‘ವೆಲ್ವೆಟ್’ ಕ್ರಾಂತಿ

10 Sep, 2017
ಸಿ.ಜಿ. ಮಂಜುಳಾ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ, ಪ್ರತಿರೋಧದ ಧ್ವನಿಗಳನ್ನು ಹತ್ತಿಕ್ಕುವ ವ್ಯವಸ್ಥಿತ  ಸಂಸ್ಕೃತಿಗೆ ಸಂಕೇತ. ಪತ್ರಿಕಾ ಸ್ವಾತಂತ್ರ್ಯ , ಅಭಿವ್ಯಕ್ತಿ ಸ್ವಾತಂತ್ರ್ಯ  ಜಾಗತಿಕವಾಗಿ ಅಪಾಯಕ್ಕೆ ಸಿಲುಕಿರುವ ದಿನಗಳಿವು.  ದಿನನಿತ್ಯದ  ಕರ್ತವ್ಯಗಳ ನಿರ್ವಹಣೆ ಸಂದರ್ಭದಲ್ಲೂ ಬೆದರಿಕೆ ಹಾಗೂ ಆಕ್ರಮಣಗಳಿಗೆ ಕಾರ್ಯನಿರತ  ಪತ್ರಕರ್ತರು ಗುರಿಯಾಗುತ್ತಿರುವ ವಿದ್ಯಮಾನವನ್ನು ಗೌರಿ ಲಂಕೇಶ್ ಹತ್ಯೆ ಪ್ರಕರಣ  ನಮಗೆ ನೆನಪಿಸಿದೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ‘ವೆಲ್ವೆಟ್ ರೆವಲ್ಯೂಷನ್’  ಸಾಕ್ಷ್ಯಚಿತ್ರ  ಪ್ರದರ್ಶನಗೊಂಡಿತ್ತು.  ಜಗತ್ತಿನ ವಿವಿಧ ಭಾಗಗಳಲ್ಲಿ ಪತ್ರಕರ್ತೆಯರು ಎದುರಿಸುತ್ತಿರುವ ತೀವ್ರತರ ಅಪಾಯಗಳ ಕಥಾನಕಗಳನ್ನು ಈ ಚಿತ್ರ ನಿರೂಪಿಸಿದೆ.  ವೃತ್ತಿಬದುಕಿನಲ್ಲಿ ಅನೇಕ ವೈಯಕ್ತಿಕ ನಷ್ಟಗಳನ್ನು ಅನುಭವಿಸಿದ ಅನೇಕ ಪತ್ರಕರ್ತೆಯರ ಕಥಾನಕಗಳಿರುವ  ಈ ಚಿತ್ರದ ಗುಂಗಿನಿಂದ ಇನ್ನೂ ಹೊರಬರದೆ ಇರುವ ಸಂದರ್ಭದಲ್ಲಿ ನಮ್ಮ ಮನೆ ಬಾಗಿಲಲ್ಲೇ ಗೌರಿ ಲಂಕೇಶ್ ಹತ್ಯೆಯಾಗಿದ್ದು  ಬೆಚ್ಚಿಬೀಳಿಸುವಂತಹದ್ದು.  ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರವೂ  ಪತ್ರಕರ್ತರಿಗೆ ಅಪಾಯಕಾರಿ ಸ್ಥಳವಾಗಿ ಪರಿಣಮಿಸುತ್ತಿದೆಯೆ ಎಂಬಂಥ  ಪ್ರಶ್ನೆಯನ್ನು  ಇದು ಹುಟ್ಟುಹಾಕಿದೆ.

ವಿಶ್ವದಾದ್ಯಂತ ಪತ್ರಕರ್ತರ  ಮೇಲೆ ನಡೆಯುತ್ತಿರುವ ಇಂತಹ ಆಕ್ರಮಣಗಳ ಹಿನ್ನೆಲೆಯಲ್ಲಿ ‘ವೆಲ್ವೆಟ್ ರೆವಲ್ಯೂಷನ್’ ಚಿತ್ರ ಪ್ರಸ್ತುತವಾಗುತ್ತದೆ.  ಕಳೆದ ಮಾರ್ಚ್ ತಿಂಗಳಿನಲ್ಲಿ ದೆಹಲಿಯಲ್ಲಿ ಏಷ್ಯನ್ ವಿಮೆನ್ ಫೆಸ್ಟಿವಲ್ ನಲ್ಲಿ ಮೊದಲ ಬಾರಿಗೆ  ಪ್ರದರ್ಶನಗೊಂಡ ಈ ಚಿತ್ರ  ವಿವಿಧ ರಾಷ್ಟ್ರಗಳಲ್ಲಿ ಪ್ರದರ್ಶಿತಗೊಳ್ಳುತ್ತಿದ್ದು ಪ್ರಶಸ್ತಿಗಳನ್ನೂ ಗೆದ್ದುಕೊಂಡಿದೆ.  ಬೆಂಗಳೂರು ಮೂಲದ  ನೂಪುರ್ ಬಸು ಈ ಸಾಕ್ಷ್ಯ ಚಿತ್ರದ ಕಾರ್ಯನಿರ್ವಾಹಕಿ ನಿರ್ಮಾಪಕಿ .  ಮೂರೂವರೆ ದಶಕಗಳ ಕಾಲ ಮುಖ್ಯವಾಹಿನಿಯ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ  ಕೆಲಸಮಾಡಿದವರು ಅವರು.

ವ್ಯವಸ್ಥೆ ಅಥವಾ ಅಧಿಕಾರ ಕೇಂದ್ರಗಳ ಕುರಿತಾಗಿ ಸತ್ಯವನ್ನು ನುಡಿದಿದ್ದಕ್ಕಾಗಿ ಭಾರಿ ಬೆಲೆ ತೆರಬೇಕಾದ ವಿವಿಧ ದೇಶಗಳ ವಿವಿಧ ಪತ್ರಕರ್ತೆಯರ  ಬದುಕುಗಳನ್ನು ಈ  57 ನಿಮಿಷಗಳ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರ ಚಿತ್ರಿಸುತ್ತದೆ.  ಪತ್ರಿಕಾ ಸ್ವಾತಂತ್ರ್ಯ ವನ್ನು ಹತ್ತಿಕ್ಕುವ ಯತ್ನಗಳ ನಡುವೆಯೇ ಈ ಪತ್ರಕರ್ತೆಯರ ದಿಟ್ಟತನದ ಚಿತ್ರಣ ಇಲ್ಲಿದೆ.  ಸುದ್ದಿ ಬೇಟೆಯಲ್ಲಿ ತೊಡಗಿರುವ ಮಹಿಳೆಯರ ಬದುಕು ಹಾಗೂ ಅವರ ದೃಷ್ಟಿಕೋನಗಳನ್ನು ಇದು ದಾಖಲಿಸುತ್ತದೆ.

ಸ್ಕ್ರಾಲ್‍ ಅಂತರ್ಜಾಲ ಪತ್ರಿಕೆ ವರದಿಗಾರ್ತಿ ಮಾಲಿನಿ ಸುಬ್ರಮಣಿಯಮ್ ಅವರು   ತಮ್ಮ   ಸ್ವಂತ ಊರು ಬಸರ್‌ನಿಂದ ಹೊರ ಹೋಗುವ ಒತ್ತಡ ಸೃಷ್ಟಿಯಾಗುತ್ತದೆ. ಛತ್ತೀಸಗಡದಲ್ಲಿ ಆದಿವಾಸಿಗಳ ವಿರುದ್ಧ ಸಶಸ್ತ್ರ ಪಡೆಗಳು ನಡೆಸಿದ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ  ಅವರು ವರದಿ ಮಾಡಿದ್ದು ಇದಕ್ಕೆ ಕಾರಣ. ಸಿರಿಯಾದ ಪತ್ರಕರ್ತೆ ಝೈನಾ  ಎರ್ಹಾಯಮ್  ತನ್ನ  8 ತಿಂಗಳ  ಕಂದ  ಝರಾ ಜೊತೆ ತನ್ನ ದೇಶ ಬಿಟ್ಟು  ಟರ್ಕಿಯಲ್ಲಿ ನೆಲಸಬೇಕಾದ  ಸ್ಥಿತಿ ಎದುರಾಗುತ್ತದೆ.  ‘ನಾನೇನು ಯುದ್ಧ ವರದಿಗಾರ್ತಿಯಾಗಬೇಕೆಂದು ಇಷ್ಟ ಪಟ್ಟಿರಲಿಲ್ಲ….. ಆದರೆ ಯುದ್ಧ ನನ್ನ ಮನೆ ಬಾಗಿಲಿಗೇ ಬಂತು’  ಎನ್ನುತ್ತಾರೆ  ಸಿರಿಯಾದ ಈ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ.

(ನೂಪುರ್ ಬಸು)

ವಿಶ್ವದ ವಿವಿಧ ಭಾಗಗಳಿಂದ  ವರದಿಗಳನ್ನು , ಕಥಾನಕಗಳನ್ನು ಹೊರ ಜಗತ್ತಿಗೆ ತರಲು ಸೆಣಸುವ ಈ ಪತ್ರಕರ್ತೆಯರಿಗಾಗಿ ಹೆಚ್ಚು ಬೆಂಬಲ ಏಕೆ ವ್ಯಕ್ತವಾಗುವುದಿಲ್ಲ? ಇಂತಹ ಮುಖ್ಯ ಪ್ರಶ್ನೆಗಳನ್ನು  ‘ವೆಲ್ವೆಟ್ ರೆವಲ್ಯೂಷನ್’ ಕೇಳುತ್ತದೆ.

ಕಾರ್ಯನಿರ್ವಾಹಕಿ ನಿರ್ಮಾಪಕಿಯಾಗಿ ವಿಶ್ವದ ವಿವಿಧ ಭಾಗಗಳ ಮಹಿಳಾ ನಿರ್ದೇಶಕಿಯರೊಂದಿಗೆ ನೂಪುರ್ ಬಸು ಅವರು ಈ ಚಿತ್ರದ ಕಥಾನಕವನ್ನು ನಿರೂಪಿಸುತ್ತಾ ಹೋಗುತ್ತಾರೆ.

ಅಮೆರಿಕ ಮೂಲದ ಬಾಂಗ್ಲಾದೇಶದ  ದಿಟ್ಟ ಬ್ಲಾಗರ್ ರಫೀದಾ ಬೊನ್ಯಾ ಅಹಮದ್‌ ಅವರ ಮನ ಕರಗಿಸುವ ಕಥಾನಕ ಈ ಚಿತ್ರದಲ್ಲಿದೆ.  ಎರಡು ವರ್ಷಗಳ ಹಿಂದೆ ಪತಿ ಜೊತೆ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ ಬೋನ್ಯಾ ಮೇಲೆ ಮಚ್ಚುಗತ್ತಿ ಹಿಡಿದ  ಧಾರ್ಮಿಕ ಮೂಲಭೂತವಾದಿಗಳ ಗುಂಪಿನಿಂದ ಕ್ರೂರ ಹಲ್ಲೆ ನಡೆಯಿತು. ಕಣ್ಣೆದುರೇ  ಪತಿ ಅವಿಜಿತ್ ರಾಯ್  ಹತ್ಯೆಯಾಯಿತು.  ಈಗ ಬೋನ್ಯಾ ಅವರು ಅಮೆರಿಕದಲ್ಲೇ  ಮಗಳೊಡನೆ ನೆಲೆಸಿದ್ದು ‘ಮುಕ್ತೊಮಾನಾ’  ಬಂಗಾಳಿ ವೆಬ್‌ಸೈಟ್   ನೋಡಿಕೊಳ್ಳುತ್ತಿದ್ದಾರೆ.  ಈ ಮೊದಲು ಪತಿ ನೋಡಿಕೊಳ್ಳುತ್ತಿದ್ದ  ಈ ವೆಬ್ ಸೈಟ್ ವಿಚಾರವಾದ ಹಾಗೂ ಮುಕ್ತ ಚೆಂತನೆಗಳಿಗೆ ಅಭಿವ್ಯಕ್ತಿ ನೀಡುತ್ತಿದೆ.

ಈ ದುರಂತ ಘಟನೆಯ  ನಂತರ  ಅಮೆರಿದಲ್ಲಿದ್ದ  ಬೊನ್ಯಾ ಅವರನ್ನು ಸಂಪರ್ಕಿಸಿ  ಅವರ ಮನ ಒಲಿಸಿ ಈ ಸಾಕ್ಷ್ಯಚಿತ್ರಕ್ಕಾಗಿ   ಸಂದರ್ಶನ ಪಡೆದುಕೊಳ್ಳಲಾಯಿತು.  ಎಫ್‌ಬಿಐ  ಕಣ್ಗಾವಲಿನ  ಅವರ ಭದ್ರತೆ ವ್ಯವಸ್ಥೆಗೆ ಚ್ಯುತಿ ಬಾರದಂತೆ  ಚಿತ್ರೀಕರಣದ ವೇಳೆ ಸೂಚನೆಗಳನ್ನು ಪಾಲಿಸಬೇಕಾದುದೂ ಅಗತ್ಯವಾಗಿತ್ತು ಎನ್ನುತ್ತಾರೆ ನೂಪುರ್.

ಬಿಬಿಸಿಯ ಮುಖ್ಯ ಅಂತರರಾಷ್ಟ್ರೀಯ ವರದಿಗಾರ್ತಿ ಲೈಸ್ ಡೌಸೆಟ್, ಅಫ್ಗಾನಿಸ್ತಾನದ ಖ್ಯಾತ ಪತ್ರಕರ್ತೆ  ನಜೀಬಾ ಅಯುಬಿ ಹಾಗೂ ಭಾರತದಿಂದ ಪನಾಮಾ ಪೇಪರ್ಸ್ ತನಿಖೆಗೆ ಕೆಲಸ ಮಾಡಿದ ರಿತು ಸಾರಿನ್ ಮತ್ತು  ಅಮೆರಿಕದ ಇಂಟರ್ ನ್ಯಾಷನಲ್ ಕನ್ಷಾರ್ಷಿಯಮ್ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸಂ ( ಐಸಿಐಜೆ)  ಉಪ ನಿರ್ದೇಶಕಿ ಮರೀನಾ ವಾಕರ್ ಅವರನ್ನು ನೂಪುರ್ ಬಸು ವೈಯಕ್ತಿಕವಾಗಿ ಸಂದರ್ಶನ ಮಾಡಿದ್ದಾರೆ. ಇದು ಜಾಗತಿಕ ದೃಷ್ಟಿಕೋನ ಹಾಗೂ ಸ್ಪರ್ಶವನ್ನು ಚಿತ್ರಕ್ಕೆ ನೀಡಿದೆ.

(ಝೈನಾ ಎರ್ಹಾಯಮ್‌)

‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ನ್ಯೂಸ್ ಮತ್ತು ಇನ್‍ವೆಸ್ಟಿಗೇಷನ್ಸ್ ಸಂಪಾದಕಿ ರಿತು ಸಾರಿನ್ ಅವರು  ಭಾರತದಲ್ಲಿ ‘ಪನಾಮಾ ಪೇಪರ್ಸ್ ’ ತನಿಖೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಮಾಹಿತಿಗಳು, ಅಂಕಿಅಂಶಗಳನ್ನು ಭಾರಿ ಪ್ರಮಾಣದಲ್ಲಿ ಕಲೆ ಹಾಕಬೇಕಾದ ಇಂತಹ ದೊಡ್ಡ ಜವಾಬ್ದಾರಿಯ  ಹುದ್ದೆಯ ಹೊಣೆಗಾರಿಕೆಯನ್ನು ಸಾಮಾನ್ಯವಾಗಿ  ಪುರುಷ ಪತ್ರಕರ್ತನಿಗೆ ನೀಡುವುದು ಮಾಮೂಲು. ಆದರೆ ಇತರ ಇಬ್ಬರು ಪುರುಷ ಸಹೋದ್ಯೋಗಿಗಳೊಂದಿಗೆ ನಾಯಕತ್ವದ ಹೊಣೆ ಹೊತ್ತುಕೊಳ್ಳುವಲ್ಲಿ ತಮಗೇನೂ ಸಮಸ್ಯೆ ಇರಲಿಲ್ಲ ಎಂದು  ರಿತು ಹೇಳುತ್ತಾರೆ.

ಸಿರಿವಂತರು ಹಾಗೂ ಪ್ರಭಾವಿಗಳು ಹೊರ ದೇಶಗಳಲ್ಲಿ ಹೊಂದಿರುವ ಅಕ್ರಮ ಸಂಪತ್ತಿನ  ರಹಸ್ಯಗಳನ್ನು  ಪನಾಮಾ ಪೇಪರ್ಸ್ ತನಿಖೆ ಬಯಲು ಮಾಡಿತು.  ಭ್ರಷ್ಟ ರಾಜಕಾರಣಿಗಳು ಹಾಗೂ ಶಿಕ್ಷೆಗೊಳಗಾದ ಅಪರಾಧಿಗಳ ಅಕ್ರಮ ಸಂಪತ್ತನ್ನು ಬಯಲಿಗೆಳೆದ  ಈ ಅತಿ ದೊಡ್ಡ ಡಿಜಿಟಲ್ ಡೇಟಾ  ವಿಶ್ಲೇಷಣೆಯಲ್ಲಿ ಸುಮಾರು 80 ರಾಷ್ಟ್ರಗಳ  300 ಪತ್ರಕರ್ತರು ಪಾಲ್ಗೊಂಡಿದ್ದರು. ಈ ಪೈಕಿ ಮೂರನೇ ಒಂದರಷ್ಟು ಮಂದಿ ಮಹಿಳೆಯರಿದ್ದರು  ಎಂಬುದು ದೊಡ್ಡದು. ಒಂದು ದಶಕದ ಹಿಂದೆ ಇಂತಹ ಸನ್ನಿವೇಶ ಸಾಧ್ಯವಿರುತ್ತಿರಲಿಲ್ಲ.

ಐಸಿಐಜೆ  ಉಪ ನಿರ್ದೇಶಕಿ ಮರೀನಾ ವಾಕರ್ ಮಾತುಗಳಿವು: ‘19 ವರ್ಷಗಳ ಹಿಂದೆ ಐಸಿಐಜೆ ಆರಂಭಿಸಿದಾಗ,  ಇದು ಪೂರ್ಣವಾಗಿ ಪುರುಷ ಪ್ರಧಾನವಾಗಿತ್ತು…… ನಂತರದ ವರ್ಷಗಳಲ್ಲಿ ವಿಶ್ವದಾದ್ಯಂತ  ಈ ಚಿತ್ರಣ ನಾಟಕೀಯ ರೀತಿಯಲ್ಲಿ ಬದಲಾಗಿದೆ.  ವಿಶ್ವದಾದ್ಯಂತ ಹೆಚ್ಚು ಹೆಚ್ಚು ಮಹಿಳೆಯರು ತನಿಖಾ ತಂಡಗಳ ನಾಯಕತ್ವ ವಹಿಸುತ್ತಿದ್ದಾರೆ. ಆದರೆ  ಪನಾಮಾ ಪೇಪರ್ಸ್ ಗಾಗಿ ಕೆಲಸ ಮಾಡಿದ ಅನೇಕ ಮಹಿಳೆಯರು ತೀವ್ರ ದಮನಕಾರಿ  ಸಮಾಜಗಳಲ್ಲಿ ಬದುಕುತ್ತಿದ್ದಾರೆ. ತಮ್ಮ ರಾಷ್ಟ್ರ ನಾಯಕರ ವಿದೇಶಗಳಲ್ಲಿರುವ ಸಂಪತ್ತಿ ನ ಬಗ್ಗೆ ವರದಿ ಮಾಡಿದ್ದಕ್ಕಾಗಿ ತಿಂಗಳುಗಟ್ಟಲೆ ಜೈಲುಗಳಲ್ಲಿ  ಕಳೆಯಬೇಕಾಗಿ ಬಂದಿದೆ. ಭ್ರಷ್ಟಾಚಾರ, ಬಡತನ, ಮಾಫಿಯಾ, ರಾಜಕಾರಣ ಹಾಗೂ ಪರಿಸರ ನಾಶ ಕುರಿತ  ಸ್ಟೋರಿಗಳ ಬೆನ್ನು ಬೀಳುವ ಪತ್ರಕರ್ತೆಯರ ಮೇಲಿನ ಆಕ್ರಮಣಗಳೂ ತೀವ್ರವಾಗುತ್ತಿವೆ.’

ಧ್ರುವೀಕರಣಗೊಂಡಿರುವ ಸಮಾಜದಲ್ಲಿ ಪತ್ರಕರ್ತೆಯರ ದಿನನಿತ್ಯದ ಹೋರಾಟ ಎದ್ದು ಕಾಣಿಸುವಂತಹದ್ದು. ಸುದ್ದಿಮನೆಗಳಲ್ಲಿ ಹಾಗೂ  ಹೊರ ಪ್ರಪಂಚದಲ್ಲಿ  ಲಿಂಗತ್ವ ತಾರತಮ್ಯಗಳನ್ನು ಮಹಿಳೆಯರು ದಿನನಿತ್ಯ ಎಂಬಂತೆ ಎದುರುಗೊಳ್ಳುತ್ತಿರುತ್ತಾರೆ. ಅದರಲ್ಲೂ ಸಂಘರ್ಷ ವಲಯಗಳಲ್ಲಿ ವರದಿಗಾರಿಕೆ ಮಾಡುವುದೆಂದರೆ ಇನ್ನೂ ಅಪಾಯಕಾರಿ. ಅಫ್ಗಾನಿಸ್ತಾನ, ಬ್ರೆಜಿಲ್, ಪಾಕಿಸ್ತಾನ, ಸಿರಿಯಾದಂತಹ ರಾಷ್ಟ್ರಗಳಲ್ಲಿ  ಅನೇಕ  ವರದಿಗಾರ್ತಿಯರು ಇದಕ್ಕಾಗಿ ಜೀವ  ಕಳೆದುಕೊಂಡಿದ್ದಾರೆ.

2015ರ ಸೆಪ್ಟೆಂಬರ್‌ನಲ್ಲಿ ಸಿರಿಯಾದ ರಖಾದಲ್ಲಿ  ಸಿರಿಯಾದ ಸ್ವತಂತ್ರ ಪತ್ರಕರ್ತೆ ಹಾಗೂ ಬ್ಲಾಗರ್  ರುಖಿಯಾ ಹಸನ್  ಅವರ ಹತ್ಯೆಯಾಗಿದ್ದು ಜಗತ್ತನ್ನು ತಲ್ಲಣಗೊಳಿಸಿತ್ತು.  ಐಎಸ್ ಉಗ್ರರಿಂದ ಹತ್ಯೆಯಾದ  ಮೊದಲ  ಮಹಿಳಾ ವರದಿಗಾರ್ತಿ ಇವರು.  ಬಹಿರಂಗವಾಗಿ ಐಎಸ್ ಉಗ್ರ ಸಿದ್ಧಾಂತಗಳ ಟೀಕಾಕಾರರಾಗಿದ್ದರು ರುಖಿಯಾ.  ಪ್ರಭುತ್ವ  ಅಥವಾ ಐಎಸ್‌ನಂತಹ ಪ್ರಭುತ್ವದ ಹೊರಗಿನ ಉಗ್ರ ಸಿದ್ಧಾಂತಗಳ ಶಕ್ತಿಗಳ  ಆಕ್ರಮಣಗಳಿಗೆ ಮಹಿಳೆಯರೂ ಗುರಿಯಾಗುತ್ತಿರುವುದಕ್ಕೆ ಇದು ದ್ಯೋತಕ. ‘ಸಂಘರ್ಷಗಳ ವಲಯದಲ್ಲಿ ಎಲ್ಲಾ ಪತ್ರಕರ್ತರೂ ಲಿಂಗಭೇದವಿಲ್ಲದೆ ಅಪಾಯ ಎದುರಿಸುತ್ತಾರೆ ಎಂಬುದು ನಿಜ. ಆದರೆ ಮಹಿಳೆಗೆ ಈ ಅಪಾಯ ಇನ್ನೂ ಹೆಚ್ಚು. ಅತ್ಯಾಚಾರದ ಬೆದರಿಕೆ ಇದಕ್ಕೆ ಕಾರಣ’ ಎನ್ನುತ್ತಾರೆ ನೂಪುರ್ ಬಸು.

ವಿಭಿನ್ನ ಜಾತಿ, ಜನಾಂಗ ಹಾಗೂ ವರ್ಗಗಳಿರುವ ಸಮಾಜದಲ್ಲಿ ಎಲ್ಲಾ ಪತ್ರಕರ್ತೆಯರನ್ನು ಒಂದೇ ತಕ್ಕಡಿಯಲ್ಲಿ ನೋಡಲಾಗುವುದಿಲ್ಲ ಎಂಬ ಪ್ರಜ್ಞೆಯೂ ಈ ಚಿತ್ರದಲ್ಲಿ ಬಿಂಬಿತವಾಗಿದೆ.

ಜಾತಿ ಹಾಗೂ ಜನಾಂಗ ಸಹ ಈ ಮಹಿಳೆಯರು ಎದುರಿಸುವ ಕಷ್ಟವನ್ನು ಎಷ್ಟು ಹೆಚ್ಚು ಮಾಡುತ್ತದೆ ಎಂಬುದನ್ನು  ಈ ಚಿತ್ರ ಎತ್ತಿ ತೋರಿಸುತ್ತದೆ. ಕ್ಯಾಮೆರೂನ್  ರೇಡಿಯೊ ಪತ್ರಕರ್ತೆ ಮೌಸಾ ಮರಾಂಡಾಟಾ  ತನ್ನ ದೇಶದಲ್ಲಿ ಪುರುಷರಿಂದ  ಪದೇ ಪದೇ ಎದುರಿಸಬೇಕಾದ ಸವಾಲು ಹಾಗೂ ಅವಮಾನಗಳ ಬಗ್ಗೆ ಹೇಳುತ್ತಾರೆ.

‘ಮಹಿಳಾ ನವೋದಯ’ ಎಂಬ ತೆಲುಗು  ಪತ್ರಿಕೆಗೆ ವರದಿ ಮಾಡುವ ಭಾರತಿ ಎಂಡಪಲ್ಲಿ  ತಮ್ಮ ಸಮುದಾ ಎದುರಿಸುವ ತಾರತಮ್ಯ ಕುರಿತು ಹೇಳುತ್ತಾರೆ.  ನವೋದಯ ತೆಲುಗು ಪತ್ರಿಕೆಯನ್ನು ದಲಿತ ಮಹಿಳೆಯರೇ  ಹೊರ ತರುತ್ತಿದ್ದಾರೆ ಎಂಬುದು ವಿಶೇಷ.

(ಮಾಲಿನಿ ಸಬ್ರಮಣಿಯಮ್‌)

‘ಮೇಲ್ಜಾತಿ ಜನರ ಮನೆಗಳಿಗೆ ಹೋದಾಗ ನಮ್ಮನ್ನು ಹೊರಗೆ ನಿಲ್ಲುವಂತೆ ಮಾಡಲಾಗುತ್ತದೆ. ನಾವು ಪತ್ರಕರ್ತೆಯರಾಗಿದ್ದು ಅವರನ್ನು ಸಂದರ್ಶನ ಮಾಡಲು ಹೋಗಿದ್ದರೂ ಈ ಸಮಸ್ಯೆ ಎದುರಿಸಬೇಕು’ ಎನ್ನುತ್ತಾರೆ ಮಹಿಳಾ ನವೋದಯ ಪತ್ರಿಕೆಯ ಸಂಸ್ಥಾಪಕಿ. ಅಲ್ಪ ಪ್ರಮಾಣದ ಬಂಡವಾಳದೊಂದಿಗೆ ಆರಂಭವಾದ  ಈ ಪತ್ರಿಕೆ ಈಗ 40,000 ಪ್ರತಿಗಳ ಪ್ರಸರಣ ಹೊಂದಿದೆ. ಓದುಗರ ಸಂಖ್ಯೆ 200000.

ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ವಿಮೆನ್ ಇನ್ ರೇಡಿಯೊ ಅಂಡ್ ಟೆಲಿವಿಷನ್ (ಐ ಎ ಡಬ್ಲ್ಯುಆರ್‌ಟಿ) ನಿರ್ಮಿಸಿದ  ಸಹಭಾಗಿತ್ವದ ಸಾಕ್ಷ್ಯಚಿತ್ರ  ಇದು. ಈ ಚಿತ್ರದ ಶೀರ್ಷಿಕೆ  ‘ವೆಲ್ವೆಟ್ ರೆವಲ್ಯೂಷನ್ ’ಧ್ವನಿಪೂರ್ಣವಾದ ರೂಪಕ,  ‘ಮೆಲುದನಿಯಲ್ಲಿ  ಗಟ್ಟಿಯಾದ, ಆಳವಾದ   ಪರಿಣಾಮ ಬೀರುವಂತಹದ್ದು   ಎಂದರ್ಥ ’ ಎಂದು ನೂಪುರ್ ಬಸು ವ್ಯಾಖ್ಯಾನಿಸುತ್ತಾರೆ. ‘ವಿಶ್ವದಾದ್ಯಂತ ಪತ್ರಕರ್ತೆಯರ ಸದ್ಯದ ಕ್ಷಣಗಳನ್ನು ಹಾಗೂ  ಅವರು ಎದುರಿಸುತ್ತಿರುವ ಸವಾಲುಗಳನ್ನು  ಹಿಡಿದಿಡಬೇಕೆಂದು ನನ್ನ ಅಪೇಕ್ಷೆಯಾಗಿತ್ತು’ ಎನ್ನುತ್ತಾರೆ ಅವರು.   ಮುದ್ರಣ, ರೇಡಿಯೊ ಟೆಲಿವಿಷನ್ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ತೊಡಗಿಕೊಂಡಿರುವ ಪತ್ರಕರ್ತೆಯರ  ಜೀವನಕಥೆಗಳಿವು. 2014ರ ನಂತರ  ಐ ಎ ಡಬ್ಲ್ಯು ಆರ್ ಟಿ ನಿರ್ಮಿಸುತ್ತಿರುವ ಮೂರನೇ ಸುದೀರ್ಘ ಅವಧಿಯ ಸಾಕ್ಷ್ಯ ಚಿತ್ರ ಇದು. ಈ ಹಿಂದಿನ ಎರಡು ಸಾಕ್ಷ್ಯಚಿತ್ರಗಳು  ಮಹಿಳೆ ಹಾಗೂ ಹವಾಮಾನ ಬದಲಾವಣೆ ಮತ್ತು ಪ್ರಜನನ ಹಕ್ಕುಗಳಿಗೆ ಸಂಬಂಧಿಸಿದ್ದಾಗಿತ್ತು.

‘ವೆಲ್ವೆಟ್’  ರೆವಲ್ಯೂಷನ್’ ಚಿತ್ರ ತಯಾರಿಕೆಯ ಹೊಣೆ ಹೆಗಲೇರಿದಾಗ  ಸುದ್ದಿಮನೆಗಳಲ್ಲಿ ಹೆಣ್ಣು ಮಕ್ಕಳ ಪ್ರವೇಶ ತಡೆಯುವ ಸಂಪಾದಕರ ಕಥಾನಕಗಳಾಚೆಗಿನ ಕಥಾನಕಗಳನ್ನು ಬಿಂಬಿಸುವುದು ನೂಪುರ್ ಬಸು ಉದ್ದೇಶವಾಗಿತ್ತು. ಬಹುಶಃ ಇಂತಹ ಕಥಾನಕ 20 ವರ್ಷಗಳ ಹಿಂದೆ ಸರಿಹೊಂದುತ್ತಿತ್ತು. ಆದರೆ ಈಗ ಮಹಿಳೆಯೆರು ಈ ಕ್ಷೇತ್ರದಲ್ಲಿದ್ದು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂಬುದು ಮುಖ್ಯ ಎನ್ನುತ್ತಾರೆ.

2015ರಲ್ಲಿ ‘ಪತ್ರಿಕೋದ್ಯಮದಲ್ಲಿ ಡಿಜಿಟಲ್ ಸಮೀಕ್ಷೆಯೊಂದನ್ನು ನಿರ್ಮಿಸುವತ್ತ ...’ ಎಂಬ  ಸಮೀಕ್ಷಾ ವರದಿಯನ್ನು  ಯುನೆಸ್ಕೊ ಪ್ರಕಟಿಸಿತ್ತು. ಆನ್‌ ಲೈನ್‌ನಲ್ಲಿ  ನಕಾರಾತ್ಮಕ ಹಾಗೂ ಬೆದರಿಕೆ ಹಾಕುವಂತಹ ಪ್ರತಿಕ್ರಿಯೆಗಳನ್ನು  ಪುರುಷ ಸಹೋದ್ಯೋಗಿಗಳಿಗೆ ಹೋಲಿಸಿದರೆ ಪತ್ರಕರ್ತೆಯರು ಹೆಚ್ಚು ಎದುರಿಸುತ್ತಾರೆ.  ಏಕೆಂದರೆ ಅವರು ವೃತ್ತಿಪರರಾಗಿ ಹಾಗೂ ಮಹಿಳೆಯರಾಗಿ  ಎರಡು ಬಗೆಯಲ್ಲಿ  ದಾಳಿಗೆ ಒಳಗಾಗುತ್ತಾರೆ ಎಂದು ಈ ವರದಿ ಹೇಳಿತ್ತು.

ಸಂಘರ್ಷ್, ಲಿಂಗತ್ವ ಹಾಗೂ ಮಾಧ್ಯಮ ಎಂಬುದು ಅಪಾಯಕಾರಿ ಮಿಶ್ರಣವಾಗಿದ್ದು  ಅನೇಕ ಪತ್ರಕರ್ತೆಯರ ಜೀವಕ್ಕೇ ಎರವಾಗುತ್ತಿದೆ ಎಂಬುದು ದುರದೃಷ್ಟಕರ.   ಇಂತಹ ಸಂದರ್ಭದಲ್ಲಿ ಗೌರಿ ಲಂಕೇಶ್‌ರ ಹತ್ಯೆಯಂತಹ ಅಮಾನವೀಯ ಪ್ರಕರಣಗಳ ವಿರುದ್ಧ ನಾಗರಿಕ ಸಮಾಜದ ಬೆಂಬಲ  ಹೆಚ್ಚಾಗಬೇಕು.

**

(ರಫೀದಾ ಬೊನ್ಯಾ ಅಹಮದ್‌)

ಇನ್ನೂ ಮೀರಲಾಗದ ಗಡಿರೇಖೆಗಳು

‘ನೀನಲ್ಲಿಗೆ ಹೋಗಬಾರದು. ಏಕೆಂದರೆ ನೀನು ಮಹಿಳೆ ಎಂದು ಬಿ.ಬಿ.ಸಿ ನನಗೆ ಹೇಳಿದ್ದು ನೆನಪಿಲ್ಲ. ಆದರೆ ಕ್ರಮೇಣ ಅಮೆರಿಕನ್ ಟೆಲಿವಿಷನ್ ವಾಹಿನಿಗಳಲ್ಲಿ , ಕಳುಹಿಸುವುದಾದರೆ ಪುರುಷರನ್ನು ಕಳಿಸುತ್ತೇವೆ ಎನ್ನುವಂತಹ ಮಾತುಗಳು ಕೇಳಿಬರುತ್ತಿವೆ ’ ಎನ್ನುತ್ತಾರೆ ಬಿ.ಬಿ.ಸಿ ಪತ್ರಕರ್ತೆ ಲೈಸ್ ಡೌಸೆಟ್.

* ‘ಮಾಧ್ಯಮ ಸಂಸ್ಥೆಗಳಲ್ಲಿ ಎತ್ತರಕ್ಕೆ ತಲುಪಿದವರ ಹಿಂದೆ ಹೋರಾಟದ ಕಥೆ ಇರುತ್ತದೆ. ಹೀಗಿದ್ದೂ ಪ್ರಧಾನ ಸಂಪಾದಕರ ಹುದ್ದೆಯನ್ನು ಮಹಿಳೆಯರಿಗೆ ನೀಡುವುದು ಕಡಿಮೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ ’ ಎನ್ನುತ್ತಾರೆ ಹಿರಿಯ ಪತ್ರಕರ್ತೆ ರಿತು ಸಾರಿನ್.

* ‘ಅಫ್ಗನಿಸ್ತಾನದಲ್ಲಿ ಮಹಿಳಾ ಪತ್ರಕರ್ತರಾಗಬೇಕಾದರೆ ಮೊದಲು ಮನೆಯಿಂದ ಹೋರಾಡಲು ಪ್ರಾರಂಭಿಸಬೇಕು’ ಎನ್ನುತ್ತಾರೆ ಆಫ್ಘನ್ ಪತ್ರಕರ್ತೆ ನಜೀಬಾ ಅಯುಬಿ.

* ತಪಾಸಣಾ ಕೇಂದ್ರವೊಂದರಲ್ಲಿ ‘ನೀವು ವಿದೇಶಿ ಪತ್ರಕರ್ತೆ’ ಎಂದ ಸಿಬ್ಬಂದಿಗೆ ‘ಇಲ್ಲ ನಾನು ಸಿರಿಯಾದವಳು’ ಎಂದು ಸಿರಿಯನ್ ಉಪಭಾಷೆಯಲ್ಲೇ ಉತ್ತರಿಸಿದರೂ ಆತನಿಗೆ ಒಪ್ಪಲಾಗುತ್ತಿಲ್ಲ. ‘ನೀವು ವಿದೇಶಿ ಮಹಿಳೆಯೇ ಹೌದು. ಏಕಕಾಲದಲ್ಲಿ ಸಿರಿಯನ್, ಪತ್ರಕರ್ತೆ ಹಾಗೂ ಮಹಿಳೆಯಾಗಿ ಇರುವುದು ಖಂಡಿತಾ ಸಾಧ್ಯವಿಲ್ಲ.’ ಎಂಬ ಉತ್ತರ ಸಿಕ್ಕಿದ್ದು ಸಿರಿಯಾ ಪತ್ರಕರ್ತೆ ಝೈನಾ ಎರ್ಹಾಯಮ್‌ಗೆ.

Read More

Comments
ಮುಖಪುಟ

ಆಣೆ ಮಾಡಲು ಸಿದ್ದರಾಮಯ್ಯ ದೇವೇಗೌಡರನ್ನು ದತ್ತು ತೆಗೆದುಕೊಂಡಿದ್ದಾರೆಯೇ?: ಕುಮಾರಸ್ವಾಮಿ

ನನಗೆ ನಾಟಕವಾಡಲು ಬರುವುದಿಲ್ಲ ನಾನು ಭಾವಜೀವಿ. ರೈತರು ಮಾಡಿದ ಸಾಲನ್ನು ಮನ್ನಾ ಮಾಡಲು ನಾನು ಬದ್ಧವಾಗಿದ್ದೇನೆ. ಆರೂವರೆ ಕೋಟಿ ಕನ್ನಡಿಗರ ತೆರಿಗೆ ಹಣದಿಂದ ನಾನು ರೈತರ ಸಾಲ ಮನ್ನಾ ಮಾಡುವೆ ಎಂದು ಹೇಳಿದ ಎಚ್‍ಡಿ ಕುಮಾರಸ್ವಾಮಿ.

ಮೋದಿ ಸಲಹೆ ಮೇರೆಗೆ ಪಳನಿಸ್ವಾಮಿ ಜತೆ ಕೈಜೋಡಿಸಿದೆ: ಪನ್ನೀರಸೆಲ್ವಂ

‘ಪಕ್ಷದ ಉಳಿವಿಗಾಗಿ ನೀವು(ಪನ್ನೀರಸೆಲ್ವಂ) ಒಂದಾಗಬೇಕು ಎಂದು ಅವರು(ನರೇಂದ್ರ ಮೋದಿ) ನನಗೆ ಸಲಹೆ ನೀಡಿದ್ದರು’ ಎಂದಿದ್ದಾರೆ. ಆದರೆ ತಾವು ಮೋದಿ ಅವರೊಂದಿಗೆ ಯಾವಾಗ ಮಾತುಕತೆ ನಡೆಸಿದ್ದರು ಎಂಬುದನ್ನು ತಿಳಿಸಿಲ್ಲ.

ಕಾಲೇಜ್ ಬಸ್ಸಿನಲ್ಲಿ ವಿದ್ಯಾರ್ಥಿನಿ ಎದುರು ಹಸ್ತಮೈಥುನ: ಆರೋಪಿಯನ್ನು ಹುಡುಕಿ ಕೊಟ್ಟವರಿಗೆ ₹25 ಸಾವಿರ ಬಹುಮಾನ

ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಅಥವಾ ಹಿಡಿದು ಕೊಟ್ಟಲ್ಲಿ ಅವರಿಗೆ 25 ಸಾವಿರ ಬಹುಮಾನ ನೀಡಲಾಗುವುದು. ಅಲ್ಲದೇ ಮಾಹಿತಿ ನೀಡಿದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿ ಇಡಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಮುಂದೆ ವಿಶೇಷ ರೈಲು, ಬೋಗಿಗಳನ್ನು ಆನ್‍ಲೈನ್ ಮೂಲಕ ಕಾಯ್ದಿರಿಸಬಹುದು!

ವಿವಾಹ, ತೀರ್ಥಯಾತ್ರೆ ಮೊದಲಾದ ಅಗತ್ಯಗಳಿಗಾಗಿ ರೈಲಿನಲ್ಲಿ ಬೋಗಿ ಕಾಯ್ದಿರಿಸುವುದಾದರೆ ಇನ್ನು ಮುಂದೆ ಆನ್‍ಲೈನ್‍ನಲ್ಲಿ ಈ ಕಾರ್ಯವನ್ನು ಮಾಡಬಹುದು.

ಸಂಗತ

ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟು–ಪರಿಹಾರ

ಭಾರತಕ್ಕೆ ಉಳಿದಿರುವ ದಾರಿಯೆಂದರೆ, ವಿಶ್ವಸಂಸ್ಥೆ ಮತ್ತು ಅಮೆರಿಕದ ಜೊತೆಗೂಡಿ ರಾಜತಾಂತ್ರಿಕ ಮಾರ್ಗದ ಮೂಲಕ ಮಾಲ್ಡೀವ್ಸ್‌ ಬಿಕ್ಕಟ್ಟನ್ನು ಪರಿಹರಿಸಲು ಶ್ರಮಿಸುವುದು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

ಭ್ರಮಾಧೀನ ಮನಸ್ಥಿತಿಯಲ್ಲಿ ಬದುಕುತ್ತಿರುವ ಸಮುದಾಯವನ್ನು ಎಚ್ಚರಿಸಿ ಮುನ್ನಡೆಸಬೇಕಾದ ಜವಾಬ್ದಾರಿ ಸಮಾಜಕ್ಕಿದೆಯಲ್ಲವೇ?

ನಿರುದ್ಯೋಗ ವ್ಯಕ್ತಿಗತ ಸಮಸ್ಯೆಯೇ?

ಸ್ಪರ್ಧಾತ್ಮಕ ಜಗತ್ತಿನಲ್ಲಿ ಅರ್ಹತೆಯುಳ್ಳವರಷ್ಟೇ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂಬ ನಿಲುವು ತಳೆಯುವುದು ಆಷಾಡಭೂತಿತನವಾಗುತ್ತದೆ

ಜಾತಿ ಮತ್ತು ಹಿಂಸಾಚಾರದ ಸಮೀಕರಣ

ಒಂದು ವರ್ಗದ ನೀಚ ಕೃತ್ಯಗಳಿಗೆ ಮತ್ತೊಂದು ವರ್ಗವನ್ನು ಹೊಣೆಯಾಗಿಸುವ ಕೆಸರೆರಚಾಟ ಮುಂದುವರಿಯುತ್ತಿರುವವರೆಗೂ ಅಲ್ಲಿ ಅಸಹಿಷ್ಣುತೆ, ಹಿಂಸೆ ತಡೆಯುವುದು ಕಷ್ಟ.

ಮುಕ್ತಛಂದ

ಅಪ್ಪನ ನೆನಪುಗಳು

ಅಡಿಗರ ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಸಾಧನೆಯನ್ನು ಅವರ ನಿಕಟವರ್ತಿಗಳು ಹಾಗೂ ವಿಮರ್ಶಕರು ಸಾಕಷ್ಟು ದಾಖಲಿಸಿದ್ದಾರೆ. ಕೌಟುಂಬಿಕ ವ್ಯಕ್ತಿಯಾಗಿ ಅಡಿಗರು ಹೇಗಿದ್ದರು? ಅವರ ಪುತ್ರ ಪ್ರದ್ಯುಮ್ನ ಗೋಪಾಲಕೃಷ್ಣ ಅಡಿಗ ಅವರ ನೆನಪುಗಳು ಇಲ್ಲಿವೆ.

ಸ್ವಾಭಿಮಾನ ಮತ್ತು ಸಮಗ್ರ ಕಾವ್ಯ!

‘ಪ್ರಾರ್ಥನೆ’ ಕವಿತೆಯ ವಿವಾದದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಪತ್ರಕ್ಕೆ ಅಡಿಗರು ಬರೆದ ಜವಾಬು ಕವಿಗೆ ಇರಬೇಕಾದ ಸ್ವಾಭಿಮಾನವನ್ನು ಸೂಚಿಸುವಂತಿದೆ. ಸ್ವಾಭಿಮಾನ ಎನ್ನುವುದು ಸೋವಿಯಾಗಿರುವ ಇಂದಿನ ಸಂದರ್ಭದಲ್ಲಿ ಅಡಿಗರ ನಿಲುವು ಹೆಚ್ಚು ಮಹತ್ವದ್ದಾಗಿ ಕಾಣುತ್ತದೆ.

ಕನ್ನಡ ಸಾಹಿತ್ಯಲೋಕದ ವಿಷಕಂಠ

ಎಲಿಯಟ್‌ ಕೂಡ ಒಂದು ಕವನದಲ್ಲಿ ಇಷ್ಟೆಲ್ಲ ಹೇಳಲಿಲ್ಲವಲ್ಲ! ಇದು ಅಡಿಗರ ‘ಭೂಮಿಗೀತ’, ‘ಭೂತ’ ಕವಿತೆಗಳಿಗೆ ಅಮೆರಿಕದ ಕವಿಯೊಬ್ಬರ ಉದ್ಗಾರ. ಆದರೆ, ಅತ್ಯುತ್ತಮ ಕಾವ್ಯ ರಚಿಸಿಯೂ ನಿರಂತರವಾಗಿ ಟೀಕೆಗೆ, ಪ್ರತಿರೋಧಕ್ಕೆ, ಖಂಡನೆಗೆ ಗುರಿಯಾದ ಅಡಿಗರಂಥ ಕವಿ ಇನ್ನೊಬ್ಬರಿಲ್ಲ.

‘ಚಂಡೆ ಮದ್ದಳೆ’ ಕವಿಯ ನಿರಂತರ ‘ವೇಸ್ಟ್ ಲ್ಯಾಂಡ್’

ಎಲಿಯಟ್ ಇಂಗ್ಲಿಷ್‌ನಲ್ಲಿ ಮಾಡಿದುದನ್ನು ಅಡಿಗರು ಕನ್ನಡದಲ್ಲಿ ಮಾಡಿದರು. ತಟಸ್ಥವಾಗಿದ್ದ ಸಾಹಿತ್ಯದಲ್ಲಿ ವಿದ್ಯುತ್ ಸಂಚಲನ ಉಂಟು ಮಾಡಿದರು. ಅಡಿಗರ ನಂತರ ಕನ್ನಡ ಕಾವ್ಯ ಮೊದಲಿನ ಹಾಗೆ ಇರಲಿಲ್ಲ. ಇದುವರೆಗೆ ಕನ್ನಡದಲ್ಲಿ ಇಲ್ಲದ್ದನ್ನು ಅವರು ಸೃಷ್ಟಿಸಿದರು. ಅವರನ್ನು ವಿರೋಧಿಸಿದವರು ಕೂಡ ಅವರ ನುಡಿಗಟ್ಟನ್ನು ಸ್ಪರ್ಶಿಸಿಯೇ ಹಾಗೆ ಮಾಡಬೇಕಾಯಿತು. ಇದಕ್ಕಿಂತಲೂ ಹೆಚ್ಚಿನ ಕೊಡುಗೆಯೊಂದಿದೆಯೇ?