ಪರದ ಪರಿಮಳದ ‘ಅಮೃತ’ಪಾನ

10 Sep, 2017
ಪ್ರಜಾವಾಣಿ ವಾರ್ತೆ

ರಕ್ಷಿದಿ ಸುಮಾರು ಐವತ್ತು ಮನೆಗಳಿರುವ ಪುಟ್ಟ ಹಳ್ಳಿ. ಆ ಹಳ್ಳಿಯ ಅಂಚಿನಲ್ಲಿ ಒಂದು ಒಂಟಿ ಮನೆ, ಅಲ್ಲೊಂದು ಮಧ್ಯಮ ವರ್ಗದ ಕುಟುಂಬ ವಾಸಮಾಡುತ್ತಿತ್ತು. ಆ ಮನೆಯಲ್ಲಿ ಒಬ್ಬಳು ಎರಡು ವರ್ಷದ ಪುಟ್ಟ ಹುಡುಗಿ ಇದ್ದಳು. ಅವಳ ಹೆಸರು ಅಮೃತಾ. ಮನೆಯ ಸುತ್ತಾ ಕಾಡು ಮರಗಳು, ತೋಟ, ಹಣ್ಣಿನ ಗಿಡಗಳು, ಕಾಡು ಹೂವಿನ ಗಿಡಮರಗಳು, ಹಕ್ಕಿಗಳು ತುಂಬಿದ್ದವು. ಆ ಮನೆಯಲ್ಲಿದ್ದುದು ಏಳು ಜನ. ಅಪ್ಪ ,ಅಮ್ಮ, ಅಣ್ಣಯ್ಯ, ಅಜ್ಜಿ, ಅಜ್ಜಯ್ಯ, ಗೆಂತಣ್ಣ, ಮತ್ತು ಪುಟ್ಟ ಹುಡುಗಿ ಅಮೃತಾ.

ಅಜ್ಜಯ್ಯನಿಗೆ ಹುಷಾರಿಲ್ಲ ಮಲಗಿದ್ದಾರೆ ಎಂಬುದಷ್ಟೇ ಅಮೃತಾಳಿಗೆ ಗೊತ್ತು. ಅಜ್ಜಯ್ಯನ ಕಾಯಿಲೆಯೇನೆಂದು ಅವಳಿಗೆ ಯಾರೂ ಹೇಳುತ್ತಿರಲಿಲ್ಲ. ಅಣ್ಣಯ್ಯ ಮಾತ್ರ ಶಾಲೆಗೆ ಹೋಗುತ್ತಿದ್ದ. ಅವನು ಅವಳಿಗಿಂತ ಎಂಟು ವರ್ಷಕ್ಕೆ ದೊಡ್ಡವನು. ಅಮ್ಮ ಅಡುಗೆ ಮನೆಯಲ್ಲಿದ್ದರೆ, ಅಪ್ಪ ಮತ್ತು ಗೆಂತಣ್ಣ ಅವರವರ ಕೆಲಸಕ್ಕೆ ಹೋಗುತ್ತಿದ್ದರು. ಅಪ್ಪ ಹಾನುಬಾಳಿನಿಂದಾಚೆ ಯಾವುದೋ ಊರಿಗೆ ದಿನಾ ಬೆಳಿಗ್ಗೆ ತೋಟದ ಕೆಲಸಕ್ಕೆ ಹೋಗಬೇಕಿತ್ತು. ಅದೊಂದೇ ಅಮೃತಾಳಿಗೆ ತಿಳಿದುದು. ಆದರೆ ಗೆಂತಣ್ಣ ಎಲ್ಲಿಗೆ ಹೋಗುತ್ತಾನೆಂದಾಗಲೀ ಏನು ಕೆಲಸ ಮಾಡುತ್ತಾನೆಂದಾಗಲೀ ಅವಳಿಗೆ ತಿಳಿಯದು.

ಅಪ್ಪನಿಗೆ ಕೆಲಸಕ್ಕೆ ಹೋಗಲು ಒಂದು ಬೈಕು, ಅದರ ಪೆಟ್ರೋಲ್ ಟ್ಯಾಂಕಿಗೆ ಸುಂದರವಾದ ದಟ್ಟ ಕೆಂಪು ಬಣ್ಣವಿತ್ತು. ಅದರ ಮೇಲೆ ಪ್ರತಿಯೊಂದೂ ಸುಮಾರು ಒಂದು ಇಂಚು ಅಗಲ ಇರುವ ಪಟ್ಟಿಗಳಂತೆ, ಕಪ್ಪು ಹಳದಿ ಬಿಳಿ ಬಣ್ಣಗಳನ್ನು ಟ್ಯಾಂಕಿನಾಕಾರಕ್ಕೆ ಬಳಿಯಲಾಗಿತ್ತು. ಕೆಂಪು ಟ್ಯಾಂಕಿನ ಮೇಲೆ ಆ ಮೂರು ಸುಂದರ ಪಟ್ಟಿಗಳು ಎದ್ದು ಕಾಣುತ್ತಿದ್ದವು. ಅವುಗಳನ್ನು ನೋಡುವುದೆಂದರೆ ಅಮೃತಾಳಿಗೆ ಇಷ್ಟ. ಅಪ್ಪ ಬೆಳಿಗ್ಗೆ ಬೇಗನೆ ಎದ್ದು, ಏಳು ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದರಿಂದ, ಅಪ್ಪನ ಬೈಕಿನ ಸದ್ದು ಕೇಳಿದೊಡನೆಯೇ ಅಮೃತಾ ಹಾಸಿಗೆಯಿಂದ ದಡಬಡನೆ ಎದ್ದು ಅಪ್ಪನಿಗೆ ಟಾಟಾ ಮಾಡಲು ಓಡುತ್ತಿದ್ದಳು. ಬೈಕು ಸ್ಟಾರ್ಟ್‌ ಆಗುತ್ತಿದ್ದಂತೆಯೇ ‘ಅಪ್ಪ ಟಾಟಾ ಟಾಟಾ’ ಎಂದು ಕೂಗುತ್ತಲೇ ಇರುತ್ತಿದ್ದಳು. ಬೈಕು ಓಡುತ್ತ ಮಸುಕು ಮಸುಕಾಗಿ ತನ್ನ ಬಣ್ಣ ಮರೆಮಾಡಿಕೊಂಡಿತು ಎಂದಾಗಷ್ಟೇ ಅವಳು ಒಳಗೆ ಬರುವಳು. ಅವಳು ಅಪ್ಪನಿಗೆ ಟಾಟಾ ಮಾಡಲು ಓಡುತ್ತಿದ್ದರೂ ಅವಳ ಉದ್ದೇಶ ಮಾತ್ರ ಆ ಬಣ್ಣದ ಬೈಕನ್ನು ನೋಡುವುದಾಗಿತ್ತು.

***

‘ಅಜ್ಜಿ ಕತೆ ಹೇಳಿ ಅಜ್ಜಿ ಕತೆ ಹೇಳಿ ಅಜ್ಜಿ’ ಎಂದಳು ಅಮೃತಾ.
‘ಎಂಥ ಕತೆ ಹೇಳದು ಮಗಾ, ನೆನಪು ಮಾಡಿಕೊಳ್ತೇನೆ ಇರು ....’
‘ಹ್ಞಾಂ ರಕ್ಕಸಿ ಅಜ್ಜಿ ಕತೆ, ಹೇಳಿ ಅಜ್ಜಿ’
‘ಅಕ.. ಅದು ಬೇಡ ಮಗಾ..’
‘ಯಾಕೆ ಅದೇ ಬೇಕಜ್ಜಿ.. ಹೇಳಿ ಅಜ್ಜೀ’
‘ಆ ಕತೆ ಈಗ ರಾತ್ರೆಲಿ ಬೇಡ ಮಗಾ ಮತ್ತೆ ನಿನಿಗೆ ಹೆದ್ರಿಕೆ ಆಗ್ತೆ... ಬೇಡ ಆಗ್ದ’
‘ಅದೇ ಬೇಕು ಹೇಳಿ ಅಜ್ಜೀ’ ಅಮೃತಾ ಹಟ ಹಿಡಿದಳು.

‘ಸರಿ ನನಿಗೇನು ಅವಗ’ ಎಂದು ಅಜ್ಜಿ ಆರಂಭಿಸಿದರು, ‘ಒಂದು ಸಣ್ಣ ಊರು. ಅಲ್ಲಿ ಅಮ್ಮ, ಮಗ ಇಬ್ಬರೇ ಇದ್ದರು. ಅವರಿಗೊಂದು ಸಣ್ಣ ಮನೆ. ಮಗ ತುಂಬಾ ದೊಡ್ಡವನೇನಲ್ಲ, ಅಣ್ಣಯ್ಯನಷ್ಟಿರಬಹುದು. ಆ ಹುಡುಗ ದಿನಾ ಸೌದೆ ತಂದು ಜೀವನ ಮಾಡ್ಬೇಕಿತ್ತು. ಆ ಊರಿನ ಪಕ್ಕದಲ್ಲಿ ಒಂದು ದೊಡ್ಡ ಕಾಡಿತ್ತು. ಆ ಕಾಡಿಗೆ ಯಾರೂ ಹೋಗ್ತಿರಲಿಲ್ಲ. ಕಾಡಿನ ತುಂಬಾ ಬರೀ ಕಾಡು ಪ್ರಾಣಿಗಳು, ದೊಡ್ಡ ದೊಡ್ಡ ಮರಗಳು ಮಾತ್ರ ಇದ್ವು. ಆ ಕಾಡಿಲಿ ರಕ್ಕಸಿ ಅಜ್ಜಿ ಇದ್ಲು.

ಒಂದು ದಿನ ಆ ಹುಡುಗ ಸೌದೆ ಕಡ್ಕೊಂಡು... ಕಡ್ಕೊಂಡು ಹೋಗಿ ಕಾಡಿನ ಮಧ್ಯ ತಲುಪಿದ. ಅವನಿಗೆ ಕತ್ತಲೆ ಆದ್ದು ಗೊತ್ತೇ ಆಗಲಿಲ್ಲ. ಅಷ್ಟೊತ್ತಿಗೆ ದೂರದಲ್ಲಿ ಮಿಣಿ ಮಿಣಿ ದೀಪ ಉರೀತಾ ಇರುವುದು ಕಂಡ್ತು. ಅಲ್ಲಿಗೆ ಹೋದ. ಒಂದು ಅಜ್ಜಿ ಬಾಗಿಲು ತೆಗೆದಳು. ‘ಅಜ್ಜಿ ನಾನಿಲ್ಲಿ ಇರಬಹುದಾ? ನಾನು ಸೌದೆ ಕಡಿತಾ ಇದ್ದೆ. ಕತ್ತಲೆ ಆದ್ದು ಗೊತ್ತೇ ಆಗ್ಲಿಲ್ಲ’ ಎಂದ. ಅಜ್ಜಿ ಒಳಗೆ ಕರ್ಕೊಂಡೋಯ್ತು. ಅವನದ್ದು ಊಟ ಆದ ಮೇಲೆ ಚಾಪೆ ಹಾಸಿ ಕೊಟ್ಟು ಮಲಗಕ್ಕೆ ಹೇಳಿತ್ತು. ಸ್ವಲ್ಪ ಹೊತ್ತಾದ ಮೇಲೆ ಈ ಹುಡುಗನಿಗೆ ನಿದ್ದೆ ಮಂಕಾಯಿತು. ಆಗ ಏನೋ ಶಬ್ದ ಕೇಳಕ್ಕೆ ಶುರುವಾಯ್ತು. ಅದು ಕತ್ತಿ ಮಸೆಯುವ ಶಬ್ದ, ಅದು ರಕ್ಕಸಿ ಅಜ್ಜಿ! ಹುಡುಗನಿಗೆ ಗೊತ್ತಾಯಿತು. ಹೋ..... ಇನ್ನೇನು ಮಾಡದು, ಅಜ್ಜಿಯ ಕರೆದ ‘ಞರ್ಕುಂಮುರ್ಕುಂ ಏನಜ್ಜಿ? ಕತ್ತಿ ಮಸೆವುದು ಆರಜ್ಜಿ?’ ಕೇಳಿದ.

‘ನಿನಿಗಿನ್ನೂ ನಿದ್ದೆ ಬರ್ಲಿಲ್ವ ಮಗಾ?’ ಹೇಳಿತ್ತು ರಕ್ಕಸಿ ಅಜ್ಜಿ.

‘ಅದು ನನಿಗೆ ನನ್ನಮ್ಮ ಚಕ್ಕುಲಿ ಮಾಡಿಕೊಟ್ಟೇ ಅಭ್ಯಾಸ’ ಹೇಳಿದ. ರಕ್ಕಸಿ ಅಜ್ಜಿ ಬೇಗ ಅವನಿಗೆ ಚಕ್ಕುಲಿ ಮಾಡಿ ಕೊಟ್ಟಿತು. ಪುನಃ ಸ್ವಲ್ಪ ಹೊತ್ತಿನಲ್ಲಿ ಕತ್ತಿ ಮಸೆಯುವ ಸದ್ದು ಶುರುವಾಯಿತು.

‘ಞರ್ಕುಂಮುರ್ಕುಂ ಏನಜ್ಜಿ ಕತ್ತಿ ಮಸೆವುದು ಆರಜ್ಜಿ?’ ಪುನಃ ಕೇಳಿದ.

‘ನಿನಿಗಿನ್ನೂ ನಿದ್ದೆ ಬರ್ಲಿಲ್ವಾ ಮಗಾ’ ಕೇಳಿತ್ತು ರಕ್ಕಸಿ ಅಜ್ಜಿ.

‘ಅದು, ಮನೆಲಿ ನನ್ನಮ್ಮ ಕೋಡುಬಳೆ ಮಾಡಿಕೊಡ್ತಿತ್ತು. ಅದರ ತಿಂದೇ ಅಭ್ಯಾಸ’ ಹೇಳಿದ. ಬೇಗ ಕೋಡುಬಳೆ ಮಾಡಿಕೊಟ್ಟಿತು ರಕ್ಕಸಿ ಅಜ್ಜಿ. ಅವ ತಿನ್ನುವಷ್ಟರಲ್ಲಿ ಬೆಳಗಾಯ್ತು, ಪುನಃ ರಕ್ಕಸಿ ಅಜ್ಜಿ ಕತ್ತಿ ಮಸೆಯುವಾಗ ಒಂದೇ ನೆಗೆತಕ್ಕೆ ಹಾರಿ ಮನೆಗೆ ಓಡಿದ. ಎಂದು ಅಜ್ಜಿ ಕತೆ ಮುಗಿಸಿದರು.

ಅಮೃತಾ ಕುತೂಹಲದಿಂದ ಕತೆ ಕೇಳಿದ್ದಳು. ಕಾಡಿನಿಂದ ಗುಳ್ಳೆನರಿಗಳ ಕೂಗು ಕೇಳುತ್ತಿತ್ತು, ಅವು ತುಂಬಾ ದೂರದಲ್ಲಿದ್ದವು. ಅವಳು ಮನೆಯೊಳಗೆ ಬೆಚ್ಚಗಿರುವುದೇ ಅವಳಿಗೆ ನೆಮ್ಮದಿ. ಅಮೃತಾ ಅಜ್ಜಿಯ ಹಾಸಿಗೆಯಲ್ಲೇ ನಿದ್ದೆ ಹೋದಳು.

**

ಅಮೃತಾ ಹಾಳೆಯನ್ನು ತೆಗೆದುಕೊಂಡು ನಿಧಾನವಾಗಿ ರೇಖೆಗಳನ್ನು ಎಳೆಯತೊಡಗಿದಳು. ಮೊದಲಿಗೆ ಕೈನಡುಗಿದರೂ ಸ್ವಲ್ಪ ಹೊತ್ತಿನಲ್ಲೇ ಸಾವರಿಸಿಕೊಂಡಳು. ದೂರದಲ್ಲಿ ಕಾಣುವ ಗುಡ್ಡಗಳು. ಅದರಿಂದ ಹತ್ತಿರದಲ್ಲಿ ಮರಗಳು, ಅವುಗಳಿಂದ ಬಿದ್ದಿರುವ ಎಲೆಗಳು, ಪಕ್ಕದಲ್ಲಿ ಗುಡಿಸಲುಗಳು, ತೆಳುವಾಗಿ ಹರಡಿರುವ ಬಿಸಿಲು. ಅದರಿಂದೀಚೆ ಹೊಳೆ, ಹರಿಯುವ ನೀರು, ದಡದಲ್ಲಿ ನಿಂತಿರುವ ಎರಡು ದೋಣಿಗಳು ಇವನ್ನೆಲ್ಲ ತಾಳ್ಮೆಯಿಂದ ಬರೆದಳು. ತಾನು ಅಂದುಕೊಂಡಂತೆ ಚಿತ್ರ ಬರುತ್ತಿದೆ ಎಂದು ಸಮಾಧಾನವಾಯಿತು. ಗಡಿಯಾರವನ್ನೊಮ್ಮೆ ನೋಡಿದಳು ಕಾಲು ಗಂಟೆಯಷ್ಟೇ ಕಳೆದಿತ್ತು. ಇನ್ನು ಬಣ್ಣತುಂಬಲು ಮುಕ್ಕಾಲುಗಂಟೆ ಸಮಯವಿತ್ತು.

ಬಣ್ಣಗಳನ್ನು ಬೆರೆಸಿಕೊಂಡಳು. ಆಕಾಶಕ್ಕೆ ತಿಳಿನೀಲಿ, ಅದರ ಕೆಳಗೆ ದಟ್ಟ ನೀಲಿಯ ಬೆಟ್ಟಗಳು, ಎದುರಿಗಿದ್ದ ಮರಗಳು ಎದ್ದು ಕಾಣುವಂತೆ ನೀಲಿ ಮಿಶ್ರಿತ ಹಸಿರು ಬಣ್ಣ ಕೊಟ್ಟಳು. ನಂತರ ಹೊಳೆ, ನೀರು, ದೋಣಿಗಳಿಗೂ ಬಣ್ಣ ತುಂಬಿದಳು. ಈಗ ನಿಧಾನವಾಗಿ ಮೂರು ಆಯಾಮದ ಚಿತ್ರ ಸಿದ್ಧವಾಯಿತು. ಅಷ್ಟರಲ್ಲೇ ನಾಲ್ಕು ಗಂಟೆಯಾಗಿತ್ತು ಅನೇಕ ಹುಡುಗಿಯರು ಇನ್ನು ರಬ್ಬರಿನಿಂದ ಉಜ್ಜುವುದೂ ಅಳಿಸುವುದೂ ಮಾಡುತ್ತಿದ್ದರು. ಆಗ ಟೀಚರ್ ಪರವಾಗಿಲ್ಲ ಐದು ಗಂಟೆಯವರೆಗೂ ಬರೆಯಬಹುದು ಎಂದರು. ಈಗ ಇನ್ನೂ ಒಂದು ಗಂಟೆ ಸಮಯ ದೊರೆತಿತ್ತು. ಅಮೃತಾ ಚಿತ್ರವನ್ನು ಇನ್ನಷ್ಟು ತಿದ್ದಿ ನಿಖರಗೊಳಿಸಿದಳು. ಈಗ ಅಮೃತಾಳಿಗೆ ನೆಮ್ಮದಿಯಾಯಿತು. ಚಿತ್ರ ಸುಂದರವಾಗಿ ಬಂದಿತ್ತು.

**

ಒಂದು ದಿನ ಅಮೃತಾ ದೇವರಿಗೆ ಪತ್ರವೊಂದನ್ನು ಬರೆದಳು. ಅದರ ವಿಷಯವು ‘ಧೋನಿ ತನಗೆ ಸಿಗಲಿ’ ಎಂಬುದಾಗಿತ್ತು. ನಂತರ ಆ ಪತ್ರವನ್ನು ಪಂಚಭೂತಗಳಿಗೆ ಅರ್ಪಿಸುತ್ತೇನೆಂದು ಅಂಗಳಕ್ಕೆ ಬಂದು ಜೋಕಾಲಿಯ ಬಳಿ ಹೋದಳು. ಆ ಪತ್ರವನ್ನು ಆಕಾಶಕ್ಕೆ ಎತ್ತಿ ಹಿಡಿದು ಪ್ರಾರ್ಥಿಸಿದಳು. ನೆಲದಲ್ಲಿಟ್ಟಳು. ನೀರಿನಲ್ಲಿ ಅದ್ದಿ ತೆಗೆದು ನೀರಿನಾಣೆ ಎಂದಳು. ಗಾಳಿಯೂ ಬೀಸುತ್ತಿತ್ತು. ಪತ್ರವನ್ನು ಗಾಳಿಗೆ ಹಿಡಿದಳು. ನಂತರ ಅದನ್ನು ತಂದು ಒಲೆಯ ಮುಂದೆ ನಿಂತು ಪ್ರಾರ್ಥಿಸಿ ಒಲೆಗೆ ಹಾಕಿದಳು. ಅದು ಸುಟ್ಟು ಬೂದಿಯಾಯಿತು, ಅದು ಅಗ್ನಿದೇವನಿಗೆ ಸಮರ್ಪಿತವಾಯಿತು ಎಂದುಕೊಂಡಳು. ಅವಳಗೆ ತನ್ನ ದೇಹದಲ್ಲಿ ಏನೋ ಸಂಚಾರವಾದಂತೆ ಅನಿಸಿತು. ಮನಸ್ಸು ಒಂದು ರೀತಿ ಹಗುರಾಗಿತ್ತು.

**

ವಿಚಿತ್ರ ಅನುಭವಗಳು

ಕೆಲವು ದಿನಗಳು ಕಳೆದುವು. ಅಮೃತಾ ಹೇಗೋ ಕ್ಲಾಸಿಗೆ ಹೋಗುತ್ತಿದ್ದಳು. ಆದರೆ ಪಾಠದಲ್ಲಿ ಮಾತ್ರ ಏಕಾಗ್ರತೆ ಇರಲೇ ಇಲ್ಲ. ಯಾವಾಗಲೂ ಅನ್ಯಮನಸ್ಕಳಾಗಿ ಇರುತ್ತಿದ್ದಳು. ಬೇರೆ ಹುಡುಗಿಯರೂ ಅವಳನ್ನು ಮಾತಾಡಿಸುವುದು ಕಡಿಮೆ ಮಾಡಿದ್ದರು.

ಪ್ರತಿದಿನ ಸಂಜೆ ಅತ್ತೆ ಮತ್ತು ಮಾವ ವಾಕಿಂಗ್ ಹೋಗುತ್ತಿದ್ದರು. ಆಗ ಅಮೃತಾ ಒಬ್ಬಳೇ ಮನೆಯಲ್ಲಿ ಇರುತ್ತಿದ್ದಳು. ಸಂಜೆ ಕತ್ತಲಿನಲ್ಲಿ ಅವಳು ಒಬ್ಬಳೇ ರೂಮಿನಲ್ಲಿ ಕುಳಿತುಕೊಳ್ಳುತ್ತಿದ್ದಳು. ಲೈಟು ಹಾಕದೆ ಕತ್ತಲೆಯಲ್ಲಿ ಕೂರುವುದೇ ಅವಳಿಗೆ ಹಿತವೆನಿಸುತ್ತಿತ್ತು.

ಅಮೃತಾಳ ಮಾನಸಿಕತೆ ಇನ್ನೊಂದು ರೂಪ ಪಡೆಯಿತು. ಅವಳಿಗೆ ಏನೋ ವಿಚಿತ್ರವಾದ ಭಾವನೆ ಬರಲಾರಂಭಿಸಿತು. ತನಗೇನೋ ವಿಶೇಷವಾದ ಶಕ್ತಿಯೊಂದು ಬಂದಿದೆ. ತನಗೆ ಯಾವುದೋ ಒಂದು ಬಗೆಯ ಜ್ಞಾನದ ಅರಿವು ಆಗುತ್ತಿದೆ ಅನ್ನಿಸಲಾರಂಭಿಸಿತು. ಅಮೃತಾ ತಾನು ಬಾಲ್ಯದಲ್ಲಿ ಪುಟ್ಟ ಮಗುವಾಗಿದ್ದಾಗಿನ ದಿನಗಳನ್ನು ನೆನಪಿಸಿಕೊಳ್ಳತೊಡಗಿದಳು. ಅವಳು ತೀರ ಚಿಕ್ಕ ಮಗುವಾಗಿದ್ದಾಗಿನ ದಿನಗಳು ಸಾಲು ಸಾಲಾಗಿ ಚಿತ್ರಗಳಂತೆ ನೆನಪಿಗೆ ಬರಲಾರಂಭಿಸಿದವು. ಎರಡು ವರ್ಷದ ಅದಕ್ಕೂ ಹಿಂದಿನ ದಿನದ ನೆನಪುಗಳನ್ನು ಮಾಡಿಕೊಳ್ಳುವಳು. ತಾನು ಅಜ್ಜಿಯ ಬಳಿ ಸಾವಿನ ಬಗ್ಗೆ ಸೂರ್ಯ ಚಂದ್ರರ, ಹೀಗೆ ಏನೇನೋ ಬಗ್ಗೆ ಪ್ರಶ್ನೆ ಮಾಡುತ್ತ್ತಿದ್ದುದ್ದೆಲ್ಲಾ ನೆನಪಾಗುವುದು. ಎಲ್ಲರೂ ಏಕೆ ಸತ್ತು ಹೋಗುತ್ತಾರೆಂದು ಅಜ್ಜಿಯ ಬಳಿ ಕೇಳಿದ್ದೆ. ‘ಬುದ್ಧನಿಗೂ ಹೀಗೆ ಪುಟ್ಟು ಚಕ್ರವರ್ತಿಯಾಗಿದ್ದವನಿಗೆ ಸಾವು ಯಾಕೆ ಬರ್ತೆ ಅಂತ ಪ್ರಶ್ನೆ ಬಂದಿತ್ತು’ ಎಂದಿದ್ದರು ಅಜ್ಜಿ. ನಾನೂ ಬುದ್ಧನಂತೆ ಆಗಲೇ ಯೋಚಿಸುತ್ತಿದ್ದೆ.

ತನಗೂ ಚಿಕ್ಕವಳಿದ್ದಾಗಲೇ ವಿವೇಕಾನಂದರಂತೆ ಏಕಾಗ್ರತೆ ಇತ್ತು. ತಾನೂ ಗಾಂಧಿಯ ರೀತಿಯೇ ವರ್ತಿಸುತ್ತಿದ್ದೆ. ಸುಳ್ಳು ಹೇಳಬಾರದೆಂದು ಪ್ರಯತ್ನಿಸುತ್ತಿದ್ದೆ, ಆದರೆ ಎಲ್ಲರೂ ತನ್ನನ್ನು ಪೆದ್ದು ಎಂದು ತಿಳಿದರು. ಒಂದು ದಿನ ತಾನು ದೊಡ್ಡ ವಿಜ್ಞಾನಿ ಆಗಿಯೇ ಆಗುತ್ತೇನೆ. ಆಗ ಎಲ್ಲರೂ ತನ್ನನು ಜೀನಿಯಸ್ ಎಂದು ಗುರುತಿಸುತ್ತಾರೆ. ಪ್ರಪಂಚವೇ ನನ್ನನ್ನು ಗುರ್ತಿಸುತ್ತದೆ. ನಾನು ಮುಂದೆ ಇದೆಲ್ಲವನ್ನೂ ಒಂದು ಪುಸ್ತಕ ಬರೆಯುತ್ತೇನೆ. ನಂತರ ಧೋನಿಯನ್ನು ಭೇಟಿಯಾಗುತ್ತೇನೆ. ಎಂದುಕೊಂಡಳು.

ಸದ್ಯಕ್ಕೆ ಹೊಸತೇನಾದರೂ ತಾನು ಮಾಡಬೇಕು. ಯಾರೂ ಪತ್ತೆ ಮಾಡದ ಕೆಲಸ ಮಾಡಬೇಕು ಎಂದುಕೊಂಡು ತಾನೊಂದು ಹಾರುವ ತಟ್ಟೆಯನ್ನು ಗುರುತಿಸುತ್ತೇನೆ ಎಂದುಕೊಂಡಳು. ಕೂಡಲೇ ಅವಳ ಮನಸ್ಸಿನ್ನಲ್ಲಿ ಏನೋ ಆದಂತೆ ಅನ್ನಿಸಿತು. ಕೂಡಲೇ ಆಕಾಶದತ್ತ ನೋಡಿ ಹಾರುವ ತಟ್ಟೆಯನ್ನು ಹುಡುಕಲಾರಂಭಿಸಿದಳು. ಮತ್ತೆ ಕೆಲವೇ ಕ್ಷಣಗಳಲ್ಲಿ ಡೈರಿಯೊಂದನ್ನು ತೆಗೆದುಕೊಂಡು ತಾನು ಮಾಡಬೇಕೆಂದಿರುವ ವಿಷಯಗಳನ್ನೆಲ್ಲಾ ಪಟ್ಟಿ ಮಾಡಿದಳು. ಅದೆಲ್ಲಾ ಬರೆಯುತ್ತಿದ್ದಂತೆ ಏನೇನೋ ಅನ್ನಿಸತೊಡಗಿತು, ಅದೇನೆಂದು ತಿಳಿಯದು. ಅವಳಿಗೆ ತುಂಬಾ ಆಯಾಸವಾಗಿತ್ತು ಅಲ್ಲೇ ಮಲಗಿದಳು.

**

ಸಂಭ್ರಾಂತಿ

ಅತ್ತೆಮನೆಯ ಟೆರೇಸಿನ ಮೇಲೆ ಅಮೃತಾ ಕೂತಿದ್ದಳು ಸಂಜೆ ಕತ್ತಲಾಗಿತ್ತು. ನಕ್ಷತ್ರಗಳನ್ನೇ ನೋಡುತ್ತ ಕುಳಿತಳು.

ಧೋನಿಯ ನೆನಪಾಯಿತು. ಪ್ರತಿದಿನ ಚಿತ್ರಕಲೆ ಅಭ್ಯಾಸ ಮಾಡಿ ನಾನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯುತ್ತೇನೆ. ಧೋನಿಯನ್ನು ಭೇಟಿಯಾಗುತ್ತೇನೆ. ಅವನ ಸ್ನೇಹ ಸಂಪಾದಿಸುತ್ತೇನೆ. ಅವನಿಗೆ ಮದುವೆಯಾಗಿದ್ದರೇನಂತೆ ನಾನು ಸ್ನೇಹ ಸಂಪಾದಿಸಿದಾಗ, ಮಾಧ್ಯಮಗಳಲ್ಲಿ ಅಮೃತಾ ಧೋನಿಯೊಂದಿಗೆ ಸುತ್ತುತ್ತಿದ್ದಾಳೆ ಎಂದು ಪ್ರಚಾರವಾಗುತ್ತದೆ. ಸಾಕ್ಷಿ ಅವನನ್ನು ಬಿಟ್ಟು ಹೋಗುತ್ತಾಳೆ. ನಾನು ದೀಪಿಕಾಳಂತೆಯೇ ಧೋನಿಯೊಂದಿಗೆ ಗಾಸಿಪ್ ಸೃಷ್ಟಿಸುತ್ತೇನೆ. ನಂತರ ಧೋನಿಯನ್ನೇ ಮದುವೆಯಾಗುತ್ತೇನೆ ಎಂದುಕೊಂಡಳು.

ಅವಳು ಕುಳಿತಲ್ಲಿಂದ ಎದುರಿಗೆ ಚಾಮುಂಡಿಬೆಟ್ಟ ಕಾಣಿಸುತ್ತಿತ್ತು. ದೇವಸ್ಥಾನದ ಗೋಪುರವೂ ಲೈಟಿನ ಬೆಳಕಿನಲ್ಲಿ ಕಾಣಿಸುತ್ತಿತ್ತು.

‘ದೇವಿ ನನ್ನ ಆಸೆ ಈಡೇರಿಸು’ ಎಂದಳು. ಅಷ್ಟರಲ್ಲಿ ಅತ್ತೆ ‘ಅಮೃತಾ’ ಎಂದು ಕರೆದಳು. ನಂತರ ಟೆರೇಸಿಗೆ ಬಂದು, ಅಮೃತಾಳನ್ನು ನೋಡಿ ‘ಸರಿ ಇಲ್ಲಿದ್ದೀಯಾ’ ಎಂದು ಹೋದಳು.

ಅಷ್ಟರಲ್ಲಿ ದೇವಸ್ಥಾನದಲ್ಲಿ ದೀಪ ಉರಿಯುವುದು ಕಾಣಿಸಿತು. ಅಮೃತಾ ಅಚ್ಚರಿಗೊಂಡಳು. ದೇವಿ ನನ್ನ ಪ್ರಾರ್ಥನೆಯನ್ನು ಆಲಿಸಿದ್ದಾಳೆ ಅದಕ್ಕೆ ಉತ್ತರವಾಗಿ ದೀಪ ಕಾಣಿಸಿದೆ ಎನಿಸಿತು, ‘ನನ್ನ ಪ್ರಾರ್ಥನೆ ಕೇಳಿತೆ ದೇವಿ’ ಎಂದಳು. ಎಲ್ಲಿಂದಲೋ ಒಂದು ಗಂಟೆಯ ಸದ್ದು ಕೇಳಿಸಿತು. ಅಮೃತಾಳಿಗೆ ದೇವಿ ನನಗೆ ಉತ್ತರಿಸುತ್ತಿದ್ದಾಳೆ. ನಾನು ದೇವಿಯನ್ನು ಸ್ವಾಧೀನಪಡಿಸಿಕೊಂಡೆ ಎಂದು ವಿಚಿತ್ರವಾದ ಸಂತೋಷವಾಯಿತು.

ಇನ್ನು ನಾನು ಇಡೀ ಪ್ರಪಂಚವನ್ನೇ ನಾನು ಹೇಳಿದಂತೆ ಕೇಳಿಸುತ್ತೇನೆ ಎಂದುಕೊಂಡಳು.

ಈಗ ಕೆಟ್ಟ ಶಕ್ತಿಯನ್ನು ಆವಾಹಿಸುತ್ತೇನೆ ಎಂದು ದೆವ್ವವನ್ನು ಆಹ್ವಾನಿಸಲಾರಂಬಿಸಿದಳು. ವಿಕಾರ ಸದ್ದು ಮಾಡುತ್ತ ದೆವ್ವ ಬಂತು, ಅದು ಅಸ್ಪಷ್ಟವಾಗಿ ಕಾಣುತ್ತಿತ್ತು. ಅಮೃತಾ ಹೆದರದೇ ಅದಕ್ಕೆ ಹಸ್ತಲಾಘವ ಮಾಡಿದಳು. ಅದರ ಕೈ ಒರಟಾಗಿತ್ತು. ತಲೆಬಾಗಿ ಅದು ಬಲವಾಗಿ ಕಂಪಿಸಿ, ಅಮೃತಾಳಿಗೆ ತಲೆಬಾಗಿ ಹಿಂದಕ್ಕೆ ಹೋಗಿ ಮಾಯವಾಯಿತು.

ಅಮೃತಾ ಇಡೀ ವಿಶ್ವವೇ ನನ್ನ ಕೈಯಲ್ಲಿದೆ ನಾನೇನು ಬೇಕಾದರೂ ಮಾಡಬಲ್ಲೆ ಎಂದು ಹಿಗ್ಗಲಾರಂಭಿಸಿದಳು.

**

ಮರುದಿನ ಅಮೃತಾ ಮನೆಗೆ ಬಂದಳು. ಈಗ ಅವಳು ಮೈಸೂರಿನಿಂದ ಒಬ್ಬಳೇ ಬಸ್ಸಿನಲ್ಲಿ ಮನೆಗೆ ಬರುತ್ತಿದ್ದಳು.

ಮನೆಗೆ ಬಂದ ಮೇಲೆ ‘ನಾನು ಮೊನ್ನೆಯೇ ಬರ್ತಿದ್ದೆ. ಮಾವ ನಿಲ್ಲು ಹೇಳಿದ್ರು, ನನಿಗಲ್ಲಿ ಹೆದ್ರಿಕೆ ಆಯ್ತು’ ಎಂದು ಗಲಾಟೆ ಮಾಡಿದಳು. ಆದರೆ ತನಗೆ ಹೀಗೆಲ್ಲಾ ಆಯಿತೆಂದು ಅವಳಿಗೆ ಹೇಳಲಾಗಲೇ ಇಲ್ಲ. ಅಪ್ಪ ಅತ್ತೆಗೆ ಫೋನ್ ಮಾಡಿ ಅಲ್ಲಿ ಏನಾಯಿತೆಂದು ಕೇಳಿದರು. ಆಗ ಅತ್ತೆ ‘ಇಲ್ಲ ಈ ಸಾರಿ ಇಲ್ಲಿ ಚೆನ್ನಾಗಿಯೇ ಇದ್ದಳು. ಒಂದು ಸಾರಿ ವಾಕ್ ಮಾಡಿ ಸುಸ್ತಾಗಿತ್ತಷ್ಟೆ. ಅವಳು ಹೇಳಿದ್ರೆ ಮೊದಲೇ ಕಳುಸ್ತಿದ್ದೆ ಮನೆಗೆ’ ಎಂದಳು.

ಅಂದು ಸಂಜೆ ಅಮೃತಾ ಅಂಗಳದಲ್ಲಿ ಒಬ್ಬಳೇ ಓಡಾಡುತ್ತಿದ್ದಳು. ನಂತರ ಜೋಕಾಲಿ ಬಳಿಹೋದಳು. ಅಲ್ಲಿಂದ ಕಾಫಿ ಕಣದಲ್ಲಿ ಬಂದು ನಿಂತಳು.

‘ಬಾ ಮಗಾ’ ಅಜ್ಜಿಯ ದನಿ ಕೇಳಿಸಿತು. ‘ಮಗಾ ನೀನು ಬಂದುಬಿಡು ಆಗ್ದಾ, ನಾನು ಮೇಲಿಂದ ನಿನ್ನ ನೋಡ್ತಾ ಇದ್ದೇನೆ’

ಅಮೃತಾ ‘ಅಜ್ಜೀ... ನಾನೀಗ್ಲೇ ಬಂದೇ’ ದನಿ ಬಂದತ್ತ ಓಡಿದಳು.

ಇದ್ದಕ್ಕಿದ್ದಂತೆ ಸಮುದ್ರದ ಮೊರೆತ ಕೇಳಿಸಿತು. ‘ಓಹ್ ಇದು ಕ್ಷೀರ ಸಾಗರ. ನಾನು ವೈಕುಂಠದ ಬಾಗಿಲಲ್ಲಿದ್ದೇನೆ. ವಿಷ್ಣುವಿನ ಅಪ್ಪಣೆ ಪಡೆದು ಅಜ್ಜಿಯನ್ನು ಮಾತಾಡಿಸಬೇಕು.’ ಸಮುದ್ರದ ಅಲೆಗಳು ಅಬ್ಬರಿಸುತ್ತಿದ್ದವು. ಅಮೃತಾ ಸಮುದ್ರಕ್ಕೆ ಇಳಿದಳು.

ಎಚ್ಚರವಾದಾಗ ಅಮೃತಾ ಜೋಕಾಲಿಯ ಬಳಿ ನಿಂತಿದ್ದಳು. ಗಾಬರಿಯಿಂದ ಮನೆಯ ಕಡೆ ಹೋದಳು. ಉಸಿರು ಒಂದೇ ಸಮನೆ ಏರಿಳಿಯುತ್ತಿತ್ತು. ಎದೆ ಹೊಡೆದುಕೊಳ್ಳುತ್ತಿತ್ತು. ಅಮ್ಮ ‘ಯಾಕೆ ಪುಟ್ಟು ಏನಾಯಿತು’ ಕೇಳಿದಳು. ಅಮೃತಾ ಸುಮ್ಮನೆ ಅವಳನ್ನು ನೋಡಿದಳು.

ಆ ರಾತ್ರಿ ಮಂಚದಲ್ಲಿ ಮಲಗಿದ್ದಳು. ಏನೋ ಮಂಪರು. ಏನೇನೋ ಕನವರಿಕೆ. ಯಾರೋ ಕುತ್ತಿಗೆಯನ್ನು ಒತ್ತಿಹಿಡಿದಂತೆ ಅನುಭವ. ಹುಬ್ಬಿನ ಮಧ್ಯೆ ತೀರ್ವ ಒತ್ತಡ. ಉಸಿರು ಕಟ್ಟಿತು. ಅಷ್ಟರಲ್ಲಿ ‘ನಾನು ಯಮ’ ಎಂದಂತಾಯಿತು. ನಂತರ ‘ನಿನ್ನ ಅಜ್ಜಿಯನ್ನು ಕರದೊಯ್ದದ್ದು ನಾನೇ. ಅಜ್ಜಿಯ ಅವಧಿ ಮುಗಿದಿತ್ತು. ಈಗ ನಿನ್ನ ಅವಧಿ ಮುಗಿದಿದೆ’ ಎಂದದ್ದು ಕೇಳಿಸಿತು.

ಆದರೆ ಯಾರೂ ಕಾಣುತ್ತಿಲ್ಲ. ಕುತ್ತಿಗೆ ವಿಪರೀತ ನೋವಾಯಿತು. ಮೈಯೆಲ್ಲ ಬೆವರಿತು. ಅಮೃತಾ, ಯಮನಿಗೆ ತಾನು ಬದುಕಿರಬೇಕಾದ ಅವಶ್ಯಕತೆಗಳನ್ನು ವಿವರಿಸತೊಡಗಿದಳು. ಮತ್ತೇನೋ ಮಂಪರು. ಬಾಯಿಗೆ ನೀರು ಬೀಳುತ್ತಿತ್ತು. ನಾನು ಸಾಯುತ್ತಿದ್ದೇನೆ ಯಾರೋ ಗಂಗಾಜಲ ಬಿಡುತ್ತಿದ್ದಾರೆ. ಅಮೃತಾ ಜೋರಾಗಿ ಕೂಗಿಕೊಂಡು ಕಣ್ಣುಬಿಟ್ಟಳು. ಅಪ್ಪ ಅವಳಿಗೆ ನೀರು ಕುಡಿಸುತ್ತಿದ್ದರು.

ಆಗ ‘ಬೆಳಗಿನ ಐದು ಗಂಟೆ ಆಯ್ತು. ಯಾಕೆ ಪುಟ್ಟು ಮಲಗು’ ಎಂದರು ಅಪ್ಪ. ಅಪ್ಪ ಅಮ್ಮ ಇಬ್ಬರೂ ನಿದ್ದೆ ಮಾಡಿರಲಿಲ್ಲ.

ಮಾರನೆ ಬೆಳಗ್ಗೆ ವಿಪರೀತ ನಿಶ್ಶಕ್ತಿ, ಏನೂ ತಿನ್ನಲಾಗಲಿಲ್ಲ. ಅಪ್ಪ ಏನೋ ಕುಡಿಸಿದರು. ಮಧ್ಯಾಹ್ನ ಗಂಟೆ ಎರಡಾಯಿತು. ಅಮೃತಾ ಗಡಿಯಾರವನ್ನು ನೋಡಿದಳು. ‘ಎರಡೂ ಮೂವತ್ತಕ್ಕೆ ತಾನು ಸತ್ತುಹೋಗುತ್ತೇನೆ’ ಎಂದು ಜೋರಾಗಿ ಕಿರುಚಿದಳು.

ಆ ಮೇಲೆ ‘ನಾನು ಎರಡೂವರೆಗೆ ಸಾಯ್ತೇನಪ್ಪ. ಅಜ್ಜಿ ಸತ್ತದ್ದೂ ಎರಡೂವರೆಗೆ, ನಾನೂ ಸಾಯ್ತೇನಪ್ಪ. ಅಪ್ಪಾ ಹೇಗಾದ್ರೂ ನನ್ನ ಬದುಕ್ಸಿ ಅಪ್ಪಾ’ ಎಂದು ಅಳತೊಡಗಿದಳು.

**

ಅಮೃತಾಳಿಗೆ ಪ್ಯಾರಾನಾಯ್ಡ್ ಇದೆ ಎಂದು ಹೇಳಿದಾಗ ಅಪ್ಪನ ಕೆಲವರು ಗೆಳೆಯರೂ ‘ಅಂಥವರು ಅದ್ಭುತ ವ್ಯಕ್ತಿಗಳಾಗಿರುತ್ತಾರೆ’ ಎಂದಿದ್ದರು. ಇನ್ನೊಬ್ಬರು ‘ಪಾರಾನಾಯ್ಡ್‌ಗಳೆಲ್ಲ ಜೀನಿಯಸ್‌ಗಳಾಗಿರುತ್ತಾರೆ. ಆದರೆ ಜೀನಿಯಸ್‌ಗಳೆಲ್ಲ ಪಾರಾನಾಯ್ಡ್ ಆಗಿರಬೇಕಿಲ್ಲ’ ಎಂದಿದ್ದರು. ಇನ್ನೊಬ್ಬರು ಅಪ್ಪನ ಹಿರಿಯ ಗೆಳೆಯರು ‘ಏನು ಮಾಡೋದು ಪ್ರಸಾದ್, ಕೆಲವರು ವರ ಪಡೆದು ಹುಟ್ಟಿಬಿಡ್ತಾರೆ’ ಎಂದಿದ್ದರು. ಅಮೃತಾಳಿಗೆ ಎಲ್ಲರೂ ಹೀಗೆ ಹೇಳುತ್ತಾರೆ. ಆದರೆ ನನ್ನನ್ನು ಯಾರೋ ಇವಳು ಷೇಕ್ಸ್‌ಪಿಯರ್‌ ಅಥವಾ ಗಿಬ್ರಾನಿನಂತೆ, ಅಥವಾ ಅಮೃತಾ ಶೇರ್ಗಿಲ್‌ಳಂತೆ ಗುರ್ತಿಸುತ್ತಿಲ್ಲ ಎಂದುಕೊಳ್ಳುವಳು. ಬೇರೆಯವರ ಚಿತ್ರಗಳನ್ನು ನೋಡಿದಾಗ ನನ್ನ ಚಿತ್ರ ಚೆನ್ನಾಗಿಲ್ಲ. ನಾನು ಅವರಂತೆ ಬಿಡಿಸಬೇಕು. ಎಲ್ಲರೂ ‘ಅಯ್ಯೋ ಪಾಪ ಈ ಹುಡುಗಿಗೆ ಆರೋಗ್ಯ ಸರಿಯಿಲ್ಲ’ ಎಂದು ಅನುಕಂಪ ತೋರಿಸುತ್ತಾರೆ ಎನ್ನಿಸಿ ಕೋಪಬರುವುದು. ತನ್ನ ಶಕ್ತಿಯನ್ನು ಗುರುತಿಸುತ್ತಿಲ್ಲ ಎಂದು ವ್ಯಥೆ ಪಡುವಳು.

ಒಂದು ದಿನ ಅಪ್ಪ ಇನ್ನೊಂದು ಪುಸ್ತಕವನ್ನು ತಂದರು. ಅದು ಅವರಿಗೆ ಅವರ ಗೆಳೆಯರೊಬ್ಬರು ಕೊಟ್ಟ ಪುಸ್ತಕವಾಗಿತ್ತು. ಅದರ ಹೆಸರು. ‘ಕೋಡ್ ನೇಮ್ ಗಾಡ್’ ಅಮೆರಿಕಾದಲ್ಲಿರುವ ಭಾರತೀಯ ಭೌತ ವಿಜ್ಞಾನಿ ಮಣಿಭೌಮಿಕ್ ಅವರು ಬರೆದ ಪುಸ್ತಕವದು. ಅಮೃತಾ ಈಗ ಅದನ್ನು ಓದತೊಡಗಿದಳು. ಅದು ಕ್ವಾಂಟಮ್ ಫಿಸಿಕ್ಸ್ ಮತ್ತು ಅಧ್ಯಾತ್ಮವನ್ನು ಜೊತೆಜೊತೆಯಾಗಿ ವ್ಯಾಖ್ಯಾನಿಸಿದ ಪುಸ್ತಕ. ಆ ಪುಸ್ತಕದಲ್ಲಿ ಮಣಿಭೌಮಿಕ್, ಇಡೀ ವಿಶ್ವವೇ ಶಕ್ತಿಯಿಂದಾಗಿದೆ. ಅಣುವಿನಲ್ಲಿ ಇಲೆಕ್ಟ್ರಾನ್ ನ್ಯೂಕ್ಲಿಯಸ್‌ನ ಸುತ್ತ ಸುತ್ತುತ್ತಿರುತ್ತದೆ. ಎಲೆಕ್ಟ್ರಾನ್ ತನ್ನ ಜಾಗವನ್ನು ಬದಲಿಸುವಾಗ ಅಲ್ಲಿ ಖಾಲಿ ಸ್ಥಳ ಉಂಟಾಗುತ್ತದೆ ಎಂದು ಸಾಮಾನ್ಯವಾಗಿ ನಾವು ಭಾವಿಸುತ್ತೇವೆ. ಆದರೆ ಅದು ಕೂಡಾ ಖಾಲಿಯಲ್ಲ. ಅಲ್ಲಿ ಶಕ್ತಿ ಕ್ವಾಂಟಂ ರೂಪದಲ್ಲಿರುತ್ತದೆ. ಅದು ಏಕಕಾಲಕ್ಕೆ ಕಣವಾಗಿಯೂ, ಅಲೆಯಾಗಿಯೂ ವರ್ತಿಸುತ್ತಿರುತ್ತದೆ. ಏಕಕಾಲಕ್ಕೆ ಕ್ವಾಂಟಮ್ ಕಣವೊಂದು ಒಂದೂ ಆಗಬಹುದು ಎರಡೂ ಆಗಿರಬಹುದು. ಹಾಗಾಗುವ ವಸ್ತು ಎನ್ನುವುದು ವಾಸ್ತವ ಮತ್ತು ಮಿಥ್ಯೆ. ಏಕಕಾಲಕ್ಕೆ ಸೃಷ್ಟಿಯಾದ ಬೇರೆ ಬೇರೆ ಕ್ವಾಂಟಮ್ ಕಣಗಳು ಎಷ್ಟೇ ದೂರದಲ್ಲಿದ್ದರೂ ಒಂದೇ ರೀತಿ ವರ್ತಿಸುತ್ತವೆ. ಆದ್ದರಿಂದ ಕ್ವಾಂಟಮ್ ಜಗತ್ತಿಗೆ ದೂರ ಮತ್ತು ಕಾಲ ಎನ್ನುವುದು ಇಲ್ಲ. ಉದಾಹರಣೆಗೆ ಇಲ್ಲಿರುವ ವ್ಯಕ್ತಿ ಕೈ ಎತ್ತಿದರೆ ಯಾವುದೇ ಸಂಪರ್ಕ ಇಲ್ಲದೆ ಅಮೆರಿಕಾದಲ್ಲಿರುವ ವ್ಯಕ್ತಿ ಅದೇ ಕಾಲಕ್ಕೆ ಅದೇ ರೀತಿ ಕೈ ಎತ್ತಿದಂತೆ.

ಇದರಿಂದ ಇಡೀ ವಿಶ್ವವೇ ಒಂದು ಎಂಬ ಪರಿಕಲ್ಪನೆ ಸ್ಪಷ್ಟವಾಗುತ್ತದೆ. ಎಲ್ಲವೂ ಒಂದೇ ಶಕ್ತಿಯ ವಿವಿಧ ರೂಪಗಳು. ನಾನು ಬೇರೆ ಅಲ್ಲ ನಾಯಿ ಬೇರೆ ಅಲ್ಲ, ಈ ಮೇಜು ಕುರ್ಚಿಗಳು ಬೇರೆ ಬೇರೆ ಅಲ್ಲ. ಇದನ್ನು ನೀವು ಕ್ವಾಂಟಮ್ ಶಕ್ತಿ ಎಂದಾದರೂ ಕರೆಯಿರಿ. ದೇವರು ಎಂದಾದರೂ ಕರೆಯಿರಿ. ಇವೆಲ್ಲವೂ ವಿಶ್ವಶಕ್ತಿ ಅಷ್ಟೇ ಎಂದು ವಿವರಿಸುತ್ತಾ ಹೋಗುತ್ತಾರೆ. ಅಮೃತಾಳಿಗೆ ಈ ವಿಚಾರಗಳು ಜಗ್ಗಿ ವಾಸುದೇವ್ ಹೇಳುವ ಶಿವ ಶಕ್ತಿಯರ ವಿಚಾರವಲ್ಲದೆ ಬೇರೇನೂ ಅಲ್ಲ ಎನಿಸಿತು.

ಕೆಲವೇ ದಿನಗಳ ಅಂತರದಲ್ಲಿ ಅಮೃತಾಳ ಕೈಯಲ್ಲಿ ಇನ್ನೊಂದು ಪುಸ್ತಕವಿತ್ತು. ಅದು ಓಶೋನ ‘ಬುದ್ಧ ಮತ್ತು ಪರಂಪರೆ’. ನಾನು ದೇವರನ್ನು ಮೂರ್ತರೂಪಗೊಳಿಸಿ ಹರಕೆ ಹೇಳಿಕೊಂಡು ಅದನ್ನು ತೀರಿಸದಿದ್ದರೆ ಕೆಟ್ಟದ್ದಾಗುತ್ತದೆ ಎಂದುಕೊಂಡಿದ್ದೆ. ಆದರೆ ನಿಜವಾಗಿಯೂ ಹರಕೆ ಎನ್ನುವುದು ಕೆಲಸಮಾಡುತ್ತದೆಯೇ? ದೇವರು ಇದ್ದಾನೆಂಬ ಮೂರ್ತರೂಪದಲ್ಲಿ ನಂಬಿಕೆ ಇಟ್ಟರೆ ನಮ್ಮ ಕಷ್ಟ ಪರಿಹಾರವಾಗುತ್ತದೆಯೇ? ಎಂದೆಲ್ಲಾ ಪ್ರಶ್ನೆಗಳು ಮೂಡಿದವು. ಅಮೃತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದಳು. ಆದರೆ ಆಸ್ತಿಕಳಾಗಿಯೂ ಇರಲಿಲ್ಲ. ನಾಸ್ತಿಕಳಾಗಿಯೂ ಇರಲಿಲ್ಲ. ದೇವರನ್ನೂ ನಂಬಲೂ ಆಗದೆ, ತನ್ನಲ್ಲಿಯೂ ನಂಬಿಕೆಯಿರದೆ ಒದ್ದಾಡುತ್ತಿದ್ದಳು.

ಈಗ ಅಮೃತಾಳಿಗೆ ದೇವರು ಎಂಬ ಕಲ್ಪನೆಗೆ ವಿಜ್ಞಾನದ ವಿವರಣೆ ಸಿಗುತ್ತಿದೆ ಆ ಮೂಲಕ ದೇವರು ಮತ್ತು ವಿಜ್ಞಾನ ಜೊತೆಯಾಗಿ ಸಾಗುತ್ತಿದೆ ಎನ್ನಿಸಿತು. ಹಿಂದೆ ದೇವರ ಕಲ್ಪನೆ ಕಾಲ ಕಾಲಕ್ಕೆ ಬದಲಾಗಿದೆ ಆದರೆ ಈಗ ಅದು ಹೆಚ್ಚು ನಿಖರವಾಗುತ್ತಿದೆ ಎನ್ನಿಸಿತು.

ಎಲ್ಲವೂ ಒಂದೇ ಆಗಿರುವಾಗ ಯಾರ ಬಳಿಯೂ ಸ್ಪರ್ಧೆಗಿಳಿಯುವುದು ವ್ಯರ್ಥವಲ್ಲವೆ, ಎಲ್ಲ ಜೀವಿಗಳೂ, ವಸ್ತುಗಳೂ ಹೊಂದುವುದು ರೂಪಾಂತರ ಮಾತ್ರ, ನಾಶವಲ್ಲ.

ನಮ್ಮ ದೇಹವೂ ಒಂದು ಅಂಗಿಯಷ್ಟೆ ಶಕ್ತಿಯು ಅಂಗಿ ಕಳಚಿ ರೂಪಾಂತರವಾಗುತ್ತದೆ. ಅದೇ ಪುನರ್ಜನ್ಮ.

ಅವಳಿಗೀಗ ಸ್ವರ್ಗ-ನರಕ, ಸತ್ತವರನ್ನು ನಾವು ಪುನಃ ಭೇಟಿಯಾಗುತ್ತೇವೆಯೇ ಮುಂತಾದ ಪ್ರಶ್ನೆಗಳಿಗೆ ಉತ್ತರ ದೊರಕಿತ್ತು. ಅಮೃತಾಳ ಮನಸ್ಸು ಬೇರೇಯೇ ದಿಕ್ಕಿನಲ್ಲಿ ಯೋಚಿಸಲಾರಂಭಿಸಿತು.

ಅಮೃತಾ ತಾನು ಆಸ್ಪತ್ರೆಯ ಕೊಠಡಿಯಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗ ಬರೆದ, ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಕವನವನ್ನು ತೆಗೆದು ಮತ್ತೆ ಓದಿಕೊಂಡಳು.

‘ಇಷ್ಟು ದಿನ ದೇವರೇ ನಿನಗೆ 
ಆರೋಗ್ಯ ಸರಿಯಿರಲಿಲ್ಲ ಎಂದುಕೊಳ್ಳುತ್ತೇನೆ.
ಅದಕ್ಕೇ ನನ್ನನ್ನು ಕಂಗೆಡಿಸಿಬಿಟ್ಟೆ
ಇಲ್ಲ... ಇಲ್ಲ... ಮತ್ತೆಂದೂ ಇಲ್ಲ
ನೀನು ಮತ್ತೆಂದೂ... ನಾನು ದುಃಖದಲ್ಲಿ
ಕೈತೊಳೆಯುವಂತೆ ಮಾಡುವುದಿಲ್ಲ...
ನಿನ್ನಲ್ಲಿ ನಂಬಿಕೆಯಿಡುತ್ತೇನೆ,
ದೇವರೇ... ನೀನು ಇರುತ್ತೀ
ನನ್ನನ್ನೂ ಬದುಕಿಸುತ್ತೀ...’

**

ಅಮೃತಯಾನ

‘ಅಪ್ಪ ಬುದ್ಧ ಹೇಳಿದ್ದಾನೆ ಜೀವಕ್ಕೊಂದು ಪರ್ಪಸ್ ಇದೆ ಅದು ಮುಗಿದನಂತರ ಹೊರಟುಹೋಗುತ್ತದೆ ಅಂತ, ನನ್ನ ಜೀವನದ ಪರ್ಪಸ್ ಮುಗಿಯಿತು’. ತನ್ನ ಬದುಕಿನ ಕೊನೆಯ ದಿನದಂದು ಅಮೃತಾ ರಕ್ಷಿದಿ ತನ್ನ ತಂದೆಯ ಬಳಿ ಹೇಳಿದ ಮಾತಿದು. ಸಣ್ಣ ವಯಸ್ಸಿಗೇ ಕಾಣಿಸಿಕೊಂಡ ಪ್ಯಾರನಾಯ್ಡ್ ಸ್ಕಿಝೋಫ್ರೇನಿಯಾದ ಜೊತೆಗೆ ಸೆಣಸಿ ಬದುಕಿದ ಅಮೃತಾ ಅಸಾಧಾರಣ ಗುರುತಿಸಬಹುದಾದ ಪ್ರತಿಭಾವಂತೆ. ಅಮೃತಾ ಎರಡು ವರ್ಷದ ಮಗುವಾಗಿದ್ದ ದಿನಗಳಿಂದ ತೊಡಗಿ ಬದುಕಿನ ಕೊನೆಯ ತಿಂಗಳುಗಳ ತನಕದ ಸುಮಾರು ಎರಡು ದಶಕಗಳ ಅವಧಿಯನ್ನು ಅಕ್ಷರಗಳಲ್ಲಿ ಹಿಡಿದಿಟ್ಟ ಬಗೆ ಅನನ್ಯ. ಇಡೀ ಕೃತಿಯಲ್ಲಿ ಅಮೃತಾ ‘ತನ್ನ ಕಥೆ’ಯನ್ನು ಹೇಳುವುದಿಲ್ಲ. ರಕ್ಷಿದಿ ಎಂಬ ಮಲೆನಾಡ ಮಡಿಲಲ್ಲಿ ಹುಟ್ಟಿದ ಅಮೃತಾ ಎಂಬ ಹುಡುಗಿಯ ಕಥೆಯನ್ನು ಅನಾವರಣಗೊಳಿಸುತ್ತಾರೆ. ತನ್ನ ಹೊರಗೆ ನಿಂತು ತನ್ನನ್ನೇ ನೋಡುವ ಈ ತಂತ್ರವೇ ವಿಶಿಷ್ಟ. ಈ ಅರ್ಥದಲ್ಲಿ ‘ಅಮೃತಯಾನ’ ಒಂದು ಆತ್ಮಕಥೆಯಲ್ಲ. ಇದು ಅಮೃತಾ ರಕ್ಷಿದಿ ಎಂಬ ಲೇಖಕಿ ಬರೆದ ‘ಅಮೃತಾ’ ಎಂಬ ಹುಡುಗಿಯ ಜೀವನ ಚರಿತ್ರೆ. ಅಭಿರುಚಿ ಪ್ರಕಾಶನ ಪ್ರಕಟಿಸುತ್ತಿರುವ ಈ ಐದು ಸಂಪುಟಗಳ ಈ ಕೃತಿ ನವೆಂಬರ್ 19ರಂದು ಬಿಡುಗಡೆಯಾಗಬೇಕಿತ್ತು. ಅಲ್ಲಿಯ ತನಕ ಕಾಯದೆ ಅಮೃತಾ ಕಾಲಯಾನಕ್ಕೆ ಹೊರಟರು (4-9-2017). ಈ ಕೃತಿಯಿಂದ ಹೆಕ್ಕಿ ತೆಗೆದ ಕೆಲವು ಭಾಗಗಳು ಇಲ್ಲಿ ನಿಮ್ಮ ಓದಿಗಾಗಿ.

Read More

Comments
ಮುಖಪುಟ

ಕಾವೇರಿ: ಮರು ಪರಿಶೀಲನೆ ಅರ್ಜಿ ಸಲ್ಲಿಸಲು ಸಲಹೆ

ಜಲಸಂಪನ್ಮೂಲ ತಾಂತ್ರಿಕ ತಜ್ಞ ವಲಯ ನೀಡಿರುವ ಈ ಸಲಹೆಯನ್ನು ವಿಧಾನಸಭೆಯ ಚುನಾವಣೆಯ ಹೊಸ್ತಿಲಲ್ಲಿರುವ ಈ ಹಂತದಲ್ಲಿ ರಾಜ್ಯ ಸರ್ಕಾರ ಪುರಸ್ಕರಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.

ಪ್ರಭುತ್ವದ ಕ್ರೌರ್ಯ ಬಿಚ್ಚಿಟ್ಟ ಹೋರಾಟಗಾರರು!

ಪಾಕಿಸ್ತಾನದ ಲೇಖಕಿ ಮತ್ತು ಮಾಜಿ ಸಂಸದೆ ಫರ್ಹಾನಾಜ್‌ ಇಸ್ಫಹಾನಿ, ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ಮೊಹಮದ್ ನಶಿದ್‌ ಹಾಗೂ ಶ್ರೀಲಂಕಾದ ಮಾನವ ಹಕ್ಕು ಹೋರಾಟಗಾರ ಎಸ್‌.ಸಿ. ಚಂದ್ರಹಾಸನ್‌ ತಾವು ಅನುಭವಿಸಿದ, ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳನ್ನು ಶನಿವಾರ ಬೆಂಗಳೂರಿನಲ್ಲಿ ಹಂಚಿಕೊಂಡರು.

ಭಕ್ತಿಯ ಅಭಿಷೇಕದಲ್ಲಿ ಮಿಂದೆದ್ದ ಗೊಮ್ಮಟೇಶ್ವರ

ವಿರಾಗದ ಮೇರುಮೂರ್ತಿಗೆ ಅಭಿಷೇಕ ಪ್ರಾರಂಭವಾದುದು ಮಧ್ಯಾಹ್ನ 2.30ರ ವೇಳೆಗೆ. ಬೆಳಗಿನ ತಂಪು ಹೊತ್ತಿನಿಂದಲೇ ಜನ ಗೊಮ್ಮಟನ ಸನ್ನಿಧಿಯಲ್ಲಿ ಸೇರತೊಡಗಿದ್ದರು. ಮಧ್ಯಾಹ್ನ ಹನ್ನೆರಡರ ವೇಳೆಗೆ ನೆತ್ತಿಯ ಮೇಲಿನ ಸೂರ್ಯ ಕೆಂಡ ಚೆಲ್ಲುತ್ತಿದ್ದ. ಗೊಮ್ಮಟನ ಅಭಿಷೇಕಕ್ಕೆ ಕಾತರದ ಕಂಗಳಲ್ಲಿ ಸೇರಿದ ಆರು ಸಾವಿರಕ್ಕೂ ಹೆಚ್ಚಿನ ಜನಸ್ತೋಮ ಬೆವರಿನ ಅಭಿಷೇಕದಲ್ಲಿ ಸ್ವಯಂ ತೋಯತೊಡಗಿತು.

ಮೂವರು ಸಿಬಿಐ ಬಲೆಗೆ

ನೀರವ್ ಮೋದಿ ಕಂಪನಿಯ ವಹಿವಾಟು ಜವಾಬ್ದಾರಿ ಹೊತ್ತಿದ್ದ ಹೇಮಂತ್ ಭಟ್, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ(ಪಿಎನ್‌ಬಿ) ನಿವೃತ್ತ ಉಪ ವ್ಯವಸ್ಥಾಪಕ ಗೋಕುಲನಾಥ್ ಶೆಟ್ಟಿ ಮತ್ತು ಪಿನ್‌ಬಿಯ ಮತ್ತೊಬ್ಬ ಅಧಿಕಾರಿ ಮನೋಜ್ ಕಾರಟ್ ಎಂಬುವವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಸಂಗತ

ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟು–ಪರಿಹಾರ

ಭಾರತಕ್ಕೆ ಉಳಿದಿರುವ ದಾರಿಯೆಂದರೆ, ವಿಶ್ವಸಂಸ್ಥೆ ಮತ್ತು ಅಮೆರಿಕದ ಜೊತೆಗೂಡಿ ರಾಜತಾಂತ್ರಿಕ ಮಾರ್ಗದ ಮೂಲಕ ಮಾಲ್ಡೀವ್ಸ್‌ ಬಿಕ್ಕಟ್ಟನ್ನು ಪರಿಹರಿಸಲು ಶ್ರಮಿಸುವುದು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

ಭ್ರಮಾಧೀನ ಮನಸ್ಥಿತಿಯಲ್ಲಿ ಬದುಕುತ್ತಿರುವ ಸಮುದಾಯವನ್ನು ಎಚ್ಚರಿಸಿ ಮುನ್ನಡೆಸಬೇಕಾದ ಜವಾಬ್ದಾರಿ ಸಮಾಜಕ್ಕಿದೆಯಲ್ಲವೇ?

ನಿರುದ್ಯೋಗ ವ್ಯಕ್ತಿಗತ ಸಮಸ್ಯೆಯೇ?

ಸ್ಪರ್ಧಾತ್ಮಕ ಜಗತ್ತಿನಲ್ಲಿ ಅರ್ಹತೆಯುಳ್ಳವರಷ್ಟೇ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂಬ ನಿಲುವು ತಳೆಯುವುದು ಆಷಾಡಭೂತಿತನವಾಗುತ್ತದೆ

ಜಾತಿ ಮತ್ತು ಹಿಂಸಾಚಾರದ ಸಮೀಕರಣ

ಒಂದು ವರ್ಗದ ನೀಚ ಕೃತ್ಯಗಳಿಗೆ ಮತ್ತೊಂದು ವರ್ಗವನ್ನು ಹೊಣೆಯಾಗಿಸುವ ಕೆಸರೆರಚಾಟ ಮುಂದುವರಿಯುತ್ತಿರುವವರೆಗೂ ಅಲ್ಲಿ ಅಸಹಿಷ್ಣುತೆ, ಹಿಂಸೆ ತಡೆಯುವುದು ಕಷ್ಟ.

ಮುಕ್ತಛಂದ

ಅಪ್ಪನ ನೆನಪುಗಳು

ಅಡಿಗರ ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಸಾಧನೆಯನ್ನು ಅವರ ನಿಕಟವರ್ತಿಗಳು ಹಾಗೂ ವಿಮರ್ಶಕರು ಸಾಕಷ್ಟು ದಾಖಲಿಸಿದ್ದಾರೆ. ಕೌಟುಂಬಿಕ ವ್ಯಕ್ತಿಯಾಗಿ ಅಡಿಗರು ಹೇಗಿದ್ದರು? ಅವರ ಪುತ್ರ ಪ್ರದ್ಯುಮ್ನ ಗೋಪಾಲಕೃಷ್ಣ ಅಡಿಗ ಅವರ ನೆನಪುಗಳು ಇಲ್ಲಿವೆ.

ಸ್ವಾಭಿಮಾನ ಮತ್ತು ಸಮಗ್ರ ಕಾವ್ಯ!

‘ಪ್ರಾರ್ಥನೆ’ ಕವಿತೆಯ ವಿವಾದದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಪತ್ರಕ್ಕೆ ಅಡಿಗರು ಬರೆದ ಜವಾಬು ಕವಿಗೆ ಇರಬೇಕಾದ ಸ್ವಾಭಿಮಾನವನ್ನು ಸೂಚಿಸುವಂತಿದೆ. ಸ್ವಾಭಿಮಾನ ಎನ್ನುವುದು ಸೋವಿಯಾಗಿರುವ ಇಂದಿನ ಸಂದರ್ಭದಲ್ಲಿ ಅಡಿಗರ ನಿಲುವು ಹೆಚ್ಚು ಮಹತ್ವದ್ದಾಗಿ ಕಾಣುತ್ತದೆ.

ಕನ್ನಡ ಸಾಹಿತ್ಯಲೋಕದ ವಿಷಕಂಠ

ಎಲಿಯಟ್‌ ಕೂಡ ಒಂದು ಕವನದಲ್ಲಿ ಇಷ್ಟೆಲ್ಲ ಹೇಳಲಿಲ್ಲವಲ್ಲ! ಇದು ಅಡಿಗರ ‘ಭೂಮಿಗೀತ’, ‘ಭೂತ’ ಕವಿತೆಗಳಿಗೆ ಅಮೆರಿಕದ ಕವಿಯೊಬ್ಬರ ಉದ್ಗಾರ. ಆದರೆ, ಅತ್ಯುತ್ತಮ ಕಾವ್ಯ ರಚಿಸಿಯೂ ನಿರಂತರವಾಗಿ ಟೀಕೆಗೆ, ಪ್ರತಿರೋಧಕ್ಕೆ, ಖಂಡನೆಗೆ ಗುರಿಯಾದ ಅಡಿಗರಂಥ ಕವಿ ಇನ್ನೊಬ್ಬರಿಲ್ಲ.

‘ಚಂಡೆ ಮದ್ದಳೆ’ ಕವಿಯ ನಿರಂತರ ‘ವೇಸ್ಟ್ ಲ್ಯಾಂಡ್’

ಎಲಿಯಟ್ ಇಂಗ್ಲಿಷ್‌ನಲ್ಲಿ ಮಾಡಿದುದನ್ನು ಅಡಿಗರು ಕನ್ನಡದಲ್ಲಿ ಮಾಡಿದರು. ತಟಸ್ಥವಾಗಿದ್ದ ಸಾಹಿತ್ಯದಲ್ಲಿ ವಿದ್ಯುತ್ ಸಂಚಲನ ಉಂಟು ಮಾಡಿದರು. ಅಡಿಗರ ನಂತರ ಕನ್ನಡ ಕಾವ್ಯ ಮೊದಲಿನ ಹಾಗೆ ಇರಲಿಲ್ಲ. ಇದುವರೆಗೆ ಕನ್ನಡದಲ್ಲಿ ಇಲ್ಲದ್ದನ್ನು ಅವರು ಸೃಷ್ಟಿಸಿದರು. ಅವರನ್ನು ವಿರೋಧಿಸಿದವರು ಕೂಡ ಅವರ ನುಡಿಗಟ್ಟನ್ನು ಸ್ಪರ್ಶಿಸಿಯೇ ಹಾಗೆ ಮಾಡಬೇಕಾಯಿತು. ಇದಕ್ಕಿಂತಲೂ ಹೆಚ್ಚಿನ ಕೊಡುಗೆಯೊಂದಿದೆಯೇ?