ಬಹುಜನರಿಗೆ ಬೆಲೆ ಕೊಡಿರೋ, ಬೆಲೆ ಕೊಡಿ...!

12 Oct, 2017
ಪ್ರಸನ್ನ

ಗ್ರಾಮೀಣ ಜನರಿಗೆ ಬೆಲೆಯಿಲ್ಲವಾಗಿದೆ. ಏಕೆಂದರೆ, ಗ್ರಾಮೀಣ ಉತ್ಪನ್ನಗಳಿಗೆ ಬೆಲೆಯಿಲ್ಲವಾಗಿದೆ. ಕೃಷಿಯಿರಲಿ, ಕೈಮಗ್ಗವಿರಲಿ ಅಥವಾ ಚಮ್ಮಾರ ಮಾಡುವ ಚಪ್ಪಲಿಯಿರಲಿ, ಮಾದಾರ ಹೆಣೆಯುವ ಬುಟ್ಟಿಯಿರಲಿ, ಕುಂಬಾರನ ಮಡಕೆಯಿರಲಿ, ಕಮ್ಮಾರನ ನೇಗಿಲಿರಲಿ ಎಲ್ಲವೂ ಬೆಲೆ ಕಳೆದುಕೊಂಡು ಬಡವಾಗಿವೆ. ಎಲ್ಲವೂ ಯಂತ್ರನಾಗರಿಕತೆಯ ಅಬ್ಬರದ ಎದುರು ಸೋತು ಸುಣ್ಣವಾಗಿವೆ. ಸಮಗ್ರ ಕಾಯಕ ಪರಂಪರೆ ಬೆಲೆ ಕಳೆದುಕೊಂಡು ಬಡವಾಗಿದೆ.

ಅಂಗೈ ಮೇಲಣ ಹುಣ್ಣು ಇದು. ಇದನ್ನು ಕಾಣುವುದಕ್ಕೆ ವಿಶೇಷವಾದ ಯಾವ ಕನ್ನಡಿಯ ಅಗತ್ಯವೂ ಇಲ್ಲ. ಆದರೂ ಜಾಣ ಕುರುಡು ನಟಿಸುತ್ತಿವೆ ಸರ್ಕಾರಗಳು. ಗ್ರಾಮೀಣ ಉತ್ಪನ್ನಗಳಿಗೆ ಬೆಲೆ ಸಿಗುವಂತೆ ಮಾಡುವ ಬದಲು, ಹುಡುಕ ಬಾರದಲ್ಲೆಲ್ಲ ಹುಣ್ಣು ಹುಡುಕುತ್ತ ಮುಲಾಮು ಸವರುತ್ತಿವೆ.

ಅತ್ತ, ಸಾಮಾಜಿಕ ಸಂಸ್ಥೆಗಳೂ ಜಾಣ ಕುರುಡು ನಟಿಸುತ್ತಿವೆ. ಗ್ರಾಮಸ್ವರಾಜ್ಯದ ಸ್ಥಾಪನೆಗಾಗಿ ಕೆಲಸ ಮಾಡುವ ಬದಲು, ರೋಗಗ್ರಸ್ತ ಯಂತ್ರನಾಗರಿಕತೆಯ ರಿಪೇರಿಯಲ್ಲಿ ತೊಡಗಿವೆ. ಧಾರ್ಮಿಕ ಸಂಸ್ಥೆಗಳೂ ಜಾಣ ಕುರುಡು ನಟಿಸುತ್ತಿವೆ. ಕಾಯಕ ಪರಂಪರೆಯನ್ನು ಗಟ್ಟಿಗೊಳಿಸುವ ಬದಲು ಮಣಮಣ ಮಂತ್ರ ಹೇಳುತ್ತ, ಜಾಣ ಪ್ರವಚನಗಳನ್ನು ನೀಡುತ್ತ, ಕಾರುಗಳಲ್ಲಿ ಓಡಾಡುತ್ತಿವೆ. ಸಾಹಿತಿ, ಕಲಾವಿದರು, ಬುದ್ಧಿಜೀವಿಗಳಂತೂ ಸರಿಯೇ ಸರಿ.

ಇವೆಲ್ಲವೂ ನಿಜ. ಆದರೆ ಈ ಬಾರಿಯ ಲೇಖನದಲ್ಲಿ ನಾನು ನಿಜದ ಆರ್ಥಿಕ ಆಯಾಮಕ್ಕೆ ಮಾತ್ರವೇ ಒತ್ತು ಕೊಟ್ಟು ಚಿತ್ರಿಸಲು ಬಯಸುತ್ತೇನೆ. ಜಿಎಸ್‌ಟಿ ಎಂಬ ಹೆಸರಿನ, ಇತ್ತೀಚೆಗೆ ಜಾರಿಗೊಳಿಸಲಾಗಿರುವ ದುಬಾರಿ ಮಾರಾಟ ತೆರಿಗೆಯ ಸಂದರ್ಭಕ್ಕೆ ಒತ್ತುಕೊಟ್ಟು ಚಿತ್ರಿಸಲು ಬಯಸುತ್ತೇನೆ.

ಸರ್ಕಾರಗಳನ್ನು ಗಮನಿಸಿ. ಎಲ್ಲ ಸರ್ಕಾರಗಳೂ ಗ್ರಾಮೀಣ ಜನರ ಉತ್ಪಾದಕತೆಯ ಮೂಲಗಳನ್ನು ಮೊದಲಿಗೆ ಹಾಳುಗೆಡವುತ್ತವೆ. ನಂತರದಲ್ಲಿ ಕಲ್ಯಾಣ ಯೋಜನೆಗಳ ಹೆಸರಿನಲ್ಲಿ ಅವರಿಗೆ ಭಿಕ್ಷೆ ನೀಡುತ್ತವೆ ಅಥವಾ ಸಾಲ ನೀಡುತ್ತವೆ. ಬಡವರನ್ನು ಸಾಲಗಾರರನ್ನಾಗಿಸಿ, ದೈನ್ಯಜೀವಿಗಳನ್ನಾಗಿಸಿ ಅವರಿಂದ ವೋಟು ಕೀಳುತ್ತವೆ ಸರ್ಕಾರಗಳು. ತಮಾಷೆಯ ಸಂಗತಿಯೆಂದರೆ ಈ ಕಾರ್ಯಕ್ರಮವನ್ನು ಕೂಡ ಸಮರ್ಥವಾಗಿ ನಿಭಾಯಿಸಲಾರರು ಅವರು. ಎಷ್ಟೆಂದು ಭಿಕ್ಷೆ ನೀಡಿಯಾರು? ಎಷ್ಟು ಜನರಿಗೆ ಭಿಕ್ಷೆ ನೀಡಿಯಾರು? ನೀಡುವ ಕೈಗಳೇ ಕೈಗಳಿಗಂಟಿದ ತುಪ್ಪವನ್ನು ನೆಕ್ಕುತ್ತಿರುವಾಗ ತುಪ್ಪವು ಬಡವರನ್ನು ತಲುಪುವುದಾದರೂ ಹೇಗೆ?

ಭ್ರಷ್ಟಾಚಾರ ನಿಗ್ರಹವೆಂಬುದು ಈ ದೇಶದಲ್ಲಿ ಒಂದು ಜೋಕಾಗಿದೆ. ಜೋಕು ಹೀಗಿದೆ: ಮೊದಲಿಗೆ ವಿಪರೀತ ತೆರಿಗೆ ವಿಧಿಸು. ವಿಧಿಸಿದ ವಿಪರೀತ ತೆರಿಗೆ ಹಣವು ಸೋರಿಹೋಗದಂತೆ ತಡೆಯಲು ವಿಪರೀತ ಪೊಲೀಸರು, ವಿಪರೀತ ಗುಮಾಸ್ತರು, ವಿಪರೀತ ಲೆಕ್ಕಿಗರು, ವಿಪರೀತ ಅಧಿಕಾರಿಗಳು, ವಿಪರೀತ ಮಂತ್ರಿಗಳು ಇತ್ಯಾದಿಯಾಗಿ ತುಪ್ಪನೆಕ್ಕುವ ಕೈಗಳನ್ನು ನೇಮಿಸು. ಭ್ರಷ್ಟಾಚಾರವನ್ನು ವಿಪರೀತಗೊಳಿಸು. ಇದು ಸರ್ಕಾರಗಳ ಕಾರ್ಯವೈಖರಿ. ಸರ್ಕಾರಗಳು ದೊಡ್ಡದಾದಷ್ಟೂ ಸರ್ಕಾರಿ ಭ್ರಷ್ಟಾಚಾರ ದೊಡ್ಡದಾಗುತ್ತದೆ.

ಇಷ್ಟೇ ಅಲ್ಲ. ಅರೆಮನಸ್ಸಿನಿಂದ ಭಿಕ್ಷೆ ಹಾಕುತ್ತವೆ ಇವು. ಭಿಕ್ಷೆ ಹಾಕುತ್ತಲೇ, ‘ಬೆನ್ನಿಗೆ ಬಿದ್ದಿರುವ ಭಾರ ಈ ದರಿದ್ರರು! ಇವರ ಸೋಮಾರಿತನ ಸಾಯಲಿ!’ ಎಂದು ಗೊಣಗಿಕೊಳ್ಳುತ್ತ ರಾಜ್ಯಭಾರ ನಡೆಸುತ್ತವೆ. ಅರ್ಥಾತ್ ಅತಿ ಭಾರವಾದ ರಾಜ್ಯಗಳನ್ನು ಹೇಗೋ ನಡೆಸಿಕೊಂಡು ಹೋಗುತ್ತವೆ.

ಬಡವರೇಕೆ ಸೋಮಾರಿಗಳಾಗುತ್ತಾರೆ ಎಂಬ ಈ ಪ್ರಶ್ನೆಯೂ ಅಂಗೈಯೊಳಗಣ ಹುಣ್ಣೇ ಸರಿ. ತಾವು ಮಾಡುವ ಕಾಯಕಕ್ಕೆ ಬೆಲೆ ಇರದಾದಾಗ, ತಮ್ಮ ಉತ್ಪನ್ನಗಳಿಗೆ ಬೆಲೆಯಿರದಾದಾಗ ಅವರೇಕೆ ದುಡಿದಾರು? ಹೇಗೂ ದಂಡದ ಕೂಳು ಬಂದು ಬೀಳುತ್ತಿರುವಾಗ ಕೈಚಾಚಲಿಕ್ಕೆ ಅವಸರವೇಕೆಪಡಬೇಕು ಅವರು?

ಸರ್ಕಾರಗಳಿಗೆ ಕನಸುಗಳಿಲ್ಲ ಎಂದು ನನ್ನ ಮಾತಿನ ಅರ್ಥವಲ್ಲ. ಕನಸಿದೆ. ಸ್ಮಾರ್ಟ್‌ಸಿಟಿ ಎಂಬ ಮಾಯಾನಗರಿಗಳನ್ನು ನಿರ್ಮಿಸುವುದು ಎಲ್ಲ ಸರ್ಕಾರಗಳ ಕನಸು. ಅಥವಾ ಹೀಗೂ ಹೇಳಬಹುದು. ಇಡೀ ಇಡೀ ದೇಶವನ್ನೇ ಸಮಗ್ರವಾದ ಹಾಗೂ ಪರಿಪೂರ್ಣವಾದ ಸ್ಮಾರ್ಟ್‌ಸಿಟಿ ಆಗಿಸಿಬಿಡುವುದು ಸರ್ಕಾರಗಳ ಕನಸು.

ನೀವೇ ನೋಡಿ! ಸ್ವದೇಶಿ ಮಂತ್ರ ಜಪಿಸುತ್ತಿರುವ ಭಾರತೀಯ ಜನತಾ ಪಕ್ಷದ ಸರ್ಕಾರದ ಕನಸು ಕೂಡಾ ಇದೇ. ಮೆಕ್ಕಾದ ಧರ್ಮದರ್ಶಿಗಳಾಗಿರುವ ಸೌದಿ ಅರೇಬಿಯಾದ ಶೇಖ್‌ರ ಕನಸು ಕೂಡಾ ಇದೇ. ಸಮತಾವಾದದ ಮಂತ್ರ ಜಪಿಸುತ್ತಲೇ ಸಾಮ್ರಾಜ್ಯಶಾಹಿ ಶಕ್ತಿಯಾಗಲು ಹೊರಟಿರುವ ಚೀನಾ ದೇಶದ ಕಮ್ಯುನಿಸ್ಟ್ ಆಡಳಿತಗಾರರ ಕನಸು ಕೂಡಾ ಇದೇ. ಮಾಜಿ ಸಾಮ್ರಾಜ್ಯಶಾಹಿ ಅಮೆರಿ
ಕೆಯಂತೂ ಸರಿಯೇ ಸರಿ. ಇಡೀ ವಿಶ್ವವನ್ನೇ ಒಂದು ಸ್ಮಾರ್ಟ್‌ಸಿಟಿಯನ್ನಾಗಿಸುವುದು ಎಲ್ಲ ಸರ್ಕಾರಗಳ ಕನಸಾಗಿದೆ.

ತಮ್ಮ ಈ ಸ್ಮಾರ್ಟ್ ಕನಸಿನ ಸಾಕಾರಕ್ಕಾಗಿ ಹೆಚ್ಚು ಹೆಚ್ಚು ತೆರಿಗೆ ವಿಧಿಸುತ್ತವೆ ಸರ್ಕಾರಗಳು. ‘ಒಂದು ದೇಶ ಒಂದೇ ತೆರಿಗೆ’ ಎಂಬ ಆಕರ್ಷಕವಾದ ಘೋಷವಾಕ್ಯದೊಂದಿಗೆ ಇತ್ತೀಚೆಗೆ ಜಾರಿಗೆ ಬಂದಿರುವ ಜಿಎಸ್‌ಟಿ ಎಂಬ ಮಾರಾಟ ತೆರಿಗೆಯನ್ನೇ ತೆಗೆದುಕೊಳ್ಳಿ. ಭಾರತವನ್ನು ಸಿಂಗಪುರ ಮಾಡುತ್ತೇವೆ ಎಂಬ ಹುಮ್ಮಸ್ಸಿನಿಂದ ಜಾರಿಗೆ ಬಂತು ಈ ತೆರಿಗೆ.

ಸಿಂಗಪುರವೆಂಬುದು ರಾವಣನ ಲಂಕೆಯಿದ್ದಂತೆ ಸಂಪದ್ಭರಿತವಾದ ಒಂದು ಮಹಾನಗರಿ. ಆ ನಗರಿಯೇ ಒಂದು ದೇಶ. ನಗರಿಯೊಳಗೇ ಉಳಿದು ವಿಶ್ವದ ಎಲ್ಲ ಋಷ್ಯಾಶ್ರಮಗಳನ್ನೂ ಕೊಳ್ಳೆಹೊಡೆಯುತ್ತ ಸುಲಭ ಬದುಕು ಬದುಕುವವರ ಲಂಕೆ ಸಿಂಗಪುರ. ಆದರೆ ಭಾರತ ನಗರಿಯಲ್ಲ. ಈಗಲೂ ಭಾರತ ಗ್ರಾಮವೇ ಸರಿ.

ತಮಾಷೆಯ ಸಂಗತಿಯೆಂದರೆ ಜಿಎಸ್‌ಟಿ, ಸಮಾನತೆಯನ್ನು ಬೋಧಿಸುತ್ತದೆ! ಆದಾಯದಲ್ಲಲ್ಲ, ತೆರಿಗೆಯಲ್ಲಿ! ಬಡವ– ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರೂ ಸಮಾನ ತೆರಿಗೆ ನೀಡಬೇಕೆಂದು ಬೋಧಿಸುತ್ತದೆ ಜಿಎಸ್‌ಟಿ! ಪಾಪ! ಗ್ರಾಮೀಣ ಕೈಉತ್ಪನ್ನಗಳು ಸಹಜವಾಗಿಯೇ ದುಬಾರಿ.

ಯಂತ್ರೋತ್ಪನ್ನಗಳು ಅಸಹಜವಾಗಿ ಅಗ್ಗ. ಜಿಎಸ್‌ಟಿ ಬಂದ ನಂತರ ಕೈಉತ್ಪನ್ನಗಳು ಮತ್ತಷ್ಟು ದುಬಾರಿಯಾಗಿವೆ. ಮತ್ತಷ್ಟು ವ್ಯಾಪಾರ ಕಳೆದುಕೊಂಡಿವೆ, ಪಾಪ!

ಉದಾಹರಣೆಗಳನ್ನು ಗಮನಿಸಿ. ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯದ ಲಕ್ಷಾಂತರ ಆದಿವಾಸಿಗಳು ಕಾಡುಗಳಲ್ಲಿ ಅಲೆದು ಬೀಡಿ ಕಟ್ಟುವ ಎಲೆ ಸಂಗ್ರಹಿಸುತ್ತಾರೆ. ಅವರ ಏಕೈಕ ಉತ್ಪನ್ನ ಈ ಬೀಡಿ ಎಲೆಗಳು! ಬೀಡಿ ಎಲೆಯ ಮೇಲೆ ಹದಿನೆಂಟು ಪರ್ಸೆಂಟ್ ಮಾರಾಟ ತೆರಿಗೆ ವಿಧಿಸಲಾಗಿದೆ. ಮೊದಲೇ ದರಿದ್ರರಾಗಿರುವ ಆದಿವಾಸಿಗಳ ಆದಾಯ ಈಗ ಇನ್ನೂ ಹದಿನೆಂಟು ಪರ್ಸೆಂಟ್ ಕಡಿತಗೊಂಡಿದೆ! ನಮ್ಮ ಪ್ರಧಾನಿಯವರನ್ನು ಗೆಲ್ಲಿಸಿದ ವಾರಾಣಸಿಯ ಉದಾಹರಣೆ ತೆಗೆದುಕೊಳ್ಳಿ. ವಾರಾಣಸಿಯ ತುಂಬ ಬನಾರಸಿ ಸೀರೆ ನೇಯುವ ನೇಕಾರರು ವಾಸಿಸುತ್ತಾರೆ.

ನೇಕಾರ ಬಳಕೆ ಮಾಡುವ ಸಿಲ್ಕಿನ ನೂಲು, ಜರಿ ಮಗ್ಗದ ಬಿಡಿಭಾಗ ಇತ್ಯಾದಿ ಎಲ್ಲದಕ್ಕೂ ತೆರಿಗೆ ವಿಧಿಸಲಾಗಿದೆ. ಸೀರೆಗೂ ತೆರಿಗೆ ವಿಧಿಸಲಾಗಿದೆ. ಕಬೀರನ ‘ಜೀನೀ ಜೀನೀ ಬೀನೀ ಛದರಿಯಾ...’ ಎಂಬ ಪ್ರಖ್ಯಾತ ವಚನಕ್ಕೆ ಲಯ ಒದಗಿಸಿದ್ದ ಬನಾರಸಿ ಮಗ್ಗಗಳು ಇಂದು ಲಯ ಕಳೆದುಕೊಂಡು ಸ್ತಬ್ಧವಾಗಿ ನಿಂತಿವೆ.

ಸಣ್ಣ ಪುಟ್ಟ ಹೋಟೆಲುಗಳನ್ನು ಗಮನಿಸಿ. ನೆನ್ನೆ ಮೊನ್ನೆಯವರೆಗೂ ಮೂವತ್ತು ರೂಪಾಯಿಗಳಿಗೆ ಸಿಕ್ಕುತ್ತಿದ್ದ ಎರಡು ಇಡ್ಲಿ ಇಂದು ನಲವತ್ತು ರೂಪಾಯಿಯಾಗಿದೆ. ಕೇಳಿದರೆ ‘ಜಿಎಸ್‌ಟಿ ತೆರಬೇಕಲ್ಲ’ ಎನ್ನುತ್ತಾರೆ ಹೋಟೆಲುಗಳ ಮಾಲೀಕರು. ಕೊಬ್ಬರಿ ಬೆಳೆಯುವ ರೈತನ ಉದಾಹರಣೆ ಗಮನಿಸಿ.

ಮಂಡಿಗೆ ಮಾಲು ಹಾಕಲು ಹೋದಾಗ ಕ್ವಿಂಟಲ್‌ ಕೊಬ್ಬರಿಗೆ ಸಾವಿರದಿಂದ ಸಾವಿರದೈನೂರು ರೂಪಾಯಿ ಕಡಿತ ಮಾಡಿ ಬೆಲೆ ಕೊಡಲಾಗುತ್ತಿದೆ ರೈತರಿಗೆ. ಕೇಳಿದರೆ ‘ಜಿಎಸ್‌ಟಿ ಕೊಡಬೇಕಲ್ಲ’ ಎನ್ನುತ್ತಾರೆ ಮಂಡಿ ವರ್ತಕರು.

ನಾನು ಕೆಲಸ ಮಾಡುವ ‘ಚರಕ’ ಸಂಸ್ಥೆಯ ನೇಕಾರನ ಬವಣೆ ಗಮನಿಸಿ. ತಾವು ನೇಯ್ದ ಬಟ್ಟೆಯನ್ನು ಚರಕಕ್ಕೆ ಹಿಂದಕ್ಕೆ ಕಳುಹಿಸಲಾರದೆ ಪರದಾಡುತ್ತಿದ್ದಾರೆ ಉತ್ತರ ಕರ್ನಾಟಕದ ನೇಕಾರರು. ‘ಜಿಎಸ್‌ಟಿ ಬಿಲ್ಲು ತನ್ನಿ ಇಲ್ಲದಿದ್ದರೆ ಮಾಲು ಸ್ವೀಕರಿಸುವುದಿಲ್ಲ’ ಎನ್ನುತ್ತಿದ್ದಾರೆ ಲಾರಿ ಕಂಪೆನಿಗಳವರು. ಹೀಗೆಯೇ ಹೇಳುತ್ತ ಹೋಗಬಹುದು. ಆದರೆ ಇಷ್ಟು ಸಾಕು.

ಗ್ರಾಮ ಸೇವಾ ಸಂಘ ಎಂಬ ಯುವಕರ ಸಂಘಟನೆಯೊಂದು ಕೈಉತ್ಪನ್ನಗಳನ್ನು ಕರಮುಕ್ತಗೊಳಿಸಿರಿ ಎಂಬ ಬೇಡಿಕೆ ಇಟ್ಟುಕೊಂಡು ಕಳೆದ ಎರಡು ತಿಂಗಳಿನಿಂದ ಹೋರಾಟ ನಡೆಸಿದೆ. ಜಾಥಾಗಳು, ಪಾದಯಾತ್ರೆಗಳು ಹಾಗೂ ಕರನಿರಾಕರಣೆ ಸತ್ಯಾಗ್ರಹಗಳನ್ನು ಯುವಕರು ನಡೆಸಿದ್ದಾರೆ. ನಾನು ಅವರೊಟ್ಟಿಗೆ ಹೆಜ್ಜೆ ಹಾಕುತ್ತಿದ್ದೇನೆ.

ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಎದುರಾಗುತ್ತಿರುವ ಪ್ರಶ್ನೆಯೊಂದಿದೆ. ‘ಇಪ್ಪತ್ತು ಲಕ್ಷ ರೂಪಾಯಿಗಳ ವಾರ್ಷಿಕ ವಹಿವಾಟಿನ ಮಿತಿಯೊಳಗೆ ಅನೇಕ ಕೈಉತ್ಪನ್ನಗಳಿಗೆ ತೆರಿಗೆ ಕಡಿಮೆ ಮಾಡಿದ್ದಾರಲ್ಲ... ನೀವೇಕೆ ಹೋರಾಟ ಮಾಡುತ್ತಿದ್ದೀರಿ, ವ್ಯರ್ಥ’ ಎಂಬುದು ಪ್ರಶ್ನೆ.

₹ 20 ಲಕ್ಷ ಮಿತಿಯೆಂಬುದು ಒಂದು ಜೋಕು. ಕೈ ಉತ್ಪನ್ನಗಳಿಗೆ ಸಹಜವಾದ ಮಿತಿಯಿದೆ. ಕೈಗಳೇ ಕೈಉತ್ಪನ್ನಗಳ ಮಿತಿ. ಒಂದು ವರ್ಷದಲ್ಲಿ ₹ 20 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಪದಾರ್ಥಗಳನ್ನು ಕೈಗಳು ಖಂಡಿತವಾಗಿ ಉತ್ಪಾದಿಸಲಾರವು. ಆದರೆ ಸ್ವಯಂಚಾಲಿತ ಯಂತ್ರಗಳು ಉತ್ಪಾದಿಸಬಲ್ಲವು ಹಾಗೂ ಮಾರಾಟ ಮಾಡಬಲ್ಲವು. ₹ 20 ಲಕ್ಷವೇ ಏನು, ಲಕ್ಷ ಕೋಟಿ ಮೌಲ್ಯದ ಮಾಲನ್ನು ಅವು ಮಾರಾಟ ಮಾಡಬಲ್ಲವು.

ಹಾಗಾಗಿ ಮಿತಿ ವಿಧಿಸಬೇಕಾದದ್ದು ಯಂತ್ರಗಳಿಗೆ. ಆದರೆ ಸರ್ಕಾರಗಳು ಹಾಗೆ ಮಾಡುತ್ತಿಲ್ಲ. ಹಾಗಾಗಿ ಗ್ರಾಮ ಸೇವಾ ಸಂಘವು ಕೈಉತ್ಪಾದಕರ ಪರವಾಗಿ ಇತ್ಯಾತ್ಮಕ ಭೇದಭಾವ ಎಂಬ ತತ್ವದ ಅನುಷ್ಠಾನವನ್ನು ಬೇಡುತ್ತಿದೆ ಅಷ್ಟೆ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದ ಇತ್ಯಾತ್ಮಕ ಭೇದಭಾವ ಅಥವಾ ಪಾಸಿಟಿವ್ ಡಿಸ್ಕ್ರಿಮಿನೇಷನ್ ತತ್ವವು ಅಸಮತೋಲನವನ್ನು ಒಂದಿಷ್ಟಾದರೂ ನಿರ್ಮೂಲನೆ ಮಾಡೀತು ಎಂಬುದು ನಮ್ಮ ಆಶಯವಾಗಿದೆ.

ಬೇಡಿಕೆ ಈಡೇರುತ್ತದೆಯೇ ಇಲ್ಲವೇ ಎಂಬ ಬಗ್ಗೆ ನಾವು ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ. ಸತ್ಯ ನುಡಿಯುವ ಕರ್ತವ್ಯ ಮಾಡುತ್ತಿದ್ದೇವೆ ಅಷ್ಟೆ. ಏಕೆಂದರೆ, ಗ್ರಾಮೀಣ ಉತ್ಪನ್ನಗಳಿಗೆ ಕಡೆಗೂ ಬೆಲೆ ಕೊಡಿಸಬಲ್ಲವಳು ಪ್ರಕೃತಿಮಾತೆ ಮಾತ್ರ. ಅವಳು ಈಗಾಗಲೇ ಹೂಂಕರಿಸತೊಡಗಿದ್ದಾಳೆ.

ಅವಳು ಮುನಿದರೆ ಎಲ್ಲ ಪ್ರಧಾನಿಗಳೂ ಎಲ್ಲ ಮುಖ್ಯಮಂತ್ರಿಗಳೂ ದಾರಿಗೆ ಬರುತ್ತಾರೆ. ಒಂದೊಮ್ಮೆ ದಾರಿಗೆ ಬರದೆ ಹೋದರೆ ಪ್ರಳಯದ ಪ್ರವಾಹದಲ್ಲಿ ನಮ್ಮನ್ನೂ ಒಟ್ಟಾಗಿ ಕರೆದೊಯ್ಯುತ್ತಾರೆ. ಅಂತಹ ದಿನಗಳು ಬಾರದಿರಲಿ ಎಂದು ಆಶಿಸೋಣ.

ಬಹುಜನರನ್ನು ಭಿಕ್ಷುಕರನ್ನಾಗಿಸದಿರೋಣ. ಭಿಕ್ಷುಕರನ್ನಾಗಿಸಿರುವ ಬಹುಜನರ ಉತ್ಪಾದನೆಗಳಿಗೆ ದುಬಾರಿ ಮಾರಾಟ ತೆರಿಗೆ ವಿಧಿಸಿ ಗಾಯದ ಮೇಲೆ ಬರೆ ಎಳೆಯದಿರೋಣ. ನೀವು ದಯಮಾಡಿ ಸತ್ಯವನ್ನು ಬೆಂಬಲಿಸಿ, ಸರ್ಕಾರವನ್ನಲ್ಲ.

Read More

Comments
ಮುಖಪುಟ

ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು ಮತ್ತೊಮ್ಮೆ ಉದ್ಘಾಟಿಸಿದರೇ ಪ್ರಧಾನಿ ಮೋದಿ?

ದಾಖಲೆಗಳ ಪ್ರಕಾರ, 7 ವರ್ಷಗಳ ಹಿಂದೆಯೇ ಎಐಐಎ ಸ್ಥಾಪನೆಯಾಗಿತ್ತು ಎಂಬುದು ತಿಳಿದುಬಂದಿದೆ. 2010ರ ಅಕ್ಟೋಬರ್‌ನಲ್ಲಿ ಸರ್ಕಾರ ಬಿಡುಗಡೆ ಮಾಡಿದ್ದ ಪತ್ರಿಕಾ ಪ್ರಕಟಣೆಯೂ ಇದಕ್ಕೆ ಇಂಬು ನೀಡಿದೆ.

ಕೈಮಗ್ಗ ಉತ್ಪನ್ನಗಳ ಕರಮುಕ್ತಕ್ಕೆ ಆಗ್ರಹಿಸಿ ನಡೆಯುತ್ತಿರುವ ಸತ್ಯಾಗ್ರಹಕ್ಕೆ ದೇವೇಗೌಡ ಸಾಥ್

ಈ ಸಂಬಂಧ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಈ ವಿಚಾರವನ್ನು  ಅವರ ಗಮನಕ್ಕೆ ತರುತ್ತೇವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಭರವಸೆ ನೀಡಿದ್ದಾರೆ.

ಅಮೆರಿಕ ಲೇಖಕ ಜಾರ್ಜ್ ಸೌಂದರ್ಸ್‌ಗೆ ಮ್ಯಾನ್ ಬುಕರ್ ಪ್ರಶಸ್ತಿ

ಜಾರ್ಜ್ ಸೌಂದರ್ಸ್ ಅವರು ಬರೆದ ಕಾದಂಬರಿ  ‘ಲಿಂಕನ್ ಇನ್ ದಿ ಬರ್ಡೊ‘(Lincoln in the Bardo)ಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

ಸಂಚಾರ ನಿಯಮ ಉಲ್ಲಂಘನೆ: ಮತ್ತೆ ಟ್ವಿಟರ್‌ನಲ್ಲಿ ಗಮನಸೆಳೆದ ಅಭಿಷೇಕ್ ಗೋಯಲ್

ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಮೂವರು ವಿದ್ಯಾರ್ಥಿನಿಯರು ಹಾಗೂ ಮುಂಭಾಗದಲ್ಲಿ ಮತ್ತೊಂದು ಮಗುವನ್ನು ಕುಳ್ಳಿರಿಸಿಕೊಂಡು ಹೋಗುತ್ತಿರುವ ಚಿತ್ರವನ್ನು ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಅಭಿಷೇಕ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಸಂಗತ

ಅರ್ಚಕರಾದರಷ್ಟೇ ಸಾಲದು...

ದಲಿತರು ಇಂದು ತಮ್ಮ ವಿಮೋಚನೆಗೆ ಅಂಬೇಡ್ಕರರ ಮಾರ್ಗವೇ ಸೂಕ್ತ ಎಂದು ನಂಬಿದ್ದಾರೆ. ಇಷ್ಟರ ಮೇಲೂ ಸರ್ಕಾರಕ್ಕೆ ದಲಿತರನ್ನು ಪುರೋಹಿತರನ್ನಾಗಿ ಮಾಡುವ ಇಚ್ಛೆ ಇದ್ದಲ್ಲಿ, ತಡವಾಗಿಯಾದರೂ ಸರಿಯೇ ತಾಲ್ಲೂಕಿಗೊಂದು ಬೌದ್ಧ ವಿಹಾರ ನಿರ್ಮಿಸಿ ಅಲ್ಲಿ ದಲಿತರನ್ನು ಭಂತೇಜಿಗಳನ್ನಾಗಿ ಆಯ್ಕೆ ಮಾಡಲಿ.

ಮೀಸಲಾತಿ ಏರಿಕೆಗೆ ಆಧಾರವೇನು?

ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಜನಸಂಖ್ಯೆಯಲ್ಲಿ ಅವರ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ಒದಗಿಸಬೇಕೆಂದು ಸಂವಿಧಾನದಲ್ಲಿಯೇ ಹೇಳಲಾಗಿದೆ. ಆದ್ದರಿಂದ ಅವರಿಗೆ ಮೀಸಲಾತಿಯಲ್ಲಿ ಅದೇ ಪ್ರಮಾಣದಲ್ಲಿ ಏರಿಕೆ ಮಾಡುವುದು ಅನಿವಾರ್ಯ

ಸುಲಭವೂ ಹೌದು ಕಷ್ಟವೂ ಹೌದು

ಮೀಸಲಾತಿ ಏರಿಕೆಗೆ ಕಷ್ಟಗಳು ಇರುವುದು ನಿಜ. ಆದರೆ, ಜನಶಕ್ತಿ ಮನಸ್ಸು ಮಾಡಿದರೆ ಅದೇನೂ ದೊಡ್ಡ ವಿಚಾರ ಅಲ್ಲ...

ವರ್ಚಸ್ಸು ಕಳೆದುಕೊಳ್ಳುತ್ತಿರುವ ಮಾಹಿತಿ ಹಕ್ಕು

ಮಾಹಿತಿ ಹಕ್ಕು ಅಧಿನಿಯಮದ ಜಾರಿಯಲ್ಲಿ ಅನೇಕ ತೊಡರುಗಳು ಕಾಣಿಸಿಕೊಂಡಿವೆ. ಬಾಕಿ ಉಳಿದಿರುವ ಅರ್ಜಿ ಮತ್ತು ಮೇಲ್ಮನವಿಗಳ ರಾಶಿ ದಿನೇ ದಿನೇ ಬೆಳೆಯುತ್ತಿದೆ...

ಕಾಮನಬಿಲ್ಲು

ನೆಟ್ಟಿ ಪ್ರವಾಸ

ನಮ್ಮ ತಂಡದಲ್ಲಿ ಅದುವರೆಗೂ ಗದ್ದೆಯನ್ನೇ ನೋಡದವರಿದ್ದರು, ಸಣ್ಣವರಿದ್ದಾಗ ಗದ್ದೆ ಕೆಲಸ ಮಾಡಿ ಅನುಭವ ಇದ್ದವರಿದ್ದರು, ಈಗಲೂ ಕೃಷಿ ಮಾಡುವವರಿದ್ದರು. ಕೆಲವರಿಗೆ ಇದು ಹೊಚ್ಚ ಹೊಸ ಅನುಭವ, ಇನ್ನು ಕೆಲವರಿಗೆ ಬಾಲ್ಯದ ನೆನಪು

‘ಕ್ಲಚ್ಚು ಯಾವ್ದು ಅಂತ್ಲೇ ಗೊತ್ತಿರಲಿಲ್ಲ’

ಸೆಲೆಬ್ರಿಟಿಗಳಿಗೆ ಯಾವ ಬೈಕು, ಕಾರೆಂದರೆ ಇಷ್ಟ? ಅವರ ಮೊದಲ ಡ್ರೈವಿಂಗ್‌ನ ಅನುಭವ ಹೇಗಿತ್ತು? ಮಾಡಿಕೊಂಡ ಅವಾಂತರಗಳೇನು? ಇವೆಲ್ಲ ಅನುಭವಗಳ ತಾಣವೇ ಫಸ್ಟ್‌ ಡ್ರೈವ್. ಈ ವಾರ ತಮ್ಮ ಫಸ್ಟ್‌ ಡ್ರೈವ್‌ ಕಥೆಯನ್ನು ತೆರೆದಿಟ್ಟಿದ್ದಾರೆ ಕನ್ನಡದ ನಾಯಕ ನಟ ಧ್ರುವ ಸರ್ಜಾ

ಸ್ಮಾರ್ಟ್‌ಫೋನ್‌ ಫೋಟೊಗ್ರಫಿಯ ಹೊಸ ಸಾಧ್ಯತೆಗಳು

ಮೊಬೈಲ್ ಮೂಲಕ ಫೋಟೊಗ್ರಫಿ ಮಾಡುವಾಗ ಅಥವಾ ಚಲನಚಿತ್ರ, ಸಾಕ್ಷ್ಯಚಿತ್ರಗಳನ್ನು ಚಿತ್ರೀಕರಿಸುವಾಗ ಅನೇಕ ಉಪಕರಣಗಳ ಅವಶ್ಯಕತೆಯಿರುತ್ತದೆ. ಅಂತಹ ಭಿನ್ನ ಉಪಕರಣಗಳನ್ನು ಒಂದೆಡೆ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಈ ಮಾಡ್ಯುಲರ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಶ್...ಇದು ಶ್ರವಣಾತೀತ!

ಶ್ರವಣಾತೀತ ಶಬ್ದ ವ್ಯವಸ್ಥೆ’ಯನ್ನು ಬಳಸಿ ಖಾತೆಯಿಂದ ಖಾತೆಗೆ ಸುರಕ್ಷಿತ ಹಣ ವರ್ಗಾವಣೆ ಮಾಡುವ ವಿನೂತನ ತಂತ್ರಜ್ಞಾನ ‘ಆಡಿಯೊ ಕ್ಯುಆರ್(Audio QR)’ ಜಾಗತಿಕ ಮಟ್ಟದಲ್ಲಿ ಕುತೂಹಲ ಕೆರಳಿಸಿದೆ.