ಋಣಾತ್ಮಕ ಯೋಚನೆಯಿಂದ ಬಿಡುಗಡೆ ಹೇಗೆ?

  • –ಸುನಿತಾ ರಾವ್‌, ಆಪ್ತ ಸಮಾಲೋಚಕಿ

2 Dec, 2017
ಸುನೀತಾ ರಾವ್‌

1. ನನಗೆ ಕೆಲವೊಮ್ಮೆ ಚೆನ್ನಾಗಿ ಓದಬೇಕು. ಓದಿ ಒಳ್ಳೆಯ ಕೆಲಸಕ್ಕೆ ಸೇರಿ ಮನೆ, ಕಾರು, ಸೈಟ್ ಕೊಳ್ಳಬೇಕು ಎನ್ನಿಸುತ್ತದೆ. ಆದರೆ ಅದರ ಬೆನ್ನಲ್ಲೇ ’ಇದೆಲ್ಲಾ ಯಾಕೆ? ಸಾಯುವಾಗ ಇದನ್ನೆಲ್ಲಾ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದಾ?’ ಎಂಬೆಲ್ಲಾ ಋಣಾತ್ಮಕ ಯೋಚನೆಗಳು ಮನಸ್ಸನ್ನು ಮುತ್ತಿಕೊಳ್ಳುತ್ತವೆ. ಹೀಗೆ ಯೋಚನೆ ಮಾಡಿ ಮಾಡಿ ಪರೀಕ್ಷೆಯಲ್ಲಿ ಫೇಲ್ ಆಗುತ್ತಿದ್ದೇನೆ. ನನಗೆ ಈ ಯೋಚನೆಗಳಿಂದ ಹೊರ ಬರಲು ದಾರಿ ತಿಳಿಸಿ.

–ಸಂಗಮೇಶ, ಊರು ಬೇಡ

ನೀವು ಏನು ಓದುತ್ತಿದ್ದೀರಾ ಎಂದು ಇಲ್ಲಿ ತಿಳಿಸಿಲ್ಲ; ಇರಲಿ. ಏನೇ ಆದರೂ ಈಗ ನಿಮ್ಮ ಮೊದಲ ಪ್ರಾಶಸ್ತ್ಯ ಓದೇ ಆಗಿರಲಿ. ಒಂದು ಗುರಿಯನ್ನು ಮುಟ್ಟಲು ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಅದನ್ನು ತಲುಪಲು ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಋಣಾತ್ಮಕ ಯೋಚನೆಗಳು ಕೇವಲ ಕೆಲವೇ ಜನಕ್ಕೆ ಮಾತ್ರ ಎಂದೇನೂ ಇಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಬೇರೆ ಬೇರೆ ವಿಧದಲ್ಲಿ ಋಣಾತ್ಮಕ ಯೋಚನೆಗಳ ಹಾವಳಿ ಇದ್ದೇ ಇರುತ್ತದೆ. ಈಗ ನಿಮ್ಮ ಮನಸ್ಸಿನಲ್ಲಿ ಬರುವ ಅನೇಕ ಯೋಚನೆಗಳು ಋಣಾತ್ಮಕವಾಗಿದೆ ಎಂಬುದು ನಿಮಗೆ ತಿಳಿದಿದೆ. ಎಲ್ಲ ಯೋಚನೆಗಳು ಬರುವಂತೆ ಅವನ್ನು ಬರಲು ಬಿಡಿ. ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಆದರೆ ಈ ಯೋಚನೆಗಳು ಹೆಚ್ಚು ಹೆಚ್ಚು ಮನಸ್ಸು ತುಂಬುವಂತೆ ಅವುಗಳನ್ನು ಪೋಷಿಸಬೇಡಿ. ಅದರ ಬದಲು ನಿಮ್ಮೊಳಗೆ ನೀವು ಮಾತನಾಡಿಕೊಳ್ಳುವುದನ್ನು ನಿಲ್ಲಿಸಲು ಪ್ರಯತ್ನಿಸಿ. ಮನಸ್ಸಿಗೆ ಬರುವ ಕೆಟ್ಟ ಯೋಚನೆಗಳೆಲ್ಲಾ ಸತ್ಯವಲ್ಲ. ಜೀವನದ ಹಾದಿಯಲ್ಲಿ ಬರುವ ಋಣಾತ್ಮಕ ನಂಬಿಕಗಳೇ ನಿಮ್ಮಲ್ಲಿ ಕೆಟ್ಟ ಯೋಚನೆಗಳು ಹುಟ್ಟಿಕೊಳ್ಳಲು ಕಾರಣ. ಭವಿಷ್ಯ ಹೇಗಿರುತ್ತದೋ ಅದು ಎಷ್ಟರ ಮಟ್ಟಿಗೆ ಉಪಯೋಗವಾಗುತ್ತದೋ ಇಷ್ಟೆಲ್ಲಾ ಯಾಕೆ ಪ್ರಯತ್ನಿಸಬೇಕು ಎಂದೆಲ್ಲಾ ಯೋಚಿಸುವ ಬದಲು, ವರ್ತಮಾನದ ಮೇಲೆ ಹೆಚ್ಚು ಗಮನ ಹರಿಸಿ ಮತ್ತು ನಿಮ್ಮ ಓದಿನ ಮೇಲೆ ಗಮನ ಕೇಂದ್ರಿಕರಿಸಿ. ಉಳಿದವೆಲ್ಲಾ ನಿಜಕ್ಕೂ ದೊಡ್ಡ ಸಂಗತಿಯೇ ಅಲ್ಲ. ಸಮಯ ಹಾಗೂ ಪ್ರೌಢತೆಯೊಂದಿಗೆ ಜೀವನ ಎಂದರೆ ಏನೆಂಬುದು ನಿಮಗೆ ತಿಳಿಯುತ್ತದೆ. ಒಂದು ಒಳ್ಳೆಯ ಸ್ನೇಹಿತರ ಗುಂಪನ್ನು ಸೃಷ್ಟಿಸಿಕೊಳ್ಳಿ. ಅವರೊಂದಿಗೆ ನಿಮ್ಮ ಯೋಚನೆಗಳನ್ನು ಹಂಚಿಕೊಳ್ಳಿ. ಆಗ ಭಿನ್ನವಾದ ನೋಟಗಳು ಗಮನಕ್ಕೆ ಬರಬಹುದು.

2. ನಾನು ಕ್ರಿಶ್ಚಿಯನ್. ನಾನು ಒಬ್ಬ ಮುಸ್ಲಿಂ ಹುಡುಗನನ್ನು ಪ್ರೀತಿಸುತ್ತಿದ್ದೆ. ಈ ವಿಷಯ ಅವನ ಮನೆಯಲ್ಲಿ ತಿಳಿದು ಅವನಿಗೆ ಬೇರೆ ಮದುವೆ ಮಾಡಿಸಿದರು. ಒಂದು ಮಗು ಕೂಡ ಆಗಿದೆ. ಅವನಿಗೆ ನನ್ನನ್ನು ಬಿಡಲು ಇಷ್ಟವಿಲ್ಲ. ‘ಏನೇ ಆದರೂ ನಿನ್ನನ್ನು ಮದುವೆ ಆಗ್ತೇನೆ’ ಎಂದು ಮನೆಯವರಿಂದ ದೂರಾಗಿ ನಮ್ಮ ಜೀವನಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾನೆ. ನಾನು ಒಬ್ಬಳೇ ಮಗಳು; ಮನೆಯಲ್ಲಿ ಈಗ ಹೇಗೆ ಒಪ್ಪಿಸಬೇಕೋ ತಿಳಿಯುತ್ತಿಲ್ಲ. ಅವನನ್ನು ಬಿಟ್ಟು ಇರುವುದಕ್ಕೆ ಆಗುತ್ತಿಲ್ಲ.

–ಊರು, ಹೆಸರು ಬೇಡ

ಬೇರೆ ಧರ್ಮದವರ ಜೊತೆ ಮದುವೆಯಾಗುವ ಸಂದರ್ಭವನ್ನು ನಿಭಾಯಿಸುವುದು ನಿಜಕ್ಕೂ ಸುಲಭವಲ್ಲ. ಒಂದು ದೃಢವಾದ ಸಹಕಾರವಿದ್ದರಷ್ಟೇ ಅದು ಸಾಧ್ಯ. ಸಮಾಜದ ಕೇವಲ ಕೆಲವು ಜನರ ಜೀವನಶೈಲಿಯಲ್ಲಿ ಬೇರೆ ಜಾತಿ, ಧರ್ಮದವರನ್ನು ಮದುವೆಯಾಗುವುದು ಒಂದು ವಿಷಯ ಅನ್ನಿಸುವುದಿಲ್ಲ. ಹೆಚ್ಚಿನ ಜನರು ಈ ಸಮಾಜದಲ್ಲಿ ಅಂತರ್‌ ಜಾತಿ ಹಾಗೂ ಧರ್ಮೀಯ ವಿವಾಹವನ್ನು ಇಂದಿಗೂ ಒಪ್ಪಿಕೊಳ್ಳುತ್ತಿಲ್ಲ. ಅದಲ್ಲದೇ ನೀವು ಇಷ್ಟಪಟ್ಟ ಹುಡುಗನಿಗೆ ಈಗಾಗಲೇ ಮದುವೆಯಾಗಿದೆ. ನನಗೆ ತಿಳಿದಂತೆ ನಿಮಗೆ ನಿರ್ಧಾರ ತೆಗೆದುಕೊಳ್ಳಲು ಈ ಒಂದು ಅಂಶ ಸಾಕೆನಿಸುತ್ತದೆ. ಇವೆಲ್ಲವೂ ಕೇವಲ ಕೆಲ ದಿನಗಳು ನಿಮ್ಮ ಅನುಭವಕ್ಕೆ ಬಂದ ಕ್ಷಣಿಕ ಆಸೆಗಳು. ಹಾಗಾಗಿ ನಿಮಗೆ ಈ ವಿಷಯದ ಬಗ್ಗೆ ಸ್ಪಷ್ಟತೆ ಇರಲಿ; ಇದನ್ನು ಮೀರಿ ಮುಂದಿನದನ್ನು ನೀವೇ ಯೋಚಿಸಿ. ಪರಿಸ್ಥಿತಿಯನ್ನು ನಿಮ್ಮಿಂದ ನಿಭಾಯಿಸಲು ಸಾಧ್ಯವೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ. ಅವರ ಹೆಂಡತಿಯ ದೃಷ್ಟಿಕೋನದಿಂದಲೂ ಯೋಚಿಸಿ. ಅವರೇನು ತಪ್ಪು ಮಾಡಿದ್ದಾರೆ ಎಂದು ಅವರು ಶಿಕ್ಷೆ ಅನುಭವಿಸಬೇಕು. ಭಾವನಾತ್ಮಕವಾಗಿ ಯಾರನ್ನೂ ನೋಯಿಸದಂತೆ ಪ್ರೌಢತೆಯಿಂದ ಹೆಜ್ಜೆ ಇರಿಸಿ.

3. ನನಗೆ ಕೌಟುಂಬಿಕ ಸಮಸ್ಯೆಯಿಂದ ಜೀವನವೇ ಬೇಡ ಎಂಬತಾಗಿದೆ. ಯಾವುದೇ ಕಾರಣಕ್ಕೂ ಈ ಜಂಜಡದಿಂದ ನನ್ನನ್ನು ಬಿಡಿಸಿಕೊಳ್ಳಲು ಸಾಧ್ಯವಿಲ್ಲ ಎಂತಾಗಿದೆ. ದಯವಿಟ್ಟು ಪರಿಹಾರ ತಿಳಿಸಿ‌.

–ಮನೋಜ್‌, ಬೆಂಗಳೂರು

ಜೀವನದಲ್ಲಿ ದೊಡ್ಡ ಜವಾಬ್ದಾರಿ ಎಂದರೆ ಕುಟಂಬ. ಮತ್ತು ಇದೊಂದು ಹಂತ. ಏಳು-ಬೀಳು ಇವೆಲ್ಲವೂ ಜೀವನದ ಕೆಲವು ಕ್ಷಣಗಳು. ಈ ಏಳು–ಬೀಳುಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡರಷ್ಟೇ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬಹುದು ಎಂದು ತಿಳಿದುಕೊಳ್ಳಬಹುದು. ನೀವು ಇಲ್ಲಿ ನಿಮ್ಮ ಹಿನ್ನೆಲೆ ಹಾಗೂ ವಿವರಗಳನ್ನು ತಿಳಿಸಿಲ್ಲ. ನಾನು ಹೇಳುವುದೇನೆಂದರೆ ಈಗ ಹೇಗಿದೆಯೋ ಹಾಗೆಯೇ ನಿಮ್ಮ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಿ. ಆಗಷ್ಟೆ ಸಂತೋಷವಾಗಿರಲು ಸಾಧ್ಯ ಮತ್ತು ನೀವು ಸುಖ–ದುಃಖಗಳನ್ನು ಸಮಾನವಾಗಿ ಸ್ವೀಕರಿಸಲು ಸಾಧ್ಯ. ನೀವು ನಿಮ್ಮ ಕುಟುಂಬದವರ ಪ್ರೀತಿ, ಶಾಂತಿ ಮತ್ತು ಎಲ್ಲರ ಏಳಿಗೆಯ ಜವಾಬ್ದಾರಿಯನ್ನು ಸ್ವೀಕರಿಸಲು ಪ್ರಾರಂಭಿಸಿ. ನೀವು ಎಲ್ಲವನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದೀರಿ ಎಂಬುದು ಒಂದಲ್ಲ ಒಂದು ದಿನ ನಿಮ್ಮ ಅನುಭವಕ್ಕೆ ಬರುತ್ತದೆ. ತಾಳ್ಮೆ ಇರಲಿ. ಸಮಯ ಎಲ್ಲವನ್ನೂ ಸರಿಪಡಿಸುತ್ತದೆ. ಸಂತಸದಿಂದಿರಿ. ಆಗಷ್ಟೇ ನಿಮ್ಮ ಸುತ್ತಲಿನವರು ಸಂತೋಷದಿಂದಿರಲು ಸಾಧ್ಯ.

4. ನನಗೆ ಪದೇ ಪದೇ ಸಾಯುವ ಯೋಚನೆ ಬರುತ್ತದೆ. ಚಿಕ್ಕ ಚಿಕ್ಕ ವಿಷಯಗಳಿಗೂ ಮನಸ್ಸಿಗೆ ನೋವಾಗುತ್ತದೆ. ಅಂಥ ಸಂದರ್ಭದಲ್ಲಿ ‘ನಾನು ಸಾಯಬೇಕು; ಎಲ್ಲರೂ ನನಗೆ ನೋವು ನೀಡುತ್ತಾರೆ’ ಎನ್ನಿಸುತ್ತದೆ. ಪರಿಹಾರ ತಿಳಿಸಿ.

–ಹೆಸರು, ಊರು ಬೇಡ

ಯಾವುದೋ ಸಹಿಸಲಾಗದ ಅಥವಾ ತಾಳಿಕೊಳ್ಳಲಾಗದ ಮಾನಸಿಕ ನೋವು ಕಾಡುತ್ತಿದ್ದಾಗ ಸಾಮಾನ್ಯವಾಗಿ ಮನುಷ್ಯರಿಗೆ ‘ನಾನು ಸಾಯಬೇಕು’ ಎಂಬ ಯೋಚನೆ ಬರುತ್ತದೆ. ಅದರಲ್ಲೂ ನಿಮ್ಮನ್ನು ಅನೇಕ ದಿನದಿಂದ ಕಾಡುವ, ಸಹಿಸಿಕೊಳ್ಳಲಾಗದ ನೋವಾದರೆ ಇನ್ನೂ ಹೆಚ್ಚು. ಅನೇಕರಿಗೆ ಜೀವನದ ಯಾವುದೋ ಒಂದು ಸಂದರ್ಭದಲ್ಲಿ ಸಾವಿನ ಯೋಚನೆ ಬಂದಿರುತ್ತದೆ. ಯಾವಾಗ ಮನುಷ್ಯನಿಗೆ ಅತಿಯಾದ ಆಲೋಚನೆ ಮತ್ತು  ಋಣಾತ್ಮಕ ಯೋಚನೆಗಳು ಮುನ್ನುಗ್ಗುತ್ತವೋ ಆಗ ಈ ಯೋಚನೆ ಮನಸ್ಸನ್ನು ಆವರಿಸುತ್ತದೆ. ಸಾವಿನ ಯೋಚನೆ ಬರುತ್ತದೆ-ಹೋಗುತ್ತದೆ. ಸಧ್ಯ ನಿಮಗೆ ಸಹಿಸಲಾಗದ ನೋವಿದ್ದರೂ, ತಕ್ಷಣವೇ ಅದಕ್ಕೆ ಸ್ಪಂದಿಸಿ ಸಾಯುವ ಯೋಚನೆ ಮಾಡಬೇಡಿ. ನಿಮ್ಮ ಅನುಭವಗಳು ಎಷ್ಟೇ ಕೆಟ್ಟದಾಗಿದ್ದಾರು ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ. ಅವರೊಂದಿಗೆ ಮಾತನಾಡಿ. ನಿಮಗೆ ನಂಬಿಕೆ ಇರುವ ವ್ಯಕ್ತಿಗಳ ಜೊತೆ ಬೆರೆಯಿರಿ. ಅವರು ನಿಮ್ಮ ಕುಟಂಬ ಸದಸ್ಯರಾಗಿರಬಹುದು, ಸ್ನೇಹಿತರಾಗಿರಬಹುದು, ಶಿಕ್ಷಕರಾಗಿರಬಹುದು, ಚಿಕಿತ್ಸಕರಾಗಿರಬಹುದು. ಅವರು ಖಂಡಿತ ನಿಮ್ಮ ಯೋಚನಾಲಹರಿಯನ್ನು ಬದಲಾಯಿಸಲು ಸಹಾಯ ಮಾಡುತ್ತಾರೆ.

ವ್ಯಾಯಾಮ ಮತ್ತು ಆರೋಗ್ಯಕರ ಆಹಾರಸೇವನೆ – ನೀವು ದೈಹಿಕವಾಗಿ ಸದೃಢರಾಗಿರಲು ಸಹಾಯ ಮಾಡುತ್ತದೆ. ಅದರಿಂದ ನೀವು ಉಳಿದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಾಯವಾಗುತ್ತದೆ. ಧ್ಯಾನದಿಂದ ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯ. ಅದಕ್ಕೆಂದೇ ಸ್ವಲ್ಪ ಸಮಯವನ್ನು ನೀಡಿ.

ನೆನಪಿಡಿ, ನಿಮ್ಮ ಬಗ್ಗೆ ನಿಮ್ಮಲ್ಲಿಯೇ ಋಣಾತ್ಮಕ ಯೋಚನೆಗಳಿದ್ದಾಗ ಆತ್ಮಹತ್ಮೆಯ ಯೋಚನೆ ಬರಲು ಸಾಧ್ಯ. ಋಣಾತ್ಮಕ ಯೋಚನೆಗಳಿಗೆ ನೆಲೆ ಇಲ್ಲ ಎಂಬುದನ್ನು ಗುರುತಿಸಿ. ಇಷ್ಟುದಿನ ನಿಮ್ಮೊಳಗಿದ್ದ ಕೆಟ್ಟ ಯೋಚನೆಗಳನ್ನು ನೀವು ಸವಾಲಾಗಿ ಸ್ವೀಕರಿಸಿ. ಅತಿಯಾಗಿ ಯೋಚಿಸಬೇಡಿ. ಸಂದರ್ಭವನ್ನು ಬಂದಂತೆ ಸ್ವೀಕರಿಸಿ. ನಿಮಗೆ ಇಷ್ಟವಾಗದ ವಿಷಯಗಳನ್ನು ನಿರ್ಲಕ್ಷಿಸಿ. ನೀವು ತುಂಬಾ ಇಷ್ಟಪಟ್ಟುಪಡುವ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಏಕಾಂಗಿಯಾಗಿ ಇರಬೇಡಿ. ಧನಾತ್ಮಕವಾಗಿ ಉತ್ಸಾಹದಿಂದ ಇರುವ ಸ್ನೇಹಿತರ ಗುಂಪಿನ ಜೊತೆ ಇರಿ.

Read More

Comments
ಮುಖಪುಟ

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವೀರಶೈವ ಮಹಾಸಭಾ ವಿರೋಧ

ಲಿಂಗಾಯತ ಮತ್ತು ಬಸವತತ್ವ ಒಪ್ಪುವ ವೀರಶೈವರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ.

ಅದ್ದೂರಿಯಾಗಿ ನೆರವೇರಿದ ಚಿಮ್ಮನಚೋಡದ ಸಂಗಮೇಶ್ವರ ರಥೋತ್ಸವ

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ 7೦ನೇ ಶ್ರೀ ಸಂಗಮೇಶ್ವರ ರಥೋತ್ಸವ ಅದ್ದೂರಿಯಾಗಿ ನೆರವೇರಿತು.

ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ: ಸರ್ಕಾರದಿಂದ ಅಧಿಸೂಚನೆ

ರಾಜ್ಯದಲ್ಲಿ ಇನ್ನು ಲಿಂಗಾಯತ ಮತ್ತು ಬಸವತತ್ವ ಒಪ್ಪುವ ವೀರಶೈವರು ಅಲ್ಪಸಂಖ್ಯಾತರು ಎಂದು ಮಾನ್ಯತೆ ನೀಡಿ ರಾಜ್ಯ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಬೆಟ್ಟಿಂಗ್‌ ವಿಷವರ್ತುಲದ 'ದುನಿಯಾ'

ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅದರಿಂದ ಹೊರಬರುವುದು ಸುಲಭವಲ್ಲ ಎಂಬ ಸಂದೇಶ ಸಾರುವ 'ಯೋಗಿ ದುನಿಯಾ' ಚಿತ್ರ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಕರಾಳಮುಖವನ್ನು ಅನಾವರಣಗೊಳಿಸುತ್ತದೆ.

ಸಂಗತ

ವಚನ: ಹೊಸಧರ್ಮದ ತಳಹದಿಯಾಗಬಲ್ಲುದೇ?

ವೀರಶೈವದಿಂದ ಪ್ರತ್ಯೇಕಗೊಂಡು ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಡುತ್ತಿರುವವರ ಪರವಾಗಿ ಸಂಪುಟ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ವಚನಗಳೇ ಲಿಂಗಾಯತ ಧರ್ಮ ಪ್ರಮಾಣ ಗ್ರಂಥವೆಂದು ಸಚಿವರೊಬ್ಬರು ಹೇಳಿದ್ದಾರೆ.

ಮೌಲ್ಯ... ಜನತಂತ್ರದ ಅಂತಃಸತ್ವ

ಮತದಾನ ಕೆಳಗಿನಿಂದ ಮೇಲ್ಮುಖವಾಗಿ ಚಲಿಸುವ ಪ್ರಕ್ರಿಯೆ. ಮತದಾರರು ತಮ್ಮ ಮತಗಳನ್ನು ಬೆಂಬಲವಾಗಿ ಅಥವಾ ಪ್ರತಿರೋಧದ ಅಸ್ತ್ರಗಳಾಗಿ ಚಲಾಯಿಸುವ ಸ್ವಾಯತ್ತತೆಯನ್ನು ಪಡೆದಿರುತ್ತಾರೆ. ಈ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಅಂಬೇಡ್ಕರ್‌ ಅವರು ‘ಶಿಕ್ಷಣ, ಸಂಘಟನೆ, ಹೋರಾಟ’ ಎಂಬ ಅನುಭವದ ಅರಿವನ್ನು ಬಹುಜನರಿಗೆ ಕಾಣಿಸಿರುವುದನ್ನು ನಾವು ಮನಗಾಣಬಹುದು.

ಪ್ರಣಾಳಿಕೆಯಲ್ಲಿರಲಿ ಕಾಡಿನ ಹಿತ

ಪರಿಸರ ನಾಶದ ವಿರುದ್ಧ ಈ ಚುನಾವಣಾ ಗಳಿಗೆಯಲ್ಲಾದರೂ ಧ್ವನಿ ಎತ್ತಬೇಕಿದೆ.

ಮೈತ್ರಿ ರಾಜಕೀಯದ ಹೊಸ ಹಾದಿ

ಇದೀಗ ಹಲವು ರಾಜಕೀಯ ಪಕ್ಷಗಳ ‘ಕಾಮನಬಿಲ್ಲು ಒಕ್ಕೂಟ’ ಮಾಡಲೆತ್ನಿಸುತ್ತಿರುವ ಕಾಂಗ್ರೆಸ್, ತನ್ನ ಅಖಿಲ ಭಾರತೀಯ ಪಾರ್ಟಿಯ ಹಮ್ಮು ಬಿಟ್ಟು ಬಾಗಿದರೆ ಮಾತ್ರ ಮುಂಬರುವ ಮಹಾಚುನಾವಣೆಯಲ್ಲಿ ಹೊಸ ಹಾದಿ ಕಂಡೀತು!

ಭೂಮಿಕಾ

ಅಮ್ಮ ಹೇಳಿದ ಸತ್ಯಗಳು!

ಹೆಣ್ಣನ್ನು ಹೆಣ್ಣೇ ಬೆಳೆಸುವ, ರೂಪಿಸುವ ಪರಿ ನಿಜವಾಗಲೂ ಅನನ್ಯವಾದ್ದದ್ದು. ‘ತಾಯಿಯಂತೆ ಮಗಳು’ ಎನ್ನುವ ಗಾದೆ ನಿಜವಾಗಲೂ ಅರ್ಥವನ್ನು ಪಡೆಯುವುದು ಮಗಳನ್ನು ಅಮ್ಮ ‘ಬೆಳೆಸುವ’ ಕ್ಲಿಷ್ಟಕರವಾದ ಸಂದರ್ಭದಲ್ಲಿಯೇ. ಜೀವನದ ಒಂದೊಂದು ಘಟ್ಟದಲ್ಲಿಯೂ ಗೆಳತಿಯಾಗಿ, ತತ್ವಜ್ಞಾನಿಯಾಗಿ, ಮಾರ್ಗದರ್ಶಕಿಯಾಗಿ ಕೈಹಿಡಿದು ನಡೆಸುವವಳೇ ಅಮ್ಮ....

ಅಮ್ಮನೆಂದರೆ ಮಡಿಲು... ಮಗಳೆಂದರೆ ಜೋಗುಳ...

ಅಮ್ಮ–ಮಗಳದ್ದು ಆಪ್ತತೆಯ ಭಾವ ಮೂಡಿಸುವ ಸಂಬಂಧ. ಅಮ್ಮ ಎಂದರೆ ಮಗಳಿಗೆ ಅದೇನೋ ಸೆಳೆತ, ಅಮ್ಮನಿಗೋ ಮಗಳೆಂದರೆ ವರ್ಣಿಸಲಾಗದಷ್ಟು ಪ್ರೀತಿ. ಈ ಸಂಬಂಧ ಹೇಗೆಂದರೆ ಒಮ್ಮೊಮ್ಮೆ ಅಸಾಧ್ಯ ಕಿರಿಕಿರಿ, ಮತ್ತೊಮ್ಮೆ ಭರಪೂರ ಮನೋರಂಜನೆ. ಹೀಗೆ ತಾಯಿ–ಮಗಳದ್ದು ಮಡಿಲಿನ ಜೋಗುಳದ ಲಾಲಿಹಾಡು...

‘ಜೀವನದಲ್ಲಿ ಗುರಿಯೇ ಇಲ್ಲ!’

ನಿಮ್ಮ ವಯಸ್ಸು ಮತ್ತು ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಅದೇನೇ ಇರಲಿ, ಈಗ ನಿಮಗೇ ತಿಳಿದಿದೆ – ನಿಮಗೆ ಯಾವುದೇ ವಿಷಯದ ಮೇಲೂ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ – ಎಂಬುದು. ಮೊದಲು ನಿಮ್ಮ ವ್ಯಕ್ವಿತ್ವದ ಮೇಲೆ ಗಮನವನ್ನು ಹರಿಸಿ.

ಪ್ರಕೃತಿ, ಹೆಣ್ಣು ಮತ್ತು ಸಿಹಿ–ಕಹಿ

ನಮ್ಮೆಲ್ಲರ ತಾಯಿ ಪ್ರಕೃತಿ; ಅವಳು ನಮ್ಮನ್ನು ಪೋಷಿಸುವವಳು, ಪೊರೆಯುವವಳು. ಅವಳ ಅಡುಗೆಯಲ್ಲಿ ಸವಿರುಚಿಯೊಡನೆ ಕಹಿರುಚಿಯೂ ಇದೆ. ಸಿಹಿಗೆ ಹಿಗ್ಗಬೇಡ, ಕಹಿಗೆ ಕುಗ್ಗಬೇಡ; ಸಮಚಿತ್ತದ ತಕ್ಕಡಿಯಲ್ಲಿ ಇಟ್ಟು ನನ್ನ ಕೈ ಹಿಡಿದು ನಾ ಕರೆದೊಯ್ಯುವಲ್ಲಿಗೆ ಸರಸರನೇ ನಡೆ ಬೇಗ! – ಎನ್ನುತ್ತಾಳೆ. ಈಗ ಎಷ್ಟನೇ ಸಲವೋ ಅವಳಿಗೇ ಗೊತ್ತು, ಯುಗಾದಿ ಮತ್ತೆ ಬಂದಿದೆ...