ಮಳೆ ಅನಾಹುತ ಮನುಷ್ಯ ನಿರ್ಮಿತ ಯೋಜನೆಗಳು ಸಮರ್ಪಕವಾಗಿರಲಿ

12 Sep, 2017
ಪ್ರಜಾವಾಣಿ ವಾರ್ತೆ

ಒಂದು ಸಣ್ಣ ಮಳೆ ಬಂದರೂ ಸಾಕು, ಬೆಂಗಳೂರು ಎಂಬ ಮಹಾನಗರ ನಡುಗಿ ಬಿಡುತ್ತದೆ. ಏಕೆಂದರೆ, ಕಂಡಕಂಡಲ್ಲೆಲ್ಲ ಮಳೆ ನೀರು ನುಗ್ಗುತ್ತದೆ. ತಗ್ಗು ಪ್ರದೇಶಗಳನ್ನು ಮುಳುಗಿಸಿ ಬಿಡುತ್ತದೆ. ಗುಡಿಸಲು, ಕೊಳೆಗೇರಿಗಳಷ್ಟೇ ಅಲ್ಲ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಿರುವ ಪ್ರದೇಶಗಳೂ ಕೆರೆಗಳಾಗುತ್ತವೆ. ಇದಕ್ಕೆಲ್ಲ ಕಾರಣ, ನೆಲಕ್ಕೆ ಬಿದ್ದ ನೀರು ಇಂಗಲು ಅಥವಾ ಸರಾಗವಾಗಿ ಹರಿದು ಹೋಗಲು ಸಮರ್ಪಕ ವ್ಯವಸ್ಥೆಯೇ ಇಲ್ಲ. ರಾಜಕಾಲುವೆಗಳೆಲ್ಲ ಒತ್ತುವರಿಯಾಗಿವೆ. ಮೋರಿಗಳು, ಕಿರು ಕಾಲುವೆಗಳನ್ನು ತೊಟ್ಟಿಗಳೆಂದು ಭಾವಿಸಿ ಕಸ ಎಸೆಯುವ ಜಾಗ ಮಾಡಿಕೊಂಡಿದ್ದೇವೆ. ಕೆರೆಗಳನ್ನು ಮುಚ್ಚಿ ಬೇರೆ ಬೇರೆ ಉದ್ದೇಶಗಳಿಗೆ ಬಳಸುತ್ತಿದ್ದೇವೆ. ಜಲ ಸಂಗ್ರಹವಾಗಲು ಅವಕಾಶವನ್ನೇ ಕೊಟ್ಟಿಲ್ಲ. ಹೀಗಿರುವಾಗ, ಮಳೆ ನೀರು ರಸ್ತೆ ಮೇಲೆ ಹರಿಯದೇ ಇನ್ನೇನಾದೀತು? ಸಣ್ಣ ಮಳೆಯನ್ನೇ ತಡೆದುಕೊಳ್ಳದ ಈ ನಗರವನ್ನು ಇನ್ನು ದೊಡ್ಡ ಮಳೆ ಮುಳುಗಿಸದೇ ಬಿಡುತ್ತದಾ?

ಈಚಿನ ಒಂದೆರಡು ವಾರಗಳಿಂದ ನಗರದಲ್ಲಿ ನಿತ್ಯ ಎಂಬಂತೆ ಮಳೆ ಸುರಿಯುತ್ತಿದೆ. ಪದೇಪದೇ ಪ್ರವಾಹ ಸೃಷ್ಟಿಯಾಗುತ್ತಿದೆ. ಭಾನುವಾರ ಮೈಸೂರು ರಸ್ತೆಯ ಕಾಲೇಜೊಂದರ ಬಳಿ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಿದ್ದ ಬಸ್‌ನ ಪ್ರಯಾಣಿಕರನ್ನು ಪಾರು ಮಾಡಲು ದೋಣಿಗಳನ್ನು ಬಳಸಬೇಕಾಯಿತು ಎನ್ನುವುದು ಪರಿಸ್ಥಿತಿ ಎಷ್ಟು ಗಂಭೀರ ಎನ್ನುವುದಕ್ಕೊಂದು ನಿದರ್ಶನ. ಇಡೀ ನಗರವನ್ನೇ ಕಾಂಕ್ರೀಟ್‌ ಕಾಡಾಗಿ ಪರಿವರ್ತಿಸಿದ್ದರ ಪರಿಣಾಮ ಇದು. ಭಾರತೀಯ ವಿಜ್ಞಾನ ಮಂದಿರದ ಸಂಶೋಧಕರ ವರದಿಯ ಪ್ರಕಾರ ಬೆಂಗಳೂರಿನ ಭೂಪ್ರದೇಶದ ಶೇ 78ರಷ್ಟು ಭಾಗ ಕಾಂಕ್ರೀಟೀಕರಣವಾಗಿದೆ. ಅಂದರೆ ಕಟ್ಟಡಗಳು, ಸಿಮೆಂಟ್‌ ಮೇಲ್ಮೈ, ಟಾರ್‌ ರಸ್ತೆ, ಫುಟ್‌ಪಾತ್‌ಗಳು ಮಣ್ಣಿನ ನೆಲವನ್ನು ಮುಚ್ಚಿಬಿಟ್ಟಿವೆ. ನೀರು ಇಂಗಲು ಜಾಗವೇ ಕಡಿಮೆಯಾಗಿದೆ. ಇವೆಲ್ಲ ನಾವೇ ಸೃಷ್ಟಿಸಿಕೊಂಡಂತಹ ಅವಾಂತರ. ರಾಕ್ಷಸನಂತೆ ಬೆಂಗಳೂರು ಅಡ್ಡಾದಿಡ್ಡಿಯಾಗಿ ಬೆಳೆಯುವುದಕ್ಕಿಂತಲೂ ಮೊದಲು ಇಲ್ಲಿನ ನೀರನ್ನೆಲ್ಲ ವೃಷಭಾವತಿ ನದಿ ತನ್ನ ಒಡಲಲ್ಲಿ ಇಟ್ಟುಕೊಂಡು ಸಾಗಿಸುತ್ತಿತ್ತು. ನಗರದಲ್ಲಿ ಹರಿದುಹೋಗುವ ಆ ಏಕೈಕ ನದಿಯ ದಂಡೆಯುದ್ದಕ್ಕೂ ಅತಿಕ್ರಮಣ ಮಾಡಿ ಕಾಲುವೆ ರೂಪಕ್ಕೆ ಕುಗ್ಗಿಸಿ ದೊಡ್ಡ ಪ್ರಮಾಣದಲ್ಲಿ ನೀರು ಹೊರಹೋಗದಂತೆ ಅಡೆತಡೆ ಉಂಟುಮಾಡಿದ್ದೇವೆ. ಅದರ ಕಹಿ ಫಲವನ್ನು ಈಗ ಉಣ್ಣಬೇಕಾಗಿದೆ.

‘ಓಡುವ ನೀರನ್ನು ತೆವಳುವಂತೆ ಮಾಡಿ; ತೆವಳುವ ನೀರನ್ನು ನಿಲ್ಲುವಂತೆ ಮಾಡಿ; ನಿಂತ ನೀರನ್ನು ಇಂಗುವಂತೆ ಮಾಡಿ’. ನಮ್ಮ ಹಿರಿಯರು, ಜಲತಜ್ಞರು ಹೇಳುತ್ತ ಬಂದ ಈ ಹಿತವಚನವನ್ನು ಮರೆತಿದ್ದೇವೆ. ಅದಕ್ಕೆ ಬದಲಾಗಿ, ‘ಇಂಗಬೇಕಾದ ನೀರನ್ನು ನಿಲ್ಲುವಂತೆ, ನಿಲ್ಲಬೇಕಾದ ನೀರನ್ನು ಓಡುವಂತೆ ಮಾಡಿದ್ದೇವೆ’. ಹೀಗೆ ಓಡುವ ನೀರಿಗೆ ದಾರಿಯೇ ಇಲ್ಲ. ಅದರಿಂದಾಗಿ ನಗರದ ತಗ್ಗುಪ್ರದೇಶಗಳಿಗೆ ಸಹಜವಾಗಿಯೇ ಈ ನೀರು ನುಗ್ಗುತ್ತದೆ.

ಗಮನಿಸಬೇಕಾದ ಒಂದು ಸಂಗತಿ ಎಂದರೆ ಬೆಂಗಳೂರಿನಲ್ಲಿ ಮಳೆ ಅನಾಹುತ ಹಳೆಯ ಬಡಾವಣೆಗಳಿಗಿಂತ ಹೊಸ ಬಡಾವಣೆಗಳಲ್ಲಿಯೇ ಹೆಚ್ಚು. ಕೋರಮಂಗಲ, ಎಚ್‌ಎಸ್‌ಆರ್‌ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಪದೇ ಪದೇ ನೀರು ತುಂಬಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಮಳೆಗಾಲದಲ್ಲಿ ಮಳೆ ಬರುವುದು ಸಹಜ. ಅದು ಪ್ರಕೃತಿ ನಿಯಮ. ಮಳೆ ಯಾವಾಗ, ಎಷ್ಟು ಸುರಿಯಬಹುದು ಎಂಬುದನ್ನು ಅಂದಾಜು ಮಾಡುವಷ್ಟು ಈಗ ವಿಜ್ಞಾನ ಮುಂದುವರಿದಿದೆ. ಆದರೂ ಮಳೆ ವಿಕೋಪ ಎದುರಿಸಲು ನಮಗೆ ಕಷ್ಟವಾಗುತ್ತಿದೆ. ಇದು ಸ್ವಯಂಕೃತ ಅಪರಾಧ, ನಾವೇ ಸೃಷ್ಟಿಸಿಕೊಂಡ ಸಮಸ್ಯೆ. ನಗರಗಳು ಬೆಳೆಯುವುದು ಜೀವಂತಿಕೆಯ ಲಕ್ಷಣವೇನೋ ನಿಜ. ಆ ಬೆಳವಣಿಗೆ ವ್ಯವಸ್ಥಿತವಾಗಿ, ಯೋಜನಾಬದ್ಧವಾಗಿ ಇರಬೇಕು. ಆದರೆ ಭ್ರಷ್ಟಗೊಂಡಿರುವ ಆಡಳಿತಶಾಹಿ, ದುರಾಸೆ ನಮ್ಮ ನಗರಗಳ ಯೋಜಿತ ಬೆಳವಣಿಗೆಯನ್ನು ಬುಡಮೇಲು ಮಾಡುತ್ತಿವೆ. ಆದ್ದರಿಂದ ಇಷ್ಟು ದಿನ ಹಾಳು ಮಾಡಿದ್ದು ಸಾಕು. ಇನ್ನಾದರೂ ಮಳೆ ನೀರಿನ ಇಂಗುವಿಕೆ, ಸರಾಗ ಹರಿಯುವಿಕೆಗೆ ಕಾಯಂ ವ್ಯವಸ್ಥೆ ಮಾಡಬೇಕು. ಕೆರೆ, ಕಾಲುವೆ ಒತ್ತುವರಿಯನ್ನು ಮುಲಾಜಿಲ್ಲದೆ ತೆರವು ಗೊಳಿಸಬೇಕು. ಕಾಲುವೆಗಳ ಹೂಳೆತ್ತುವ ಕೆಲಸವನ್ನು ಬೇಸಿಗೆಯಲ್ಲಿಯೇ ಮುಗಿಸಬೇಕು. ಬೆಂಗಳೂರಿನಂತಹ ನಗರದಲ್ಲಿ ಸುರಿಯುವ ಮಳೆ ಬದುಕನ್ನೇ ಏರುಪೇರು ಮಾಡದಂತೆ ತಡೆಯುವುದು ನಮ್ಮ ಕೈಯಲ್ಲೇ ಇದೆ.

Read More

Comments
ಮುಖಪುಟ

ಉಕ್ರೇನ್ ರಾಯಭಾರಿ ಕೆಂಪುಕೋಟೆ ಬಳಿ ಫೋಟೊ ಕ್ಲಿಕ್ಕಿಸುತ್ತಿದ್ದಾಗ ಫೋನ್ ಕಿತ್ತು ಪರಾರಿ

ಪೊಲೀಖಾ ಅವರು ಬೆಳಗ್ಗೆ 9.15ರ ಹೊತ್ತಿಗೆ ದೆಹಲಿಯ ಕೆಂಪುಕೋಟೆ ಬಳಿ ಫೋಟೊ ತೆಗೆದುಕೊಳ್ಳುತ್ತಿದ್ದ ವೇಳೆ ಆಗಂತುಕನೊಬ್ಬ ಫೋನ್ ಕಿತ್ತು ಪರಾರಿಯಾಗಿದ್ದಾನೆ.

ಪ್ರಾಚೀನ ಭಾರತದಲ್ಲಿ ದುರ್ಗೆ ರಕ್ಷಣಾ ಸಚಿವೆ, ಲಕ್ಷ್ಮಿ ಹಣಕಾಸು ಮಂತ್ರಿ: ವೆಂಕಯ್ಯನಾಯ್ಡು

ವಿದ್ಯಾರ್ಥಿಗಳು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು. ರಾಮರಾಜ್ಯ ಎನ್ನುವುದು ಇಂದಿಗೂ ನಮ್ಮ ಇತಿಹಾಸದ ಶ್ರೇಷ್ಠ ಕಾಲಘಟ್ಟವಾಗಿದೆ. ಅದಕ್ಕೆ ಕಾರಣ ಆ ಆಡಳಿತ ವ್ಯವಸ್ಥೆಯಲ್ಲಿದ್ದ ಆದರ್ಶಗಳು. ಆದರೆ ಇತ್ತೀಚಿನ ದಿನಗಳು ಅದನ್ನು ಕೋಮು ಭಾವ ದೃಷ್ಟಿಯಲ್ಲಿ ನೋಡಲಾಗುತ್ತಿದೆ.

ಆರ್‍ಎಸ್ಎಸ್ ಭಾರತವನ್ನು ಹಿಂದೂ, ಹಿಂದಿ, ಹಿಂದೂಸ್ತಾನವನ್ನಾಗಿಸಲು ಯತ್ನಿಸುತ್ತಿದೆ

ಆರ್‍ಎಸ್ಎಸ್ ರಾಜ್ಯ ಸರ್ಕಾರಗಳನ್ನು ದುರ್ಬಲವಾಗಿಸಲು ಯತ್ನಿಸುತ್ತಿವೆ. ಇದಕ್ಕಾಗಿ ಅವರು ಒಕ್ಕೂಟವಾದವನ್ನು ಒಡೆದು ಹಿಂದಿ, ಹಿಂದೂ, ಹಿಂದೂಸ್ತಾನವನ್ನಾಗಿಸುವ ಉದ್ದೇಶವನ್ನು ಹೇರುತ್ತಿದ್ದಾರೆ. ಬಿಜೆಪಿಯೂ ಇದೇ ರೀತಿ ಮಾಡುತ್ತಿದ್ದು ಅವರ ಈ ಯತ್ನವನ್ನು ವಿಫಲಗೊಳಿಸಬೇಕಿದೆ

‘ಗುಮ್ನಾಮಿ ಬಾಬಾ ಅವರೇ ನೇತಾಜಿ ಎಂದು ಹೆಚ್ಚು ಜನ ನಂಬಿದ್ದರು’

‘ಆಯೋಗದ ಮುಂದೆ ಖುದ್ದಾಗಿ ಇಲ್ಲವೇ ಪತ್ರ ಮುಖೇನ ಮಾಹಿತಿ ನೀಡಿರುವ ಬಹುತೇಕರು ಗುಮ್ನಾಮಿ ಬಾಬಾ ಅವರೇ ನೇತಾಜಿ ಆಗಿದ್ದರು ಎಂದು ಹೇಳಿದ್ದಾರೆ...

ಸಂಗತ

ಆರೋಗ್ಯ ಬೇಕೇ? ಸ್ವಚ್ಛತೆ ಕಾಪಾಡಿ

ಮನುಷ್ಯ ಹಣ ಗಳಿಕೆಗಾಗಿ ಗುಣ ಹಾಗೂ ಆರೋಗ್ಯ ಎರಡನ್ನೂ ಪಣಕ್ಕಿಟ್ಟು ದುಡಿಯುತ್ತಿದ್ದಾನೆ. ಹಾಗೇ ಇವೆರಡನ್ನೂ ಕಳೆದುಕೊಳ್ಳುತ್ತಿದ್ದಾನೆ.

ವಸ್ತುನಿಷ್ಠತೆ ಮೆರೆಯೋಣ

ವ್ಯಕ್ತಿ ನಿಂದೆ ಮಾಡದೆಯೂ ಗಾಂಧಿ ಚಿಂತನೆಗಳ ಪುನರ್ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲವೇ? ನಕಾರಾತ್ಮಕ ದೃಷ್ಟಿಯ ಬರವಣಿಗೆಯಿಂದ ಯುವಕರನ್ನು ಹಾದಿ ತಪ್ಪಿಸಿದಂತಾಗುತ್ತದೆ.

ಕರ್ಮಸಿದ್ಧಾಂತ, ಕಾಯಕಸಿದ್ಧಾಂತ ಪೂರ್ಣ ಬೇರೆ

ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!

ಭರ್ಗೋ ದೇವಸ್ಯ ಧೀಮಹಿ ಎಂಬರು

ಒಬ್ಬರಿಗಾಗಿ ವಿಚಾರವಿಲ್ಲ ನೋಡಿರೇ

ಕೂಡಲಸಂಗಮದೇವಾ.

ಇಳೆಯ ನರಳಿಕೆಗೆ ಚಿಕಿತ್ಸೆ

ನಮಗಿರುವುದು ಒಂದೇ ಭೂಮಿ. ಅದನ್ನು ಸೊರಗಿಸಿದರೆ ಬಳಲುವವರು ನಾವೇ ಎನ್ನುವ ಪ್ರಜ್ಞೆ ಮೂಡುವವರೆಗೆ ನರಳಿಕೆ ತಪ್ಪಿದ್ದಲ್ಲ

ಚಂದನವನ

ಹಬ್ಬುವ ಹೆಬ್ಬಯಕೆಯ ಚಿಗುರು ಲತೆ

ಉತ್ತರ ಕನ್ನಡದ ಶಿರಸಿಯಲ್ಲಿ ಹುಟ್ಟಿ ನ್ಯೂಜಿಲೆಂಡ್‌ನಲ್ಲಿ ಬೆಳೆದು ಮತ್ತೀಗ ಚಿತ್ರರಂಗದ ಮೂಲಕ ತವರಿನಲ್ಲಿಯೇ ಬೇರೂರಿ ಬೆಳೆಯುವ ಹಂಬಲದಲ್ಲಿರುವ ಸುಂದರಿ ಲತಾ ಹೆಗಡೆ. ಮಹೇಶ್‌ ಬಾಬು ನಿರ್ದೇಶನದ ‘ಅತಿರಥ’ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿರುವ ಇವರಿಗೆ ಒಳ್ಳೆಯ ಅವಕಾಶಗಳು ಸಿಕ್ಕರೆ ಇಲ್ಲಿಯೇ ನೆಲೆಯೂರುವ ಬಯಕೆ ಇದೆ.

‘ಹೀರೊಯಿನ್‌’ ಹಾಡು ಪಾಡು

ಹಾಸ್ಯದ ರೂಪದಲ್ಲಿ ಒಂದು ಸಂದೇಶವನ್ನೂ ನೀಡಿದ್ದೇವೆ. ಬದುಕಿನಲ್ಲಿ ಬರುವ ಕಷ್ಟಗಳನ್ನು ಕಾಮಿಡಿಯ ದೃಷ್ಟಿಕೋನದಿಂದಲೇ ನೋಡುವ ಪ್ರಯತ್ನ ಇದು’ ಎಂದು ಬಾಹುಬಲಿ ವಿವರಿಸಿದರು.

ಪೊಲೀಸ್ ದಿರಿಸಿನಲ್ಲಿ ಹುಚ್ಚ ವೆಂಕಟ್

ಈ ಸಿನಿಮಾದಲ್ಲಿ ವೆಂಕಟ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಪೊಲೀಸರಿಗೆ ಜನ ಬೆಲೆ ಕೊಡುವುದು ಅವರ ಖಾಕಿ ಬಟ್ಟೆ ನೋಡಿ ಅಲ್ಲ. ಬೆಲೆ ಕೊಡುವುದು ಅವರ ಧರಿಸುವ ಪೊಲೀಸ್ ಕ್ಯಾಪ್ ನೋಡಿ’ ಎನ್ನುತ್ತ ಮಾತಿಗೆ ಇಳಿದರು ವೆಂಕಟ್.

ಮತ್ತೆ ಬರುತ್ತಿದ್ದಾನೆ ‘ಕೌರವ’

ಮುಂದಿನ ತಿಂಗಳ 13ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇದೆ. ನಾನು ಹಣ ಮಾಡುವ ಉದ್ದೇಶದಿಂದ ಈ ರಂಗಕ್ಕೆ ಬಂದವನಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದು ನರೇಶ್ ಹೇಳಿಕೊಂಡರು.