ಜಿಎಸ್‌ಟಿ ವಿಶೇಷ ಸಭೆ; ‘ಶೇ 20ರಷ್ಟು ಹಣ ಸ್ಥಳೀಯ ಸಂಸ್ಥೆಗಳಿಗೆ ನೀಡಲಿ’

13 Sep, 2017
ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಶೇ 20ರಷ್ಟು ಹಣವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡುವಂತೆ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಬೇಕು’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಕೆ.ಗುಣಶೇಖರ್‌ ಒತ್ತಾಯಿಸಿದರು.

‌ಬಿಬಿಎಂಪಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಎಸ್‌ಟಿ ಕುರಿತ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಎಸ್‌ಟಿಯ ಶೇ 25ರಷ್ಟು ಹಣವನ್ನು ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಬೇಕು ಎಂಬ ಪ್ರಸ್ತಾವವನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ರಾಗಿದ್ದ ವೆಂಕಯ್ಯ ನಾಯ್ಡು ಮುಂದಿಟ್ಟಿದ್ದರು. ಕೇಂದ್ರ ಸರ್ಕಾರದಿಂದ ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ಸಿಗಬಹುದು ಎಂದು ಆಶಾಭಾವನೆ ಇಟ್ಟುಕೊಂಡಿದ್ದೆವು. ಆದರೆ, ಅದು ಸುಳ್ಳಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬೆಂಗಳೂರಿನಿಂದ ಸಾಕಷ್ಟು ತೆರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ಅದರಲ್ಲಿ ಬಿಬಿಎಂಪಿಗೂ ಪಾಲು ನೀಡಬೇಕು. ಇದರಿಂದ ಪಾಲಿಕೆಯು ಸರ್ಕಾರವನ್ನು ಅವಲಂಬಿಸುವುದು ತಪ್ಪುತ್ತದೆ. ಈ ಸಂಬಂಧ ರಾಜ್ಯ ಹಣಕಾಸು ಇಲಾಖೆಯು ಜಿಎಸ್‌ಟಿ ಕೌನ್ಸಿಲ್‌ಗೆ ಪತ್ರ ಬರೆಯಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ನಾಯಕ ರಿಜ್ವಾನ್‌ ಮೊಹಮ್ಮದ್‌, ‘ಈ ಸಂಬಂಧ ಮುಂದಿನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ’ ಎಂದರು.

ಪಾಲಿಕೆಗೆ ಜಿಎಸ್‌ಟಿ ಅನ್ವಯಿಸುವ ಕುರಿತು ಉಪನ್ಯಾಸ ನೀಡಿದ ಹಿರೇಗಂಗೆ ಅಸೋಸಿಯೇಟ್‌ನ ಮಧುಕರ್‌ ಎನ್‌.ಹಿರೇಗಂಗೆ, ‘ಸಂವಿಧಾನದ ಕಲಂ 243 (ಡಬ್ಲ್ಯು)ರಲ್ಲಿ ಹೇಳಿರುವಂತೆ ಘನ ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು ಪೂರೈಕೆ, ಆರೋಗ್ಯ, ಒಳಚರಂಡಿಯಂತಹ ಸೇವೆಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ಇದೆ. ಗುತ್ತಿಗೆದಾರರು ಕಾರ್ಮಿಕರನ್ನು ಬಳಸಿಕೊಂಡು ಕಸ ಸಂಗ್ರಹಿಸಿ, ವಿಲೇವಾರಿ ಮಾಡುತ್ತಾರೆ. ಇದು ಶುದ್ಧ ಸೇವೆಯಾಗಿದೆ. ಇಲ್ಲಿ ಯಾವುದೇ ವಾಣಿಜ್ಯ ಉದ್ದೇಶವಿಲ್ಲ. ಹೀಗಾಗಿ ಇದಕ್ಕೆ ಜಿಎಸ್‌ಟಿ ಅನ್ವಯಿಸದು’ ಎಂದರು.

‘ಶಾಲೆ, ಆಸ್ಪತ್ರೆಗಳಲ್ಲಿ ಕೈಗೊಳ್ಳುವ ಸ್ವಚ್ಛತೆಯು ಸೇವೆಯಾದರೆ, ಸ್ವಚ್ಛಗೊಳಿಸಲು ಬಳಸುವ ಸೋಪು, ಫಿನಾಯಿಲ್‌ಗೆ ತೆರಿಗೆ ಪಾವತಿಸಬೇಕು. ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ನೀಡುವುದಕ್ಕೆ ತೆರಿಗೆಯಿಂದ ವಿನಾಯಿತಿ ಇದೆ’ ಎಂದು ತಿಳಿಸಿದರು.

‘ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡುವುದು ಸೇವೆಯಾಗುತ್ತದೆ. ಆದರೆ, ಫಾಗಿಂಗ್‌ಗೆ ಬಳಸುವ ರಾಸಾಯನಿಕಕ್ಕೆ ಶೇ 18ರಷ್ಟು ತೆರಿಗೆ ಪಾವತಿಸಬೇಕು. ನನ್ನ ಪ್ರಕಾರ, ಈ ಸೇವೆಗೆ ತೆರಿಗೆಯಿಂದ ವಿನಾಯಿತಿ ನೀಡಬೇಕು’ ಎಂದು ಹೇಳಿದರು.

**

ಮತದಾರರ ಪಟ್ಟಿ ತಿದ್ದುಪಡಿಗೆ ಸೂಚನೆ

ಮೇಯರ್‌ ಚುನಾವಣೆಯ ಮತದಾರರ ಪಟ್ಟಿಯನ್ನು ಜನಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 22ರ ಅನ್ವಯ ಸೂಕ್ತ ತಿದ್ದುಪಡಿ ಮಾಡುವಂತೆ ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ಬಿಬಿಎಂಪಿ ಆಯುಕ್ತರಿಗೆ ಸೆಪ್ಟೆಂಬರ್‌ 8ರಂದು ಪತ್ರ ಬರೆದಿದ್ದಾರೆ.

‘ವಿಧಾನ ಪರಿಷತ್‌ ಸದಸ್ಯರಾದ ಆರ್.ಬಿ.ತಿಮ್ಮಾಪೂರ, ಅಲ್ಲಂ ವೀರಭದ್ರಪ್ಪ, ರಘು ಆಚಾರ್, ಎನ್.ಎಸ್‌. ಬೋಸ್‌ರಾಜ, ಎಸ್.ರವಿ, ಎಂ.ಡಿ.ಲಕ್ಷ್ಮಿನಾರಾಯಣ, ಸಿ.ಆರ್.ಮನೋಹರ್ ಮತ್ತು ಅಪ್ಪಾಜಿಗೌಡ ಅವರು ಸುಳ್ಳು ದಾಖಲೆ ನೀಡಿ ಮೇಯರ್‌ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ’ ಎಂದು ಆರೋಪಿಸಿ ಪದ್ಮನಾಭ ರೆಡ್ಡಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

‘ಮತದಾರರ ಪಟ್ಟಿಯನ್ನು ತಿದ್ದುಪಡಿ ಮಾಡುವುದರಿಂದ ರಘು ಆಚಾರ್‌, ಸಿ.ಆರ್‌.ಮನೋಹರ್‌, ಅಪ್ಪಾಜಿಗೌಡ ಹಾಗೂ ಎಸ್‌.ರವಿ ಅವರನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ. ಆದರೆ, ಅವರಿಗೆ ಶಿಕ್ಷೆ ನೀಡಬೇಕು’ ಎಂದು ಒತ್ತಾಯಿಸಿದರು.

**

‘ಲೋಕೋಪಯೋಗಿ ಇಲಾಖೆಯು ನಿಗದಿಪಡಿಸಿರುವ ಎಸ್‌.ಆರ್ ದರವನ್ನು (ಷೆಡ್ಯೂಲ್‌ ಆಫ್‌ ರೇಟ್‌) ಪರಿಷ್ಕೃತಗೊಳಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆಗ್ರಹಿಸಿದರು.

‘ಗುತ್ತಿಗೆದಾರರು ಕೈಗೆತ್ತಿಕೊಳ್ಳುವ ಕಾಮಗಾರಿಗೆ ಎಸ್.ಆರ್. ದರ ಮುಖ್ಯವಾಗುತ್ತದೆ. ಈ ಹಿಂದೆ ವ್ಯಾಟ್‌ ಇತ್ತು. ಈಗ ಜಿಎಸ್‌ಟಿ ಆಗಿದ್ದು, ಅದರನ್ವಯ ಎಸ್‌.ಆರ್‌ ದರಗಳನ್ನು ನಿಗದಿಪಡಿಸಬೇಕು. ಕೂಲಿ ಕಾರ್ಮಿಕರಿಗೆ ದಿನಕ್ಕೆ ₹264 ನಿಗದಿ ಮಾಡಲಾಗಿದೆ. ಇಷ್ಟು ಕಡಿಮೆ ಕೂಲಿಗೆ ಯಾರೂ ಬರುವುದಿಲ್ಲ. ಕಾರ್ಮಿಕರನ್ನು ಒದಗಿಸುವ ಗುತ್ತಿಗೆದಾರರಿಗೆ ಶೇ 12ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಗುತ್ತಿಗೆದಾರರಿಗೆ ತೊಂದರೆ ಉಂಟಾಗುತ್ತಿದೆ’ ಎಂದರು.

‘ಪಾಲಿಕೆಗೆ ₹10,300 ಕೋಟಿ ನೀಡಿದೆ ಎಂದು ರಾಜ್ಯ ಸರ್ಕಾರದವರು ಹೇಳುತ್ತಿದ್ದಾರೆ. ಆದರೆ, ಪಾಲಿಕೆಗೆ ಈವರೆಗೆ ₹2,500 ಕೋಟಿ ಮಾತ್ರ ಬಿಡುಗಡೆಯಾಗಿದೆ. ಈ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಜಿಎಸ್‌ಟಿ ಜಾರಿ ಬಳಿಕ ಜುಲೈ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ₹1,200 ಕೋಟಿ ತೆರಿಗೆ ಬಂದಿದೆ. ಕೇಂದ್ರ ಸರ್ಕಾರಕ್ಕೆ ₹91 ಸಾವಿರ ಕೋಟಿ ಬರುವ ನಿರೀಕ್ಷೆಯಿತ್ತು. ಆದರೆ, ₹95 ಸಾವಿರ ಕೋಟಿ ತೆರಿಗೆ ಬಂದಿದೆ. ಜಿಎಸ್‌ಟಿಯಿಂದ ನಿಜವಾದ ಗುತ್ತಿಗೆದಾರರಿಗೆ ಯಾವುದೇ ತೊಂದರೆ ಇಲ್ಲ. ದೊಡ್ಡ ಗುತ್ತಿಗೆ ಕಂಪೆನಿಗಳವರು ಜಿಎಸ್‌ಟಿ ಜಾರಿಗೂ ಮುನ್ನ ಕೈಗೊಂಡ ಕಾಮಗಾರಿಗಳ ಬಿಲ್‌ಗಳನ್ನು ಇಟ್ಟುಕೊಂಡಿದ್ದಾರೆ. ಆದರೆ, ಜಿಎಸ್‌ಟಿ ಬಗ್ಗೆ ಅರಿವಿಲ್ಲದ ಸಣ್ಣಪುಟ್ಟ ಗುತ್ತಿಗೆದಾರರು ಬಿಲ್‌ಗಳನ್ನು ಇಟ್ಟುಕೊಂಡಿಲ್ಲ. ಇವರಿಗೆ ಈಗ ಸಮಸ್ಯೆಯಾಗಿದೆ’ ಎಂದು ಹೇಳಿದರು.

Read More

Comments
ಮುಖಪುಟ

ಉಕ್ರೇನ್ ರಾಯಭಾರಿ ಕೆಂಪುಕೋಟೆ ಬಳಿ ಫೋಟೊ ಕ್ಲಿಕ್ಕಿಸುತ್ತಿದ್ದಾಗ ಫೋನ್ ಕಿತ್ತು ಪರಾರಿ

ಪೊಲೀಖಾ ಅವರು ಬೆಳಗ್ಗೆ 9.15ರ ಹೊತ್ತಿಗೆ ದೆಹಲಿಯ ಕೆಂಪುಕೋಟೆ ಬಳಿ ಫೋಟೊ ತೆಗೆದುಕೊಳ್ಳುತ್ತಿದ್ದ ವೇಳೆ ಆಗಂತುಕನೊಬ್ಬ ಫೋನ್ ಕಿತ್ತು ಪರಾರಿಯಾಗಿದ್ದಾನೆ.

ಪ್ರಾಚೀನ ಭಾರತದಲ್ಲಿ ದುರ್ಗೆ ರಕ್ಷಣಾ ಸಚಿವೆ, ಲಕ್ಷ್ಮಿ ಹಣಕಾಸು ಮಂತ್ರಿ: ವೆಂಕಯ್ಯನಾಯ್ಡು

ವಿದ್ಯಾರ್ಥಿಗಳು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು. ರಾಮರಾಜ್ಯ ಎನ್ನುವುದು ಇಂದಿಗೂ ನಮ್ಮ ಇತಿಹಾಸದ ಶ್ರೇಷ್ಠ ಕಾಲಘಟ್ಟವಾಗಿದೆ. ಅದಕ್ಕೆ ಕಾರಣ ಆ ಆಡಳಿತ ವ್ಯವಸ್ಥೆಯಲ್ಲಿದ್ದ ಆದರ್ಶಗಳು. ಆದರೆ ಇತ್ತೀಚಿನ ದಿನಗಳು ಅದನ್ನು ಕೋಮು ಭಾವ ದೃಷ್ಟಿಯಲ್ಲಿ ನೋಡಲಾಗುತ್ತಿದೆ.

ಆರ್‍ಎಸ್ಎಸ್ ಭಾರತವನ್ನು ಹಿಂದೂ, ಹಿಂದಿ, ಹಿಂದೂಸ್ತಾನವನ್ನಾಗಿಸಲು ಯತ್ನಿಸುತ್ತಿದೆ

ಆರ್‍ಎಸ್ಎಸ್ ರಾಜ್ಯ ಸರ್ಕಾರಗಳನ್ನು ದುರ್ಬಲವಾಗಿಸಲು ಯತ್ನಿಸುತ್ತಿವೆ. ಇದಕ್ಕಾಗಿ ಅವರು ಒಕ್ಕೂಟವಾದವನ್ನು ಒಡೆದು ಹಿಂದಿ, ಹಿಂದೂ, ಹಿಂದೂಸ್ತಾನವನ್ನಾಗಿಸುವ ಉದ್ದೇಶವನ್ನು ಹೇರುತ್ತಿದ್ದಾರೆ. ಬಿಜೆಪಿಯೂ ಇದೇ ರೀತಿ ಮಾಡುತ್ತಿದ್ದು ಅವರ ಈ ಯತ್ನವನ್ನು ವಿಫಲಗೊಳಿಸಬೇಕಿದೆ

‘ಗುಮ್ನಾಮಿ ಬಾಬಾ ಅವರೇ ನೇತಾಜಿ ಎಂದು ಹೆಚ್ಚು ಜನ ನಂಬಿದ್ದರು’

‘ಆಯೋಗದ ಮುಂದೆ ಖುದ್ದಾಗಿ ಇಲ್ಲವೇ ಪತ್ರ ಮುಖೇನ ಮಾಹಿತಿ ನೀಡಿರುವ ಬಹುತೇಕರು ಗುಮ್ನಾಮಿ ಬಾಬಾ ಅವರೇ ನೇತಾಜಿ ಆಗಿದ್ದರು ಎಂದು ಹೇಳಿದ್ದಾರೆ...

ಸಂಗತ

ಆರೋಗ್ಯ ಬೇಕೇ? ಸ್ವಚ್ಛತೆ ಕಾಪಾಡಿ

ಮನುಷ್ಯ ಹಣ ಗಳಿಕೆಗಾಗಿ ಗುಣ ಹಾಗೂ ಆರೋಗ್ಯ ಎರಡನ್ನೂ ಪಣಕ್ಕಿಟ್ಟು ದುಡಿಯುತ್ತಿದ್ದಾನೆ. ಹಾಗೇ ಇವೆರಡನ್ನೂ ಕಳೆದುಕೊಳ್ಳುತ್ತಿದ್ದಾನೆ.

ವಸ್ತುನಿಷ್ಠತೆ ಮೆರೆಯೋಣ

ವ್ಯಕ್ತಿ ನಿಂದೆ ಮಾಡದೆಯೂ ಗಾಂಧಿ ಚಿಂತನೆಗಳ ಪುನರ್ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲವೇ? ನಕಾರಾತ್ಮಕ ದೃಷ್ಟಿಯ ಬರವಣಿಗೆಯಿಂದ ಯುವಕರನ್ನು ಹಾದಿ ತಪ್ಪಿಸಿದಂತಾಗುತ್ತದೆ.

ಕರ್ಮಸಿದ್ಧಾಂತ, ಕಾಯಕಸಿದ್ಧಾಂತ ಪೂರ್ಣ ಬೇರೆ

ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!

ಭರ್ಗೋ ದೇವಸ್ಯ ಧೀಮಹಿ ಎಂಬರು

ಒಬ್ಬರಿಗಾಗಿ ವಿಚಾರವಿಲ್ಲ ನೋಡಿರೇ

ಕೂಡಲಸಂಗಮದೇವಾ.

ಇಳೆಯ ನರಳಿಕೆಗೆ ಚಿಕಿತ್ಸೆ

ನಮಗಿರುವುದು ಒಂದೇ ಭೂಮಿ. ಅದನ್ನು ಸೊರಗಿಸಿದರೆ ಬಳಲುವವರು ನಾವೇ ಎನ್ನುವ ಪ್ರಜ್ಞೆ ಮೂಡುವವರೆಗೆ ನರಳಿಕೆ ತಪ್ಪಿದ್ದಲ್ಲ

ಚಂದನವನ

ಹಬ್ಬುವ ಹೆಬ್ಬಯಕೆಯ ಚಿಗುರು ಲತೆ

ಉತ್ತರ ಕನ್ನಡದ ಶಿರಸಿಯಲ್ಲಿ ಹುಟ್ಟಿ ನ್ಯೂಜಿಲೆಂಡ್‌ನಲ್ಲಿ ಬೆಳೆದು ಮತ್ತೀಗ ಚಿತ್ರರಂಗದ ಮೂಲಕ ತವರಿನಲ್ಲಿಯೇ ಬೇರೂರಿ ಬೆಳೆಯುವ ಹಂಬಲದಲ್ಲಿರುವ ಸುಂದರಿ ಲತಾ ಹೆಗಡೆ. ಮಹೇಶ್‌ ಬಾಬು ನಿರ್ದೇಶನದ ‘ಅತಿರಥ’ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿರುವ ಇವರಿಗೆ ಒಳ್ಳೆಯ ಅವಕಾಶಗಳು ಸಿಕ್ಕರೆ ಇಲ್ಲಿಯೇ ನೆಲೆಯೂರುವ ಬಯಕೆ ಇದೆ.

‘ಹೀರೊಯಿನ್‌’ ಹಾಡು ಪಾಡು

ಹಾಸ್ಯದ ರೂಪದಲ್ಲಿ ಒಂದು ಸಂದೇಶವನ್ನೂ ನೀಡಿದ್ದೇವೆ. ಬದುಕಿನಲ್ಲಿ ಬರುವ ಕಷ್ಟಗಳನ್ನು ಕಾಮಿಡಿಯ ದೃಷ್ಟಿಕೋನದಿಂದಲೇ ನೋಡುವ ಪ್ರಯತ್ನ ಇದು’ ಎಂದು ಬಾಹುಬಲಿ ವಿವರಿಸಿದರು.

ಪೊಲೀಸ್ ದಿರಿಸಿನಲ್ಲಿ ಹುಚ್ಚ ವೆಂಕಟ್

ಈ ಸಿನಿಮಾದಲ್ಲಿ ವೆಂಕಟ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಪೊಲೀಸರಿಗೆ ಜನ ಬೆಲೆ ಕೊಡುವುದು ಅವರ ಖಾಕಿ ಬಟ್ಟೆ ನೋಡಿ ಅಲ್ಲ. ಬೆಲೆ ಕೊಡುವುದು ಅವರ ಧರಿಸುವ ಪೊಲೀಸ್ ಕ್ಯಾಪ್ ನೋಡಿ’ ಎನ್ನುತ್ತ ಮಾತಿಗೆ ಇಳಿದರು ವೆಂಕಟ್.

ಮತ್ತೆ ಬರುತ್ತಿದ್ದಾನೆ ‘ಕೌರವ’

ಮುಂದಿನ ತಿಂಗಳ 13ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇದೆ. ನಾನು ಹಣ ಮಾಡುವ ಉದ್ದೇಶದಿಂದ ಈ ರಂಗಕ್ಕೆ ಬಂದವನಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದು ನರೇಶ್ ಹೇಳಿಕೊಂಡರು.