ಮೆನನ್‌ ಮತ್ತು ಮಾಲಿವುಡ್‌ ಮೌನ

7 Jan, 2018
ಚೇತನಾ ತೀರ್ಥಹಳ್ಳಿ

ಪುರುಷ ಪ್ರಧಾನವೇ ಆದರೂ ನಮ್ಮ ಸಮಾಜದ ಒಂದು ಚಿಕ್ಕ ಭಾಗ ಹೆಣ್ಣು ಮಾತಾಡಲೆಂದು ಬಯಸುತ್ತದೆ. ಅದಕ್ಕೆ ತಾನೇ ಬೆನ್ನುತಟ್ಟಿ ಪ್ರೋತ್ಸಾಹವನ್ನೂ ಕೊಡುತ್ತದೆ. ಆದರೆ, ಚಿಕ್ಕ ಭಾಗದೊಳಗೂ ಒಂದು ‘ಗಂಡು ಮನಸ್ಥಿತಿ’ ಇದೆಯಲ್ಲ, ಅದು ಹೆಣ್ಣು ಏನನ್ನು ಮಾತಾಡಬೇಕು, ಎಷ್ಟು ಮಾತಾಡಬೇಕು ಅನ್ನುವುದನ್ನು ನಿರ್ಧರಿಸುತ್ತ ಇರುತ್ತದೆ. ಆ ಕಾರಣಕ್ಕೇ ಬಹುಶಃ ಹೆಣ್ಣುಗಳು ರಾಜಕಾರಣ, ಕೋಮುವಾದ, ಫ್ಯಾಸಿಸಂ ಎಂದೆಲ್ಲ ಮಾತಾಡಿ; ಧರ್ಮ, ಸಂಸ್ಕೃತಿ, ರಾಷ್ಟ್ರಪ್ರೇಮ ಅಂತೆಲ್ಲ ಭಾಷಣ ಬಿಗಿದು ಟ್ರೋಲ್‍ಗೆ ಒಳಗಾದಾಗ ಆಯಾ ಚಿಂತನೆಗಳ ಸಮರ್ಥಕರು ಅಖಾಡಕ್ಕೆ ಇಳಿಯುತ್ತಾರೆ.

ಮಾತನಾಡುವ ಹೆಣ್ಣುಮಗಳ ಪರವಹಿಸಿ ವಾಗ್ಯುದ್ಧವನ್ನೇ ಘೋಷಿಸಿ ಬಿಡುತ್ತಾರೆ. ಆದರೆ, ಅದೇ ಹೆಣ್ಣುಗಳು ಒಟ್ಟು ಸಮಾಜದೊಳಗೆ ಹಾಸುಹೊಕ್ಕಾಗಿರುವ ಸ್ತ್ರೀದ್ವೇಷದ ವಿರುದ್ಧ, ಗಂಡಸರ ಶೋಷಣೆ ವಿರುದ್ಧ, ದಬ್ಬಾಳಿಕೆ ವಿರುದ್ಧ ಮಾತಾಡಿದಾಗ ಅವರ ಬೆಂಬಲಕ್ಕೆ ಬರುವವರು ಬೆರಳೆಣಿಕೆಯಷ್ಟು ಜನ. ಗಂಡಸರ ಅಸೂಕ್ಷ್ಮತೆ, ಸಂವೇದನಾಹೀನತೆ ನಮ್ಮ ಸಮಾಜಕ್ಕೊಂದು ಚರ್ಚೆಯ ವಸ್ತುವೇ ಅಲ್ಲ. ಅವನ್ನು ಪ್ರಶ್ನಿಸಲು ಹೆಣ್ಣುಮಕ್ಕಳಿಗೆ ಅಧಿಕಾರವೂ ಇಲ್ಲ. ಅದು ಅವಶ್ಯಕವೂ ಅಲ್ಲ! ಬೆನ್ನುತಟ್ಟಿ ಪ್ರೋತ್ಸಾಹಿಸುವ ‘ಚಿಕ್ಕ ಭಾಗ’ವೂ ಕೂಡ ಈ ವಿಷಯದಲ್ಲಿ ನಿರ್ಲಿಪ್ತ. ಸ್ತ್ರೀಯರನ್ನು ಮೊದಲ ದರ್ಜೆಯ ಮನುಷ್ಯರನ್ನಾಗಿ ಕಾಣದ ಹೊರತು ಸಮಾಜೋರಾಜಕೀಯ ಸುಧಾರಣೆ ಸಾಧ್ಯವೆ? ಸ್ತ್ರೀಸಮಾನತೆ, ಸ್ವಾತಂತ್ರ್ಯ ಕುರಿತು ಮಾತನಾಡುವ ಗಂಡಸರು ಪ್ರಾಯೋಗಿಕವಾಗಿ ಅದನ್ನು ಎತ್ತಿ ಹಿಡಿಯುವ ಸಂದರ್ಭ ಬಂದಾಗ ಕಣ್ಣು ಮುಚ್ಚಿಕೊಳ್ಳುವುದು ಯಾಕೆ?

ಕೇರಳದ ಬಹುಭಾಷಾ ನಟಿ ಪಾರ್ವತಿ ಮೆನನ್ ಅವರು ಸದ್ಯಕ್ಕೆ ಅನುಭವಿಸುತ್ತಿರುವ ಪರಿಸ್ಥಿತಿ ಈ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ. ಪಾರ್ವತಿ ಮೆನನ್ ಟ್ರೋಲ್‍ಗೆ ಒಳಗಾಗಿದ್ದು, ದೂರಿನನ್ವಯ ಟ್ರೋಲರ್‌ಗಳಲ್ಲಿ ಒಬ್ಬನನ್ನು ಬಂಧಿಸಿ ಪೊಲೀಸರು ಜೈಲಿಗೆ ತಳ್ಳಿದ್ದು, ಇವೆಲ್ಲ ಈಗಾಗಲೇ ಸುದ್ದಿಯಾಗಿರುವ ಸಂಗತಿಗಳು.

ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪಾರ್ವತಿ ಮೆನನ್, ಈ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕೆಂದು ಪ್ರತಿಪಾದಿಸುತ್ತಾ, ‘ದುರದೃಷ್ಟವಶಾತ್ ನಾನೊಂದು ಸಿನಿಮಾ ನೋಡಿದೆ. ಇಷ್ಟೊಂದು ಸ್ತ್ರೀದ್ವೇಷವನ್ನು ನಮ್ಮ ಸಿನಿಮಾಗಳಲ್ಲಿ ಯಾಕೆ ತೋರಿಸಲಾಗುತ್ತೆ? ನನಗೆ ವಿಪರೀತ ನಿರಾಶೆಯಾಯಿತು’ ಎಂದು ಪ್ರತಿಕ್ರಿಯಿಸಿದ್ದರು.

ಎಷ್ಟೇ ಇಲ್ಲವೆಂದರೂ ಜನರು ಸಿನಿಮಾಗಳಿಂದ, ಅದರಲ್ಲೂ ತಾವು ಆರಾಧಿಸುವ ಸ್ಟಾರ್‌ಗಳಿಂದ ಪ್ರಭಾವಿತರಾಗುತ್ತಾರೆ. ಇಂತಹ ಸಂಭಾಷಣೆಗಳು ದುಷ್ಪರಿಣಾಮ ಬೀರುತ್ತವೆ ಮತ್ತು ಸಮಾಜಕ್ಕೊಂದು ಕೆಟ್ಟ ಸಂದೇಶ ನೀಡುತ್ತವೆ ಅನ್ನೋದು ಅವರ ಕಳಕಳಿಯಾಗಿತ್ತು. ಸಿನಿಮಾ ತಂಡ ಹಾಗೂ ನಟರ ಬಗ್ಗೆ ಗೌರವವಿಟ್ಟುಕೊಂಡೇ ಈ ಆಕ್ಷೇಪ ಎಂದೂ ಅವರು ಸ್ಪಷ್ಟಪಡಿಸಿದ್ದರು. ಅವರು ಹೇಳಿದ್ದು, ಕಳೆದ ವರ್ಷ ಬಿಡುಗಡೆಯಾದ ‘ಕಸಬಾ’ ಚಿತ್ರದ ಬಗ್ಗೆ.

ಮೆನನ್ ಹೇಳಿಕೆಯಲ್ಲಿ ಯಾವ ಪ್ರಮಾದವೂ ಇರಲಿಲ್ಲ. ಆದರೆ ಕಸಬಾ ಚಿತ್ರದ ನಾಯಕ ನಟ ಮಮ್ಮುಟ್ಟಿಯ ಉಗ್ರಾಭಿಮಾನಿಗಳು ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಹಿಸಲಿಲ್ಲ. ಆಕೆಯ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳುವುದಿರಲಿ, ಆಕೆಯ ಹೇಳಿಕೆಯನ್ನು ಕೇಳದೆ ಪ್ರತಿಕ್ರಿಯಿಸಿದವರ ಸಂಖ್ಯೆಯೇ ಬಹಳವಿತ್ತು! ಟ್ವಿಟರ್, ಫೇಸ್‍ಬುಕ್‌ನಲ್ಲಿ ಪಾರ್ವತಿ ಮೆನನ್ ಮೇಲೆ ಅವಾಚ್ಯ, ಅಶ್ಲೀಲ ಟ್ರೋಲ್‍ಗಳ ಸುರಿಮಳೆ. ಸಿ.ಎಸ್. ಪಿಂಟೋ ಎಂಬಾತನಂತೂ ಆಕೆಯ ಮುಖಕ್ಕೆ ಆಸಿಡ್ ಎರಚಿ ಅತ್ಯಾಚಾರ ಮಾಡುವುದಾಗಿ ಬರೆದುಕೊಂಡಿದ್ದ.

ಪಾರ್ವತಿ ಮೆನನ್

ಪಾರ್ವತಿ ಮೆನನ್ ವಿಶ್ವಾಸ ಕುಗ್ಗಿ ಸುಮ್ಮನೆ ಕೂರಲಿಲ್ಲ. ಟ್ರೋಲ್‍ಗಳನ್ನು ತೆಗೆದುಕೊಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪಿಂಟೋನ ಬಂಧನವೂ ಆಯಿತು. ಇತ್ತೀಚೆಗೆ ‘ವಿಮೆನ್ ಇನ್ ಸಿನಿಮಾ ಕಲೆಕ್ಟಿವ್’ (ಡಬ್ಲ್ಯು.ಸಿ.ಸಿ.) ಹೆಸರಲ್ಲಿ ಸಂಘಟಿತರಾಗಿರುವ ಮಲಯಾಳಂ ಚಿತ್ರರಂಗದ ನಟಿಯರು ಮೆನನ್ ಬೆನ್ನಿಗೆ ಅಷ್ಟಿಷ್ಟು ನಿಂತರು. ಆದರೆ, ಈ ಒಟ್ಟು ಸನ್ನಿವೇಶದಲ್ಲಿ ಮಲಯಾಳಂ ಚಿತ್ರರಂಗದ ‘ಗಂಡಸರು’ ನಡೆದುಕೊಂಡ ರೀತಿ ಒಟ್ಟು ಸಮಾಜದ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು. ಇದರಲ್ಲಿ ಸ್ವತಃ ಮಮ್ಮುಟ್ಟಿಯೂ ಸೇರಿದ್ದಾರೆ ಅನ್ನುವುದು ಮತ್ತಷ್ಟು ಬೇಸರದ ಸಂಗತಿ.

ಪಾರ್ವತಿ ಮೆನನ್ ಹೇಳಿಕೆಗೆ ಅಂಧಾಭಿಮಾನಿಗಳು ಅಸಹ್ಯಕರ ಪ್ರತಿಕ್ರಿಯೆಗಳನ್ನು ಕಾರತೊಡಗಿದಾಗ, ಅವರು ಆಕೆ ಹೇಳಿದ ಮಾತುಗಳನ್ನು ಸಾಬೀತು ಮಾಡುತ್ತಿದ್ದರೇ ಹೊರತು ಮತ್ತೇನಲ್ಲ. ತಾವು ಆರಾಧಿಸುವ ನಟ ತೆರೆಯ ಮೇಲೆ ಮಹಿಳಾ ಪೊಲೀಸ್ ಪಾತ್ರಧಾರಿಗೆ ‘ಬಾರಿಸಿದರೆ ಮುಟ್ಟಿನ ರಕ್ತ ಒಸರಬೇಕು’ ಅನ್ನುವಂಥ ಸಂಭಾಷಣೆ ಹೇಳುವಾಗ, ಅಂಧಾಭಿಮಾನಿಗಳು ಅತ್ಯಾಚಾರದ ಮಾತನ್ನಾಡುವುದು ಅಚ್ಚರಿಯ ಸಂಗತಿಯೇನಲ್ಲ.

ಆದರೆ, ಮಮ್ಮುಟ್ಟಿ ನಟಿಸಿದ್ದು ನಾಯಕ ಪಾತ್ರದಲ್ಲಿ. ಹಿರಿಯ, ಗೌರವಾನ್ವಿತ ನಟರಾಗಿ ಮಮ್ಮುಟ್ಟಿ ಅವರಿಗೆ ಅಂತಹ ಸಂಭಾಷಣೆಗಳನ್ನು ಹೇಳಲು ನಿರಾಕರಿಸುವ ಎಲ್ಲ ಸ್ವಾತಂತ್ರ್ಯವೂ ಇತ್ತು. ಕೊನೆಪಕ್ಷ ಪಾರ್ವತಿ ಮೆನನ್ ಮೇಲೆ ಅಶ್ಲೀಲ ಟ್ರೋಲ್ ದಾಳಿ ನಡೆಯುವಾಗ ಅವರು ಮಧ್ಯಪ್ರವೇಶಿಸಬಹುದಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಒಂದಷ್ಟು ಚರ್ಚೆ ನಡೆದ ನಂತರ ಮಮ್ಮುಟ್ಟಿ, ವೆಬ್‍ಸೈಟ್ ಒಂದಕ್ಕೆ ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವುದು ನನ್ನ ಜವಾಬ್ದಾರಿಯಲ್ಲ’ ಎಂದು ಉತ್ತರಿಸಿದ್ದರು!

ತಮ್ಮ ಕ್ಷೇತ್ರದ ಹೆಣ್ಣುದನಿಗೆ ಮಾಲಿವುಡ್‍ನ ಗಂಡುಗಳು ಸೂಕ್ಷ್ಮವಾಗಿ ಕಿವಿಗೊಡಬೇಕಿತ್ತು. ಆಗಿದ್ದು ತದ್ವಿರುದ್ಧ. ಕಸಬಾ ಚಿತ್ರದ ನಿರ್ದೇಶಕ ನಿತಿನ್ ರೆಂಜಿ ಪಣಿಕ್ಕರ್, ನಿರ್ಮಾಪಕ ಜೊಬಿ ಜಾರ್ಜ್, ಮತ್ತೊಬ್ಬ ನಿರ್ದೇಶಕ ಜ್ಯೂಡ್ ಆಂಥೋನಿ ಜೋಸೆಫ್, ಹಿರಿಯ ನಟ ಸಿದ್ದಿಕ್ ಮೊದಲಾದ ಘಟಾನುಘಟಿಗಳೂ ಪಾರ್ವತಿ ಮೆನನ್‍ ಅವರನ್ನು ಟ್ರೋಲ್ ಮಾಡುವಲ್ಲಿ ಹಿಂದೆ ಬೀಳಲಿಲ್ಲ.

ಕೇರಳ, ಹೊರ ನಿಂತು ನೋಡುವಾಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ರಾಜ್ಯ. ಹೊರ ರಾಜ್ಯಗಳ ದಮನಿತ ದನಿಗಳಿಗೆ ಕೇರಳದಲ್ಲಿ ವೇದಿಕೆ ದೊರೆಯುತ್ತದೆ. ಆದರೆ, ಖುದ್ದು ಕೇರಳದ ಹೆಣ್ಣುಮಗಳು ಆಡಲೇಬೇಕಾಗಿದ್ದ ಮಾತುಗಳನ್ನು ಆಡಿದಾಗಲೂ ಆಕೆಗೆ ರಾಜಕೀಯ ಅಥವಾ ಸಾಮಾಜಿಕ ಬೆಂಬಲ ಯಾಕೆ ದೊರೆಯಲಿಲ್ಲ? ಸಿನಿಮಾ ಕ್ಷೇತ್ರದಲ್ಲಿ ಹೆಣ್ಣುಮಕ್ಕಳ ಪಾಲ್ಗೊಳ್ಳುವಿಕೆಯ ಕಳಕಳಿಯೊಂದಿಗೆ, ತೆರೆಯ ಮೇಲೆ ಹೆಣ್ಣನ್ನು ಬಿಂಬಿಸುವ ಬಗ್ಗೆ ಪಾರ್ವತಿ ಮೆನನ್ ಪ್ರಶ್ನೆ ಎತ್ತಿದ್ದರು. ಅದಕ್ಕೆ ಹರಿದುಬಂದ ಪ್ರತಿಕ್ರಿಯೆಗಳು ಖಂಡಿತ ನಗಣ್ಯವಲ್ಲ.

ಪ್ರಕಾಶ್ ರಾಜ್, ಕಮಲ್ ಹಾಸನ್, ವಿಜಯ್ ಈ ಹಿಂದೆ ವಿವಿಧ ಕಾರಣಗಳಿಗೆ ಟ್ರೋಲ್ ಹಾಗೂ ಬೆದರಿಕೆ ಎದುರಿಸಿದ್ದಂತೆಯೇ ಮೆನನ್ ಕೂಡ ಎದುರಿಸಿದರು. ಆದರೆ, ಆ ನಟರಿಗೆ ನೀಡಿದ ಬೆಂಬಲವನ್ನು ಕೇರಳದ ರಾಜಕೀಯ ಹಾಗೂ ಸಾಮಾಜಿಕ ವಲಯಗಳು ಪಾರ್ವತಿಗೆ ನೀಡಲಿಲ್ಲ ಯಾಕೆ? ಪ್ರಜ್ಞಾವಂತಿಕೆ ಅಂದರೆ ನಿರ್ದಿಷ್ಟ ಸಂಗತಿ ಬಗ್ಗೆ ಚರ್ಚೆ ಮಾಡುವುದು ಮಾತ್ರವೇ? ಫ್ಯಾಸಿಸಂನಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಹಾನಿಕಾರಕವಾದ, ಸಮಾಜೋರಾಜಕೀಯ ವಿಪ್ಲವಗಳನ್ನು ತಂದೊಡ್ಡುವ ‘ಪೌರುಷ ನಡವಳಿಕೆ’ಯ ವಿಷಯ ಬಂದಾಗ ಬುದ್ಧಿಜೀವಿಗಳು ಮೌನದ ಮೊರೆ ಹೋಗುವುದು ಯಾಕೆ?

ಕುರುಡು ಅಭಿಮಾನಿಗಳಿಗಿಂತ ಜಾಣಕುರುಡರ ಮೌನ ಈ ಹೊತ್ತು ಚರ್ಚೆಯಾಗಬೇಕಿದೆ. ಪಾರ್ವತಿ ಮೆನನ್ ವಿಷಯದಲ್ಲಿ ಹೊಮ್ಮಿದ ಈ ಪ್ರತಿಕ್ರಿಯೆ ಸಿನಿಮಾ ರಂಗದ ಹೆಣ್ಣುಗಳನ್ನು ಒಂದಷ್ಟು ಅಭದ್ರತೆಗೆ ನೂಕುವುದಂತೂ ಖಚಿತ.

Read More

Comments
ಮುಖಪುಟ

ಮತಯಂತ್ರ ಮತ್ತೆ ಆಕ್ಷೇಪ

ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ವ್ಯವಸ್ಥೆಯನ್ನು ಕಾಪಾಡಲು ಚುನಾವಣಾ ಆಯೋಗವು ಎಲೆಕ್ಟ್ರಾನಿಕ್‌ ಮತಯಂತ್ರಗಳ (ಇವಿಎಂ) ಬಳಕೆಯನ್ನು ಕೈಬಿಡಬೇಕು ಎಂದು ಎಐಸಿಸಿ ಮಹಾ ಅಧಿವೇಶನ ಮಹತ್ವದ ರಾಜಕೀಯ ನಿರ್ಣಯ ಕೈಗೊಂಡಿದೆ.

ದೇಹವೆಂಬ ರಿಯಲ್ ಎಸ್ಟೇಟ್, ಮಿದುಳು ಎಂಬ ಚಿನ್ನ!

ನಿಮ್ಮ ಕೋಪವನ್ನು ನಿಮ್ಮ ಹಿಡಿತದಲ್ಲಿ ಹಿಡಿಯೋಕೆ ಸಾಧ್ಯ ಆದ್ರೆ, ನಿಮ್ಮ ಎಮೋಷನ್‌ ಬಗ್ಗೆ ನಿಮಗೆ ಬ್ಯಾಲೆನ್ಸ್ ಇದ್ರೆ, ಎಲ್ಲಾ ಬ್ಯಾಂಕ್‌ ಬ್ಯಾಲೆನ್ಸ್‌ಗಿಂತ ಅದು ದೊಡ್ಡದಾಗುತ್ತೆ.

ಪೊಲೀಸ್ ಇಲಾಖೆಯಲ್ಲಿ 25,784 ಸಿಬ್ಬಂದಿ ಕೊರತೆ!

ರಾಜ್ಯ ಪೊಲೀಸ್ ಇಲಾಖೆಯಲ್ಲಿ 25,784 ಹುದ್ದೆಗಳು ಖಾಲಿ ಇದ್ದು, ಸಿಬ್ಬಂದಿ ಕೊರತೆಯು ಠಾಣೆಗಳ ದೈನಂದಿನ ಕಾರ್ಯವೈಖರಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಟ್ವೀಟ್‌ ವಿವಾದ: ಹರ್ಷ ಮೊಯಿಲಿಗೆ ನೋಟಿಸ್‌

ಪಕ್ಷದ ಟಿಕೆಟ್‌ ಹಂಚಿಕೆ ಕುರಿತಂತೆ ಟ್ವೀಟ್ ಮಾಡಿ ಮುಜುಗರ ಉಂಟು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಮುಖಂಡ ವೀರಪ್ಪ ಮೊಯಿಲಿ ಪುತ್ರ ಹರ್ಷ ಮೊಯಿಲಿಗೆ ರಾಜ್ಯ ಕಾಂಗ್ರೆಸ್‌ ಶನಿವಾರ ರಾತ್ರಿ ನೋಟಿಸ್‌ ಜಾರಿ ಮಾಡಿದೆ.

ಸಂಗತ

ಮೈತ್ರಿ ರಾಜಕೀಯದ ಹೊಸ ಹಾದಿ

ಇದೀಗ ಹಲವು ರಾಜಕೀಯ ಪಕ್ಷಗಳ ‘ಕಾಮನಬಿಲ್ಲು ಒಕ್ಕೂಟ’ ಮಾಡಲೆತ್ನಿಸುತ್ತಿರುವ ಕಾಂಗ್ರೆಸ್, ತನ್ನ ಅಖಿಲ ಭಾರತೀಯ ಪಾರ್ಟಿಯ ಹಮ್ಮು ಬಿಟ್ಟು ಬಾಗಿದರೆ ಮಾತ್ರ ಮುಂಬರುವ ಮಹಾಚುನಾವಣೆಯಲ್ಲಿ ಹೊಸ ಹಾದಿ ಕಂಡೀತು!

ಡಿಜಿಟಲ್ ಮಾರುಕಟ್ಟೆ ಗ್ರಾಹಕಸ್ನೇಹಿಯೇ?

ಇಂದು ಅಂತರರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ. ‘ಡಿಜಿಟಲ್ ಮಾರುಕಟ್ಟೆಯನ್ನು ನ್ಯಾಯಸಮ್ಮತವಾಗಿಸುವುದು’ ಈ ವರ್ಷದ ಘೋಷವಾಕ್ಯ

ಕನ್ನಡ ಮಾಧ್ಯಮಕ್ಕೂ ಇರಲಿ ಬದ್ಧತೆ

ನಾಡಧ್ವಜದ ಮೂಲಕ ಸರ್ಕಾರವು ನಾಡು- ನುಡಿಯ ಅಭಿಮಾನವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲೆತ್ನಿಸುತ್ತಿರುವುದು ವಿಷಾದನೀಯ.

ನಾಡ ಧ್ವಜವೋ ಕನ್ನಡ ಧ್ವಜವೋ!

ರಾಜ್ಯಗಳಿಗೂ ಪ್ರತ್ಯೇಕ ಅಧಿಕೃತ ಧ್ವಜ ಬೇಕು ಎಂದಾದರೆ, ರಾಜ್ಯದ ಗಡಿಗಷ್ಟೇ ಈ ‘ಪ್ರಾದೇಶಿಕ ಅಸ್ಮಿತೆ’ಯ ಪ್ರಶ್ನೆ ಏಕೆ ಸೀಮಿತವಾಗಬೇಕು?

ಮುಕ್ತಛಂದ

ಹಸಿರಿನ ಹಬ್ಬ ಯುಗಾದಿ

ಭಾವ– ಸ್ಫೂರ್ತಿ– ಚೇತನವಾಗಿ ನಿಸರ್ಗದ ಕಣಕಣವೂ ನಮ್ಮೊಳಗೆ ಇಳಿದಿದೆ. ಪ್ರಕೃತಿ ಮತ್ತು ಮನುಷ್ಯನ ಸಮೀಕರಣದ ಈ ಬಾಳ್ವೆಯು ಅಮೂರ್ತವಾದ ಕಾಲದ ಸ್ಪರ್ಶಕ್ಕೆ ಮಾಗುವ ಪರಿ ನಿತ್ಯ ಬೆರಗು... ಯುಗಾದಿಯಂತೆ.

ಆಲಾಪವೂ ಸೂಫಿ ಸಂತರ ದರ್ಗಾವೂ

ಉರಿ ಉರಿವ ಸೂರ್ಯನಡಿ ಕಣ್ಣು ಚುಚ್ಚುವ ಬೆಳಕ ಕಿರಣದ ಅಡಿಯಲ್ಲಿ ಒಳಗೇ ಬೆಂದು ಬಸವಳಿದು ಓಡಾಡುವವರ ಜೀವಸ್ವರ. ಹುಚ್ಚು ಹೆಚ್ಚಾದ ಹೆಣ್ಣುಗಳನ್ನು ಅಲ್ಲಿ ಕೂಡಿಹಾಕಿರುತ್ತಾರೆ. ಆನಂತರ ದೇವರ ಹರಕೆಯಿಂದ ಸುಧಾರಿಸಿದ ನಂತರ ಅವರನ್ನು ಹೊರಬಿಡಲಾಗುತ್ತದೆ.

ನಗೆಯುಕ್ಕಿಸಿದ ‘ಗುಗ್ಗು’ವಿಗೆ ನೂರು...

ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕಾದ ಹಲವು ನಟರನ್ನು ಕನ್ನಡ ಚಿತ್ರರಂಗ ನೀಡಿದೆ. ಅಂಥವರಲ್ಲಿ ಒಬ್ಬರು ‘ಗುಗ್ಗು’. ತಂದೆಯ ಅಂಗಡಿಯ ಗಲ್ಲಾಪೆಟ್ಟಿಗೆಯಿಂದ ಚಿತ್ರರಂಗದವರೆಗಿನ ಅವರ ಯಾನವನ್ನು ಈ ಬರಹದಲ್ಲಿ ಕಟ್ಟಿಕೊಡಲಾಗಿದೆ. ಕನ್ನಡ ಚಿತ್ರಗಳನ್ನು ನೋಡುತ್ತ ಬಳೆದ ಒಂದು ತಲೆಮಾರಿನವರಿಗೆ ‘ಗುಗ್ಗು’ವಿನ
ನೆನಪನ್ನು ಮತ್ತೆ ತರಿಸುವಂತಿದೆ ಈ ಲೇಖನ...

ತೆಳ್ಳಗಿನ ಬಂಗಲೆ

ಅತಿ ನಾಜೂಕಿನ, ತುಸು ಹಳೆಯದಾಗಿ ತೋರುವ ಒಂದು ಸುಂದರ ಬಂಗಲೆ. ಕಟ್ಟಿಸಿದವರು ಊರಲ್ಲಿಲ್ಲ. ಇರುವಲ್ಲಿಂದಲೇ ಪ್ಲ್ಯಾನ್ ಕಳುಹಿಸಿಕೊಟ್ಟು ಕಟ್ಟಿಸಿದ್ದು. ಪಾಶ್ಚಿಮಾತ್ಯರ ಶೈಲಿ. ಕಪ್ಪು ಕಲ್ಲಿನ ಗೋಡೆ. ಭಾರತದ ಮನೆಗಳ ಹಾಗೆ ಗಾಳಿ ಮಳೆಗಳನ್ನು ಧಿಕ್ಕರಿಸುವ ಜಾಯಮಾನದ್ದಲ್ಲ.