ರಂಗಭೂಮಿಗೆ ಬೇಕಿದೆ ಪ್ರಭುತ್ವದ ಬೆಂಬಲ

8 Oct, 2017
ಗುಡಿಹಳ್ಳಿ ನಾಗರಾಜ

ಸಿನಿಮಾ ಬಂದು ವೃತ್ತಿರಂಗಭೂಮಿಗೆ ಹೊಡೆತ ಕೊಟ್ಟಿತು. ಟಿ.ವಿ ಧಾರಾವಾಹಿಗಳು ಹವ್ಯಾಸಿ ರಂಗಚಟುವಟಿಕೆಗಳನ್ನು ಕುಲಗೆಡಿಸಿದವು. ಇಂತದೊಂದು ಅಳಿವು ಉಳಿವಿನ ಪ್ರಶ್ನೆ ರಂಗಭೂಮಿಗೆ ಎದುರಾಗಿದೆ. ಬಹು ಮಾಧ್ಯಮಗಳ ಸ್ಪರ್ಧೆಯನ್ನು ಸವಾಲಾಗಿ ಸ್ವೀಕರಿಸಿ ನಾಟಕ ಉಳಿದು ಬೆಳೆಯಬೇಕಿದೆ.

ನಾಟಕ ಉಳಿಸಬೇಕಾದವರು ಪ್ರೇಕ್ಷಕರು. ಅವರಿಲ್ಲದೆ ನಾಟಕವಿಲ್ಲ. ನಾಟಕಕ್ಕೆ ಪ್ರೇಕ್ಷಕ ಒಂದು ಕಣ್ಣಾದರೆ; ನಟಿ(ಟ) ಮತ್ತೊಂದು ಕಣ್ಣು. ನಟರೊಂದಿಗೆ ಪ್ರೇಕ್ಷಕರಿಲ್ಲದಿದ್ದರೆ ನಾಟಕವೇ ಇಲ್ಲ. ಪ್ರೇಕ್ಷಕರ ಸಹಕಾರ ಉತ್ತಮವಾಗಿದ್ದಾಗ ಕನ್ನಡ ರಂಗಭೂಮಿ ತೇಜೋಮಯವಾಗಿ ಬೆಳಗಿದೆ.

ವೃತ್ತಿರಂಗಭೂಮಿಯ ವೈಭವದ ದಿನಗಳನ್ನು ನೆನಪಿಸಿಕೊಂಡರೆ; ಯಕ್ಷಗಾನ, ಜಾನಪದ ಕಲಾಪ್ರಕಾರಗಳ ಸುಗ್ಗಿಗಳನ್ನು ಮೆಲುಕು ಹಾಕಿದರೆ ಪ್ರೇಕ್ಷಕ ಎಷ್ಟು ಮುಖ್ಯ ಎಂಬುದು ಗೊತ್ತಾಗುತ್ತದೆ. ಅಷ್ಟೇಕೆ, ಹವ್ಯಾಸಿಯಲ್ಲೂ ಕೂಡ ಪ್ರೇಕ್ಷಕ ಪ್ರಬಲನಾಗಿದ್ದಾಗ ಪ್ರಯೋಗಶೀಲ ನಾಟಕಗಳು ಸಾಲುಗಟ್ಟಿವೆ.

ಅದನ್ನೇ ಕೆಲವರು ಎಪ್ಪತ್ತರ ದಶಕದ (1970-80) ಆ ವೈಭವದ ದಿನಗಳು ಈಗೆಲ್ಲಿ ಎಂದು ಮರುಗುವುದಿದೆ. ಪ್ರೇಕ್ಷಕನ ಸಹಕಾರ ಎಂದರೆ ನಾಟಕದ ಖರ್ಚು ವೆಚ್ಚವನ್ನು ಭರಿಸುವುದು ಎಂದೇ ಅರ್ಥ. ಹೆಚ್ಚಿನ ಸಂಖ್ಯೆಯಲ್ಲಿ ಕಡ್ಡಾಯವಾಗಿ ಟಿಕೆಟ್ ಖರೀದಿಸಿ ನಾಟಕ ನೋಡುವುದು ಎಂದೂ ಇದರರ್ಥ.

ಹಾಗಂತ ಕನ್ನಡ ರಂಗಭೂಮಿಯ ಇತಿಹಾಸವನ್ನು ಅವಲೋಕಿಸಿದರೆ ಟಿಕೆಟ್ ಹಣದಿಂದಲೇ ನಾಟಕ ಉಳಿದುಬಂದಿದೆ ಎಂದಲ್ಲ. ಪ್ರಾಯೋಜಕರು ನಾಟಕ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ರಾಜ ಮಹಾರಾಜರುಗಳು ಒಂದು ಕಡೆ ಆಸ್ಥಾನದಲ್ಲಿ ನಾಟಕಗಳ ಪೋಷಕರಾಗಿದ್ದರೆ; ಮತ್ತೊಂದೆಡೆ ಜನಸಾಮಾನ್ಯರೇ ಜನಪದ ರಂಗಭೂಮಿಯನ್ನು ಉಳಿಸಿಕೊಂಡು ಬಂದರು. ರಾಜರಾಗಲಿ, ದುಡಿಯುವ ವರ್ಗದವರಾಗಲಿ ಅವರು ಪ್ರಾಯೋಜಕರೇ ಹೊರತು- ಟಿಕೆಟಿಟ್ಟು ನಾಟಕಕ್ಕೆ ವಿನಿಯೋಗಿಸಿದ ಹಣವನ್ನು ವಾಪಸ್‌ ತೆಗೆಯುವ ಚಿಕ್ಕಪುಟ್ಟ ಬಂಡವಾಳಿಗರಲ್ಲ. ರಾಜಸತ್ತೆಯಲ್ಲಿ ರಾಜರು ಮಾಡುತ್ತಿದ್ದ ಪ್ರಾಯೋಜಕತ್ವದ ಕೆಲಸವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಮಾಡಬೇಕು.

ಟಿಕೆಟಿಟ್ಟು ನಾಟಕ ನಡೆಸುವುದು ಅದೆಷ್ಟರ ಮಟ್ಟಿಗೆ ನಡೆಯಬಲ್ಲದೋ ಅಷ್ಟರಮಟ್ಟಿಗೆ ಒಂದು ಕಡೆ ನಡೆಯಲಿ. ಆಯಾ ತಂಡಗಳ ಸಾಮರ್ಥ್ಯಕ್ಕನುಗುಣವಾಗಿ ಅವರು ಮಾಡಿಕೊಳ್ಳುತ್ತಾರೆ. ಉಳಿದಂತೆ ಬಹುತೇಕ ಕಲಾಪ್ರಕಾರಗಳು ಉಳಿದು ಬೆಳೆದು ಬರಬೇಕಾದುದು ಪ್ರಾಯೋಜಕರಿಂದ- ಅಂದರೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಂದ ಹಾಗೂ ದಾನಿಗಳಿಂದ.

ಅಂದರೆ ಇದರರ್ಥ ಸರ್ಕಾರ ಕಲಾವಿದರಿಗೆ ಹಣ ಕೊಡುವುದೆಂದಲ್ಲ. ಹಾಗಂತ ವೃದ್ಧ ಕಲಾವಿದರಿಗೆ ಮಾಸಾಶನ, ವೈದ್ಯಕೀಯ ಸೌಲಭ್ಯ ಮುಂತಾದುವನ್ನು ಕೈಬಿಡುವುದೆಂದೂ ಅಲ್ಲ. ಮಾನವೀಯವಾದ ಕೆಲವು ಯೋಜನೆಗಳನ್ನು ಸರ್ಕಾರ ಮುಂದುವರಿಸಲಿ. ಮುಖ್ಯವಾಗಿ ಬೇಕಾದುದೆಂದರೆ ಕಲೆಯ ಅಭಿವ್ಯಕ್ತಿಗೆ ವೇದಿಕೆಗಳನ್ನು ಒದಗಿಸಿಕೊಡುವುದು, ಮೂಲಸೌಕರ್ಯಗಳನ್ನು ಕಲ್ಪಿಸುವುದು ಸರ್ಕಾರದ, ಸ್ಥಳೀಯ ಸಂಸ್ಥೆಗಳ ಆದ್ಯತೆಯಾಗಬೇಕು.

ನೃತ್ಯ ಪ್ರದರ್ಶನ ಏರ್ಪಡಿಸಲು, ಸಂಗೀತ ಗೋಷ್ಠಿ ನಡೆಸಲು, ನಾಟಕವಾಡಲು ಬೇಕಾದ ರಂಗಮಂದಿರ ಹಾಗೂ ಸಭಾ ಭವನಗಳನ್ನು ನಿರ್ಮಿಸುವುದು ಸರ್ಕಾರದ ಮುಖ್ಯ ಕಾರ್ಯಕ್ರಮವಾಗಬೇಕು. ಮತ್ತಷ್ಟು ರಂಗಶಾಲೆಗಳನ್ನು ತೆರೆಯಬೇಕು. ರೆಪರ್ಟರಿಗಳನ್ನು ಸ್ಥಾಪಿಸಬೇಕು. ಹಾಲಿ ಇರುವ ರೆಪರ್ಟರಿಗಳ ಹುದ್ದೆಗಳನ್ನು ಖಾಲಿಬಿಟ್ಟು ನನೆಗುದಿಗೆ ತಳ್ಳಬಾರದು. ಕಾಲಕಾಲಕ್ಕೆ ನೇಮಕ ಮಾಡಬೇಕು. ಸ್ವಾಯತ್ತ ಸಂಸ್ಥೆಗಳಾದ ಅಕಾಡೆಮಿಯ ಕಾರ್ಯಗಳನ್ನು ಸರ್ಕಾರ ತಾನೇ ಮಾಡಲು ಮುಂದಾಗಬಾರದು.

ತಮ್ಮ ಪಾಡಿಗೆ ತಾವು ಸಾಹಿತ್ಯ, ಕಲಾ ಚಟುವಟಿಕೆ ನಡೆಸುವ ತಂಡಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಹಾಯಧನ ನೀಡುತ್ತಿರುವುದು ಸರಿಯಷ್ಟೆ. ಕಾಲಕಾಲಕ್ಕೆ ಅದು ತಂಡಗಳಿಗೆ ಒದಗಿಬರಬೇಕು. ಆರ್ಥಿಕ ವರ್ಷದ ಅಂತ್ಯದಲ್ಲಿ ಹಣ ಮಂಜೂರು ಮಾಡಿ ಕೈತೊಳೆದುಕೊಳ್ಳುವ ಕಾರ್ಯ ಮಾಡಬಾರದು. ಹೆಚ್ಚು ಕಾರ್ಯಕ್ರಮ ನಡೆಸುವ ತಂಡಗಳಿಗೆ ನಿರಂತರವಾಗಿ ನೆರವು ನೀಡುವ ಕ್ರಿಯಾಯೋಜನೆಯನ್ನು ಪುನರಾರಂಭಿಸಬೇಕು. ನಾಲ್ಕು ವರ್ಷಗಳ ಹಿಂದೆ ಅಂತಹದೊಂದು ಪದ್ಧತಿ ಜಾರಿಯಲ್ಲಿತ್ತು.

ರಾಜ್ಯದ ಇತರೆಡೆ ರಂಗ ಚಟುವಟಿಕೆ ಅಷ್ಟಾಗಿ ಆಶಾದಾಯಕವಾಗಿಲ್ಲ. ಆದರೆ ರೆಪರ್ಟರಿಗಳು, ಸಂಚಾರಿ ತಂಡಗಳು ಕೆಲಮಟ್ಟಿಗೆ ಚಟುವಟಿಕೆ ನಿರತವಾಗಿವೆ. ಖಾಸಗಿಯವರು ತಾವೇ ಕಟ್ಟಿಕೊಂಡ ಕೆಲವು ರಂಗಮಂದಿರ ಹೊರತುಪಡಿಸಿದರೆ- ನಾಟಕವಾಡಲು ರಂಗಮಂದಿರಗಳಿಲ್ಲ. ಹಳ್ಳಿಗಳಲ್ಲಿ ನಾಟಕವಾಗದೇ ಇರುವುದಕ್ಕೆ ರಂಗಮಂದಿರಗಳ ಕೊರತೆ ಬಹು ಮುಖ್ಯ ಕಾರಣ.

ರಂಗಮಂದಿರಗಳ ಹೆಸರಿನಲ್ಲಿ ಜಿಲ್ಲೆಗೊಂದರಂತೆ ನಿರ್ಮಿಸಿರುವ ಬೃಹತ್ ಕಟ್ಟಡಗಳು ವಾಸ್ತವವಾಗಿ ರಂಗಮಂದಿರಗಳೇ ಅಲ್ಲ, ಅವು ಭೂತ ಬಂಗಲೆಗಳು! ಪುಟ್ಟ ಪುಟ್ಟ ರಂಗಮಂದಿರಗಳು, ಬಯಲು ರಂಗಮಂದಿರಗಳ ಅವಶ್ಯಕತೆ ಇಂದು ಹೆಚ್ಚಾಗಿದೆ. ನಾಟಕ ಏನಿದ್ದರೂ ನೂರಿನ್ನೂರು ಪ್ರೇಕ್ಷಕರ ಮಧ್ಯೆ ನಡೆಯುವ ಆಪ್ತ ಚಟುವಟಿಕೆ. ಇಂತಹ ಪುಟ್ಟ ರಂಗಮಂದಿರಗಳು ಹಳ್ಳಿಗಳಲ್ಲಿ ಒಂದು ಸಾವಿರ ರೂಪಾಯಿ ಬಾಡಿಗೆ ದರಕ್ಕೆ; ನಗರಗಳಲ್ಲಿ ಎರಡು ಸಾವಿರ ರೂಪಾಯಿ ಸಾಂಕೇತಿಕ ಬಾಡಿಗೆಗೆ ಲಭ್ಯವಾಗುವಂತಿರಬೇಕು.

ಪ್ರತಿ ಊರುಗಳಲ್ಲಿ ಕನಿಷ್ಠ ಒಂದಾದರೂ ರಂಗಮಂದಿರ ಬೇಕು. ಜಿಲ್ಲಾ ಕೇಂದ್ರಗಳಲ್ಲಿ ನಾಲ್ಕೈದು ಪುಟ್ಟ ರಂಗಮಂದಿಗಳು ಬೇಕು. ರಾಜ್ಯಸರ್ಕಾರ ಹಾಗೂ ಸ್ಥಳೀಯ ಪುರಸಭೆ, ನಗರಸಭೆಗಳೇ ರಂಗಮಂದಿರ ಕಟ್ಟಬಹುದು. ಬೆಂಗಳೂರು ನಗರದಲ್ಲಿ ರಂಗಚಟುವಟಿಕೆಗಳು ಸಾಕಷ್ಟು ಸಂಖ್ಯೆಯಲ್ಲಿ ನಡೆಯುತ್ತಿವೆ. ವಿವಿಧ ಕ್ಷೇತ್ರಗಳ ಜನ ರಂಗಭೂಮಿಗೆ ಮರಳಿದ್ದಾರೆ.

ಒಂದು ಚಳವಳಿಯ ಮಾದರಿಯಲ್ಲಿ ಅದು ಇಲ್ಲದಿರಬಹುದು, ಆದರೆ ವೈವಿಧ್ಯಮಯ ರಂಗಚಟುವಟಿಕೆಯಂತೂ ಇದೆ. ಬೃಹತ್ ನಗರಕ್ಕೆ ಇರುವ ನಾಲ್ಕೈದು ಪುಟ್ಟ ರಂಗಮಂದಿರಗಳು ಏನೇನೂ ಸಾಲವು. ನಾಟಕವಾಡಲು ತಂಡಗಳು ರೆಡಿ ಇದ್ದರೂ ರಂಗಮಂದಿರ ಇಲ್ಲ ಎಂಬ ಕಾರಣಕ್ಕೆ ನಾಟಕ ಪ್ರಯೋಗಗಳು ಮುಂದಕ್ಕೆ ಹೋಗುತ್ತಲೇ ಇರುತ್ತವೆ. ಯಾವಾಗಲೋ ತಮಗೆ ರಂಗಮಂದಿರ ದೊರೆತಾಗ ನಾಟಕವಾಡುತ್ತಾರೆ. ಅಷ್ಟೊತ್ತಿಗೆ ಕೆಲವರ ಉತ್ಸಾಹವೂ ಬತ್ತಿಹೋಗಿರುತ್ತದೆ.

ಬೆಂಗಳೂರಿನಲ್ಲಿ ರವೀಂದ್ರ ಕಲಾಕ್ಷೇತ್ರ, ಎ.ಡಿ.ಎ., ಚೌಡಯ್ಯ; ಜಿಲ್ಲೆಗಳಲ್ಲಿ ಜಿಲ್ಲಾ ರಂಗಮಂದಿರಗಳು 500ಕ್ಕಿಂತ ಅಧಿಕ ಪ್ರೇಕ್ಷಕರ ದೊಡ್ಡ ರಂಗಮಂದಿರಗಳಾಗಿವೆ. ಅಂತಹವೂ ಇರಲಿ. ಜನಪ್ರಿಯ ನಾಟಕಗಳಿಗೆ ದೊಡ್ಡ ರಂಗಮಂದಿರಗಳು ಬೇಕು. ಹತ್ತಾರು ನಾಟಕಗಳ ಮಧ್ಯೆ ಒಂದೆರಡು ಜನಪ್ರಿಯ ನಾಟಕಗಳು ಇದ್ದೇಇರುತ್ತವೆ. ‘ಮುಖ್ಯಮಂತ್ರಿ’, ‘ಮೈಸೂರು ಮಲ್ಲಿಗೆ’, ‘ಚಾಮಚಲುವೆ’, ‘ನಟಸಾರ್ವಭೌಮ’, ‘ಮಂಟೇಸ್ವಾಮಿ’ಯಂತಹ ಜನಪ್ರಿಯ ನಾಟಕಗಳು ಏಕಕಾಲಕ್ಕೆ ಸಾವಿರ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುವ ಶಕ್ತಿಯನ್ನು ಪಡೆದಿರುತ್ತವೆ.

ದೊಡ್ಡ ರಂಗಮಂದಿರಗಳು ಅಂತಹ ನಾಟಕಗಳಿಗೆ ಬೇಕಾಗುತ್ತವೆ. ಆದರೆ ಅಂತಹ ಜನಪ್ರಿಯ ನಾಟಕಗಳು ಅಪರೂಪ. ಇನ್ನೂರು ಮುನ್ನೂರು ಪ್ರೇಕ್ಷಕರ ಮಧ್ಯೆ ಪ್ರದರ್ಶನ ಕಾಣುವ ನಾಟಕಗಳ ಸಂಖ್ಯೆಯೇ ಜಾಸ್ತಿ. ಅವುಗಳಿಗೆ ಪುಟ್ಟ ರಂಗಮಂದಿರಗಳೇ ಬೇಕು. ಉತ್ತಮ ಧ್ವನಿ ವ್ಯವಸ್ಥೆ ಮತ್ತು ಅಕಾಸ್ಟಿಕ್ಸ್ ಇರುವ ಪುಟ್ಟ ರಂಗಮಂದಿರಗಳು ಹೆಚ್ಚು ಸಂಖ್ಯೆಯಲ್ಲಿ ಬೇಕಾಗಿವೆ. ಸರ್ಕಾರ ಆದ್ಯತೆ ಮೇಲೆ ನಿರ್ಮಿಸಬೇಕು.

ಕೆಲವು ಬಡಾವಣೆ ಹಾಗೂ ಉದ್ಯಾನಗಳಲ್ಲಿ ಸಭಾಭವನ ಮತ್ತು ಬಯಲು ರಂಗಮಂದಿರಗಳು ನಿರ್ಮಾಣವಾಗಿದ್ದರೂ- ನಗರಪಾಲಿಕೆ ಹಾಗೂ ಸರ್ಕಾರ ಅವನ್ನು ಸರಿಯಾಗಿ ನಿರ್ವಹಿಸದೇ ಇರುವುದರಿಂದ ದೂಳು ತಿನ್ನುತ್ತ ಬಿದ್ದಿವೆ. ಅವು ಕಾರ್ಯ ಪ್ರವೃತ್ತವಾಗುವಂತೆ ಮಾಡಬೇಕಾದ ಕೆಲಸ ಜರೂರು ಆಗಬೇಕಿದೆ.

ರೆಪರ್ಟರಿಗಳಿಂದ ರಂಗತರಬೇತಿ/ ಡಿಪ್ಲೊಮಾ/ ಪದವಿ ಪಡೆದು ಹೊರಬಂದ ಯುವಕರಿಗೆ ರಾಜ್ಯ ಸರ್ಕಾರ ಕೆಲ ವರ್ಷಗಳ ಹಿಂದೆ ಶಾಲೆ, ಹೈಸ್ಕೂಲುಗಳ ರಂಗ ಶಿಕ್ಷಕರಾಗಿ ನೇಮಕ ಮಾಡಿಕೊಂಡಿತು. ಎಲ್ಲರಿಗೂ ಕೆಲಸ ನೀಡಲಿಲ್ಲ ಹಾಗೂ ಎಲ್ಲ ಶಾಲೆಗಳಲ್ಲಿ ರಂಗಶಿಕ್ಷಕರನ್ನೂ ನೇಮಿಸಲಿಲ್ಲ. ಸ್ಯಾಂಪಲ್‌ಗೆ ಎಂಬಂತೆ ಕೆಲವು ನೇಮಕವಾದವು. ಆದರೆ ಎಲ್ಲೆಲ್ಲಿ ಶಿಕ್ಷಕರು ಇದ್ದಾರೋ ಬಹುತೇಕ ಆ ಎಲ್ಲ ಕಡೆ ಮಕ್ಕಳ ರಂಗಭೂಮಿ ಗರಿಗೆದರಿದೆ. ಈ ಬೆಳವಣಿಗೆಯನ್ನು ಕಂಡು ಒಂದು ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಪ್ರತಿಯೊಂದು ಶಾಲೆಗೂ ರಂಗ ಶಿಕ್ಷಕರ ನೇಮಕವನ್ನು ಆದ್ಯತೆಯಿಂದ ಮಾಡಬೇಕಿತ್ತು. ಈ ಬೇಡಿಕೆ ಇನ್ನೂ ನನೆಗುದಿಗೆ ಬಿದ್ದಿದೆ.

ರೆಪರ್ಟರಿಗಳು ಹೆಚ್ಚಬೇಕು. ರಾಜ್ಯ ಸರ್ಕಾರ ಬಾಕಿ ಉಳಿದಿರುವ ಇನ್ನೂ ಒಂದೆರಡು ರಂಗಾಯಣ ಸ್ಥಾಪಿಸಬೇಕು. ಸಂಸ್ಕೃತಿ ಪ್ರಿಯವಾದ ಸರ್ಕಾರವೊಂದು ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಾದ ಈ ಪಟ್ಟಿ ಇನ್ನೂ ಬೆಳೆಯುತ್ತದೆ. ಆದರೆ ಆದ್ಯತೆಯಲ್ಲಿ ಆಗಬೇಕಿರುವ ಕೆಲಸ ಎಂದರೆ ಪುಟ್ಟ ರಂಗಮಂದಿರಗಳ ನಿರ್ಮಾಣ, ರಂಗಶಿಕ್ಷಕರ ನೇಮಕ, ಟ್ರಸ್ಟ್‌ಗಳು, ಅಕಾಡೆಮಿಗಳು, ರಂಗಾಯಣಗಳಿಗೆ ಕಾಲಕಾಲಕ್ಕೆ ನೇಮಕ ಮುಂತಾದವು.

ಇವಿಷ್ಟು ಪ್ರಾಯೋಜನೆ ಕೆಲಸವನ್ನು ಸರ್ಕಾರ ಮಾಡಿದರೂ ಸಾಕು. ಕಲಾಚಟುವಟಿಕೆಗಳು ಮತ್ತಷ್ಟು ಗರಿಗೆದರುತ್ತವೆ. ವೃತ್ತಿರಂಗಭೂಮಿ, ಯಕ್ಷಗಾನ, ತುಳು ಹಾಸ್ಯನಾಟಕಗಳು ಪ್ರೇಕ್ಷಕರ ಟಿಕೆಟ್ ಹಣದಿಂದಲೇ ಬದುಕಿವೆ. ಇವುಗಳ ಪೈಕಿ ವೃತ್ತಿನಾಟಕ ಕಂಪನಿಗಳಿಗೆ ಕಾಯಕಲ್ಪ ಯೋಜನೆಯಿಂದತಕ್ಕ ಮಟ್ಟಿನ ನೆರವು ಸರ್ಕಾರದಿಂದ ದೊರಕುತ್ತಿದೆ.

ಉಳಿದಂತೆ ಎಲ್ಲರಿಗೂ ಟಿಕೆಟ್‌ನಿಂದಲೇ ಬದುಕುಳಿಯಲು ಸಾಧ್ಯವಿಲ್ಲ. ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಪ್ರಾಯೋಜನೆ ಬೇಕೇಬೇಕು. ಅಂದರೆ ಮೊದಲೇ ಹೇಳಿದಂತೆ ಹಣ ಹಂಚುವುದಲ್ಲ, ಸಂಗೀತ, ಚಿತ್ರಕಲೆ, ನಾಟಕಗಳಿಗೆ ಪುಟ್ಟರಂಗಮಂದಿರ, ಸಭಾಭವನ ನಿರ್ಮಾಣದಂತಹ ಮೂಲಸೌಕರ್ಯಗಳನ್ನು ಕಲ್ಪಿಸುವುದು.

Read More

Comments
ಮುಖಪುಟ

ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು ಮತ್ತೊಮ್ಮೆ ಉದ್ಘಾಟಿಸಿದರೇ ಪ್ರಧಾನಿ ಮೋದಿ?

ದಾಖಲೆಗಳ ಪ್ರಕಾರ, 7 ವರ್ಷಗಳ ಹಿಂದೆಯೇ ಎಐಐಎ ಸ್ಥಾಪನೆಯಾಗಿತ್ತು ಎಂಬುದು ತಿಳಿದುಬಂದಿದೆ. 2010ರ ಅಕ್ಟೋಬರ್‌ನಲ್ಲಿ ಸರ್ಕಾರ ಬಿಡುಗಡೆ ಮಾಡಿದ್ದ ಪತ್ರಿಕಾ ಪ್ರಕಟಣೆಯೂ ಇದಕ್ಕೆ ಇಂಬು ನೀಡಿದೆ.

ಕೈಮಗ್ಗ ಉತ್ಪನ್ನಗಳ ಕರಮುಕ್ತಕ್ಕೆ ಆಗ್ರಹಿಸಿ ನಡೆಯುತ್ತಿರುವ ಸತ್ಯಾಗ್ರಹಕ್ಕೆ ದೇವೇಗೌಡ ಸಾಥ್

ಈ ಸಂಬಂಧ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಈ ವಿಚಾರವನ್ನು  ಅವರ ಗಮನಕ್ಕೆ ತರುತ್ತೇವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಭರವಸೆ ನೀಡಿದ್ದಾರೆ.

ಅಮೆರಿಕ ಲೇಖಕ ಜಾರ್ಜ್ ಸೌಂದರ್ಸ್‌ಗೆ ಮ್ಯಾನ್ ಬುಕರ್ ಪ್ರಶಸ್ತಿ

ಜಾರ್ಜ್ ಸೌಂದರ್ಸ್ ಅವರು ಬರೆದ ಕಾದಂಬರಿ  ‘ಲಿಂಕನ್ ಇನ್ ದಿ ಬರ್ಡೊ‘(Lincoln in the Bardo)ಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

ಸಂಚಾರ ನಿಯಮ ಉಲ್ಲಂಘನೆ: ಮತ್ತೆ ಟ್ವಿಟರ್‌ನಲ್ಲಿ ಗಮನಸೆಳೆದ ಅಭಿಷೇಕ್ ಗೋಯಲ್

ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಮೂವರು ವಿದ್ಯಾರ್ಥಿನಿಯರು ಹಾಗೂ ಮುಂಭಾಗದಲ್ಲಿ ಮತ್ತೊಂದು ಮಗುವನ್ನು ಕುಳ್ಳಿರಿಸಿಕೊಂಡು ಹೋಗುತ್ತಿರುವ ಚಿತ್ರವನ್ನು ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಅಭಿಷೇಕ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಸಂಗತ

ಅರ್ಚಕರಾದರಷ್ಟೇ ಸಾಲದು...

ದಲಿತರು ಇಂದು ತಮ್ಮ ವಿಮೋಚನೆಗೆ ಅಂಬೇಡ್ಕರರ ಮಾರ್ಗವೇ ಸೂಕ್ತ ಎಂದು ನಂಬಿದ್ದಾರೆ. ಇಷ್ಟರ ಮೇಲೂ ಸರ್ಕಾರಕ್ಕೆ ದಲಿತರನ್ನು ಪುರೋಹಿತರನ್ನಾಗಿ ಮಾಡುವ ಇಚ್ಛೆ ಇದ್ದಲ್ಲಿ, ತಡವಾಗಿಯಾದರೂ ಸರಿಯೇ ತಾಲ್ಲೂಕಿಗೊಂದು ಬೌದ್ಧ ವಿಹಾರ ನಿರ್ಮಿಸಿ ಅಲ್ಲಿ ದಲಿತರನ್ನು ಭಂತೇಜಿಗಳನ್ನಾಗಿ ಆಯ್ಕೆ ಮಾಡಲಿ.

ಮೀಸಲಾತಿ ಏರಿಕೆಗೆ ಆಧಾರವೇನು?

ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಜನಸಂಖ್ಯೆಯಲ್ಲಿ ಅವರ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ಒದಗಿಸಬೇಕೆಂದು ಸಂವಿಧಾನದಲ್ಲಿಯೇ ಹೇಳಲಾಗಿದೆ. ಆದ್ದರಿಂದ ಅವರಿಗೆ ಮೀಸಲಾತಿಯಲ್ಲಿ ಅದೇ ಪ್ರಮಾಣದಲ್ಲಿ ಏರಿಕೆ ಮಾಡುವುದು ಅನಿವಾರ್ಯ

ಸುಲಭವೂ ಹೌದು ಕಷ್ಟವೂ ಹೌದು

ಮೀಸಲಾತಿ ಏರಿಕೆಗೆ ಕಷ್ಟಗಳು ಇರುವುದು ನಿಜ. ಆದರೆ, ಜನಶಕ್ತಿ ಮನಸ್ಸು ಮಾಡಿದರೆ ಅದೇನೂ ದೊಡ್ಡ ವಿಚಾರ ಅಲ್ಲ...

ವರ್ಚಸ್ಸು ಕಳೆದುಕೊಳ್ಳುತ್ತಿರುವ ಮಾಹಿತಿ ಹಕ್ಕು

ಮಾಹಿತಿ ಹಕ್ಕು ಅಧಿನಿಯಮದ ಜಾರಿಯಲ್ಲಿ ಅನೇಕ ತೊಡರುಗಳು ಕಾಣಿಸಿಕೊಂಡಿವೆ. ಬಾಕಿ ಉಳಿದಿರುವ ಅರ್ಜಿ ಮತ್ತು ಮೇಲ್ಮನವಿಗಳ ರಾಶಿ ದಿನೇ ದಿನೇ ಬೆಳೆಯುತ್ತಿದೆ...

ಕಾಮನಬಿಲ್ಲು

ನೆಟ್ಟಿ ಪ್ರವಾಸ

ನಮ್ಮ ತಂಡದಲ್ಲಿ ಅದುವರೆಗೂ ಗದ್ದೆಯನ್ನೇ ನೋಡದವರಿದ್ದರು, ಸಣ್ಣವರಿದ್ದಾಗ ಗದ್ದೆ ಕೆಲಸ ಮಾಡಿ ಅನುಭವ ಇದ್ದವರಿದ್ದರು, ಈಗಲೂ ಕೃಷಿ ಮಾಡುವವರಿದ್ದರು. ಕೆಲವರಿಗೆ ಇದು ಹೊಚ್ಚ ಹೊಸ ಅನುಭವ, ಇನ್ನು ಕೆಲವರಿಗೆ ಬಾಲ್ಯದ ನೆನಪು

‘ಕ್ಲಚ್ಚು ಯಾವ್ದು ಅಂತ್ಲೇ ಗೊತ್ತಿರಲಿಲ್ಲ’

ಸೆಲೆಬ್ರಿಟಿಗಳಿಗೆ ಯಾವ ಬೈಕು, ಕಾರೆಂದರೆ ಇಷ್ಟ? ಅವರ ಮೊದಲ ಡ್ರೈವಿಂಗ್‌ನ ಅನುಭವ ಹೇಗಿತ್ತು? ಮಾಡಿಕೊಂಡ ಅವಾಂತರಗಳೇನು? ಇವೆಲ್ಲ ಅನುಭವಗಳ ತಾಣವೇ ಫಸ್ಟ್‌ ಡ್ರೈವ್. ಈ ವಾರ ತಮ್ಮ ಫಸ್ಟ್‌ ಡ್ರೈವ್‌ ಕಥೆಯನ್ನು ತೆರೆದಿಟ್ಟಿದ್ದಾರೆ ಕನ್ನಡದ ನಾಯಕ ನಟ ಧ್ರುವ ಸರ್ಜಾ

ಸ್ಮಾರ್ಟ್‌ಫೋನ್‌ ಫೋಟೊಗ್ರಫಿಯ ಹೊಸ ಸಾಧ್ಯತೆಗಳು

ಮೊಬೈಲ್ ಮೂಲಕ ಫೋಟೊಗ್ರಫಿ ಮಾಡುವಾಗ ಅಥವಾ ಚಲನಚಿತ್ರ, ಸಾಕ್ಷ್ಯಚಿತ್ರಗಳನ್ನು ಚಿತ್ರೀಕರಿಸುವಾಗ ಅನೇಕ ಉಪಕರಣಗಳ ಅವಶ್ಯಕತೆಯಿರುತ್ತದೆ. ಅಂತಹ ಭಿನ್ನ ಉಪಕರಣಗಳನ್ನು ಒಂದೆಡೆ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಈ ಮಾಡ್ಯುಲರ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಶ್...ಇದು ಶ್ರವಣಾತೀತ!

ಶ್ರವಣಾತೀತ ಶಬ್ದ ವ್ಯವಸ್ಥೆ’ಯನ್ನು ಬಳಸಿ ಖಾತೆಯಿಂದ ಖಾತೆಗೆ ಸುರಕ್ಷಿತ ಹಣ ವರ್ಗಾವಣೆ ಮಾಡುವ ವಿನೂತನ ತಂತ್ರಜ್ಞಾನ ‘ಆಡಿಯೊ ಕ್ಯುಆರ್(Audio QR)’ ಜಾಗತಿಕ ಮಟ್ಟದಲ್ಲಿ ಕುತೂಹಲ ಕೆರಳಿಸಿದೆ.