ಬಾಹ್ಯಾಕಾಶಕ್ಕೆ ಕನ್ನಡಿ ಈ ಕೈಸಾಲೆ

5 Dec, 2017
ಅಭಿಲಾಷ ಬಿ.ಸಿ

ಉಪಗ್ರಹ ಉಡಾವಣೆಗೆ ಸಜ್ಜಾಗಿದೆ. ಕುತೂಹಲಭರಿತ ಕಣ್ಣುಗಳಲ್ಲಿ ನಿರೀಕ್ಷೆಯ ಹೊಳಪಿದೆ. ಕ್ಷಣಗಣನೆ ಶುರುವಾಗಿ ವೀಕ್ಷಕರ ಎದೆಬಡಿತ ಏರುತ್ತಿದೆ. ಶಬ್ದ ಹಾಗೂ ಹೊಗೆಯ ತೀವ್ರತೆಯೊಂದಿಗೆ ಉಪಗ್ರಹ ನಭಕ್ಕೆ ಚಿಮ್ಮುತ್ತಿದ್ದಂತೆ ಉಡಾವಣಾ ಕೇಂದ್ರದಲ್ಲಿ ಕತ್ತಲು ಆವರಿಸಿ ಪಕ್ಕದ ಕಂಪ್ಯೂಟರ್‌ ಪರದೆಯಲ್ಲಿ ಉಪಗ್ರಹದ ಚಲನೆ ಕಾಣಸಿಗುತ್ತದೆ. ಚಿಣ್ಣರ ದನಿಯಲ್ಲಿನ ಸಂತೋಷದ ಉದ್ಗಾರವೂ ಮುಗಿಲು ಮುಟ್ಟುತ್ತದೆ.

–ಇದು ಯಾವುದೇ ಉಪಗ್ರಹ ಉಡಾವಣಾ ಕೇಂದ್ರದ ವೀಕ್ಷಕ ವಿವರಣೆಯಲ್ಲ. ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ (ವಿಐಟಿಎಂ) ನೂತನವಾಗಿ ರೂಪಿಸಲಾಗಿರುವ ಬಾಹ್ಯಾಕಾಶ ತಂತ್ರಜ್ಞಾನ ಕೈಸಾಲೆಯಲ್ಲಿನ (ಗ್ಯಾಲರಿ) ಚಿತ್ರಣ.

ಶ್ರೀಹರಿಕೋಟಾದ ಉಪಗ್ರಹ ಉಡಾವಣಾ ಕೇಂದ್ರಕ್ಕೆ ತೆರಳಿ ಅಲ್ಲಿನ ಉಪಗ್ರಹ ಉಡಾವಣೆಯಲ್ಲಿ ಭಾಗಿಯಾಗಬೇಕು ಎಂಬ ಕನಸು ಹೊತ್ತವರಿಗೆ ಅದೇ ಅನುಭವವನ್ನು ಈ ಗ್ಯಾಲರಿ ಕಟ್ಟಿಕೊಡುತ್ತದೆ. ಸತೀಶ್ ಧವನ್‌ ಉಪಗ್ರಹ ಉಡಾವಣಾ ಕೇಂದ್ರದ ಮಾದರಿಯನ್ನು ಯಥಾವತ್ತಾಗಿ ಇಲ್ಲಿ ನಿರ್ಮಿಸಲಾಗಿದೆ.

ಗ್ಯಾಲರಿ ಕೇವಲ ನೋಟಕ್ಕೆ ಸೀಮಿತವಾಗಿರದೆ, ವಿವಿಧ ಪ್ರಯೋಗಗಳ ಮುಖೇನ ಉಡಾವಣೆಯ ನೈಜ ಅನುಭವವನ್ನು ನೀಡುತ್ತದೆ. ಮಕ್ಕಳು ನೇರವಾಗಿ ಆ ಪ್ರಯೋಗಗಳಲ್ಲಿ ಭಾಗಿಯಾಗುವ ಅವಕಾಶವನ್ನು ಕಲ್ಪಿಸಲಾಗಿದೆ.

ಕುತೂಹಲಕಾರಿಯಾದ ಬಾಹ್ಯಾಕಾಶ ವಿಜ್ಞಾನವನ್ನು ಅಷ್ಟೇ ಆಸಕ್ತಿದಾಯಕವಾಗಿ ತಿಳಿಯುವ ಅವಕಾಶ ಇಲ್ಲಿದೆ. ಬಾಹ್ಯಾಕಾಶ ಎಂದರೇನು ಎಂಬ ಪ್ರಾಥಮಿಕ ಮಾಹಿತಿಯಿಂದ ಹಿಡಿದು ಸ್ವತಃ ಉಪಗ್ರಹವನ್ನು ನಿಯಂತ್ರಿಸುವವರೆಗೂ, ಗಗನಯಾನ ಸಂಬಂಧಿತ ಸಂಪೂರ್ಣ ವಿವರ ಇಲ್ಲಿದೆ.

ಇಲ್ಲಿನ ‘ಮಿಷನ್‌ ನಿಯಂತ್ರಣ ಕೊಠಡಿ’ಯಲ್ಲಿ ಕುಳಿತು ಉಪಗ್ರಹಗಳ ಕಾರ್ಯವೈಖರಿಯ ಮಾಹಿತಿ ಪಡೆಯಬಹುದು. ಉಪಗ್ರಹಗಳನ್ನು ನಿಯಂತ್ರಿಸುವ ಕೌಶಲವನ್ನೂ ಕರಗತ ಮಾಡಿಕೊಳ್ಳಬಹುದು. ರಾಕೆಟ್‌, ಹೆಲಿಕಾಪ್ಟರ್‌ಗಳ ಚಾಲನೆಯ ಅನುಭವ ದಕ್ಕಿಸಿಕೊಳ್ಳಬಹುದು. ಈ ಎಲ್ಲ ಅನುಭವಗಳನ್ನು ಮಕ್ಕಳು ಅರಿಯುವ ಪರಿ ಭಿನ್ನವಾಗಿರುತ್ತದೆ. ಆಕಾಶದಲ್ಲಿ ಸ್ವತಃ ತೇಲಾಡಿದಂತಹ ಅನುಭವವನ್ನು ಅದು ನೀಡುತ್ತದೆ.

ಕೈಸಾಲೆಯಲ್ಲಿನ ‘ಸ್ಟೋರಿ ಆಫ್‌ ಸ್ಪೇಸ್‌’ ವಿಶ್ವದಲ್ಲಿ –ಪ‍್ರಮುಖವಾಗಿ ದೇಶದಲ್ಲಿ– ಬಾಹ್ಯಾಕಾಶ ವಿಜ್ಞಾನ ಬೆಳೆದು ಬಂದ ಕಥೆಯನ್ನು ಭಿನ್ನವಾಗಿ ನಿರೂಪಿಸುತ್ತದೆ. ಗ್ಯಾಲರಿಯಿಂದ ತುಸು ದೂರದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ನಿಂತು ಹಸ್ತಚಲನೆ ಮಾತ್ರದಿಂದ ಒಂದು ಪುಟದಿಂದ ಇನ್ನೊಂದು ಪುಟವನ್ನು ತಿರುವಿ ಹಾಕಬಹುದು. ದೂರಸಂವೇದಿ ಅಲೆಗಳು ನಮ್ಮ ನಿರ್ದೇಶನವನ್ನು ಗ್ರಹಿಸಿ ನಾವು ಬಯಸುವ ಸಮಗ್ರ ಮಾಹಿತಿಯನ್ನು ಚಿತ್ರದೊಂದಿಗೆ ಒದಗಿಸುತ್ತವೆ.

‘ಮಲ್ಟಿ ಟಚ್‌ ಸ್ಕ್ರೀನ್‌’ನಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ವಿಶ್ವದೆಲ್ಲೆಡೆ ಪ್ರಕಟವಾಗಿರುವ ಪುಸ್ತಕಗಳು ಲಭ್ಯವಿವೆ. ಒಮ್ಮೆಗೆ ಹತ್ತಾರು ಮಂದಿ ತಮ್ಮ ಅಗತ್ಯದ ಹೊತ್ತಿಗೆ ತೆರೆದು ಓದುವಂತಹ ಅಪೂರ್ವ ಅವಕಾಶವಿದೆ. ಮಕ್ಕಳ ಕಲಿಕೆಗೆ ಪೂರಕವಾಗಿ ಕಂಪ್ಯೂಟರ್‌ನ ದೊಡ್ಡ ಪರದೆಯ ಮೇಲೆ ಬಾಹ್ಯಾಕಾಶಯಾನಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳ ಮಾಲಿಕೆಯೂ ಇದೆ.

ಭಾರತದ ಬಾಹ್ಯಾಕಾಶ ವಿಜ್ಞಾನದ ಬೆಳವಣಿಗೆಗೆ ಶ್ರಮಿಸಿದ ದಿಗ್ಗಜರು, ಅನೇಕ ಮೊದಲುಗಳನ್ನು ಸೃಜಿಸಿದ ಚೇತನಗಳ ಜೀವನ ದರ್ಶನವೂ ಇಲ್ಲಿದೆ. ಗ್ಯಾಲರಿಯನ್ನು ಪ್ರವೇಶಿಸುತ್ತಿದ್ದಂತೆ ರಾಕೇಶ್ ಶರ್ಮಾರ ಅಪರೂಪದ ಚಿತ್ರಗಳು ಗಮನ ಸೆಳೆಯುತ್ತವೆ. ಬಾಹ್ಯಾಕಾಶಯಾನದಲ್ಲಿ ಅವರು ಯೋಗ ಮಾಡುತ್ತಿದ್ದ ಚಿತ್ರಗಳು ಕಾಣಸಿಗುತ್ತವೆ. ಕಲ್ಪನಾ ಚಾವ್ಲಾ, ಅಬ್ದುಲ್‌ ಕಲಾಂ ಅವರ ಜೀವನ ಚರಿತ್ರೆಯೂ ಇಲ್ಲಿ ಅನಾವರಣಗೊಂಡಿದೆ.

ರಾಕೆಟ್‌ ತಂತ್ರಜ್ಞಾನದ ಪಿತಾಮಹ ಎಂದೇ ಕರೆಯುವ ಟಿಪ್ಪು ಸುಲ್ತಾನನ ರಾಕೆಟ್‌ಗಳಿಂದ ಹಿಡಿದು ಇತ್ತೀಚಿನ ಮಂಗಳಯಾನದವರೆಗೆ ಬಾಹ್ಯಾಕಾಶದಲ್ಲಿ ಭಾರತ ಸವೆಸಿದ ಹಾದಿಯ ಮೇಲೆ ಒಂದು ಹಿನ್ನೋಟ ಬೀರುವ ಅವಕಾಶ ಇಲ್ಲಿದೆ. ವಿವಿಧ ಉಪಗ್ರಹ ಉಡಾವಣಾ ವಾಹನಗಳ ಪರಿಚಯ, ಅವುಗಳ ಕಾರ್ಯವೈಖರಿಯ ವಿವರಣೆ ಬೆರಗು ಮೂಡಿಸುತ್ತದೆ.

ಗಗನಯಾತ್ರಿಗಳು ಧರಿಸುವ ಉಡುಪು, ತಿನ್ನುವ ತಿನಿಸನ್ನೂ ಪರಿಚಯಿಸಲಾಗಿದೆ. ಈ ಬಗೆಯ ಉಡುಪು ಹಾಗೂ ಆಹಾರಗಳು ನಿತ್ಯ ಜೀವನದಲ್ಲಿ ಹೇಗೆ ಬಳಕೆಯಾಗುತ್ತವೆ, ಉಪಗ್ರಹಗಳು ಯಾವ ಕ್ಷೇತ್ರದಲ್ಲಿ ಬಳಕೆಯಾಗುತ್ತವೆ ಎಂಬ ಉಪಯುಕ್ತ ಮಾಹಿತಿಯನ್ನೂ ಒದಗಿಸಲಾಗಿದೆ. ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ದ ಮುಂದೆ ನಿಂತಾಗ ಮೂಡುವ ನಮ್ಮದೇ ಬಿಂಬ ಕೌತುಕಕ್ಕೆ ಕಾರಣವಾಗುತ್ತದೆ. ಚಂದ್ರಲೋಕದಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳಬೇಕು ಎನ್ನುವವರ ಆಸೆ ಈಡೇರಿಕೆಗೂ ಇಲ್ಲಿ ಅವಕಾಶವಿದೆ.

ಪ್ರಾಯೋಗಿಕ ಅನುಭವದ ಜೊತೆಗೆ ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಸಮಗ್ರ ಮಾಹಿತಿ ಒದಗಿಸಲಾಗಿದೆ. ನಿತ್ಯ ಆಕಾಶ ನೋಡುತ್ತಾ, ತಾರೆ ಎಣಿಸುತ್ತಾ ಗಗನ ಯಾನದ ಕುರಿತ ಆಸಕ್ತಿ ವ್ಯಕ್ತಪಡಿಸುವಂಥ ಚಿಣ್ಣರ ಜ್ಞಾನದಾಹ ತಣಿಸುವ ಸೂಕ್ತ ವೇದಿಕೆ ಇದಾಗಿದೆ. ಗಗನಯಾನದ ಸಮಗ್ರ ಪರಿಚಯ ಪಡೆದು ಗ್ಯಾಲರಿಯಿಂದ ಹೊರಬಂದಾಗ ಗಗನಯಾನದಿಂದ ಯಶಸ್ವಿಯಾಗಿ ಹಿಂತಿರುಗಿದಷ್ಟೇ ಸಾರ್ಥಕ ಭಾವನೆ ಮೂಡುತ್ತದೆ.

₹ 85 ಲಕ್ಷ ವೆಚ್ಚದಲ್ಲಿ ಗ್ಯಾಲರಿ ನಿರ್ಮಾಣ
ಗ್ಯಾಲರಿ ನಿರ್ಮಾಣಕ್ಕೆ 18 ತಿಂಗಳು ತೆಗೆದುಕೊಂಡಿದ್ದು, ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್ತಿನ ಸಹಯೋಗದೊಂದಿಗೆ ₹ 85 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ.

‘ಮಕ್ಕಳಿಗೆ ಬಾಹ್ಯಾಕಾಶ ವಿಜ್ಞಾನವನ್ನು ಸರಳವಾಗಿ ಅರ್ಥೈಸುವ ಸಲುವಾಗಿ ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸಿ ಅಳವಡಿಸಿಕೊಳ್ಳಲಾಗಿದೆ. ಶ್ರೀಹರಿಕೋಟಾಕ್ಕೆ ತೆರಳಿ ಅಲ್ಲಿನ ಉಡಾವಣಾ ಮಾದರಿಯನ್ನು ಪರಿಶೀಲಿಸಿ ಯಥಾವತ್ತಾಗಿ ಕೈಸಾಲೆ ನಿರ್ಮಿಸಿದ್ದೇವೆ’ ಎನ್ನುತ್ತಾರೆ ಗ್ಯಾಲರಿ ನಿರ್ಮಾಣದ ಮೇಲ್ವಿಚಾರಕಿ ಕೆ.ಎ.ಸಾಧನಾ.

ಎಲ್ಲಿದೆ ಈ ಗ್ಯಾಲರಿ?
ಬೆಂಗಳೂರಿನ ಕಬ್ಬನ್‌ ಉದ್ಯಾನದಲ್ಲಿರುವ ವಿಐಟಿಎಂ, ದೀಪಾವಳಿ ಹಾಗೂ ಗಣೇಶ ಚತುರ್ಥಿ ಹೊರತುಪಡಿಸಿ ವರ್ಷದ ಎಲ್ಲ ದಿನಗಳಲ್ಲಿಯೂ ತೆರೆದಿರುತ್ತದೆ (ಬೆಳಿಗ್ಗೆ10ರಿಂದ ಸಂಜೆ 6). ಬಾಹ್ಯಾಕಾಶ ವಿಭಾಗವೂ ಸೇರಿದಂತೆ ಸಂಗ್ರಹಾಲಯದಲ್ಲಿರುವ ಎಲ್ಲ ಗ್ಯಾಲರಿಗಳ ವೀಕ್ಷಣೆಗೆ ಒಬ್ಬರಿಗೆ ₹ 50 ಟಿಕೆಟ್‌ ದರ.

Read More

Comments
ಮುಖಪುಟ

ಕನಿಷ್ಠ ಮೂಲವೇತನ ₹16,350ಕ್ಕೆ ಹೆಚ್ಚಳ?

ನೌಕರರ ಆರಂಭಿಕ ವೇತನ ಶ್ರೇಣಿ ಅಂದರೆ ‘ಡಿ’ ಗ್ರೂಪ್‌ ನೌಕರರಿಗೆ ಮೂಲವೇತನ ₹9,600 ಇದ್ದು, ತುಟ್ಟಿಭತ್ಯೆ ಈಗ ಶೇ 45.25ರಷ್ಟಿದೆ. ಬೆಂಗಳೂರಿನಲ್ಲಿ ಮನೆಬಾಡಿಗೆ ಭತ್ಯೆ ಮೂಲವೇತನದ ಶೇ 30ರಷ್ಟಿದೆ.

ರಾಹುಲ್‌ ಯುಗಾರಂಭ; ಸೋನಿಯಾ ಭಾವುಕ ವಿದಾಯ

ಸತತ 19 ವರ್ಷಗಳ ಕಾಲ ಪಕ್ಷದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಸೋನಿಯಾ ಗಾಂಧಿ, ಸಾವಿರಾರು ಬೆಂಬಲಿಗರು ಮತ್ತು ಕಾರ್ಯಕರ್ತರೆದುರು ತಮ್ಮ ಪುತ್ರ ರಾಹುಲ್‌ಗೆ ಅಧಿಕಾರ ಹಸ್ತಾಂತರಿಸಿದರು.

 

ಮುಖ್ಯಮಂತ್ರಿಗೆ ‘ಚಿನ್ನದ ಕಿರೀಟ’ ಉಡುಗೊರೆ!

ಚಿನ್ನದ ಕಿರೀಟದ ತೂಕ 500 ಗ್ರಾಂ ಎಂದು ಕೆಲವರು, 250 ಗ್ರಾಂ ಎಂದೂ ಇನ್ನು ಕೆಲವರು ತಿಳಿಸಿದರು. ‘ಕಿರೀಟದ ಅಂದಾಜು ಮೌಲ್ಯ ₹5 ಲಕ್ಷ. ಖಡ್ಗದ ಮೌಲ್ಯ ₹30 ಸಾವಿರ ಹಾಗೂ ಹಾರದ ಮೌಲ್ಯ ₹25 ಸಾವಿರ ಇರಬಹುದು’ ಎಂದು ಶಾಸಕರ ಆಪ್ತ ಮೂಲಗಳು ಹೇಳುತ್ತವೆ.

ಎಚ್‌1ಬಿ ವೀಸಾ ನಿಯಮ ಬದಲು ಪತ್ನಿ–ಪತಿಯ ಉದ್ಯೋಗಕ್ಕೆ ಕತ್ತರಿ?

ಒಬಾಮ ಸರ್ಕಾರದ ರೂಪಿಸಿದ್ದ ನಿಯಮಾವಳಿಯಲ್ಲಿ ಬದಲಾವಣೆ ತರುವ ಆಲೋಚನೆ ಇದೆ ಎಂದು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ಸಂಗತ

ನಿರ್ಭಯಾ ನೆನಪು– ವರ್ಮಾ ವರದಿ

ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ನ್ಯಾಯಮೂರ್ತಿ ವರ್ಮಾ ವರದಿ ಒಂದು ಅಪರೂಪದ ದಾಖಲೆ. ಒಂದು ಬೃಹತ್ ಆಂದೋಲನದ ಫಲ. ಮಹಿಳಾ ಚಳವಳಿಗಳು ಇಂತಹ ವರದಿಗಳ ಅನುಷ್ಠಾನಕ್ಕೆ ಆಗ್ರಹಿಸಬೇಕು

ಪೇಜಾವರ ಶ್ರೀಗಳಿಗೆ... ಸ್ಪಷ್ಟನೆಗಾಗಿ ಪತ್ರ

ಸಂವಿಧಾನದ ಯಾವ ವಿಧಿಗಳ ಬಗ್ಗೆ ತಮಗೆ ತಕರಾರಿದೆ? ತಾವು ಬಯಸುವ ಬದಲಾವಣೆ ಏನು?

ಭಾರತ–ಬ್ರಿಟನ್‌ ನಡುವೆ ‘ಸಜೀವ ಸೇತುವೆ’

ದ್ವಿಪಕ್ಷೀಯ ಸಂಬಂಧ ವೃದ್ಧಿ ಕ್ರಮ: ಬೆಂಗಳೂರಿನಲ್ಲಿ ವೀಸಾ ಕೇಂದ್ರ

ಮನೆಪಾಠಕ್ಕೆ ಮದ್ದುಂಟೆ?

ಖಾಸಗಿ ಪಾಠ ವ್ಯವಸ್ಥೆಯು ಸಾಂಸ್ಥಿಕ ರೂಪದ ಶಾಲೆ–ಕಾಲೇಜುಗಳಿಗೆ ಪರ್ಯಾಯವಾಗಿ ಬೆಳೆಯತೊಡಗಿರುವುದು ಸಾಮಾಜಿಕ ದೃಷ್ಟಿಕೋನದಿಂದ ಸಮ್ಮತವೆನಿಸುವುದಿಲ್ಲ

ಮುಕ್ತಛಂದ

‌ಅಂಗೈಯಲ್ಲೇ ಸ್ವರ್ಗ ಕಾಣಬೇಕೆ?

ಯುವ ಮನಸ್ಸುಗಳ ಉತ್ಸಾಹ, ನವೋನ್ಮಾದಗಳನ್ನು ವೃದ್ಧಿಸುತ್ತಿರುವ ಕಾಲಘಟ್ಟದ ಆರಂಭದ ದಿನಗಳಲ್ಲಿ ನಾವಿದ್ದೇವೆ. ಇಂದಿನ ಹದಿಹರೆಯ, ಯುವಜನರ ಭಾವೋದ್ರೇಕದ ವರ್ತನೆಗಳು ನವೀನ ರೀತಿಯದ್ದಾಗಿದ್ದು ‘ಅದರಿಂದ ಕೆಡಕು’ ಎನ್ನುವ ಭಾವನೆ ವ್ಯಾಪಕ. ಮನೆ, ಸಮುದಾಯದ ಅಸಹನೆ ಹೆಚ್ಚುತ್ತಿರುವುದಕ್ಕೆ ತಂತ್ರಜ್ಞಾನ ಒದಗಿಸಿರುವ ಸಲಕರಣೆಗಳ ಪ್ರಭಾವವಿದೆ ಎನ್ನುವುದು ನಿಜವಿರಲೂಬಹುದು.

ಟಿ.ಆರ್‌.ಪಿ. ಎಂಬ ಚಾಲೂ ಚೆಲುವೆ!

ಟಿ.ಆರ್‌.ಪಿ. ಗಳಿಕೆಗಾಗಿಯೇ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಇಲ್ಲಿ ಪ್ರತಿಯೊಂದೂ ಮಾರುಕಟ್ಟೆ ಸರಕಾಗುತ್ತದೆ. ನೀವು ಪ್ರತಿಯೊಂದನ್ನೂ ಮಾರಬೇಕು. ಸುದ್ದಿಯನ್ನೂ ಅಷ್ಟೇ, ಧಾರಾವಾಹಿಯನ್ನೂ ಅಷ್ಟೇ. ಈ ಸರಕು ಸಂಸ್ಕೃತಿ ನಮ್ಮ ನೋಟವನ್ನು ಆಳುತ್ತದೆ. ನಮ್ಮ ಮೌಲ್ಯಗಳನ್ನು ಪಲ್ಲಟಗೊಳಿಸುತ್ತದೆ. ನಮ್ಮ ಅತಿ ಖಾಸಗಿ ನಂಟುಗಳನ್ನೂ ಅಲ್ಲಾಡಿಸುತ್ತದೆ.

ಟಿ.ವಿ. ವಾಹಿನಿಗಳ ನೈತಿಕ ಪ್ರಜ್ಞೆ

ಟಿ.ವಿ. ಚಾನೆಲ್‌ಗಳ ನಿರ್ವಾಹಕರೇ ಸ್ವಲ್ಪ ಸಾಮಾಜಿಕ ಕಳಕಳಿಯಲ್ಲದಿದ್ದರೂ ಜವಾಬ್ದಾರಿ ತೋರಿದರೆ ಆದೀತು. ಆದರೆ, ಪರಸ್ಪರ ತುಳಿದೇ ಮೇಲೆ ಬರುವ ಕ್ರೂರ ಸ್ಪರ್ಧೆಯ ಸುಳಿಯಲ್ಲಿ ಸಿಲುಕಿರುವ ಟಿ.ವಿ. ಸಂಸ್ಥೆಗಳಿಗೆ ಈ ನೈತಿಕತೆ ತುಂಬಾ ದುಬಾರಿಯಾಗಿಬಿಡುತ್ತದೆ. ಉದಾಹರಣೆಗೆ ಎಲ್ಲಾ ಟಿ.ವಿ. ಸಂಸ್ಥೆಗಳು ಅನುಸರಿಸಲೇಬೇಕಾದ ಹಲವು ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಗಳಲ್ಲಿ ಒಂದು, ಕೇಬಲ್ ಟೆಲಿವಿಷನ್ ರೆಗ್ಯುಲೇಷನ್ ಆಕ್ಟ್ 1995.

ಮಧ್ಯಕಾಲದ ಹೆಣ

ಹೆಣ ಹಿರಿಹಿರಿ ಹಿಗ್ಗುತ್ತಿದೆ
ತಾನು ದೆವ್ವಗಿವ್ವ ಏನೂ ಆಗಿಲ್ಲವೆಂದು
ಆದರೆ ಭಯವೋ ಭಯ
ತನ್ನವೇ ಕೈ-ಕಾಲು ಕಣ್ಣು ತಲೆ ನೋಡಿಕೊಳ್ಳಲು!