ವೈಚಾರಿಕತೆ ಮತ್ತು ಸಮಾಜ: ಗ್ರಹಿಕೆಯ ಸವಾಲುಗಳು

13 Sep, 2017
ಮೇಟಿ ಮಲ್ಲಿಕಾರ್ಜುನ

ಗೌರಿ ಲಂಕೇಶ್ ಅವರ ಬರ್ಬರ ಕೊಲೆಯ ಹಿಂದಿರಬಹುದಾದ ಉದ್ದೇಶವನ್ನು ವಿಶ್ಲೇಷಿಸಲು ಈ ಲೇಖನದಲ್ಲಿ ಪ್ರಯತ್ನಿಸಿದ್ದೇನೆ. ಇದನ್ನೊಂದು ರಾಜಕೀಯ ಹತ್ಯೆ ಹಾಗೂ ತಾತ್ವಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ನಡೆದ ಕೊಲೆ ಎಂದು ನೋಡಲಾಗಿದೆ.

ಈ ಹಿನ್ನೆಲೆಯಲ್ಲಿ ಸಮಾಜ ಮತ್ತು ವೈಚಾರಿಕತೆಗಳ ನಡುವಣ ತಿಕ್ಕಾಟಗಳು, ವಿರೋಧಗಳು ಹಾಗೂ ಕಾರಣಗಳ ಸ್ವರೂಪವನ್ನು ಕುರಿತು ಯೋಚಿಸುವುದು ಇವತ್ತಿನ ಅಗತ್ಯವಾಗಿದೆ. ಏಕೆಂದರೆ, ಎರಡು ವರ್ಷಗಳ ಹಿಂದೆ ಎಂ.ಎಂ. ಕಲಬುರ್ಗಿ ಅವರನ್ನೂ ಹೀಗೆಯೇ ಕೊಲೆ ಮಾಡಲಾಗಿತ್ತು. ಆದರೆ ಅವರ ಕೊಲೆಗೆ ಬೇರೆ ಬೇರೆ ಕಾರಣಗಳಿರಬಹುದು ಎಂದು ಉಹಾಪೋಹ ಹರಿಬಿಡಲಾಗಿತ್ತು. ಗೌರಿಯವರ ಕೊಲೆ ಪ್ರಕರಣದಲ್ಲಿ ಇಂತಹ ಸಂಶಯಕ್ಕೆ ಯಾವುದೇ ಕಾರಣ ಇಲ್ಲ. ಕಲಬುರ್ಗಿ ಮತ್ತು ಗೌರಿಯವರ ಕೊಲೆಗಳನ್ನು ಸೂಕ್ಷ್ಮವಾಗಿ ನೋಡಿದರೆ ಇವೆರಡರ ಹಿಂದಿನ ಉದ್ದೇಶ ಒಂದೇ ಎನ್ನುವುದು ಈಗ ಸ್ಪಷ್ಟವಾಗಿ ಕಾಣುತ್ತಿದೆ.

ಪ್ರಜಾಸತ್ತಾತ್ಮಕ, ಜಾತ್ಯತೀತ ಹಾಗೂ ಬಹುತ್ವದಿಂದ ಕೂಡಿದ ಭಾರತದಲ್ಲಿ ಜಾತಿ, ಧರ್ಮಗಳ ಮೇಲಾಟ; ಊಳಿಗಮಾನ್ಯ ಮನೋಧರ್ಮ ಹಾಗೂ ಮೂಲಭೂತವಾದದ ಕ್ರೌರ್ಯ ಇಂದಿಗೂ ಅತ್ಯಂತ ಪ್ರಬಲವಾಗಿ ನೆಲೆನಿಂತಿದೆ. ವೈಚಾರಿಕತೆ, ತಾತ್ವಿಕತೆ, ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆಯಂಥ ಮೌಲ್ಯಗಳನ್ನು ನೆಲೆಗೊಳಿಸಲು ಪ್ರಾಣವನ್ನು ಪಣಕ್ಕಿಡಬೇಕಾದ ಹೀನಸ್ಥಿತಿ ಕರ್ನಾಟಕಕ್ಕೆ ಬಂದೊದಗಿದೆ. ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡುವ ವಿಚಾರವಂತರನ್ನು ಖಳನಾಯಕರಂತೆ ಬಿಂಬಿಸುವ ಹುನ್ನಾರಗಳು ನಡೆಯುತ್ತಿವೆ. ಅಂದರೆ ಸಮೂಹಗಳ ಪರವಾಗಿ ಧ್ವನಿಯೆತ್ತುವ ಕ್ರಮವನ್ನೇ ‘ದೇಶ ದ್ರೋಹದ’ದ ಕ್ರಿಯೆಯನ್ನಾಗಿ ರೂಪಿಸಲಾಗುತ್ತಿದೆ.

ಭಾರತದ ನಾಗರಿಕತೆಗೆ ಹಲವು ಸಹಸ್ರಮಾನಗಳ ಚರಿತ್ರೆಯಿದೆ ಎಂದು ಬೀಗುವ ನಾವು, ಅಮಾನುಷ ಧೋರಣೆ, ಕ್ರೌರ್ಯಕ್ಕೂ ಅಷ್ಟೇ ಸುದೀರ್ಘ ಚರಿತ್ರೆಯಿದೆ ಎಂಬುದನ್ನು ಒಪ್ಪುವುದಕ್ಕೆ ತಯಾರಿಲ್ಲ. ಏಕೆಂದರೆ ವೇದ, ಉಪನಿಷತ್ತು, ಪುರಾಣಗಳನ್ನು ಅತ್ಯಂತ ಪ್ರಾಚೀನ ಕಾಲದಿಂದಲೂ ನಮ್ಮ ಸ್ಮೃತಿಗಳಲ್ಲೇ ಕಾಪಿಟ್ಟುಕೊಂಡು ಬಂದಿದ್ದೇವೆ ಹಾಗೂ ವಿಶ್ವದ ಎಷ್ಟೋ ದೇಶಗಳಲ್ಲಿ ನಾಗರಿಕತೆ ವಿಕಸನಗೊಳ್ಳುವ ಮೊದಲೇ ಭಾರತ ವೈಚಾರಿಕ, ಶಾಸ್ತ್ರೀಯ ಹಾಗೂ ಪೌರಾಣಿಕ ಪರಂಪರೆಗಳನ್ನು ಹೊಂದಿತ್ತು ಎಂಬ ಅಪ್ಪಟ ನಂಬಿಕೆಯನ್ನು ಬೆಳೆಸಿಕೊಂಡಿದ್ದೇವೆ. ಹಾಗಾದರೆ ವೈಚಾರಿಕತೆಯನ್ನು ಎಲ್ಲಿ, ಯಾವಾಗ ಕಳೆದುಕೊಂಡೆವು? ಇಲ್ಲವೇ ನಾಗರಿಕತೆ, ಪೌರಾಣಿಕ ಹಾಗೂ ಶಾಸ್ತ್ರೀಯ ಅಧ್ಯಯನ ಶಿಸ್ತುಗಳ ಪರಂಪರೆಗಳನ್ನು ಹೊಂದುವುದೆಂದರೆ, ವೈಚಾರಿಕ ಮತ್ತು ತಾತ್ವಿಕ ನಿಲುವುಗಳನ್ನು ಕೈಬಿಟ್ಟು, ಜನವಿರೋಧಿ ನಿಲುವುಗಳನ್ನು ತಾಳುವುದೇ?

ಮನುಷ್ಯ ಪ್ರೀತಿ, ಸಹಜೀವನ ಮೊದಲಾದ ಮೌಲ್ಯಗಳನ್ನು ರೂಪಿಸಿಕೊಳ್ಳುವುದಕ್ಕೆ ಬೇಕಾಗಿರುವ ಸಾಮಾಜಿಕ-ರಾಜಕೀಯ ರಾಚನಿಕ ಹೊಂದಾಣಿಕೆಯನ್ನು ವೈಚಾರಿಕತೆ ಎಂದು ಕರೆಯೋಣ. ಬುದ್ಧ, ಬಸವ, ಗುರುನಾನಕ್, ಮುಹಮ್ಮದ್, ಕಬೀರ್, ಕನಕದಾಸ, ನಾರಾಯಣ ಗುರು, ಮಾರ್ಕ್ಸ್‌್, ಅಂಬೇಡ್ಕರ್, ಗಾಂಧಿ, ಕುವೆಂಪು ಮೊದಲಾದವರನ್ನು ಚಿಂತಕರು, ವಿಚಾರವಂತರು, ಮಹರ್ಷಿಗಳು ಎಂಬೆಲ್ಲ ಹೆಸರುಗಳಿಂದ ಗುರುತಿಸುತ್ತೇವೆ. ಇಂತಹ ಹೆಸರುಗಳಿಂದ ಗುರುತಿಸುವುದಕ್ಕೆ ಇರುವ ಆಧಾರಗಳೇ ವಿಚಾರ, ವಿವೇಕ ಮತ್ತು ವೈಚಾರಿಕ ವಿನ್ಯಾಸಗಳಾಗಿರುತ್ತವೆ. ಅಂದರೆ ವ್ಯಕ್ತಿ ನೆಲೆಯಿಂದ ಸಾಮುದಾಯಿಕ ನೆಲೆಗಿನ ಪಯಣದಿಂದಲೇ ನಾಗರಿಕ ಸಮೂಹ ಸೃಷ್ಟಿಯಾಗಿದೆ.

ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಗಳ ನಡುವಣ ಅಂತರಗಳನ್ನು ಇವತ್ತಿಗೂ ನಮ್ಮಿಂದ ಅರಿತುಕೊಳ್ಳಲು ಸಾಧ್ಯವಾಗಿಲ್ಲ. ಯುರೋಪಿನ ಕಲ್ಪನೆಗಳಾದ ಸೊಸೈಟಿ, ಸಿವಿಕ್ ಸೊಸೈಟಿ, ಸಾವರ್ನಿಟಿ ಹಾಗೂ ಡೆಮಾಕ್ರಸಿಯನ್ನು ಕೇವಲ ಮಂತ್ರಗಳನ್ನಾಗಿ ಜಪಿಸುತ್ತಿದ್ದೇವೆ. ಅದೇ ಪ್ರಕಾರ, ರ್‍್ಯಾಷನಾಲಿಟಿ, ಫಿಲಾಸಫಿಕಲ್ ಮುಂತಾದ ಪದಗಳಿಗೆ ಪರ್ಯಾಯವಾಗಿ ವೈಚಾರಿಕ ಹಾಗೂ ತಾತ್ವಿಕ ಎಂಬ ಸಮಾನ ಪದಗಳನ್ನು ಮಾತ್ರ ಬಳಸಲಾಗುತ್ತದೆ. ಆಯಾ ಪದದಲ್ಲಿ ಗ್ರಹೀತವಾಗಿರುವ ವಿಚಾರ, ವಿವೇಕ ಇಲ್ಲವೇ ಅರಿವಿನ ವಿನ್ಯಾಸಗಳನ್ನು ಕೈಬಿಟ್ಟು ಪದಗಳ ಬೆನ್ನುಹತ್ತಿದ್ದೇವೆ. ವಚನಕಾರರು, ಭಕ್ತಿ ಪರಂಪರೆಯವರು, ತತ್ವಪದಕಾರರು ಮತ್ತು ಮಹರ್ಷಿಗಳು ನಡೆ-ನುಡಿಗಳ ಲಯವನ್ನು ಮರುಹೊಂದಿಸುವ ಪ್ರಯತ್ನವನ್ನು ಮಾಡಿದರು. ಇದರ ಮೂಲಕ ಸಾಮುದಾಯಿಕ ಪ್ರಜ್ಞೆ, ವಿವೇಕ, ಎಚ್ಚರ ಹಾಗೂ ತಾತ್ವಿಕ ಪರಂಪರೆಗಳನ್ನು ಕಟ್ಟುವ ದಾರಿಯನ್ನು ತುಳಿದರು.

ಆಧುನಿಕ ಭಾರತ ನಿರ್ಮಾಣದ ಸಂದರ್ಭದಲ್ಲಿ ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾ ಭಾರತಕ್ಕೆ ಬೇಕಾದ ವೈಚಾರಿಕ ದಾರಿಗಳನ್ನು ಕಂಡುಕೊಳ್ಳಲು ಯುರೋಪಿನ ಪದಗಳಿಗೆ ಸೀಮಿತವಾಗಿ ಉಳಿಯಲಿಲ್ಲ. ಸಮೂಹಗಳ ಏಳ್ಗೆಯನ್ನು ಬಯಸಿದ ದಾರ್ಶನಿಕರು, ಮಹರ್ಷಿಗಳು ಹಾಗೂ ಪುರಾಣಗಳನ್ನು ಅವರು ಬಳಸಿಕೊಂಡರು.

ಗಾಂಧಿಯವರ ಅಹಿಂಸೆ, ಸತ್ಯ, ರಾಮರಾಜ್ಯದ ಕಲ್ಪನೆಯು ಪುರಾಣದಿಂದಲೂ ಅಂಬೇಡ್ಕರ್ ಅವರ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವದಂತಹ ಕಲ್ಪನೆಗಳು ಬುದ್ಧನಿಂದಲೂ ಬಂದವು. ಗಾಂಧಿಯವರ ಧಾರ್ಮಿಕ ಕಲ್ಪನೆ ಪ್ರತಿಗಾಮಿಯಾಗದೆ, ಸಾಮರಸ್ಯವನ್ನು ಬೆಳೆಸುವ ಸಾಮಾಜಿಕ ಕ್ರಿಯೆಯಾಗಿತ್ತು. ಸಾಮಾಜಿಕ, ಸಾಂಸ್ಕೃತಿಕ ವೈವಿಧ್ಯವನ್ನು ಒಪ್ಪಿ ಸಹಬಾಳ್ವೆಯನ್ನು ನಡೆಸುವುದಕ್ಕೆ ಬೇಕಾದ ಸಹಜವಾದ ಮಾರ್ಗಗಳನ್ನು ಅಂಬೇಡ್ಕರ್ ಮತ್ತು ಗಾಂಧಿಯವರಲ್ಲಿ ಕಾಣುತ್ತೇವೆ. ಆದಾಗ್ಯೂ ಇವರಿಬ್ಬರ ವೈಚಾರಿಕ ನಿಲುವುಗಳಲ್ಲಿ ಬಹಳಷ್ಟು ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು ಎಂಬುದು ಗಮನಾರ್ಹ.

ಹಿಂದುತ್ವ ತಾತ್ವಿಕತೆಯು ತನ್ನ ರಾಜಕಾರಣದ ಭಾಗವಾಗಿ ರಾಷ್ಟ್ರಭಕ್ತಿ, ಧರ್ಮ, ಗೋವಿನ ಬಗೆಗಿನ ನಂಬಿಕೆಗಳು ಇತ್ಯಾದಿ ಸಂಗತಿಗಳನ್ನು ರೂಪಿಸುವಾಗ ಭಾರತದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ವೈವಿಧ್ಯಗಳನ್ನು ಮರೆಮಾಚುತ್ತದೆ. ಒಂದು ಪಂಗಡದ ನಂಬಿಕೆ ಮತ್ತು ಧೋರಣೆಗಳಿಗೆ ಮಾತ್ರ ಪೂರಕವಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಪಂಗಡದವರು ಆಚರಿಸುವ ಅಸ್ಪೃಶ್ಯತೆ, ಧಾರ್ಮಿಕ ಮೂಲಭೂತವಾದ, ಜಾತಿ ತಾರತಮ್ಯ ಯಾವತ್ತಿಗೂ ಅವೈಚಾರಿಕ, ಅವೈಜ್ಞಾನಿಕ, ಅಮಾನವೀಯ ವಿದ್ಯಮಾನಗಳಾಗಿ ಇವರಿಗೆ ಕಾಣಲಿಲ್ಲ. ಬದಲಾಗಿ ಇವುಗಳನ್ನು ವಿರೋಧಿಸುವ ಹಾಗೂ ಸಾಮಾಜಿಕ ಬಾಂಧವ್ಯ ಮತ್ತು ಸೌಹಾರ್ದವನ್ನು ಬಯಸುವವರನ್ನು ಅಂದರೆ ವಾಸ್ತವದಲ್ಲಿ ವೈಚಾರಿಕ, ಪ್ರಗತಿಪರ, ಎಡಪಂಥೀಯ ನಿಲುವುಗಳನ್ನು ಹೊಂದಿದವರನ್ನು ದೇಶ ದ್ರೋಹಿಗಳು, ಸಮಾಜ ವಿರೋಧಿಗಳು ಎಂದಾಗಿ ಬಿಂಬಿಸುವ ಮೂಲಕ ಜನಸಾಮಾನ್ಯರಲ್ಲಿ ಅವರ ಬಗ್ಗೆ ಅಪನಂಬಿಕೆ ಸೃಷ್ಟಿಸಲಾಗುತ್ತಿದೆ.

ಇದೇ ರಾಜಕೀಯ-ಧಾರ್ಮಿಕ ಹುನ್ನಾರಕ್ಕೆ ಕಲಬುರ್ಗಿ ಮತ್ತು ಗೌರಿ ಬಲಿಯಾಗಿದ್ದಾರೆ. ಹೊಸ ಭಾರತದ ನಿರ್ಮಾಣದ ಸನ್ನಿವೇಶದಲ್ಲಿ ಯಾವ ತಾತ್ವಿಕತೆ ಮತ್ತು ವೈಚಾರಿಕತೆಯನ್ನು ಗಾಂಧಿ, ಅಂಬೇಡ್ಕರ್, ನೆಹರೂ ಹಾಗೂ ಲೋಹಿಯಾ ಅವರು ನೆಲೆಗೊಳಿಸಲು ಹಂಬಲಿಸಿದರೋ, ಅವುಗಳನ್ನು ಗಾಳಿಗೆ ತೂರಲಾಗಿದೆ. ಸಹಸ್ರಮಾನಗಳಿಂದ ಗಳಿಸಿಕೊಂಡು ಬಂದಿದ್ದ ಬುದ್ಧನ ಜೀವಕಾರುಣ್ಯ, ಬಸವಣ್ಣನ ಮಾನವ ಪ್ರೀತಿ, ಗಾಂಧಿಯವರ ಅಹಿಂಸೆ ಮತ್ತು ಸತ್ಯದ ಕಲ್ಪನೆ ಹಾಗೂ ಅಂಬೇಡ್ಕರ್ ಅವರ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಕಲ್ಪನೆಗಳನ್ನು ನಾಶ ಮಾಡುವ ಹುನ್ನಾರಗಳು ನಡೆಯುತ್ತಿವೆ. ಗಾಂಧಿಯವರ ಹತ್ಯೆಯಿಂದ ಶುರುವಾಗಿ ಕಲಬುರ್ಗಿ ಹಾಗೂ ಗೌರಿ ಅವರ ಹತ್ಯೆಯವರೆಗಿನ ಎಲ್ಲವೂ ಈ ಹುನ್ನಾರದ ಭಾಗವಾಗಿಯೇ ನಡೆದಿವೆ.

ನಮ್ಮ ವಿಚಾರ, ಪರಂಪರೆಗಳು ಸಾಮಾಜಿಕ ವಿವೇಕದ ಚೌಕಟ್ಟುಗಳಾಗಿ ನೆಲೆಗೊಂಡರೆ ಮಾತ್ರ ವೈಚಾರಿಕ ಕ್ರಾಂತಿಗಳು ನಡೆಯುತ್ತವೆ. ಇಲ್ಲವಾದರೆ ಹಿಂದುತ್ವ ರಾಜಕಾರಣದ ಹುನ್ನಾರದಿಂದ ಸಮೂಹ ಸಮೂಹಗಳೇ ನಾಶವಾಗುತ್ತವೆ. ಈ ಆಪತ್ತಿನಿಂದ ಪಾರಾಗುವುದು ಹೇಗೆ?

ಸಾಫೊಕ್ಲಿಸ್‌ನ ದೊರೆ ಈಡಿಪಸ್ ನಾಟಕದ ಟೈರೀಸಿಯಸ್ ಪಾತ್ರದ ಮಾತೊಂದು ಈಗ ನೆನಪಾಗುತ್ತಿದೆ. ಅದೇನೆಂದರೆ, ‘ಓ, ಜ್ಞಾನವೆಂಬುದು ಎಷ್ಟು ಭಯಂಕರ, ಅದರಿಂದ ಉಪಯೋಗವಿಲ್ಲದಿದ್ದಾಗ! ಇದನ್ನು ಅರಿತಿದ್ದ ನಾನು ಯಾಕೆ ಮರೆತೆ? ಯಾಕಾದರೂ ಇಲ್ಲಿಗೆ ಬಂದೆ?’ ವಿಚಾರವಂತರು ಹೀಗೆ ಪಶ್ಚಾತಾಪ ಪಡುವ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಈ ಬಿಕ್ಕಟ್ಟಿನಿಂದ ಹೊರಬರುವ ದಾರಿಗಾಗಿ ಕಾಯಬೇಕಿಲ್ಲ. ಬದಲಾಗಿ ಅವುಗಳನ್ನು ಪುನಃ ಹುಡುಕಿಕೊಳ್ಳಬೇಕಾಗಿದೆ.

Read More

Comments
ಮುಖಪುಟ

ಉಕ್ರೇನ್ ರಾಯಭಾರಿ ಕೆಂಪುಕೋಟೆ ಬಳಿ ಫೋಟೊ ಕ್ಲಿಕ್ಕಿಸುತ್ತಿದ್ದಾಗ ಫೋನ್ ಕಿತ್ತು ಪರಾರಿ

ಪೊಲೀಖಾ ಅವರು ಬೆಳಗ್ಗೆ 9.15ರ ಹೊತ್ತಿಗೆ ದೆಹಲಿಯ ಕೆಂಪುಕೋಟೆ ಬಳಿ ಫೋಟೊ ತೆಗೆದುಕೊಳ್ಳುತ್ತಿದ್ದ ವೇಳೆ ಆಗಂತುಕನೊಬ್ಬ ಫೋನ್ ಕಿತ್ತು ಪರಾರಿಯಾಗಿದ್ದಾನೆ.

ಪ್ರಾಚೀನ ಭಾರತದಲ್ಲಿ ದುರ್ಗೆ ರಕ್ಷಣಾ ಸಚಿವೆ, ಲಕ್ಷ್ಮಿ ಹಣಕಾಸು ಮಂತ್ರಿ: ವೆಂಕಯ್ಯನಾಯ್ಡು

ವಿದ್ಯಾರ್ಥಿಗಳು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು. ರಾಮರಾಜ್ಯ ಎನ್ನುವುದು ಇಂದಿಗೂ ನಮ್ಮ ಇತಿಹಾಸದ ಶ್ರೇಷ್ಠ ಕಾಲಘಟ್ಟವಾಗಿದೆ. ಅದಕ್ಕೆ ಕಾರಣ ಆ ಆಡಳಿತ ವ್ಯವಸ್ಥೆಯಲ್ಲಿದ್ದ ಆದರ್ಶಗಳು. ಆದರೆ ಇತ್ತೀಚಿನ ದಿನಗಳು ಅದನ್ನು ಕೋಮು ಭಾವ ದೃಷ್ಟಿಯಲ್ಲಿ ನೋಡಲಾಗುತ್ತಿದೆ.

ಆರ್‍ಎಸ್ಎಸ್ ಭಾರತವನ್ನು ಹಿಂದೂ, ಹಿಂದಿ, ಹಿಂದೂಸ್ತಾನವನ್ನಾಗಿಸಲು ಯತ್ನಿಸುತ್ತಿದೆ

ಆರ್‍ಎಸ್ಎಸ್ ರಾಜ್ಯ ಸರ್ಕಾರಗಳನ್ನು ದುರ್ಬಲವಾಗಿಸಲು ಯತ್ನಿಸುತ್ತಿವೆ. ಇದಕ್ಕಾಗಿ ಅವರು ಒಕ್ಕೂಟವಾದವನ್ನು ಒಡೆದು ಹಿಂದಿ, ಹಿಂದೂ, ಹಿಂದೂಸ್ತಾನವನ್ನಾಗಿಸುವ ಉದ್ದೇಶವನ್ನು ಹೇರುತ್ತಿದ್ದಾರೆ. ಬಿಜೆಪಿಯೂ ಇದೇ ರೀತಿ ಮಾಡುತ್ತಿದ್ದು ಅವರ ಈ ಯತ್ನವನ್ನು ವಿಫಲಗೊಳಿಸಬೇಕಿದೆ

‘ಗುಮ್ನಾಮಿ ಬಾಬಾ ಅವರೇ ನೇತಾಜಿ ಎಂದು ಹೆಚ್ಚು ಜನ ನಂಬಿದ್ದರು’

‘ಆಯೋಗದ ಮುಂದೆ ಖುದ್ದಾಗಿ ಇಲ್ಲವೇ ಪತ್ರ ಮುಖೇನ ಮಾಹಿತಿ ನೀಡಿರುವ ಬಹುತೇಕರು ಗುಮ್ನಾಮಿ ಬಾಬಾ ಅವರೇ ನೇತಾಜಿ ಆಗಿದ್ದರು ಎಂದು ಹೇಳಿದ್ದಾರೆ...

ಸಂಗತ

ಆರೋಗ್ಯ ಬೇಕೇ? ಸ್ವಚ್ಛತೆ ಕಾಪಾಡಿ

ಮನುಷ್ಯ ಹಣ ಗಳಿಕೆಗಾಗಿ ಗುಣ ಹಾಗೂ ಆರೋಗ್ಯ ಎರಡನ್ನೂ ಪಣಕ್ಕಿಟ್ಟು ದುಡಿಯುತ್ತಿದ್ದಾನೆ. ಹಾಗೇ ಇವೆರಡನ್ನೂ ಕಳೆದುಕೊಳ್ಳುತ್ತಿದ್ದಾನೆ.

ವಸ್ತುನಿಷ್ಠತೆ ಮೆರೆಯೋಣ

ವ್ಯಕ್ತಿ ನಿಂದೆ ಮಾಡದೆಯೂ ಗಾಂಧಿ ಚಿಂತನೆಗಳ ಪುನರ್ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲವೇ? ನಕಾರಾತ್ಮಕ ದೃಷ್ಟಿಯ ಬರವಣಿಗೆಯಿಂದ ಯುವಕರನ್ನು ಹಾದಿ ತಪ್ಪಿಸಿದಂತಾಗುತ್ತದೆ.

ಕರ್ಮಸಿದ್ಧಾಂತ, ಕಾಯಕಸಿದ್ಧಾಂತ ಪೂರ್ಣ ಬೇರೆ

ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!

ಭರ್ಗೋ ದೇವಸ್ಯ ಧೀಮಹಿ ಎಂಬರು

ಒಬ್ಬರಿಗಾಗಿ ವಿಚಾರವಿಲ್ಲ ನೋಡಿರೇ

ಕೂಡಲಸಂಗಮದೇವಾ.

ಇಳೆಯ ನರಳಿಕೆಗೆ ಚಿಕಿತ್ಸೆ

ನಮಗಿರುವುದು ಒಂದೇ ಭೂಮಿ. ಅದನ್ನು ಸೊರಗಿಸಿದರೆ ಬಳಲುವವರು ನಾವೇ ಎನ್ನುವ ಪ್ರಜ್ಞೆ ಮೂಡುವವರೆಗೆ ನರಳಿಕೆ ತಪ್ಪಿದ್ದಲ್ಲ

ಚಂದನವನ

ಹಬ್ಬುವ ಹೆಬ್ಬಯಕೆಯ ಚಿಗುರು ಲತೆ

ಉತ್ತರ ಕನ್ನಡದ ಶಿರಸಿಯಲ್ಲಿ ಹುಟ್ಟಿ ನ್ಯೂಜಿಲೆಂಡ್‌ನಲ್ಲಿ ಬೆಳೆದು ಮತ್ತೀಗ ಚಿತ್ರರಂಗದ ಮೂಲಕ ತವರಿನಲ್ಲಿಯೇ ಬೇರೂರಿ ಬೆಳೆಯುವ ಹಂಬಲದಲ್ಲಿರುವ ಸುಂದರಿ ಲತಾ ಹೆಗಡೆ. ಮಹೇಶ್‌ ಬಾಬು ನಿರ್ದೇಶನದ ‘ಅತಿರಥ’ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿರುವ ಇವರಿಗೆ ಒಳ್ಳೆಯ ಅವಕಾಶಗಳು ಸಿಕ್ಕರೆ ಇಲ್ಲಿಯೇ ನೆಲೆಯೂರುವ ಬಯಕೆ ಇದೆ.

‘ಹೀರೊಯಿನ್‌’ ಹಾಡು ಪಾಡು

ಹಾಸ್ಯದ ರೂಪದಲ್ಲಿ ಒಂದು ಸಂದೇಶವನ್ನೂ ನೀಡಿದ್ದೇವೆ. ಬದುಕಿನಲ್ಲಿ ಬರುವ ಕಷ್ಟಗಳನ್ನು ಕಾಮಿಡಿಯ ದೃಷ್ಟಿಕೋನದಿಂದಲೇ ನೋಡುವ ಪ್ರಯತ್ನ ಇದು’ ಎಂದು ಬಾಹುಬಲಿ ವಿವರಿಸಿದರು.

ಪೊಲೀಸ್ ದಿರಿಸಿನಲ್ಲಿ ಹುಚ್ಚ ವೆಂಕಟ್

ಈ ಸಿನಿಮಾದಲ್ಲಿ ವೆಂಕಟ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಪೊಲೀಸರಿಗೆ ಜನ ಬೆಲೆ ಕೊಡುವುದು ಅವರ ಖಾಕಿ ಬಟ್ಟೆ ನೋಡಿ ಅಲ್ಲ. ಬೆಲೆ ಕೊಡುವುದು ಅವರ ಧರಿಸುವ ಪೊಲೀಸ್ ಕ್ಯಾಪ್ ನೋಡಿ’ ಎನ್ನುತ್ತ ಮಾತಿಗೆ ಇಳಿದರು ವೆಂಕಟ್.

ಮತ್ತೆ ಬರುತ್ತಿದ್ದಾನೆ ‘ಕೌರವ’

ಮುಂದಿನ ತಿಂಗಳ 13ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇದೆ. ನಾನು ಹಣ ಮಾಡುವ ಉದ್ದೇಶದಿಂದ ಈ ರಂಗಕ್ಕೆ ಬಂದವನಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದು ನರೇಶ್ ಹೇಳಿಕೊಂಡರು.