ಚೆಸ್‌ ಲೋಕದ ‘ತೇಜ’ಸ್ಸು

  • ಪತ್ನಿ ಜಯಶ್ರೀ ಮತ್ತು ಪುತ್ರನ ಜತೆ ತೇಜ್‌ಕುಮಾರ್‌

11 Sep, 2017
ಮಹಮ್ಮದ್‌ ನೂಮಾನ್‌

ವಿಶ್ವನಾಥನ್‌ ಆನಂದ್‌ 1988ರಲ್ಲಿ ಭಾರತದ ಮೊದಲ ಗ್ರ್ಯಾಂಡ್‌ಮಾಸ್ಟರ್‌ (ಜಿ.ಎಂ) ಪಟ್ಟ ಪಡೆದುಕೊಂಡಿದ್ದರು. ಅಂದಿನಿಂದ ಇದುವರೆಗೆ ದೇಶದಲ್ಲಿ 49 ಚೆಸ್‌ ಸ್ಪರ್ಧಿಗಳು ಈ ಪಟ್ಟ ಅಲಂಕರಿಸಿದ್ದಾರೆ. ಆದರೆ ಕರ್ನಾಟಕದ ಯಾರೂ ಇದುವರೆಗೆ ಜಿ.ಎಂ ಗೌರವ ಪಡೆದಿರಲಿಲ್ಲ.

ಸುಮಾರು ಮೂರು ದಶಕಗಳ ಕೊರತೆ ಕೊನೆಗೂ ನೀಗಿದೆ. ಮೈಸೂರಿನ ತೇಜ್‌ಕುಮಾರ್‌ ಜಿ.ಎಂ ಪಟ್ಟ ಪಡೆದ ರಾಜ್ಯದ ಮೊದಲ ಮತ್ತು ದೇಶದ 50ನೇ ಸ್ಪರ್ಧಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಅವರ ಕಿರೀಟಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ. ಈ ಸಾಧನೆಯ ಹಿಂದೆ ಅಪಾರ ಶ್ರಮ ಅಡಗಿದೆ.

ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಪಡೆಯಲು 2500 ಇಎಲ್‌ಒ ಪಾಯಿಂಟ್‌ಗಳು ಅಗತ್ಯವಿದೆ. ಅದರ ಜತೆಗೆ ಮೂರು ಜಿ.ಎಂ ನಾರ್ಮ್ಸ್‌ಗಳೂ ಬೇಕು. ಈ ಮೂರು ನಾರ್ಮ್ಸ್‌ಗಳನ್ನು ತೇಜ್‌ಕುಮಾರ್‌ 2008 ರಲ್ಲೇ ಪಡೆದುಕೊಂಡಿದ್ದರು. 2013 ರಲ್ಲಿ ಹೆಚ್ಚುವರಿಯಾಗಿ ಮತ್ತೊಂದು ನಾರ್ಮ್ಸ್‌ ಕೂಡಾ ದೊರೆತಿತ್ತು.

ಆದರೆ 2500 ಇಎಲ್‌ಒ ಪಾಯಿಂಟ್‌ ಗಳಿಕೆ ಗಗನಕುಸುಮವಾಗಿಯೇ ಉಳಿದುಕೊಂಡಿತ್ತು. ಗೋವಾದಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ರ‍್ಯಾಪಿಡ್‌ ಚೆಸ್‌ ಟೂರ್ನಿಯಲ್ಲಿ ತಮಗೆ ಅಗತ್ಯವಿರುವ ಪಾಯಿಂಟ್‌ ಗಿಟ್ಟಿಸಿಕೊಂಡು ಜಿ.ಎಂ ಎನಿಸಿಕೊಂಡಿದ್ದಾರೆ.

‘ಜಿ.ಎಂ ಪಟ್ಟ ಏಕೆ ಇಷ್ಟು ತಡವಾಯಿತು ಎಂಬುದಕ್ಕೆ ಸ್ಪಷ್ಟ ಕಾರಣ ಹೇಳಲು ಸಾಧ್ಯವಿಲ್ಲ’ ಎಂದು ತೇಜ್‌ಕುಮಾರ್‌ ನಗು ಬೀರುತ್ತಾರೆ. ‘2,400 ರೇಟಿಂಗ್‌ ಪಾಯಿಂಟ್‌ ಬೇಗನೇ ಲಭಿಸಿತ್ತು. ಕೊನೆಯ ನೂರು ಪಾಯಿಂಟ್‌ ಗಳಿಸಲು ಹಲವು ವರ್ಷಗಳೇ ಬೇಕಾದವು. ಈ ಅವಧಿಯಲ್ಲಿ ಹಲವು ಸಲ ಮನಸ್ಸು ಚಂಚಲವಾಗಿತ್ತು. ಕೆಲವೊಂದು ಟೂರ್ನಿಗಳಲ್ಲಿ ಸೋಲು ಎದುರಾದಾಗ ಹತಾಶೆ ಕಾಡುತಿತ್ತು. ಜಿ.ಎಂ ಪಟ್ಟ ದೊರೆತ ಕಾರಣ ನಿರಾಳನಾಗಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಚೆಸ್‌ ಮೇಲಿನ ಪ್ರೀತಿ ರಕ್ತಗತವಾಗಿ ಬಂದಿದೆ. 12ರ ಹರೆಯದಲ್ಲಿ ಚೆಸ್‌ಅನ್ನು ಗಂಭೀರವಾಗಿ ತೆಗೆದುಕೊಂಡೆ. ಮನೆಯಲ್ಲಿ ಅಣ್ಣ ಮತ್ತು ಅಕ್ಕ ಇಬ್ಬರೂ ಚೆಸ್‌ ಆಡುತ್ತಿದ್ದರು. ಅವರು ಸ್ಥಳೀಯ ಮತ್ತು ಜಿಲ್ಲಾಮಟ್ಟದ ಟೂರ್ನಿಗಳಲ್ಲಿ ಸ್ಪರ್ಧಿಸುತ್ತಿದ್ದರು. ನಾನೂ ಅವರ ಜತೆ ಟೂರ್ನಿಗೆ ತೆರಳುತ್ತಿದ್ದೆ’ ಎಂದು ಆರಂಭ ಕಾಲದ ನೆನಪುಗಳನ್ನು ಬಿಚ್ಚಿಟ್ಟರು.

‘2003 ರಲ್ಲಿ 25 ವರ್ಷ ವಯಸ್ಸಿನೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದು ವೃತ್ತಿಜೀವನದ ತಿರುವು ಎಂದೇ ಹೇಳಬಹುದು. ಆ ಸಾಧನೆ ನನ್ನಲ್ಲಿ ಹೊಸ ಉತ್ಸಾಹ ತುಂಬಿತು. ಇಎಲ್‌ಒ ರೇಟಿಂಗ್‌ ಹೆಚ್ಚಿಸಿಕೊಳ್ಳಲು ಹೆಚ್ಚೆಚ್ಚು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳಬೇಕಿತ್ತು. ಅದರೆ ಮಧ್ಯಮವರ್ಗದ ಕುಟುಂಬದಿಂದ ಬಂದಿರುವ ನನಗೆ ದೊಡ್ಡ ಮೊತ್ತ ಖರ್ಚು ಮಾಡಿ ವಿದೇಶಕ್ಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಇದೂ ಕೂಡಾ ಜಿ.ಎಂ ಪಟ್ಟ ತಡವಾಗಲು ಕಾರಣ’ ಎನ್ನುವರು.

ರೇಟಿಂಗ್‌ ಹೆಚ್ಚಿಸಲು ಯಾವುದೇ ಪ್ರಯತ್ನವೂ ಫಲಿಸದೇ ಇದ್ದಾಗ ವಿದೇಶದ ಕೋಚ್‌ನಿಂದ ತರಬೇತಿ ಪಡೆಯುವ ನಿರ್ಧಾರವನ್ನೂ ತೇಜ್‌ಕುಮಾರ್‌ ಕೈಗೊಂಡಿದ್ದರು. ಆದರೆ ವಿದೇಶಿ ಕೋಚ್‌ಗಳು ದುಬಾರಿ ಶುಲ್ಕ ಕೇಳುವ ಕಾರಣ ದೀರ್ಘ ಅವಧಿಯವರೆಗೆ ಕೋಚಿಂಗ್‌ ಪಡೆಯಲು ಸಾಧ್ಯವಾಗಲಿಲ್ಲ. ಉಕ್ರೇನ್‌ನ ಅಲೆಕ್ಸಾಂಡರ್‌ ಗೊಲೊಶೊಪೊವ್‌ ಅವರಿಂದ ಸುಮಾರು ಆರು ತಿಂಗಳು ಆನ್‌ಲೈನ್‌ ಮೂಲಕ ತರಬೇತಿ ಪಡೆದಿದ್ದಾರೆ.

‘ಚೆಸ್‌ಗೆ ಸೂಕ್ತ ಪ್ರೋತ್ಸಾಹ ದೊರೆಯುತ್ತಿಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚಿನ ಮಕ್ಕಳು ಈ ಕ್ರೀಡೆಯತ್ತ ಆಕರ್ಷಿತರಾಗುತ್ತಿರುವುದು ಸಂತಸದ ವಿಷಯ. ನನ್ನ ಈ ಸಾಧನೆ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಲಿ’ ಎಂಬುದು ಈ ಸಾಧಕನ ಮನದಾಳದ ಮಾತು.

ಕುಟುಂಬದ ಬೆಂಬಲ ಅಪಾರ: ಮೈಸೂರಿನ ವಿದ್ಯಾರಣ್ಯಪುರದಲ್ಲಿ ನೆಲೆಸಿರುವ ಕೆ.ಆರ್‌.ಶಿವರಾಮೇ ಗೌಡ ಮತ್ತು ತಾಯಿ ಲಕ್ಷ್ಮಮ್ಮ ಅವರ ಮಗನಾಗಿರುವ ತೇಜ್‌ಕುಮಾರ್‌ ಎಂಕಾಂ ಪದವಿ ಪಡೆದಿದ್ದು, ಪ್ರಸ್ತುತ ನೈರುತ್ಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದಾರೆ.

2010 ರಲ್ಲಿ ಜಯಶ್ರೀ ಅವರನ್ನು ಮದುವೆಯಾಗಿದ್ದು, ಐದು ತಿಂಗಳ ಮಗ ಇದ್ದಾನೆ. ಹೆತ್ತವರ, ಪತ್ನಿಯ ಮತ್ತು ಪ್ರಾಯೋಜಕರ ನಿರಂತರ ಬೆಂಬಲವನ್ನು ಮರೆಯಲು ಸಾಧ್ಯವಿಲ್ಲ ಎಂದು ತೇಜ್‌ಕುಮಾರ್‌ ಹೇಳುತ್ತಾರೆ.

‘ಪತಿಯ ಸಾಧನೆಯಿಂದ ಸಂತಸವಾಗಿದೆ. ಅವರು ಕಠಿಣ ಪರಿಶ್ರಮದಿಂದ ಈ ಎತ್ತರಕ್ಕೇರಿದ್ದಾರೆ. ಈ ಹಾದಿಯಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ’ ಎಂದು ಜಯಶ್ರೀ ಹೇಳುವರು. ಏನೇ ಆಗಲಿ, ತೇಜ್‌ಕುಮಾರ್‌ ಅವರ ಸಾಧನೆ ರಾಜ್ಯದ ಚೆಸ್‌ ಕ್ರೀಡೆಯಲ್ಲಿ ಹೊಸ ಸಂಚಲನ ಮೂಡಿಸಿರುವುದರಲ್ಲಿ ಅನುಮಾನವಿಲ್ಲ.

*

ನನ್ನ ಮಗ ಛಲಗಾರ. ಹಿನ್ನಡೆ ಅನುಭವಿಸಿದಾಗ ಕುಗ್ಗದೆ ಗಟ್ಟಿಮನಸ್ಸು ಮಾಡಿಕೊಂಡು ಮುಂದಡಿ ಇಟ್ಟಿದ್ದಾನೆ. ಅದರ ಫಲ ಈಗ ದೊರೆತಿದೆ. ಆತನದ್ದು ಹೋರಾಟದ ಬದುಕು. ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದಾನೆ. ಆರ್ಥಿಕ ಮುಗ್ಗಟ್ಟು ಎದುರಾದಾಗ ಅದನ್ನು ಹೇಳಿಕೊಳ್ಳುತ್ತಿರಲಿಲ್ಲ. ಫ್ರಾನ್ಸ್‌ನಲ್ಲಿ ನಡೆದ ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಸಂದರ್ಭದಲ್ಲಿ ವಾರಗಳ ಕಾಲ ಕೇವಲ ಬ್ರೆಡ್‌ ಮತ್ತು ಕಾಫಿ ಕುಡಿದು ಹೊಟ್ಟೆ ತುಂಬಿಸಿಕೊಂಡಿದ್ದ.
–ಕೆ.ಆರ್‌.ಶಿವರಾಮೇ ಗೌಡ,
ತೇಜಕುಮಾರ್ ಅವರ ತಂದೆ

Read More

Comments
ಮುಖಪುಟ

ಕನ್ನಡ ಪಾಠ ಮಾಡಲು ಅವಕಾಶ ಕೊಡುತ್ತಿಲ್ಲವೆಂದು ಶಿಕ್ಷಕನ ಪ್ರತಿಭಟನೆ

ಕನ್ನಡ ಶಿಕ್ಷಕ ನಮ್ಮ ಶಾಲೆಗೆ ಬೇಕಿಲ್ಲ ಎಂದು ಎಸ್‌ಡಿಎಂಸಿಯವರು ಹೇಳುತ್ತಾರೆ. ಶಾಲೆಗೆ ಹೋದರೆ ಹಲವು ರೀತಿಯಲ್ಲಿ ತೊಂದರೆ ಕೊಡುತ್ತಿದ್ದಾರೆ. ಇದನ್ನು ಬಿಇಒ ಸೇರಿದಂತೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಕನ್ನಡ ಶಿಕ್ಷಕ ವಿ‌‌.ಜಿ. ಬಾಳೇಕುಂದ್ರಿ ದೂರಿದರು.

ಯೋಗೀಶ್‌ ಗೌಡ ಹತ್ಯೆ ಪ್ರಕರಣ: ಕಾಂಗ್ರೆಸ್‌–ಬಿಜೆಪಿ ಕಾರ್ಯಕರ್ತರ ಮುಖಾಮುಖಿ

ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಸಚಿವ ವಿನಯ ಕುಲಕರ್ಣಿ ಕೈವಾಡವಿದ್ದು, ಸತ್ಯ ಹೊರಬರಬೇಕಾದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.

ಧರ್ಮದ ಹೆಸರಿನಲ್ಲಿ ಉಪಟಳ ನೀಡುವವರನ್ನು ಹತ್ತಿಕ್ಕಬೇಕು: ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಧರ್ಮದ ಹೆಸರಿನಲ್ಲಿ ಸಮಾಜಕ್ಕೆ ಉಪಟಳ ನೀಡುತ್ತಿರುವವರನ್ನು ಹತ್ತಿಕ್ಕಬೇಕು. ಇಲ್ಲವಾದರೆ ಹಿಂದೂ ಧರ್ಮಕ್ಕೆ ಅಪಾಯವಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಎಚ್ಚರಿಸಿದರು.

ದೇಶ ರಾಮರಾಜ್ಯ ಆಗಬೇಕು: ತೋಗಾಡಿಯಾ

ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸತ್‌ ಸಮ್ಮೇಳನದಲ್ಲಿ ಮಾತನಾಡಿದ ಅವರು, ಹಿಂದೂ ದೇವಾಲಯಗಳ ಆಡಳಿತವನ್ನು ಸರ್ಕಾರಗಳು ನಿರ್ವಹಿಸುವುದು ಸಂವಿಧಾನ ವಿರೋಧಿಯಾಗಿದ್ದು, ಜಾತ್ಯಾತೀತ ಸಂವಿಧಾನಕ್ಕೆ ಮಾಡುವ ಅಪಚಾರ ಎಂದರು.

ಸಂಗತ

ತೂಕತಪ್ಪಿದ ಮಾತುಗಳಿಗೆ ಬೇಕು ಕಡಿವಾಣ

ಪರಸ್ಪರರ ನಿಂದನೆಗೆ ಕೀಳು ಅಭಿರುಚಿಯ ಮಾತುಗಳನ್ನಾಡುವ ರಾಜಕೀಯ ನಾಯಕರ ಸಂಸ್ಕೃತಿ ಪ್ರಶ್ನಾರ್ಹ

ಇವರದು ಸೇವೆಯಲ್ಲ, ಉದ್ಯೋಗವಷ್ಟೇ

‘ಹೋಟೆಲ್‌ನವರು ರೇಟ್ ನಿರ್ಧರಿಸಬಹುದು, ಲಾಜ್‌ನವರು ನಿರ್ಧರಿಸಬಹುದು, ನಾವೇಕೆ ನಮ್ಮ ದರಗಳನ್ನು ನಿರ್ಧರಿಸುವಂತಿಲ್ಲ’ ಎಂದು ಪ್ರಶ್ನಿಸುತ್ತ ಅವರು ತಮ್ಮ ಸ್ಥಾನವನ್ನು ಉಳಿದೆಲ್ಲ ಉದ್ದಿಮೆಗಳ ಮಟ್ಟಕ್ಕೆ ತಂದಿಟ್ಟುಬಿಟ್ಟಿದ್ದಾರೆ. ಜನರ ದಯನೀಯ ಸ್ಥಿತಿ ಬಳಸಿಕೊಂಡು ಲಾಭ ಮಾಡಿಕೊಳ್ಳುವವರು ಸೇವಾ ನಿರತರೇ?

ಹಗಲು ಕವಿದ ಅಮಾವಾಸ್ಯೆ ಕತ್ತಲು

ಅಲ್ಲದೇ ಟಿ.ವಿ. ವಾಹಿನಿಗಳ ಮೇಲೆ ನಿಬಂಧನೆಯನ್ನು ಹೇರುವ ‘ಕೇಬಲ್‌ ಟೆಲಿವಿಷನ್ ನೆಟ್‌ವರ್ಕ್ (ರೆಗ್ಯುಲೇಷನ್) ಆ್ಯಕ್ಟ್, 1995’ ಹಲವು ನಿಬಂಧನೆಗಳೊಂದಿಗೆ ‘ಅರೆಸತ್ಯವಾದ, ಅತೀಂದ್ರಿಯ ನಂಬಿಕೆ ಅಥವಾ ಕುರುಡು ನಂಬಿಕೆಗಳನ್ನು ಪ್ರೋತ್ಸಾಹಿಸುವಂಥ’ ಕಾರ್ಯಕ್ರಮಗಳನ್ನು ಬಿತ್ತರಿಸಲು ನಿಷೇಧವಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

‘ಜ್ಞಾನ’ಚಾಲಿತ ವಸಾಹತೀಕರಣದ ಹೊಸ ಆವೃತ್ತಿ

ನಮಗೆ ಹೊಸ ಜ್ಞಾನ ಬೇಕು. ಆದರೆ ಅದು ಅಸಹಜ ಕಸರತ್ತುಗಳ ಮೂಲಕ ಕನ್ನಡದ ಕನ್ನಡಿಯಲ್ಲಿ ಮೂಡಬಲ್ಲ ಪ್ರತಿಬಿಂಬವಾಗಿ ಅಲ್ಲ.

ಚಂದನವನ

‘ಅತಿರಥ’ನಾಗಿ ಚೇತನ್

‘ಅತಿರಥ’ ಚಿತ್ರದಲ್ಲಿ ಅವರದ್ದು ಟಿ.ವಿ. ಪತ್ರಕರ್ತನ ಪಾತ್ರ. ಮಹೇಶ್‌ ಬಾಬು ನಿರ್ದೇಶನದ ಈ ಚಿತ್ರ ಇಂದು(ನ. 24) ತೆರೆಕಾಣುತ್ತಿದೆ. ಈ ಕುರಿತು ಚೇತನ್‌ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

ಚಿನ್ನದ ಹುಡುಗಿಯ ‘ಬೆಳ್ಳಿ’ ಮಾತು

ಝೀ ವಾಹಿನಿಯ ‘ಯಾರೇ ನೀ ಮೋಹಿನಿ’ ಧಾರಾವಾಹಿಯಲ್ಲಿ ಮುಗ್ಧ ಹಳ್ಳಿಹುಡುಗಿ ‘ಬೆಳ್ಳಿ’ ಪಾತ್ರಕ್ಕೆ ಜೀವ ತುಂಬಿರುವವರು ನಟಿ ಸುಷ್ಮಾ ಶೇಖರ್‌.

ನಾನು ಗಂಡುಬೀರಿ ‘ಗಂಗಾ’

ವೈಯಕ್ತಿಕ ಬದುಕು ಹಾಗೂ ನಟನಾ ಬದುಕು ವಿರುದ್ಧವಾಗಿದ್ದರೂ ಪಾತ್ರಕ್ಕೆ ನ್ಯಾಯ ಒದಗಿಸುತ್ತಿರುವ ದೊಡ್ಡ ಗಂಗಾಳ ಮಾತೃಭಾಷೆ ತೆಲುಗು. ಆದರೂ, ಧಾರಾವಾಹಿಯಲ್ಲಿ ಹವ್ಯಕ ಕನ್ನಡದಲ್ಲಿ ಮಾತನಾಡಲು ಶುರುವಿಟ್ಟರೆ ಸಾಕು ಎಲ್ಲರೂ ಮೂಗಿನ ಮೇಲೆ ಕೈ ಇಡುವುದು ಖಂಡಿತ. ಇವರು ಹುಟ್ಟಿ ಬೆಳೆದದ್ದು ಬೆಂಗಳೂರು.

‘ಕನಕ’ ಚಿತ್ರದ ಹಾಡುಗಳ ಬಿಡುಗಡೆ

ಅದು ‘ಕನಕ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಚಿತ್ರರಂಗದ ಹಲವು ಗಣ್ಯರು ಅಲ್ಲಿ ನೆರೆದಿದ್ದರು. ಚಿತ್ರದ ನಿರ್ದೇಶಕ ಆರ್. ಚಂದ್ರು ಅವರ ಮೊಗದಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ ಖುಷಿ ಇತ್ತು. ಚಿತ್ರದ ಹಾಡುಗಳನ್ನು ಕೇಳಿದ ಗಣ್ಯರು ಸಂತಸ ಹಂಚಿಕೊಂಡರು.