ನೂತನ ಮಯೂರ ನರ್ತನ!

13 Oct, 2017
ಪದ್ಮನಾಭ ಭಟ್‌

‘ಹೆತ್ತ ಜೀವಗಳು ನಮ್ಮನ್ನು ಅಗಲಿದಾಗ ಎಂಥ ರಾಕ್ಷಸ ಆದರೂ ಆ ಸಂದರ್ಭದಲ್ಲಿ ಕರಗಿಹೋಗುತ್ತಾನೆ. ಎದೆಗುಂದುತ್ತಾನೆ. ನಾನು ತುಂಬ ಸಾಧಾರಣ ಕುಟುಂಬದಿಂದ ಬಂದವಳು. ಸಾಕಷ್ಟು ಕಷ್ಟ ನೋಡಿದವಳು. ಆದರೆ ಅವೆಲ್ಲವನ್ನೂ ಒಂದು ಧೈರ್ಯದಿಂದಲೇ ಎದುರಿಸುತ್ತ ಬಂದಿದ್ದೆ. ಆದರೆ ಅನಿರೀಕ್ಷಿತವಾಗಿ ನನ್ನ ತಂದೆಯನ್ನು ಕಳೆದುಕೊಂಡ ಸನ್ನಿವೇಶ ಎದುರಾದಾಗ ಮಾತ್ರ ಪೂರ್ತಿ ಕುಸಿದು ಹೋಗಿದ್ದೆ.  ಇದು ನನ್ನ ಬದುಕಿನ ಮುಕ್ತಾಯ ಅನಿಸಿಬಿಟ್ಟಿತ್ತು. ತಂದೆ ಕಳೆದುಕೊಂಡ ದುಃಖ ಒಂದೆಡೆ. ಇಲ್ಲೇ ಇರಬೇಕಾ, ಅಥವಾ ಚಿತ್ರರಂಗ ಬಿಟ್ಟು ಮರಳಿ ನನ್ನೂರು ಹುಬ್ಬಳ್ಳಿಗೆ ಹೋಗಬೇಕಾ? ಅಮ್ಮನನ್ನು ಇಲ್ಲಿಗೆ ಕರೆಸಿಕೊಳ್ಳಬೇಕಾ? ಮುಂದಿನ ಬದುಕು ಹೇಗೆ?  ಇಂಥ ನೂರಾರು ಪ್ರಶ್ನೆಗಳು ನನ್ನನ್ನು ಇರಿಯುತ್ತಿರುವಾಗ ನನಗೆ ಬದುಕಲು ಸ್ಫೂರ್ತಿ ತಂದುಕೊಂಡ ಸಿನಿಮಾ ‘ಕರಿಯ 2’.  ಇದು ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕು ಎರಡೂ ರೀತಿಯಿಂದಲೂ ತುಂಬ ವಿಶೇಷ ಸಿನಿಮಾ’ – ಪಟಪಟಪಟ ಎಂದು ಇಷ್ಟು ಹೇಳಿ ಉಸಿರು ತೆಗೆದುಕೊಳ್ಳಲಿಕ್ಕೋ, ನಿಟ್ಟುಸಿರು ಮರೆಮಾಚಲಿಕ್ಕೋ ಸುಮ್ಮನಾಗಿಬಿಟ್ಟರು ಮಯೂರಿ.

ಮಾಡೆಲಿಂಗ್‌, ಕಿರುತೆರೆ, ಚಲನಚಿತ್ರಗಳು ಹೀಗೆ ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮೇಲೇರುತ್ತ ಬಂದಿರುವ  ಹುಡುಗಿ ಮಯೂರಿ. 2015ರಲ್ಲಿ ‘ಕೃಷ್ಣಲೀಲಾ’ ಸಿನಿಮಾ ಮೂಲಕ ನಾಯಕಿಯಾಗಿ ಹಿರಿತೆರೆಗೆ ಅಡಿಯಿಟ್ಟ ಮಯೂರಿ ಅವರ ನಾಲ್ಕನೇ ಸಿನಿಮಾ ‘ಕರಿಯ 2’. ಇಷ್ಟು ಕಮ್ಮಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಕಾರಣ ಕೇಳಿದರೆ ಅವರದು ಒಂದೇ ಉತ್ತರ; ‘ಹತ್ತು ಸಿನಿಮಾ ಮಾಡಿ ಎಲ್ಲದರಲ್ಲಿಯೂ ಸೋಲುವುದಕ್ಕಿಂತ ಒಂದೊಂದೇ ಮಾಡುತ್ತ ಹೋಗಿ ಎಲ್ಲದರಲ್ಲಿಯೂ ಗೆಲ್ಲುತ್ತಾ ಶಾಶ್ವತವಾಗಿ ಬೆಳೆಯಬೇಕು ಎನ್ನುವುದೇ ನನ್ನ ಪಾಲಿಸಿ’.

’ಎಲ್ಲರೂ ಎಲ್ಲೆಲ್ಲಿಂದಲೋ ಬಂದು ನಮ್ಮ ಚಿತ್ರರಂಗದಲ್ಲಿ ಬೆಳೆಯುತ್ತಾರೆ. ಆದರೆ ನಾನು ಉತ್ತರಕರ್ನಾಟಕದ ಹುಡುಗಿಯಾಗಿ, ಕನ್ನಡದವಳಾಗಿ ನನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು. ಇಲ್ಲಿ ಗುರುತರ ಮಟ್ಟಕ್ಕೆ ಬೆಳೆಯಬೇಕು ಎಂಬ ಆಸೆ ಮತ್ತು ಛಲ ಎರಡೂ ನನ್ನಲ್ಲಿದೆ’ ಎನ್ನುತ್ತಾರೆ ಮಯೂರಿ.

‘ಕರಿಯ 2’ ಅವರ ಮನಸ್ಸಿಗೆ ಹತ್ತಿರವಾಗಲು ಇನ್ನೂ ಒಂದು ಕಾರಣ ಇದೆ.  ಈ ಚಿತ್ರದಲ್ಲಿನ ಅನೇಕ ಸನ್ನಿವೇಶಗಳು ಅವರ ವೈಯಕ್ತಿಕ ಬದುಕನ್ನೇ ಹೋಲುವಂತಿದೆಯಂತೆ. ‘ಈ ಚಿತ್ರದಲ್ಲಿ ಎಲ್ಲಿಯೂ ನಾನು ಗ್ಲಿಸರಿನ್‌ ಬಳಸಿಯೇ ಇಲ್ಲ. ಕೇವಲ ಒಂದು ತಿಂಗಳ ಹಿಂದೆ ತೀರಿಕೊಂಡಿದ್ದರು. ನಂತರ ನನ್ನ ರೀಲ್‌ ಬದುಕಿನಲ್ಲಿಯೂ ತಂದೆಯ ಶವದ ಮುಂದೆ ಅಳುವ ದೃಶ್ಯಗಳಲ್ಲಿ ನಟಿಸುತ್ತಿದ್ದೆ. ಒಂದೇ ವ್ಯತ್ಯಾಸ. ಇಲ್ಲಿ ಶಾಟ್‌ ಮುಗಿದ ತಕ್ಷಣ ತಂದೆ ಎದ್ದು ಕೂತುಬಿಡುತ್ತಿದ್ದರು. ನಮ್ಮ ಜತೆಗೇ ಟೀ ಕುಡಿಯುತ್ತಿದ್ದರು. ಮಾತಾಡುತ್ತಿದ್ದರು. ನಿಜಜೀವನದಲ್ಲಿಯೂ ಹೀಗೆ ಆಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲಾ ಅನಿಸುತ್ತಿತ್ತು. ಭಾವುಕಳಾಗಿಬಿಡುತ್ತಿದ್ದೆ’ ಎಂದು ಬಣ್ಣದ ಬದುಕು ವಾಸ್ತವ ಜೀವನದೊಟ್ಟಿಗೆ ಬೆಸೆದುಕೊಂಡ ಪರಿಯನ್ನು ಅವರು ವಿವರಿಸುತ್ತಾರೆ.

ಅಲ್ಲದೇ ಈ ಸಿನಿಮಾದ ಕಥೆ ಮತ್ತು ಅದರಲ್ಲಿ ತಮ್ಮ ಪಾತ್ರಕ್ಕಿರುವ ಮಹತ್ವದ ಬಗ್ಗೆ ಅವರಿಗೆ ತುಂಬ ಖುಷಿಯಿದೆ. ನಿರ್ದೇಶಕ ಪ್ರಭು ಶ್ರೀನಿವಾಸ್‌ ಅವರನ್ನೂ ಅವರ ಪ್ರತಿಭೆಯನ್ನೂ ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ಈ ಚಿತ್ರದಲ್ಲಿ ಅವರು ಜಾನಕಿ ಅನ್ನೊ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಕೋಪ, ರೋಷ, ಪ್ರೀತಿ, ತುಂಟತನ ಎಲ್ಲವೂ ಇರುವ ಪಾತ್ರದಲ್ಲಿ ನಟಿಸಬೇಕು ಎನ್ನುವ ಆಸೆ ಎಲ್ಲ ಕಲಾವಿದರಿಗೂ ಇರುತ್ತದೆ. ಅದರಲ್ಲಿಯೂ ನಟಿಯರಿಗಂತೂ ತಾವೂ ಪಂಚಿಂಗ್‌ ಡೈಲಾಗ್‌ ಹೊಡೀಬೇಕು ಎಂಬ ಬಯಕೆ ಇರುತ್ತದೆ. ಈ ಎಲ್ಲವೂ ಜಾನಕಿಯ ಪಾತ್ರದಲ್ಲಿದೆ. ಅಲ್ಲದೇ ನಾಯಕನಷ್ಟೇ ಮಹತ್ವ ನಾಯಕಿಗೂ ಇದೆ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳುತ್ತಾರೆ. ಜತೆಗೆ ಅವರು ಈ ಚಿತ್ರದಲ್ಲಿ ಬುಲೆಟ್‌ ಬೈಕ‌್ ಅನ್ನೂ ಓಡಿಸಿದ್ದಾರೆ. ಅದುವರೆಗೂ ಬುಲೆಟ್‌ ಓಡಿಸಿ ಗೊತ್ತಿರದ ಅವರು ವಿಶ್ವಾಸದಿಂದಲೇ ಚಲಾಯಿಸುವುದನ್ನು ಕಂಡ ನಿರ್ದೇಶಕರು ಮತ್ತೂ ಒಂದೆರಡು ಬೈಕ್‌ ಓಡಿಸುವ ದೃಶ್ಯ ಅಳವಡಿಸಿದರಂತೆ! ಹಾಗೆಯೇ ಇವರ ಅಭಿನಯವನ್ನು ನೋಡಿ ಇವರಿಗೆ ಹೆಚ್ಚುವರಿಯಾಗಿ ಒಂದಿಷ್ಟು ಡೈಲಾಗ್‌ಗಳು, ದೃಶ್ಯಗಳನ್ನೂ ಅಳವಡಿಸಿದ್ದಾರಂತೆ.

ದರ್ಶನ್‌ ಅಭಿನಯದ ‘ಕರಿಯ’ ಸಿನಿಮಾದ ನೆರಳು ಈ ಚಿತ್ರದ ಮೇಲೆ ನಕಾರಾತ್ಮಕ ಪರಿಣಾಮ ಮಾಡುವುದಿಲ್ಲವೇ ಎಂಬ ಪ್ರಶ್ನೆಗೆ ಅವರು ಚಿತ್ರದ ಟ್ಯಾಗ್‌ ಲೈನ್‌ ’ಇವ್ನು ಬೇರೆ ಥರ’ ಎಂಬುದನ್ನೇ ಪುನರುಚ್ಚರಿಸುತ್ತಾರೆ.

ಸಂತೋಷ್‌ ಅವರೊಂದಿಗೆ ನಟಿಸಿದ ಅನುಭವದ ಕುರಿತೂ ಅವರು ಉತ್ಸಾಹದಿಂದ ಮಾತನಾಡುತ್ತಾರೆ. ‘ಕರಿಯ 2 ಸಿನಿಮಾ ನಿರ್ಮಾಪಕ ಸಂತೋಷ್‌ ತಂದೆ. ಆದರೆ ಅವರಿಗೆ ನಿರ್ಮಾಪಕನ ಮಗ  ಎಂಬ ಯಾವ ಹಮ್ಮೂ ಇಲ್ಲ. ಎಲ್ಲರ ಜತೆ ಬೆರೆಯುತ್ತ ಖುಷಿಯಾಗಿರುತ್ತಾರೆ. ಅವರ ಪ್ರತಿಭಾಶಕ್ತಿಯಂತೂ ಅದ್ಭುತ. ಕರಿಯ ಸಿನಿಮಾದ ಮೂಲಕ ದರ್ಶನ್‌ ಅವರು ಎಷ್ಟು ಹೆಸರುಗಳಿಸಿದರೋ ಅಷ್ಟೇ ಹೆಸರನ್ನು ಈ ಸಿನಿಮಾದ ಮೂಲಕ ಸಂತೋಷ್‌ ಗಳಿಸಿದರೆ ಅಚ್ಚರಿಯಿಲ್ಲ’ ಎನ್ನುವುದು ಅವರ ಭವಿಷ್ಯನುಡಿ.

ಮುಂದೆಯೂ ಹೀಗೆ ಭಿನ್ನ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳಬೇಕು ಎನ್ನುವ ಹಂಬಲ ಅವರದು.

‘ಮುಂದೊಂದು ದಿನ ನಾನು ಹಿಂತಿರುಗಿ ನೋಡಿದಾಗ ನನ್ನ ಬಗ್ಗೆ ನನಗೆ ಆತ್ಮತೃಪ್ತಿ ಮೂಡಬೇಕು. ನಾನು ನಟಿಸಿದ ಎಲ್ಲ ಪಾತ್ರಗಳೂ ನನ್ನ ಹೆಸರಿನೊಟ್ಟಿಗೆ ಸೇರುತ್ತ ಹೋಗಬೇಕು. ನನ್ನ ಪಾತ್ರಗಳ ಹೆಸರೇ ನನ್ನ ಡೆಸಿಗ್ನೇಶನ್‌ ಆಗಬೇಕು. ನಾನು ಮಾಡುವ ಪಾತ್ರಗಳು ಪ್ರೇಕ್ಷಕರು ಏನಾದರೂ ಹೊಸತನ್ನು ಕಲಿಯಬೇಕು’ ಎಂದು ಪ್ರತಿಭೆಯ ಮೂಲಕವೇ ಬೆಳೆಯಬೇಕು ಎಂಬ ತಮ್ಮ ಬದ್ಧತೆಯನ್ನು ಅವರು ವ್ಯಕ್ತಪಡಿಸುತ್ತಾರೆ.

ಹಾಗೆಯೇ ತಮ್ಮ ಪ್ರತಿಭೆಯನ್ನು ಜನರು ಗುರ್ತಿಸಬೇಕು ಎಂಬ ಅಭಿಲಾಷೆಯೂ ಅವರಿಗಿದೆ. ‘ಈ ಗುರ್ತಿಸುವಿಕೆ ಎನ್ನುವುದು ಅವಾರ್ಡ್‌ಗಳ ಮೂಲಕ ಅಲ್ಲ, ರಿವಾರ್ಡ್‌ಗಳ ಮೂಲಕ’ ಎಂದೂ ಅವರು ಸ್ಪಷ್ಟವಾಗಿ ಹೇಳುತ್ತಾರೆ.

ಸದ್ಯಕ್ಕೆ ರಾಮಚಂದ್ರ ಎಂಬ ಹೊಸ ನಿರ್ದೇಶಕರು ನಿರ್ದೇಶಿಸಿರುವ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ಅವರು ಮತ್ತೊಂದು ಭಿನ್ನ ಪಾತ್ರಕ್ಕಾಗಿ ಕಾಯುತ್ತಿದ್ದಾರೆ.

**

ನಾನು ದೇವರಿಗೆ ನಮಸ್ಕಾರ ಮಾಡುವುದನ್ನು ಮರೆತಿರಬಹುದು. ಆದರೆ ನನ್ನ ಕಾಸ್ಟ್ಯೂಮ್‌, ಮೇಕಪ್‌ ಮತ್ತು ಅಮ್ಮನಿಗೆ ನಮಸ್ಕಾರ ಮಾಡುವುದನ್ನು ನಾನು ಒಂದು ದಿನವೂ ಮರೆತಿಲ್ಲ. ಇದು ನನ್ನ ಬದುಕಿನ ಶೈಲಿ.

Read More

Comments
ಮುಖಪುಟ

ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು ಮತ್ತೊಮ್ಮೆ ಉದ್ಘಾಟಿಸಿದರೇ ಪ್ರಧಾನಿ ಮೋದಿ?

ದಾಖಲೆಗಳ ಪ್ರಕಾರ, 7 ವರ್ಷಗಳ ಹಿಂದೆಯೇ ಎಐಐಎ ಸ್ಥಾಪನೆಯಾಗಿತ್ತು ಎಂಬುದು ತಿಳಿದುಬಂದಿದೆ. 2010ರ ಅಕ್ಟೋಬರ್‌ನಲ್ಲಿ ಸರ್ಕಾರ ಬಿಡುಗಡೆ ಮಾಡಿದ್ದ ಪತ್ರಿಕಾ ಪ್ರಕಟಣೆಯೂ ಇದಕ್ಕೆ ಇಂಬು ನೀಡಿದೆ.

ಕೈಮಗ್ಗ ಉತ್ಪನ್ನಗಳ ಕರಮುಕ್ತಕ್ಕೆ ಆಗ್ರಹಿಸಿ ನಡೆಯುತ್ತಿರುವ ಸತ್ಯಾಗ್ರಹಕ್ಕೆ ದೇವೇಗೌಡ ಸಾಥ್

ಈ ಸಂಬಂಧ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಈ ವಿಚಾರವನ್ನು  ಅವರ ಗಮನಕ್ಕೆ ತರುತ್ತೇವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಭರವಸೆ ನೀಡಿದ್ದಾರೆ.

ಅಮೆರಿಕ ಲೇಖಕ ಜಾರ್ಜ್ ಸೌಂದರ್ಸ್‌ಗೆ ಮ್ಯಾನ್ ಬುಕರ್ ಪ್ರಶಸ್ತಿ

ಜಾರ್ಜ್ ಸೌಂದರ್ಸ್ ಅವರು ಬರೆದ ಕಾದಂಬರಿ  ‘ಲಿಂಕನ್ ಇನ್ ದಿ ಬರ್ಡೊ‘(Lincoln in the Bardo)ಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

ಸಂಚಾರ ನಿಯಮ ಉಲ್ಲಂಘನೆ: ಮತ್ತೆ ಟ್ವಿಟರ್‌ನಲ್ಲಿ ಗಮನಸೆಳೆದ ಅಭಿಷೇಕ್ ಗೋಯಲ್

ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಮೂವರು ವಿದ್ಯಾರ್ಥಿನಿಯರು ಹಾಗೂ ಮುಂಭಾಗದಲ್ಲಿ ಮತ್ತೊಂದು ಮಗುವನ್ನು ಕುಳ್ಳಿರಿಸಿಕೊಂಡು ಹೋಗುತ್ತಿರುವ ಚಿತ್ರವನ್ನು ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಅಭಿಷೇಕ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಸಂಗತ

ಅರ್ಚಕರಾದರಷ್ಟೇ ಸಾಲದು...

ದಲಿತರು ಇಂದು ತಮ್ಮ ವಿಮೋಚನೆಗೆ ಅಂಬೇಡ್ಕರರ ಮಾರ್ಗವೇ ಸೂಕ್ತ ಎಂದು ನಂಬಿದ್ದಾರೆ. ಇಷ್ಟರ ಮೇಲೂ ಸರ್ಕಾರಕ್ಕೆ ದಲಿತರನ್ನು ಪುರೋಹಿತರನ್ನಾಗಿ ಮಾಡುವ ಇಚ್ಛೆ ಇದ್ದಲ್ಲಿ, ತಡವಾಗಿಯಾದರೂ ಸರಿಯೇ ತಾಲ್ಲೂಕಿಗೊಂದು ಬೌದ್ಧ ವಿಹಾರ ನಿರ್ಮಿಸಿ ಅಲ್ಲಿ ದಲಿತರನ್ನು ಭಂತೇಜಿಗಳನ್ನಾಗಿ ಆಯ್ಕೆ ಮಾಡಲಿ.

ಮೀಸಲಾತಿ ಏರಿಕೆಗೆ ಆಧಾರವೇನು?

ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಜನಸಂಖ್ಯೆಯಲ್ಲಿ ಅವರ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ಒದಗಿಸಬೇಕೆಂದು ಸಂವಿಧಾನದಲ್ಲಿಯೇ ಹೇಳಲಾಗಿದೆ. ಆದ್ದರಿಂದ ಅವರಿಗೆ ಮೀಸಲಾತಿಯಲ್ಲಿ ಅದೇ ಪ್ರಮಾಣದಲ್ಲಿ ಏರಿಕೆ ಮಾಡುವುದು ಅನಿವಾರ್ಯ

ಸುಲಭವೂ ಹೌದು ಕಷ್ಟವೂ ಹೌದು

ಮೀಸಲಾತಿ ಏರಿಕೆಗೆ ಕಷ್ಟಗಳು ಇರುವುದು ನಿಜ. ಆದರೆ, ಜನಶಕ್ತಿ ಮನಸ್ಸು ಮಾಡಿದರೆ ಅದೇನೂ ದೊಡ್ಡ ವಿಚಾರ ಅಲ್ಲ...

ವರ್ಚಸ್ಸು ಕಳೆದುಕೊಳ್ಳುತ್ತಿರುವ ಮಾಹಿತಿ ಹಕ್ಕು

ಮಾಹಿತಿ ಹಕ್ಕು ಅಧಿನಿಯಮದ ಜಾರಿಯಲ್ಲಿ ಅನೇಕ ತೊಡರುಗಳು ಕಾಣಿಸಿಕೊಂಡಿವೆ. ಬಾಕಿ ಉಳಿದಿರುವ ಅರ್ಜಿ ಮತ್ತು ಮೇಲ್ಮನವಿಗಳ ರಾಶಿ ದಿನೇ ದಿನೇ ಬೆಳೆಯುತ್ತಿದೆ...

ಕಾಮನಬಿಲ್ಲು

ನೆಟ್ಟಿ ಪ್ರವಾಸ

ನಮ್ಮ ತಂಡದಲ್ಲಿ ಅದುವರೆಗೂ ಗದ್ದೆಯನ್ನೇ ನೋಡದವರಿದ್ದರು, ಸಣ್ಣವರಿದ್ದಾಗ ಗದ್ದೆ ಕೆಲಸ ಮಾಡಿ ಅನುಭವ ಇದ್ದವರಿದ್ದರು, ಈಗಲೂ ಕೃಷಿ ಮಾಡುವವರಿದ್ದರು. ಕೆಲವರಿಗೆ ಇದು ಹೊಚ್ಚ ಹೊಸ ಅನುಭವ, ಇನ್ನು ಕೆಲವರಿಗೆ ಬಾಲ್ಯದ ನೆನಪು

‘ಕ್ಲಚ್ಚು ಯಾವ್ದು ಅಂತ್ಲೇ ಗೊತ್ತಿರಲಿಲ್ಲ’

ಸೆಲೆಬ್ರಿಟಿಗಳಿಗೆ ಯಾವ ಬೈಕು, ಕಾರೆಂದರೆ ಇಷ್ಟ? ಅವರ ಮೊದಲ ಡ್ರೈವಿಂಗ್‌ನ ಅನುಭವ ಹೇಗಿತ್ತು? ಮಾಡಿಕೊಂಡ ಅವಾಂತರಗಳೇನು? ಇವೆಲ್ಲ ಅನುಭವಗಳ ತಾಣವೇ ಫಸ್ಟ್‌ ಡ್ರೈವ್. ಈ ವಾರ ತಮ್ಮ ಫಸ್ಟ್‌ ಡ್ರೈವ್‌ ಕಥೆಯನ್ನು ತೆರೆದಿಟ್ಟಿದ್ದಾರೆ ಕನ್ನಡದ ನಾಯಕ ನಟ ಧ್ರುವ ಸರ್ಜಾ

ಸ್ಮಾರ್ಟ್‌ಫೋನ್‌ ಫೋಟೊಗ್ರಫಿಯ ಹೊಸ ಸಾಧ್ಯತೆಗಳು

ಮೊಬೈಲ್ ಮೂಲಕ ಫೋಟೊಗ್ರಫಿ ಮಾಡುವಾಗ ಅಥವಾ ಚಲನಚಿತ್ರ, ಸಾಕ್ಷ್ಯಚಿತ್ರಗಳನ್ನು ಚಿತ್ರೀಕರಿಸುವಾಗ ಅನೇಕ ಉಪಕರಣಗಳ ಅವಶ್ಯಕತೆಯಿರುತ್ತದೆ. ಅಂತಹ ಭಿನ್ನ ಉಪಕರಣಗಳನ್ನು ಒಂದೆಡೆ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಈ ಮಾಡ್ಯುಲರ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಶ್...ಇದು ಶ್ರವಣಾತೀತ!

ಶ್ರವಣಾತೀತ ಶಬ್ದ ವ್ಯವಸ್ಥೆ’ಯನ್ನು ಬಳಸಿ ಖಾತೆಯಿಂದ ಖಾತೆಗೆ ಸುರಕ್ಷಿತ ಹಣ ವರ್ಗಾವಣೆ ಮಾಡುವ ವಿನೂತನ ತಂತ್ರಜ್ಞಾನ ‘ಆಡಿಯೊ ಕ್ಯುಆರ್(Audio QR)’ ಜಾಗತಿಕ ಮಟ್ಟದಲ್ಲಿ ಕುತೂಹಲ ಕೆರಳಿಸಿದೆ.