ಪ್ರವಾಹ ಮರುಕಳಿಸದಂತೆ ಮುಂಜಾಗ್ರತೆ: ಸಿ.ಎಂ

14 Sep, 2017

ಬೆಂಗಳೂರು: ‘ಮಳೆಗಾಲದಲ್ಲಿ ನಗರದ ತಗ್ಗು ಪ್ರದೇಶಗಳು ಪದೇ ಪದೇ ಪ್ರವಾಹಕ್ಕೆ ತುತ್ತಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಪರಿಸ್ಥಿತಿ ಮರುಕಳಿಸದಂತೆ ರಾಜ್ಯ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಳೆಯಿಂದ ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ಬುಧವಾರ ಭೇಟಿ ಕೊಟ್ಟು ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಎಚ್‌ಎಸ್‌ಆರ್‌ ಲೇಔಟ್‌ನ 5ನೇ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ರಾಜಕಾಲುವೆ ಕಾಮಗಾರಿಯನ್ನು ಮುಖ್ಯಮಂತ್ರಿ ಪರಿಶೀಲಿಸುವಾಗ, 30 ವರ್ಷಗಳಿಂದಲೂ ಮಳೆಗಾಲದಲ್ಲಿ ನರಕಯಾತನೆ ಅನುಭವಿಸುತ್ತಿರುವುದಾಗಿ ನಿವಾಸಿಗಳು ಸಮಸ್ಯೆ ತೆರೆದಿಟ್ಟರು.

‘ಪ್ರತಿ ಬಾರಿ ಮಳೆ ಬಂದಾಗಲೂ ರಸ್ತೆಗಳ ಮೇಲೆ ಐದು ಅಡಿವರೆಗೂ ನೀರು ನಿಲ್ಲುತ್ತದೆ. ಮನೆಗಳಿಗೂ ನೀರು ನುಗ್ಗಿ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳು, ಗೃಹೋಪಯೋಗಿ ವಸ್ತುಗಳು ಮಳೆ ನೀರಿನಲ್ಲಿ ಮುಳುಗಿ, ಹಾನಿಗೀಡಾಗಿವೆ. ನಮಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಎಚ್‌ಎಸ್‌ಆರ್‌ ಬಡಾವಣೆಯ 6ನೇ ಸೆಕ್ಟರ್‌ ನಿವಾಸಿ ಅಪೂರ್ವ ಅವರು ಮನವಿ ಮಾಡಿದರು.

‘ಒಳಚರಂಡಿ ನೀರು ರಾಜಕಾಲುವೆಯಲ್ಲಿ ಹರಿದು, ಮಳೆ ಬಂದಾಗ ತಗ್ಗು ಪ್ರದೇಶಕ್ಕೆ ನುಗ್ಗುತ್ತಿದೆ. ಜಲಮಂಡಳಿ ಅಧಿಕಾರಿಗಳು ಸಮಸ್ಯೆ ನಿವಾರಿಸುತ್ತಿಲ್ಲ’ ಎಂದು ಎಚ್‌ಎಸ್‌ಆರ್‌ ಬಡಾವಣೆಯ 3ನೇ ಸೆಕ್ಟರ್‌ ಮತ್ತು 7ನೇ ಸೆಕ್ಟರ್‌ ನಿವಾಸಿಗಳು, ಮುಖ್ಯಮಂತ್ರಿ ಸಮ್ಮುಖದಲ್ಲೇ ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ವಿರುದ್ಧ ಹರಿಹಾಯ್ದರು.

‘ಸಮಸ್ಯೆ ಮರುಕಳಿಸುತ್ತಿದ್ದ ಸ್ಥಳಗಳಲ್ಲಿ ರಾಜಕಾಲುವೆ ಪುನಶ್ಚೇತನಗೊಳಿಸಲಾಗಿದೆ. ಅಲ್ಲಿ ಈ ಬಾರಿ ಸಮಸ್ಯೆ ಕಾಣಿಸಿಕೊಂಡಿಲ್ಲ. ಪುನಶ್ಚೇತನಗೊಳಿಸಲು ಬಾಕಿ ಇರುವ ಸ್ಥಳಗಳಲ್ಲಿ ಪ್ರವಾಹ ಉಂಟಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ನಗರದ 830 ಕಿ.ಮೀ. ರಾಜಕಾಲುವೆ ಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲಿನಿಂದ ಸಮಸ್ಯೆ ಸರಿಪಡಿಸಿದ್ದರೆ ಪರಿಸ್ಥಿತಿ ಇಷ್ಟೊಂದು ಬಿಗಡಾಯಿಸುತ್ತಿರಲಿಲ್ಲ’ ಎಂದು ಪರೋಕ್ಷವಾಗಿ ಹಿಂದಿನ ಸರ್ಕಾರಗಳ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಜೆ.ಸಿ.ರಸ್ತೆಯ ಕುಂಬಾರಗುಂಡಿ ರಾಜಕಾಲುವೆಯಲ್ಲಿ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ಮುಖ್ಯಮಂತ್ರಿ, ರಾಜಕಾಲುವೆಗೆ ಅಡ್ಡಿಯಾಗಿರುವ ಮೂರು ಕಟ್ಟಡಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಆದೇಶ ನೀಡಿದರು. ಈ ರಾಜಕಾಲುವೆ ಬಳಿ ಅನೈರ್ಮಲ್ಯದಿಂದ ಹರಡಿರುವ ದುರ್ನಾತ ಸಹಿಸಲಾಗದೆ ಮುಖ್ಯಮಂತ್ರಿಯೂ ಕ್ಷಣ ಕಾಲ ಮೂಗು ಮುಚ್ಚಿಕೊಂಡರು.

ಮಳೆ ನೀರಿನಿಂದ ಜಲಾವೃತವಾಗಿದ್ದ ಶಾಂತಿನಗರದ ಬಿಎಂಟಿಸಿ ಡಿಪೊಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಯಿಂದ ಸಮಸ್ಯೆ ಆಲಿಸಿದರು. ಮಳೆ ನೀರು ನಿಲ್ಲದಂತೆ ಹೊಸ ರಾಜಗಾಲುವೆ ನಿರ್ಮಿಸಲು ಸರ್ವೆ ನಡೆಸಿ, ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಮಮೂರ್ತಿ ನಗರ ವಾರ್ಡಿನ ಅಂಬೇಡ್ಕರ್‌ ನಗರಕ್ಕೆ ‌‌‌ಸಿದ್ದರಾಮಯ್ಯ ಭೇಟಿ ಕೊಟ್ಟಾಗ, ಕೊಳಚೆ ಪ್ರದೇಶದ ನಿವಾಸಿಗಳು ಸಮಸ್ಯೆಗಳ ಸರಮಾಲೆಯನ್ನೇ ತೆರೆದಿಟ್ಟರು. ‘ರಾಜಕಾಲುವೆಯ ಹೂಳು ತಂದು ರಾಶಿಹಾಕಿದ್ದಾರೆ. ಇದರಿಂದ ದುರ್ನಾತ ಬೀರುತ್ತಿದೆ. ಮಳೆ ಬಂದಾಗ ನೀರು ನಿಂತು ವಾಸ ಮಾಡಲು ಆಗುತ್ತಿಲ್ಲ’ ಎಂದು ಮಹಿಳೆಯರು ಗೋಳು ತೋಡಿಕೊಂಡರು.

ಕೆ.ಆರ್‌.ಪುರದ ಪೈ ಬಡಾವಣೆಯ ತಗ್ಗು ಪ್ರದೇಶಕ್ಕೆ ಭೇಟಿ ನೀಡಿದಾಗ, ‘ಒಳಚರಂಡಿ ನೀರು ಮತ್ತು ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ. ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನೆಲಮಹಡಿಯಲ್ಲಿ ವಾರಗಟ್ಟಲೆ ನೀರು ನಿಂತು ಹೊರಬರದ ಸ್ಥಿತಿ ಇದೆ’ ಎಂದು ನಿವಾಸಿಗಳು ಸಮಸ್ಯೆ ವಿವರಿಸಿದರು.

ಸಚಿವರಾದ ಎಂ.ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್‌, ಮೇಯರ್‌ ಜಿ.ಪದ್ಮಾವತಿ, ಶಾಸಕರಾದ ಎನ್‌.ಎ.ಹ್ಯಾರೀಸ್‌, ಬೈರತಿ ಬಸವರಾಜು, ಸತೀಶ್‌ ರೆಡ್ಡಿ ಮುಖ್ಯಮಂತ್ರಿ ಜತೆಗಿದ್ದರು.

ಕೈಕೊಟ್ಟ ವೋಲ್ವೊ ಬಸ್‌ಗಳು

ಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ಬಿಎಂಟಿಸಿ ವೋಲ್ವೊ ಬಸ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿ, ರಾಮಮೂರ್ತಿನಗರದ ಮುಖ್ಯರಸ್ತೆ ಮಧ್ಯೆಯೇ ನಿಂತಿತು. ಹೀಗಾಗಿ, ಮುಖ್ಯಮಂತ್ರಿ ನಗರ ಪ್ರದಕ್ಷಿಣೆ ಮೊಟಕುಗೊಳಿಸಿದರು.

20 ನಿಮಿಷ ಕಳೆದರೂ ಬಸ್‌ ದುರಸ್ತಿಯಾಗದಿದ್ದಾಗ ಮುಖ್ಯಮಂತ್ರಿ, ಎನ್‌ಆರ್‌ಐ ಲೇಔಟ್‌ ಮಾರ್ಗವಾಗಿ ಕಲ್ಕೆರೆ ಮುಖ್ಯರಸ್ತೆ ಮತ್ತು ಕಲ್ಕೆರೆ ಕೆರೆ ವೀಕ್ಷಣೆಗೆ ಹೋಗಬೇಕಿದ್ದ ಯೋಜನೆ ಕೈಬಿಟ್ಟರು. ವೈಟ್‌ಫೀಲ್ಡ್‌ನ ಗರುಡಾಚಾರ್‌ ಪಾಳ್ಯದಲ್ಲಿ ಶಾಲೆ ಉದ್ಘಾಟನೆಗೆ ಕಾರಿನಲ್ಲಿ ಹೋದರು.

ಇದಕ್ಕೂ ಮೊದಲು ಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ಬಿಳಿ ಬಣ್ಣದ ವೋಲ್ವೊ ಬಸ್‌ನಲ್ಲಿ ಹವಾನಿಯಂತ್ರಣ ವ್ಯವಸ್ಥೆ ಕೈಕೊಟ್ಟಿದ್ದರಿಂದ ಶಾಂತಿನಗರದಲ್ಲಿ ಬಸ್‌ ಬದಲಿಸಿ, ನೀಲಿ ಬಣ್ಣದ ವೋಲ್ವೊ ಬಸ್‌ ಹತ್ತಿದ್ದರು. ಆ ಬಸ್‌ ಕೂಡ ಕೊನೆ ಹಂತದಲ್ಲಿ ಕೈಕೊಟ್ಟಿತು.

ಸುಸಜ್ಜಿತ ಬಸ್‌ಗಳ ವ್ಯವಸ್ಥೆ ಮಾಡಿಲ್ಲವೆಂದು ಶಾಸಕ ಬೈರತಿ ಬಸವರಾಜು ಬಿಬಿಎಂಪಿ ಮತ್ತು ಬಿಎಂಟಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಮುಖ್ಯಮಂತ್ರಿ ಕೂಡ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಎರಡೂ ಬಸ್‌ಗಳ ಚಾಲಕರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ‘ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಸಂಚಾರ ಅಸ್ತವ್ಯಸ್ತ

ಮುಖ್ಯಮಂತ್ರಿ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ಹೊರಟಾಗ ಪ್ರಮುಖ ರಸ್ತೆಗಳಲ್ಲಿ ಜನರು ಟ್ರಾಫಿಕ್‌ ಕಿರಿಕಿರಿ ಅನುಭವಿಸಬೇಕಾಯಿತು. ವಿಲ್ಸನ್‌ ಗಾರ್ಡ್‌ನಿಂದ ಡೇರಿ ಸರ್ಕಲ್‌ನ ಮೇಲ್ಸೇತುವೆವರೆಗೆ ಹೊಸೂರು ರಸ್ತೆಯಲ್ಲಿ ಸಂಚಾರ ಅಸ್ತವ್ಯವಸ್ತಗೊಂಡಿತು. ಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ಬಸ್‌ ಮತ್ತು ಬೆಂಗಾವಲು ವಾಹನಗಳೂ ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡವು. ಸುಮಾರು 15 ನಿಮಿಷ ಕಾಲ ಮುಖ್ಯಮಂತ್ರಿಗೂ ಟ್ರಾಫಿಕ್‌ ಬಿಸಿ ತಟ್ಟಿತು. ಈ ರಸ್ತೆಯಲ್ಲಿ ಸುಮಾರು ಒಂದೂವರೆ ಕಿ.ಮೀ.ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

Read More

Comments
ಮುಖಪುಟ

ಉಕ್ರೇನ್ ರಾಯಭಾರಿ ಕೆಂಪುಕೋಟೆ ಬಳಿ ಫೋಟೊ ಕ್ಲಿಕ್ಕಿಸುತ್ತಿದ್ದಾಗ ಫೋನ್ ಕಿತ್ತು ಪರಾರಿ

ಪೊಲೀಖಾ ಅವರು ಬೆಳಗ್ಗೆ 9.15ರ ಹೊತ್ತಿಗೆ ದೆಹಲಿಯ ಕೆಂಪುಕೋಟೆ ಬಳಿ ಫೋಟೊ ತೆಗೆದುಕೊಳ್ಳುತ್ತಿದ್ದ ವೇಳೆ ಆಗಂತುಕನೊಬ್ಬ ಫೋನ್ ಕಿತ್ತು ಪರಾರಿಯಾಗಿದ್ದಾನೆ.

ಪ್ರಾಚೀನ ಭಾರತದಲ್ಲಿ ದುರ್ಗೆ ರಕ್ಷಣಾ ಸಚಿವೆ, ಲಕ್ಷ್ಮಿ ಹಣಕಾಸು ಮಂತ್ರಿ: ವೆಂಕಯ್ಯನಾಯ್ಡು

ವಿದ್ಯಾರ್ಥಿಗಳು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು. ರಾಮರಾಜ್ಯ ಎನ್ನುವುದು ಇಂದಿಗೂ ನಮ್ಮ ಇತಿಹಾಸದ ಶ್ರೇಷ್ಠ ಕಾಲಘಟ್ಟವಾಗಿದೆ. ಅದಕ್ಕೆ ಕಾರಣ ಆ ಆಡಳಿತ ವ್ಯವಸ್ಥೆಯಲ್ಲಿದ್ದ ಆದರ್ಶಗಳು. ಆದರೆ ಇತ್ತೀಚಿನ ದಿನಗಳು ಅದನ್ನು ಕೋಮು ಭಾವ ದೃಷ್ಟಿಯಲ್ಲಿ ನೋಡಲಾಗುತ್ತಿದೆ.

ಆರ್‍ಎಸ್ಎಸ್ ಭಾರತವನ್ನು ಹಿಂದೂ, ಹಿಂದಿ, ಹಿಂದೂಸ್ತಾನವನ್ನಾಗಿಸಲು ಯತ್ನಿಸುತ್ತಿದೆ

ಆರ್‍ಎಸ್ಎಸ್ ರಾಜ್ಯ ಸರ್ಕಾರಗಳನ್ನು ದುರ್ಬಲವಾಗಿಸಲು ಯತ್ನಿಸುತ್ತಿವೆ. ಇದಕ್ಕಾಗಿ ಅವರು ಒಕ್ಕೂಟವಾದವನ್ನು ಒಡೆದು ಹಿಂದಿ, ಹಿಂದೂ, ಹಿಂದೂಸ್ತಾನವನ್ನಾಗಿಸುವ ಉದ್ದೇಶವನ್ನು ಹೇರುತ್ತಿದ್ದಾರೆ. ಬಿಜೆಪಿಯೂ ಇದೇ ರೀತಿ ಮಾಡುತ್ತಿದ್ದು ಅವರ ಈ ಯತ್ನವನ್ನು ವಿಫಲಗೊಳಿಸಬೇಕಿದೆ

‘ಗುಮ್ನಾಮಿ ಬಾಬಾ ಅವರೇ ನೇತಾಜಿ ಎಂದು ಹೆಚ್ಚು ಜನ ನಂಬಿದ್ದರು’

‘ಆಯೋಗದ ಮುಂದೆ ಖುದ್ದಾಗಿ ಇಲ್ಲವೇ ಪತ್ರ ಮುಖೇನ ಮಾಹಿತಿ ನೀಡಿರುವ ಬಹುತೇಕರು ಗುಮ್ನಾಮಿ ಬಾಬಾ ಅವರೇ ನೇತಾಜಿ ಆಗಿದ್ದರು ಎಂದು ಹೇಳಿದ್ದಾರೆ...

ಸಂಗತ

ಆರೋಗ್ಯ ಬೇಕೇ? ಸ್ವಚ್ಛತೆ ಕಾಪಾಡಿ

ಮನುಷ್ಯ ಹಣ ಗಳಿಕೆಗಾಗಿ ಗುಣ ಹಾಗೂ ಆರೋಗ್ಯ ಎರಡನ್ನೂ ಪಣಕ್ಕಿಟ್ಟು ದುಡಿಯುತ್ತಿದ್ದಾನೆ. ಹಾಗೇ ಇವೆರಡನ್ನೂ ಕಳೆದುಕೊಳ್ಳುತ್ತಿದ್ದಾನೆ.

ವಸ್ತುನಿಷ್ಠತೆ ಮೆರೆಯೋಣ

ವ್ಯಕ್ತಿ ನಿಂದೆ ಮಾಡದೆಯೂ ಗಾಂಧಿ ಚಿಂತನೆಗಳ ಪುನರ್ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲವೇ? ನಕಾರಾತ್ಮಕ ದೃಷ್ಟಿಯ ಬರವಣಿಗೆಯಿಂದ ಯುವಕರನ್ನು ಹಾದಿ ತಪ್ಪಿಸಿದಂತಾಗುತ್ತದೆ.

ಕರ್ಮಸಿದ್ಧಾಂತ, ಕಾಯಕಸಿದ್ಧಾಂತ ಪೂರ್ಣ ಬೇರೆ

ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!

ಭರ್ಗೋ ದೇವಸ್ಯ ಧೀಮಹಿ ಎಂಬರು

ಒಬ್ಬರಿಗಾಗಿ ವಿಚಾರವಿಲ್ಲ ನೋಡಿರೇ

ಕೂಡಲಸಂಗಮದೇವಾ.

ಇಳೆಯ ನರಳಿಕೆಗೆ ಚಿಕಿತ್ಸೆ

ನಮಗಿರುವುದು ಒಂದೇ ಭೂಮಿ. ಅದನ್ನು ಸೊರಗಿಸಿದರೆ ಬಳಲುವವರು ನಾವೇ ಎನ್ನುವ ಪ್ರಜ್ಞೆ ಮೂಡುವವರೆಗೆ ನರಳಿಕೆ ತಪ್ಪಿದ್ದಲ್ಲ

ಚಂದನವನ

ಹಬ್ಬುವ ಹೆಬ್ಬಯಕೆಯ ಚಿಗುರು ಲತೆ

ಉತ್ತರ ಕನ್ನಡದ ಶಿರಸಿಯಲ್ಲಿ ಹುಟ್ಟಿ ನ್ಯೂಜಿಲೆಂಡ್‌ನಲ್ಲಿ ಬೆಳೆದು ಮತ್ತೀಗ ಚಿತ್ರರಂಗದ ಮೂಲಕ ತವರಿನಲ್ಲಿಯೇ ಬೇರೂರಿ ಬೆಳೆಯುವ ಹಂಬಲದಲ್ಲಿರುವ ಸುಂದರಿ ಲತಾ ಹೆಗಡೆ. ಮಹೇಶ್‌ ಬಾಬು ನಿರ್ದೇಶನದ ‘ಅತಿರಥ’ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿರುವ ಇವರಿಗೆ ಒಳ್ಳೆಯ ಅವಕಾಶಗಳು ಸಿಕ್ಕರೆ ಇಲ್ಲಿಯೇ ನೆಲೆಯೂರುವ ಬಯಕೆ ಇದೆ.

‘ಹೀರೊಯಿನ್‌’ ಹಾಡು ಪಾಡು

ಹಾಸ್ಯದ ರೂಪದಲ್ಲಿ ಒಂದು ಸಂದೇಶವನ್ನೂ ನೀಡಿದ್ದೇವೆ. ಬದುಕಿನಲ್ಲಿ ಬರುವ ಕಷ್ಟಗಳನ್ನು ಕಾಮಿಡಿಯ ದೃಷ್ಟಿಕೋನದಿಂದಲೇ ನೋಡುವ ಪ್ರಯತ್ನ ಇದು’ ಎಂದು ಬಾಹುಬಲಿ ವಿವರಿಸಿದರು.

ಪೊಲೀಸ್ ದಿರಿಸಿನಲ್ಲಿ ಹುಚ್ಚ ವೆಂಕಟ್

ಈ ಸಿನಿಮಾದಲ್ಲಿ ವೆಂಕಟ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಪೊಲೀಸರಿಗೆ ಜನ ಬೆಲೆ ಕೊಡುವುದು ಅವರ ಖಾಕಿ ಬಟ್ಟೆ ನೋಡಿ ಅಲ್ಲ. ಬೆಲೆ ಕೊಡುವುದು ಅವರ ಧರಿಸುವ ಪೊಲೀಸ್ ಕ್ಯಾಪ್ ನೋಡಿ’ ಎನ್ನುತ್ತ ಮಾತಿಗೆ ಇಳಿದರು ವೆಂಕಟ್.

ಮತ್ತೆ ಬರುತ್ತಿದ್ದಾನೆ ‘ಕೌರವ’

ಮುಂದಿನ ತಿಂಗಳ 13ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇದೆ. ನಾನು ಹಣ ಮಾಡುವ ಉದ್ದೇಶದಿಂದ ಈ ರಂಗಕ್ಕೆ ಬಂದವನಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದು ನರೇಶ್ ಹೇಳಿಕೊಂಡರು.