ಚಿನ್ನದ ತಟ್ಟೆಯ ಮುಳ್ಳಿನ ಕಿರೀಟ

6 Dec, 2017
ಪ್ರಜಾವಾಣಿ ವಾರ್ತೆ

ರಾಹುಲ್‌ ಗಾಂಧಿ ತಮ್ಮನ್ನು ಮತ್ತು ಕಾಂಗ್ರೆಸ್ಸನ್ನು ಮರುಶೋಧನೆಗೆ ಒಡ್ಡಬೇಕಿದೆ, ಮುರಿದು ಕಟ್ಟಬೇಕಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನು ತಮ್ಮ ಕಾಲದಲ್ಲಾದರೂ ವಂಶಪಾರಂಪರ್ಯದ ನೊಗದಿಂದ ಬಿಡಿಸಬೇಕಿದೆ.

ನೆಹರೂ-ಗಾಂಧಿ ಮನೆತನದ ಕುಡಿ ರಾಹುಲ್ ಗಾಂಧಿ ಅನತಿ ಕಾಲದಲ್ಲೇ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ. ಈ ಗಾದಿಯನ್ನು ಏರುತ್ತಿರುವ ನೆಹರೂ- ಗಾಂಧಿ ಮನೆತನದ ಆರನೆಯ ಕುಡಿ ಅವರು. ಮೋತಿಲಾಲ್, ಜವಾಹರಲಾಲ್, ಇಂದಿರಾ, ರಾಜೀವ್, ಸೋನಿಯಾ ಗಾಂಧಿ ಎದುರಿಸಿದ್ದಕ್ಕಿಂತ ಕಡು ಕಠಿಣ ಸವಾಲುಗಳು ರಾಹುಲ್ ಅವರಿಗೆ ಮುಖಾಮುಖಿಯಾಗಿವೆ. ಪ್ರತಿಭೆ, ಜಾಣ್ಮೆ, ಕೂಟನೀತಿ, ದಿಟ್ಟತನ, ನಿಷ್ಠುರ ಗುಣಗಳು ಹಿಂದೆಂದಿಗಿಂತಲೂ ಇಂದಿನ ದಿನಗಳ ಕಾಂಗ್ರೆಸ್ ಸಾರಥಿಗೆ ಅತ್ಯಗತ್ಯ.

ಚುನಾವಣೆಯ ರಣಕ್ಷೇತ್ರದ ನಡುವೆಯೇ ಅಧ್ಯಕ್ಷ ಪದಕ್ಕೆ ತಲೆ ಒಡ್ಡಿರುವ ರಾಹುಲ್ ಅವರಿಗೆ ಜನಾದೇಶ ಪಡೆಯುವ ಅಗ್ನಿಪರೀಕ್ಷೆಗಳು ಸಾಲುಗಟ್ಟಿ ನಿಂತಿವೆ. ಗುಜರಾತಿನಲ್ಲಿ ಕಾಂಗ್ರೆಸ್ಸಿನ ಪರಿಸ್ಥಿತಿ ದಯನೀಯವೇನೂ ಅಲ್ಲ. ಮುಂದಿನ ವರ್ಷ ನಡೆಯಲಿರುವ ರಾಜಸ್ಥಾನ, ಕರ್ನಾಟಕ, ಮಧ್ಯಪ್ರದೇಶ ಹಾಗೂ ಛತ್ತೀಸಗಡ ವಿಧಾನಸಭೆ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಇನ್ನಷ್ಟು ಬೆಳಕಿನ ದಿನಗಳನ್ನು ಕಾಣುವುದು ಸಾಧ್ಯವೇ ವಿನಾ ಇನ್ನಷ್ಟು ಕೆಳಗೆ ಜಾರುವ ಸೂಚನೆಗಳು ಇಲ್ಲ. ಈ ಚುನಾವಣೆಗಳು ಕಳೆಯುತ್ತಿದ್ದಂತೆಯೇ ಮರುವರ್ಷ ಲೋಕಸಭಾ ಚುನಾವಣೆಯ ಮಹಾಪರೀಕ್ಷೆ ರಾಹುಲ್ ಎದುರು ನಿಲ್ಲಲಿದೆ. ಕಾಲಿಟ್ಟಲ್ಲೆಲ್ಲ ಕಾಂಗ್ರೆಸ್ಸನ್ನು ಸೋಲಿಸುತ್ತಾರೆ ಎಂಬುದಾಗಿ ತಮ್ಮ ತಲೆಗೆ ಕಟ್ಟಿರುವ ಸೋಲಿನ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಸವಾಲು ರಾಹುಲ್ ಮುಂದೆ ಗಹಗಹಿಸಿದೆ.

ತಲೆಮಾರುಗಳು ಬದಲಾಗುತ್ತಿವೆ. ಆಶೋತ್ತರಭರಿತ ಯುವ ಭಾರತದ ಅಪೇಕ್ಷೆಗಳು ನಿರೀಕ್ಷೆಗಳಿಗೆ ಅನುಗುಣವಾದ ಹೊಸ ನುಡಿಗಟ್ಟಿನ ತಾಜಾ ರಾಜಕಾರಣವನ್ನು ಅವರು ಕಟ್ಟಿಕೊಡಬೇಕಿದೆ. ದಡ್ಡ ಮಾತುಗಳನ್ನು ಆಡುವ ಪಪ್ಪು ಎಂಬುದಾಗಿ ತಮ್ಮನ್ನು ಕುರಿತು ಬಿಜೆಪಿ ಯಶಸ್ವಿಯಾಗಿ ಕಟ್ಟಿರುವ ಮಿಥ್ಯೆಗೆ ರಾಹುಲ್ ಆಗಾಗ ನೀರು, ಗೊಬ್ಬರ ಎರೆದದ್ದು ಹೌದು. ಅವರ ತಂದೆ ರಾಜೀವ್‌ ಗಾಂಧಿ ಕೂಡ ಇಂತಹ ತಪ್ಪುಗಳನ್ನು ಮಾಡಿದ್ದು ಉಂಟು. ಆದರೆ ಮಾಡಿದ ತಪ್ಪನ್ನು ಒಪ್ಪಿ ತಿದ್ದಿಕೊಳ್ಳಲು ಅವರು ತಡ ಮಾಡಲಿಲ್ಲ. ತಡವಾಗಿಯಾದರೂ ರಾಹುಲ್ ಪಕ್ವತೆಯತ್ತ ನಡೆಯುತ್ತಿರುವ ದೂರದ ಸೂಚನೆಗಳಿವೆ. ಇತ್ತೀಚಿನ ದಿನಗಳಲ್ಲಿ ದೇಶದ ರಾಜಕಾರಣವು ರಾಹುಲ್ ಅವರನ್ನು ನೋಡುವ ಬಗೆಯೂ ಬದಲಾಗತೊಡಗಿದೆ. ಮೋದಿಯವರ ಪ್ರಭಾವಳಿ ಈಗ ಮೊದಲಿನಷ್ಟು ಪ್ರಖರ ಅಲ್ಲ. ಕಾಲದೇಶಗಳು ರಾಹುಲ್ ಅವರನ್ನು ಅವರ ಎಲ್ಲ ಮಿತಿಗಳು ಮತ್ತು ದಡ್ಡತನದ ನಡುವೆಯೂ ಅತ್ಯಂತ ಕಠಿಣವಾಗಿಯೂ ನಿರ್ದಯವಾಗಿಯೂ ನಡೆಸಿಕೊಂಡಿರುವುದು ಹೌದು. ಇಂದಿರಾ ಗಾಂಧಿ ಹತ್ಯೆ- ರಾಜೀವ್‌ ಗಾಂಧಿ ಹತ್ಯೆಗಳ ಕೌಟುಂಬಿಕ ದುರಂತಗಳನ್ನು ಎಳೆಯದರಲ್ಲೇ ಕಂಡವರು ರಾಹುಲ್ ಮತ್ತು ಪ್ರಿಯಾಂಕಾ. ಭದ್ರ ಮೈಗಾವಲಿನ ಚಿನ್ನದ ಪಂಜರದಲ್ಲಿ ಅಸಹಜ ಬಾಲ್ಯ ಕಳೆದ ಮಕ್ಕಳು. ಅವರ ಮೌಲ್ಯಮಾಪನ ಮಾಡುವಾಗ ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ರಾಹುಲ್ ಹೆಗಲ ಮೇಲೆ ತಮ್ಮ ಪೂರ್ವಜರ ಹೊಳೆಯುವ ವರ್ಚಸ್ಸುಗಳ ಬೆಟ್ಟದಷ್ಟು ಭಾರವಿದೆ. ಈ ಒಜ್ಜೆಯನ್ನು ಇಳಿಸಿಕೊಂಡು ಹಗುರಾಗಬೇಕು. ಜನರ ದನಿಯನ್ನು ಆಲಿಸಿ ನಡೆಯಬೇಕು. ಸರಳವೂ ನೇರವೂ ಪ್ರಾಮಾಣಿಕವೂ ಆದ ತಮ್ಮದೇ ಹೊಸ ದಾರಿಯನ್ನು ಅವರು ತುಳಿಯಬೇಕು. ವಂಶಪಾರಂಪರ್ಯದ ವೃತ್ತಿ-ಪ್ರವೃತ್ತಿಯಾಗಿ ತಮಗೆ ದಾಟಿ ಬಂದಿರುವ ರಾಜಕಾರಣವನ್ನು ರಾಹುಲ್ ಮನಸಾರೆ ಬಯಸುತ್ತಾರೆಯೇ? ಅವರ ಆಯ್ಕೆಗೇ ಬಿಟ್ಟಿದ್ದರೆ ಬೇರೆಯದೇ ಆದ ಬದುಕುವ ದಾರಿ ಹಿಡಿಯುತ್ತಿದ್ದರೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲ. ಮನಸಿದ್ದೋ ಮನಸಿಲ್ಲದೆಯೋ ಅವರು ಈ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಹಿಂದೆಂದೂ ಕಾಣದ ಪಾತಾಳಕ್ಕೆ ಕುಸಿದಿದೆ. ಯಥಾಸ್ಥಿತಿವಾದಿ ಶಕ್ತಿಗಳು ಸಮಾಜವನ್ನು ಗತದ ಅಸಮಾನತೆಯ ದಿನಗಳಿಗೆ ಒಯ್ಯುವ ಸನ್ನಾಹದಲ್ಲಿವೆ. ಸಮಾನತೆ ಆಶಯಗಳಿಗೆ ಕುತ್ತು ಒದಗಿದೆ. ರಾಜಕೀಯ ಎದುರಾಳಿಯಾಗಿ ನರೇಂದ್ರ ಮೋದಿಯವರಂತಹ ಪ್ರಚಂಡ ನಾಯಕ ಎತ್ತರಕ್ಕೆ ನಿಂತಿದ್ದಾರೆ. ಕಟ್ಟರ್ ರಾಷ್ಟ್ರವಾದದ ಹೆದ್ದೆರೆಗಳು ಜನಜೀವನವನ್ನು ಅಪ್ಪಳಿಸಿವೆ. ತಮ್ಮನ್ನು ಮತ್ತು ಕಾಂಗ್ರೆಸ್ಸನ್ನು ಮರುಶೋಧನೆಗೆ ಒಡ್ಡಬೇಕು, ಮುರಿದು ಕಟ್ಟಬೇಕಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನು ತಮ್ಮ ಕಾಲದಲ್ಲಾದರೂ ವಂಶಪಾರಂಪರ್ಯದ ನೊಗದಿಂದ ಬಿಡಿಸಬೇಕಿದೆ.

Read More

Comments
ಮುಖಪುಟ

ಕೇಂದ್ರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಕಾಂಗ್ರೆಸ್ ನೋಟಿಸ್

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಅವಕಾಶ ನೀಡುವಂತೆ ಪ್ರತಿಪಕ್ಷ ಕಾಂಗ್ರೆಸ್ ಸಹ ನೋಟಿಸ್ ನೀಡಿದೆ. ಈ ಕುರಿತು ಮನವಿ ಮಾಡಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಟ್ರಂಪ್‌ ಜತೆ ಪ್ರೀತಿಯಾಗಿತ್ತು: ಮಾಜಿ ರೂಪದರ್ಶಿ ಕರೆನ್‌ ಮ್ಯಾಕ್‌ಡೌಗಲ್‌

’ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಪ್ರೀತಿಸುತ್ತಿದ್ದೆ’ ಎಂದು ಮಾಜಿ ಪ್ಲೇಬಾಯ್‌ ರೂಪದರ್ಶಿ ಕರೆನ್‌ ಮ್ಯಾಕ್‌ಡೌಗಲ್‌ ಬಹಿರಂಗಪಡಿಸಿದ್ದಾರೆ.

‘ರಾಜರಥ’ದ ಪ್ರೀತಿಯ ಪಯಣ

ನೆಲ, ಭಾಷೆಯ ಚೌಕಟ್ಟು ಇಟ್ಟುಕೊಂಡು ಅದಕ್ಕೆ ಪ್ರೀತಿಯ ಹೂರಣ ಬೆರೆಸಿದ ಚಿತ್ರಗಳು ಹೊಸತೇನಲ್ಲ. ಒಂದಿಷ್ಟು ಹಾಸ್ಯ ಲೇಪಿಸಿ ಪ್ರೀತಿ ಮತ್ತು ಬದುಕು ಎರಡನ್ನೂ ‘ರಾಜರಥ’ದಲ್ಲಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅನೂಪ್‌ ಭಂಡಾರಿ.

‘ಪ್ರಧಾನಿ ಮೋದಿಯವರ ಕಳೆದುಹೋದ ಅಂಕಪಟ್ಟಿ ಸಿಕ್ಕಿತು!’ ರಮ್ಯಾ ಟ್ವೀಟ್

ಪ್ರಧಾನಿ ನರೇಂದ್ರ ಮೋದಿಯವರ ಕಳೆದುಹೋದ ಅಂಕ ಪಟ್ಟಿ ಸಿಕ್ಕಿದೆ ಎಂದು ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದು, ರಿ‍ಪೋರ್ಟ್ ಕಾರ್ಡ್ ಎಂಬ ಹೆಸರಿನ ಅಂಕಪಟ್ಟಿಯೊಂದನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಪ್ರಧಾನಿಗೆ ‘ಡಿ’ ಶ್ರೇಣಿ ನೀಡಲಾಗಿದ್ದು, ಪಠ್ಯೇತರ ಚಟುವಟಿಕೆ ವಿಭಾಗದಲ್ಲಿ ‘ಹಿಂಸೆ’ ಮತ್ತು ‘ಕೋಮುವಾದ’ವನ್ನು ಆಯ್ದುಕೊಂಡ ಬಗ್ಗೆ ನಮೂದಿಸಲಾಗಿದೆ. 

ಸಂಗತ

ವಚನ: ಹೊಸಧರ್ಮದ ತಳಹದಿಯಾಗಬಲ್ಲುದೇ?

ವೀರಶೈವದಿಂದ ಪ್ರತ್ಯೇಕಗೊಂಡು ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಡುತ್ತಿರುವವರ ಪರವಾಗಿ ಸಂಪುಟ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ವಚನಗಳೇ ಲಿಂಗಾಯತ ಧರ್ಮ ಪ್ರಮಾಣ ಗ್ರಂಥವೆಂದು ಸಚಿವರೊಬ್ಬರು ಹೇಳಿದ್ದಾರೆ.

ಮೌಲ್ಯ... ಜನತಂತ್ರದ ಅಂತಃಸತ್ವ

ಮತದಾನ ಕೆಳಗಿನಿಂದ ಮೇಲ್ಮುಖವಾಗಿ ಚಲಿಸುವ ಪ್ರಕ್ರಿಯೆ. ಮತದಾರರು ತಮ್ಮ ಮತಗಳನ್ನು ಬೆಂಬಲವಾಗಿ ಅಥವಾ ಪ್ರತಿರೋಧದ ಅಸ್ತ್ರಗಳಾಗಿ ಚಲಾಯಿಸುವ ಸ್ವಾಯತ್ತತೆಯನ್ನು ಪಡೆದಿರುತ್ತಾರೆ. ಈ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಅಂಬೇಡ್ಕರ್‌ ಅವರು ‘ಶಿಕ್ಷಣ, ಸಂಘಟನೆ, ಹೋರಾಟ’ ಎಂಬ ಅನುಭವದ ಅರಿವನ್ನು ಬಹುಜನರಿಗೆ ಕಾಣಿಸಿರುವುದನ್ನು ನಾವು ಮನಗಾಣಬಹುದು.

ಪ್ರಣಾಳಿಕೆಯಲ್ಲಿರಲಿ ಕಾಡಿನ ಹಿತ

ಪರಿಸರ ನಾಶದ ವಿರುದ್ಧ ಈ ಚುನಾವಣಾ ಗಳಿಗೆಯಲ್ಲಾದರೂ ಧ್ವನಿ ಎತ್ತಬೇಕಿದೆ.

ಮೈತ್ರಿ ರಾಜಕೀಯದ ಹೊಸ ಹಾದಿ

ಇದೀಗ ಹಲವು ರಾಜಕೀಯ ಪಕ್ಷಗಳ ‘ಕಾಮನಬಿಲ್ಲು ಒಕ್ಕೂಟ’ ಮಾಡಲೆತ್ನಿಸುತ್ತಿರುವ ಕಾಂಗ್ರೆಸ್, ತನ್ನ ಅಖಿಲ ಭಾರತೀಯ ಪಾರ್ಟಿಯ ಹಮ್ಮು ಬಿಟ್ಟು ಬಾಗಿದರೆ ಮಾತ್ರ ಮುಂಬರುವ ಮಹಾಚುನಾವಣೆಯಲ್ಲಿ ಹೊಸ ಹಾದಿ ಕಂಡೀತು!

ಚಂದನವನ

ನೃತ್ಯ, ನಟನೆ ಮತ್ತು ಮಾನಸಾ

ಕಲಾರಾಧಕರ ಕುಟುಂಬದಿಂದ ಬಂದ ಕೃಷ್ಣಸುಂದರಿ ಓದಿದ್ದು ಪತ್ರಿಕೋದ್ಯಮವಾದರೂ ಬದುಕು ಕಟ್ಟಿಕೊಂಡಿದ್ದು ನಟನಾ ರಂಗದಲ್ಲಿ. ಮನೆಯವರ ಬೆಂಬಲದ ನಡುವೆ ನಟನೆಯಲ್ಲಿಯೇ ಸಾಧನೆಯ ಕನಸು ಕಾಣುತ್ತಿದ್ದಾರೆ...

ಕ್ರೀಡಾಪಟು ಖಳನಟನಾದ ಕಥೆ

ಚೆಲುವರಾಜ್‌ ಅವರದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ. ರಾಷ್ಟ್ರಮಟ್ಟದ ವಾಲಿಬಾಲ್‌ ಆಟಗಾರನಾಗಿದ್ದ ಅವರು ನಟನಾ ಕ್ಷೇತ್ರ ಪ್ರವೇಶಿಸಿದ್ದು ಆಕಸ್ಮಿಕ. ಕಿರುತೆರೆಯಲ್ಲಿ ಖಳನಟನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅವರು ಪೊಲೀಸ್‌ ಅಧಿಕಾರಿಯಾಗಿ ನಟಿಸಿರುವ ‘ಸಮರ್ಥ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

‘ರಾಜರಥ’ದ ಸವಾರಿ

‘ರಾಜರಥ’ ಬಸ್‌ನ ಕಥೆ. ಕನ್ನಡದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಬಸ್‌ಗೆ ಧ್ವನಿಯಾಗಿದ್ದಾರೆ. ತೆಲುಗಿನಲ್ಲಿ ರಾ.ನಾ. ದಗ್ಗುಬಾಟಿ ಧ್ವನಿ ನೀಡಿದ್ದಾರೆ. ಇದು ಕೌಟುಂಬಿಕ ಚಿತ್ರ. ಕಾಲೇಜು ಹುಡುಗ ಮತ್ತು ಹುಡುಗಿಯ ನಡುವೆ ನಡೆಯುವ ಕಥನ’ ಎಂದು ವಿವರಿಸಿದರು ಅನೂಪ್.

‘ವರ್ತಮಾನ’ಕ್ಕೆ ಭವಿಷ್ಯದಲ್ಲಿ ನಂಬಿಕೆ!

ವರ್ತಮಾನ’ದ ಮಹತ್ವ, ಅದನ್ನು ಬದುಕಬೇಕಾದ ರೀತಿ, ಅದನ್ನು ಅರ್ಥಮಾಡಿಕೊಳ್ಳಬೇಕಾದ ಬಗೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಉಮೇಶ್ ಅಂಶಿ. ಅದರ ಹೆಸರೂ ‘ವರ್ತಮಾನ’.