ಚಿಣ್ಣರ ಮೆಚ್ಚುಗೆ ಪಡೆದ ‘ಮಂಕಿಬಾಕ್ಸ್‌’

13 Sep, 2017
ಪ್ರಜಾವಾಣಿ ವಾರ್ತೆ

ನಗರಗಳಲ್ಲಿ ಕೆಲಸಕ್ಕೆ ಹೋಗುವ ದಂಪತಿಗಳ ಮನೆಯಲ್ಲಿ ಬೆಳಗಿನ ಹೊತ್ತು ಮಕ್ಕಳನ್ನು ಶಾಲೆಗೆ ಸಿದ್ಧಪಡಿಸುವ, ಅವರಿಗೆ ತಿಂಡಿ, ಮಧ್ಯಾಹ್ನದ ಊಟ ತಯಾರಿಸುವ ಗಡಿಬಿಡಿ ಸಾಮಾನ್ಯ. ಹಿಂದಿನ ರಾತ್ರಿಯೇ ಸಿದ್ಧತೆ ಮಾಡಿಕೊಂಡಿದ್ದರೆ ಸರಿ, ಇಲ್ಲದಿದ್ದರೆ ಎಲ್ಲವೂ ಗೋಜಲುಮಯವಾಗಿ ಗೃಹಿಣಿಯರು ಅನಿವಾರ್ಯವಾಗಿ ಜಂಕ್‌ ಫುಡ್‌ ಇಲ್ಲವೇ ಪಕ್ಕದ ಹೋಟೆಲ್‌ನಿಂದ ತಿಂಡಿ ಪೊಟ್ಟಣ ಕಟ್ಟಿಸಿಕೊಟ್ಟು ಕಳಿಸಿ ಕೊಟ್ಟು ನಿಟ್ಟುಸಿರು ಬಿಟ್ಟು ಕಚೇರಿಗೆ ದೌಡಾಯಿಸುತ್ತಾರೆ.

ಅವಸರದಲ್ಲಿ ಸಿದ್ಧಪಡಿಸಿದ್ದ ತಿಂಡಿ, ಹೋಟೆಲ್‌ನಿಂದ ಕಟ್ಟಿಸಿಕೊಟ್ಟಿದ್ದ ಅದೇ ಇಡ್ಲಿ, ಉಪ್ಪಿಟ್ಟು, ದೋಸೆ ಬಹುತೇಕ ಸಂದರ್ಭಗಳಲ್ಲಿ ಮಕ್ಕಳಿಗೆ ರುಚಿಸದೇ ಹೋಗಿರುತ್ತದೆ. ಮಕ್ಕಳು ಸಂಜೆ ಮನೆಗೆ ಬಂದಾಗಲೇ ಬೆಳಿಗ್ಗೆ ಅವರಿಗೆ ಕಟ್ಟಿಕೊಟ್ಟಿದ್ದ ತಿಂಡಿಯ ಹಣೆಯಬರಹ ಏನಾಗಿರುತ್ತದೆ ಎನ್ನುವುದು ತಿಳಿದು ಬರುತ್ತದೆ. ಅನೇಕ ಸಂದರ್ಭಗಳಲ್ಲಿ ಮಕ್ಕಳು ಅಮ್ಮನಿಂದ ಬೈಗುಳ ತಿನ್ನಲು ಆಹಾರವನ್ನು ಉಳಿಸಿಕೊಂಡೇ ಬಂದಿರುತ್ತಾರೆ. ಇದರಿಂದ ಅಮ್ಮಂದಿರ ತಲೆನೋವು ಇನ್ನಷ್ಟು ಹೆಚ್ಚುತ್ತದೆ.  ಪಾಲಕರ ಇಂತಹ ಸಂಕಷ್ಟ ದೂರ ಮಾಡುವ ಸ್ಟಾರ್ಟ್‌ಅಪ್‌ ಬೆಂಗಳೂರಿನಲ್ಲಿ ಈಗ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಶಾಲಾ ಮಕ್ಕಳ ಬೆಳಗಿನ ತಿಂಡಿ, ಮಧ್ಯಾಹ್ನ ಊಟ ಮತ್ತು ಸಂಜೆ ತಿಂಡಿಯನ್ನು ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ತಲುಪಿಸುವ ‘ಮಂಕಿಬಾಕ್ಸ್‌’ (monkeybox) ಸ್ಟಾರ್ಟ್‌ಅಪ್‌, ಪಾಲಕರ ಹೊರೆಯನ್ನು ಗಮನಾರ್ಹವಾಗಿ ತಗ್ಗಿಸಿದೆ. ಹಣ ಪಾವತಿಸಿ ಮಕ್ಕಳ ತಿಂಡಿ, ಊಟದ ಜವಾಬ್ದಾರಿಯನ್ನು ಈ ಸಂಸ್ಥೆಯ ಸುಪರ್ದಿಗೆ ಒಪ್ಪಿಸಿ ನಿಶ್ಚಿಂತೆಯಿಂದ ಇರಬಹುದು. ಮಂಕಿಬಾಕ್ಸ್ ಹೆಸರಿನ ಆ್ಯಪ್‌ ಮೂಲಕ ಈ ವಹಿವಾಟನ್ನು ಸುಲಭವಾಗಿ ನಿಯಂತ್ರಿಸಬಹುದು.

ಉದ್ಯೋಗಸ್ಥ ದಂಪತಿ ಶಾಲೆ ನಡೆಯುವ ಎಲ್ಲ ದಿನಗಳಲ್ಲೂ ‘ಮಂಕಿಬಾಕ್ಸ್‌’ ನೆಚ್ಚಿಕೊಂಡು ನೆಮ್ಮದಿಯಿಂದ ಇರಬಹುದು.   ವರ್ಷದ ಎಲ್ಲ ದಿನಗಳಲ್ಲೂ ಮಂಕಿಬಾಕ್ಸ್‌ನ ತಿಂಡಿ, ಆಹಾರ ಪೂರೈಕೆಯನ್ನೇ ನೆಚ್ಚಿಕೊಳ್ಳಲೇಬೇಕು ಎಂಬ ನಿಬಂಧನೆ ಏನೂ ಇಲ್ಲ. ಆದರೆ,  ಕನಿಷ್ಠ 5 ದಿನಗಳವರೆಗಾದರೂ  ತಿಂಡಿ, ಆಹಾರ ಪೂರೈಸಲು ಕೋರಿಕೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಒಂದು ಶೈಕ್ಷಣಿಕ ವರ್ಷಕ್ಕೆ ಬೇಡಿಕೆ ಸಲ್ಲಿಸಿದ್ದರೆ ಸೇವಾ ದರದಲ್ಲಿ ಶೇ 20ರಷ್ಟು ರಿಯಾಯ್ತಿ ನೀಡಲಾಗುತ್ತಿದೆ. ಶಾಲೆಗಳಲ್ಲಿ ನಡೆಯುವ ಬೇಸಿಗೆ ಶಿಬಿರಕ್ಕೆ ಹಾಜರಾಗುವ ಮಕ್ಕಳಿಗೂ ಈ ಸೌಲಭ್ಯ ಕಲ್ಪಿಸಲಾಗುವುದು.

ವಾರದ ಐದು ದಿನಗಳಲ್ಲಿ ಪಾಲಕರು ತಮ್ಮ ಅನುಕೂಲಕ್ಕೆ ತಕ್ಕಂತೆ  ತಿಂಡಿ, ಮಧ್ಯಾಹ್ನದ ಊಟ ಅಥವಾ ಶಾಲೆ ಬಿಡುವ ಸಂದರ್ಭದಲ್ಲಿನ ತಿಂಡಿ – ಹೀಗೆ ಮೂರು ಬಗೆಯ ಸೇವೆಗಳ ಪೈಕಿ ಯಾವುದಾದರೂ ಒಂದು ಅಥವಾ ಎರಡು ಸೌಲಭ್ಯಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲಿದೆ.

ಒಂದು ವೇಳೆ ಮಕ್ಕಳು ಅನಾರೋಗ್ಯಪೀಡಿತರಾದರೆ ಅಥವಾ ಇನ್ನೇನೋ ಕಾರಣಕ್ಕೆ ಮರುದಿನ ಶಾಲೆಗೆ ಹೋಗಲು ಸಾಧ್ಯವಿರದಿದ್ದರೆ ಅದನ್ನು ಹಿಂದಿನ ರಾತ್ರಿಯೇ ಮೊಬೈಲ್‌ ಆ್ಯಪ್‌ ಮೂಲಕವೇ ಸಂಸ್ಥೆಯ ಗಮನಕ್ಕೆ ತಂದರೆ ಆ ದಿನದ ತಿಂಡಿ ಅಥವಾ ಆಹಾರ ಪೂರೈಕೆಯನ್ನು ಇನ್ನೊಂದು ದಿನಕ್ಕೆ ಪರಿಗಣಿಸಲಾಗುವುದು. ಹೀಗಾಗಿ ಇಲ್ಲಿ ಪಾಲಕರಿಗೆ ಹಣದ ಅಪವ್ಯಯವೂ ಆಗುವುದಿಲ್ಲ.

ಎಲ್ಲ ವಯೋಮಾನದ ಮಕ್ಕಳಿಗೂ ಒಂದೇ ಬಗೆಯ ದರ ವಿಧಿಸಲಾಗುತ್ತಿದೆ. ಆದರೆ,ಮಕ್ಕಳು ಓದುವ ತರಗತಿ ಆಧರಿಸಿ ಆಹಾರ ಮತ್ತು ತಿಂಡಿ ಪ್ರಮಾಣ ವಿತರಿಸಲಾಗುತ್ತಿದೆ. ‘ಕೆಲವು ಶಾಲೆಗಳಲ್ಲಿನ ಯಶಸ್ಸು ಕಂಡು ಇತರ ಶಾಲೆಗಳೂ ಇದಕ್ಕೆ ಸಹಕಾರ ನೀಡಲು ಮುಂದೆ ಬಂದಿವೆ. ಶಾಲೆಯೊಂದು ಮಂಕಿಬಾಕ್ಸ್‌ನಿಂದ ಆಹಾರ ಪೂರೈಸುವುದಕ್ಕೆ ಅನುಮತಿ ನೀಡದಿದ್ದಾಗ, ಪಾಲಕರು ಗುಂಪಾಗಿ ತೆರಳಿ ಆಡಳಿತ ಮಂಡಳಿ ಮೇಲೆ ಒತ್ತಡ ಹೇರಿದ ನಿದರ್ಶನವೂ ಇದೆ’ ಎಂದು ಸಂಜಯ್‌ ರಾವ್‌ ಹೇಳುತ್ತಾರೆ.

‘ನಾನು ಮತ್ತು ನನ್ನ ಪತ್ನಿ ಕೆಲಸಕ್ಕೆ ಹೋಗುತ್ತಿದ್ದರಿಂದ ನಮ್ಮ ಮಕ್ಕಳಿಗೆ ತಿಂಡಿ, ಊಟ ಸಿದ್ಧಪಡಿಸಿ ಕಳಿಸುವುದು ಪ್ರಯಾಸದ ಕೆಲಸವಾಗಿತ್ತು.  ನಮ್ಮಂತೆಯೇ ಇರುವ ಅಸಂಖ್ಯ ಪಾಲಕರು ದಿನನಿತ್ಯ ಎದುರಿಸುವ ಈ ಸಮಸ್ಯೆಗೆ ಕಾರ್ಯಸಾಧ್ಯವಾದ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ಈ ಸ್ಟಾರ್ಟ್‌ಅಪ್‌ಗೆ ಕೈ ಹಾಕಲಾಗಿತ್ತು.

‘2015ರ ಅಕ್ಟೋಬರ್‌ನಲ್ಲಿ ಈ ಆಲೋಚನೆಗೆ ಚಾಲನೆ ನೀಡಲಾಗಿತ್ತು. ಸ್ಥಾಪಕರು ತಮ್ಮ ಮತ್ತು ಸ್ನೇಹಿತರ ಮಕ್ಕಳಿಗೆ ತಿಂಡಿ, ಊಟವನ್ನು ಪ್ರಾಯೋಗಿಕವಾಗಿ ಪೂರೈಸಿದ್ದರು.  ಕೆಲವೇ ದಿನಗಳಲ್ಲಿ ಅದಕ್ಕೆ ಉತ್ತೇಜಕರ ಪ್ರತಿಕ್ರಿಯೆ ಸಿಕ್ಕಿತ್ತು. ಆರಂಭದಲ್ಲಿ   4 ಶಾಲೆಗಳಲ್ಲಿನ 20 ಮಕ್ಕಳಿಗೆ ಆಹಾರ ಪೂರೈಸಲಾಗುತ್ತಿತ್ತು. ಈಗ 150 ಶಾಲೆಗಳ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ಆರಂಭಿಕ ಬಂಡವಾಳ ಹೂಡಿಕೆ ₹ 3 ಕೋಟಿ.

2016 ಜನವರಿ ತಿಂಗಳಿನಿಂದ ಮಾರ್ಚ್‌ವರೆಗೆ ಇದನ್ನು ಕೆಲ ಶಾಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿತ್ತು. 2017ರ ಶೈಕ್ಷಣಿಕ ವರ್ಷದಲ್ಲಿ ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸದ್ಯಕ್ಕೆ  2000ದಿಂದ 2,500 ಮಕ್ಕಳಿಗೆ ಪ್ರತಿ ದಿನ ತಿಂಡಿ, ಆಹಾರ ಪೂರೈಸಲಾಗುತ್ತಿದೆ.

‘ಬಿಸಿಬಿಸಿ, ರುಚಿಕರ ಮತ್ತು ವೈವಿಧ್ಯಮಯ ತಿಂಡಿ, ಊಟವು ಶಾಲಾ ಮಕ್ಕಳಲ್ಲಿ ದಿನೇ ದಿನೇ ಜನಪ್ರಿಯವಾಗುತ್ತಿದೆ. ಪ್ರತಿ ದಿನ ಬೆಳಿಗ್ಗೆ ಶಾಲಾ ಆವರಣಕ್ಕೆ ತಾಜಾ, ಪೋಷಕಾಂಶಯುಕ್ತ ಮತ್ತು ರುಚಿಕರ ತಿಂಡಿ, ಊಟ (ಲಂಚ್‌ ಬಾಕ್ಸ್‌) ಪೂರೈಸುವುದನ್ನು ಸಮರ್ಪಕವಾಗಿ ನಿಭಾಯಿಸಲಾಗುತ್ತಿದೆ. ಇದರಿಂದ ಪಾಲಕರ ಬಹುದೊಡ್ಡ ತಲೆನೋವು ದೂರ ಆಗಿದೆ. ಸಂಗೀತ ಕಲಿಕೆ, ಟ್ಯೂಷನ್‌ ಉದ್ದೇಶಕ್ಕೆ ತೆರಳುವ ಮಕ್ಕಳಿಗೆ ಸಂಜೆ ತಿಂಡಿಯ ಅಗತ್ಯವನ್ನೂ (ಬಸ್‌ ಸ್ನ್ಯಾಕ್‌) ಪೂರೈಸಲಾಗುತ್ತಿದೆ.

‘ಬೆಳೆಯುವ ಮಕ್ಕಳಿಗೆ ಆರೋಗ್ಯಕರ ಮತ್ತು ಸಮತೋಲನದಿಂದ ಕೂಡಿದ ಆಹಾರ ಪೂರೈಸುವುದು ಸವಾಲಿನ ಕೆಲಸ. ಮಂಕಿಬಾಕ್ಸ್‌ ಈ ಸವಾಲನ್ನು ಸಮರ್ಥವಾಗಿ ನಿಭಾಯಿಸುತ್ತಿದೆ’ ಎಂದೂ ಸಂಜಯ್‌  ರಾವ್‌ ಅವರು ದೃಢ ವಿಶ್ವಾಸದಿಂದ ಹೇಳುತ್ತಾರೆ.

ನಗರದಲ್ಲಿ ಇರುವ ಮೂರು ಅತ್ಯಾಧುನಿಕ ಅಡುಗೆ ಮನೆಗಳಲ್ಲಿ  ಪರಿಣತ ಬಾಣಸಿಗರ ಮೇಲ್ವಿಚಾರಣೆಯಲ್ಲಿ ಅಡುಗೆ ಸಿದ್ಧಗೊಳ್ಳುತ್ತದೆ. ಮೂರು ಹೊತ್ತು ಪ್ರತ್ಯೇಕವಾಗಿ ತಿಂಡಿ, ಊಟ ಮತ್ತು ಸ್ನ್ಯಾಕ್ಸ್‌ಗಳನ್ನು ಬಿಸಿಬಿಸಿಯಾಗಿ ಪೂರೈಸುವುದು ಈ ಸ್ಟಾರ್ಟ್‌ಅಪ್‌ನ ಇನ್ನೊಂದು ಹೆಗ್ಗಳಿಕೆಯಾಗಿದೆ. ಇದರಿಂದ ಮಕ್ಕಳಿಗೆ ಅಗತ್ಯವಾಗಿ ಬೇಕಾದ ಶಕ್ತಿ, ಪ್ರೋಟಿನ್‌, ಕಬ್ಬಿಣ, ಕೊಬ್ಬು ಸಮರ್ಪಕವಾಗಿ ದೊರೆಯುತ್ತಿದೆ.

ಮಂಕಿಬಾಕ್ಸ್‌ನ ನಿರ್ದೇಶಕ ಮಂಡಳಿಯಲ್ಲಿ ಇರುವ ಮಕ್ಕಳ ಪೋಷಕಾಂಶ ಪರಿಣತ ವೈದ್ಯೆ ಡಾ. ಶ್ರೀಪ್ರಿಯಾ ವೆಂಕಟೇಶ್ವರನ್‌ ಅವರು, ಚಿಣ್ಣರಿಗೆ ಒದಗಿಸಬೇಕಾದ ಪೋಷಕಾಂಶಗಳ ಬಗ್ಗೆ ನಿಗಾ ವಹಿಸುತ್ತಾರೆ.

‘ಬೆಳಿಗ್ಗೆ 7 ಗಂಟೆಗೆ ಕಾರ್ಯಾರಂಭ ಮಾಡುವ ಅಡುಗೆ ಮನೆಗಳಲ್ಲಿ ಸಿದ್ಧಗೊಳ್ಳುವ, ಪ್ಯಾಕ್‌ ಆಗುವ ಆಹಾರವನ್ನು 16 ವಾಹನಗಳು ಸಾಗಿಸುತ್ತವೆ. ಬೆಳಗಿನ ತಿಂಡಿಯಲ್ಲಿ ಹಣ್ಣು ಕಡ್ಡಾಯವಾಗಿರುತ್ತದೆ. ಸಣಬಿನ ಚೀಲದ ಮೇಲೆ ನಮೂದಿಸಿರುವ ವಿದ್ಯಾರ್ಥಿಯ ಹೆಸರು, ಮಕ್ಕಳು ತಮ್ಮ ಬ್ಯಾಗ್‌ ಗುರುತಿಸಲು ನೆರವಾಗುತ್ತದೆ. ಪ್ರತಿ ಬ್ಯಾಗ್‌ಗೆ ಬಾರ್‌ಕೋಡ್‌ ಇರುವುದರಿಂದ, ಅಡುಗೆ ಮನೆಯಿಂದ ಹೊರ ಹೋಗುವ ಪ್ರತಿಯೊಂದು ಚೀಲವನ್ನು ಸ್ಕ್ಯಾನ್‌ ಮಾಡಲಾಗುತ್ತಿದೆ. ಇದು ಮಕ್ಕಳಿಗೆ ತಿಂಡಿ, ಊಟ ಪೂರೈಸಿರುವುದನ್ನು ದೃಢೀಕರಿಸುತ್ತಿದೆ. ತಿಂಡಿ, ಊಟದ ಬಿಡುವಿನ ಅರ್ಧಗಂಟೆ ಮುಂಚೆಯೇ ಶಾಲೆಗಳಿಗೆ ಪೂರೈಸಲಾಗಿರುತ್ತದೆ. ಇದರಿಂದ ತಾಜಾ ಮತ್ತು ಬಿಸಿ ಬಿಸಿ ಆಹಾರವೇ ಮಕ್ಕಳ ಹೊಟ್ಟೆಗೆ ಸೇರುತ್ತದೆ. ತಮ್ಮ ಮಗುವಿಗೆ ತಿಂಡಿ, ಆಹಾರ ತಲುಪಿರುವ ಬಗ್ಗೆ ಪಾಲಕರು ಕಿಂಚಿತ್ತೂ ಚಿಂತಿತರಾಗಬೇಕಾಗಿಲ್ಲ’ ಎಂದು ಅವರು ಭರವಸೆ ನೀಡುತ್ತಾರೆ.

ಮಧ್ಯಾಹ್ನ ಊಟ ತರುವ ಸಿಬ್ಬಂದಿ ಬೆಳಗಿನ ತಿಂಡಿ ಡಬ್ಡಿಗಳನ್ನು ವಾಪಸ್‌ ಒಯ್ಯುತ್ತಾರೆ. ಹೀಗಾಗಿ ಗಲಿಬಿಲಿಗೆ ಅವಕಾಶವೇ ಇಲ್ಲ. ಆಹಾರ ಸಾಗಿಸುವ ವಾಹನಗಳನ್ನು ಪ್ರತಿ ದಿನ ಸ್ವಚ್ಛಗೊಳಿಸಲಾಗುವುದು. ಆಹಾರದ ಗುಣಮಟ್ಟದ ಮೇಲೆ ನಿಗಾ ಇಡುವ ಪ್ರತ್ಯೇಕ ವ್ಯವಸ್ಥೆಯೂ ಇದೆ. ರ‍್ಯಾಂಡಮ್‌ ಆಗಿ ಆಹಾರದ ಡಬ್ಬಿಗಳನ್ನು ಪರೀಕ್ಷಿಸಿ ಆಹಾರದ ಪ್ರಮಾಣವನ್ನು ಮತ್ತು ಮಕ್ಕಳು ಆಹಾರ ಸೇವಿಸಿರುವುದನ್ನೂ ಖಚಿತಪಡಿಸಿಕೊಳ್ಳಲಾಗುತ್ತಿದೆ.

ಇಲ್ಲಿ ಸಿದ್ಧಪಡಿಸುವ ತಿಂಡಿ ಮತ್ತು ವೈವಿಧ್ಯಮಯ ಆಹಾರಕ್ಕೆ ಸಾವಯವ ಆಹಾರಧಾನ್ಯಗಳನ್ನೇ ಬಳಸಿಕೊಳ್ಳಲಾಗುತ್ತಿದೆ. ನಾಮಧಾರಿ ಫ್ರೆಶ್‌, ಜೀವಭೂಮಿ, ಫಸ್ಟ್‌ ಅಗ್ರೊ, ಪ್ರೊ ನೇಚರ್‌ಗಳಿಂದ ತಾಜಾ ತರಕಾರಿ ಖರೀದಿಸಲಾಗುತ್ತಿದೆ. ಮಸಾಲೆ, ಸಾಂಬಾರ್‌ ಪದಾರ್ಥಗಳನ್ನು ಸಂಸ್ಥೆಯೇ ತಯಾರಿಸುತ್ತದೆ. ಸಂರಕ್ಷಕಗಳನ್ನು ಬಳಸುವುದಿಲ್ಲ. ಸಂಪೂರ್ಣ ಸಸ್ಯಾಹಾರಿ ಆಹಾರ ಪೂರೈಸಲಾಗುತ್ತಿದೆ. ಮಾಹಿತಿಗೆ www.monkeybox.in   ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಮತ್ತು monkeybox ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

ಉದ್ಯಮದ ಅನುಭವ
ಸಂಜಯ್‌ ರಾವ್‌ ಮತ್ತು ಸಂದೀಪ್‌ ಕೆ. ಅವರಿಗೆ ಉದ್ಯಮಶೀಲತೆಯಲ್ಲಿ 10 ವರ್ಷಗಳಿಗಿಂತ ಹೆಚ್ಚಿನ ಅವಧಿಯ ಅನುಭವ ಇದೆ. ಅದನ್ನೇ ಅವರು ಇಲ್ಲಿ ಒರೆಗಲ್ಲಿಗೆ ಹಚ್ಚಿ ಯಶಸ್ಸಿನ ಹಾದಿಯಲ್ಲಿ ಸಾಗಿದ್ದಾರೆ.

2006ರಲ್ಲಿ ವಿಪ್ರೊ ಸಂಸ್ಥೆ ತೊರೆದು ಸ್ಪೋರ್ಟಿಂಗ್‌ಮೈಂಡ್ಸ್‌ ಟೆಕ್ನಾಲಜೀಸ್‌ (SportingMindz Technology) ಸ್ಥಾಪಿಸಿದ್ದ ಇವರಿಬ್ಬರು, ಕ್ರೀಡೆಗಳ ವಿಶ್ಲೇಷಣೆ ವಹಿವಾಟಿನಲ್ಲಿ ತೊಡಗಿದ್ದರು. ‘ಸ್ಪೋರ್ಟ್ಸ್‌ ನೆಸ್ಟ್‌’ ಸಂಸ್ಥೆಯನ್ನೂ ಸ್ಥಾಪಿಸಿ ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.   ಐಪಿಎಲ್‌ ತಂಡಗಳಾದ ಆರ್‌ಸಿಬಿ, ಕೆಕೆಆರ್‌, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡ, ಶ್ರೀಲಂಕಾ ಕ್ರಿಕೆಟ್‌ ನಿಯಂತ್ರಣ ಮಂಡಳಿ ಜತೆಗೂ ಕೆಲಸ ಮಾಡಿದ್ದರು.

150ಕ್ಕೂ ಹೆಚ್ಚು ಶಾಲೆಗಳಿಗೆ ಸೇವೆ ಲಭ್ಯ

ಪ್ರತಿ ದಿನ 2,000 ದಿಂದ 2,500 ಶಾಲಾ ಮಕ್ಕಳಿಗೆ ಪ್ರಯೋಜನ

ಪ್ರತಿ 21 ದಿನಕ್ಕೆ ಮೆನು ಬದಲಾವಣೆ

ಮೂರು ಕಡೆ ಅಡುಗೆ ಮನೆ: ಕೂಡ್ಲುಗೇಟ್‌, ಥಣಿಸಂದ್ರ ಮತ್ತು ಉತ್ತರಹಳ್ಳಿ

* * * *

ತಿಂಡಿ, ಊಟ, ಸ್ನ್ಯಾಕ್ ವೆಚ್ಚ

ಮೂರೂ ಸೌಲಭ್ಯಗಳ ತಿಂಗಳ ವೆಚ್ಚ ₹ 3,000

5 ದಿನಗಳಿಗೆ ಮೂರು ಸೌಲಭ್ಯಕ್ಕೆ ₹ 750

5 ದಿನಗಳಿಗೆ ಎರಡು ಸೌಲಭ್ಯಕ್ಕೆ ₹ 600

ಪೂರ್ವಜರು ಕಲಿಸಿದ ಪಾಠ!
ಈ ವಹಿವಾಟಿಗೆ ‘ಮಂಕಿಬಾಕ್ಸ್‌’ ಎನ್ನುವ ಆಕರ್ಷಕ ಹೆಸರು ಇಟ್ಟಿರುವುದಕ್ಕೂ ಒಂದು ಕಾರಣ ಇದೆ. ಸಂಸ್ಥೆಯ ಸ್ಥಾಪಕರು ನೆಲೆಸಿರುವ ಅಪಾರ್ಟ್‌ಮೆಂಟ್‌ನ 12ನೆ ಮಹಡಿಯ ಅಡುಗೆ ಮನೆಗೆ ಒಂದು ಬಾರಿ ದಾಳಿ ಮಾಡಿದ್ದ ವಾನರ ಗುಂಪು, ತಮ್ಮ ಮರಿಗಳಿಗೆ ಅಲ್ಲಿರುವ ಟೊಮೆಟೊ ಮತ್ತು ಗಜ್ಜರಿ (ಕ್ಯಾರೆಟ್‌) ತಿನ್ನಿಸಿದ್ದವೇ ಹೊರತು, ಅಲ್ಲಿಯೇ ಇದ್ದ ಚಿಪ್ಸ್‌ಗಳನ್ನು ಮುಟ್ಟಿಯೂ ನೋಡಿರಲಿಲ್ಲ, ಮೂಸಿಯೂ ನೋಡಿರಲಿಲ್ಲ! ಕೋತಿಗಳ ನಡವಳಿಕೆಯನ್ನು  ಸೂಕ್ಷ್ಮವಾಗಿ ಗಮನಿಸಿದ್ದ ಈ ಸ್ಟಾರ್ಟ್‌ಅಪ್‌ ಸ್ಥಾಪಕರು, ಆಹಾರದ ವಿಷಯದಲ್ಲಿ ನಾವು ನಮ್ಮ ಪೂರ್ವಜರಿಂದ ಕಲಿಯುವುದು ಸಾಕಷ್ಟಿದೆ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಅದೇ ಕಾರಣಕ್ಕೆ ತಮ್ಮ ಈ ವಿಶಿಷ್ಟ ಉದ್ದಿಮೆಗೆ ‘ಮಂಕಿಬಾಕ್ಸ್‌’ ಎನ್ನುವ ಆಕರ್ಷಕ ಹೆಸರು ಇಟ್ಟಿದ್ದಾರೆ. ಕೋತಿಗಳಿಗೂ ಇಷ್ಟವಾಗದ ಜಂಕ್‌ ಫುಡ್‌ಗೆ (ಅಪೌಷ್ಟಿಕ ಆಹಾರ) ಸಂಸ್ಥೆ ಪೂರೈಸುವ ವೈವಿಧ್ಯಮಯ ತಿನಿಸು, ಊಟದ ಮೆನುವಿನಲ್ಲಿ ಅವಕಾಶ ಇಲ್ಲವೇ ಇಲ್ಲ.

Read More

Comments
ಮುಖಪುಟ

ಉಕ್ರೇನ್ ರಾಯಭಾರಿ ಕೆಂಪುಕೋಟೆ ಬಳಿ ಫೋಟೊ ಕ್ಲಿಕ್ಕಿಸುತ್ತಿದ್ದಾಗ ಫೋನ್ ಕಿತ್ತು ಪರಾರಿ

ಪೊಲೀಖಾ ಅವರು ಬೆಳಗ್ಗೆ 9.15ರ ಹೊತ್ತಿಗೆ ದೆಹಲಿಯ ಕೆಂಪುಕೋಟೆ ಬಳಿ ಫೋಟೊ ತೆಗೆದುಕೊಳ್ಳುತ್ತಿದ್ದ ವೇಳೆ ಆಗಂತುಕನೊಬ್ಬ ಫೋನ್ ಕಿತ್ತು ಪರಾರಿಯಾಗಿದ್ದಾನೆ.

ಪ್ರಾಚೀನ ಭಾರತದಲ್ಲಿ ದುರ್ಗೆ ರಕ್ಷಣಾ ಸಚಿವೆ, ಲಕ್ಷ್ಮಿ ಹಣಕಾಸು ಮಂತ್ರಿ: ವೆಂಕಯ್ಯನಾಯ್ಡು

ವಿದ್ಯಾರ್ಥಿಗಳು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು. ರಾಮರಾಜ್ಯ ಎನ್ನುವುದು ಇಂದಿಗೂ ನಮ್ಮ ಇತಿಹಾಸದ ಶ್ರೇಷ್ಠ ಕಾಲಘಟ್ಟವಾಗಿದೆ. ಅದಕ್ಕೆ ಕಾರಣ ಆ ಆಡಳಿತ ವ್ಯವಸ್ಥೆಯಲ್ಲಿದ್ದ ಆದರ್ಶಗಳು. ಆದರೆ ಇತ್ತೀಚಿನ ದಿನಗಳು ಅದನ್ನು ಕೋಮು ಭಾವ ದೃಷ್ಟಿಯಲ್ಲಿ ನೋಡಲಾಗುತ್ತಿದೆ.

ಆರ್‍ಎಸ್ಎಸ್ ಭಾರತವನ್ನು ಹಿಂದೂ, ಹಿಂದಿ, ಹಿಂದೂಸ್ತಾನವನ್ನಾಗಿಸಲು ಯತ್ನಿಸುತ್ತಿದೆ

ಆರ್‍ಎಸ್ಎಸ್ ರಾಜ್ಯ ಸರ್ಕಾರಗಳನ್ನು ದುರ್ಬಲವಾಗಿಸಲು ಯತ್ನಿಸುತ್ತಿವೆ. ಇದಕ್ಕಾಗಿ ಅವರು ಒಕ್ಕೂಟವಾದವನ್ನು ಒಡೆದು ಹಿಂದಿ, ಹಿಂದೂ, ಹಿಂದೂಸ್ತಾನವನ್ನಾಗಿಸುವ ಉದ್ದೇಶವನ್ನು ಹೇರುತ್ತಿದ್ದಾರೆ. ಬಿಜೆಪಿಯೂ ಇದೇ ರೀತಿ ಮಾಡುತ್ತಿದ್ದು ಅವರ ಈ ಯತ್ನವನ್ನು ವಿಫಲಗೊಳಿಸಬೇಕಿದೆ

‘ಗುಮ್ನಾಮಿ ಬಾಬಾ ಅವರೇ ನೇತಾಜಿ ಎಂದು ಹೆಚ್ಚು ಜನ ನಂಬಿದ್ದರು’

‘ಆಯೋಗದ ಮುಂದೆ ಖುದ್ದಾಗಿ ಇಲ್ಲವೇ ಪತ್ರ ಮುಖೇನ ಮಾಹಿತಿ ನೀಡಿರುವ ಬಹುತೇಕರು ಗುಮ್ನಾಮಿ ಬಾಬಾ ಅವರೇ ನೇತಾಜಿ ಆಗಿದ್ದರು ಎಂದು ಹೇಳಿದ್ದಾರೆ...

ಸಂಗತ

ಆರೋಗ್ಯ ಬೇಕೇ? ಸ್ವಚ್ಛತೆ ಕಾಪಾಡಿ

ಮನುಷ್ಯ ಹಣ ಗಳಿಕೆಗಾಗಿ ಗುಣ ಹಾಗೂ ಆರೋಗ್ಯ ಎರಡನ್ನೂ ಪಣಕ್ಕಿಟ್ಟು ದುಡಿಯುತ್ತಿದ್ದಾನೆ. ಹಾಗೇ ಇವೆರಡನ್ನೂ ಕಳೆದುಕೊಳ್ಳುತ್ತಿದ್ದಾನೆ.

ವಸ್ತುನಿಷ್ಠತೆ ಮೆರೆಯೋಣ

ವ್ಯಕ್ತಿ ನಿಂದೆ ಮಾಡದೆಯೂ ಗಾಂಧಿ ಚಿಂತನೆಗಳ ಪುನರ್ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲವೇ? ನಕಾರಾತ್ಮಕ ದೃಷ್ಟಿಯ ಬರವಣಿಗೆಯಿಂದ ಯುವಕರನ್ನು ಹಾದಿ ತಪ್ಪಿಸಿದಂತಾಗುತ್ತದೆ.

ಕರ್ಮಸಿದ್ಧಾಂತ, ಕಾಯಕಸಿದ್ಧಾಂತ ಪೂರ್ಣ ಬೇರೆ

ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!

ಭರ್ಗೋ ದೇವಸ್ಯ ಧೀಮಹಿ ಎಂಬರು

ಒಬ್ಬರಿಗಾಗಿ ವಿಚಾರವಿಲ್ಲ ನೋಡಿರೇ

ಕೂಡಲಸಂಗಮದೇವಾ.

ಇಳೆಯ ನರಳಿಕೆಗೆ ಚಿಕಿತ್ಸೆ

ನಮಗಿರುವುದು ಒಂದೇ ಭೂಮಿ. ಅದನ್ನು ಸೊರಗಿಸಿದರೆ ಬಳಲುವವರು ನಾವೇ ಎನ್ನುವ ಪ್ರಜ್ಞೆ ಮೂಡುವವರೆಗೆ ನರಳಿಕೆ ತಪ್ಪಿದ್ದಲ್ಲ

ಚಂದನವನ

ಹಬ್ಬುವ ಹೆಬ್ಬಯಕೆಯ ಚಿಗುರು ಲತೆ

ಉತ್ತರ ಕನ್ನಡದ ಶಿರಸಿಯಲ್ಲಿ ಹುಟ್ಟಿ ನ್ಯೂಜಿಲೆಂಡ್‌ನಲ್ಲಿ ಬೆಳೆದು ಮತ್ತೀಗ ಚಿತ್ರರಂಗದ ಮೂಲಕ ತವರಿನಲ್ಲಿಯೇ ಬೇರೂರಿ ಬೆಳೆಯುವ ಹಂಬಲದಲ್ಲಿರುವ ಸುಂದರಿ ಲತಾ ಹೆಗಡೆ. ಮಹೇಶ್‌ ಬಾಬು ನಿರ್ದೇಶನದ ‘ಅತಿರಥ’ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿರುವ ಇವರಿಗೆ ಒಳ್ಳೆಯ ಅವಕಾಶಗಳು ಸಿಕ್ಕರೆ ಇಲ್ಲಿಯೇ ನೆಲೆಯೂರುವ ಬಯಕೆ ಇದೆ.

‘ಹೀರೊಯಿನ್‌’ ಹಾಡು ಪಾಡು

ಹಾಸ್ಯದ ರೂಪದಲ್ಲಿ ಒಂದು ಸಂದೇಶವನ್ನೂ ನೀಡಿದ್ದೇವೆ. ಬದುಕಿನಲ್ಲಿ ಬರುವ ಕಷ್ಟಗಳನ್ನು ಕಾಮಿಡಿಯ ದೃಷ್ಟಿಕೋನದಿಂದಲೇ ನೋಡುವ ಪ್ರಯತ್ನ ಇದು’ ಎಂದು ಬಾಹುಬಲಿ ವಿವರಿಸಿದರು.

ಪೊಲೀಸ್ ದಿರಿಸಿನಲ್ಲಿ ಹುಚ್ಚ ವೆಂಕಟ್

ಈ ಸಿನಿಮಾದಲ್ಲಿ ವೆಂಕಟ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಪೊಲೀಸರಿಗೆ ಜನ ಬೆಲೆ ಕೊಡುವುದು ಅವರ ಖಾಕಿ ಬಟ್ಟೆ ನೋಡಿ ಅಲ್ಲ. ಬೆಲೆ ಕೊಡುವುದು ಅವರ ಧರಿಸುವ ಪೊಲೀಸ್ ಕ್ಯಾಪ್ ನೋಡಿ’ ಎನ್ನುತ್ತ ಮಾತಿಗೆ ಇಳಿದರು ವೆಂಕಟ್.

ಮತ್ತೆ ಬರುತ್ತಿದ್ದಾನೆ ‘ಕೌರವ’

ಮುಂದಿನ ತಿಂಗಳ 13ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇದೆ. ನಾನು ಹಣ ಮಾಡುವ ಉದ್ದೇಶದಿಂದ ಈ ರಂಗಕ್ಕೆ ಬಂದವನಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದು ನರೇಶ್ ಹೇಳಿಕೊಂಡರು.