ ಉದ್ದೇಶದಿಂದ ಪ್ರಜ್ಞಾಪೂರ್ವಕವಾಗಿಯೇ ಹೀಗೆ ಮಾಡಿದ್ದೇವೆ. ನಾನು ಸಿನಿಮಾ ಕಥೆಯನ್ನು ಹಿರೋಯಿಕ್ ಆಗಿ ತೋರಿಸಬಹುದಿತ್ತು. ಆದರೆ, ಹಾಗೆ ಮಾಡಿಲ್ಲ. ಆಕಾಶದೆತ್ತರಕ್ಕೆ ಬೆಳೆಯುವ ಶೇಕಡ 1ರಷ್ಟು ಜನರ ಕಥೆ ಇದರಲ್ಲಿ ಇಲ್ಲ. ಇನ್ನುಳಿದ ಶೇಕಡ 99ರಷ್ಟು ಜನರ ಕಥೆ ಇಲ್ಲಿದೆ’ ಎಂದರು.

‘ನವೋದ್ಯಮಗಳ ಯಶಸ್ಸು ಅಥವಾ ಸೋಲು ಮಾರುಕಟ್ಟೆ ಶಕ್ತಿಗಳನ್ನೂ ಅವಲಂಬಿಸಿರುತ್ತದೆ. ಮಾರುಕಟ್ಟೆ ಶಕ್ತಿಗಳ ಬಗ್ಗೆ ಸಿನಿಮಾದಲ್ಲಿ ಉಲ್ಲೇಖ ಬರುತ್ತದೆಯೇ’ ಎಂದು ಕೇಳಿದರೆ ‘ಹೌದು’ ಎನ್ನುತ್ತಾರೆ ನಿರ್ದೇಶಕರು. ‘ಅವುಗಳನ್ನು ನೀವು ಈ ಸಿನಿಮಾದಲ್ಲಿ ನೋಡಬಹುದು. ನಾಯಕ ಮಾರುಕಟ್ಟೆಯ ಶಕ್ತಿಗಳಿಂದ ಅನುಭವಿಸುವ ಕಷ್ಟ, ಸುಖ, ಯಾತನೆಗಳೆಲ್ಲವನ್ನೂ ಸ್ಪಷ್ಟವಾಗಿ ತೋರಿಸಲಾಗಿದೆ. ಮಾರುಕಟ್ಟೆ ಶಕ್ತಿಗಳ ಬಗ್ಗೆ ಆಳವಾದ ಅರಿವು ಇಲ್ಲದವರಿಗೂ ಒಂದಷ್ಟು ವಿಚಾರ ಗೊತ್ತಾಗುವಂತೆ ತೋರಿಸಿದ್ದೇವೆ’ ಎಂದರು.

ಸ್ನೇಹ, ಕೌಟುಂಬಿಕ ಸಂಬಂಧಗಳು ಹಾಗೂ ನವೋದ್ಯಮ ಈ ಸಿನಿಮಾದಲ್ಲಿ ಧ್ವನಿ ಪಡೆದಿವೆ. ಈ ಸಿನಿಮಾದಲ್ಲಿ ರೊಮ್ಯಾನ್ಸ್ ಕೂಡ ಇದೆ. ಆದರೆ ಇದು ರೊಮ್ಯಾಂಟಿಕ್ ಸಿನಿಮಾ ಅಲ್ಲ ಎಂಬುದನ್ನು ಹೇಳಲು ಸಾಲಿಮಠ ಅವರು ಮರೆಯಲಿಲ್ಲ!

Read More

Comments
ಮುಖಪುಟ

ಕಾವೇರಿ: ಮರು ಪರಿಶೀಲನೆ ಅರ್ಜಿ ಸಲ್ಲಿಸಲು ಸಲಹೆ

ಜಲಸಂಪನ್ಮೂಲ ತಾಂತ್ರಿಕ ತಜ್ಞ ವಲಯ ನೀಡಿರುವ ಈ ಸಲಹೆಯನ್ನು ವಿಧಾನಸಭೆಯ ಚುನಾವಣೆಯ ಹೊಸ್ತಿಲಲ್ಲಿರುವ ಈ ಹಂತದಲ್ಲಿ ರಾಜ್ಯ ಸರ್ಕಾರ ಪುರಸ್ಕರಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.

ಪ್ರಭುತ್ವದ ಕ್ರೌರ್ಯ ಬಿಚ್ಚಿಟ್ಟ ಹೋರಾಟಗಾರರು!

ಪಾಕಿಸ್ತಾನದ ಲೇಖಕಿ ಮತ್ತು ಮಾಜಿ ಸಂಸದೆ ಫರ್ಹಾನಾಜ್‌ ಇಸ್ಫಹಾನಿ, ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ಮೊಹಮದ್ ನಶಿದ್‌ ಹಾಗೂ ಶ್ರೀಲಂಕಾದ ಮಾನವ ಹಕ್ಕು ಹೋರಾಟಗಾರ ಎಸ್‌.ಸಿ. ಚಂದ್ರಹಾಸನ್‌ ತಾವು ಅನುಭವಿಸಿದ, ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳನ್ನು ಶನಿವಾರ ಬೆಂಗಳೂರಿನಲ್ಲಿ ಹಂಚಿಕೊಂಡರು.

ಭಕ್ತಿಯ ಅಭಿಷೇಕದಲ್ಲಿ ಮಿಂದೆದ್ದ ಗೊಮ್ಮಟೇಶ್ವರ

ವಿರಾಗದ ಮೇರುಮೂರ್ತಿಗೆ ಅಭಿಷೇಕ ಪ್ರಾರಂಭವಾದುದು ಮಧ್ಯಾಹ್ನ 2.30ರ ವೇಳೆಗೆ. ಬೆಳಗಿನ ತಂಪು ಹೊತ್ತಿನಿಂದಲೇ ಜನ ಗೊಮ್ಮಟನ ಸನ್ನಿಧಿಯಲ್ಲಿ ಸೇರತೊಡಗಿದ್ದರು. ಮಧ್ಯಾಹ್ನ ಹನ್ನೆರಡರ ವೇಳೆಗೆ ನೆತ್ತಿಯ ಮೇಲಿನ ಸೂರ್ಯ ಕೆಂಡ ಚೆಲ್ಲುತ್ತಿದ್ದ. ಗೊಮ್ಮಟನ ಅಭಿಷೇಕಕ್ಕೆ ಕಾತರದ ಕಂಗಳಲ್ಲಿ ಸೇರಿದ ಆರು ಸಾವಿರಕ್ಕೂ ಹೆಚ್ಚಿನ ಜನಸ್ತೋಮ ಬೆವರಿನ ಅಭಿಷೇಕದಲ್ಲಿ ಸ್ವಯಂ ತೋಯತೊಡಗಿತು.

ಮೂವರು ಸಿಬಿಐ ಬಲೆಗೆ

ನೀರವ್ ಮೋದಿ ಕಂಪನಿಯ ವಹಿವಾಟು ಜವಾಬ್ದಾರಿ ಹೊತ್ತಿದ್ದ ಹೇಮಂತ್ ಭಟ್, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ(ಪಿಎನ್‌ಬಿ) ನಿವೃತ್ತ ಉಪ ವ್ಯವಸ್ಥಾಪಕ ಗೋಕುಲನಾಥ್ ಶೆಟ್ಟಿ ಮತ್ತು ಪಿನ್‌ಬಿಯ ಮತ್ತೊಬ್ಬ ಅಧಿಕಾರಿ ಮನೋಜ್ ಕಾರಟ್ ಎಂಬುವವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಸಂಗತ

ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟು–ಪರಿಹಾರ

ಭಾರತಕ್ಕೆ ಉಳಿದಿರುವ ದಾರಿಯೆಂದರೆ, ವಿಶ್ವಸಂಸ್ಥೆ ಮತ್ತು ಅಮೆರಿಕದ ಜೊತೆಗೂಡಿ ರಾಜತಾಂತ್ರಿಕ ಮಾರ್ಗದ ಮೂಲಕ ಮಾಲ್ಡೀವ್ಸ್‌ ಬಿಕ್ಕಟ್ಟನ್ನು ಪರಿಹರಿಸಲು ಶ್ರಮಿಸುವುದು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

ಭ್ರಮಾಧೀನ ಮನಸ್ಥಿತಿಯಲ್ಲಿ ಬದುಕುತ್ತಿರುವ ಸಮುದಾಯವನ್ನು ಎಚ್ಚರಿಸಿ ಮುನ್ನಡೆಸಬೇಕಾದ ಜವಾಬ್ದಾರಿ ಸಮಾಜಕ್ಕಿದೆಯಲ್ಲವೇ?

ನಿರುದ್ಯೋಗ ವ್ಯಕ್ತಿಗತ ಸಮಸ್ಯೆಯೇ?

ಸ್ಪರ್ಧಾತ್ಮಕ ಜಗತ್ತಿನಲ್ಲಿ ಅರ್ಹತೆಯುಳ್ಳವರಷ್ಟೇ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂಬ ನಿಲುವು ತಳೆಯುವುದು ಆಷಾಡಭೂತಿತನವಾಗುತ್ತದೆ

ಜಾತಿ ಮತ್ತು ಹಿಂಸಾಚಾರದ ಸಮೀಕರಣ

ಒಂದು ವರ್ಗದ ನೀಚ ಕೃತ್ಯಗಳಿಗೆ ಮತ್ತೊಂದು ವರ್ಗವನ್ನು ಹೊಣೆಯಾಗಿಸುವ ಕೆಸರೆರಚಾಟ ಮುಂದುವರಿಯುತ್ತಿರುವವರೆಗೂ ಅಲ್ಲಿ ಅಸಹಿಷ್ಣುತೆ, ಹಿಂಸೆ ತಡೆಯುವುದು ಕಷ್ಟ.

ಮುಕ್ತಛಂದ

ಅಪ್ಪನ ನೆನಪುಗಳು

ಅಡಿಗರ ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಸಾಧನೆಯನ್ನು ಅವರ ನಿಕಟವರ್ತಿಗಳು ಹಾಗೂ ವಿಮರ್ಶಕರು ಸಾಕಷ್ಟು ದಾಖಲಿಸಿದ್ದಾರೆ. ಕೌಟುಂಬಿಕ ವ್ಯಕ್ತಿಯಾಗಿ ಅಡಿಗರು ಹೇಗಿದ್ದರು? ಅವರ ಪುತ್ರ ಪ್ರದ್ಯುಮ್ನ ಗೋಪಾಲಕೃಷ್ಣ ಅಡಿಗ ಅವರ ನೆನಪುಗಳು ಇಲ್ಲಿವೆ.

ಸ್ವಾಭಿಮಾನ ಮತ್ತು ಸಮಗ್ರ ಕಾವ್ಯ!

‘ಪ್ರಾರ್ಥನೆ’ ಕವಿತೆಯ ವಿವಾದದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಪತ್ರಕ್ಕೆ ಅಡಿಗರು ಬರೆದ ಜವಾಬು ಕವಿಗೆ ಇರಬೇಕಾದ ಸ್ವಾಭಿಮಾನವನ್ನು ಸೂಚಿಸುವಂತಿದೆ. ಸ್ವಾಭಿಮಾನ ಎನ್ನುವುದು ಸೋವಿಯಾಗಿರುವ ಇಂದಿನ ಸಂದರ್ಭದಲ್ಲಿ ಅಡಿಗರ ನಿಲುವು ಹೆಚ್ಚು ಮಹತ್ವದ್ದಾಗಿ ಕಾಣುತ್ತದೆ.

ಕನ್ನಡ ಸಾಹಿತ್ಯಲೋಕದ ವಿಷಕಂಠ

ಎಲಿಯಟ್‌ ಕೂಡ ಒಂದು ಕವನದಲ್ಲಿ ಇಷ್ಟೆಲ್ಲ ಹೇಳಲಿಲ್ಲವಲ್ಲ! ಇದು ಅಡಿಗರ ‘ಭೂಮಿಗೀತ’, ‘ಭೂತ’ ಕವಿತೆಗಳಿಗೆ ಅಮೆರಿಕದ ಕವಿಯೊಬ್ಬರ ಉದ್ಗಾರ. ಆದರೆ, ಅತ್ಯುತ್ತಮ ಕಾವ್ಯ ರಚಿಸಿಯೂ ನಿರಂತರವಾಗಿ ಟೀಕೆಗೆ, ಪ್ರತಿರೋಧಕ್ಕೆ, ಖಂಡನೆಗೆ ಗುರಿಯಾದ ಅಡಿಗರಂಥ ಕವಿ ಇನ್ನೊಬ್ಬರಿಲ್ಲ.

‘ಚಂಡೆ ಮದ್ದಳೆ’ ಕವಿಯ ನಿರಂತರ ‘ವೇಸ್ಟ್ ಲ್ಯಾಂಡ್’

ಎಲಿಯಟ್ ಇಂಗ್ಲಿಷ್‌ನಲ್ಲಿ ಮಾಡಿದುದನ್ನು ಅಡಿಗರು ಕನ್ನಡದಲ್ಲಿ ಮಾಡಿದರು. ತಟಸ್ಥವಾಗಿದ್ದ ಸಾಹಿತ್ಯದಲ್ಲಿ ವಿದ್ಯುತ್ ಸಂಚಲನ ಉಂಟು ಮಾಡಿದರು. ಅಡಿಗರ ನಂತರ ಕನ್ನಡ ಕಾವ್ಯ ಮೊದಲಿನ ಹಾಗೆ ಇರಲಿಲ್ಲ. ಇದುವರೆಗೆ ಕನ್ನಡದಲ್ಲಿ ಇಲ್ಲದ್ದನ್ನು ಅವರು ಸೃಷ್ಟಿಸಿದರು. ಅವರನ್ನು ವಿರೋಧಿಸಿದವರು ಕೂಡ ಅವರ ನುಡಿಗಟ್ಟನ್ನು ಸ್ಪರ್ಶಿಸಿಯೇ ಹಾಗೆ ಮಾಡಬೇಕಾಯಿತು. ಇದಕ್ಕಿಂತಲೂ ಹೆಚ್ಚಿನ ಕೊಡುಗೆಯೊಂದಿದೆಯೇ?