ಭಾರತ ತಂಡಕ್ಕೆ ಮರಳುವ ಗುರಿ

9 Oct, 2017

ಕರ್ನಾಟಕ ಕ್ರಿಕೆಟ್‌ ಲೋಕ ಕಂಡ ಯಶಸ್ವಿ ನಾಯಕರಲ್ಲಿ ಆರ್‌.ವಿನಯ್‌ ಕುಮಾರ್ ಕೂಡ ಒಬ್ಬರು. ರಣಜಿ ಟ್ರೋಫಿಯಲ್ಲಿ ಸತತ ಎರಡು ಬಾರಿ ರಾಜ್ಯ ತಂಡವನ್ನು ಪ್ರಶಸ್ತಿಯೆಡೆಗೆ ಮುನ್ನಡೆಸಿದ್ದ ‘ದಾವಣಗೆರೆ ಎಕ್ಸ್‌ಪ್ರೆಸ್‌’, ಒಂದೇ ಋತುವಿನಲ್ಲಿ (2013-14) ರಣಜಿ, ಇರಾನಿ ಮತ್ತು ವಿಜಯ್‌ ಹಜಾರೆ ಟ್ರೋಫಿಗಳನ್ನು ಗೆದ್ದ ಭಾರತದ ಮೊದಲ ನಾಯಕ ಎಂಬ ಹಿರಿಮೆ ಹೊಂದಿದ್ದಾರೆ.

ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದ ಅವರು ಈಗ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ಕನವರಿಕೆಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಕರ್ನಾಟಕ ಪ್ರೀಮಿಯರ್‌ ಲೀಗ್‌ನಲ್ಲಿ (ಕೆಪಿಎಲ್‌) ಮೋಡಿ ಮಾಡಿದ್ದ ವಿನಯ್‌ ಈಗ ರಣಜಿ ಟ್ರೋಫಿ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ ಜೊತೆ ತಮ್ಮ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

ಈ ಬಾರಿ ರಣಜಿ ಟ್ರೋಫಿಗಾಗಿ ಸಿದ್ಧತೆ ಹೇಗೆ ನಡೆದಿದೆ?
ಈ ಸಲ ನಾವು ಎರಡನೇ ಸುತ್ತಿನಲ್ಲಿ ಪಂದ್ಯ ಆಡುತ್ತಿರುವ ಕಾರಣ ತರಬೇತಿಗೆ ಹೆಚ್ಚು ಸಮಯ ಸಿಕ್ಕಿದೆ. ಈ ಅವಧಿಯಲ್ಲಿ ಕಠಿಣ ತಾಲೀಮು ನಡೆಸಿದ್ದು, ಈಗಾಗಲೇ ಅಭ್ಯಾಸ ಪಂದ್ಯಗಳನ್ನೂ ಆಡಿದ್ದೇವೆ. ಎಲ್ಲಾ ಆಟಗಾರರು ಉತ್ತಮ ಲಯದಲ್ಲಿದ್ದಾರೆ. ಈ ಬಾರಿ ಲೀಗ್‌ ಹಂತದಲ್ಲಿ ಆರು ಪಂದ್ಯಗಳನ್ನು ಆಡುತ್ತಿರುವುದರಿಂದ ಮೊದಲ ಎರಡು ಪಂದ್ಯಗಳಲ್ಲಿ ಗೆಲ್ಲುವುದು ಬಹಳ ಮುಖ್ಯ. ಇದರಿಂದ ಆಟಗಾರರ ಮನೋಬಲ ವೃದ್ಧಿಸಲಿದ್ದು, ನಂತರದ ನಾಲ್ಕು ಪಂದ್ಯಗಳಲ್ಲೂ ಶ್ರೇಷ್ಠ ಆಟ ಆಡಲು ನೆರವಾಗುತ್ತದೆ.

ಹೊಸ ಕೋಚ್‌ಗಳ ಬಗ್ಗೆ ಹೇಳಿ?
ಪಿ.ವಿ.ಶಶಿಕಾಂತ್‌ ಮತ್ತು ಜಿ.ಕೆ.ಅನಿಲ್‌ ಕುಮಾರ್‌ ಅವರು ಈ ಹಿಂದೆ ಕರ್ನಾಟಕದ ಪರ ಆಡಿದ ಅನುಭವ ಹೊಂದಿ ದ್ದಾರೆ. ಶಶಿಕಾಂತ್‌ ಅವರಿಗೆ ರಾಜ್ಯ ತಂಡವನ್ನು ಮುನ್ನಡೆಸಿದ ಅನುಭವವೂ ಇದೆ. ನಾನು ರಣಜಿಗೆ ಪದಾರ್ಪಣೆ ಮಾಡಿದಾಗ ಅವರು ಆಯ್ಕೆ ಸಮಿತಿಯಲ್ಲಿದ್ದರು. ಅವರ ಅನುಭವ ಖಂಡಿತವಾಗಿಯೂ ತಂಡದ ನೆರವಿಗೆ ಬರಲಿದೆ.

ರಣಜಿಗೂ ಮುನ್ನ ಕೆಪಿಎಲ್ ಟೂರ್ನಿ ನಡೆದಿತ್ತು. ಇದರಿಂದ ಏನಾದರೂ ಲಾಭವಾಗಿದೆಯಾ?
ಕರ್ನಾಟಕ ‍ಪ್ರೀಮಿಯರ್‌ ಲೀಗ್‌ಗೂ (ಕೆಪಿಎಲ್‌) ರಣಜಿಗೂ ತುಂಬಾ ವ್ಯತ್ಯಾಸವಿದೆ. ಎರಡೂ ಟೂರ್ನಿಗಳಲ್ಲಿ ಆಡುವಾಗ ಆಟಗಾರರ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿರುತ್ತದೆ. ಜೊತೆಗೆ ಪಂದ್ಯಕ್ಕೂ ಮುನ್ನ ರೂಪಿಸುವ ಯೋಜನೆಯೂ ಭಿನ್ನವಾಗಿರುತ್ತದೆ. ಹೀಗಾಗಿ ಲೀಗ್‌ನಿಂದ ಹೆಚ್ಚು ಲಾಭವಾಗಿದೆ ಎಂದು ಅನಿಸುವುದಿಲ್ಲ.

ರಾಹುಲ್‌, ಮನೀಷ್‌ ಪಾಂಡೆ ಮತ್ತು ಕರುಣ್‌ ನಾಯರ್‌ ಅಲಭ್ಯರಾದರೆ ತಂಡಕ್ಕೆ  ಹಿನ್ನಡೆಯಾಗಬಹುದೆ?
ರಾಹುಲ್‌, ಮನೀಷ್‌ ಮತ್ತು ಕರುಣ್‌ ಅನುಭವಿ ಆಟಗಾರರು. ಅವರು ಭಾರತ ಮತ್ತು ಭಾರತ ‘ಎ’ ತಂಡದಲ್ಲಿ ಆಡುವ ಅವಕಾಶ ಪಡೆದರೆ ತಂಡಕ್ಕೆ ಅಲ್ಪ ಹಿನ್ನಡೆಯಾಗುವುದಂತೂ ನಿಜ. ಒಂದೊಮ್ಮೆ ಅವರು ಅಲಭ್ಯರಾದರೆ ಹೊಸಬರಿಗೆ ಅವಕಾಶ ಸಿಗುತ್ತದೆ. ತಮ್ಮೊಳಗಿನ ಪ್ರತಿಭೆಯನ್ನು ಸಾಬೀತುಮಾಡಲು ಅವರಿಗೆ ಅನುಕೂಲವಾಗುತ್ತದೆ.

ಹೋದ ಸಲ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಹೀನಾಯವಾಗಿ ಸೋತಿತ್ತು. ಇದಕ್ಕೆ ಕಾರಣ?
ಲೀಗ್‌ ಹಂತದ ಎಲ್ಲಾ ಪಂದ್ಯಗಳಲ್ಲೂ  ತುಂಬಾ ಚೆನ್ನಾಗಿ ಆಡಿದ್ದೆವು. ಕ್ವಾರ್ಟರ್‌ ಫೈನಲ್‌ ಪಂದ್ಯ ಆಯೋಜನೆಯಾಗಿದ್ದ ವಿಶಾಖಪಟ್ಟಣದ ವೈ.ಎಸ್‌.ರಾಜಶೇಖರ ರೆಡ್ಡಿ ಕ್ರೀಡಾಂಗಣದ ಪಿಚ್‌ನ ಗುಣ ಅರಿಯುವಲ್ಲಿ ಎಡವಿದ್ದೆವು. ಹೀಗಾಗಿ ಎರಡೇ ದಿನದಲ್ಲಿ ಸೋಲು ಎದುರಾಯಿತು.

ಈ ಬಾರಿ ತಂಡದ ಗುರಿ?
ರಣಜಿ ಟ್ರೋಫಿ ಗೆಲ್ಲಬೇಕು. ಇದೊಂದೆ ನಮ್ಮ ಮುಂದಿರುವ ಗುರಿ.

ಮತ್ತೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗಬಹುದು ಎಂಬ ವಿಶ್ವಾಸ ಇದೆಯೇ?
ಖಂಡಿತವಾಗಿಯೂ ಇದೆ. ಹೋದ ರಣಜಿ ಋತುವಿನಲ್ಲಿ ಮೂರು ಬಾರಿ ಪಂದ್ಯಶ್ರೇಷ್ಠ ಗೌರವ ಗಳಿಸಿದ್ದೇನೆ. ಅದರ ಹಿಂದಿನ ವರ್ಷ ಬಿಸಿಸಿಐನಿಂದ ರಣಜಿಯಲ್ಲಿ ಹೆಚ್ಚು ವಿಕೆಟ್‌ ಗಳಿಸಿದ ಬೌಲರ್‌ ಮತ್ತು ಶ್ರೇಷ್ಠ ಆಲ್‌ರೌಂಡರ್ ಗೌರವಗಳು ಸಿಕ್ಕಿವೆ. ಮುಂಬರುವ ಎಲ್ಲಾ ಟೂರ್ನಿಗಳಲ್ಲೂ ಪರಿಣಾಮಕಾರಿ ಆಟ ಆಡುವತ್ತ ಚಿತ್ತ ಹರಿಸಿದ್ದೇನೆ. ಹೀಗಾಗಿ ಆಯ್ಕೆ ಸಮಿತಿ ನನ್ನ ಮೇಲೆ ಒಲವು ತೋರುವ ಭರವಸೆ ಇದೆ.

ಒಂದೇ ಋತುವಿನಲ್ಲಿ ರಣಜಿ, ವಿಜಯ್‌ ಹಜಾರೆ ಮತ್ತು ಇರಾನಿ ಟ್ರೋಫಿ ಗೆದ್ದ ಭಾರತದ ಮೊದಲ ನಾಯಕ ನೀವು. ಈ ಸಾಧನೆ ಬಗ್ಗೆ ಹೇಳಿ?
ಇದು ಹೆಮ್ಮೆ ಪಡುವಂತಹ ಸಾಧನೆ. ಪ್ರತಿ ಟೂರ್ನಿಯಲ್ಲೂ ನಾವು ಒಂದು ತಂಡವಾಗಿ ಆಡಿದ್ದೇವೆ. ಪ್ರಶಸ್ತಿ ಗೆದ್ದಾಗ ಸಂಭ್ರಮಿಸಿದ್ದೇವೆ. ಆದರೆ ಎಂದಿಗೂ ಮೈಮರೆತಿಲ್ಲ. ಪ್ರತಿ ಬಾರಿ ಅಂಗಳಕ್ಕಿಳಿದಾಗಲೂ ಗೆಲುವೊಂದೇ ನಮ್ಮ ಮಂತ್ರವಾಗಿರುತ್ತದೆ. ತಂಡದಲ್ಲಿರುವ ಯಾರೂ ದಾಖಲೆಗಾಗಿ ಆಡುವುದಿಲ್ಲ. ಅದರ ಬಗ್ಗೆ ಯೋಚಿಸುವುದೂ ಇಲ್ಲ.

ಕೆಪಿಎಲ್‌ ಮತ್ತು ಹಿಂದಿನ ಕೆಲ ಟೂರ್ನಿಗಳಲ್ಲಿ ನೀವು ಮೇಲಿನ ಕ್ರಮಾಂಕದಲ್ಲಿ ಆಡಿದ್ದೀರಿ. ಈ ಬದಲಾವಣೆಗೆ ಕಾರಣ?
ಬ್ಯಾಟ್ಸ್‌ಮನ್‌ ಆಗಿಯೇ ನಾನು ಕ್ರಿಕೆಟ್‌ ಬದುಕು ಆರಂಭಿಸಿದ್ದು. ತಂಡದ ಅಗತ್ಯಕ್ಕನುಗುಣವಾಗಿ ಆಡಬೇಕಿರುವುದು ಆಟಗಾರನ ಕರ್ತವ್ಯ. ಕೆಪಿಎಲ್‌ನಲ್ಲಿ ಮೇಲಿನ ಕ್ರಮಾಂಕದಲ್ಲಿ ಆಡಬೇಕಾದ ಅನಿವಾರ್ಯತೆ ಇತ್ತು. ಈ ಕಾರಣದಿಂದಾಗಿಯೇ ನಾಲ್ಕು ಮತ್ತು ಐದನೇ ಕ್ರಮಾಂಕಗಳಲ್ಲಿ ಆಡಿದ್ದೆ. ಈಗ ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸುವುದು ತುಂಬಾ ಮುಖ್ಯ. ಹಾಗಾದಲ್ಲಿ ಮಾತ್ರ ತಂಡ ಯಶಸ್ಸು ಕಾಣುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಬೌಲಿಂಗ್‌ ಜೊತೆಗೆ ಬ್ಯಾಟಿಂಗ್‌ಗೂ ಮಹತ್ವ ನೀಡುತ್ತಿದ್ದೇನೆ.

ರಣಜಿ, ಕೆಪಿಎಲ್‌ ಮತ್ತು ಇತರ ಟೂರ್ನಿಗಳಲ್ಲಿ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು  ಶ್ರೇಷ್ಠ ಸಾಮರ್ಥ್ಯ ತೋರಿದ್ದೇನೆ. ಹೋದ ವರ್ಷ ಅಂತರ ವಲಯ ಟಿ–20 ಟೂರ್ನಿಯಲ್ಲಿ ನಾಯಕನಾಗಿದ್ದಾಗ ಪೂರ್ವ ವಲಯದ ಎದುರಿನ ಪಂದ್ಯದಲ್ಲಿ ಆರಂಭಿಕನಾಗಿ ಅಂಗಳಕ್ಕಿಳಿದು 68 ರನ್‌ ಗಳಿಸಿದ್ದೆ. ಯಶಸ್ವಿ ಆಲ್‌ರೌಂಡರ್‌ ಆಗಿ ರೂಪುಗೊಳ್ಳಬೇಕೆಂಬುದು ನನ್ನ ಉದ್ದೇಶ. ಹಾಗಂತ ಬ್ಯಾಟಿಂಗ್‌ಗೆ ಹೆಚ್ಚು ಒತ್ತು ನೀಡಿ ಬೌಲಿಂಗ್‌ ಅನ್ನು ಕಡೆಗಣಿಸುವುದಿಲ್ಲ.

ನಿಮ್ಮ ಫಿಟ್‌ನೆಸ್‌ ಮಂತ್ರ ?
ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುತ್ತೇನೆ. 22 ವರ್ಷದ ಆಟಗಾರರ ಜೊತೆ ಸ್ಪರ್ಧಿಸಬೇಕಿರುವ ಕಾರಣ, ಅವರು ಫಿಟ್‌ನೆಸ್‌ ಕಾಪಾಡಿಕೊಳ್ಳಲು ಏನೆಲ್ಲಾ ಮಾಡುತ್ತಾರೊ, ಆ ಕಸರತ್ತುಗಳನ್ನು ಮಾಡುತ್ತೇನೆ. ಇದು ಅಗತ್ಯವೂ ಕೂಡ.

ನಿಮಗೀಗ 33 ವರ್ಷ. ಇದು ಸಾಧನೆಗೆ ಅಡ್ಡಿಯಾಗುವುದಿಲ್ಲವೇ?
ವಯಸ್ಸು ಕೇವಲ ಸಂಖ್ಯೆಯಷ್ಟೆ. ಇದು ಸಾಧನೆಗೆ ಖಂಡಿತವಾಗಿಯೂ ಅಡ್ಡಿಯಾಗುವುದಿಲ್ಲ. ಆಶಿಶ್‌ ನೆಹ್ರಾ ಅವರು 38ನೇ ವಯಸ್ಸಿನಲ್ಲಿ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಅವರಿಗೆ ಹೋಲಿಸಿದರೆ ನಾನು ಇನ್ನೂ 5 ವರ್ಷ ಚಿಕ್ಕವನು. ಹೀಗಾಗಿ ವಯಸ್ಸಿನ ಬಗ್ಗೆ ಯಾವತ್ತೂ ಯೋಚಿಸುವುದಿಲ್ಲ. ಅಂಗಳಕ್ಕಿಳಿದರೆ ಈಗಲೂ 20ರ ಹರೆಯದ ಯುವಕರಷ್ಟೇ ಚುರುಕಾಗಿ ಫೀಲ್ಡಿಂಗ್‌ ಮಾಡುತ್ತೇನೆ. ರನ್‌ಗಾಗಿ ಓಡುವಾಗಲೂ ಹೆಚ್ಚು ದಣಿಯುವುದಿಲ್ಲ.

ಈ ಬಾರಿ ಬಿಸಿಸಿಐ ಹಳೆಯ ಪದ್ಧತಿಯ ಪ್ರಕಾರವೇ ರಣಜಿ ಟ್ರೋಫಿ ಆಯೋಜಿಸಲು ನಿರ್ಧರಿಸಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ಹೋದ ಬಾರಿ ಎಲ್ಲಾ ತಂಡಗಳು ತವರಿನ ಹೊರಗೆ ಪಂದ್ಯಗಳನ್ನು ಆಡಿದ್ದವು. ಹೀಗಾಗಿ ಕ್ರೀಡಾಂಗಣಗಳಲ್ಲಿ ಹೆಚ್ಚು ಜನ ಸೇರಿರಲಿಲ್ಲ.

ಕರ್ನಾಟಕ ತಂಡ ಬೇರೆ ರಾಜ್ಯದಲ್ಲಿ ಆಡಿದರೆ ಯಾರು ತಾನೆ ಬೆಂಬಲಿಸುತ್ತಾರೆ. ನಾವು ಹುಬ್ಬಳ್ಳಿ, ಮೈಸೂರು ಮತ್ತು ಶಿವಮೊಗ್ಗದಂತಹ ನಗರಗಳಲ್ಲಿ ಆಡಿದರೆ ಬೇರೆ ಬೇರೆ ಭಾಗಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಜನ ಮೈದಾನಕ್ಕೆ ಬಂದು ಪಂದ್ಯಗಳನ್ನು ನೋಡುತ್ತಾರೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳಲ್ಲಿ ಕ್ರಿಕೆಟ್‌ ಬಗ್ಗೆ ಆಸಕ್ತಿ ಮೂಡುತ್ತದೆ. ಕ್ರೀಡೆಯೂ ಅಭಿವೃದ್ಧಿಯಾಗುತ್ತದೆ, ಜೊತೆಗೆ ನಮಗೂ ಶ್ರೇಷ್ಠ ಸಾಮರ್ಥ್ಯ ತೋರಲು ಪ್ರೇರಣೆ ಸಿಗುತ್ತದೆ.

ಕೋಚ್‌ ಮತ್ತು ನಾಯಕರ ಸಭೆಯಲ್ಲಿ ಇದೇ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಹಳೆಯ ನಿಯಮದ ಪ್ರಕಾರವೇ ಪಂದ್ಯಗಳನ್ನು ನಡೆಸಲು ಬಿಸಿಸಿಐ ಮುಂದಾಗಿದೆ. ಇದರಿಂದ ಎಲ್ಲಾ ತಂಡಗಳಿಗೂ ಲಾಭವಾಗುತ್ತದೆ.

ಈ ಬಾರಿ ಯಾವ ತಂಡ ಪ್ರಶಸ್ತಿ ಗೆಲ್ಲಬಹುದು?
ಎಲ್ಲಾ ತಂಡಗಳು ಬಲಿಷ್ಠವಾಗಿವೆ. ಎಲ್ಲರಿಗೂ ಟ್ರೋಫಿ ಎತ್ತಿಹಿಡಿಯುವ ಸಮಾನ ಅವಕಾಶವಿದೆ.⇒v

Read More

Comments
ಮುಖಪುಟ

ದಮ್ಮನಿಂಗಲದಿಂದ ಶ್ರೀನಗರದವರೆಗೆ...

ಹೌದು, ವಿಂಧ್ಯಗಿರಿಯ ಆಸುಪಾಸಿನಲ್ಲೇ ಇರುವ ದಮ್ಮನಿಂಗಲ ಎಂಬ ಪುಟ್ಟ ಗ್ರಾಮದಿಂದ ಹಿಡಿದು ದೂರದ ಶ್ರೀನಗರದವರೆಗೆ ಹಲವು ಊರುಗಳು ತಮ್ಮಲ್ಲಿ ಸಿಗುವಂತಹ ಬಲು ವಿಶಿಷ್ಟವಾದ ದ್ರವ್ಯಗಳನ್ನು ಈ ಉತ್ಸವಕ್ಕಾಗಿ ಕೊಡುಗೆಯಾಗಿ ಕೊಟ್ಟಿವೆ.

ಕಳ್ಳರ ಪರಾರಿ ವೇಳೆ ನಿದ್ದೆಯಲ್ಲಿದ್ದ ಕಾವಲುಗಾರ

‘ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣಕ್ಕೆ ಎನ್‌ಡಿಎ ಸರ್ಕಾರವೇ ನೇರ ಹೊಣೆ. ‘ಆಪ್ತ ಬಂಡವಾಳಶಾಹಿಗಳ ಲಾಬಿ’ಗೆ ಪ್ರಧಾನಿ ನರೇಂದ್ರ ಮೋದಿ ಸಾಂಸ್ಥಿಕ ರೂಪ ಕೊಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿದೆ.

ಭಾವ–ಬಣ್ಣದ ಜುಗಲಬಂದಿ

ಹಾಲಿನ ನಂತರದ ಸರದಿ ಕಲ್ಕಚೂರ್ಣದ್ದು. ಔಷಧಿಯುಕ್ತ ನೀರು ಬಾಹುಬಲಿಯ ಬಿಳುಪನ್ನು ತೊಡೆಯಲು ಪ್ರಯತ್ನಿಸಿತು. ನಂತರದ ಸರದಿ ಅಕ್ಕಿಹಿಟ್ಟಿನದು. ಬೆಳಗಿನ ಇಬ್ಬನಿಯನ್ನೂ ಹಿಮದ ತುಣುಕುಗಳನ್ನೂ ಒಟ್ಟಿಗೆ ಹುಡಿ ಮಾಡಿ ಎರಚಿದಂತೆ ಗೊಮ್ಮಟಮೂರ್ತಿ ಕಂಗೊಳಿಸತೊಡಗಿತು. ಮತ್ತೆ ಭಕ್ತರಿಂದ ಆರಾಧ್ಯದೈವಕ್ಕೆ ಉಘೇ ಉಘೇ.

 

 

ರಾಯರ ಪಾದುಕೆ ಪಟ್ಟಾಭಿಷೇಕ ಮಹೋತ್ಸವ

ಶ್ರೀ ರಾಘವೇಂದ್ರ ಸ್ವಾಮಿಗಳ 397ನೇ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ರಾಯರ ಮೂಲಪಾದು ಕೆಗಳಿಗೆ, ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ವಿಶೇಷ ಪುಷ್ಪಾರ್ಚನೆ ಹಾಗೂ ಕನಕ ರತ್ನಾಭಿಷೇಕ ನೆರವೇರಿಸಿದರು.

ಸಂಗತ

ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟು–ಪರಿಹಾರ

ಭಾರತಕ್ಕೆ ಉಳಿದಿರುವ ದಾರಿಯೆಂದರೆ, ವಿಶ್ವಸಂಸ್ಥೆ ಮತ್ತು ಅಮೆರಿಕದ ಜೊತೆಗೂಡಿ ರಾಜತಾಂತ್ರಿಕ ಮಾರ್ಗದ ಮೂಲಕ ಮಾಲ್ಡೀವ್ಸ್‌ ಬಿಕ್ಕಟ್ಟನ್ನು ಪರಿಹರಿಸಲು ಶ್ರಮಿಸುವುದು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

ಭ್ರಮಾಧೀನ ಮನಸ್ಥಿತಿಯಲ್ಲಿ ಬದುಕುತ್ತಿರುವ ಸಮುದಾಯವನ್ನು ಎಚ್ಚರಿಸಿ ಮುನ್ನಡೆಸಬೇಕಾದ ಜವಾಬ್ದಾರಿ ಸಮಾಜಕ್ಕಿದೆಯಲ್ಲವೇ?

ನಿರುದ್ಯೋಗ ವ್ಯಕ್ತಿಗತ ಸಮಸ್ಯೆಯೇ?

ಸ್ಪರ್ಧಾತ್ಮಕ ಜಗತ್ತಿನಲ್ಲಿ ಅರ್ಹತೆಯುಳ್ಳವರಷ್ಟೇ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂಬ ನಿಲುವು ತಳೆಯುವುದು ಆಷಾಡಭೂತಿತನವಾಗುತ್ತದೆ

ಜಾತಿ ಮತ್ತು ಹಿಂಸಾಚಾರದ ಸಮೀಕರಣ

ಒಂದು ವರ್ಗದ ನೀಚ ಕೃತ್ಯಗಳಿಗೆ ಮತ್ತೊಂದು ವರ್ಗವನ್ನು ಹೊಣೆಯಾಗಿಸುವ ಕೆಸರೆರಚಾಟ ಮುಂದುವರಿಯುತ್ತಿರುವವರೆಗೂ ಅಲ್ಲಿ ಅಸಹಿಷ್ಣುತೆ, ಹಿಂಸೆ ತಡೆಯುವುದು ಕಷ್ಟ.

ಮುಕ್ತಛಂದ

ಅಪ್ಪನ ನೆನಪುಗಳು

ಅಡಿಗರ ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಸಾಧನೆಯನ್ನು ಅವರ ನಿಕಟವರ್ತಿಗಳು ಹಾಗೂ ವಿಮರ್ಶಕರು ಸಾಕಷ್ಟು ದಾಖಲಿಸಿದ್ದಾರೆ. ಕೌಟುಂಬಿಕ ವ್ಯಕ್ತಿಯಾಗಿ ಅಡಿಗರು ಹೇಗಿದ್ದರು? ಅವರ ಪುತ್ರ ಪ್ರದ್ಯುಮ್ನ ಗೋಪಾಲಕೃಷ್ಣ ಅಡಿಗ ಅವರ ನೆನಪುಗಳು ಇಲ್ಲಿವೆ.

ಸ್ವಾಭಿಮಾನ ಮತ್ತು ಸಮಗ್ರ ಕಾವ್ಯ!

‘ಪ್ರಾರ್ಥನೆ’ ಕವಿತೆಯ ವಿವಾದದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಪತ್ರಕ್ಕೆ ಅಡಿಗರು ಬರೆದ ಜವಾಬು ಕವಿಗೆ ಇರಬೇಕಾದ ಸ್ವಾಭಿಮಾನವನ್ನು ಸೂಚಿಸುವಂತಿದೆ. ಸ್ವಾಭಿಮಾನ ಎನ್ನುವುದು ಸೋವಿಯಾಗಿರುವ ಇಂದಿನ ಸಂದರ್ಭದಲ್ಲಿ ಅಡಿಗರ ನಿಲುವು ಹೆಚ್ಚು ಮಹತ್ವದ್ದಾಗಿ ಕಾಣುತ್ತದೆ.

ಕನ್ನಡ ಸಾಹಿತ್ಯಲೋಕದ ವಿಷಕಂಠ

ಎಲಿಯಟ್‌ ಕೂಡ ಒಂದು ಕವನದಲ್ಲಿ ಇಷ್ಟೆಲ್ಲ ಹೇಳಲಿಲ್ಲವಲ್ಲ! ಇದು ಅಡಿಗರ ‘ಭೂಮಿಗೀತ’, ‘ಭೂತ’ ಕವಿತೆಗಳಿಗೆ ಅಮೆರಿಕದ ಕವಿಯೊಬ್ಬರ ಉದ್ಗಾರ. ಆದರೆ, ಅತ್ಯುತ್ತಮ ಕಾವ್ಯ ರಚಿಸಿಯೂ ನಿರಂತರವಾಗಿ ಟೀಕೆಗೆ, ಪ್ರತಿರೋಧಕ್ಕೆ, ಖಂಡನೆಗೆ ಗುರಿಯಾದ ಅಡಿಗರಂಥ ಕವಿ ಇನ್ನೊಬ್ಬರಿಲ್ಲ.

‘ಚಂಡೆ ಮದ್ದಳೆ’ ಕವಿಯ ನಿರಂತರ ‘ವೇಸ್ಟ್ ಲ್ಯಾಂಡ್’

ಎಲಿಯಟ್ ಇಂಗ್ಲಿಷ್‌ನಲ್ಲಿ ಮಾಡಿದುದನ್ನು ಅಡಿಗರು ಕನ್ನಡದಲ್ಲಿ ಮಾಡಿದರು. ತಟಸ್ಥವಾಗಿದ್ದ ಸಾಹಿತ್ಯದಲ್ಲಿ ವಿದ್ಯುತ್ ಸಂಚಲನ ಉಂಟು ಮಾಡಿದರು. ಅಡಿಗರ ನಂತರ ಕನ್ನಡ ಕಾವ್ಯ ಮೊದಲಿನ ಹಾಗೆ ಇರಲಿಲ್ಲ. ಇದುವರೆಗೆ ಕನ್ನಡದಲ್ಲಿ ಇಲ್ಲದ್ದನ್ನು ಅವರು ಸೃಷ್ಟಿಸಿದರು. ಅವರನ್ನು ವಿರೋಧಿಸಿದವರು ಕೂಡ ಅವರ ನುಡಿಗಟ್ಟನ್ನು ಸ್ಪರ್ಶಿಸಿಯೇ ಹಾಗೆ ಮಾಡಬೇಕಾಯಿತು. ಇದಕ್ಕಿಂತಲೂ ಹೆಚ್ಚಿನ ಕೊಡುಗೆಯೊಂದಿದೆಯೇ?