‘ಸಿದ್ದಗಂಗಾ ಶ್ರೀ ಹೇಳಿಕೆ; ಬಿಜೆಪಿ ಮುಖಂಡರ ಷಡ್ಯಂತ್ರ’

14 Sep, 2017
ಪ್ರಜಾವಾಣಿ ವಾರ್ತೆ

ಬಾಗಲಕೋಟೆ: ‘ಕೇಂದ್ರ ಸರ್ಕಾರ ನಿಮ್ಮನ್ನು ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸಿದೆ. ಹಾಗಾಗಿ ವೀರಶೈವ– ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ತಟಸ್ಥರಾಗಿ ಇರಿ’ ಎಂದು ಸಿದ್ದಗಂಗಾ ಶ್ರೀಗಳ ಮೇಲೆ ಬಿಜೆಪಿ ಮುಖಂಡರು ಒತ್ತಡ ಹೇರಿದ್ದಾಗಿ ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈ ಬಗ್ಗೆ ತಮಗೆ ಖಚಿತ ಸುದ್ದಿ ಬಂದಿದ್ದು, ಅಗತ್ಯಬಿದ್ದಲ್ಲಿ ಸುದ್ದಿ ಮೂಲ ಬಹಿರಂಗಪಡಿಸುವುದಾಗಿ ಹೇಳಿದರು.

‘ಬಿಜೆಪಿ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ವಿ.ಸೋಮಣ್ಣ ಹಾಗೂ ಜಿ.ಎಸ್.ಬಸವರಾಜು ಸೇರಿ ಈ ಷಡ್ಯಂತ್ರ ರೂಪಿಸಿದ್ದಾರೆ. ಅವರೊಂದಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡರು ಕೈ ಜೋಡಿಸಿದ್ದಾರೆ’ ಎಂದು ದೂರಿದರು.

‘ರಾಜ್ಯದ ದಕ್ಷಿಣ ಭಾಗದಲ್ಲಿ ಬಸವ ಧರ್ಮವನ್ನು ಪುನರುತ್ಥಾನ ಮಾಡಿದ ಮಹಾಮಹಿಮ ಸಿದ್ಧಲಿಂಗೇಶ್ವರರ ಸಂಪ್ರದಾಯದ ಶಿವಕುಮಾರ ಶ್ರೀಗಳು, ಲಿಂಗಾಯತ ಧರ್ಮದ ಹೊರತು ಬೇರೆ ಪ್ರಸ್ತಾಪಿಸಲು ಸಾಧ್ಯವಿಲ್ಲ. ಸಚಿವ ಎಂ.ಬಿ.ಪಾಟೀಲರ ಬಳಿಯೂ
ಅದೇ ಆಶಯದೊಂದಿಗೆ ಲಿಂಗಾಯತ ಸ್ವತಂತ್ರ ಧರ್ಮ; ವೀರಶೈವ ಇತ್ತೀಚಿನ ಪದ ಎಂದು ಹೇಳಿದ್ದಾರೆ. ಅದನ್ನೇ ಒಳ್ಳೆಯ ಭಾವನೆಯಿಂದ ಪಾಟೀಲರು ಉಲ್ಲೇಖಿಸಿದ್ದರು. ಆದರೆ, ಶ್ರೀಗಳಿಗೆ ವಯೋಸಹಜವಾಗಿ ನೆನಪಿನ ಶಕ್ತಿ ದುರ್ಬಲಗೊಂಡಿರುವುದನ್ನು ದುರುಪಯೋಗಪಡಿಸಿಕೊಂಡ ವೀರಶೈವವಾದಿಗಳು, ಬೇರೆ ಹೇಳಿಕೆ ಪತ್ರವನ್ನು ತಾವೇ ಸಿದ್ಧಪಡಿಸಿ ಅದಕ್ಕೆ ಸಹಿ ಮಾಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ಪ್ರಶಸ್ತಿ ಮುಖ್ಯವಲ್ಲ. ಸಮಾಜದ ಉಳಿವು, ಬೆಳವಣಿಗೆ ಮುಖ್ಯ ಎಂಬುದನ್ನು ಕಿರಿಯ ಶ್ರೀಗಳು ಅವರಿಗೆ ಮನವರಿಕೆ ಮಾಡಿಕೊಡಲಿ ಎಂದು ಮಾತೆ ಮಹಾದೇವಿ ಮನವಿ ಮಾಡಿದರು. ಸಿದ್ದಗಂಗಾ ಶ್ರೀಗಳ ಬಗ್ಗೆ ತಮಗೆ ವೈಯಕ್ತಿಕವಾಗಿ ಗೌರವ ಇದೆ. ಆದರೆ ಶ್ರೀಗಳಿಂದ ಇಂತಹ ಹೇಳಿಕೆ ಕೊಡಿಸಿರುವುದು ನೋವಾಗಿದೆ ಎಂದರು.

‘ಸಿದ್ದಗಂಗಾ ಶ್ರೀಗಳ ಹೇಳಿಕೆಯೇ ಅಂತಿಮವಲ್ಲ. ಹೋರಾಟ ಕೂಡ ಅವರ ನಿಲುವಿನ ಮೇಲೆ ನಿಂತಿಲ್ಲ. ಇದರಿಂದ ಲಿಂಗಾಯತ ಸ್ವತಂತ್ರ ಧರ್ಮದ ಚಳವಳಿಯೇನೂ ದುರ್ಬಲವಾಗಿಲ್ಲ. ಬದಲಿಗೆ ಇನ್ನಷ್ಟು ಗಡುಸಾಗಿದೆ. ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿದೆ’ ಎಂದು ತಿಳಿಸಿದರು.

‘ಸ್ವತಂತ್ರ ಧರ್ಮ ಪ್ರಸ್ತಾಪಿಸುವ ಮೂಲಕ ನಾವು ಧರ್ಮ ಒಡೆಯುತ್ತಿದ್ದೇವೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅದು ಸರಿಯಲ್ಲ. 900 ವರ್ಷಗಳ ಹಿಂದೆಯೇ ಬಸವಣ್ಣನವರು ಸ್ಥಾಪಿಸಿದ ಧರ್ಮಕ್ಕೆ ಮನ್ನಣೆ ಕೇಳುತ್ತಿದ್ದೇವೆ. ಬಸವಣ್ಣನನ್ನು ಧರ್ಮಗುರು, ವಚನಗಳ ಧರ್ಮ ಸಂಹಿತೆ, ಕನ್ನಡವೇ ಧರ್ಮ ಭಾಷೆ ಎಂದು ಒಪ್ಪಿಕೊಂಡು ಬೇಕಿದ್ದರೆ ವೀರಶೈವರು ಲಿಂಗಾಯತ ಧರ್ಮಕ್ಕೆ ಬರಲಿ’ ಎಂದು ಹೇಳಿದರು.

ವಿನಾಶಕಾಲೇ ವಿಪರೀತ ಬುದ್ಧಿ: ಬಿಎಸ್‌ವೈ

‌‘ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ವರ್ತಿಸಿದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಮಾಡಿದ ತಪ್ಪಿನ ಅರಿವಾಗಿ ಪ್ರಾಯಶ್ಚಿತ್ತಕ್ಕಾಗಿ ಕೂಡಲಸಂಗಮದ ಬಸವಣ್ಣನವರ ಐಕ್ಯಮಂಟಪದಲ್ಲಿ ಧ್ಯಾನಕ್ಕೆ ಕೂತಿದ್ದರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬುಧವಾರ ಇಲ್ಲಿ ಲೇವಡಿ ಮಾಡಿದರು.

‘ಸಿದ್ಧಗಂಗಾ ಶ್ರೀಗಳ ಬಗ್ಗೆ ಮಾತನಾಡದೇ ಮೌನವಾಗಿರುವುದು ಸಚಿವರಿಗೆ ಒಳ್ಳೆಯದು’ ಎಂದು ಸಲಹೆ ನೀಡಿದ ಅವರು, ‘ಸಚಿವರು ಮಾಡುವ ಕೆಲಸ ಬಿಟ್ಟು ಬೇರೆ ಕೆಲಸ ಮಾಡುತ್ತಿದ್ದಾರೆ. ಇಲಾಖೆಯ ಕೆಲಸ ಮಾಡಲು ಪುರುಸೊತ್ತು ಇಲ್ಲದಿದ್ದರೆ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ನೀಡಲಿ’ ಎಂದು ಆಗ್ರಹಿಸಿದರು.

‘ಹೋರಾಟಕ್ಕೆ ಶಕ್ತಿ ಪಡೆದಿದ್ದಾರೆ’

‘ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪದಲ್ಲಿ ಕುಳಿತು ಸಚಿವ ಎಂ.ಬಿ.ಪಾಟೀಲ ಪ್ರಾಯಶ್ಚಿತ್ತ ಮಾಡಿಕೊಂಡಿಲ್ಲ. ಬದಲಿಗೆ ಹೋರಾಟ ಮುಂದುವರಿಸಿಕೊಂಡು ಹೋಗಲು ಶಕ್ತಿ ನೀಡುವಂತೆ ಧ್ಯಾನ ಮಾಡಿದ್ದಾರೆ. ಆ ಮೂಲಕ ತಮ್ಮ ಮನೋಬಲ ಹೆಚ್ಚಿಸಿಕೊಂಡಿದ್ದಾರೆ’ ಎಂದು ಯಡಿಯೂರಪ್ಪ ಹೇಳಿಕೆಗೆ ಮಾತೆ ಮಹಾದೇವಿ ತಿರುಗೇಟು ನೀಡಿದರು.

‘ಲಿಂಗಾಯತ ಸ್ವತಂತ್ರ ಧರ್ಮ ಮನ್ನಣೆಗೆ ಆಗ್ರಹಿಸಿ ಸೆಪ್ಟೆಂಬರ್‌ 24ರಂದು ಕಲಬುರ್ಗಿಯಲ್ಲಿ ನಂತರ ತೆಲಂಗಾಣದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುವುದು’ ಎಂದು ತಿಳಿಸಿದರು.

‘ಕೆಲವರ ಒತ್ತಾಯದಿಂದ ಹೇಳಿಕೆ ಬದಲು’

ಕೂಡಲಸಂಗಮ: ‘ಕೆಲವರ ಒತ್ತಾಯದಿಂದಾಗಿ ಶಿವಕುಮಾರ ಸ್ವಾಮೀಜಿ ಹೇಳಿಕೆ ಬದಲಿಸಿದ್ದಾರೆ. ಆದರೆ, ಸಿದ್ಧಗಂಗಾಮಠ ಬಸವಣ್ಣನ ಸಂಪ್ರದಾಯದ ಯಡಿಯೂರು ಸಿದ್ಧಲಿಂಗೇಶ್ವರ ಪರಂಪರೆಯ ಮಠ. ಬಸವಣ್ಣ ಎಂದರೆ ಲಿಂಗಾಯತ; ಸಿದ್ದಲಿಂಗ ಶಿವಯೋಗಿ ಎಂದರೆ ವಚನ ಸಾಹಿತ್ಯ ಎಂಬುದನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದರು.

‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಮಾತುಗಳನ್ನು ಕೆಲವರು ತಿರುಚುವ ಪ್ರಯತ್ನ ಮಾಡಿದ್ದರು. ಅದೇ ರೀತಿ ಲಿಂಗಾಯತ ಧರ್ಮ ಚಳವಳಿಯಲ್ಲಿ, ಸಿದ್ಧಗಂಗಾ ಶ್ರೀಗಳ ಲಿಂಗಾಯತ ಪರವಾದ ನುಡಿಗಳನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಪ್ರಯತ್ನವನ್ನು ಕೆಲವರು ಮಾಡಿದ್ದಾರೆ. ನಮ್ಮೆಲ್ಲರಿಗೂ ಶ್ರೀಗಳ ಆಶಿರ್ವಾದ ಇದ್ದೇ ಇದೆ. ಸಚಿವ ಎಂ.ಬಿ.ಪಾಟೀಲ ಯಾವುದೇ ರೀತಿಯ ಗೊಂದಲಕ್ಕೆ ಕಿವಿಗೊಡದೇ ವಚನ ಎಂಬ ಹೆದ್ದಾರಿಯಲ್ಲಿ ಮುನ್ನಡೆಯಲಿ’ ಎಂದರು.

* ಸಂಪ್ರದಾಯವಾದಿಗಳು, ಪುರೋಹಿತಶಾಹಿಗಳ ಕಿರುಕುಳ, ಷಡ್ಯಂತ್ರ ಬಸವಣ್ಣನ ಕಾಲದಿಂದಲೂ ಇದೆ. ಎಂ.ಬಿ.ಪಾಟೀಲರು ಹಾಗೂ ಅವರ ಮಿತ್ರರು ಅದನ್ನು ಧೈರ್ಯದಿಂದ ಎದುರಿಸಿ ಮುನ್ನಡೆಯಬೇಕು

- ಮಾತೆ ಮಹಾದೇವಿ, ಅಧ್ಯಕ್ಷೆ, ಕೂಡಲಸಂಗಮ ಬಸವಧರ್ಮ ಪೀಠ

Read More

Comments
ಮುಖಪುಟ

ಭಕ್ತಿಯ ಅಭಿಷೇಕದಲ್ಲಿ ಮಿಂದೆದ್ದ ಗೊಮ್ಮಟೇಶ್ವರ

ವಿರಾಗದ ಮೇರುಮೂರ್ತಿಗೆ ಅಭಿಷೇಕ ಪ್ರಾರಂಭವಾದುದು ಮಧ್ಯಾಹ್ನ 2.30ರ ವೇಳೆಗೆ. ಬೆಳಗಿನ ತಂಪು ಹೊತ್ತಿನಿಂದಲೇ ಜನ ಗೊಮ್ಮಟನ ಸನ್ನಿಧಿಯಲ್ಲಿ ಸೇರತೊಡಗಿದ್ದರು. ಮಧ್ಯಾಹ್ನ ಹನ್ನೆರಡರ ವೇಳೆಗೆ ನೆತ್ತಿಯ ಮೇಲಿನ ಸೂರ್ಯ ಕೆಂಡ ಚೆಲ್ಲುತ್ತಿದ್ದ. ಗೊಮ್ಮಟನ ಅಭಿಷೇಕಕ್ಕೆ ಕಾತರದ ಕಂಗಳಲ್ಲಿ ಸೇರಿದ ಆರು ಸಾವಿರಕ್ಕೂ ಹೆಚ್ಚಿನ ಜನಸ್ತೋಮ ಬೆವರಿನ ಅಭಿಷೇಕದಲ್ಲಿ ಸ್ವಯಂ ತೋಯತೊಡಗಿತು.

ಮೂವರು ಸಿಬಿಐ ಬಲೆಗೆ

ನೀರವ್ ಮೋದಿ ಕಂಪನಿಯ ವಹಿವಾಟು ಜವಾಬ್ದಾರಿ ಹೊತ್ತಿದ್ದ ಹೇಮಂತ್ ಭಟ್, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ(ಪಿಎನ್‌ಬಿ) ನಿವೃತ್ತ ಉಪ ವ್ಯವಸ್ಥಾಪಕ ಗೋಕುಲನಾಥ್ ಶೆಟ್ಟಿ ಮತ್ತು ಪಿನ್‌ಬಿಯ ಮತ್ತೊಬ್ಬ ಅಧಿಕಾರಿ ಮನೋಜ್ ಕಾರಟ್ ಎಂಬುವವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಭಾವ–ಬಣ್ಣದ ಜುಗಲಬಂದಿ

ಹಾಲಿನ ನಂತರದ ಸರದಿ ಕಲ್ಕಚೂರ್ಣದ್ದು. ಔಷಧಿಯುಕ್ತ ನೀರು ಬಾಹುಬಲಿಯ ಬಿಳುಪನ್ನು ತೊಡೆಯಲು ಪ್ರಯತ್ನಿಸಿತು. ನಂತರದ ಸರದಿ ಅಕ್ಕಿಹಿಟ್ಟಿನದು. ಬೆಳಗಿನ ಇಬ್ಬನಿಯನ್ನೂ ಹಿಮದ ತುಣುಕುಗಳನ್ನೂ ಒಟ್ಟಿಗೆ ಹುಡಿ ಮಾಡಿ ಎರಚಿದಂತೆ ಗೊಮ್ಮಟಮೂರ್ತಿ ಕಂಗೊಳಿಸತೊಡಗಿತು. ಮತ್ತೆ ಭಕ್ತರಿಂದ ಆರಾಧ್ಯದೈವಕ್ಕೆ ಉಘೇ ಉಘೇ.

 

 

ಕಸಾಪ ಅಧ್ಯಕ್ಷರ ಅವಧಿ ಐದು ವರ್ಷಕ್ಕೆ ಹೆಚ್ಚಳ?

‍ಪರಿಷತ್ತಿನ ನಿಬಂಧನೆಗಳಿಗೆ 20 ವರ್ಷಗಳಿಗೊಮ್ಮೆ ತಿದ್ದುಪಡಿ ತರಲು ಅವಕಾಶ ಇದೆ. ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಚುನಾವಣಾ ಸುಧಾರಣೆಗಾಗಿ ತಜ್ಞರ ಸಮಿತಿ ರಚಿಸಲಾಗಿತ್ತು. ಅದರ ವರದಿ ಮತ್ತು ಸಾರ್ವಜನಿಕರ ಅಭಿಪ್ರಾಯ ಆಧರಿಸಿ ಬದಲಾವಣೆ ಮಾಡಲಾಗುತ್ತಿದೆ ಎಂದು ಸಾಪ ಅಧ್ಯಕ್ಷ ಮನು ಬಳಿಗಾರ್ ಸ್ಪಷ್ಪಪಡಿಸಿದರು.

ಸಂಗತ

ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟು–ಪರಿಹಾರ

ಭಾರತಕ್ಕೆ ಉಳಿದಿರುವ ದಾರಿಯೆಂದರೆ, ವಿಶ್ವಸಂಸ್ಥೆ ಮತ್ತು ಅಮೆರಿಕದ ಜೊತೆಗೂಡಿ ರಾಜತಾಂತ್ರಿಕ ಮಾರ್ಗದ ಮೂಲಕ ಮಾಲ್ಡೀವ್ಸ್‌ ಬಿಕ್ಕಟ್ಟನ್ನು ಪರಿಹರಿಸಲು ಶ್ರಮಿಸುವುದು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

ಭ್ರಮಾಧೀನ ಮನಸ್ಥಿತಿಯಲ್ಲಿ ಬದುಕುತ್ತಿರುವ ಸಮುದಾಯವನ್ನು ಎಚ್ಚರಿಸಿ ಮುನ್ನಡೆಸಬೇಕಾದ ಜವಾಬ್ದಾರಿ ಸಮಾಜಕ್ಕಿದೆಯಲ್ಲವೇ?

ನಿರುದ್ಯೋಗ ವ್ಯಕ್ತಿಗತ ಸಮಸ್ಯೆಯೇ?

ಸ್ಪರ್ಧಾತ್ಮಕ ಜಗತ್ತಿನಲ್ಲಿ ಅರ್ಹತೆಯುಳ್ಳವರಷ್ಟೇ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂಬ ನಿಲುವು ತಳೆಯುವುದು ಆಷಾಡಭೂತಿತನವಾಗುತ್ತದೆ

ಜಾತಿ ಮತ್ತು ಹಿಂಸಾಚಾರದ ಸಮೀಕರಣ

ಒಂದು ವರ್ಗದ ನೀಚ ಕೃತ್ಯಗಳಿಗೆ ಮತ್ತೊಂದು ವರ್ಗವನ್ನು ಹೊಣೆಯಾಗಿಸುವ ಕೆಸರೆರಚಾಟ ಮುಂದುವರಿಯುತ್ತಿರುವವರೆಗೂ ಅಲ್ಲಿ ಅಸಹಿಷ್ಣುತೆ, ಹಿಂಸೆ ತಡೆಯುವುದು ಕಷ್ಟ.

ಮುಕ್ತಛಂದ

ಅಪ್ಪನ ನೆನಪುಗಳು

ಅಡಿಗರ ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಸಾಧನೆಯನ್ನು ಅವರ ನಿಕಟವರ್ತಿಗಳು ಹಾಗೂ ವಿಮರ್ಶಕರು ಸಾಕಷ್ಟು ದಾಖಲಿಸಿದ್ದಾರೆ. ಕೌಟುಂಬಿಕ ವ್ಯಕ್ತಿಯಾಗಿ ಅಡಿಗರು ಹೇಗಿದ್ದರು? ಅವರ ಪುತ್ರ ಪ್ರದ್ಯುಮ್ನ ಗೋಪಾಲಕೃಷ್ಣ ಅಡಿಗ ಅವರ ನೆನಪುಗಳು ಇಲ್ಲಿವೆ.

ಸ್ವಾಭಿಮಾನ ಮತ್ತು ಸಮಗ್ರ ಕಾವ್ಯ!

‘ಪ್ರಾರ್ಥನೆ’ ಕವಿತೆಯ ವಿವಾದದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಪತ್ರಕ್ಕೆ ಅಡಿಗರು ಬರೆದ ಜವಾಬು ಕವಿಗೆ ಇರಬೇಕಾದ ಸ್ವಾಭಿಮಾನವನ್ನು ಸೂಚಿಸುವಂತಿದೆ. ಸ್ವಾಭಿಮಾನ ಎನ್ನುವುದು ಸೋವಿಯಾಗಿರುವ ಇಂದಿನ ಸಂದರ್ಭದಲ್ಲಿ ಅಡಿಗರ ನಿಲುವು ಹೆಚ್ಚು ಮಹತ್ವದ್ದಾಗಿ ಕಾಣುತ್ತದೆ.

ಕನ್ನಡ ಸಾಹಿತ್ಯಲೋಕದ ವಿಷಕಂಠ

ಎಲಿಯಟ್‌ ಕೂಡ ಒಂದು ಕವನದಲ್ಲಿ ಇಷ್ಟೆಲ್ಲ ಹೇಳಲಿಲ್ಲವಲ್ಲ! ಇದು ಅಡಿಗರ ‘ಭೂಮಿಗೀತ’, ‘ಭೂತ’ ಕವಿತೆಗಳಿಗೆ ಅಮೆರಿಕದ ಕವಿಯೊಬ್ಬರ ಉದ್ಗಾರ. ಆದರೆ, ಅತ್ಯುತ್ತಮ ಕಾವ್ಯ ರಚಿಸಿಯೂ ನಿರಂತರವಾಗಿ ಟೀಕೆಗೆ, ಪ್ರತಿರೋಧಕ್ಕೆ, ಖಂಡನೆಗೆ ಗುರಿಯಾದ ಅಡಿಗರಂಥ ಕವಿ ಇನ್ನೊಬ್ಬರಿಲ್ಲ.

‘ಚಂಡೆ ಮದ್ದಳೆ’ ಕವಿಯ ನಿರಂತರ ‘ವೇಸ್ಟ್ ಲ್ಯಾಂಡ್’

ಎಲಿಯಟ್ ಇಂಗ್ಲಿಷ್‌ನಲ್ಲಿ ಮಾಡಿದುದನ್ನು ಅಡಿಗರು ಕನ್ನಡದಲ್ಲಿ ಮಾಡಿದರು. ತಟಸ್ಥವಾಗಿದ್ದ ಸಾಹಿತ್ಯದಲ್ಲಿ ವಿದ್ಯುತ್ ಸಂಚಲನ ಉಂಟು ಮಾಡಿದರು. ಅಡಿಗರ ನಂತರ ಕನ್ನಡ ಕಾವ್ಯ ಮೊದಲಿನ ಹಾಗೆ ಇರಲಿಲ್ಲ. ಇದುವರೆಗೆ ಕನ್ನಡದಲ್ಲಿ ಇಲ್ಲದ್ದನ್ನು ಅವರು ಸೃಷ್ಟಿಸಿದರು. ಅವರನ್ನು ವಿರೋಧಿಸಿದವರು ಕೂಡ ಅವರ ನುಡಿಗಟ್ಟನ್ನು ಸ್ಪರ್ಶಿಸಿಯೇ ಹಾಗೆ ಮಾಡಬೇಕಾಯಿತು. ಇದಕ್ಕಿಂತಲೂ ಹೆಚ್ಚಿನ ಕೊಡುಗೆಯೊಂದಿದೆಯೇ?