ಅಮ್ಮ: ಓದಿದ ಮೊದಲ ಪದ

9 Sep, 2017
ಪ್ರಜಾವಾಣಿ ವಾರ್ತೆ

-ಸ್ವಯಂಪ್ರಭಾ ಹೆಗಡೆ

**

ಹಳ ಸಣ್ಣ ವಯಸ್ಸಿಗೇ ನಾನು ಕನ್ನಡ ಓದಲು ಬರೆಯಲು ಕಲಿತುಕೊಂಡೆ. ಆಗ ನನಗೆ ಸುಮಾರು ಎರಡುವರೆ-ಮೂರು ವರ್ಷವಿದ್ದಿರಬಹುದು. ಕನ್ನಡ ಸ್ವರಗಳನ್ನು, ವ್ಯಂಜನಗಳನ್ನು ಮನೆಯಲ್ಲೇ ಕಲಿತಿದ್ದೆ. ’ಕ’ ದ ಕಾಗುಣಿತವನ್ನು ಅಮ್ಮ ಹೇಳಿಕೊಟ್ಟದ್ದಷ್ಟೇ, ಬಾಕಿ ಎಲ್ಲ ವ್ಯಂಜನಗಳ ಕಾಗುಣಿತವನ್ನು ನಾನೇ ಕಲಿತುಬಿಟ್ಟಿದ್ದೆ. ಕಲಿಯಲು ಬಹಳ ಮಜವಾಗಿದ್ದಂತೆ ನೆನಪು. ಆ ಪ್ರಕ್ರಿಯೆ ಬರೀ ಓದಿ ಬರೆಯುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ಅಕ್ಷರಗಳೊಡನೆ ನನಗೆ ಯಾರಿಗೂ ಹೇಳಲಾಗದ (ಹೇಳಿದರೂ ನಂಬಲಾಗದ) ಅನುಭವವಾಗುತ್ತಿತ್ತು. ಅಕ್ಷರಗಳಿಗೆ ಜೀವವಿದ್ದಂತೆ ನನಗೆ ಭಾಸವಾಗುತ್ತಿತ್ತು. ನನ್ನ ಕಲ್ಪನೆಯಲ್ಲಿ ಪ್ರತಿಯೊಂದು ಅಕ್ಷರಕ್ಕೂ ಅದರದ್ದೇ ಆ ವ್ಯಕ್ತಿತ್ವ ಕೂಡ ಇತ್ತು! ನಾನು ಬರೆಯುವುದು ಎಂಬ ಭಾವನೆಯೇ ಇರಲಿಲ್ಲ ನನಗೆ, ಅವೇ ಬರೆಸಿಕೊಳ್ಳುತ್ತಿವೆ ಎಂದೇ ನಂಬಿದ್ದೆ. ಹಾಗಾಗಿ ತಪ್ಪಾದರೆ ಅಕ್ಷರಗಳು ನನ್ನಿಂದ ಬೈಸಿಕೊಳ್ಳುತ್ತಿದ್ದುದೂ ಉಂಟು! ಅವುಗಳನ್ನು ತಾಸುಗಟ್ಟಲೇ ತಿದ್ದುತ್ತಾ ಕೂರುವುದು ನನ್ನ ಪ್ರಿಯವಾದ ಹವ್ಯಾಸವಾಗಿತ್ತು. ಹೀಗೆ ಕಲಿಯುತ್ತಾ ಒಂದು ದಿನ ಅಪ್ಪನೋ ಅಮ್ಮನೋ ನನಗೆ ಅಕ್ಷರಗಳನ್ನು ಕೂಡಿಸಿ ಪದ ರಚಿಸುವುದನ್ನು ಹೇಳಿಕೊಟ್ಟರು.

ನಾನು ಓದಿದ ಮೊದಲ ಪದ "ಅಮ್ಮ". ’ಅ’ದ ಜೊತೆ ’ಮ’ ನಿಂತು ಅದರ ಕೆಳಗೆ ಒತ್ತಕ್ಷರ ತನ್ನಷ್ಟಕ್ಕೆ ತಾನೇ ತೂಗಿಕೊಳ್ಳುತ್ತಾ ಇತ್ತು. ಕೆಲವು ಕ್ಷಣಗಳ ತನಕ ನಾನು ಮತ್ತೆ ಮತ್ತೆ ಆ ಪದವನ್ನು ಮೆಲ್ಲಗೆ ಓದಿಕೊಳ್ಳತೊಡಗಿದೆ. ’ಅಮ್ಮ...’, ’ಅಮ್ಮ...’ ’ಅಮ್ಮ...’ ಎನ್ನುತ್ತಿದ್ದಂತೆ ಆಶ್ಚರ್ಯವೊಂದು ಘಟಿಸಿತು. ಆ ಪದ ನನ್ನ ಅಮ್ಮನೇ ಆಗಿಬಿಟ್ಟಿತು! ’ಅ’ದ ಮೃದು ತಿರುಪು ಅಮ್ಮನ ಗಲ್ಲದಂತೆಯೇ ಇತ್ತು, ಆಕೆ ಬಾಯಿಯಂತೆಯೇ ’ಮ’ ಕೂಡ ಕೊಂಚವೇ ಉಬ್ಬಿಕೊಂಡಿತ್ತು. ಒತ್ತಕ್ಷರವಂತೂ ಅಮ್ಮನ ಕಿವಿಯಲ್ಲಿ ತೂಗುತ್ತಿದ್ದ ಲೋಲಾಕೇ ಆಗಿತ್ತು! ಅಮ್ಮನನ್ನು ನೋಡಿದರೆ ಆಗುವಷ್ಟೇ ಆನಂದ ಈ ಪದವನ್ನು ನೋಡಿದರೂ ಆಗತೊಡಗಿತು. ನನ್ನೊಳಗೆ ಹೊಸದೊಂದು ಲೋಕವೇ ಕಣ್ತೆರೆದ ಆ ಕ್ಷಣದಲ್ಲಿ ನನಗಾದ ಖುಷಿಯಿನ್ನೂ ನಿಚ್ಚಳವಾಗಿ ನೆನಪಿದೆ. ಆಡಲು ಜೊತೆಗಾರರ‍್ಯಾರೂ ಇಲ್ಲದೆ ಒಬ್ಬಂಟಿಯಾಗಿ, ಗಿಡ-ಮರ-ಕಲ್ಲೆನ್ನದೆ ಎಲ್ಲರನ್ನೂ ನನ್ನ ಗೆಳೆಯರೆಂದೇ ಭಾವಿಸಿ ಅವುಗಳೊಡನೆ ಮಾತಾಡಿಕೊಂಡಿದ್ದ ನನಗೆ ಅಕ್ಷರಗಳೊಂದಿಗಿನ ಈ ಗೆಳೆತನ ಬಹಳ ವಿಶೇಷವಾಗಿಯೂ ಅಮೂಲ್ಯವಾಗಿಯೂ ಕಂಡಿತು.

ಅದಾದ ಮೇಲೆ ಓದಲಿಕ್ಕೆ ಎಷ್ಟೊಂದು ಪದಗಳಿದ್ದವು! ಬಾಲಬೋಧೆ ತೆಗೆದರೆ ’ನನ್ನೇ ಓದು’ ಎಂದು ಪದಗಳು ಗಲಾಟೆ ಮಾಡುತ್ತಿದ್ದವು. ’ತಬಲದ ತನನ’ ’ಬಸವ’ ’ಕಮಲ’ ಎಲ್ಲರೂ ನನ್ನ ಗೆಳೆಯರಾದರು. ಒಂಟಿ ಅಕ್ಷರಗಳಿಗಿಂತ ಪದಗಳು ವಿಶೇಷವಾಗಿದ್ದವು. ಪದಗಳು ಅರ್ಥ ಹೊಮ್ಮಿಸುತ್ತಿದ್ದವು. ಒಂಟಿಯಾಗಿದ್ದಾಗ ಹೇಗೆ ಬೇಕಾದರೂ ಆಡುತ್ತಿದ್ದ ಅಕ್ಷರಗಳು ಪದಗಳೊಳಗೆ ಸಭ್ಯರಂತೆ ಕೂತಿರುತ್ತಿದ್ದವು. ಅದರ ಅರ್ಥಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತಿದ್ದವು. ಒಂದೊಂದೇ ಪದಗಳು ನನ್ನ ಕೈ ಹಿಡಿದು ಮುನ್ನಡೆಸಿದವು, ಹೊಸ ಹೊಸ ಪದಗಳಿಗೆ ನನ್ನನ್ನು ಪರಿಚಯಿಸಿದವು, ಈಗ ನಾನು ಒಂಟಿಯಾಗಿರಲಿಲ್ಲ, ನನಗೆ ಸಹಸ್ರಾರು ಗೆಳೆಯರು ಸಿಕ್ಕಿದ್ದರು.

ಇಂಥ ಸಮಯದಲ್ಲೇ ಅಪ್ಪ ನನಗೊಂದು ಪುಸ್ತಕ ತಂದು ಕೊಟ್ಟರು. ಇಲ್ಲಿ ತನಕ ಪುಸ್ತಕ ಓದುವವರೆಲ್ಲ ದೊಡ್ಡವರು ಎಂದು ನನ್ನ ಭಾವನೆಯಾಗಿತ್ತು. ಆಗಾಗ ನಾನು ಕೂಡ ಅಪ್ಪನಂತೆಯೇ ಕಾಲು ಮೇಲೆ ಕಾಲು ಹಾಕಿಕೊಂಡು, ಗಂಭೀರವಾಗಿ ಕುಳಿತು ಪುಸ್ತಕ ಓದಿದಂತೆ ನಾಟಕ ಮಾಡುವುದೂ ಇತ್ತು. ಆದರೆ ತಾಸುಗಟ್ಟಲೇ ಕುಳಿತು ಒಂದೇ ಪುಸ್ತಕವನ್ನು ನೋಡುತ್ತಾ ಕೂರುವುದರ ಮರ್ಮ ಮಾತ್ರ ನನಗೆ ಅರ್ಥವಾಗುತ್ತಿರಲಿಲ್ಲ. ಈಗ ನನ್ನನಗೇ ಒಂದು ಹೊಸಾ ಪುಸ್ತಕ! ಎಲೆ ಹಸಿರುಬಣ್ಣದಲ್ಲಿ ಹೊಳೆಯುವ ಮುಖಪುಟದಲ್ಲಿ ನಗುತ್ತಿರುವ ದೊಡ್ಡ ಕಣ್ಣಿನ ಇಬ್ಬರು ಮಕ್ಕಳ ಚಿತ್ರ. ಮೇಲೆ "ತಟ್ಟು ಚಪ್ಪಾಳೆ ಪುಟ್ಟ ಮಗು" ಎಂದು ಬರೆದಿತ್ತು. ಆದರೆ ನನ್ನನ್ನು ತೀವ್ರವಾಗಿ ಆಕರ್ಷಿಸಿದ್ದು ಅದರ ಸಂಪಾದಕರ ಹೆಸರು. ಒಂದೇ ಏಟಿಗೆ ಅದನ್ನು ಓದಲಾಗದೆ ಅದನ್ನು ಮತ್ತೆ ಬೆರಳಿಟ್ಟು ಮೆಲ್ಲಗೆ ಓದಿದೆ, "ಬೊ-ಳು-ವಾ-ರು ಮ-ಹ-ಮ್ಮ-ದ್ ಕುಂ-ಞ!" ಅಬ್ಬ! ಎಂಥ ಹೆಸರು! ಇದ್ಯಾರೋ ಮಾಂತ್ರಿಕನ ಹೆಸರೇನೋ ಎನಿಸಿಬಿಟ್ಟಿತ್ತು ನನಗೆ. ಅದರಲ್ಲೂ "ಕುಂಞ"ಯನ್ನು ನಾಲಿಗೆ ಮೇಲೆ ಹೊರಳಾಡಿಸಿ ಆಡಿಸಿ ಖುಷಿಪಟ್ಟೆ. (ಎಷ್ಟೋ ವರ್ಷಗಳ ನಂತರ ಅವರ‍್ಯಾರೆಂದು ಗೊತ್ತಾಯಿತು. ಅವರ ಸೌಮ್ಯಮುಖಕ್ಕೂ ನನ್ನ ಕಲ್ಪನೆಯ ಮಾಂತ್ರಿಕನಿಗೂ ತಾಳೆಯೇ ಆಗುತ್ತಿರಲಿಲ್ಲ!).

ಆ ಪುಸ್ತಕದ ಮೊದಲ ಪದ್ಯವೇ ಪ್ರಸಿದ್ಧ "ನಾಯಿಮರಿ ಹಾಡು". ಒಂದು ಬದಿಯಲ್ಲಿ ಚಿತ್ರ, ಮತ್ತೊಂದು ಬದಿಯಲ್ಲಿ ಪದ್ಯ. ಎಂಥ ಮಗುವಿಗಾದರೂ ಪ್ರಿಯವಾಗುವ ಆ ಹಾಡು ನನ್ನ ಬಾಯಲ್ಲಿ ಉಳಿಯಲು ಬಹಳ ಹೊತ್ತು ಬೇಕಾಗಲಿಲ್ಲ. ಅದಾದ ಮೇಲೆ "ಹುಣ್ಣಿಮೆ ಹಪ್ಪಳ" ಎಂಬ ಪದ್ಯ ಓದಿದ ನೆನಪು. ಅದರಲ್ಲಿ ಅಜ್ಜನೊಬ್ಬ ಎಸೆದ ಹಪ್ಪಳ ಚಂದ್ರನಾಗುವ ಕಥೆಯಿತ್ತು. ಹೀಗೆ "ಜಾನಿ ನಾಯಿ, ಜೇನು ನೊಣ" "ಸಂತಮ್ಮಣ್ಣ", "ಲೆಕ್ಕ ಅಂದರೆ ಬಲು ದುಃಖ" – ಈ ಎಲ್ಲ ಪದ್ಯಗಳನ್ನೂ ಓದುತ್ತಾ ಹೋದೆ. ಆ ಪುಸ್ತಕದಲ್ಲಿ ಪದ್ಯಗಳನ್ನು ಆಯಾ ವಯಸ್ಸಿನ ಮಕ್ಕಳಿಗೆಂದು ವಿಭಾಗಿಸಿದ್ದರು. ನನಗೇನೂ ಅದರ ಗೊಡವೆಯಿರಲಿಲ್ಲ, ಎಲ್ಲವನ್ನೂ ಓದಿದೆ. ಸುಮಾರು ಅರ್ಥವಾಗಲಿಲ್ಲ. ನನಗೆ ಹೇಗೆ ಬೇಕೋ ಹಾಗೆ ಅರ್ಥ ಮಾಡಿಕೊಂಡೆ. ಆ ಪುಸ್ತಕ ನನ್ನೊಳಗಿನ ಕಲ್ಪನಾಲೋಕವೊಂದನ್ನು ತೆರೆದಂತಿತ್ತು. ಅಮೂರ್ತವಾಗಿದ್ದ ನನ್ನ ಅಭಿವ್ಯಕ್ತಿಗೆ ಮೂರ್ತ ರೂಪ ದೊರಕಿತ್ತು. ನನಗೆ ಪುಸ್ತಕ ಓದುವುದರ ರುಚಿ ಹತ್ತಿಬಿಟ್ಟಿತು. ಅದರ ನಂತರ ಹಲವಾರು ಪುಸ್ತಕಗಳನ್ನು ಓದಿದರೂ ಮತ್ತೆ ಮತ್ತೆ ಈ ಪುಸ್ತಕಕ್ಕೇ ಮರಳುತ್ತಿದ್ದೆ. ಅದನ್ನು ತೆರೆದಂತೆ ಏನೋ ಸಮಾಧಾನ. ಹಳೆಯ ಮಿತ್ರನಂಥ ಆ ಪುಸ್ತಕ ನನ್ನ ನೋಡಿ ತಾನೂ ಸಂಭ್ರಮಿಸುತ್ತದೆಯೇನೋ ಎನ್ನಿಸುತ್ತಿತ್ತು. ಅಷ್ಟೇ ಅಲ್ಲ ಕೆಲವೊಮ್ಮೆ ಹೊರಜಗತ್ತಿನ ಹರಿತ ವಾಸ್ತವದಿಂದ ನನಗೆ ಈ ಪುಸ್ತಕದಲ್ಲಿ ರಕ್ಷಣೆಯೂ ಸಿಗುತ್ತಿತ್ತು. ಮತ್ತೆ ಆ ಪುಸ್ತಕಕ್ಕೆ ಮರಳಿದಾಗ ಮುಂಚೆ ಅರ್ಥವಾಗದ ಕೆಲವು ಪದ್ಯಗಳು ಈಗ ಸ್ಫಟಿಕದಂತೆ ನಿಚ್ಚಳವಾಗುತ್ತಿತ್ತು.

ಹೆಚ್ಚು ಹೆಚ್ಚು ಪುಸ್ತಕ ಓದಿದಂತೆ ನನ್ನೊಳಗಿನ ಕಲ್ಪನಾಲೋಕ ಇನ್ನೂ ವಿಸ್ತಾರವಾಗುತ್ತಾ ಹೋಯಿತು. ಆ ಲೋಕ ಕೇವಲ ಕೆಲಸವಿಲ್ಲದ ಮಗುವೊಂದರ ಸೃಷ್ಟಿಯಂತಿರದೆ ನಿಗೂಢವೂ ರಮ್ಯವೂ ಆಗಿತ್ತು. ಬರಿಯ ನಾನಷ್ಟೇ ಅದರ ಪರಿಧಿಯನ್ನು ವಿಸ್ತಾರ ಮಾಡುತ್ತಿದ್ದೆನೇ, ಅಥವಾ ಆ ಲೋಕ ಸ್ವತಂತ್ರವಾಗಿ ತಾನೂ ವಿಕಾಸಗೊಳ್ಳುತ್ತಿತ್ತೇ ಎಂಬುದು ನನಗೆ ಈಗಲೂ ಸ್ವಲ್ಪ ಗೊಂದಲವೇ. ಏಕೆಂದರೆ ನನ್ನೊಳಗೆ ಇನ್ನೂ ಸರಿಯಾಗಿ ಮೂಡದ ಕೆಲವು ಭಾವನೆಗಳು ಅಲ್ಲಿ ಸ್ಫುಟವಾಗಿ ವ್ಯಕ್ತವಾಗುತ್ತಿತ್ತು. ನನ್ನ ಗೊಂದಲ, ಹೆದರಿಕೆ, ಬೇಸರಗಳಿಗೆ ಎಷ್ಟೋ ಸಲ ನನಗರಿವಿಲ್ಲದಂತೆಯೇ ಅಲ್ಲಿ ಸಮಾಧಾನ, ಪರಿಹಾರ ಹಾಗೂ ಹೊಸ ಆಯಾಮಗಳೇ ದೊರಕಿವೆ. ನನ್ನ ಜೀವನದೃಷ್ಟಿಯನ್ನು (ಅದು ಎಷ್ಟು ಪಕ್ವ ಎನ್ನುವುದು ಬೇರೆ ವಿಷಯ!) ಒಂದು ರೀತಿಯಲ್ಲಿ ಅದೂ ರೂಪಿಸಿದೆ. ನನಗಿಂತ ಬೇರೆಯ ಥರದ ದೃಷ್ಟಿಕೋನವನ್ನು ಯಾವ ಗೊಂದಲವಿಲ್ಲದೆ ಒಪ್ಪಿಕೊಳ್ಳುವುದನ್ನು ಕಲಿಸಿದೆ. ಹೆರೆದು ಸಣ್ಣಗಾದ ಪೆನ್ಸಿಲ್ಲುಗಳನ್ನು ಎಸೆದರೆ ಅವಕ್ಕೆ ಬೇಜಾರಾಗುತ್ತದೇನೋ ಎಂದು ಅವನ್ನು ಎಸೆಯದೇ ಕೂರುವ ಮಗುವಾಗಿದ್ದ ನಾನು ಈಗ ಮತ್ತೊಬ್ಬರ ಕೋಪ, ಅಸಮಾಧಾನ, ಕೊಂಕು ಮಾತುಗಳಿಗೆ ಅವರ ಯಾವ ಒಳಗುದಿ ಕಾರಣವಾಗಿದ್ದಿರಬಹುದು ಎಂದು ಯೋಚಿಸುತ್ತೇನೆ. ನನ್ನದೇ ಕೋಪ ಅಸಮಾಧಾನಗಳನ್ನು ಬೇರೆಯವರ ಮೇಲೆ ಹೇರದಿರಲು ಬಹಳ ಪ್ರಯತ್ನಿಸುತ್ತೇನೆ. ಅದು ಅಸಫಲವಾದಾಗ ಮರುಗುತ್ತೇನೆ. ಒಂದು ಇರುವೆಯ ನೋವೂ ಕೆಲವೊಮ್ಮೆ ನನಗೆ ತಟ್ಟಬೇಕಾದರೆ ಬಾಲ್ಯದಲ್ಲಿ ಕಟ್ಟಿರುವೆಯ ಮೇಲೆ ನಾನು ಓದಿ - ಕೇಳಿದ್ದ ಕಥೆ, ಪದ್ಯದ ಪ್ರಭಾವ ಚೂರಾದರೂ ಇದ್ದಿರಬೇಕು. ಹೇಗೋ "ತಟ್ಟು ಚಪ್ಪಾಳೆ ಪುಟ್ಟ ಮಗು"ವಿನಲ್ಲಿ ನನ್ನ ಮೊದಲ ಬಾರಿಗೆ ಹಿಡಿದಿಟ್ಟ ಪಾತ್ರಗಳು ಇಂದಿಗೂ ನನ್ನ ಅಷ್ಟೇ ಪ್ರೀತಿಯಿಂದ ಹಿಡಿದಿಟ್ಟಿವೆ. ನನ್ನ ಮುಗ್ಧತೆಯ ಮೇಲೆ ಪ್ರೌಢತೆಯ ಎಷ್ಟು ಪದರಗಳು ಬೆಳೆದರೂ ಆ ಪುಸ್ತಕ ಓದುವಾಗ ಒಳಗೆ ಆ ಮುಗ್ಧತೆ ಮಿಡಿಯುವುದರ ಅನುಭವ ನನಗಾಗುತ್ತದೆ. ಅದನ್ನು ಪ್ರತಿ ಸಲ ಓದುವಾಗಲೂ ಜಗತ್ತಿನ ಪ್ರತಿ ವಸ್ತುವಿಗೂ ಜೀವವನ್ನು ಆರೋಪಿಸಿ ಗೆಳೆತನಕ್ಕೆಳೆಯುತ್ತಿದ್ದ ಪುಟ್ಟ ಹುಡುಗಿಯೇ ಆಗಿ ಓದುತ್ತೇನೇನೋ... ಅಂಥ ಪುಸ್ತಕಕ್ಕೆ, ಅದನ್ನು ಸಂಪಾದಿಸಿದ ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ ನಾನು ಬಹಳ ಅಭಾರಿ.

ಈಗ ನನಗೊಬ್ಬ ಸಣ್ಣ ವಯಸ್ಸಿನ ಮಗನಿದ್ದಾನೆ. ನಾನು ಬೆಳೆದ ಪ್ರಪಂಚಕ್ಕೂ ಅವನು ಬೆಳೆಯಲಿರುವ ಪ್ರಪಂಚಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅವನ ಪ್ರಪಂಚಕ್ಕೆ ಅದರದೇ ಮೆರುಗಿದೆ, ಅದರದೇ ತಲ್ಲಣಗಳಿವೆ. ಮುಖ್ಯವಾಗಿ ಅವನ ಪ್ರಪಂಚದಲ್ಲಿ ಮಗುವೊಂದರ ಕಲ್ಪನಾ ಲೋಕಕ್ಕೆ, ಅದನ್ನು ಮೂಡಿಸುವ ಮುಗ್ಧತೆಗೆ ಬೆಲೆ ಇಲ್ಲ. ಎಷ್ಟರ ಮಟ್ಟಿಗೆ ಎಂದರೆ ಅಂಥ ಪ್ರವೃತ್ತಿಯನ್ನು ದಡ್ಡತನಕ್ಕೆ ಹೋಲಿಸುವಷ್ಟರ ಮಟ್ಟಿಗೆ. ಮಕ್ಕಳು ದೊಡ್ಡವರಂತಾಡಿದರೆ ಹೆಮ್ಮೆ ಪಡುವ, ಆಟವಾಡಿದರೆ ಸಮಯ ಪೋಲಾಗುವುದು ಎನ್ನುವ ಅಪ್ಪ ಅಮ್ಮಂದಿರ ದೊಡ್ಡ ದಂಡೇ ಇಲ್ಲಿದೆ. ಅಂಥವರ ಆಸೆ-ನಿರೀಕ್ಷೆಗಳನ್ನು ಹೊರಲಾಗದೆ ಹೊರುವ ಬಡ ಮಕ್ಕಳ ರಾಶಿಯೂ ಇಲ್ಲಿದೆ. ಅವರೂ ಒಂದು ರೀತಿಯ ಬಾಲಕಾರ್ಮಿಕರೇ ಅಲ್ಲದೆ ಮತ್ತಿನ್ನೇನು? ಈ ಥರದ ಜಗತ್ತಿನಲ್ಲಿ ನನ್ನ ಮಗನನ್ನು ಬೆಳೆಸಿ ಅವನ ಮುಗ್ಧತೆಯನ್ನು ಉಳಿಸುವ ಜವಾಬ್ದಾರಿ ನನ್ನ ಮೇಲಿದೆ. "ತಟ್ಟು ಚಪ್ಪಾಳೆ ಪುಟ್ಟ ಮಗು" ಪುಸ್ತಕ ನನ್ನಲ್ಲಿ ತೆರೆದಂಥ, ಬಹಶಃ ಅದಕ್ಕಿಂತ ರಮ್ಯವಾದ ಕಲ್ಪನಾಲೋಕವೊಂದು ಅವನಲ್ಲೀಗಲೇ ರೂಪಿತಗೊಂಡಿದೆ; ಕಥೆಯೊಂದನ್ನು ಕೇಳುವಾಗ ಹೊಳೆಯುವ ಅವನ ಕಂಗಳೇ ನನಗೆ ಎಲ್ಲ ಹೇಳುತ್ತವೆ. ಅವನಿಗೋಸ್ಕರ ಎಲ್ಲೆಲ್ಲಿಂದಲೋ ಪುಸ್ತಕಗಳನ್ನು ತರಿಸಿ ಅವನೊಡನೆ ನಾನು ಓದುತ್ತೇನೆ. ಟಿ. ವಿ.ಯಲ್ಲಿ ನನಗೆ ಅಷ್ಟೊಂದು ನಂಬಿಕೆಯಿಲ್ಲ; ಯಾರದ್ದೋ ಕಲ್ಪನಾಲೋಕವನ್ನು ನಾವು ಬಾಯಿ ಬಿಟ್ಟು ನೋಡುವದರಲ್ಲಿ ಮಜವೇನಿದೆ? ಅವನು ನಾಳೆ ಪರೀಕ್ಷೆಗಳನ್ನು ಹೇಗೆ ಎದುರಿಸುತ್ತಾನೋ, ಯಾವ ಯಾವ ಪಂದ್ಯವನ್ನು ಗೆದ್ದು ಏನು ಪ್ರಶಸ್ತಿ ತರುತ್ತಾನೋ ಇಲ್ಲಾ ಎಂಥ ಪಾನೀಯ ಕುಡಿದು ಎಷ್ಟು ಎತ್ತರವಾಗುತ್ತಾನೋ ನನಗೆ ಸಂಬಂಧವಿಲ್ಲ. ಅವನೆಷ್ಟು ಬೆಳೆದರೂ, ಅವನೆಂಥ ಪುಸ್ತಕಗಳನ್ನು ಓದುತ್ತಾನೆ? ಮತ್ತೊಬ್ಬರ ನೋವಿಗೆ ಅವನು ಮರುಗುತ್ತಾನೆಯೇ? ಮತ್ತೊಬ್ಬರ ಸ್ನೇಹಕ್ಕೆ, ಪ್ರೀತಿಗಾಗಿ ಕಷ್ಟಪಡುತ್ತಾನೆಯೇ? ಎಳೆ ಬಿಸಿಲಿನಲ್ಲಿ ಹೊಳೆಯತ್ತಾ ರೋಡಿನಲ್ಲಿ ಬಿದ್ದಿರುವ, ಯಾರಾದರೂ ಮೆಟ್ಟಿದರೆ ಅಪ್ಪಚ್ಚಿಯಾಗಿಬಿಡಬಹುದಾದ ಹಳದಿ ಅನಾಮಿಕ ಹೂವೊಂದು ಅವನಲ್ಲಿ ಮುಗುಳ್ನಗೆಯನ್ನೂ, ನೋವನ್ನೂ ಒಟ್ಟಿಗೇ ಮೂಡಿಸಬಲ್ಲುದೇ? ಇಂಥ ಪ್ರಶ್ನೆಗಳು ನನಗೆ ಬಹಳ ಕಾಡುತ್ತವೆ; ಅರ್ಥಪೂರ್ಣವೆನಿಸುತ್ತವೆ.

Read More

Comments
ಮುಖಪುಟ

ಉಕ್ರೇನ್ ರಾಯಭಾರಿ ಕೆಂಪುಕೋಟೆ ಬಳಿ ಫೋಟೊ ಕ್ಲಿಕ್ಕಿಸುತ್ತಿದ್ದಾಗ ಫೋನ್ ಕಿತ್ತು ಪರಾರಿ

ಪೊಲೀಖಾ ಅವರು ಬೆಳಗ್ಗೆ 9.15ರ ಹೊತ್ತಿಗೆ ದೆಹಲಿಯ ಕೆಂಪುಕೋಟೆ ಬಳಿ ಫೋಟೊ ತೆಗೆದುಕೊಳ್ಳುತ್ತಿದ್ದ ವೇಳೆ ಆಗಂತುಕನೊಬ್ಬ ಫೋನ್ ಕಿತ್ತು ಪರಾರಿಯಾಗಿದ್ದಾನೆ.

ಪ್ರಾಚೀನ ಭಾರತದಲ್ಲಿ ದುರ್ಗೆ ರಕ್ಷಣಾ ಸಚಿವೆ, ಲಕ್ಷ್ಮಿ ಹಣಕಾಸು ಮಂತ್ರಿ: ವೆಂಕಯ್ಯನಾಯ್ಡು

ವಿದ್ಯಾರ್ಥಿಗಳು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು. ರಾಮರಾಜ್ಯ ಎನ್ನುವುದು ಇಂದಿಗೂ ನಮ್ಮ ಇತಿಹಾಸದ ಶ್ರೇಷ್ಠ ಕಾಲಘಟ್ಟವಾಗಿದೆ. ಅದಕ್ಕೆ ಕಾರಣ ಆ ಆಡಳಿತ ವ್ಯವಸ್ಥೆಯಲ್ಲಿದ್ದ ಆದರ್ಶಗಳು. ಆದರೆ ಇತ್ತೀಚಿನ ದಿನಗಳು ಅದನ್ನು ಕೋಮು ಭಾವ ದೃಷ್ಟಿಯಲ್ಲಿ ನೋಡಲಾಗುತ್ತಿದೆ.

ಆರ್‍ಎಸ್ಎಸ್ ಭಾರತವನ್ನು ಹಿಂದೂ, ಹಿಂದಿ, ಹಿಂದೂಸ್ತಾನವನ್ನಾಗಿಸಲು ಯತ್ನಿಸುತ್ತಿದೆ

ಆರ್‍ಎಸ್ಎಸ್ ರಾಜ್ಯ ಸರ್ಕಾರಗಳನ್ನು ದುರ್ಬಲವಾಗಿಸಲು ಯತ್ನಿಸುತ್ತಿವೆ. ಇದಕ್ಕಾಗಿ ಅವರು ಒಕ್ಕೂಟವಾದವನ್ನು ಒಡೆದು ಹಿಂದಿ, ಹಿಂದೂ, ಹಿಂದೂಸ್ತಾನವನ್ನಾಗಿಸುವ ಉದ್ದೇಶವನ್ನು ಹೇರುತ್ತಿದ್ದಾರೆ. ಬಿಜೆಪಿಯೂ ಇದೇ ರೀತಿ ಮಾಡುತ್ತಿದ್ದು ಅವರ ಈ ಯತ್ನವನ್ನು ವಿಫಲಗೊಳಿಸಬೇಕಿದೆ

‘ಗುಮ್ನಾಮಿ ಬಾಬಾ ಅವರೇ ನೇತಾಜಿ ಎಂದು ಹೆಚ್ಚು ಜನ ನಂಬಿದ್ದರು’

‘ಆಯೋಗದ ಮುಂದೆ ಖುದ್ದಾಗಿ ಇಲ್ಲವೇ ಪತ್ರ ಮುಖೇನ ಮಾಹಿತಿ ನೀಡಿರುವ ಬಹುತೇಕರು ಗುಮ್ನಾಮಿ ಬಾಬಾ ಅವರೇ ನೇತಾಜಿ ಆಗಿದ್ದರು ಎಂದು ಹೇಳಿದ್ದಾರೆ...

ಸಂಗತ

ಆರೋಗ್ಯ ಬೇಕೇ? ಸ್ವಚ್ಛತೆ ಕಾಪಾಡಿ

ಮನುಷ್ಯ ಹಣ ಗಳಿಕೆಗಾಗಿ ಗುಣ ಹಾಗೂ ಆರೋಗ್ಯ ಎರಡನ್ನೂ ಪಣಕ್ಕಿಟ್ಟು ದುಡಿಯುತ್ತಿದ್ದಾನೆ. ಹಾಗೇ ಇವೆರಡನ್ನೂ ಕಳೆದುಕೊಳ್ಳುತ್ತಿದ್ದಾನೆ.

ವಸ್ತುನಿಷ್ಠತೆ ಮೆರೆಯೋಣ

ವ್ಯಕ್ತಿ ನಿಂದೆ ಮಾಡದೆಯೂ ಗಾಂಧಿ ಚಿಂತನೆಗಳ ಪುನರ್ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲವೇ? ನಕಾರಾತ್ಮಕ ದೃಷ್ಟಿಯ ಬರವಣಿಗೆಯಿಂದ ಯುವಕರನ್ನು ಹಾದಿ ತಪ್ಪಿಸಿದಂತಾಗುತ್ತದೆ.

ಕರ್ಮಸಿದ್ಧಾಂತ, ಕಾಯಕಸಿದ್ಧಾಂತ ಪೂರ್ಣ ಬೇರೆ

ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!

ಭರ್ಗೋ ದೇವಸ್ಯ ಧೀಮಹಿ ಎಂಬರು

ಒಬ್ಬರಿಗಾಗಿ ವಿಚಾರವಿಲ್ಲ ನೋಡಿರೇ

ಕೂಡಲಸಂಗಮದೇವಾ.

ಇಳೆಯ ನರಳಿಕೆಗೆ ಚಿಕಿತ್ಸೆ

ನಮಗಿರುವುದು ಒಂದೇ ಭೂಮಿ. ಅದನ್ನು ಸೊರಗಿಸಿದರೆ ಬಳಲುವವರು ನಾವೇ ಎನ್ನುವ ಪ್ರಜ್ಞೆ ಮೂಡುವವರೆಗೆ ನರಳಿಕೆ ತಪ್ಪಿದ್ದಲ್ಲ

ಚಂದನವನ

ಹಬ್ಬುವ ಹೆಬ್ಬಯಕೆಯ ಚಿಗುರು ಲತೆ

ಉತ್ತರ ಕನ್ನಡದ ಶಿರಸಿಯಲ್ಲಿ ಹುಟ್ಟಿ ನ್ಯೂಜಿಲೆಂಡ್‌ನಲ್ಲಿ ಬೆಳೆದು ಮತ್ತೀಗ ಚಿತ್ರರಂಗದ ಮೂಲಕ ತವರಿನಲ್ಲಿಯೇ ಬೇರೂರಿ ಬೆಳೆಯುವ ಹಂಬಲದಲ್ಲಿರುವ ಸುಂದರಿ ಲತಾ ಹೆಗಡೆ. ಮಹೇಶ್‌ ಬಾಬು ನಿರ್ದೇಶನದ ‘ಅತಿರಥ’ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿರುವ ಇವರಿಗೆ ಒಳ್ಳೆಯ ಅವಕಾಶಗಳು ಸಿಕ್ಕರೆ ಇಲ್ಲಿಯೇ ನೆಲೆಯೂರುವ ಬಯಕೆ ಇದೆ.

‘ಹೀರೊಯಿನ್‌’ ಹಾಡು ಪಾಡು

ಹಾಸ್ಯದ ರೂಪದಲ್ಲಿ ಒಂದು ಸಂದೇಶವನ್ನೂ ನೀಡಿದ್ದೇವೆ. ಬದುಕಿನಲ್ಲಿ ಬರುವ ಕಷ್ಟಗಳನ್ನು ಕಾಮಿಡಿಯ ದೃಷ್ಟಿಕೋನದಿಂದಲೇ ನೋಡುವ ಪ್ರಯತ್ನ ಇದು’ ಎಂದು ಬಾಹುಬಲಿ ವಿವರಿಸಿದರು.

ಪೊಲೀಸ್ ದಿರಿಸಿನಲ್ಲಿ ಹುಚ್ಚ ವೆಂಕಟ್

ಈ ಸಿನಿಮಾದಲ್ಲಿ ವೆಂಕಟ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಪೊಲೀಸರಿಗೆ ಜನ ಬೆಲೆ ಕೊಡುವುದು ಅವರ ಖಾಕಿ ಬಟ್ಟೆ ನೋಡಿ ಅಲ್ಲ. ಬೆಲೆ ಕೊಡುವುದು ಅವರ ಧರಿಸುವ ಪೊಲೀಸ್ ಕ್ಯಾಪ್ ನೋಡಿ’ ಎನ್ನುತ್ತ ಮಾತಿಗೆ ಇಳಿದರು ವೆಂಕಟ್.

ಮತ್ತೆ ಬರುತ್ತಿದ್ದಾನೆ ‘ಕೌರವ’

ಮುಂದಿನ ತಿಂಗಳ 13ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇದೆ. ನಾನು ಹಣ ಮಾಡುವ ಉದ್ದೇಶದಿಂದ ಈ ರಂಗಕ್ಕೆ ಬಂದವನಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದು ನರೇಶ್ ಹೇಳಿಕೊಂಡರು.