ಹಿಂದೂ ಧರ್ಮಕ್ಕಿಂತ ವಚನಧರ್ಮ ಬೇರೆಯೇ?

14 Sep, 2017
ಪ್ರಜಾವಾಣಿ ವಾರ್ತೆ

–ಎಂ.ವ್ಹಿ. ನಾಡಕರ್ಣಿ

ವಚನಧರ್ಮವು ಹಿಂದೂ ಧರ್ಮಕ್ಕಿಂತ ಬೇರೆಯಾಗಿದೆ, ಲಿಂಗಾಯತ ಸಮಾಜವು ಹಿಂದೂ ಸಮಾಜದ ಹೊರಗಿದೆ ಎಂಬ ವಾದ ಸಂಕುಚಿತ ದೃಷ್ಟಿಯ ರಾಜಕೀಯ ಮಾಡಲು ಅನುಕೂಲವಾಗಬಹುದೇ ಹೊರತು ತಾತ್ವಿಕ ತಳಹದಿಯ ಮೇಲಾಗಲೀ ವಾಸ್ತವಿಕ ತಳಹದಿಯ ಮೇಲಾಗಲೀ ನಿಂತಿಲ್ಲ.

ನಾನು ಕನ್ನಡ ಮಾಧ್ಯಮದಲ್ಲಿಯೇ ಎಸ್.ಎಸ್.ಎಲ್.ಸಿ. ತನಕ ಓದಿದ್ದರಿಂದ ವಚನಗಳ ಪರಿಚಯ ನನಗೆ ಚಿಕ್ಕಂದಿನಿಂದಲೇ ಆಯಿತು. ವೃತ್ತಿಯಿಂದ ಅರ್ಥಶಾಸ್ತ್ರಜ್ಞನಾದರೂ, ನನಗೆ ವಚನಗಳಲ್ಲಿಯೂ ಗೀತೋಪನಿಷತ್ತುಗಳಲ್ಲಿಯೂ ಆಸಕ್ತಿ. ನಿವೃತ್ತಿಯ ನಂತರ ಇವುಗಳ ಅಧ್ಯಯನಕ್ಕೆ ಹೆಚ್ಚು ಸಮಯ ಸಿಕ್ಕಿತು. ಈ ಅಧ್ಯಯನದ ಫಲವಾಗಿ ನನ್ನ ‘Hinduism: A Gandhian Perspective’ ಪುಸ್ತಕ ಹೊರಬಂದಿದೆ. ಅದನ್ನು ಸಂಸ್ಕರಿಸಿ ‘Handbook of Hinduism’ ಎಂಬ ಪುಸ್ತಕವನ್ನು ಬರೆದೆ. ಈ ಪುಸ್ತಕಗಳಲ್ಲಿ ವಚನಧರ್ಮ, ವಿಶೇಷವಾಗಿ ಬಸವಣ್ಣನವರ ವಿಚಾರಗಳ ಕೊಡುಗೆಯ ಬಗ್ಗೆ ಚರ್ಚೆಯಿದೆ. ಹೀಗಾಗಿ ವಚನಧರ್ಮ, ಹಿಂದೂ ಧರ್ಮಕ್ಕೆ ಹೊರತಾದುದು ಎಂದು ನನಗೆ ಎಂದೂ ಅನಿಸಿಲ್ಲ. ಅವುಗಳ ಅಭಿನ್ನತೆ ನನ್ನ ಮಟ್ಟಿಗೆ ಬರೀ ಅನಿಸಿಕೆಯ ಮಾತಲ್ಲ. ಈ ವಿಚಾರ, ವಚನಗಳೊಂದಿಗೆ ಇದ್ದ ನನ್ನ ಅನೇಕ ವರ್ಷಗಳ ಪರಿಚಯ ಮತ್ತು ಗೀತೋಪನಿಷತ್ತುಗಳ ಅಧ್ಯಯನದ ಮೇಲೆ ನಿಂತಿದೆ.

ಪ್ರತಿಯೊಂದು ಧರ್ಮವೂ ಕಾಲಕ್ರಮೇಣ ಗೊಡ್ಡು ಸಂಪ್ರದಾಯಗಳಿಗೆ ಮತ್ತು ಅಂಧಶ್ರದ್ಧೆಗಳಿಗೆ ತುತ್ತಾಗುವ ಸಾಧ್ಯತೆಯಿದೆ. ವಚನಕಾರರ ಕಾಲದಲ್ಲಿ ಹಿಂದೂ ಸಮಾಜದಲ್ಲಿ ಕಂಡುಬಂದ ಜಾತಿಭೇದ, ಕರ್ಮಠತನಗಳ ////ವೈಗುಣ್ಯಗಳನ್ನು ತೊಡೆದುಹಾಕಿ ನಿಜವಾದ ಧರ್ಮ ಯಾವುದು ಎಂಬುದರ ಬಗ್ಗೆ ತಿಳಿವಳಿಕೆ ಉಂಟುಮಾಡಲು ಬಸವಣ್ಣ ಮತ್ತು ಇತರ ವಚನಕಾರರು ಒಂದು ದೊಡ್ಡ ಆಂದೋಲನವನ್ನೇ ಆರಂಭಿಸಿದರು.

ಆದರೆ ಇದರ ಅರ್ಥ, ಗೀತೋಪನಿಷತ್ತುಗಳಲ್ಲಿ ವ್ಯಕ್ತವಾದ ನಿಜವಾದ ಹಿಂದೂ ಧರ್ಮತತ್ವಗಳಿಗೆ ವಚನಗಳು ವಿರುದ್ಧವಾಗಿದ್ದವು ಎಂದಲ್ಲ. ವಚನಕಾರರ ವಿರೋಧ ಸಮಾಜದಲ್ಲಿಯ ///ವೈಗುಣ್ಯಗಳ ಬಗ್ಗೆ ಮತ್ತು ತಪ್ಪು ತಿಳಿವಳಿಕೆಗಳ ಕುರಿತು ಇತ್ತೇ ವಿನಾ ಸನಾತನ ಧರ್ಮದ ಮೂಲತತ್ವಗಳ ಬಗ್ಗೆ ಇದ್ದಿಲ್ಲ. ಅವುಗಳನ್ನು ಅವರು ಸ್ವೀಕರಿಸಿದ್ದರು ಮಾತ್ರವಲ್ಲ ತಮ್ಮ ವಚನಗಳಲ್ಲಿ ವ್ಯಕ್ತಮಾಡಿದ್ದರು ಸಹ. ಯಾವುದೇ ಧರ್ಮದಲ್ಲಿ ನಿಜವಾದ ಧರ್ಮತತ್ವಗಳಿಗೂ ಸಮಾಜದಲ್ಲಿಯ ನಡವಳಿಕೆಗಳಿಗೂ ವೈರುಧ್ಯವಿದ್ದೇ ಇರುತ್ತದೆ. ಇಂದಿನ ಲಿಂಗಾಯತ ಸಮಾಜದಲ್ಲಿ ಜನರು, ವಚನಗಳಲ್ಲಿ ಹೇಳಿದ ಪ್ರಕಾರವೇ ನಡೆಯುತ್ತಾರೆ ಎಂದು ಯಾವ ಧೈರ್ಯದಿಂದ ಹೇಳಬಹುದು? ಯಾವ ///ವೈಗುಣ್ಯಗಳನ್ನು ವಚನಕಾರರು ಅಂದು ವಿರೋಧಿಸಿದ್ದರೋ ಅಂತಹ ಜಾತಿವೈಷಮ್ಯ, ಅಸ್ಪೃಶ್ಯತೆ ಮೊದಲಾದ ಕುಂದುಕೊರತೆಗಳು ಇಂದಿನ ಲಿಂಗಾಯತ ಸಮಾಜದಲ್ಲಿಯೂ ಇವೆ. ಅವುಗಳನ್ನು ಟೀಕಿಸಿ ಇಂದಿನ ವಚನಕಾರರೊಬ್ಬರು ವಚನಗಳನ್ನು ಬರೆದರೆ ಅಥವಾ ಭಾಷಣಗಳನ್ನು ಮಾಡಿದರೆ ಅವರು ಬೇರೆಯೇ ಆದ ಧರ್ಮವನ್ನು ಪ್ರತಿಪಾದಿಸಿದಂತಾಗುತ್ತದೆಯೋ? ಅವರ ಅನುಯಾಯಿಗಳು ಬೇರೆಯಾದ ಸಮಾಜಕ್ಕೆ ಸೇರಿದವರೆಂದಾಗುತ್ತದೆಯೋ?

ವಚನ ಧರ್ಮವು ಹಿಂದೂ ಧರ್ಮಕ್ಕಿಂತ ಬೇರೆಯೆಂದು ವಾದ ಮಾಡಲು ವಚನ ಧರ್ಮದಲ್ಲಿ ದೇವರು ಒಬ್ಬನೇ (ಶಿವ) ಇದ್ದು, ಹಿಂದೂ ಧರ್ಮದಲ್ಲಿ ಅನೇಕ ದೇವರ ಆರಾಧನೆ ಇದೆ ಎಂದು ಹೇಳಲಾಗುತ್ತದೆ. ಹಾಗೆಯೇ ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಗಳು ಅದರ ಮುಖ್ಯ ಚಿಹ್ನೆಗಳಾಗಿ ಇವೆ, ಆದರೆ ವಚನಗಳು ಅವನ್ನು ವಿರೋಧಿಸಿವೆ; ಆದ್ದರಿಂದ ವಚನ ಧರ್ಮ ಬೇರೆ ಎಂದು ಹೇಳಲಾಗುತ್ತದೆ. ವೀರಶೈವ-ಲಿಂಗಾಯತ ಸಮಾಜದಲ್ಲಿಯೂ ಶಿವ ಮಾತ್ರವಲ್ಲ, ಗೌರಿ, ಗಣೇಶ, ಕುಮಾರಸ್ವಾಮಿ, ಭೈರವ ಹೀಗೆ ಅನೇಕ ದೈವಗಳ ಬಗ್ಗೆ ಭಕ್ತಿ ಮತ್ತು ಪೂಜೆಗಳಿವೆ. ಲಿಂಗಾಯತ ಸಮಾಜದಲ್ಲೂ ಜಾತಿ ವೈಷಮ್ಯ ಮತ್ತು ಅಸ್ಪೃಶ್ಯತೆಯ ಆಚರಣೆಗಳು ಇವೆ. ಆಚರಣೆಗಳ ಮಟ್ಟದಲ್ಲಿ ನೋಡಿದರೆ, ಲಿಂಗಾಯತ ಸಮಾಜ ಉಳಿದ ಹಿಂದೂಗಳ ಸಮಾಜಕ್ಕಿಂತ ಬೇರೆಯಾಗಿ ಕಾಣುವುದಿಲ್ಲ. ಆದರೆ ತಾತ್ವಿಕ ಮಟ್ಟದಲ್ಲಿಯಾದರೂ ಮೂಲಭೂತ ಭೇದಗಳಿವೆಯೋ ಎಂದು ನೋಡುವ.

ನಿಜವಾಗಿ ನೋಡಿದರೆ ಏಕದೈವತ್ವದ ಕಲ್ಪನೆ ಜಗತ್ತಿನಲ್ಲಿಯೇ ಮೊದಲಾಗಿ ಬಂದುದು ಋಗ್ವೇದದಲ್ಲಿ. ಅದರಲ್ಲಿಯ 'ಏಕಂ ಸದ್ವಿಪ್ರಾಃ ಬಹುಧಾ ವದಂತಿ' (1.164.46) ವಚನಕಾರರಿಗೆ ಗೊತ್ತಿಲ್ಲದೇ ಇರಲಿಕ್ಕಿಲ್ಲ. ಇದೊಂದೇ ಅಲ್ಲ ಇಂತಹ ಅನೇಕ ನುಡಿಗಳು ಹಲವು ಬಾರಿ ಋಗ್ವೇದದಲ್ಲಿ ಕಂಡು ಬರುತ್ತವೆ. ಉಪನಿಷತ್ತುಗಳಲ್ಲಿಯೂ ಭಗವಂತ ಒಬ್ಬನೇ - ಪರಬ್ರಹ್ಮ. ಬಸವಣ್ಣನವರು ಮಾತ್ರವಲ್ಲ ಅನೇಕ ವಚನಕಾರರು ವೇದ ಮತ್ತು ಉಪನಿಷತ್ತುಗಳನ್ನು ಅರಿತವರೇ ಆಗಿದ್ದರು. ಅವುಗಳ ಮೂಲಭೂತ ತಾತ್ವಿಕ ಉಪದೇಶಗಳನ್ನು ಅರಗಿಸಿಕೊಂಡವರು. ಅನೇಕ ವಚನಗಳಲ್ಲಿ ವೇದೋಪನಿಷತ್ತುಗಳಲ್ಲಿಯ ಶ್ಲೋಕಗಳನ್ನು ಉದ್ಧರಿಸಲಾಗಿದೆ.

ಹಿಂದೂ ಧರ್ಮದಲ್ಲಿ ಅನೇಕ ದೇವರ ಆರಾಧನೆ ಇದೆಯೆಂಬುದು ತಪ್ಪು ತಿಳಿವಳಿಕೆ. ಭಗವದ್ಗೀತೆಯ 4ನೆಯ ಅಧ್ಯಾಯದ 11ನೆಯ ಶ್ಲೋಕದಲ್ಲಿ ಯಾವ ದೇವರನ್ನು ಜನರು ಪೂಜಿಸಿದರೂ ಯಾವ ರೂಪದಲ್ಲಿ ಆರಾಧಿಸಿದರೂ ಅದೆಲ್ಲ ಒಬ್ಬನೇ ಒಬ್ಬ ಭಗವಂತನಿಗೆಯೇ ಸಲ್ಲುತ್ತದೆ ಎಂದು ಹೇಳಲಾಗಿದೆ. ಹಲವು ದೇವರಲ್ಲಿ ಒಂದು ದೇವರು ಸತ್ಯ ಉಳಿದ ದೇವರು ಸುಳ್ಳು ಎಂಬ ವಿಚಾರವಿಲ್ಲ. ಎಲ್ಲ ದೇವರೂ ಒಂದೇ ದೇವರ ಬಿಂಬಗಳು ಎಂಬ ಭಾವನೆಯಿದೆ. ಇದು ಉದಾರ ಮನೋಭಾವದ ಲಕ್ಷಣ. ಒಂದು ರೂಪದಲ್ಲಿ ಮಾತ್ರ ದೇವರನ್ನು ಪೂಜಿಸಬಹುದೆಂಬ ಒತ್ತಾಯವಿಲ್ಲ. ಯಾವ ರೂಪದಲ್ಲಿ ದೇವರನ್ನು ಆರಾಧಿಸಿದರೂ ಅದು ಭಕ್ತಿಯಿಂದ ಮಾಡಿದರೆ ಅದೇ ಒಬ್ಬ ದೇವರಿಗೇ ಸಲ್ಲುತ್ತದೆ ಎಂಬ ಭರವಸೆ ಇದೆ. 

ಒಂದು ದೇವರ ಕಲ್ಪನೆ ವಚನಗಳಲ್ಲಿ ಇದೆ, ನಿಜ. ಆದರೆ ಅದರ ಮೂಲ ಋಗ್ವೇದದಲ್ಲಿ ಮತ್ತು ಗೀತೋಪನಿಷತ್ತುಗಳಲ್ಲಿದೆ. ಲಿಂಗಾಯತರಲ್ಲಿಯ ಮುಖ್ಯ- ಏಕಮಾತ್ರ ಎಂದೂ ಹೇಳಬಹುದು- ‘ಓಂ ನಮಃ ಶಿವಾಯ’ ಜಪ ಬಂದುದೇ ಸನಾತನ ಅಥವಾ ಹಿಂದೂ ಧರ್ಮದಿಂದ. ಈ ಜಪ ಲಿಂಗಾಯತರಲ್ಲಿಯಷ್ಟೆ ಅಲ್ಲ, ಉಳಿದ ಹಿಂದೂಗಳಲ್ಲಿಯೂ ಇದೆ. 

ಗೀತೋಪನಿಷತ್ತುಗಳಲ್ಲಿ ಕರ್ಮಠತನವನ್ನು ಉಪದೇಶಿಸಿಲ್ಲ. ಇಲ್ಲಿ ಯಾವ ವಿಧಿ ಅಥವಾ ಸಂಸ್ಕಾರಗಳನ್ನು ವಿಧಿಸಿಲ್ಲ. ಗೀತಾ ಧರ್ಮದ ಒತ್ತು ನಿಷ್ಕಪಟವಾದ ಭಕ್ತಿ, ಆತ್ಮಜ್ಞಾನ ಮತ್ತು ನಿಷ್ಕಾಮ ಅಥವಾ ನಿಸ್ವಾರ್ಥ ಕರ್ಮದ ಮೇಲೆ ಮಾತ್ರ. ಈ ಸಾಧನಾ ಮಾರ್ಗಗಳನ್ನು ವಚನಗಳಲ್ಲಿಯೂ ಹೇಳಲಾಗಿದೆ. ವಚನಗಳಲ್ಲಿ ಕಾಯಕಕ್ಕೆ ಕೊಟ್ಟ ಮಹತ್ವಕ್ಕೂ ಗೀತೆಯಲ್ಲಿಯ ಕರ್ಮಮಾರ್ಗಕ್ಕೂ ಬಹಳ ಹೊಂದಾಣಿಕೆಯಿದೆ. ಈಶೋಪನಿಷತ್ತಿನಲ್ಲಿ ‘ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್ ಶತಂ ಸಮಾಃ’ (ಕೆಲಸ ಮಾಡುತ್ತಲೇ ನೂರು ವರ್ಷ ಬದುಕಬೇಕು) ಎಂದು ಹೇಳಿದುದರ ಪ್ರತಿಧ್ವನಿ ವಚನಗಳಲ್ಲಿಯೂ ಕೇಳಿಬರುತ್ತದೆ.

ಜಾತಿ ವೈಷಮ್ಯ ಹಿಂದೂ ಧರ್ಮದ ಮೂಲಭೂತ ತತ್ವವೆಂದು ಅನೇಕರು ತಪ್ಪಾಗಿ ಗಣಿಸಿದ್ದಾರೆ. ವರ್ಣವ್ಯವಸ್ಥೆಯು ಗುಣ ಮತ್ತು ಮಾಡುವ ಕೆಲಸದ ಮೇಲೆ ಅವಲಂಬಿಸಿದೆಯೆಂದು ಗೀತೆಯಲ್ಲಿದೆ. ಅದು, ಜಾತಿ ಅಥವಾ ಜನ್ಮದ ಮೇಲೆ ನಿಂತಿಲ್ಲ. ವೇದ ಮತ್ತು ಉಪನಿಷತ್ತುಗಳಲ್ಲಿಯ ಋಷಿಗಳು ಅನೇಕ ಜಾತಿಗಳಿಂದ ಬಂದವರು. ರಾಮಾಯಣ ರಚಿಸಿದ ವಾಲ್ಮೀಕಿ ಬ್ರಾಹ್ಮಣನಲ್ಲ. ಮಹಾಭಾರತ ರಚಿಸಿದ ವೇದವ್ಯಾಸನ ತಾಯಿ ಮೀನುಗಾರಳು. ಗೀತೆಯ ಆರನೆಯ ಅಧ್ಯಾಯದ 29ನೆಯ ಶ್ಲೋಕದಲ್ಲಿ ಹೀಗೆ ಹೇಳಲಾಗಿದೆ: ‘ಜ್ಞಾನದಲ್ಲಿ ಯುಕ್ತನಾದವನು ಎಲ್ಲರನ್ನೂ ಸಮಭಾವದಿಂದ ನೋಡುತ್ತಾನೆ, ಅಂದರೆ ವೈಷಮ್ಯ ಮಾಡುವುದಿಲ್ಲ. ತನ್ನನ್ನು ಎಲ್ಲರಲ್ಲೂ ಎಲ್ಲರನ್ನೂ ತನ್ನಲ್ಲಿ ನೋಡುತ್ತಾನೆ’. ಇಲ್ಲಿ ಬೋಧಿಸಿದ ಸಮದರ್ಶನ ವಿಶಾಲ ದೃಷ್ಟಿಕೋನದ ಸಮಾಜವಾದ. 

ಬ್ರಹ್ಮಾಂಡಪುರಾಣದಲ್ಲಿ ಸನಾತನ ಧರ್ಮದ ವ್ಯಾಖ್ಯೆಯಿದೆ (2.33.37-38). ಈ ಧರ್ಮದ ತಿರುಳು ಎಂದರೆ ಅಹಿಂಸೆ, ಯಾರಿಗೂ ದ್ರೋಹ ಮಾಡದೇ ಇರುವುದು, ದುರಾಶೆ ಇಲ್ಲದಿರುವುದು, ಎಲ್ಲರಲ್ಲೂ ದಯಾಭಾವ, ಮನೋನಿಗ್ರಹ, ಸತ್ಯಸಂಧತೆ, ಮೃದುಸ್ವಭಾವ, ಕ್ಷಮಾಶೀಲತೆ, ಉದಾರತೆ ಮತ್ತು ಸ್ಥೈರ್ಯ. ನೀತಿಮತ್ತೆಯೇ ಧರ್ಮದ ತಿರುಳು. ಇದೇ ತರಹ ವಚನಗಳಲ್ಲಿಯೂ ನೀತಿಮತ್ತೆಯ ಮೇಲೆಯೇ ಒತ್ತು ಇದೆ.

ಜಾತಿ ವೈಷಮ್ಯ, ಅಸ್ಪೃಶ್ಯತೆ, ಅಂಧಶ್ರದ್ಧೆಗಳ ವಿರುದ್ಧ ಭಕ್ತಿ ಆಂದೋಲನ ತಮಿಳುನಾಡಿನಲ್ಲಿ ಪ್ರಾರಂಭವಾಗಿ ಇಡೀ ಭಾರತವನ್ನೇ ವ್ಯಾಪಿಸಿತ್ತು. ಈ ಆಂದೋಲನ ಹಿಂದೂ ಸಮಾಜದೊಳಗಿನಿಂದಲೇ ಎಬ್ಬಿತ್ಟು. ಸಮಾಜವನ್ನು ಸುಧಾರಿಸುವುದು ಇದರ ಮುಖ್ಯ ಉದ್ದೇಶವಾಗಿತ್ತೇ ಹೊರತು ಅದನ್ನು ಒಡೆಯುವದು ಇದ್ದಿಲ್ಲ. ಕರ್ನಾಟಕದಲ್ಲಿಯೂ ವಚನಕಾರರ ಆಂದೋಲನದೊಡನೆ ಇತರ ಆಂದೋಲನಗಳೂ- ವಿಶೇಷತಃ ಕನಕದಾಸ ಮತ್ತು ಪುರಂದರದಾಸರವು- ಈ ಕಾರ್ಯವನ್ನು ಮಾಡಿದವು. ಅವು ಹಿಂದೂ ಧರ್ಮದ ಭಾಗವಾಗಿಯೇ ಅದರ ಒಳಗಿನಿಂದಲೇ ಹುಟ್ಟಿ ಬೆಳೆದವು.

ಹಿಂದೂ ಧರ್ಮ ಮತ್ತು ಸಮಾಜದಲ್ಲಿಯೇ ಅನೇಕ ಮತ ಸಂಪ್ರದಾಯಗಳಿವೆ. ಅವುಗಳ ವೈಶಿಷ್ಟ್ಯಗಳಿಗೆ ಅಸ್ಮಿತೆಗೆ ಯಾವ ಬಾಧೆಯೂ ಬಂದಿಲ್ಲ. ಹಾಗೆಯೇ ಹಿಂದೂ ಧರ್ಮದ ಒಳಗಿದ್ದೂ ಸಹಿತ ವಚನಧರ್ಮ ತನ್ನ ಅಸ್ಮಿತೆಯನ್ನು ಕಾಪಾಡಿಕೊಳ್ಳಬಹುದು. ಇದನ್ನೆಲ್ಲ ನಿರ್ಲಕ್ಷಿಸಿ ‘ನಾವು ಹಿಂದೂಗಳಲ್ಲ’ ಎಂದು ಹೇಳಿಕೊಂಡರೆ, ಅದು ತನ್ನ ತಾಯಿಯನ್ನೇ ನಿರಾಕರಿಸುವ ಕೃತಘ್ನತೆಯಾದೀತು.

ಲೇಖಕ: ಗುಲಬರ್ಗ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ

Read More

Comments
ಮುಖಪುಟ

ಉಕ್ರೇನ್ ರಾಯಭಾರಿ ಕೆಂಪುಕೋಟೆ ಬಳಿ ಫೋಟೊ ಕ್ಲಿಕ್ಕಿಸುತ್ತಿದ್ದಾಗ ಫೋನ್ ಕಿತ್ತು ಪರಾರಿ

ಪೊಲೀಖಾ ಅವರು ಬೆಳಗ್ಗೆ 9.15ರ ಹೊತ್ತಿಗೆ ದೆಹಲಿಯ ಕೆಂಪುಕೋಟೆ ಬಳಿ ಫೋಟೊ ತೆಗೆದುಕೊಳ್ಳುತ್ತಿದ್ದ ವೇಳೆ ಆಗಂತುಕನೊಬ್ಬ ಫೋನ್ ಕಿತ್ತು ಪರಾರಿಯಾಗಿದ್ದಾನೆ.

ಪ್ರಾಚೀನ ಭಾರತದಲ್ಲಿ ದುರ್ಗೆ ರಕ್ಷಣಾ ಸಚಿವೆ, ಲಕ್ಷ್ಮಿ ಹಣಕಾಸು ಮಂತ್ರಿ: ವೆಂಕಯ್ಯನಾಯ್ಡು

ವಿದ್ಯಾರ್ಥಿಗಳು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು. ರಾಮರಾಜ್ಯ ಎನ್ನುವುದು ಇಂದಿಗೂ ನಮ್ಮ ಇತಿಹಾಸದ ಶ್ರೇಷ್ಠ ಕಾಲಘಟ್ಟವಾಗಿದೆ. ಅದಕ್ಕೆ ಕಾರಣ ಆ ಆಡಳಿತ ವ್ಯವಸ್ಥೆಯಲ್ಲಿದ್ದ ಆದರ್ಶಗಳು. ಆದರೆ ಇತ್ತೀಚಿನ ದಿನಗಳು ಅದನ್ನು ಕೋಮು ಭಾವ ದೃಷ್ಟಿಯಲ್ಲಿ ನೋಡಲಾಗುತ್ತಿದೆ.

ಆರ್‍ಎಸ್ಎಸ್ ಭಾರತವನ್ನು ಹಿಂದೂ, ಹಿಂದಿ, ಹಿಂದೂಸ್ತಾನವನ್ನಾಗಿಸಲು ಯತ್ನಿಸುತ್ತಿದೆ

ಆರ್‍ಎಸ್ಎಸ್ ರಾಜ್ಯ ಸರ್ಕಾರಗಳನ್ನು ದುರ್ಬಲವಾಗಿಸಲು ಯತ್ನಿಸುತ್ತಿವೆ. ಇದಕ್ಕಾಗಿ ಅವರು ಒಕ್ಕೂಟವಾದವನ್ನು ಒಡೆದು ಹಿಂದಿ, ಹಿಂದೂ, ಹಿಂದೂಸ್ತಾನವನ್ನಾಗಿಸುವ ಉದ್ದೇಶವನ್ನು ಹೇರುತ್ತಿದ್ದಾರೆ. ಬಿಜೆಪಿಯೂ ಇದೇ ರೀತಿ ಮಾಡುತ್ತಿದ್ದು ಅವರ ಈ ಯತ್ನವನ್ನು ವಿಫಲಗೊಳಿಸಬೇಕಿದೆ

‘ಗುಮ್ನಾಮಿ ಬಾಬಾ ಅವರೇ ನೇತಾಜಿ ಎಂದು ಹೆಚ್ಚು ಜನ ನಂಬಿದ್ದರು’

‘ಆಯೋಗದ ಮುಂದೆ ಖುದ್ದಾಗಿ ಇಲ್ಲವೇ ಪತ್ರ ಮುಖೇನ ಮಾಹಿತಿ ನೀಡಿರುವ ಬಹುತೇಕರು ಗುಮ್ನಾಮಿ ಬಾಬಾ ಅವರೇ ನೇತಾಜಿ ಆಗಿದ್ದರು ಎಂದು ಹೇಳಿದ್ದಾರೆ...

ಸಂಗತ

ಆರೋಗ್ಯ ಬೇಕೇ? ಸ್ವಚ್ಛತೆ ಕಾಪಾಡಿ

ಮನುಷ್ಯ ಹಣ ಗಳಿಕೆಗಾಗಿ ಗುಣ ಹಾಗೂ ಆರೋಗ್ಯ ಎರಡನ್ನೂ ಪಣಕ್ಕಿಟ್ಟು ದುಡಿಯುತ್ತಿದ್ದಾನೆ. ಹಾಗೇ ಇವೆರಡನ್ನೂ ಕಳೆದುಕೊಳ್ಳುತ್ತಿದ್ದಾನೆ.

ವಸ್ತುನಿಷ್ಠತೆ ಮೆರೆಯೋಣ

ವ್ಯಕ್ತಿ ನಿಂದೆ ಮಾಡದೆಯೂ ಗಾಂಧಿ ಚಿಂತನೆಗಳ ಪುನರ್ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲವೇ? ನಕಾರಾತ್ಮಕ ದೃಷ್ಟಿಯ ಬರವಣಿಗೆಯಿಂದ ಯುವಕರನ್ನು ಹಾದಿ ತಪ್ಪಿಸಿದಂತಾಗುತ್ತದೆ.

ಕರ್ಮಸಿದ್ಧಾಂತ, ಕಾಯಕಸಿದ್ಧಾಂತ ಪೂರ್ಣ ಬೇರೆ

ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!

ಭರ್ಗೋ ದೇವಸ್ಯ ಧೀಮಹಿ ಎಂಬರು

ಒಬ್ಬರಿಗಾಗಿ ವಿಚಾರವಿಲ್ಲ ನೋಡಿರೇ

ಕೂಡಲಸಂಗಮದೇವಾ.

ಇಳೆಯ ನರಳಿಕೆಗೆ ಚಿಕಿತ್ಸೆ

ನಮಗಿರುವುದು ಒಂದೇ ಭೂಮಿ. ಅದನ್ನು ಸೊರಗಿಸಿದರೆ ಬಳಲುವವರು ನಾವೇ ಎನ್ನುವ ಪ್ರಜ್ಞೆ ಮೂಡುವವರೆಗೆ ನರಳಿಕೆ ತಪ್ಪಿದ್ದಲ್ಲ

ಚಂದನವನ

ಹಬ್ಬುವ ಹೆಬ್ಬಯಕೆಯ ಚಿಗುರು ಲತೆ

ಉತ್ತರ ಕನ್ನಡದ ಶಿರಸಿಯಲ್ಲಿ ಹುಟ್ಟಿ ನ್ಯೂಜಿಲೆಂಡ್‌ನಲ್ಲಿ ಬೆಳೆದು ಮತ್ತೀಗ ಚಿತ್ರರಂಗದ ಮೂಲಕ ತವರಿನಲ್ಲಿಯೇ ಬೇರೂರಿ ಬೆಳೆಯುವ ಹಂಬಲದಲ್ಲಿರುವ ಸುಂದರಿ ಲತಾ ಹೆಗಡೆ. ಮಹೇಶ್‌ ಬಾಬು ನಿರ್ದೇಶನದ ‘ಅತಿರಥ’ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿರುವ ಇವರಿಗೆ ಒಳ್ಳೆಯ ಅವಕಾಶಗಳು ಸಿಕ್ಕರೆ ಇಲ್ಲಿಯೇ ನೆಲೆಯೂರುವ ಬಯಕೆ ಇದೆ.

‘ಹೀರೊಯಿನ್‌’ ಹಾಡು ಪಾಡು

ಹಾಸ್ಯದ ರೂಪದಲ್ಲಿ ಒಂದು ಸಂದೇಶವನ್ನೂ ನೀಡಿದ್ದೇವೆ. ಬದುಕಿನಲ್ಲಿ ಬರುವ ಕಷ್ಟಗಳನ್ನು ಕಾಮಿಡಿಯ ದೃಷ್ಟಿಕೋನದಿಂದಲೇ ನೋಡುವ ಪ್ರಯತ್ನ ಇದು’ ಎಂದು ಬಾಹುಬಲಿ ವಿವರಿಸಿದರು.

ಪೊಲೀಸ್ ದಿರಿಸಿನಲ್ಲಿ ಹುಚ್ಚ ವೆಂಕಟ್

ಈ ಸಿನಿಮಾದಲ್ಲಿ ವೆಂಕಟ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಪೊಲೀಸರಿಗೆ ಜನ ಬೆಲೆ ಕೊಡುವುದು ಅವರ ಖಾಕಿ ಬಟ್ಟೆ ನೋಡಿ ಅಲ್ಲ. ಬೆಲೆ ಕೊಡುವುದು ಅವರ ಧರಿಸುವ ಪೊಲೀಸ್ ಕ್ಯಾಪ್ ನೋಡಿ’ ಎನ್ನುತ್ತ ಮಾತಿಗೆ ಇಳಿದರು ವೆಂಕಟ್.

ಮತ್ತೆ ಬರುತ್ತಿದ್ದಾನೆ ‘ಕೌರವ’

ಮುಂದಿನ ತಿಂಗಳ 13ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇದೆ. ನಾನು ಹಣ ಮಾಡುವ ಉದ್ದೇಶದಿಂದ ಈ ರಂಗಕ್ಕೆ ಬಂದವನಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದು ನರೇಶ್ ಹೇಳಿಕೊಂಡರು.