ತಮಿಳುನಾಡಿಗೆ ಬೇಕಿದೆ ರಾಜಕೀಯ ಸ್ಥಿರತೆ

14 Sep, 2017
ಪ್ರಜಾವಾಣಿ ವಾರ್ತೆ

ತಮಿಳುನಾಡಿನ ರಾಜಕಾರಣವೇ ಹೀಗೆ. ಅಲ್ಲಿನ ವಿದ್ಯಮಾನಗಳು ಸಿನಿಮಾಕ್ಕಿಂತ ರೋಚಕ. ಏಕೆಂದರೆ ಅಲ್ಲಿ ಸಿನಿಮಾ ಪ್ರಭಾವ ಜಾಸ್ತಿ. ಈಗ ಆಡಳಿತಾರೂಢ ಎಐಎಡಿಎಂಕೆ ಒಳಗೆ ನಡೆದಿರುವುದು, ಈಗ ನಡೆಯುತ್ತಿರುವುದು ಕೂಡ ಅದೇ ರೀತಿಯ ಸಿನಿಮೀಯ ಮಾದರಿಯ ಬೆಳವಣಿಗೆಗಳು. ಪಕ್ಷದ ಪ್ರಶ್ನಾತೀತ ನಾಯಕಿಯಾಗಿದ್ದ ಜಯಲಲಿತಾ ನಿಧನದ ನಂತರ ಏಕಾಏಕಿ ಮುನ್ನೆಲೆಗೆ ಬಂದು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ವಿ.ಕೆ. ಶಶಿಕಲಾ ಈಗ ತಮ್ಮ ಹುದ್ದೆಯಿಂದ ವಜಾ ಆಗಿದ್ದಾರೆ. ಪಕ್ಷದ ಸಾಮಾನ್ಯ ಪರಿಷತ್ತು ಮಂಗಳವಾರ ಈ ಕುರಿತು ತೆಗೆದುಕೊಂಡ ನಿರ್ಣಯ ದೂರಗಾಮಿ ಪರಿಣಾಮ ಬೀರಲಿದೆ. ಶಶಿಕಲಾ ಮಾಡಿದ್ದ ಎಲ್ಲ ನೇಮಕಗಳು ರದ್ದಾಗಿವೆ. ಪಕ್ಷವನ್ನು ಕೈವಶ ಮಾಡಿಕೊಳ್ಳುವ ಏಕೈಕ ಉದ್ದೇಶದಿಂದ ಉಪ ಪ್ರಧಾನ ಕಾರ್ಯದರ್ಶಿಯಾಗಿ ಸೋದರಳಿಯ ಟಿ.ಟಿ.ವಿ. ದಿನಕರನ್‌ ಅವರನ್ನು ಶಶಿಕಲಾ ನೇಮಿಸಿಕೊಂಡಿದ್ದರು. ಅದಕ್ಕೂ ಈಗ ಬೆಲೆ ಇಲ್ಲ. ಜಯಾ ಸಾವಿನ ಬೆನ್ನಲ್ಲೇ ಅವರು ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟು ಶಾಸಕರ ದೊಡ್ಡ ಗುಂಪನ್ನು ಚೆನ್ನೈ ಹೊರವಲಯದ ರೆಸಾರ್ಟ್‌ನಲ್ಲಿ ಕೂಡಿ ಹಾಕಿದ್ದರು. ಹಕ್ಕು ಮಂಡಿಸಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದರು. ಆದರೆ ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ಜೈಲುಪಾಲಾದ ಕಾರಣ ಮುಖ್ಯಮಂತ್ರಿ ಹುದ್ದೆಯೂ ಅವರ ಪಾಲಿಗೆ ಕನ್ನಡಿಯ ಗಂಟಾಗಿಯೇ ಉಳಿಯಿತು. ಅಧಿಕಾರ ನಡೆಸಬೇಕು ಎನ್ನುವವರಿಗೆ ಬೇಕಿರುವುದು ಅನುಭವ, ಬದ್ಧತೆ, ಜನಸೇವೆಯ ತುಡಿತ. ಅದ್ಯಾವುದೂ ಇಲ್ಲದೆ ಶರವೇಗದಲ್ಲಿ ರಾಜಕೀಯದ ತುತ್ತತುದಿಗೇರಿದ್ದ ಅವರು ಅಷ್ಟೇ ವೇಗದಲ್ಲಿ ಪಾತಾಳಕ್ಕೆ ಕುಸಿದಿದ್ದಾರೆ. ಪಕ್ಷದ ಹುದ್ದೆಯಿಂದ ಅವರ ವಜಾ, ದಿಟ್ಟ ಮತ್ತು ಸ್ವಾಗತಾರ್ಹ ನಿರ್ಧಾರ. ಸಾಮಾನ್ಯ ಪರಿಷತ್ತಿನ 2000ಕ್ಕೂ ಹೆಚ್ಚು ಸದಸ್ಯರ ಪೈಕಿ ಶೇ 95ರಷ್ಟು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು ಎನ್ನುವುದು ಈ ನಿರ್ಣಯಕ್ಕೆ ಇನ್ನಷ್ಟು ಬಲ, ಮಾನ್ಯತೆ ತಂದುಕೊಟ್ಟಿದೆ. ಆದರೆ, ‘ಇನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯೇ ಇರುವುದಿಲ್ಲ; ದಿವಂಗತ ಜಯಲಲಿತಾ ಅವರೇ ಶಾಶ್ವತ ಪ್ರಧಾನ ಕಾರ್ಯದರ್ಶಿ’ ಎನ್ನುವುದು ಮಾತ್ರ ಅಸಂಗತ. ಜಯಾ ಹೆಸರಿನ ಊರುಗೋಲನ್ನೇ ಪಕ್ಷ ಇನ್ನೂ ಎಷ್ಟು ಕಾಲ ನೆಚ್ಚಿಕೊಂಡಿರುತ್ತದೆ? ಇದರ ನಡುವೆ ಪಕ್ಷವನ್ನು ಮುನ್ನಡೆಸಲು ಸಂಯೋಜಕ, ಜಂಟಿ ಸಂಯೋಜಕ ಹುದ್ದೆ ಸೃಷ್ಟಿಸಿ ಹಿರಿಯ ನಾಯಕರಿಬ್ಬರೂ ಹಂಚಿಕೊಂಡಿರುವುದು, ಒಮ್ಮತ ಪ್ರದರ್ಶಿಸಿರುವುದು ಒಳ್ಳೆಯ ಬೆಳವಣಿಗೆ.

ಇವೆಲ್ಲವುಗಳ ನಂತರವಾದರೂ ಅಲ್ಲಿ ರಾಜಕೀಯ ಅಸ್ಥಿರತೆ ಪೂರ್ಣ ನಿವಾರಣೆ ಆಗಬೇಕಾಗಿತ್ತು. ಸದ್ಯಕ್ಕಂತೂ ಅಂತಹ ಲಕ್ಷಣಗಳು ಕಾಣಿಸುತ್ತಿಲ್ಲ. ಜಯಾ ನಿಧನದ ಬಳಿಕ ಎಐಎಡಿಎಂಕೆ ಪಕ್ಷ ಮತ್ತು ಅದರ ಸರ್ಕಾರಕ್ಕೆ ಒಂದರ ಹಿಂದೊಂದು ಕಂಟಕಗಳು ಎದುರಾಗುತ್ತಲೇ ಇವೆ. ಮೊದಲಿಗೆ ಪಕ್ಷ ಹೋಳಾಗಿ, ಕೆಲವರು ಆಗಿನ ಮುಖ್ಯಮಂತ್ರಿ ಪನ್ನೀರಸೆಲ್ವಂ ಹಿಂದೆ, ಇನ್ನು ಕೆಲವರು ಶಶಿಕಲಾ ಹಿಂದೆ ಹೋಗಿದ್ದರು. ಅನಿರೀಕ್ಷಿತ ಬೆಳವಣಿಗೆಯಲ್ಲಿ ಶಶಿಕಲಾ ಬಣದ ಪಳನಿಸ್ವಾಮಿಗೆ ಮುಖ್ಯಮಂತ್ರಿ ಸ್ಥಾನ ಒಲಿಯಿತು. ಆದರೆ ಎರಡೂ ಬಣಗಳು ಕಚ್ಚಾಟ ಮುಂದುವರಿಸಿದ್ದು ರಾಜ್ಯದ ಆಡಳಿತದ ಮೇಲೆ ದುಷ್ಪರಿಣಾಮ ಬೀರಿತ್ತು. ಈ ಗೊಂದಲಗಳೆಲ್ಲ ಮುಗಿದು ಆ. 21ರಂದು ಪನ್ನೀರಸೆಲ್ವಂ, ಪಳನಿಸ್ವಾಮಿ ಗುಂಪುಗಳು ಒಗ್ಗೂಡುವಾಗ ಶಶಿಕಲಾ ಅವರನ್ನು ಪಕ್ಷದ ಎಲ್ಲ ವ್ಯವಹಾರಗಳಿಂದ ದೂರ ಇಡಬೇಕು ಎಂಬ ಒಪ್ಪಂದವಾಗಿತ್ತು. ಈಗ ಆ ಬೇಡಿಕೆಯೂ ಈಡೇರಿದೆ. ಆದರೆ 19 ಬಂಡುಕೋರ ಶಾಸಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುವ ದಿನಕರನ್‌, ಸರ್ಕಾರದ ಸ್ಥಿರತೆಗೆ ಮಗ್ಗುಲ ಮುಳ್ಳಾಗಿಯೇ ಇದ್ದಾರೆ. ತಮ್ಮ ಹುದ್ದೆಗೆ ಕುತ್ತು ಬಂದ ನಂತರ ಅವರು ಆಡಿದ ಮಾತುಗಳನ್ನು ಕೇಳಿದರೆ ಅವರೇನೂ ಸೋಲೊಪ್ಪಿಕೊಳ್ಳುವಂತೆ ಕಾಣುತ್ತಿಲ್ಲ. ಹೀಗಾಗಿ ಪಳನಿಸ್ವಾಮಿ ನೇತೃತ್ವದ ಸರ್ಕಾರಕ್ಕೆ ಬಹುಮತ ಇದೆಯೇ ಇಲ್ಲವೇ ಎನ್ನುವುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಇಂತಹ ಅನಿಶ್ಚಯ ಮುಂದುವರಿಯುವುದು ಒಳ್ಳೆಯದಲ್ಲ. ಅಲ್ಲಿ ರಾಜಕೀಯ ಗೊಂದಲಗಳಿಗೆ ಆದಷ್ಟು ಬೇಗ ತೆರೆಬೀಳಬೇಕು; ಸ್ಥಿರತೆ ಮೂಡಬೇಕು.

Read More

Comments
ಮುಖಪುಟ

ಭಕ್ತಿಯ ಅಭಿಷೇಕದಲ್ಲಿ ಮಿಂದೆದ್ದ ಗೊಮ್ಮಟೇಶ್ವರ

ವಿರಾಗದ ಮೇರುಮೂರ್ತಿಗೆ ಅಭಿಷೇಕ ಪ್ರಾರಂಭವಾದುದು ಮಧ್ಯಾಹ್ನ 2.30ರ ವೇಳೆಗೆ. ಬೆಳಗಿನ ತಂಪು ಹೊತ್ತಿನಿಂದಲೇ ಜನ ಗೊಮ್ಮಟನ ಸನ್ನಿಧಿಯಲ್ಲಿ ಸೇರತೊಡಗಿದ್ದರು. ಮಧ್ಯಾಹ್ನ ಹನ್ನೆರಡರ ವೇಳೆಗೆ ನೆತ್ತಿಯ ಮೇಲಿನ ಸೂರ್ಯ ಕೆಂಡ ಚೆಲ್ಲುತ್ತಿದ್ದ. ಗೊಮ್ಮಟನ ಅಭಿಷೇಕಕ್ಕೆ ಕಾತರದ ಕಂಗಳಲ್ಲಿ ಸೇರಿದ ಆರು ಸಾವಿರಕ್ಕೂ ಹೆಚ್ಚಿನ ಜನಸ್ತೋಮ ಬೆವರಿನ ಅಭಿಷೇಕದಲ್ಲಿ ಸ್ವಯಂ ತೋಯತೊಡಗಿತು.

ಮೂವರು ಸಿಬಿಐ ಬಲೆಗೆ

ನೀರವ್ ಮೋದಿ ಕಂಪನಿಯ ವಹಿವಾಟು ಜವಾಬ್ದಾರಿ ಹೊತ್ತಿದ್ದ ಹೇಮಂತ್ ಭಟ್, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ(ಪಿಎನ್‌ಬಿ) ನಿವೃತ್ತ ಉಪ ವ್ಯವಸ್ಥಾಪಕ ಗೋಕುಲನಾಥ್ ಶೆಟ್ಟಿ ಮತ್ತು ಪಿನ್‌ಬಿಯ ಮತ್ತೊಬ್ಬ ಅಧಿಕಾರಿ ಮನೋಜ್ ಕಾರಟ್ ಎಂಬುವವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಭಾವ–ಬಣ್ಣದ ಜುಗಲಬಂದಿ

ಹಾಲಿನ ನಂತರದ ಸರದಿ ಕಲ್ಕಚೂರ್ಣದ್ದು. ಔಷಧಿಯುಕ್ತ ನೀರು ಬಾಹುಬಲಿಯ ಬಿಳುಪನ್ನು ತೊಡೆಯಲು ಪ್ರಯತ್ನಿಸಿತು. ನಂತರದ ಸರದಿ ಅಕ್ಕಿಹಿಟ್ಟಿನದು. ಬೆಳಗಿನ ಇಬ್ಬನಿಯನ್ನೂ ಹಿಮದ ತುಣುಕುಗಳನ್ನೂ ಒಟ್ಟಿಗೆ ಹುಡಿ ಮಾಡಿ ಎರಚಿದಂತೆ ಗೊಮ್ಮಟಮೂರ್ತಿ ಕಂಗೊಳಿಸತೊಡಗಿತು. ಮತ್ತೆ ಭಕ್ತರಿಂದ ಆರಾಧ್ಯದೈವಕ್ಕೆ ಉಘೇ ಉಘೇ.

 

 

ಕಸಾಪ ಅಧ್ಯಕ್ಷರ ಅವಧಿ ಐದು ವರ್ಷಕ್ಕೆ ಹೆಚ್ಚಳ?

‍ಪರಿಷತ್ತಿನ ನಿಬಂಧನೆಗಳಿಗೆ 20 ವರ್ಷಗಳಿಗೊಮ್ಮೆ ತಿದ್ದುಪಡಿ ತರಲು ಅವಕಾಶ ಇದೆ. ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಚುನಾವಣಾ ಸುಧಾರಣೆಗಾಗಿ ತಜ್ಞರ ಸಮಿತಿ ರಚಿಸಲಾಗಿತ್ತು. ಅದರ ವರದಿ ಮತ್ತು ಸಾರ್ವಜನಿಕರ ಅಭಿಪ್ರಾಯ ಆಧರಿಸಿ ಬದಲಾವಣೆ ಮಾಡಲಾಗುತ್ತಿದೆ ಎಂದು ಸಾಪ ಅಧ್ಯಕ್ಷ ಮನು ಬಳಿಗಾರ್ ಸ್ಪಷ್ಪಪಡಿಸಿದರು.

ಸಂಗತ

ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟು–ಪರಿಹಾರ

ಭಾರತಕ್ಕೆ ಉಳಿದಿರುವ ದಾರಿಯೆಂದರೆ, ವಿಶ್ವಸಂಸ್ಥೆ ಮತ್ತು ಅಮೆರಿಕದ ಜೊತೆಗೂಡಿ ರಾಜತಾಂತ್ರಿಕ ಮಾರ್ಗದ ಮೂಲಕ ಮಾಲ್ಡೀವ್ಸ್‌ ಬಿಕ್ಕಟ್ಟನ್ನು ಪರಿಹರಿಸಲು ಶ್ರಮಿಸುವುದು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

ಭ್ರಮಾಧೀನ ಮನಸ್ಥಿತಿಯಲ್ಲಿ ಬದುಕುತ್ತಿರುವ ಸಮುದಾಯವನ್ನು ಎಚ್ಚರಿಸಿ ಮುನ್ನಡೆಸಬೇಕಾದ ಜವಾಬ್ದಾರಿ ಸಮಾಜಕ್ಕಿದೆಯಲ್ಲವೇ?

ನಿರುದ್ಯೋಗ ವ್ಯಕ್ತಿಗತ ಸಮಸ್ಯೆಯೇ?

ಸ್ಪರ್ಧಾತ್ಮಕ ಜಗತ್ತಿನಲ್ಲಿ ಅರ್ಹತೆಯುಳ್ಳವರಷ್ಟೇ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂಬ ನಿಲುವು ತಳೆಯುವುದು ಆಷಾಡಭೂತಿತನವಾಗುತ್ತದೆ

ಜಾತಿ ಮತ್ತು ಹಿಂಸಾಚಾರದ ಸಮೀಕರಣ

ಒಂದು ವರ್ಗದ ನೀಚ ಕೃತ್ಯಗಳಿಗೆ ಮತ್ತೊಂದು ವರ್ಗವನ್ನು ಹೊಣೆಯಾಗಿಸುವ ಕೆಸರೆರಚಾಟ ಮುಂದುವರಿಯುತ್ತಿರುವವರೆಗೂ ಅಲ್ಲಿ ಅಸಹಿಷ್ಣುತೆ, ಹಿಂಸೆ ತಡೆಯುವುದು ಕಷ್ಟ.

ಮುಕ್ತಛಂದ

ಅಪ್ಪನ ನೆನಪುಗಳು

ಅಡಿಗರ ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಸಾಧನೆಯನ್ನು ಅವರ ನಿಕಟವರ್ತಿಗಳು ಹಾಗೂ ವಿಮರ್ಶಕರು ಸಾಕಷ್ಟು ದಾಖಲಿಸಿದ್ದಾರೆ. ಕೌಟುಂಬಿಕ ವ್ಯಕ್ತಿಯಾಗಿ ಅಡಿಗರು ಹೇಗಿದ್ದರು? ಅವರ ಪುತ್ರ ಪ್ರದ್ಯುಮ್ನ ಗೋಪಾಲಕೃಷ್ಣ ಅಡಿಗ ಅವರ ನೆನಪುಗಳು ಇಲ್ಲಿವೆ.

ಸ್ವಾಭಿಮಾನ ಮತ್ತು ಸಮಗ್ರ ಕಾವ್ಯ!

‘ಪ್ರಾರ್ಥನೆ’ ಕವಿತೆಯ ವಿವಾದದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಪತ್ರಕ್ಕೆ ಅಡಿಗರು ಬರೆದ ಜವಾಬು ಕವಿಗೆ ಇರಬೇಕಾದ ಸ್ವಾಭಿಮಾನವನ್ನು ಸೂಚಿಸುವಂತಿದೆ. ಸ್ವಾಭಿಮಾನ ಎನ್ನುವುದು ಸೋವಿಯಾಗಿರುವ ಇಂದಿನ ಸಂದರ್ಭದಲ್ಲಿ ಅಡಿಗರ ನಿಲುವು ಹೆಚ್ಚು ಮಹತ್ವದ್ದಾಗಿ ಕಾಣುತ್ತದೆ.

ಕನ್ನಡ ಸಾಹಿತ್ಯಲೋಕದ ವಿಷಕಂಠ

ಎಲಿಯಟ್‌ ಕೂಡ ಒಂದು ಕವನದಲ್ಲಿ ಇಷ್ಟೆಲ್ಲ ಹೇಳಲಿಲ್ಲವಲ್ಲ! ಇದು ಅಡಿಗರ ‘ಭೂಮಿಗೀತ’, ‘ಭೂತ’ ಕವಿತೆಗಳಿಗೆ ಅಮೆರಿಕದ ಕವಿಯೊಬ್ಬರ ಉದ್ಗಾರ. ಆದರೆ, ಅತ್ಯುತ್ತಮ ಕಾವ್ಯ ರಚಿಸಿಯೂ ನಿರಂತರವಾಗಿ ಟೀಕೆಗೆ, ಪ್ರತಿರೋಧಕ್ಕೆ, ಖಂಡನೆಗೆ ಗುರಿಯಾದ ಅಡಿಗರಂಥ ಕವಿ ಇನ್ನೊಬ್ಬರಿಲ್ಲ.

‘ಚಂಡೆ ಮದ್ದಳೆ’ ಕವಿಯ ನಿರಂತರ ‘ವೇಸ್ಟ್ ಲ್ಯಾಂಡ್’

ಎಲಿಯಟ್ ಇಂಗ್ಲಿಷ್‌ನಲ್ಲಿ ಮಾಡಿದುದನ್ನು ಅಡಿಗರು ಕನ್ನಡದಲ್ಲಿ ಮಾಡಿದರು. ತಟಸ್ಥವಾಗಿದ್ದ ಸಾಹಿತ್ಯದಲ್ಲಿ ವಿದ್ಯುತ್ ಸಂಚಲನ ಉಂಟು ಮಾಡಿದರು. ಅಡಿಗರ ನಂತರ ಕನ್ನಡ ಕಾವ್ಯ ಮೊದಲಿನ ಹಾಗೆ ಇರಲಿಲ್ಲ. ಇದುವರೆಗೆ ಕನ್ನಡದಲ್ಲಿ ಇಲ್ಲದ್ದನ್ನು ಅವರು ಸೃಷ್ಟಿಸಿದರು. ಅವರನ್ನು ವಿರೋಧಿಸಿದವರು ಕೂಡ ಅವರ ನುಡಿಗಟ್ಟನ್ನು ಸ್ಪರ್ಶಿಸಿಯೇ ಹಾಗೆ ಮಾಡಬೇಕಾಯಿತು. ಇದಕ್ಕಿಂತಲೂ ಹೆಚ್ಚಿನ ಕೊಡುಗೆಯೊಂದಿದೆಯೇ?