ತೆಳ್ಳಗಿರುವುದು ಮುಜುಗರ ತಂದಿದೆ

7 Oct, 2017

1. ನಾನು ಎಂ.ಎ., ಬಿ.ಎಡ್‌. ಮುಗಿಸಿದ್ದು ಸದ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ವೈಯಕ್ತಿಕ ಸಮಸ್ಯೆಗಳು, ಅಭದ್ರತೆಯ ಕೊರತೆ ಹಾಗೂ ತುಂಬಾ ಯೋಚನೆಗಳು ನನ್ನನ್ನು ಕಾಡುತ್ತಿವೆ. ಜಿಗುಪ್ಸೆಯೋ, ಖಿನ್ನತೆಯೋ ತಿಳಿಯುತ್ತಿಲ್ಲ. ಕುಟುಂಬ ನಿರ್ವಹಣೆಯ ಜವಾಬ್ದಾರಿಯೂ ನನ್ನ ಮೇಲಿದೆ. ದಯವಿಟ್ಟು ನನಗೆ ಸಲಹೆ ಮತ್ತು ಮಾರ್ಗದರ್ಶನ ನೀಡಿ.
⇒ಹೆಸರು, ಊರು ಇಲ್ಲ

ಉತ್ತರ: ಮನುಷ್ಯನ ಸಂತೋಷ ಹಾಗೂ ನೆಮ್ಮದಿಯನ್ನು ಹಾಳು ಮಾಡಲು ಮುಖ್ಯ ಕಾರಣ ಅನಗತ್ಯ ಯೋಚನೆ. ಇದರಿಂದ ಮೊದಲು ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು, ಅದರ ಮೇಲೆ ಗಮನ ನೀಡಿ. ಇದು ನಿಮ್ಮ ಓದಿನ ಸಮಯ. ಮೊದಲು ಅದರತ್ತ ಗಮನ ಹರಿಸಿ, ಉತ್ತಮ ಉದ್ಯೋಗ ಪಡೆಯಿರಿ. ಜವಾಬ್ದಾರಿ ಹಾಗೂ ಒತ್ತಡವಿದ್ದರಷ್ಟೇ ನಾವು ಸಮರ್ಥವಾಗಿ ಕೆಲಸ ನಿಭಾಯಿಸುವುದರತ್ತ ಒಲವು ತೋರುತ್ತೇವೆ. ಈಗ ನಿಮಗಿರುವುದು ತಾತ್ಕಾಲಿಕ ಆತಂಕ ಎನ್ನಿಸುತ್ತಿದೆ. ಒಮ್ಮೆ ನಿಮಗೆ ಕೆಲಸ ಸಿಕ್ಕಿದರೆ ಎಲ್ಲವೂ ಸರಿ ದಾರಿಗೆ ಬರಬಹುದು. ನಿಮ್ಮ ಮನಸ್ಸಿನಲ್ಲಿನ ಋಣಾತ್ಮಕ ಯೋಚನೆಗಳಿಗೆ ಮನ್ನಣೆ ನೀಡಬೇಡಿ. ಅವುಗಳನ್ನು ನಿರ್ಲಕ್ಷಿಸಲು ಪ್ರಯತ್ನಿಸಿ. ನಿಮ್ಮ ನಿತ್ಯಜೀವನಕ್ಕೆ ಒಗ್ಗುವ ಕೆಲವು ವ್ಯಾಯಾಮಗಳನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮಲ್ಲಿ ಧನಾತ್ಮಕ ಯೋಚನೆಗಳು ಹುಟ್ಟಿಕೊಳ್ಳುತ್ತವೆ. ಅಲ್ಲದೇ ನಿಮ್ಮ ಉಳಿದ ಚಟುವಟಿಕೆಗಳಿಗೂ ಇದು ಸಹಾಯ ಮಾಡುತ್ತದೆ.

2. ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ನನಗೆ ತರಗತಿಯಲ್ಲಿ ಹೇಳುವುದು ಯಾವುದೂ ಅರ್ಥವಾಗುತ್ತಿಲ್ಲ. ಓದಲು ಕುಳಿತುಕೊಂಡರೆ ಮನಸ್ಸು ಬೇರೆ ಕಡೆಗೆ ತಿರುಗುತ್ತದೆ. ಏನು ಮಾಡಬೇಕು?
⇒ಪ್ರವೀಣ, ಊರು ಇಲ್ಲ

ಉತ್ತರ: ಈ ವರ್ಷ ವಿದ್ಯಾರ್ಥಿಜೀವನದ ಮುಖ್ಯ ಘಟ್ಟ. ಡಿಗ್ರಿಯಲ್ಲಿ ಯಾವ ಕೋರ್ಸ್‌ ತೆಗೆದುಕೊಳ್ಳಬೇಕು, ಉನ್ನತ ಶಿಕ್ಷಣಕ್ಕೆ ಏನು ಮಾಡಬೇಕು – ಎಂಬುದೆಲ್ಲವನ್ನೂ ನಿರ್ಧರಿಸುವುದು ಪಿಯುಸಿ. ಹಾಗಾಗಿ ನೀವಿದನ್ನು ತೀರಾ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಇನ್ನು ಕೇವಲ ಕೆಲವೇ ತಿಂಗಳುಗಳು ಮಾತ್ರ ಬಾಕಿ ಇವೆ. ಆದ್ದರಿಂದ ನೀವು ಈಗ ಶೇ.100ರಷ್ಟು ನಿಮ್ಮ ಓದಿನ ಮೇಲೆ ಗಮನ ಹರಿಸಲೇಬೇಕು. ಶಾಲೆಯ ಅಧ್ಯಾಪಕರ ಸಹಾಯವನ್ನು ಪಡೆದುಕೊಳ್ಳಿ. ಕೆಲವು ವಿಶೇಷ ತರಗತಿಗಳನ್ನು ನಡೆಸುವಂತೆ ಅವರ ಬಳಿ ಮನವಿ ಮಾಡಿಕೊಳ್ಳಿ. ಮೊಬೈಲ್ ಸೇರಿದಂತೆ ಓದಿಗೆ ಅಡ್ಡಿಪಡಿಸುವ ಎಲ್ಲ ಎಲೆಕ್ಟ್ರಾನಿಕ್ಸ್ ಉಪಕರಣಗಳಿಂದ ದೂರಿವಿರಿ. ಅವುಗಳೇ ಓದಿಗೆ ಅಡ್ಡಿಪಡಿಸುವ ಮುಖ್ಯ ಅಂಶಗಳು. ಒಂದು ನಿರ್ದಿಷ್ಟ ಟೈಮ್‌ಟೇಬಲ್ ಮಾಡಿಕೊಂಡು, ಅದರ ಪ್ರಕಾರ ಓದಿ. ಪ್ರತಿದಿನ ನಿಮಗೆ ಓದಿನ ಮೇಲೆ ಆಸಕ್ತಿ ಹಾಗೂ ಗಮನ ಹೆಚ್ಚುವಂತೆ ಮಾಡುವ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿ, ಯಾವುದೂ ಆಸಾಧ್ಯವಲ್ಲ ಎಂಬುದನ್ನು ಮರೆಯಬೇಡಿ.

3. ನಾನು ಬಿ.ಇ. ಕೊನೆಯ ವರ್ಷದಲ್ಲಿ ಓದುತ್ತಿದ್ದೇನೆ. ನಾನು ತುಂಬ ತೆಳ್ಳಗಿದ್ದೇನೆ. ನನ್ನ ತೂಕ 32 ಕೆ.ಜಿ. ಇದರಿಂದ ನನಗೆ ಎಲ್ಲಿಗೆ ಹೋಗಬೇಕೆಂದರೂ ಬೇಜಾರು. ನಾನು ಯಾವುದರಲ್ಲೂ ಭಾಗವಹಿಸುವುದಿಲ್ಲ. ಏಕೆಂದರೆ ನನಗೆ ಒಂಥರಾ ಮುಜುಗರ. ಎಲ್ಲರೂ ’ನೀನು ಊಟ ಮಾಡಲ್ವಾ? ತಿನ್ನೋಲ್ವಾ?’ ಎಂದು ಕೇಳುತ್ತಾರೆ. ನಾನು ಊಟವನ್ನು ಚೆನ್ನಾಗಿಯೇ ಮಾಡುವೆ. ನಾನ್‌ವೆಜ್ ಕೂಡ ತಿನ್ನುತ್ತೇನೆ. ನಮ್ಮ ಕುಟುಂಬದಲ್ಲಿ ಎಲ್ಲರೂ ತೆಳ್ಳಗೇ ಇದ್ದಾರೆ. ಆದರೆ ನಾನು ಅವರೆಲ್ಲರಿಗಿಂತ ಸಣ್ಣ ಇರುವುದರಿಂದ ಯಾವ ಥರದ ಡ್ರೆಸ್ ಹಾಕಿದರೂ ನನಗೆ ಒಪ್ಪುವುದಿಲ್ಲ. ಡಾಕ್ಟರ್‌ಗೆ ತೋರಿಸಿ ಇಂಜೆಕ್ಷನ್, ಮಾತ್ರೆಗಳನ್ನು ತೆಗೆದುಕೊಂಡೆ. ಆದರೂ ಉಪಯೋಗವಾಗಿಲ್ಲ. ಡಾಕ್ಟರ್ ಕೂಡ ವಂಶಪಾರಂಪರಿಕ ತೊಂದರೆ ಎಂದು ಹೇಳಿದ್ದಾರೆ. ‘ಚೆನ್ನಾಗಿ ತಿಂದ್ಕೊಂಡು ಆರಾಮಾಗಿರಿ, ಆಗೋ ಟೈಮ್‌ನಲ್ಲಿ ದಪ್ಪ ಆಗ್ತೀರಿ’ ಎಂದು ಹೇಳಿದ್ದಾರೆ. ಆದರೆ ನನಗೆ ಸಮಾಧಾನ ಇಲ್ಲ. ಇದರಿಂದ ಜೀವನದಲ್ಲಿ ತುಂಬಾ ನೋವು ಅನುಭವಿಸುತ್ತಿದ್ದೇನೆ.
⇒ಹೆಸರು, ಊರು ಇಲ್ಲ

ಉತ್ತರ:  ಯಾವಾಗ ನೀವು ಆರೋಗ್ಯಕರವಾಗಿ, ಸದೃಢರಾಗಿ, ದೈಹಿಕವಾಗಿ ಸಬಲರಾಗಿರುತ್ತೀರೋ ಆಗ ನಾನು ಎಷ್ಟು ತೆಳ್ಳಗೆ ಕಾಣಿಸುತ್ತಿದ್ದೇನೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಅಥವಾ ನಿಮ್ಮ ತೂಕ ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ. ಹಾಗಾಗಿ ಇದರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ. ಮತ್ತು ತೂಕ ಹೆಚ್ಚಿಸಲು ಯಾವುದೇ ಔಷಧವನ್ನು ತೆಗೆದುಕೊಳ್ಳಬೇಡಿ. ಕೆಲವರು ಹುಡುಗ, ಹುಡುಗಿಯರಿಗೆ ವಯಸ್ಸಿಗೆ ತಕ್ಕಂತೆ ತೂಕವಿರುವುದಿಲ್ಲ. ಇನ್ನೂ ಕೆಲವರು ಸ್ವಲ್ಪ ತಡವಾಗಿ ದಪ್ಪವಾಗುತ್ತಾರೆ. ಆದ್ದರಿಂದ ನಿಮ್ಮ ಮನಸ್ಸಿನಿಂದ ನಾನು ತುಂಬಾ ತೆಳ್ಳಗಿದ್ದೇನೆ ಎಂಬ ಭಾವನೆಯನ್ನು ತೆಗೆದುಹಾಕಿ. ಇದರ ಬದಲಾಗಿ ಒಟ್ಟಾರೆಯಾಗಿ ನಿಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಿಕೊಳ್ಳಿ. ಕಾಲೇಜಿನ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಕಾಲೇಜು ಅಥವಾ  ಹೊರಗಡೆ ನಡೆಯುವ ಕಾರ್ಯಕ್ರಮಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಿ. ಅದರಲ್ಲಿ ನಿಮ್ಮ ಚಾಕಚಕ್ಯತೆಯನ್ನ ತೋರಿ. ಇದು ನಿಮ್ಮಲ್ಲಿ ಆತ್ಮವಿಶ್ವಾಸ ಹಾಗೂ ಸ್ವ ಪ್ರೇರಣೆ ಹೆಚ್ಚಲು ಸಹಾಯ ಮಾಡುತ್ತದೆ. ಡ್ರೆಸ್ಸಿಂಗ್ ಮಾಡಿಕೊಳ್ಳಲು ಸಾವಿರಾರು ದಾರಿಗಳಿವೆ. ಸ್ಕಿನ್‌ಫಿಟ್ ಬಿಟ್ಟು ನಿಮಗೆ ಹೊಂದುವಂತಹ ಬೇರೆ ಬೇರೆ ರೀತಿಯ ಬಟ್ಟೆಗಳನ್ನು ಹಾಕಿ. ಆಗಲೂ ನಿಮ್ಮ ದೈಹಿಕ ರೂಪದ ಮೇಲೆ ನಿಮಗೆ ಸಮಾಧಾನವಾಗದಿದ್ದರೆ ಜಿಮ್‌ಗೆ ಸೇರಿ, ಟ್ರೈನರ್‌ ಅನ್ನು ಕಾಣಿ. ಅವರು ನಿಮಗೆ ಸಹಾಯ ಮಾಡುತ್ತಾರೆ.

4. ನಾನು ಅಂತಿಮ ವರ್ಷ ಎಂ.ಎಸ್ಸಿ. ಓದುತ್ತಿದ್ದೇನೆ. ನಾನು ಒಬ್ಬ ಹುಡುಗನನ್ನು ಲವ್ ಮಾಡ್ತಾ ಇದೀನಿ. ಅವನು ಕೂಡ ನನ್ನನ್ನು ತುಂಬಾ ಲವ್ ಮಾಡ್ತಾ ಇದಾನೆ. ನಮ್ಮ ವಿಷಯ ಮನೆಯಲ್ಲೂ ಸ್ವಲ್ಪ ಸ್ವಲ್ಪ ಗೊತ್ತು. ಆದರೆ ನನ್ನ ಹುಡುಗ ತುಂಬಾ ಪ್ರೀತಿ ಮಾಡುತ್ತಾನೆ. ಆದರೆ ಅಷ್ಟೇ ಪೊಸೆಸಿವ್‌. ಅವನನ್ನು ಹೇಗೆ ಸಹಿಸಿಕೊಳ್ಳಬೇಕು ಎಂದು ತಿಳಿಯುತ್ತಿಲ್ಲ. ಫ್ರೆಂಡ್ಸ್ ಜೊತೆ ಮಾತನಾಡಲು ಕೂಡ ಬಿಡುವುದಿಲ್ಲ . ಒಟ್ಟಾರೆ ನನಗೆ ಸ್ವಾತಂತ್ರ್ಯ ಇಲ್ಲ. ಅವನಿಗೆ ಹೇಗೆ ನನ್ನ ಭಾವನೆಗಳನ್ನು ತಿಳಿಸಬೇಕೆಂದಹ ತಿಳಿಯುತ್ತಿಲ್ಲ.
⇒ಕಾವ್ಯಾ, ಊರು ಇಲ್ಲ

ಉತ್ತರ: ಪ್ರೀತಿ ಮಾಡುವವರನ್ನು ಕಳೆದುಕೊಳ್ಳುತ್ತೇವೆ ಎಂಬ ಭಯವಿರುವ ಕಾರಣಕ್ಕೆ ಪ್ರೀತಿಯಲ್ಲಿ ಪೊಸೆಸಿವ್‌ನೆಸ್ ಹುಟ್ಟುತ್ತದೆ. ನಿಮಗಿಬ್ಬರಿಗೂ ಜೀವನದ ಬಗ್ಗೆ ಗಂಭೀರತೆ ಇದ್ದರೆ, ಇಬ್ಬರು ಒಟ್ಟಿಗೆ ಜೀವನ ನಡೆಸಲು ಬಯಸಿದ್ದೇ ಆದರೆ ಅವರಿಗೆ ಸ್ವಲ್ಪ ಸಮಯ ನೀಡಿ. ನೀವಿಬ್ಬರೂ ಜವಾಬ್ದಾರಿಗಳನ್ನು ಅರಿಯುವಷ್ಟು ಪ್ರೌಢರಾಗಿದ್ದೀರಿ; ಜೀವನಕ್ಕೆ ಒಂದು ಗುರಿಯನ್ನು ಇರಿಸಿಕೊಂಡಿದ್ದೀರಿ ಎಂಬುದು ನನ್ನ ಭಾವನೆ. ಮೊದಲು ಓದಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ. ಉತ್ತಮ ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮುಗಿಸಿ, ಒಳ್ಳೆಯ ಕೆಲಸ ಗಿಟ್ಟಿಸಿಕೊಳ್ಳಿ. ಜೊತೆಜೊತೆಗೆ ಇದರ ನಡುವೆ ನೀವಿಬ್ಬರೂ ಆಗಾಗ ಕುಳಿತು ಭವಿಷ್ಯದಲ್ಲಿ ನೀವು ಏನನ್ನು ಎದುರು ನೋಡುತ್ತಿದ್ದೀರಿ ಎಂಬುದರ ಕುರಿತು ಪ್ರಬದ್ಧ ಚರ್ಚೆ ನಡೆಸಿ. ಒಮ್ಮೆ ಇಬ್ಬರು ಜೊತೆಗೆ ಜೀವನ ನಡೆಸಬೇಕು ಎಂದು ನಿರ್ಧರಿಸಿ, ತಯಾರಿ ನಡೆಸಿದಾಗ ಹಿರಿಯರ ಜೊತೆ ಮಾತನಾಡಿ.

Read More

Comments
ಮುಖಪುಟ

ದಮ್ಮನಿಂಗಲದಿಂದ ಶ್ರೀನಗರದವರೆಗೆ...

ಹೌದು, ವಿಂಧ್ಯಗಿರಿಯ ಆಸುಪಾಸಿನಲ್ಲೇ ಇರುವ ದಮ್ಮನಿಂಗಲ ಎಂಬ ಪುಟ್ಟ ಗ್ರಾಮದಿಂದ ಹಿಡಿದು ದೂರದ ಶ್ರೀನಗರದವರೆಗೆ ಹಲವು ಊರುಗಳು ತಮ್ಮಲ್ಲಿ ಸಿಗುವಂತಹ ಬಲು ವಿಶಿಷ್ಟವಾದ ದ್ರವ್ಯಗಳನ್ನು ಈ ಉತ್ಸವಕ್ಕಾಗಿ ಕೊಡುಗೆಯಾಗಿ ಕೊಟ್ಟಿವೆ.

ಕಳ್ಳರ ಪರಾರಿ ವೇಳೆ ನಿದ್ದೆಯಲ್ಲಿದ್ದ ಕಾವಲುಗಾರ

‘ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣಕ್ಕೆ ಎನ್‌ಡಿಎ ಸರ್ಕಾರವೇ ನೇರ ಹೊಣೆ. ‘ಆಪ್ತ ಬಂಡವಾಳಶಾಹಿಗಳ ಲಾಬಿ’ಗೆ ಪ್ರಧಾನಿ ನರೇಂದ್ರ ಮೋದಿ ಸಾಂಸ್ಥಿಕ ರೂಪ ಕೊಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿದೆ.

ಭಾವ–ಬಣ್ಣದ ಜುಗಲಬಂದಿ

ಹಾಲಿನ ನಂತರದ ಸರದಿ ಕಲ್ಕಚೂರ್ಣದ್ದು. ಔಷಧಿಯುಕ್ತ ನೀರು ಬಾಹುಬಲಿಯ ಬಿಳುಪನ್ನು ತೊಡೆಯಲು ಪ್ರಯತ್ನಿಸಿತು. ನಂತರದ ಸರದಿ ಅಕ್ಕಿಹಿಟ್ಟಿನದು. ಬೆಳಗಿನ ಇಬ್ಬನಿಯನ್ನೂ ಹಿಮದ ತುಣುಕುಗಳನ್ನೂ ಒಟ್ಟಿಗೆ ಹುಡಿ ಮಾಡಿ ಎರಚಿದಂತೆ ಗೊಮ್ಮಟಮೂರ್ತಿ ಕಂಗೊಳಿಸತೊಡಗಿತು. ಮತ್ತೆ ಭಕ್ತರಿಂದ ಆರಾಧ್ಯದೈವಕ್ಕೆ ಉಘೇ ಉಘೇ.

 

 

ರಾಯರ ಪಾದುಕೆ ಪಟ್ಟಾಭಿಷೇಕ ಮಹೋತ್ಸವ

ಶ್ರೀ ರಾಘವೇಂದ್ರ ಸ್ವಾಮಿಗಳ 397ನೇ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ರಾಯರ ಮೂಲಪಾದು ಕೆಗಳಿಗೆ, ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ವಿಶೇಷ ಪುಷ್ಪಾರ್ಚನೆ ಹಾಗೂ ಕನಕ ರತ್ನಾಭಿಷೇಕ ನೆರವೇರಿಸಿದರು.

ಸಂಗತ

ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟು–ಪರಿಹಾರ

ಭಾರತಕ್ಕೆ ಉಳಿದಿರುವ ದಾರಿಯೆಂದರೆ, ವಿಶ್ವಸಂಸ್ಥೆ ಮತ್ತು ಅಮೆರಿಕದ ಜೊತೆಗೂಡಿ ರಾಜತಾಂತ್ರಿಕ ಮಾರ್ಗದ ಮೂಲಕ ಮಾಲ್ಡೀವ್ಸ್‌ ಬಿಕ್ಕಟ್ಟನ್ನು ಪರಿಹರಿಸಲು ಶ್ರಮಿಸುವುದು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

ಭ್ರಮಾಧೀನ ಮನಸ್ಥಿತಿಯಲ್ಲಿ ಬದುಕುತ್ತಿರುವ ಸಮುದಾಯವನ್ನು ಎಚ್ಚರಿಸಿ ಮುನ್ನಡೆಸಬೇಕಾದ ಜವಾಬ್ದಾರಿ ಸಮಾಜಕ್ಕಿದೆಯಲ್ಲವೇ?

ನಿರುದ್ಯೋಗ ವ್ಯಕ್ತಿಗತ ಸಮಸ್ಯೆಯೇ?

ಸ್ಪರ್ಧಾತ್ಮಕ ಜಗತ್ತಿನಲ್ಲಿ ಅರ್ಹತೆಯುಳ್ಳವರಷ್ಟೇ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂಬ ನಿಲುವು ತಳೆಯುವುದು ಆಷಾಡಭೂತಿತನವಾಗುತ್ತದೆ

ಜಾತಿ ಮತ್ತು ಹಿಂಸಾಚಾರದ ಸಮೀಕರಣ

ಒಂದು ವರ್ಗದ ನೀಚ ಕೃತ್ಯಗಳಿಗೆ ಮತ್ತೊಂದು ವರ್ಗವನ್ನು ಹೊಣೆಯಾಗಿಸುವ ಕೆಸರೆರಚಾಟ ಮುಂದುವರಿಯುತ್ತಿರುವವರೆಗೂ ಅಲ್ಲಿ ಅಸಹಿಷ್ಣುತೆ, ಹಿಂಸೆ ತಡೆಯುವುದು ಕಷ್ಟ.

ಮುಕ್ತಛಂದ

ಅಪ್ಪನ ನೆನಪುಗಳು

ಅಡಿಗರ ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಸಾಧನೆಯನ್ನು ಅವರ ನಿಕಟವರ್ತಿಗಳು ಹಾಗೂ ವಿಮರ್ಶಕರು ಸಾಕಷ್ಟು ದಾಖಲಿಸಿದ್ದಾರೆ. ಕೌಟುಂಬಿಕ ವ್ಯಕ್ತಿಯಾಗಿ ಅಡಿಗರು ಹೇಗಿದ್ದರು? ಅವರ ಪುತ್ರ ಪ್ರದ್ಯುಮ್ನ ಗೋಪಾಲಕೃಷ್ಣ ಅಡಿಗ ಅವರ ನೆನಪುಗಳು ಇಲ್ಲಿವೆ.

ಸ್ವಾಭಿಮಾನ ಮತ್ತು ಸಮಗ್ರ ಕಾವ್ಯ!

‘ಪ್ರಾರ್ಥನೆ’ ಕವಿತೆಯ ವಿವಾದದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಪತ್ರಕ್ಕೆ ಅಡಿಗರು ಬರೆದ ಜವಾಬು ಕವಿಗೆ ಇರಬೇಕಾದ ಸ್ವಾಭಿಮಾನವನ್ನು ಸೂಚಿಸುವಂತಿದೆ. ಸ್ವಾಭಿಮಾನ ಎನ್ನುವುದು ಸೋವಿಯಾಗಿರುವ ಇಂದಿನ ಸಂದರ್ಭದಲ್ಲಿ ಅಡಿಗರ ನಿಲುವು ಹೆಚ್ಚು ಮಹತ್ವದ್ದಾಗಿ ಕಾಣುತ್ತದೆ.

ಕನ್ನಡ ಸಾಹಿತ್ಯಲೋಕದ ವಿಷಕಂಠ

ಎಲಿಯಟ್‌ ಕೂಡ ಒಂದು ಕವನದಲ್ಲಿ ಇಷ್ಟೆಲ್ಲ ಹೇಳಲಿಲ್ಲವಲ್ಲ! ಇದು ಅಡಿಗರ ‘ಭೂಮಿಗೀತ’, ‘ಭೂತ’ ಕವಿತೆಗಳಿಗೆ ಅಮೆರಿಕದ ಕವಿಯೊಬ್ಬರ ಉದ್ಗಾರ. ಆದರೆ, ಅತ್ಯುತ್ತಮ ಕಾವ್ಯ ರಚಿಸಿಯೂ ನಿರಂತರವಾಗಿ ಟೀಕೆಗೆ, ಪ್ರತಿರೋಧಕ್ಕೆ, ಖಂಡನೆಗೆ ಗುರಿಯಾದ ಅಡಿಗರಂಥ ಕವಿ ಇನ್ನೊಬ್ಬರಿಲ್ಲ.

‘ಚಂಡೆ ಮದ್ದಳೆ’ ಕವಿಯ ನಿರಂತರ ‘ವೇಸ್ಟ್ ಲ್ಯಾಂಡ್’

ಎಲಿಯಟ್ ಇಂಗ್ಲಿಷ್‌ನಲ್ಲಿ ಮಾಡಿದುದನ್ನು ಅಡಿಗರು ಕನ್ನಡದಲ್ಲಿ ಮಾಡಿದರು. ತಟಸ್ಥವಾಗಿದ್ದ ಸಾಹಿತ್ಯದಲ್ಲಿ ವಿದ್ಯುತ್ ಸಂಚಲನ ಉಂಟು ಮಾಡಿದರು. ಅಡಿಗರ ನಂತರ ಕನ್ನಡ ಕಾವ್ಯ ಮೊದಲಿನ ಹಾಗೆ ಇರಲಿಲ್ಲ. ಇದುವರೆಗೆ ಕನ್ನಡದಲ್ಲಿ ಇಲ್ಲದ್ದನ್ನು ಅವರು ಸೃಷ್ಟಿಸಿದರು. ಅವರನ್ನು ವಿರೋಧಿಸಿದವರು ಕೂಡ ಅವರ ನುಡಿಗಟ್ಟನ್ನು ಸ್ಪರ್ಶಿಸಿಯೇ ಹಾಗೆ ಮಾಡಬೇಕಾಯಿತು. ಇದಕ್ಕಿಂತಲೂ ಹೆಚ್ಚಿನ ಕೊಡುಗೆಯೊಂದಿದೆಯೇ?