ಪುಸ್ತಕ ನಿಷೇಧಿಸುವ ಅಸಹಿಷ್ಣುತೆ ಕುರಿತು

13 Oct, 2017
ರಾಮಚಂದ್ರ ಗುಹಾ

‘ರಶ್ದಿ ಪ್ರಕರಣ’ ಎಂದು ಹೆಸರಾದ ಈ ವಿದ್ಯಮಾನ 1988-89ರಲ್ಲಿ ನಡೆಯಿತು. ಸಲ್ಮಾನ್ ರಶ್ದಿ ತಮ್ಮ ‘ದ ಸಟಾನಿಕ್ ವರ್ಸಸ್’ ಕಾದಂಬರಿಯನ್ನು ಆಗಷ್ಟೇ ಪ್ರಕಟಿಸಿದ್ದರು. ಈ ಕೃತಿ ಪ್ರವಾದಿ ಮೊಹಮ್ಮದರನ್ನು ಅವಮಾನಿಸುತ್ತದೆ ಎಂದು ಸಂಪ್ರದಾಯವಾದಿ ಮುಸ್ಲಿಮರು ಕೆರಳಿದ್ದರು.

ಕಾದಂಬರಿಕಾರನ ತಲೆ ಕತ್ತರಿಸುವಂತೆ ಇರಾನ್‌ನ ಮೂಲಭೂತವಾದಿ ಮೌಲ್ವಿ ಅಯಾತ್ ಉಲ್ಲಾ ಖೊಮೇನಿ ಫತ್ವಾ ಹೊರಡಿಸಿದ್ದರು. ರಶ್ದಿ ಹುಟ್ಟಿದ ನಾಡು ಭಾರತದಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಪುಸ್ತಕವನ್ನು ನಿಷೇಧಿಸಿದರು.

ರಶ್ದಿ ನೆಲೆಸಿದ್ದ ದೇಶ ಬ್ರಿಟನ್‌ನ ಹಲವು ನಗರಗಳಲ್ಲಿ ಪುಸ್ತಕವನ್ನು ಸುಟ್ಟು ಹಾಕಲಾಯಿತು ಮತ್ತು ಅವರ ಜೀವಕ್ಕೆ ಇದ್ದ ಬೆದರಿಕೆ ಎಷ್ಟು ಗಂಭೀರವಾಗಿತ್ತು ಎಂದರೆ ಹಲವು ವರ್ಷ ಅವರು ಬ್ರಿಟನ್‌ನ ಪೊಲೀಸರ ರಕ್ಷಣೆಯಲ್ಲಿ ಅವಿತುಕೊಳ್ಳಬೇಕಾಯಿತು.

‘ರಶ್ದಿ ಪ್ರಕರಣ’ ಸುಪ್ರಸಿದ್ಧ. ಈ ಬಗ್ಗೆ ಸಾಕಷ್ಟು ಬರೆಯಲಾಗಿದೆ. ಇತ್ತೀಚೆಗೆ ಬ್ರಿಟಿಷ್ ಪತ್ರಾಗಾರದಲ್ಲಿ ನಾನು ಹುಡುಕಾಡುತ್ತಿದ್ದಾಗ ಇಂತಹುದೇ ಇನ್ನೊಂದು ಪ್ರಕರಣದ ಕುತೂಹಲಕರ ಸಾಕ್ಷ್ಯಗಳು ನನಗೆ ಸಿಕ್ಕವು. ರಶ್ದಿ ಅವರನ್ನು ಕೊಲ್ಲುವಂತೆ ಖೊಮೇನಿ ಕರೆ ಕೊಡುವುದಕ್ಕೆ ಸರಿಯಾಗಿ ಐವತ್ತು ವರ್ಷ ಹಿಂದೆ ಬ್ರಿಟನ್‌ನ ಪ್ರಸಿದ್ಧ ಲೇಖಕರೊಬ್ಬರು ಪ್ರವಾದಿಯವರ ಬಗ್ಗೆ ಬರೆದು, ಮೂಲಭೂತವಾದಿ ಮುಸ್ಲಿಮರ ಸಿಟ್ಟಿಗೆ ಗುರಿಯಾಗಿದ್ದರು. ಅವರೇ ಎಚ್‌.ಜಿ. ವೆಲ್ಸ್‌.

1930ರ ದಶಕದಲ್ಲಿ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದ ಮುಸ್ಲಿಮರ ಸಂಖ್ಯೆ ಕೆಲವೇ ಸಾವಿರವಿತ್ತು. ತಮ್ಮ ದೇಶ ತೊರೆದು ಬಂದು ಇಲ್ಲಿ ನೆಲೆಯಾಗಿದ್ದ ಇವರು ನಿಯಮಿತವಾಗಿ ಸಭೆ ಸೇರುವ ಮೂಲಕ ತಾಯ್ನಾಡಿನ ಪ್ರೇಮವನ್ನು ಉಳಿಸಿಕೊಂಡಿದ್ದರು. ಲಂಡನ್‌ನಲ್ಲಿ ನೆಲೆಸಿದ್ದ ಭಾರತೀಯ ಮುಸ್ಲಿಮರ ಸಂಘ ಜಮೀಯತ್ ಉಲ್ ಮುಸ್ಲಿಮೀನ್‌ನ ಸಭೆ ಪ್ರತಿ ಶುಕ್ರವಾರ ನಡೆಯುತ್ತಿತ್ತು. 1938ರ ಆಗಸ್ಟ್‌ನಲ್ಲಿ ನಡೆದ ಇಂತಹ ಒಂದು ಸಭೆಯಲ್ಲಿ ವೆಲ್ಸ್‌ ಅವರ ‘ಎ ಶಾರ್ಟ್ ಹಿಸ್ಟರಿ ಆಫ್ ದ ವರ್ಲ್ಡ್’ ಕೃತಿಯನ್ನು ಸುಡಲಾಗಿತ್ತು ಎಂದು ಲಂಡನ್ ಮೆಟ್ರೊಪಾಲಿಟನ್ ಪೊಲೀಸರ ದಾಖಲೆ ಹೇಳುತ್ತದೆ.

ಹಾಗೆ ನೋಡಿದರೆ, ವೆಲ್ಸ್‌ ಅವರ ಪುಸ್ತಕ ಪ್ರಕಟವಾದದ್ದು ಈ ಘಟನೆಗಿಂತ ಬಹಳ ಹಿಂದೆ, 1922ರಲ್ಲಿ. ಅದರ ಸಂಕ್ಷಿಪ್ತ ಆವೃತ್ತಿ ಆಗಷ್ಟೇ ಹಿಂದಿಗೆ ಅನುವಾದವಾಗಿತ್ತು ಮತ್ತು ಅದು ಕಲ್ಕತ್ತ ಮತ್ತು ಭಾರತದ ಇತರ ನಗರಗಳಲ್ಲಿ ಪ್ರತಿಭಟನೆಗೆ ಕಾರಣವಾಗಿತ್ತು. ಕೊನೆಗೆ, ಲಂಡನ್‌ನಲ್ಲಿಯೂ ಪ್ರತಿಭಟನೆ ನಡೆದಿತ್ತು.

1938ರ ಆಗಸ್ಟ್ 12ರಂದು ಕೃತಿಯನ್ನು ಸುಟ್ಟು ಹಾಕಲಾಗಿತ್ತು. ಅದಾಗಿ ನಾಲ್ಕು ದಿನಗಳ ಬಳಿಕ ಜಮೀಯತ್ ಉಲ್ ಮುಸ್ಲಿಮೀನ್‌ನ ಮುಖಂಡ ಮೊಹಮ್ಮದ್ ಬಕ್ಷ್ ಎಂಬುವರು ಬ್ರಿಟನ್‌ನಲ್ಲಿ ಭಾರತದ ಹೈಕಮಿಷನರ್ ಆಗಿದ್ದ ಫಿರೋಜ್ ಖಾನ್ ನೂನ್ ಅವರನ್ನು ಕಾಣಲು ಹೋದರು. ತಮ್ಮ ಪ್ರತಿಭಟನೆಯನ್ನು ಅಧಿಕೃತವಾಗಿ ದಾಖಲಿಸುವುದಕ್ಕಾಗಿ ಹೈಕಮಿಷನ್ ಕಚೇರಿ ಮುಂದೆ ಧರಣಿ ನಡೆಸುವ ಯೋಚನೆಯನ್ನು ಜಮೀಯತ್ ಹೊಂದಿದೆ ಎಂದು ನೂನ್ ಅವರಿಗೆ ಬಕ್ಷ್ ಹೇಳಿದರು. ತಮ್ಮ ಸಿಟ್ಟನ್ನು ಸರ್ಕಾರಕ್ಕೆ ತಿಳಿಸಿ, ಪುಸ್ತಕ ನಿಷೇಧಿಸಲು ಮತ್ತು ಲೇಖಕನನ್ನು ಶಿಕ್ಷಿಸಲು ನೂನ್ ಅವರು ನೆರವಾಗಬಹುದು ಎಂಬ ನಿರೀಕ್ಷೆ ಜಮೀಯತ್‌ನ ಮುಖಂಡರಲ್ಲಿ ಇತ್ತು.

ಆದರೆ, ಇಂತಹ ಪ್ರತಿಭಟನೆಯಿಂದ ಯಾವ ಪ್ರಯೋಜನವೂ ಆಗದು ಎಂದು ನೂನ್ ತಿಳಿಸಿದರು. ಅವರ ಮಾತುಗಳು ಹೀಗಿದ್ದವು: ‘ಇಂತಹ ವಿಚಾರಗಳಲ್ಲಿ ನಾವು (ಬ್ರಿಟನ್‌ನಲ್ಲಿರುವ ಮುಸ್ಲಿಮರು) ಅಸಹಾಯಕರು. ಈ ದೇಶದಲ್ಲಿ ಕ್ರೈಸ್ತ ಧರ್ಮ ಮತ್ತು ಯೇಸು ಕ್ರಿಸ್ತನನ್ನು ಟೀಕಿಸುವ ಜನರಿದ್ದಾರೆ. ರಾಜ ಕುಟುಂಬ ಮತ್ತು ರಾಜನನ್ನು ಟೀಕಿಸುವವರೂ ಇದ್ದಾರೆ. ಇಂತಹ ವಿಚಾರಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ನಾಯಿ ಎಷ್ಟೇ ಬೊಗಳಿದರೂ ಚಂದ್ರನ ಬೆಳಕು ಭೂಮಿಗೆ ಬಂದೇ ಬರುತ್ತದೆ. ಇಂಗ್ಲೆಂಡ್‌ನಲ್ಲಿ ಮುಸ್ಲಿಮರ ಸಂಖ್ಯೆ ಬಹಳ ಕಡಿಮೆ. ಕಾರಣ ಎಷ್ಟೇ ಪ್ರಾಮಾಣಿಕವಾಗಿದ್ದರೂ ಈ ದೇಶದಲ್ಲಿ ಇಂತಹ ಪ್ರತಿಭಟನೆ ಮಾಡುವುದರಿಂದ ಮುಸ್ಲಿಂ ಸಮುದಾಯಕ್ಕೆ ಯಾವ ಲಾಭವೂ ಆಗದು’.

ಬಕ್ಷ್ ಅವರಿಗೆ ಈ ಮಾತುಗಳು ಮನವರಿಕೆ ಆಗಲಿಲ್ಲ. ಎರಡು ದಿನಗಳ ಬಳಿಕ ಸುಮಾರು ಐನೂರು ಮುಸ್ಲಿಮರ ಜತೆಗೆ ಸೆಂಟ್ರಲ್ ಲಂಡನ್‌ನ ಇಂಡಿಯಾ ಹೌಸ್‌ ವರೆಗೆ ಬಕ್ಷ್ ಮೆರವಣಿಗೆ ನಡೆಸಿದರು. ‘ನಮ್ಮ ಗೌರವಾನ್ವಿತ ಪ್ರವಾದಿ ಮೊಹಮ್ಮದ್ (ಸ. ಅ.) ಮತ್ತು ಪವಿತ್ರ ಗ್ರಂಥ ಕುರ್‍ ಆನ್ ವಿರುದ್ಧ ಹುಸಿ, ಹೇಡಿತನದ ಮತ್ತು ದುರುದ್ದೇಶಪೂರಿತ ವಿಚಾರಗಳನ್ನು ಬರೆದ ಎಚ್.ಜಿ. ವೆಲ್ಸ್‌ ಕ್ರಮವನ್ನು ಬಲವಾಗಿ, ಆಕ್ರೋಶಭರಿತವಾಗಿ ಖಂಡಿಸುತ್ತೇವೆ’ ಎಂಬ ಒಕ್ಕಣೆ ಇದ್ದ ದೂರನ್ನು ಹೈಕಮಿಷನರ್‌ಗೆ ನೀಡಲಾಯಿತು. ವೆಲ್ಸ್‌ ಅವರು ತಮ್ಮ ಆರೋಪಗಳನ್ನು ತಕ್ಷಣವೇ ಕೈಬಿಟ್ಟು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದರು.

ಭಾರತದ ವ್ಯವಹಾರಗಳ ಉಸ್ತುವಾರಿ ಹೊಂದಿದ್ದ ವಿದೇಶಾಂಗ ಕಾರ್ಯದರ್ಶಿಗೆ ಈ ದೂರನ್ನು ಹೈಕಮಿಷನರ್ ಹಸ್ತಾಂತರಿಸಿದರು. ‘ಮುಸ್ಲಿಂ ಸಮುದಾಯಕ್ಕೆ ಆಗಿರುವ ನೋವಿಗೆ ವಿಷಾದಿಸುತ್ತೇನೆ. ಆದರೆ ಈ ದೇಶದಲ್ಲಿ ಅಭಿವ್ಯಕ್ತಿಗೆ ಇರುವ ಸ್ವಾತಂತ್ರ್ಯದಿಂದಾಗಿ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿರುವ ವಿಚಾರಗಳನ್ನು ಬದಲಾಯಿಸುವಂತೆ ವೆಲ್ಸ್‌ ಅವರ ಮೇಲೆ ಒತ್ತಡ ಹೇರಲು ನನಗೆ ಅಧಿಕಾರ ಇಲ್ಲ’ ಎಂದು ಕಾರ್ಯದರ್ಶಿ ಉತ್ತರಿಸಿದರು. ಆದರೆ, ಮುಸ್ಲಿಮರ ಭಾವನೆಗಳ ಬಗ್ಗೆ ಅಸಡ್ಡೆ ಇಲ್ಲ ಎಂಬುದನ್ನು ತೋರಿಸುವುದಕ್ಕಾಗಿ ಅವರು ದೂರಿನ ಪ್ರತಿಯೊಂದನ್ನು ವೆಲ್ಸ್‌ ಅವರ ಪುಸ್ತಕದ ಪ್ರಕಾಶನ ಸಂಸ್ಥೆ ‘ಪೆಂಗ್ವಿನ್ ಬುಕ್ಸ್‌’ಗೆ ಕಳುಹಿಸಿದರು.

ಲೇಖಕನ ಒಪ್ಪಿಗೆ ಇಲ್ಲದೆ ಕೃತಿಯಲ್ಲಿ ಯಾವುದೇ ಬದಲಾವಣೆ ಮಾಡುವ ಹಕ್ಕು ತಮಗೆ ಇಲ್ಲ. ಹಾಗಾಗಿ ಮುಸ್ಲಿಮರ ಭಾವನೆಗಳಿಗೆ ನೋವುಂಟು ಮಾಡಿದ ಸಾಲುಗಳ ಬಗ್ಗೆ ತಾವು ಏನನ್ನೂ ಮಾಡುವಂತಿಲ್ಲ ಎಂದು ಆಗ ಪೆಂಗ್ವಿನ್ ಬುಕ್ಸ್‌ನ ಮುಖ್ಯಸ್ಥರಾಗಿದ್ದ ಅಲೆನ್ ಲೇನ್ ಪ್ರತಿಕ್ರಿಯೆ ನೀಡಿದರು.

ಈ ಮಧ್ಯೆ, ‘ದ ಹಿಂದೂ’ ಪತ್ರಿಕೆಗೆ ಲಂಡನ್ ವರದಿಗಾರರಾಗಿದ್ದ ಬಿ. ಶಿವರಾವ್ ಅವರು ವಿವಾದಕ್ಕೆ ಸಂಬಂಧಪಟ್ಟಂತೆ ವೆಲ್ಸ್‌ ಅವರ ಸಂದರ್ಶನ ಮಾಡಿದರು. ಪ್ರವಾದಿ ಮೊಹಮ್ಮದ್ ಅವರ ವ್ಯಕ್ತಿತ್ವದ ಬಗ್ಗೆ ತಾನು ಬರೆದ ವಿಶ್ಲೇಷಣೆಯಲ್ಲಿ ಅಗೌರವ ತೋರುವ ಯಾವ ಅಂಶವೂ ಇಲ್ಲ; ಜಗತ್ತಿನ ಸಂಸ್ಕೃತಿಗೆ ಇಸ್ಲಾಂ ನೀಡಿರುವ ಕೊಡುಗೆಯ ಬಗ್ಗೆ ತನಗೆ ಸಂಪೂರ್ಣ ಅರಿವು ಇದೆ ಎಂದು ಸಂದರ್ಶನದಲ್ಲಿ ವೆಲ್ಸ್‌ ಹೇಳಿದರು. ಪುಸ್ತಕದ ಸಂಕ್ಷಿಪ್ತ ಆವೃತ್ತಿಯಲ್ಲಿರುವ ಒಂದು ಪ್ಯಾರಾದ ಆಧಾರದಲ್ಲಿ ತಮ್ಮ ನಿಲುವುಗಳ ಮೌಲ್ಯಮಾಪನ ಸರಿಯಾದ ಕ್ರಮ ಅಲ್ಲ ಎಂದು ಅಭಿಪ್ರಾಯಪಟ್ಟರು.

ತಮ್ಮನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ವೆಲ್ಸ್‌ ಹೇಳಿದ್ದು ಸರಿಯಾಗಿಯೇ ಇತ್ತು. ಅಲ್ಲದೇ ಕೃತಿಯನ್ನು ಇಡಿಯಾಗಿ ಓದಿದರೆ ಮೊಹಮ್ಮದ್ ಹೊಂದಿದ್ದ ಧಾರ್ಮಿಕ ಒಲವಿನ ಬಗ್ಗೆ ವೆಲ್ಸ್‌‌ಗೆ ಭಾರಿ ಮೆಚ್ಚುಗೆ ಇತ್ತು ಎಂಬುದು ಸ್ಪಷ್ಟ.

ಬ್ರಿಟನ್‌ನಲ್ಲಿ ಪ್ರತಿಭಟನೆಗಳು ತಣ್ಣಗಾದವು. ಆದರೆ ಜಗತ್ತಿನ ಇತರ ಭಾಗಗಳಲ್ಲಿ ಮುಂದುವರಿದವು. ಮೊಂಬಾಸಾದಲ್ಲಿ 1938ರ ಆಗಸ್ಟ್ 28ರಂದು ಭಾರತೀಯ ಮುಸ್ಲಿಮರ ಸಭೆ ನಡೆಯಿತು. ಬ್ರಿಟನ್ ಸಾಮ್ರಾಜ್ಯದಲ್ಲಿ ಪುಸ್ತಕವನ್ನು ನಿಷೇಧಿಸಬೇಕು ಎಂದು ಸಭೆಯಲ್ಲಿ ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಲಾಯಿತು.

ಪುಸ್ತಕ ವ್ಯಾಪಾರಿ ಡಬ್ಲ್ಯು.ಎಚ್. ಸ್ಮಿತ್ ಅವರು ಬ್ರಿಟಿಷ್ ಸರ್ಕಾರದ ಭಾರತ ಕಚೇರಿಗೆ ಬರೆದ ಕುತೂಹಲಕರವಾದ ಒಂದು ಪತ್ರವೂ ಪತ್ರಾಗಾರದಲ್ಲಿ ನನಗೆ ಸಿಕ್ಕಿತು. ಸ್ಮಿತ್ ಅವರು ವೆಲ್ಸ್‌ ಅವರ ಪುಸ್ತಕದ ಪ್ರತಿಗಳನ್ನು ಸಿಂದ್‌ನ ಸದರ್ ಬಜಾರ್‌ನಲ್ಲಿದ್ದ ಪ್ರೀಮಿಯರ್ ಬುಕ್ ಡಿಪೊಗೆ ಮೂರು ಬಾರಿ ಕಳುಹಿಸಿದ್ದರು. ವಿಚಿತ್ರವೆಂದರೆ ಮೂರು ಬಾರಿಯೂ ಪುಸ್ತಕಗಳು ಅಲ್ಲಿಗೆ ತಲುಪಿರಲಿಲ್ಲ. ‘ಈ ಪುಸ್ತಕವನ್ನು ಭಾರತದಲ್ಲಿ ನಿಷೇಧಿಸಲಾಗಿದೆಯೇ’ ಎಂಬ ಪ್ರಶ್ನೆ ಸ್ಮಿತ್ ಅವರನ್ನು ಕಾಡಿತ್ತು. ಭಾರತ ಕಚೇರಿಯು ಈ ಬಗ್ಗೆ ವಿಚಾರಿಸಿದಾಗ, ಸಿಂದ್ ಸರ್ಕಾರ ಪುಸ್ತಕವನ್ನು ನಿಷೇಧಿಸಿದ್ದು ತಿಳಿದು ಬಂತು. ‘ಮುಸ್ಲಿಮರ ಭಾವನೆಗಳಿಗೆ ಪುಸ್ತಕವು ಕಿಚ್ಚು ಹಚ್ಚಬಹುದು’ ಎಂಬ ಸಿಐಡಿ ವರದಿಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿತ್ತು.

ವೆಲ್ಸ್‌ ಅವರ ಬಗ್ಗೆ ಬಂದ ಪ್ರಮುಖ ಜೀವನ ಚರಿತ್ರೆಗಳಲ್ಲಿ ಎಲ್ಲಿಯೂ ಈ ವಿವಾದವು ಪ್ರಸ್ತಾಪವಾಗಿಲ್ಲ. ಆ ಬರಹಗಾರನ ಜೀವನದಲ್ಲಿ ಇದು ಬಹಳ ಸಣ್ಣ ಘಟನೆ ಆಗಿರಬಹುದು. ಆದರೆ, ಇಂದು ಈ ವಿವಾದದ ಬಗ್ಗೆ ನಾವು ಗಮನ ಹರಿಸುವ ಅಗತ್ಯ ಇದೆ ಎಂಬುದು ನನ್ನ ಭಾವನೆ. ಬಳಿಕ ನಡೆದ ‘ರಶ್ದಿ ಪ್ರಕರಣ’ ಎಂಬ ಹೆಚ್ಚು ಗಂಭೀರವಾದ ವಿವಾದದ ಸೂಚನೆಯನ್ನು ಇದು ನೀಡಿತ್ತು ಎಂಬುದು ಇದಕ್ಕೆ ಒಂದು ಕಾರಣ. 1938ರಲ್ಲಿ ಮುಸ್ಲಿಮರು ಇಂಗ್ಲೆಂಡ್‌ನಲ್ಲಿ ಬಹಳ ಸಣ್ಣ ಸಂಖ್ಯೆಯಲ್ಲಿದ್ದರು. ಆದರೆ, ಸಾವಿರ ಸಂಖ್ಯೆಯಲ್ಲಿದ್ದ ಮುಸ್ಲಿಮರು 1989ರ ಹೊತ್ತಿಗೆ ಹಲವು ಲಕ್ಷಗಳಾಗಿದ್ದರು. ವೆಲ್ಸ್‌ ಅವರಂತಲ್ಲದೆ, ರಶ್ದಿ ಅವರು ಹುಟ್ಟಿನಿಂದ ಮುಸ್ಲಿಂ ಆಗಿದ್ದುದರಿಂದ ಅವರ ಪುಸ್ತಕ ಹೆಚ್ಚು ಗಮನ ಸೆಳೆಯಿತು.

ಜಮೀಯತ್ ಉಲ್ ಮುಸ್ಲಿಮೀನ್ ಸಂಘಟನೆಯ ಹೆಚ್ಚಿನ ಸದಸ್ಯರು ವೆಲ್ಸ್‌ ಅವರ ಪುಸ್ತಕ ಓದಿದ್ದರು ಎಂಬುದರ ಬಗ್ಗೆ ನನಗೆ ಅನುಮಾನ ಇದೆ. ಹಾಗೆಯೇ, ಬ್ರಾಡ್‌ಫೋರ್ಡ್‌ನಲ್ಲಿ ರಶ್ದಿ ಪುಸ್ತಕವನ್ನು ಬೆಂಕಿಗೆ ಹಾಕಿದ, ಕರಾಚಿ ಅಥವಾ ನವದೆಹಲಿಯಲ್ಲಿ ಪುಸ್ತಕದ ವಿರುದ್ಧ ಪ್ರತಿಭಟನೆ ನಡೆಸಿದ ಜನರು ‘ದ ಸಟಾನಿಕ್ ವರ್ಸಸ್’ ಕಾದಂಬರಿಯನ್ನು ಓದಿದವರಲ್ಲ.

1938ರಲ್ಲಿ ವೆಲ್ಸ್‌ ಅವರ ಪುಸ್ತಕದ ಮೇಲೆ ದಾಳಿಯಾದಾಗ ಅಥವಾ 1989ರಲ್ಲಿ ರಶ್ದಿ ಅವರ ಪುಸ್ತಕಕ್ಕೆ ಬೆಂಕಿ ಇಟ್ಟಾಗ, ನಿಷೇಧಿಸಿದಾಗ ಮತ್ತು ಲೇಖಕನ ಜೀವಕ್ಕೆ ಬೆದರಿಕೆ ಒಡ್ಡಿದಾಗ, ಇಂತಹುದು ಮುಸ್ಲಿಮರ ವಿಚಾರದಲ್ಲಿ ಮಾತ್ರ ನಡೆಯುತ್ತದೆ ಎಂಬ ವಾದ ಕೇಳಿ ಬಂದಿತ್ತು. ಕೆಲವು ಹಿಂದೂಗಳೂ ಇಂತಹ ವಾದವನ್ನು ಸದಾ ಮುಂದಿಡುತ್ತಿರುತ್ತಾರೆ. ಆದರೆ ಈ ಸಮಾಧಾನಕ್ಕೆ ಈಗ ಅರ್ಥವೇ ಇಲ್ಲ.

ಈಗ, ಮುಸ್ಲಿಮರ ಹಾಗೆಯೇ ಹಿಂದೂಗಳು ಕೂಡ ಒಟ್ಟಾಗಿ ಅಥವಾ ಜಾತಿ ಗುಂಪುಗಳಾಗಿ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅತ್ಯಂತ ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡುತ್ತಾರೆ. ತಮ್ಮ ಜಾತಿಯನ್ನು ಸರಿಯಾಗಿ ತೋರಿಸಿಲ್ಲ ಎಂದು ರಜಪೂತರು ರಾಜಸ್ಥಾನದಲ್ಲಿ ಸಿನಿಮಾ ಚಿತ್ರೀಕರಣ ಸೆಟ್‌ನಲ್ಲಿಯೇ ದಾಂದಲೆ ನಡೆಸಿದ್ದರು. ಅಮೆರಿಕದ ವಿದ್ವಾಂಸರೊಬ್ಬರು ಸಾಕಷ್ಟು ಸಂಶೋಧನೆ ನಡೆಸಿ ಶಿವಾಜಿಯ ಬಗ್ಗೆ ಬರೆದ ಪುಸ್ತಕವನ್ನು ನಿಷೇಧಿಸಲಾಗಿದೆ.

ಆ ವಿದ್ವಾಂಸ ಇನ್ನೆಂದೂ ಭಾರತಕ್ಕೆ ಬರುವುದಕ್ಕೆ ಸಾಧ್ಯವಿಲ್ಲ. ರಾಮ ಮತ್ತು ಕೃಷ್ಣ ಹಲವು ಲೋಪಗಳನ್ನು ಹೊಂದಿದ್ದವರು ಎಂದು ಚಿಂತಿಸುತ್ತಾ ಬೆಳೆದವನು ನಾನು. ಆದರೆ ಈಗ ಅದನ್ನು ಯಾರಾದರೂ ಬರಹ ಅಥವಾ ಸಿನಿಮಾ ರೂಪದಲ್ಲಿ ತೋರಿಸುವುದಾದರೆ ಮೊದಲು ಅವರು ಜೀವವಿಮೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಓದುಗರ ಜತೆಗೆ ಇನ್ನೂ ಒಂದು ವಿಚಾರವನ್ನು ಹೇಳುವುದಿದೆ. ನಮ್ಮ ಮಾಜಿ ವಸಾಹತುಶಾಹಿಗಳ ನಾಡಿನಲ್ಲಿ ದೇವರು ಮತ್ತು ರಾಜರನ್ನು ಲೇವಡಿ ಮಾಡಿ ಪುಸ್ತಕ ಅಥವಾ ಸಿನಿಮಾ ಮಾಡಿದರೆ ಅವುಗಳನ್ನು ನಿಷೇಧಿಸುವುದಿಲ್ಲ. ಬ್ರಿಟನ್‌ನಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ, ಲೇಖಕರು ಮತ್ತು ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಸರ್ಕಾರ ಬದ್ಧವಾಗಿರುತ್ತದೆ. ಭಾರತದ ಮುಸ್ಲಿಮರು ಅಥವಾ ಹಿಂದೂಗಳಿಗಿಂತ ಈ ವಿಚಾರದಲ್ಲಿ ಬ್ರಿಟನ್‌ನ ಕ್ರೈಸ್ತರು ಹೆಚ್ಚು ನಾಗರಿಕವಾಗಿ ಹಾಗೂ ವಿಶಾಲ ಮನಸ್ಕರಾಗಿ ವರ್ತಿಸುತ್ತಾರೆ.

Read More

Comments
ಮುಖಪುಟ

ಸುನೀತ್‌, ಯುರೋಪಾಗೆ ಗರಿ

ಸ್ಪರ್ಧೆಯಲ್ಲಿ ಚಾಂಪಿಯನ್‌ ಆಫ್‌ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಸುನೀತ್‌ ಅವರು ಟ್ರೋಫಿ ಹಾಗೂ ₹ 4 ಲಕ್ಷ ಬಹುಮಾನ ಗೆದ್ದುಕೊಂಡರು. ಯುರೊಪಾ ಭುವನಿಕ್ ಅವರು ಟ್ರೋಫಿಯ ಜೊತೆ ₹ 1.5 ಲಕ್ಷ ನಗದು ಬಹುಮಾನ ಪಡೆದುಕೊಂಡರು...

ಗುಜರಾತ್‌: ಬಿಜೆಪಿಗೆ ಪ್ರಯಾಸದ ಗೆಲುವು

182 ಸ್ಥಾನಗಳನ್ನು ಹೊಂದಿರುವ ಗುಜರಾತಿನಲ್ಲಿ 99 ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ಸತತ ಆರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. 68 ಸ್ಥಾನಗಳನ್ನು ಹೊಂರುವ ಹಿಮಾಚಲ ಪ್ರದೇಶದಲ್ಲಿ 44 ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆ...

‘ಸಾಧನಾ ಸಂಭ್ರಮ’ದಲ್ಲಿ ಆತ್ಮವಿಶ್ವಾಸ ಪ್ರದರ್ಶನ

‘ಉತ್ತಮ ಆಡಳಿತವನ್ನು ನೀಡಿದ್ದೇನೆ. ಆದ್ದರಿಂದ ನಮಗೆ ಆಡಳಿತ ವಿರೋಧಿ ಅಲೆ ಇಲ್ಲ. ಮುಂದಿನ ಬಾರಿಯೂ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೃಢವಾಗಿ ಹೇಳಿದರು.

ರಾಜ್ಯದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ವಿವಿಪಿಎಟಿ ಇವಿಎಂ ಬಳಕೆ

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತಪತ್ರ ವ್ಯವಸ್ಥೆ ಜಾರಿ ಪ್ರಶ್ನೆಯೇ ಇಲ್ಲ. ರಾಜ್ಯದ ಎಲ್ಲ ಮತಗಟ್ಟೆಗಳಲ್ಲೂ ವಿವಿಪಿಎಟಿ (Voter Verifiable Paper Audit Trail) ವ್ಯವಸ್ಥೆ ಹೊಂದಿರುವ ಇವಿಎಂಗಳನ್ನೇ ಬಳಸಲಾಗುವುದು’ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಗತ

ನೈತಿಕ ಚೌಕಟ್ಟು ಮತ್ತು ವರ್ತಮಾನದ ಬಿಕ್ಕಟ್ಟು

ಪಾವಿತ್ರ್ಯ, ಶೀಲ, ಕನ್ಯತ್ವವೆಂಬ ಅಂಶಗಳನ್ನು ತಮ್ಮ ಬದುಕಿನ ಹಾದಿಯಲ್ಲಿ ಜರುಗುವ ಪ್ರೇಮದ ಮೂಲಕ ಮೆಟ್ಟಿನಿಲ್ಲುವ ಯುವ ಸಮುದಾಯ, ಅದೇ ಮದುವೆ ಆಗುವ ವಿಚಾರ ಬಂದಾಗ ‘ಹಿಂದೇನೂ ನಡೆದೇ ಇಲ್ಲ’ವೆಂಬಂತೆ ಮತ್ತದೇ ಜಾತಿ, ಜಾತಕ, ಅಂತಸ್ತು, ಒಳ್ಳೆ ಮನೆತನಗಳೆಂಬ ಸೂತ್ರಕ್ಕೆ ಜೋತು ಬೀಳುವ ವಿಪರ್ಯಾಸವನ್ನೂ ಗಮನಿಸಬಹುದಾಗಿದೆ. 

ಮಕ್ಕಳನ್ನು ಮಾದಕ ವಸ್ತುಗಳಿಂದ ರಕ್ಷಿಸಿ

ತಂದೆ-ತಾಯಿಗಳ ಆರೈಕೆ, ಪೋಷಣೆಯಿಲ್ಲದ ಅನಾಥ ಬೀದಿ ಮಕ್ಕಳು ಇಂತಹ ಕೃತ್ಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆಂಬ ಅಂಶ ಬೆಂಗಳೂರಿನಲ್ಲಿ ನಿಮ್ಹಾನ್ಸ್ ಸಂಸ್ಥೆ ಮತ್ತು ಬೆಂಗಳೂರು ಫೋರಂ ಫಾರ್ ಸ್ಟ್ರೀಟ್ ಅಂಡ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಗಳು 1998ರಲ್ಲಿ ಕೈಗೊಂಡ ಅಧ್ಯಯನದಿಂದ ತಿಳಿದುಬಂದಿತ್ತು

ನಿರ್ಭಯಾ ನೆನಪು– ವರ್ಮಾ ವರದಿ

ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ನ್ಯಾಯಮೂರ್ತಿ ವರ್ಮಾ ವರದಿ ಒಂದು ಅಪರೂಪದ ದಾಖಲೆ. ಒಂದು ಬೃಹತ್ ಆಂದೋಲನದ ಫಲ. ಮಹಿಳಾ ಚಳವಳಿಗಳು ಇಂತಹ ವರದಿಗಳ ಅನುಷ್ಠಾನಕ್ಕೆ ಆಗ್ರಹಿಸಬೇಕು

ಪೇಜಾವರ ಶ್ರೀಗಳಿಗೆ... ಸ್ಪಷ್ಟನೆಗಾಗಿ ಪತ್ರ

ಸಂವಿಧಾನದ ಯಾವ ವಿಧಿಗಳ ಬಗ್ಗೆ ತಮಗೆ ತಕರಾರಿದೆ? ತಾವು ಬಯಸುವ ಬದಲಾವಣೆ ಏನು?

ಕರ್ನಾಟಕ ದರ್ಶನ

ವಿಜಯಪುರದ ಯುದ್ಧತೋಪುಗಳು

ಯುದ್ಧಭೂಮಿಯಲ್ಲಿ ಭೋರ್ಗರೆಯುತ್ತ ಬೆಂಕಿ ಉಗುಳಿದ್ದ ಈ ಆಯುಧಗಳು ಈಗ ಶಾಂತವಾಗಿ ಮಲಗಿ ಎಲ್ಲರನ್ನೂ ಆಕರ್ಷಿಸುತ್ತಿವೆ. ಆದರೆ, ಅವುಗಳ ವೀಕ್ಷಣೆಗೆ ಸರಿಯಾದ ಸೌಕರ್ಯಗಳೇ ಇಲ್ಲವಲ್ಲ?

ಕಟ್ಟೆ ಕಟ್ಟಿದ ಕಥೆ ಹೇಳುವ ಚಿತ್ರಗಳು

ಆಲಮಟ್ಟಿ ಜಲಾಶಯ ಸನ್ನದ್ಧಗೊಂಡು ನಿಲ್ಲಲು 40 ವರ್ಷಗಳೇ ಬೇಕಾದವು. ನಿರ್ಮಾಣ ಹಂತದ ಈ ಇತಿಹಾಸದ ಕಥೆ ಹೇಳುವ ನೂರಾರು ಭಾವಚಿತ್ರಗಳನ್ನು ಆಲಮಟ್ಟಿಯ ಪ್ರಧಾನ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯ ಆವರಣದ ಗೋಡೆಗಳ ಮೇಲೆ ಇದೀಗ ಅನಾವರಣಗೊಳಿಸಲಾಗಿದೆ.

ಹಾವಿನೊಡನೆ ಆಡುವ ಪೋರಿ!

ಹಾವು ಎಂದರೆ ಹುಲೇಕಲ್‌ ಮನೆತನದವರಿಗೆ ಅಚ್ಚುಮೆಚ್ಚು. ಈ ಮಗುವಿನ ಅಜ್ಜ ಸುರೇಶ ಅವರು ಅರಣ್ಯ ಇಲಾಖೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದವರು. ಮನೆಗಳಿಗೆ ನುಗ್ಗಿದ ಹಾವುಗಳನ್ನು ರಕ್ಷಣೆ ಮಾಡುತ್ತಿದ್ದವರು. ಪ್ರಶಾಂತ್‌ ಕೂಡ ಹಾವು ಹಿಡಿಯುವುದನ್ನು ಕಲಿತರು. ಈಗ ಅವರ ಎರಡೂವರೆ ವರ್ಷದ ಮಗಳು ಸಹ ಹಾವುಗಳನ್ನು ಹಿಡಿಯುತ್ತಿದ್ದಾಳೆ!

ಕಾಡಂಚಿನಲ್ಲಿ ನೈರ್ಮಲ್ಯದ ಮಿಂಚು!

ನಿತ್ಯ ಬೆಳಗಾದರೆ ಈ ಗ್ರಾಮಗಳಲ್ಲಿ ತಮಟೆ ಹಿಡಿದು ಸ್ವಚ್ಛತಾ ಆಂದೋಲನ ನಡೆಸುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದ ತಂಡ, ಮಲಕ್ಕೆ ಮಣ್ಣು ಹಾಕುತ್ತಾ ಸಾಗುತ್ತದೆ. ರಸ್ತೆಯನ್ನು ತೊಳೆದು ಶೌಚಮುಕ್ತಗೊಳಿಸುತ್ತದೆ...

ಕೃಷಿ

ಮೈಲು ಬರೀ ಆರು; ಕೃಷಿಪಾಠ ನೂರಾರು

ತೋವಿನಕೆರೆಯ ಜಯಪದ್ಮಮ್ಮ ಅವರ ಶೂನ್ಯ ಬಂಡವಾಳದ ತೋಟ, ಕಬ್ಬಿಗೆರೆ ಜವರೇಗೌಡರ ಕೃಷಿ ಉಪಕರಣ, ನಂದಿಹಳ್ಳಿಯ ನೀಲಕಂಠಮೂರ್ತಿ ಅವರ ಓದೇಕರ್ ಫಾರಂ, ವಿಜಯ ಕುಮಾರ್ ಅವರ ನಂದಿಫಾರಂ, ಅಕಾಲಿಕವಾಗಿ ಹಣ್ಣು ಬಿಡುವ ಹಲಸಿನಮರ, ಜೋನಿಗರಹಳ್ಳಿಯ ಹೂವಿನ ಬೇಸಾಯ, ಗೊಲ್ಲರ ಹಟ್ಟಿಯ ರೈತರು ಬೆಳೆಯುವ ಸಿರಿ ಧಾನ್ಯ... ಹೀಗೆ ಹುಡುಕಿದಷ್ಟೂ ಮಾದರಿ ತೋಟಗಳು ಇವೆ.

ಗುಡ್ಡದ ಮೇಲೆ ದಾಳಿಂಬೆ ಬೆಳೆದು...

ದಾಳಿಂಬೆ ಕೃಷಿಗಾಗಿ ಇಲ್ಲಿಯವರೆಗೆ ₹8 ಲಕ್ಷ ದವರೆಗೆ ಖರ್ಚು ಮಾಡಿರುವುದಾಗಿ ಹೇಳುತ್ತಾರೆ. ಬೆಳೆ ಸರಿಯಾಗಿ ಬರಲು ಆಕಳ ಸಗಣಿ ಗೊಬ್ಬರವನ್ನು ಹೊಲಕ್ಕೆ ಹಾಕಿದ್ದಾರೆ. ಈಗ ಎಲ್ಲ ಬೆಳೆಯಿಂದ ಉತ್ತಮ ಆದಾಯ ನಿರೀಕ್ಷೆ ಮಾಡಿದ್ದು, ಒಂದು ಟನ್ನಿಗೆ ಸರಾಸರಿ₹60 ಸಾವಿರ ಬರುವ ನಿರೀಕ್ಷೆಯಿದೆ ಎಂದು ವಿವರಿಸುತ್ತಾರೆ.

ಸಿದ್ಧಸಣ್ಣ ಬೆಳೆದು ಇದ್ದ ಸಾಲ ಕಳಕೋ!

ಸೋನಾಮಸೂರಿಗೆ ಸಮನಾಗಬಲ್ಲ ನಾಟಿ ತಳಿ ಭತ್ತವನ್ನು ರಾಜ್ಯಕ್ಕೆ ಪರಿಚಯಿಸಿದ್ದಾರೆ ಮಂಡ್ಯದ ಬೋರೇಗೌಡರು. ರೋಗ ನಿರೋಧಕ ಗುಣ, ಅಧಿಕ ಇಳುವರಿ, ಗುಣಮಟ್ಟದ ಅಕ್ಕಿ... ಈ ತಳಿಯನ್ನು ರೈತರು ಪ್ರೀತಿಸಲು ಕಾರಣ ಹಲವು 

ಚರಂಡಿ ನೀರಿನಲ್ಲಿ ಕೃಷಿ

ಕೊಳವೆ ಬಾವಿಗಳು ಬತ್ತಿದಾಗ ನೀರಿಲ್ಲವೆಂದು ಕೃಷಿ ಕೈಬಿಡುವಂತಿರಲಿಲ್ಲ. ಇದಕ್ಕೆಂದು ಹೊಸ ಪ್ರಯೋಗಕ್ಕೆ ಮುಂದಾದರು ನಾರಾಯಣಸ್ವಾಮಿ. ಏನದು ಪ್ರಯೋಗ?