ವೃತ್ತಿಪರ ಬೈಕ್‌ ರೈಡರ್‌, ಶೂಟರ್‌ ಭಾಗಿ ಶಂಕೆ

14 Sep, 2017
ಪ್ರಜಾವಾಣಿ ವಾರ್ತೆ

ಬೆಂಗಳೂರು: ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ವೃತ್ತಿಪರ ಬೈಕ್‌ ರೈಡರ್‌ ಹಾಗೂ ಶಾರ್ಪ್‌ಶೂಟರ್‌ ಭಾಗಿಯಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಸೆ. 5ರಂದು ಗೌರಿ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು, ಹತ್ಯೆ ಮಾಡಿದ ಬಳಿಕ ಪರಾರಿಯಾಗಿದ್ದಾರೆ. ಆ ಸ್ಥಳದ ಅಪರಾಧ ಚಿತ್ರಣವನ್ನು ಗಮನಿಸಿರುವ ಅಧಿಕಾರಿಗಳು, ಇದೊಂದು ವೃತ್ತಿಪರರು ಎಸಗಿರುವ ಹತ್ಯೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅದರ ಅನ್ವಯ ರಾಜ್ಯ ಹಾಗೂ ಹೊರರಾಜ್ಯದಲ್ಲಿರುವ ವೃತ್ತಿಪರ ಬೈಕ್‌ ರೈಡರ್‌ ಹಾಗೂ ಶಾರ್ಪ್‌ ಶೂಟರ್‌ಗಳ ಬಗ್ಗೆ ಮಾಹಿತಿ ಕಲೆಹಾಕಲು ಐವರು ಇನ್‌ಸ್ಪೆಕ್ಟರ್‌ ಒಳಗೊಂಡ ತಂಡವನ್ನು ರಚಿಸಲಾಗಿದೆ. ಆ ತಂಡದ ಅಧಿಕಾರಿಗಳು, ಎರಡು ದಿನಗಳವರೆಗೆ ಹಲವೆಡೆ ಸುತ್ತಾಡಿ, ಪ್ರಾಥಮಿಕ ಮಾಹಿತಿ ಸಿದ್ಧಪಡಿಸಿದ್ದಾರೆ. ಅದನ್ನೇ ಎಸ್‌ಐಟಿ ಮುಖ್ಯಸ್ಥರಿಗೆ ನೀಡಿದ್ದಾರೆ.

‘ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ನಡೆದಿರುವ ಹಲವು ಕೊಲೆ ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಆಯಾ ತನಿಖಾಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಗೌರಿ ಹತ್ಯೆಯು ವೃತ್ತಿಪರರೇ ಎಸಗಿದ ಕೃತ್ಯ ಎಂದು ಅವರೆಲ್ಲ ಅಭಿಪ್ರಾಯಪಟ್ಟಿದ್ದಾರೆ’ ಎಂದು ಎಸ್‌ಐಟಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶೂಟರ್‌ ತಪ್ಪಿಸಿಕೊಳ್ಳಲು ರೈಡರ್ ನೆರವು:

‘ಸೆ. 5ರಂದು ಗೌರಿ ಅವರನ್ನು ಹಿಂಬಾಲಿಸಲು ಹಾಗೂ ಹತ್ಯೆ ನಡೆದ ಬಳಿಕ ಶೂಟರ್‌ ತಪ್ಪಿಸಿಕೊಳ್ಳಲು ಬೈಕ್‌ ರೈಡರ್‌ ನೆರವಾಗಿರಬಹುದು. ಅದೇ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಅದಕ್ಕೆ ಸಂಬಂಧಪಟ್ಟ ಸುಳಿವಿಗಾಗಿ ಹುಡುಕಾಟ ನಡೆಸಿದ್ದೇವೆ’ ಎಂದು ಅಧಿಕಾರಿ ತಿಳಿಸಿದರು.

‘ರಾಜರಾಜೇಶ್ವರಿನಗರದಲ್ಲಿ ಗೌರಿ ಅವರು ವಾಸವಿದ್ದ ಮನೆಯು ಮೈಸೂರು ಮುಖ್ಯರಸ್ತೆಯಿಂದ 300 ಮೀ. ದೂರದಲ್ಲಿದೆ. ಮನೆಯ ಬಳಿಯ ರಸ್ತೆಯಲ್ಲಿ ವಾಹನಗಳ ಓಡಾಟ ಕಡಿಮೆ. ಆದರೆ, ಮೈಸೂರು ರಸ್ತೆಯಲ್ಲಿ ಸಂಜೆ 6ರಿಂದ ರಾತ್ರಿ 8 ಗಂಟೆಯವರೆಗೆ ವಾಹನಗಳ ದಟ್ಟಣೆ ಇರುತ್ತದೆ.’

‘ಹತ್ಯೆ ಬಳಿಕ ಮನೆ ಬಳಿಯಿಂದ ಹೊರಟ ಶೂಟರ್‌, ರೈಡರ್‌ ಸಹಾಯದಿಂದ ಪರಾರಿಯಾಗಿದ್ದಾನೆ. ಆದರೆ, ಶೂಟರ್‌ ಹಾಗೂ ರೈಡರ್‌ ಯಾರು ಎಂಬುದನ್ನು ಮೊದಲು ಪತ್ತೆ ಹಚ್ಚಬೇಕಿದೆ. ಆ ಕೆಲಸದಲ್ಲಿ ತಂಡವು ಸಕ್ರಿಯವಾಗಿದೆ’ ಎಂದರು.

ಜೈಲುಗಳಿಗೆ ಎಸ್‌ಐಟಿ ಭೇಟಿ:

ಬೆಳಗಾವಿ, ಬಳ್ಳಾರಿ, ಧಾರವಾಡ, ಕಲಬುರ್ಗಿ, ವಿಜಯಪುರ ಜೈಲುಗಳಿಗೆ ಭೇಟಿ ನೀಡುತ್ತಿರುವ ಅಧಿಕಾರಿಗಳು, ಅಲ್ಲಿರುವ ಶಾರ್ಪ್‌ಶೂಟರ್‌ಗಳ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಹಿಂದಿನ ಎರಡು ತಿಂಗಳ ಅವರ ಚಲನವಲನಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.

ಅಕ್ರಮ ಪಿಸ್ತೂಲ್‌ ಪೂರೈಕೆ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ವಿಜಯಪುರ ಕೇಂದ್ರ ಕಾರಾಗೃಹದಲ್ಲಿರುವ ನಾಲ್ವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಾರಕ್ಕೊಮ್ಮೆ ಜೈಲಿಗೆ ಬರುತ್ತಿರುವ ಕೆಲವರು, ಅವರನ್ನು ಭೇಟಿಯಾಗಿ ಹೋಗುತ್ತಿದ್ದಾರೆ. ಅವರು ಯಾರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

‘ಶಿಕ್ಷೆ ಅನುಭವಿಸಿದ್ದ ಕೆಲವರು, ಜೈಲಿನಿಂದ ಹೊರಬಂದ ಬಳಿಕ ಹಲವು ಸಂಘಟನೆಗಳನ್ನು ಸೇರಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಅಂಥವರನ್ನು ಪತ್ತೆ ಹಚ್ಚುತ್ತಿದ್ದೇವೆ. ಅವರು ಸಿಕ್ಕ ಬಳಿಕ ಮತ್ತಷ್ಟು ಮಾಹಿತಿ ಸಿಗಬಹುದು’ ಎಂದರು. 

ನಕ್ಸಲ್ ಚಳವಳಿಯಲ್ಲಿದ್ದವರ ವಿಚಾರಣೆ ಸಾಧ್ಯತೆ:

ನಕ್ಸಲ್ ಚಳವಳಿಯಲ್ಲಿದ್ದ 8 ಮಂದಿ ಸದ್ಯ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಬಂದಿಯಾಗಿದ್ದಾರೆ. ಅವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಸದ್ಯದಲ್ಲೇ ಜೈಲಿಗೆ ಹೋಗಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

‘ಗೌರಿ ಲಂಕೇಶ್‌, ನಕ್ಸಲ್ ಚಳವಳಿಯಲ್ಲಿದ್ದವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದ್ದರು. ಅದಕ್ಕೆ ಕೆಲ ನಕ್ಸಲರು ಅಸಮಾಧಾನಗೊಂಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಜೈಲಿನಲ್ಲಿರುವ ನಕ್ಸಲರನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಕಾರಾಗೃಹಗಳ ಉನ್ನತ ಅಧಿಕಾರಿಗಳ ಅನುಮತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಎಸ್‌ಐಟಿ ಅಧಿಕಾರಿ ಹೇಳಿದರು.

ಸ್ವಾಮೀಜಿ ಆಪ್ತರು, ಪತ್ರಕರ್ತರ ವಿಚಾರಣೆ

‘ಗೌರಿ ಲಂಕೇಶ್‌’ ಪತ್ರಿಕೆಗಳ ಬಗ್ಗೆ ಹಲವು ಮಾಹಿತಿ ಸಂಗ್ರಹಿಸಿರುವ ಎಸ್‌ಐಟಿ ಅಧಿಕಾರಿಗಳು, ಗೌರಿ ಅವರು ಬರೆದಿದ್ದ ಲೇಖನಗಳ ಆಧಾರದಲ್ಲಿ ಹಲವರನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ.

‘ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಸೇರಿ ಹಲವರ ಬಗ್ಗೆ ಪತ್ರಿಕೆಯಲ್ಲಿ ಬರೆದ ಸಂದರ್ಭದಲ್ಲಿ ಗೌರಿ ಅವರಿಗೆ ಕೆಲವರಿಂದ ಬೆದರಿಕೆಗಳು ಬಂದಿದ್ದ ಮಾಹಿತಿ ಸಿಕ್ಕಿದೆ. ಅಂಥವರ ಪಟ್ಟಿ ಸಿದ್ಧಪಡಿಸಲಾಗಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ಆರಂಭಿಸಿದ್ದೇವೆ’ ಎಂದು ಅಧಿಕಾರಿ ಹೇಳಿದರು.

‘ನಕ್ಸಲ್‌ ಪರ ಸುದ್ದಿ ಬರೆಯುವುದಕ್ಕಾಗಿ ಗೌರಿ ಅವರ ಮೂಲಕ ಕೆಲ ಪತ್ರಕರ್ತರು, ಹಣ ಪಡೆದುಕೊಂಡಿರುವ ಮಾಹಿತಿ ಸಿಕ್ಕಿದೆ. ಹೀಗಾಗಿ ಹಲವು ಪತ್ರಕರ್ತರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅವರನ್ನು ಸದ್ಯದಲ್ಲೇ ವಿಚಾರಣೆಗೆ ಒಳಪಡಿಸಲಿದ್ದೇವೆ’ ಎಂದು ಅಧಿಕಾರಿ ವಿವರಿಸಿದರು.

ಕೈ ಸೇರದ ವರದಿ:

ಗೌರಿ ಲಂಕೇಶ್‌ ಹತ್ಯೆ ಸಂಬಂಧ ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಇದುವರೆಗೂ ತನಿಖಾ ತಂಡದ ಕೈ ಸೇರಿಲ್ಲ. ಇದರಿಂದ ಘಟನೆಯ ಸ್ಪಷ್ಟತೆ ತಿಳಿಯುವುದು ತಂಡಕ್ಕೆ ಕಷ್ಟವಾಗುತ್ತಿದೆ.

‘ವರದಿಯನ್ನು ಶೀಘ್ರವಾಗಿ ಪಡೆದುಕೊಂಡು ಪರಿಶೀಲನೆ ನಡೆಸುವ ಜವಾಬ್ದಾರಿಯನ್ನು ಕೆಲ ಅಧಿಕಾರಿಗಳಿಗೆ ವಹಿಸಿದ್ದೇನೆ. ಅದರ ಮೇಲ್ವಿಚಾರಣೆ ಮಾಡುತ್ತಿದ್ದೇನೆ’ ಎಂದು ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್‌ ತಿಳಿಸಿದರು.

ಎಸ್‌ಐಟಿ ಅಧಿಕಾರಿಗಳಿಂದ ಇಂದ್ರಜಿತ್‌ ವಿಚಾರಣೆ:

‘2005ರಲ್ಲಿ ಗೌರಿ ಲಂಕೇಶ್‌ ಅವರಿಗೆ ಪಿಸ್ತೂಲ್‌ ತೋರಿಸಿ ಬೆದರಿಸಿದ್ದ’ ಪ‍್ರಕರಣ ಸಂಬಂಧ ಅವರ ಸಹೋದರ ಇಂದ್ರಜಿತ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ಬುಧವಾರ ವಿಚಾರಣೆಗೆ ಒಳಪಡಿಸಿದರು.

ಅಜ್ಞಾತ ಸ್ಥಳದಲ್ಲಿ ಇಂದ್ರಜಿತ್‌ ಅವರನ್ನು ಭೇಟಿಯಾದ ಅಧಿಕಾರಿಗಳು, ಮೂರು ಗಂಟೆಗಳವರೆಗೆ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡರು.

‘ಪ್ರಕರಣದ ಬಳಿಕ ಅಕ್ಕ ಹಾಗೂ ನಾನು ಚೆನ್ನಾಗಿ ಇದ್ದೆವು. 12 ವರ್ಷಗಳ ಬಳಿಕ ಆ ಪ್ರಕರಣವನ್ನು ಕೆದಕಿ ಮನಸ್ಸಿಗೆ ನೋವುಂಟು ಮಾಡುತ್ತಿದ್ದೀರಿ’ ಎಂದು ಅಧಿಕಾರಿಗಳ ಬಳಿ ಇಂದ್ರಜಿತ್‌ ಹೇಳಿರುವುದಾಗಿ ಗೊತ್ತಾಗಿದೆ.

‘ನಾನು ಆಕೆಯ (ಗೌರಿ) ವಿರುದ್ಧ ದೂರು ಕೊಟ್ಟಿದ್ದೆ. ಆಕೆಯು ನನ್ನ ವಿರುದ್ಧ ದೂರು ಕೊಟ್ಟಿದ್ದಳು. ಆ ನಂತರ ಪೊಲೀಸರು ತನಿಖೆ ನಡೆಸಿದ್ದಾರೆ. ಇಬ್ಬರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ’ ಎಂದಿದ್ದಾರೆ.

‘ಹತ್ಯೆಯ ತನಿಖೆ ಪ್ರಗತಿಯಲ್ಲಿದೆ. ನಿಮ್ಮ ಸಹಕಾರ ಅಗತ್ಯ’ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ ಬಳಿಕ, ಅವರ ಹಲವು ಪ್ರಶ್ನೆಗಳಿಗೆ ಇಂದ್ರಜಿತ್‌ ಉತ್ತರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, ‘ತನಿಖೆಯ ಒಂದು ಆಯಾಮದನ್ವಯ ಇಂದ್ರಜಿತ್‌ ಅವರಿಂದ ಮಾಹಿತಿ ಪಡೆದುಕೊಂಡಿದ್ದೆವು. ಆ ಮಾಹಿತಿಯ ಬಗ್ಗೆ ಅವರ ಕುಟುಂಬದವರಿಂದಲೂ ಹೇಳಿಕೆ ಪಡೆಯಲಿದ್ದೇವೆ. ಎರಡನ್ನೂ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದರು.

* ಗೌರಿ ಹತ್ಯೆ ಮಾಡಿದವರ ಸುಳಿವು ಸಿಕ್ಕಿದೆ. ಹಂತಕರು ತಪ್ಪಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಏನು ಸುಳಿವು ಸಿಕ್ಕಿದೆ ಎಂಬುದನ್ನು ಬಹಿರಂಗಪಡಿಸುವುದಿಲ್ಲ.

– ರಾಮಲಿಂಗಾರೆಡ್ಡಿ, ಗೃಹ ಸಚಿವ

Read More

Comments
ಮುಖಪುಟ

ಆಣೆ ಮಾಡಲು ಸಿದ್ದರಾಮಯ್ಯ ದೇವೇಗೌಡರನ್ನು ದತ್ತು ತೆಗೆದುಕೊಂಡಿದ್ದಾರೆಯೇ?: ಕುಮಾರಸ್ವಾಮಿ

ನನಗೆ ನಾಟಕವಾಡಲು ಬರುವುದಿಲ್ಲ ನಾನು ಭಾವಜೀವಿ. ರೈತರು ಮಾಡಿದ ಸಾಲನ್ನು ಮನ್ನಾ ಮಾಡಲು ನಾನು ಬದ್ಧವಾಗಿದ್ದೇನೆ. ಆರೂವರೆ ಕೋಟಿ ಕನ್ನಡಿಗರ ತೆರಿಗೆ ಹಣದಿಂದ ನಾನು ರೈತರ ಸಾಲ ಮನ್ನಾ ಮಾಡುವೆ ಎಂದು ಹೇಳಿದ ಎಚ್‍ಡಿ ಕುಮಾರಸ್ವಾಮಿ.

ಮೋದಿ ಸಲಹೆ ಮೇರೆಗೆ ಪಳನಿಸ್ವಾಮಿ ಜತೆ ಕೈಜೋಡಿಸಿದೆ: ಪನ್ನೀರಸೆಲ್ವಂ

‘ಪಕ್ಷದ ಉಳಿವಿಗಾಗಿ ನೀವು(ಪನ್ನೀರಸೆಲ್ವಂ) ಒಂದಾಗಬೇಕು ಎಂದು ಅವರು(ನರೇಂದ್ರ ಮೋದಿ) ನನಗೆ ಸಲಹೆ ನೀಡಿದ್ದರು’ ಎಂದಿದ್ದಾರೆ. ಆದರೆ ತಾವು ಮೋದಿ ಅವರೊಂದಿಗೆ ಯಾವಾಗ ಮಾತುಕತೆ ನಡೆಸಿದ್ದರು ಎಂಬುದನ್ನು ತಿಳಿಸಿಲ್ಲ.

ಕಾಲೇಜ್ ಬಸ್ಸಿನಲ್ಲಿ ವಿದ್ಯಾರ್ಥಿನಿ ಎದುರು ಹಸ್ತಮೈಥುನ: ಆರೋಪಿಯನ್ನು ಹುಡುಕಿ ಕೊಟ್ಟವರಿಗೆ ₹25 ಸಾವಿರ ಬಹುಮಾನ

ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಅಥವಾ ಹಿಡಿದು ಕೊಟ್ಟಲ್ಲಿ ಅವರಿಗೆ 25 ಸಾವಿರ ಬಹುಮಾನ ನೀಡಲಾಗುವುದು. ಅಲ್ಲದೇ ಮಾಹಿತಿ ನೀಡಿದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿ ಇಡಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಮುಂದೆ ವಿಶೇಷ ರೈಲು, ಬೋಗಿಗಳನ್ನು ಆನ್‍ಲೈನ್ ಮೂಲಕ ಕಾಯ್ದಿರಿಸಬಹುದು!

ವಿವಾಹ, ತೀರ್ಥಯಾತ್ರೆ ಮೊದಲಾದ ಅಗತ್ಯಗಳಿಗಾಗಿ ರೈಲಿನಲ್ಲಿ ಬೋಗಿ ಕಾಯ್ದಿರಿಸುವುದಾದರೆ ಇನ್ನು ಮುಂದೆ ಆನ್‍ಲೈನ್‍ನಲ್ಲಿ ಈ ಕಾರ್ಯವನ್ನು ಮಾಡಬಹುದು.

ಸಂಗತ

ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟು–ಪರಿಹಾರ

ಭಾರತಕ್ಕೆ ಉಳಿದಿರುವ ದಾರಿಯೆಂದರೆ, ವಿಶ್ವಸಂಸ್ಥೆ ಮತ್ತು ಅಮೆರಿಕದ ಜೊತೆಗೂಡಿ ರಾಜತಾಂತ್ರಿಕ ಮಾರ್ಗದ ಮೂಲಕ ಮಾಲ್ಡೀವ್ಸ್‌ ಬಿಕ್ಕಟ್ಟನ್ನು ಪರಿಹರಿಸಲು ಶ್ರಮಿಸುವುದು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

ಭ್ರಮಾಧೀನ ಮನಸ್ಥಿತಿಯಲ್ಲಿ ಬದುಕುತ್ತಿರುವ ಸಮುದಾಯವನ್ನು ಎಚ್ಚರಿಸಿ ಮುನ್ನಡೆಸಬೇಕಾದ ಜವಾಬ್ದಾರಿ ಸಮಾಜಕ್ಕಿದೆಯಲ್ಲವೇ?

ನಿರುದ್ಯೋಗ ವ್ಯಕ್ತಿಗತ ಸಮಸ್ಯೆಯೇ?

ಸ್ಪರ್ಧಾತ್ಮಕ ಜಗತ್ತಿನಲ್ಲಿ ಅರ್ಹತೆಯುಳ್ಳವರಷ್ಟೇ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂಬ ನಿಲುವು ತಳೆಯುವುದು ಆಷಾಡಭೂತಿತನವಾಗುತ್ತದೆ

ಜಾತಿ ಮತ್ತು ಹಿಂಸಾಚಾರದ ಸಮೀಕರಣ

ಒಂದು ವರ್ಗದ ನೀಚ ಕೃತ್ಯಗಳಿಗೆ ಮತ್ತೊಂದು ವರ್ಗವನ್ನು ಹೊಣೆಯಾಗಿಸುವ ಕೆಸರೆರಚಾಟ ಮುಂದುವರಿಯುತ್ತಿರುವವರೆಗೂ ಅಲ್ಲಿ ಅಸಹಿಷ್ಣುತೆ, ಹಿಂಸೆ ತಡೆಯುವುದು ಕಷ್ಟ.

ಮುಕ್ತಛಂದ

ಅಪ್ಪನ ನೆನಪುಗಳು

ಅಡಿಗರ ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಸಾಧನೆಯನ್ನು ಅವರ ನಿಕಟವರ್ತಿಗಳು ಹಾಗೂ ವಿಮರ್ಶಕರು ಸಾಕಷ್ಟು ದಾಖಲಿಸಿದ್ದಾರೆ. ಕೌಟುಂಬಿಕ ವ್ಯಕ್ತಿಯಾಗಿ ಅಡಿಗರು ಹೇಗಿದ್ದರು? ಅವರ ಪುತ್ರ ಪ್ರದ್ಯುಮ್ನ ಗೋಪಾಲಕೃಷ್ಣ ಅಡಿಗ ಅವರ ನೆನಪುಗಳು ಇಲ್ಲಿವೆ.

ಸ್ವಾಭಿಮಾನ ಮತ್ತು ಸಮಗ್ರ ಕಾವ್ಯ!

‘ಪ್ರಾರ್ಥನೆ’ ಕವಿತೆಯ ವಿವಾದದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಪತ್ರಕ್ಕೆ ಅಡಿಗರು ಬರೆದ ಜವಾಬು ಕವಿಗೆ ಇರಬೇಕಾದ ಸ್ವಾಭಿಮಾನವನ್ನು ಸೂಚಿಸುವಂತಿದೆ. ಸ್ವಾಭಿಮಾನ ಎನ್ನುವುದು ಸೋವಿಯಾಗಿರುವ ಇಂದಿನ ಸಂದರ್ಭದಲ್ಲಿ ಅಡಿಗರ ನಿಲುವು ಹೆಚ್ಚು ಮಹತ್ವದ್ದಾಗಿ ಕಾಣುತ್ತದೆ.

ಕನ್ನಡ ಸಾಹಿತ್ಯಲೋಕದ ವಿಷಕಂಠ

ಎಲಿಯಟ್‌ ಕೂಡ ಒಂದು ಕವನದಲ್ಲಿ ಇಷ್ಟೆಲ್ಲ ಹೇಳಲಿಲ್ಲವಲ್ಲ! ಇದು ಅಡಿಗರ ‘ಭೂಮಿಗೀತ’, ‘ಭೂತ’ ಕವಿತೆಗಳಿಗೆ ಅಮೆರಿಕದ ಕವಿಯೊಬ್ಬರ ಉದ್ಗಾರ. ಆದರೆ, ಅತ್ಯುತ್ತಮ ಕಾವ್ಯ ರಚಿಸಿಯೂ ನಿರಂತರವಾಗಿ ಟೀಕೆಗೆ, ಪ್ರತಿರೋಧಕ್ಕೆ, ಖಂಡನೆಗೆ ಗುರಿಯಾದ ಅಡಿಗರಂಥ ಕವಿ ಇನ್ನೊಬ್ಬರಿಲ್ಲ.

‘ಚಂಡೆ ಮದ್ದಳೆ’ ಕವಿಯ ನಿರಂತರ ‘ವೇಸ್ಟ್ ಲ್ಯಾಂಡ್’

ಎಲಿಯಟ್ ಇಂಗ್ಲಿಷ್‌ನಲ್ಲಿ ಮಾಡಿದುದನ್ನು ಅಡಿಗರು ಕನ್ನಡದಲ್ಲಿ ಮಾಡಿದರು. ತಟಸ್ಥವಾಗಿದ್ದ ಸಾಹಿತ್ಯದಲ್ಲಿ ವಿದ್ಯುತ್ ಸಂಚಲನ ಉಂಟು ಮಾಡಿದರು. ಅಡಿಗರ ನಂತರ ಕನ್ನಡ ಕಾವ್ಯ ಮೊದಲಿನ ಹಾಗೆ ಇರಲಿಲ್ಲ. ಇದುವರೆಗೆ ಕನ್ನಡದಲ್ಲಿ ಇಲ್ಲದ್ದನ್ನು ಅವರು ಸೃಷ್ಟಿಸಿದರು. ಅವರನ್ನು ವಿರೋಧಿಸಿದವರು ಕೂಡ ಅವರ ನುಡಿಗಟ್ಟನ್ನು ಸ್ಪರ್ಶಿಸಿಯೇ ಹಾಗೆ ಮಾಡಬೇಕಾಯಿತು. ಇದಕ್ಕಿಂತಲೂ ಹೆಚ್ಚಿನ ಕೊಡುಗೆಯೊಂದಿದೆಯೇ?