ಶತಮಾನದ ಶೇಣಿ

3 Dec, 2017
ರವೀಂದ್ರ ಭಟ್ಟ

ಅದು ಭೀಷ್ಮ ವಿಜಯ ಪ್ರಸಂಗ. ಭೀಷ್ಮ ಮತ್ತು ಸಾಲ್ವನಿಂದ ಪರಿತ್ಯಕ್ತಳಾದ ಅಂಬೆ ಕಾಡಿಗೆ ಹೋಗುತ್ತಾಳೆ. ಅಲ್ಲಿ ಅವಳಿಗೆ ಕಾಡಿನ ರಾಜ ಏಕಲವ್ಯ ಸಿಗುತ್ತಾನೆ. ಸುಂದರ ತರುಣಿ ಅಂಬೆಯನ್ನು ನೋಡಿದ ಏಕಲವ್ಯ ‘ನನ್ನನ್ನು ಮದುವೆಯಾಗು’ ಎಂದು ಕೇಳುತ್ತಾನೆ. ಅದಕ್ಕೆ ಅಂಬೆ ‘ನೀನು ಭೀಷ್ಮನನ್ನು ಸೋಲಿಸಿದರೆ ನಿನ್ನ ಮದುವೆಯಾಗುತ್ತೇನೆ’ ಎಂದು ಹೇಳುತ್ತಾಳೆ. ಸರಿ ಎಂದು ಏಕಲವ್ಯ ಅಂಬೆಯೊಂದಿಗೆ ಹಸ್ತಿನಾವತಿಗೆ ಬರುತ್ತಾನೆ. ಆ ದಿನ ಭೀಷ್ಮನ ಪಾತ್ರಧಾರಿ ಶೇಣಿ ಗೋಪಾಲಕೃಷ್ಣ ಭಟ್ಟರದ್ದು. ಏಕಲವ್ಯನ ಪಾತ್ರಧಾರಿ ಆಯಕ್ಟರ್ ಜೋಶಿ ಅವರದ್ದು. ಅದು ತಾಳಮದ್ದಲೆಯಾಗಿದ್ದರಿಂದ ಪಾತ್ರಧಾರಿಗಳಿಬ್ಬರೂ ಎದುರುಬದರು ಕುಳಿತು ಮಾತನಾಡುತ್ತಿದ್ದರು.

ಭೀಷ್ಮ ಮಾತನಾಡುವಾಗ ಅವರ ಬಾಯಿಯಿಂದ ಎಂಜಲು ಸಿಡಿದು ಏಕಲವ್ಯನ ಪಾತ್ರಧಾರಿಯ ಮೇಲೆ ಬಿತ್ತು.

ಆಗ ಏಕಲವ್ಯ ‘ಏನಯ್ಯಾ, ನಿನ್ನ ಜೊತೆ ಯುದ್ಧ ಮಾಡಲು ಬಂದರೆ ನೀನು ಸ್ನಾನ ಮಾಡಿಸಿಬಿಟ್ಟೆಯಲ್ಲ’ ಎಂದು ಕೇಳಿದರು. ಜನ ಎಲ್ಲ ಚಪ್ಪಾಳೆ ತಟ್ಟಿದರು.

ಭೀಷ್ಮ ಸುಮ್ಮನಿರಲಿಲ್ಲ. ‘ನಾನು ಯಾರು ಬಲ್ಲೆಯಾ’ ಎಂದು ಕೇಳಿದರು.

ಏಕಲವ್ಯ: ನೀನು ಭೀಷ್ಮ

ಭೀಷ್ಮ: ಹೌದು ನಾನು ಭೀಷ್ಮ. ಭೀಷ್ಮ ಎಂದರೆ ಯಾರು? ಗಂಗೆಯ ಮಗ. ಗಂಗೆಯ ಮಗನ ಬಾಯಿಯಿಂದ ಜಲ ಬಂತು ಅಂದರೆ ಅದು ಗಂಗೆ ಎಂಬ ಪವಿತ್ರ ಜಲ. ಅದು ನಿನ್ನ ಮೇಲೆ ಸಿಡಿದು ಬಿತ್ತು ಎಂದರೆ ನೀನು ಜನ್ಮ ಜನ್ಮಾಂತರದಲ್ಲಿ ಮಾಡಿದ ಪಾಪ ಎಲ್ಲ ಪರಿಹಾರ ಆಯಿತು.

ಮತ್ತೆ ಪ್ರೇಕ್ಷಕರಿಂದ ಜೋರಾದ ಚಪ್ಪಾಳೆ.

ಏಕಲವ್ಯನ ಪಾತ್ರಧಾರಿ ಏನೂ ಕಡಿಮೆ ಅಲ್ಲವಲ್ಲ. ಅವರೂ ಕೂಡ ‘ಅಯ್ಯೋ ಮಾರಾಯ, ನಿನ್ನ ಬಳಿಗೆ ಬಂದರೆ ಇಷ್ಟೊಂದು ಒಳ್ಳೆಯದಾಗುತ್ತದೆ ಎಂದು ಗೊತ್ತೇ ಇರಲಿಲ್ಲ. ನನ್ನ ಅಪ್ಪ ಸಾಯುವಾಗ ಮಗನೇ ನನ್ನ ಅಸ್ಥಿಯನ್ನು ಗಂಗೆಯಲ್ಲಿಯೇ ವಿಸರ್ಜನೆ ಮಾಡು ಎಂದು ಹೇಳಿ ಸತ್ತಿದ್ದ. ಆದರೆ, ಈ ರಾಜಕಾರಣದಲ್ಲಿ ಕಾಶಿಗೆ ಹೋಗಲು ಸಾಧ್ಯವೇ ಆಗಿರಲಿಲ್ಲ. ಇಗೋ ನನ್ನ ದಂಡಕ್ಕೆ ಅದನ್ನು ಕಟ್ಟಿಕೊಂಡಿದ್ದೇನೆ. ದಯಮಾಡಿ ಬಾಯಿ ಕಳೆ. ನಿನ್ನ ಬಾಯಿಗೆ ಹಾಕುತ್ತೇನೆ’ ಎಂದರಂತೆ. ಯಕ್ಷಗಾನ ಪ್ರಸಂಗದಲ್ಲಿ ನಡೆದ ಈ ಘಟನೆ ಎಷ್ಟು ಸತ್ಯ ಎಂದು ನನಗೆ ಗೊತ್ತಿಲ್ಲ. ಯಾರ ಬಾಯಿಂದಲೋ ಕೇಳಿದ್ದು. ಆದರೆ, ಶೇಣಿ ಗೋಪಾಲಕೃಷ್ಣ ಭಟ್ಟರು ಮತ್ತು ಆಯಕ್ಟರ್ ಜೋಶಿ ಇಬ್ಬರೂ ನನಗೆ ಪರಿಚಿತರಾಗಿದ್ದರಿಂದ ಇದು ಸುಳ್ಳಲ್ಲ ಎಂದೇ ನಾನು ಅಂದುಕೊಂಡಿದ್ದೇನೆ.

ಶೇಣಿ ಅಂದರೆ ಹಾಗೆ. ಅವರು ಏಕಕಾಲದಲ್ಲಿಯೇ ಪಂಡಿತರೂ ಮತ್ತು ಪಾಮರರನ್ನು ತಲುಪುವ ಶಕ್ತಿಯನ್ನು ಹೊಂದಿದ್ದರು. ತಮ್ಮ ಮಾತಿನ ವೈಖರಿಯಿಂದ ಪಂಡಿತರಿಗೆ ಹೇಗೆ ಪ್ರಿಯರಾಗುತ್ತಿದ್ದರೋ ಹಾಗೆಯೇ ಪಾಮರರಿಗೂ ಪ್ರಿಯರಾಗುತ್ತಿದ್ದರು. ಪೌರಾಣಿಕ ಪಾತ್ರಗಳಲ್ಲಿ ಅವರು ಎಷ್ಟು ಎತ್ತರದ ಶಿಖರಕ್ಕೆ ಏರಿದ್ದರೋ ಬಪ್ಪ ಬ್ಯಾರಿ, ತುಘಲಕ್ ಪಾತ್ರಗಳಲ್ಲಿಯೂ ಅಷ್ಟೇ ಖ್ಯಾತಿಯನ್ನು ಹೊಂದಿದ್ದರು.

ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಬಪ್ಪನಾಗಿ ಅವರು ಪ್ರವೇಶ ಮಾಡುವುದೇ ಚೆಂದ. ರಂಗಕ್ಕೆ ಬಂದವರೇ ಅವರು ಭಾಗವತರೊಂದಿಗೆ ನಡೆಸುವ ಸಂಭಾಷಣೆಯೂ ಚೆಂದ.

ಬಪ್ಪಬ್ಯಾರಿ: ನಾನು ಬಪ್ಪ ಬ್ಯಾರಿ. ಕೇರಳ ನಾಡಿನ ಪೊನ್ನಾನಿ ಹುಟ್ಟಿದ ಊರು. ಸಣ್ಣವನಿದ್ದಾಗ ಸಮುದ್ರದಲ್ಲಿ ಮಂಜಿ (ದೋಣಿ) ಮಗುಚಿ ಎಲ್ಲರೂ ನೀರು ಪಾಲಾದರೂ ನಾನು ಬದುಕಿ ಮೂಲ್ಕಿ ತೀರಕ್ಕೆ ಬಂದು ಸೇರಿದೆ. ಹೇಗೆ?

ಭಾಗವತರು: ಈಜಿ

ಬಪ್ಪಬ್ಯಾರಿ: ನಿಮ್ಮದು ತಮಾಷೆ. ಸಮುದ್ರವೆಂದರೆ ನಿಮ್ಮ ತೋಟದ ಕೆರೆಯೊ ಸ್ವಾಮಿ ಈಜಿ ಪಾರಾಗಲು. ನಾನು ಬದುಕಿದ್ದು ಅಲ್ಲಾನ ಕುದ್ರತ್ ನಿಂದ. ಎಂತದ್ದರಿಂದ?

ಭಾಗವತರು: ಕುದುರೆಯಿಂದ

ಬಪ್ಪ ಬ್ಯಾರಿ: ಕುದುರೆಯಲ್ಲ ಕುದ್ರತ್‌ನಿಂದ. ಅಲ್ಲಾನ ದಯೆಯಿಂದ. ನಾನು ಸಮುದ್ರದಿಂದ ಪಾರಾದನೇನೋ ಹೌದು. ಆದರೆ ಉಡಲು ಬಟ್ಟೆ, ಹೊಟ್ಟೆಗಿಷ್ಟು ಗಂಜಿ, ತಲೆ ಮೇಲೆ ಒಂದು ಮಾಡು (ಸೂರು) ಬೇಡವೇ? ಊರ ಬಲ್ಲಾಳರನ್ನು ಕೇಳಿದೆ. ಒಂದಿಷ್ಟು ಜಾಗ ಕೊಟ್ಟರೆ ಒಂದು ಪೀಡಿ (ಅಂಗಡಿ) ನಡೆಸಿ ಬದುಕಿಕೊಂಡೇನು. ನಾವು ಬ್ಯಾರಿಗಳು ವ್ಯಾಪಾರ ಮಾಡಿ ಬದುಕುವವರು. ದೇವರ ದಯೆಯಿಂದ ಈಗ ಈ ಸ್ಥಿತಿಗೆ ಬಂದಿದ್ದೀನಿ.

(ಶೇಣಿ ಗೋಪಾಲಕೃಷ್ಣ ಭಟ್ಟ)

ಭಾಗವತರು: ಬಪ್ಪ ಸಾಹೇಬರು

ಬಪ್ಪ ಬ್ಯಾರಿ: ಯಾರು ಸಾಹುಕಾರರು ಸ್ವಾಮಿ ಈ ಜಗತ್ತಿನಲ್ಲಿ, ಮೇಲಿನವನೊಬ್ಬನೇ, ನಾವು ಸಾಯುವಾಗ ದೊಡ್ಡ ಬಂಗಲೆ ಆಸ್ತಿ ಮಾಡಿದುದು ಯಾರೂ ಮಾತನಾಡುವುದಿಲ್ಲ. ಮನುಷ್ಯ ಹೇಗೆ ಬದುಕಿದ, ನಾಲ್ಕು ಜನರಿಗೆ ಬೇಕಾಗಿದ್ದನೋ ಎಂದು ಕೇಳುತ್ತಾರೆ. ನೀವು ನೋಡಿರಬಹುದು, ನಾವು ಮಾತನಾಡುವಾಗ ನಾನು ನನ್ನದು ಎಂದು ಹೇಳುವ ಪದ್ಧತಿ ಇಲ್ಲ. ನಾವು ನಮ್ಮದು ಎಂದೇ ಹೇಳುತ್ತೇವೆ. ನಾವು ಎಂದರೆ

ಭಾಗವತರು: ನೀವು ಮತ್ತು ಹೆಂಡತಿ, ಮಕ್ಕಳು

ಬಪ್ಪ ಬ್ಯಾರಿ: ನಿಮ್ಮದು ತಮಾಷೇ ನೋಡಿ. ಅಲ್ಲಾನ ದಯೆಯಿಂದ ಹೇಳುತ್ತಿದ್ದೆ. ನಾವು ಅಲ್ಲಾ ಅಲ್ಲಾ ಅಂತ, ನೀವು ರಾಮ ರಾಮ ಅಂತಾ ಹೇಳುತ್ತೀರಿ. ಎಲ್ಲ ಒಂದೆ. ಕೆಲವು ಕಿಡಿಗೇಡಿಗಳು ನೀವು ರಾಮ ಎನ್ನುವಾಗ ಇವರು ದೇವರು ಅಲ್ಲಾ ಅಲ್ಲ ಅಂತ ಹೇಳುತ್ತಿದ್ದಾರೆ ಎನ್ನುವರು. ‘ಲಾ ಇಲಾಹಿ ಇಲ್ಲಲ್ಲಾಹ’ ಎಂದರೆ ಏನು ಸ್ವಾಮಿ. ದೇವರನ್ನು ಬಿಟ್ಟರೆ ಬೇರೆ ಗತಿ ಇಲ್ಲ ಅಂದಲ್ಲವೇ? ಮತ್ತೆ ಈ ಜಾತಿಯಲ್ಲ ಯಾಕೆ? ಅದು ನಮಗೆ ಒಂದು ನೈತಿಕ ಪರಿಧಿ. ಬೇಲಿ ಇದ್ದ ಹಾಗೆ. ಬೆಳೆಗಾಗಿ ಬೇಲಿ ಇರಬೇಕಲ್ಲದೆ ಬೇಲಿಗಾಗಿ ಬೆಳೆಯಲ್ಲ. ದೇವರು ತಂದೆ, ಧರ್ಮ ತಾಯಿ ಇದ್ದಂತೆ. ತಾಯಿ ಹೇಳಿದರಲ್ಲವೇ ತಂದೆಯ ಗುರುತು? ನನ್ನ ತಾಯಿ ನಿಮ್ಮ ತಾಯಿಯಲ್ಲ. ಆದರೆ ತಂದೆ (ದೇವರು) ಎಲ್ಲರಿಗೂ ಒಬ್ಬನಲ್ಲವೆ? ಬ್ಯಾರಿಗೊಬ್ಬ, ಭಟ್ರಿಗೊಬ್ಬ. ಪುರ್ಬು (ಕ್ರಿಶ್ಚಿಯನ್)ಗೊಬ್ಬ ದೇವರಿದ್ದಾನೆಯೇ? ಇಲ್ಲ. ಮಳೆ ಬಂದರೆ ನಿಮ್ಮ ತೋಟಕ್ಕೆ, ನಮ್ಮ ಗದ್ದೆಗೆ ಪರ್ಬುವಿನ ಅಂಗಳಕ್ಕೆ ಸಮನಾಗಿ ಬೀಳುವುದಿಲ್ಲವೇ? ಬರಗಾಲ ಬಂದರೆ ಎಲ್ಲರಿಗೂ ಒಂದೇ ತರಹ ಅಲ್ಲವೇ?

ಹೀಗೆ ಶೇಣಿ ಗೋಪಾಲಕೃಷ್ಣ ಭಟ್ಟರ ಬಪ್ಪಬ್ಯಾರಿ ಸರ್ವಧರ್ಮ ಸಮನ್ವಯಕ್ಕೆ ಒಂದು ಅಪ್ಪಟ ಉದಾಹರಣೆ. ಶೇಣಿ ಅವರು ಭಗವದ್ಗೀತೆಯನ್ನು ಎಷ್ಟು ಆಸಕ್ತಿಯಿಂದ ಓದಿದ್ದರೂ ಅಷ್ಟೇ ಆಸಕ್ತಿಯಿಂದ ಕುರಾನ್ ಕೂಡ ಓದಿಕೊಂಡಿದ್ದರು. ಅದಕ್ಕೇ ಅವರು ಬಪ್ಪ ಬ್ಯಾರಿಯಾಗಿ ಮಿಂಚಲು ಸಾಧ್ಯವಾಯಿತು. ಒಂದು ಕಾಲದಲ್ಲಿ ಅವರನ್ನು ಬಪ್ಪ ಬ್ಯಾರಿ ಎಂದೇ ಜನ ಗುರುತಿಸುವಷ್ಟು ಅವರು ಪ್ರಸಿದ್ಧರಾಗಿದ್ದರು.

ಯಕ್ಷಗಾನ ಯುಗ ಪ್ರವೃತ್ತಕರಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರು ಒಬ್ಬರು. ಈ ವರ್ಷ ಅವರ ಜನ್ಮ ಶತಮಾನೋತ್ಸವ ವರ್ಷ. ಕೇರಳದ ಕಾಸರಗೋಡಿನ ಶೇಣಿ ಎಂಬ ಗ್ರಾಮದವರಾದ ಗೋಪಾಲಕೃಷ್ಣ ಭಟ್ಟರು 1918ರ ಏಪ್ರಿಲ್ 17ರಂದು ಜನಿಸಿದರು. 2006ರ ಜುಲೈ 18ರಂದು ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು. ಪೌರಾಣಿಕ ಪ್ರಸಂಗಗಳ ರಾಮ, ಸುಧನ್ವ, ರಾವಣ, ಭೀಷ್ಮ, ಕೌರವ ಮುಂತಾದ ಪಾತ್ರಗಳಲ್ಲಿ ಯಶಸ್ವಿಯಾಗಿದ್ದ ಅವರು ಬಪ್ಪ ಬ್ಯಾರಿ, ಕುಮಾರರಾಮ ಪ್ರಸಂಗದ ತುಘಲಕ್ ಪಾತ್ರಕ್ಕೂ ನ್ಯಾಯ ಸಲ್ಲಿಸಿದ್ದರು. ಶೇಣಿ ಅವರ ಶ್ರೇಷ್ಠತೆ ಎಷ್ಟಿತ್ತೆಂದರೆ ಅವರು ಯಾವುದೇ ಪಾತ್ರ ಮಾಡಿದ್ದರೂ ಅದು ಗೆಲ್ಲುತ್ತಿತ್ತು. ಶೇಣಿ ಅವರ ಮೂಲ ಗುಣ ಅವರು ಹೊಸತನಕ್ಕೆ ಒಗ್ಗುತ್ತಿದ್ದುದಾಗಿತ್ತು. ಹೊಸತನ್ನು ಯಾವಾಗಲೂ ಅಲ್ಲಗಳೆಯಲಿಲ್ಲ. ಆದರೆ, ಕಲೆ ಅರಳಬೇಕು ಎನ್ನುವ ಮಾತನ್ನು ಅವರು ಕೊನೆಯ ಕ್ಷಣದವರೆಗೂ ಬಿಡಲಿಲ್ಲ. ಶೇಣಿ ನಿಧನರಾಗಿ ದಶಕ ಕಳೆದಿದೆ. ಆದರೆ, ಅವರ ನೆನಪು ನಿರಂತರವಾಗಿದೆ. ಈಗಲೂ ಯಕ್ಷಗಾನ ಲೋಕವನ್ನು ಅವರು ಕೈಹಿಡಿದು ನಡೆಸುತ್ತಿದ್ದಾರೆ. ತಾಳಮದ್ದಲೆ ಕೂಟದಲ್ಲಿ ಈಗಲೂ ಶೇಣಿಯ ಛಾಪನ್ನು ನಾವು ಕಾಣಬಹುದು.

ಶೇಣಿ ಅವರ ಜನ್ಮಶತಮಾನೋತ್ಸವ ಆಚರಿಸುತ್ತಿರುವ ಈ ಕಾಲದಲ್ಲಿ ನಾವು ಅವರಿಗೆ ಸಲ್ಲಿಸಬಹುದಾದ ಬಹುದೊಡ್ಡ ಶ್ರದ್ಧಾಂಜಲಿ ಎಂದರೆ ಯಕ್ಷಗಾನ ಕುರಿತಂತೆ ಅವರಿಗಿದ್ದ ಕನಸನ್ನು ನನಸು ಮಾಡುವುದು. ಮಾತು ಎಂದಿಗೂ ಒಣಮಾತಾಗಬಾರದು ಎಂದು ಅವರು ಪ್ರತಿಪಾದಿಸುತ್ತಿದ್ದರು. ತಾಳಮದ್ದಲೆಯಲ್ಲಿ ವಾದ, ತರ್ಕ, ಶಾಸ್ತ್ರೀಯ ಚರ್ಚೆಗಳಿಗೆ ಅವಕಾಶ ಇದೆ. ಆದರೆ ತಾಳಮದ್ದಲೆಯೂ ಒಂದು ಕಲಾನುಭವವಾಗಿ ರೂಪು ತಾಳಬೇಕು ಎಂದು ಅವರು ಹೇಳುತ್ತಿದ್ದರು. ಕಲಾವಿದನಿಗೆ ಈ ಮಾಧ್ಯಮದಲ್ಲಿ ನಿಷ್ಠೆ, ಅಧ್ಯಯನ, ಪರಿಶ್ರಮ ಮಾತ್ರ ಸಾಲದು. ಪಾತ್ರದ ಮನೋಭೂಮಿಕೆಯ ಒಳಹೊಕ್ಕು ನೋಡುವ ನಿಶಿತ ಅಂತರ್ ದೃಷ್ಟಿಯೂ ಬೇಕು ಎಂದು ಅವರು ಪ್ರತಿಪಾದಿಸುತ್ತಿದ್ದರು.

ಪಂಡಿತರಿಗೆ ಶೇಣಿ ಯಾವಾಗಲೂ ಇಷ್ಟ. ಆದರೆ ಪಾಮರರಿಗೆ ಯಾಕೆ ಇಷ್ಟ. ಅದಕ್ಕೊಂದು ಉದಾಹರಣೆಯನ್ನು ಕೊಡಬಹುದು. ಭೀಷ್ಮನಾಗಿ ಶೇಣಿ ಅವರು ಕೃಷ್ಣನಿಗೆ ಹೇಳುವ ಮಾತುಗಳನ್ನು ಕೇಳಿ. ‘ದೇವಾ, ನಾನು ಸಂಸಾರಿಯಲ್ಲವಾದರೂ ಸಂಸಾರವೇನು ನನ್ನನ್ನು ಬಿಟ್ಟಿಲ್ಲ. ಸಾಂಸಾರಿಕವಾದ ಅನುಭವದ ಮೂಲಕವೇ ವಸುಧೈವ ಕುಟುಂಬಿಕನಾದ ನಿನ್ನನ್ನು ನಾನು ತಿಳಿಯಬಲ್ಲೆ ಹೊರತು ಬೇರೆ ಹೇಗೆ ತಿಳಿಯಲಿ? ಮಗು ತೀರಾ ಚಿಕ್ಕದು, ಜೊತೆಗೆ ರೋಗಗ್ರಸ್ತವಾಗಿದೆ. ಔಷಧಿ ಕುಡಿಸಲೂ ತಾಯಿಗೆ ಸಾಧ್ಯವಾಗುತ್ತಿಲ್ಲ. ಆಗ ತಾಯಿಯಾದವಳು ಏನು ಮಾಡಬೇಕು? ತಾನೇ ಔಷಧೀಯ ಗುಣಗಳ ಕಷಾಯ ಕುಡಿದು ತನ್ನ ಎದೆಹಾಲನ್ನೇ ಮದ್ದಾಗಿಸಿ ಮಗುವಿಗೆ ಮೊಲೆ ಊಡುವಳು. ಇದರಂತೆಯೇ ಭಗವಂತನೂ ಕೂಡ. ಲೋಕದ ಉದ್ಧಾರಕ್ಕಾಗಿ ಕೆಳಗಿಳಿದು ಕರ್ಮಲೇಪವನ್ನು ಅಂಟಿಸಿಕೊಂಡವನು ನೀನು’ ಎಂದು ಹೇಳುತ್ತಾರೆ. ಇದು ಪಾಮರರಿಗೆಲ್ಲ ಅರ್ಥವಾಗುತ್ತದೆ. ಪ್ರೇಕ್ಷಕರ ಮತ್ತು ಕಲಾವಿದರ ನಡುವಿನ ಸಂವಹನ ಎಲ್ಲಿಯೂ ವಿಚ್ಛೇದನವಾಗಬಾರದು. ಪಾತ್ರಧಾರಿ ತನ್ನ ಅನುಭವವನ್ನು ಪಾತ್ರದ ಅನುಭವವಾಗಿಸಿಕೊಂಡರೆ ಮಾತ್ರ ನಿಜವಾದ ಕಲೆ ಸೃಷ್ಟಿಯಾಗುತ್ತದೆ ಎಂದು ಅವರು ನಂಬಿದ್ದರು.

ಯಕ್ಷಗಾನ ಕ್ಷೇತ್ರದಲ್ಲಿಯೂ ಈಗ ಹಳತು ಹೊಸದರ ಸಂಘರ್ಷ ನಡೆಯುತ್ತಿದೆ. ಈ ಬಗ್ಗೆಯೂ ಶೇಣಿ ಅವರಿಗೆ ಸ್ಪಷ್ಟ ಕಲ್ಪನೆ ಇತ್ತು.

(‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರಸಂಗದಲ್ಲಿ ಬಪ್ಪ ಬ್ಯಾರಿಯಾಗಿ ಶೇಣಿ(ಎಡ ಬದಿ))

‘ಈಗ ಎಲ್ಲ ಕ್ಷೇತ್ರಗಳಲ್ಲಿಯೂ ಹಳತು ಹೊಸತರ ಸಂಘರ್ಷ ಇದೆ. ಸಾಹಿತ್ಯ ಕ್ಷೇತ್ರವನ್ನೇ ತೆಗೆದುಕೊಂಡರೆ ಕವಿತೆಯೆಂದರೆ ಲಕ್ಷ್ಯ ಲಕ್ಷಣಗಳ ನಿಬಂಧನೆಯೊಳಗೆ ಛಂದೋಬದ್ಧವಾಗಿ ಪ್ರಾಸಾದಿ ಪ್ರಸಾಧನಗಳಿಂದ ಕೂಡಿದ್ದರೇನೇ ಸರಿಯೆಂಬ ಸಿದ್ಧಾಂತಕ್ಕೆ ಜೋತು ಬಿದ್ದರೆ ಇಂದು ಕಾವ್ಯ ಸೃಷ್ಟಿಯಾಗುತ್ತದೆಯೇ? ಪಂಪ, ರನ್ನರ ಹಾದಿಯನ್ನೇ ತುಳಿದು ಕಾವ್ಯ ರಚಿಸುವಾತನೇ ಕವಿಯೆಂದು ಹೇಳಿದರೆ ಸರಿಯೇ? ಹೊಸ ಸೃಷ್ಟಿ ದೃಷ್ಟಿಗಳಿಂದ ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಿರುವ ಹಾಗೆಯೇ ಯಕ್ಷಗಾನ ಲೋಕವೂ ಹೊಸತನಗಳಿಂದ ಶೋಭಿಸಬೇಕು. ಯಕ್ಷಗಾನ ರಂಗದಲ್ಲಿ ಸಾಮಾಜಿಕವೋ, ಐತಿಹಾಸಿಕವೋ, ಜಾನಪದವೋ ಯಾವ ಪ್ರಸಂಗವಾದರೂ ಪ್ರದರ್ಶನಗೊಳ್ಳುವುದಾದರೆ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ.

ಆದರೆ ಅಂತಹ ಪ್ರಸಂಗಗಳು ಕೇವಲ ನಾಟಕ, ಚಲನಚಿತ್ರಗಳ ಪಡಿಯಚ್ಚಾಗಬಾರದು. ಯಕ್ಷಗಾನದ ಗಂಧವನ್ನೇ ಕಳೆದುಕೊಂಡು ನಿಸ್ತೇಜವಾಗಬಾರದು. ಸತ್ವವುಳ್ಳ ಕಥೆಯೊಂದು ಕಾವ್ಯಾತ್ಮಕವಾಗಿ ರಚಿತವಾಗಿ ಸಮಕಾಲೀನ ಪ್ರಜ್ಞೆಯಿಂದ ಹೊಸ ಮೌಲ್ಯಗಳಿಂದ ಪ್ರದರ್ಶಿಸುವಾಗ ವೇಷಭೂಷಣಗಳು ನಾಟಕೀಯವಾಗಿ ಪರಿವರ್ತನೆಯಾದರೂ ಯಕ್ಷಗಾನದ ಇತರ ಅಂಗಗಳಿಂದ ತುಂಬಿದರೆ ಕಲೆಯ ಕೊಲೆಯಾಗುವುದಿಲ್ಲ’ ಎಂದೇ ಅವರು ಹೇಳುತ್ತಿದ್ದರು.

ಪೌರಾಣಿಕ ಪ್ರಸಂಗವಾದರೂ ಅತಿಯಾದ ಕುಣಿತ ಮತ್ತು ಅತಿಯಾದ ಮಾತುಗಳಿಂದ ಅದು ಯಕ್ಷಗಾನವಾಗದೇ ಇರುವ ಹಂತಕ್ಕೆ ನಾವು ಇಂದು ತಲುಪಿದ್ದೇವೆ. ಮಾತುಗಾರಿಕೆಯ ಹೆಚ್ಚಳದಿಂದ ರಂಗ ಕಳಾಹೀನವಾದಂತೆ ಕಣ್ಣು ಕೋರೈಸುವ ಜರತಾರಿ ಬಟ್ಟೆಗಳಿಂದ ತಯಾರಿಸಿದ ವಿಚಿತ್ರ ಬಣ್ಣಗಳ ವೇಷಭೂಷಣಗಳಿಂದ ರಂಗದ ದೀಪದ ವ್ಯವಸ್ಥೆಗಳಿಂದ ಉಂಟಾಗುವ ದೋಷಗಳನ್ನೂ ಹಾಡುಗಾರಿಕೆಯಲ್ಲಿ ಬೆಳೆಯುತ್ತಿರುವ ತಾಳಜತಿಗಳನ್ನೂ, ನಟರ ಅಭಿನಯ ನರ್ತನಾದಿಗಳಲ್ಲಿ ಸ್ಪರ್ಧಾತ್ಮಕವಾಗಿ ಅಳತೆ ಮೀರಿ ಹೆಚ್ಚುತ್ತಿರುವ ಆವರ್ತನೆಗಳನ್ನೂ ಪರಾಂಬರಿಸಿ ಹತೋಟಿಗೆ ತರದಿದ್ದರೆ ಹಳೆರೋಗ ರೋಗ ನಿವಾರಣೆಗಾಗಿ ಹೊಸ ವ್ಯಾಧಿ ತಂದುಕೊಂಡಂತಾಗುತ್ತದೆ ಎಂದು ಅವರು ಹೇಳುತ್ತಿದ್ದರು.

ಅನಗತ್ಯವಾಗಿ ಒಣ ಮಾತನ್ನು ವಿಸ್ತರಿಸುವುದು ಹಾಗೂ ಅನಗತ್ಯವಾಗಿ ನರ್ತನವನ್ನು ವಿಸ್ತರಿಸುವುದು ಪುರಾಣ ಧರ್ಮಕ್ಕೂ ಕಲಾಧರ್ಮಕ್ಕೂ ಮಾಡಿದ ಮೋಸ ಎಂದೇ ಅವರು ಹೇಳುತ್ತಿದ್ದರು. ಇದಕ್ಕೆ ಅವರು ‘ಕೃಷ್ಣ ಸಂಧಾನ’ ಪ್ರಸಂಗದಲ್ಲಿ ‘ಏನಯ್ಯಾ ಇಂಥಾದ್ದೇನಯ್ಯ’ ಪದ್ಯಕ್ಕೆ ವಿಪರೀತ ಕುಣಿತವನ್ನು ಉದಾಹರಿಸುತ್ತಿದ್ದರು. ಅದೇ ರೀತಿ ಗದಾಯುದ್ಧದ ಕೌರವ ನೀರಿನಿಂದ ಮೇಲೆ ಬಂದಾಗ ವಿಪರೀತ ಕುಣಿಯುವುದಕ್ಕೂ ಅವರ ವಿರೋಧ ಇತ್ತು. ಅಂಗಚೇಷ್ಟೆಗಳೇ ಅಭಿನಯ ಅಲ್ಲ. ನೋಡುಗರಿಗೆ ಭ್ರಮೆ ಹುಟ್ಟಿಸಿ ತೃಪ್ತಿ ಪಡೆಯುವುದು ಕಲಾವಿದನಿಗೆ ಸಲ್ಲ ಎಂದು ಖಂಡಿತವಾಗಿ ಹೇಳುತ್ತಿದ್ದರು ಅವರು.

ಯಕ್ಷಗಾನ ಕ್ಷೇತ್ರದಲ್ಲಿ ಈಗಲೂ ಬಗೆಹರಿಯದ ಸಮಸ್ಯೆ ಎಂದರೆ ಯಕ್ಷಗಾನ ಜಾನಪದವೋ ಶಾಸ್ತ್ರೀಯವೋ ಎನ್ನುವುದು. ಅದಕ್ಕೆ ಶೇಣಿ ಅವರು ಹೇಳುವುದು ಹೀಗೆ. ‘ಯಕ್ಷಗಾನ ಹೇಗಿತ್ತು? ಈಗ ಹೇಗಿದೆ ಎಂದು ಹೇಳುವುದಕ್ಕೆ ನಾನು ಶಕ್ತನೇ ವಿನಾ ಹೇಗಿರಬೇಕು ಎಂದು ಉಪದೇಶಿಸುವುದಕ್ಕೆ ನಾನು ಸಮರ್ಥನಲ್ಲ. ಸಂಗೀತ, ನಾಟ್ಯ ಕಲೆಗಳೂ ಪೂರ್ವದಲ್ಲಿ ಸಂಪೂರ್ಣ ಶುದ್ಧ ಜಾನಪದಗಳೇ ಆಗಿದ್ದು ಆಮೇಲೆ ಸಂಸ್ಕರಣಗೊಂಡು ಶಾಸ್ತ್ರೀಯವಾದವು ಎಂದು ಗುರುತಿಸಲಾಗುತ್ತದೆ. ಸದ್ಯ ಯಕ್ಷಗಾನಕ್ಕೂ ಶಾಸ್ತ್ರೀಯವಾದ ರೂಪವನ್ನು ಕೊಡುವ ಅಗತ್ಯವಿದೆ. ಆದರೆ ಇದು ಜಾನಪದವೆಂಬ ಸೋಬಗಿಗೋ, ಇದರ ಮಣ್ಣಿನ ವಾಸನೆಗೋ ಧಕ್ಕೆ ಬಾರದಂತೆ ಎಚ್ಚರ ವಹಿಸಬೇಕಾದುದು ಅಗತ್ಯ. ಈ ಅವಿನಾ ದ್ವೈತವನ್ನು ಸಾಧಿಸುವುದು ಸಾಧ್ಯವಾದರೆ ಈ ಕಲೆಯು ಅರ್ಥಪೂರ್ಣವಾಗಿಯೂ ಸಮಗ್ರವಾಗಿಯೂ ಇರುತ್ತದೆ. ಕಲಾಪ್ರೇಮಿಗಳಿಗೂ ಕಲಾವಿದರಿಗೂ ಇಷ್ಟು ಹೊಣೆಯಿದೆ. ಈ ಹೊರೆಯನ್ನು ಅಭಿಮಾನಿಗಳೂ ಹೊರುವುದು ಅವರ ಕರ್ತವ್ಯ.

ಶೇಣಿ ಗೋಪಾಲಕೃಷ್ಣ ಭಟ್ಟರ ಶತಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕಲಾಭಿಮಾನಿಗಳು ಇದನ್ನು ಗಮನದಲ್ಲಿಟುಕೊಂಡು ಯಕ್ಷಗಾನಕ್ಕೊಂದು ಶಾಸ್ತ್ರೀಯ ರೂಪ ಕೊಟ್ಟರೆ ಅದೊಂದು ದೊಡ್ಡ ಕೊಡುಗೆಯಾದೀತು.

ತಮ್ಮ ಆತ್ಮಕಥೆ ‘ಯಕ್ಷಗಾನ ಮತ್ತು ನಾನು’ ಪುಸ್ತಕದಲ್ಲಿ ಶೇಣಿ ಗೋಪಾಲಕೃಷ್ಣರು ‘ನನ್ನ ಜೀವನ ಹೇಗೆ ಆರಂಭವಾಯಿತು. ಎಲ್ಲಿಂದ ತೊಡಗಿ ಹೇಗೆ ಸಾಗಿದೆ ಎಂಬುದನ್ನು ಹೇಳಿದ ನೆಮ್ಮದಿಯೊಂದಿಗೆ ಒಂದಿಷ್ಟು ವಿಶ್ರಾಂತಿ ಬೇಕಾಗಿದೆ. ನನ್ನನ್ನು ಮಲಗಲು ಬಿಡಿ’ ಎಂದು ಹೇಳುತ್ತಾರೆ. ಅವರು ನೆಮ್ಮದಿಯಿಂದ ಮಲಗಲು ಬಿಡೋಣ. ಆದರೆ ನಾವು ಯಕ್ಷಗಾನ ಅಭಿಮಾನಿಗಳು ಈಗಲಾದರೂ ಎಚ್ಚರವಾಗೋಣ.

Read More

Comments
ಮುಖಪುಟ

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವೀರಶೈವ ಮಹಾಸಭಾ ವಿರೋಧ

ಲಿಂಗಾಯತ ಮತ್ತು ಬಸವತತ್ವ ಒಪ್ಪುವ ವೀರಶೈವರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ.

ಅದ್ದೂರಿಯಾಗಿ ನೆರವೇರಿದ ಚಿಮ್ಮನಚೋಡದ ಸಂಗಮೇಶ್ವರ ರಥೋತ್ಸವ

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ 7೦ನೇ ಶ್ರೀ ಸಂಗಮೇಶ್ವರ ರಥೋತ್ಸವ ಅದ್ದೂರಿಯಾಗಿ ನೆರವೇರಿತು.

ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ: ಸರ್ಕಾರದಿಂದ ಅಧಿಸೂಚನೆ

ರಾಜ್ಯದಲ್ಲಿ ಇನ್ನು ಲಿಂಗಾಯತ ಮತ್ತು ಬಸವತತ್ವ ಒಪ್ಪುವ ವೀರಶೈವರು ಅಲ್ಪಸಂಖ್ಯಾತರು ಎಂದು ಮಾನ್ಯತೆ ನೀಡಿ ರಾಜ್ಯ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಬೆಟ್ಟಿಂಗ್‌ ವಿಷವರ್ತುಲದ 'ದುನಿಯಾ'

ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅದರಿಂದ ಹೊರಬರುವುದು ಸುಲಭವಲ್ಲ ಎಂಬ ಸಂದೇಶ ಸಾರುವ 'ಯೋಗಿ ದುನಿಯಾ' ಚಿತ್ರ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಕರಾಳಮುಖವನ್ನು ಅನಾವರಣಗೊಳಿಸುತ್ತದೆ.

ಸಂಗತ

ವಚನ: ಹೊಸಧರ್ಮದ ತಳಹದಿಯಾಗಬಲ್ಲುದೇ?

ವೀರಶೈವದಿಂದ ಪ್ರತ್ಯೇಕಗೊಂಡು ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಡುತ್ತಿರುವವರ ಪರವಾಗಿ ಸಂಪುಟ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ವಚನಗಳೇ ಲಿಂಗಾಯತ ಧರ್ಮ ಪ್ರಮಾಣ ಗ್ರಂಥವೆಂದು ಸಚಿವರೊಬ್ಬರು ಹೇಳಿದ್ದಾರೆ.

ಮೌಲ್ಯ... ಜನತಂತ್ರದ ಅಂತಃಸತ್ವ

ಮತದಾನ ಕೆಳಗಿನಿಂದ ಮೇಲ್ಮುಖವಾಗಿ ಚಲಿಸುವ ಪ್ರಕ್ರಿಯೆ. ಮತದಾರರು ತಮ್ಮ ಮತಗಳನ್ನು ಬೆಂಬಲವಾಗಿ ಅಥವಾ ಪ್ರತಿರೋಧದ ಅಸ್ತ್ರಗಳಾಗಿ ಚಲಾಯಿಸುವ ಸ್ವಾಯತ್ತತೆಯನ್ನು ಪಡೆದಿರುತ್ತಾರೆ. ಈ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಅಂಬೇಡ್ಕರ್‌ ಅವರು ‘ಶಿಕ್ಷಣ, ಸಂಘಟನೆ, ಹೋರಾಟ’ ಎಂಬ ಅನುಭವದ ಅರಿವನ್ನು ಬಹುಜನರಿಗೆ ಕಾಣಿಸಿರುವುದನ್ನು ನಾವು ಮನಗಾಣಬಹುದು.

ಪ್ರಣಾಳಿಕೆಯಲ್ಲಿರಲಿ ಕಾಡಿನ ಹಿತ

ಪರಿಸರ ನಾಶದ ವಿರುದ್ಧ ಈ ಚುನಾವಣಾ ಗಳಿಗೆಯಲ್ಲಾದರೂ ಧ್ವನಿ ಎತ್ತಬೇಕಿದೆ.

ಮೈತ್ರಿ ರಾಜಕೀಯದ ಹೊಸ ಹಾದಿ

ಇದೀಗ ಹಲವು ರಾಜಕೀಯ ಪಕ್ಷಗಳ ‘ಕಾಮನಬಿಲ್ಲು ಒಕ್ಕೂಟ’ ಮಾಡಲೆತ್ನಿಸುತ್ತಿರುವ ಕಾಂಗ್ರೆಸ್, ತನ್ನ ಅಖಿಲ ಭಾರತೀಯ ಪಾರ್ಟಿಯ ಹಮ್ಮು ಬಿಟ್ಟು ಬಾಗಿದರೆ ಮಾತ್ರ ಮುಂಬರುವ ಮಹಾಚುನಾವಣೆಯಲ್ಲಿ ಹೊಸ ಹಾದಿ ಕಂಡೀತು!

ಚಂದನವನ

ನೃತ್ಯ, ನಟನೆ ಮತ್ತು ಮಾನಸಾ

ಕಲಾರಾಧಕರ ಕುಟುಂಬದಿಂದ ಬಂದ ಕೃಷ್ಣಸುಂದರಿ ಓದಿದ್ದು ಪತ್ರಿಕೋದ್ಯಮವಾದರೂ ಬದುಕು ಕಟ್ಟಿಕೊಂಡಿದ್ದು ನಟನಾ ರಂಗದಲ್ಲಿ. ಮನೆಯವರ ಬೆಂಬಲದ ನಡುವೆ ನಟನೆಯಲ್ಲಿಯೇ ಸಾಧನೆಯ ಕನಸು ಕಾಣುತ್ತಿದ್ದಾರೆ...

ಕ್ರೀಡಾಪಟು ಖಳನಟನಾದ ಕಥೆ

ಚೆಲುವರಾಜ್‌ ಅವರದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ. ರಾಷ್ಟ್ರಮಟ್ಟದ ವಾಲಿಬಾಲ್‌ ಆಟಗಾರನಾಗಿದ್ದ ಅವರು ನಟನಾ ಕ್ಷೇತ್ರ ಪ್ರವೇಶಿಸಿದ್ದು ಆಕಸ್ಮಿಕ. ಕಿರುತೆರೆಯಲ್ಲಿ ಖಳನಟನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅವರು ಪೊಲೀಸ್‌ ಅಧಿಕಾರಿಯಾಗಿ ನಟಿಸಿರುವ ‘ಸಮರ್ಥ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

‘ರಾಜರಥ’ದ ಸವಾರಿ

‘ರಾಜರಥ’ ಬಸ್‌ನ ಕಥೆ. ಕನ್ನಡದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಬಸ್‌ಗೆ ಧ್ವನಿಯಾಗಿದ್ದಾರೆ. ತೆಲುಗಿನಲ್ಲಿ ರಾ.ನಾ. ದಗ್ಗುಬಾಟಿ ಧ್ವನಿ ನೀಡಿದ್ದಾರೆ. ಇದು ಕೌಟುಂಬಿಕ ಚಿತ್ರ. ಕಾಲೇಜು ಹುಡುಗ ಮತ್ತು ಹುಡುಗಿಯ ನಡುವೆ ನಡೆಯುವ ಕಥನ’ ಎಂದು ವಿವರಿಸಿದರು ಅನೂಪ್.

‘ವರ್ತಮಾನ’ಕ್ಕೆ ಭವಿಷ್ಯದಲ್ಲಿ ನಂಬಿಕೆ!

ವರ್ತಮಾನ’ದ ಮಹತ್ವ, ಅದನ್ನು ಬದುಕಬೇಕಾದ ರೀತಿ, ಅದನ್ನು ಅರ್ಥಮಾಡಿಕೊಳ್ಳಬೇಕಾದ ಬಗೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಉಮೇಶ್ ಅಂಶಿ. ಅದರ ಹೆಸರೂ ‘ವರ್ತಮಾನ’.