ಬ್ಯಾಂಕ್ ಲಾಕರ್ ಬಳಕೆ: ಇರಲಿ ಎಚ್ಚರ

10 Jan, 2018
ರವೀಂದ್ರನಾಥ

ಬ್ಯಾಂಕ್‌ಗಳು ನೀಡುವ ಸೇವೆಗಳ ಪೈಕಿ ಲಾಕರ್‌ಗಳನ್ನು ಬಾಡಿಗೆಗೆ ನೀಡುವುದೂ ಒಂದು ಪ್ರಮುಖ ಸೇವೆಯಾಗಿರುತ್ತದೆ. ಈ ವಹಿವಾಟಿನಿಂದ ಬ್ಯಾಂಕುಗಳು ಸಾಕಷ್ಟು ಲಾಭ ಗಳಿಸುತ್ತವೆ. ಗ್ರಾಹಕರು ಈ ಸೇವೆ ಪಡೆಯಲು ದುಬಾರಿ ಸೇವಾಶುಲ್ಕಗಳನ್ನು ತೆರಲು ಸಿದ್ದರಾಗಿರುತ್ತಾರೆ. ಗ್ರಾಹಕರಲ್ಲಿ ಈ ಸೇವೆಯ ಬಗ್ಗೆ ಹೆಚ್ಚಿನ ಅರಿವು ಇರುವುದಿಲ್ಲ. ಲಾಕರ್‌ಗಳನ್ನು ಸುರಕ್ಷಿತವಾಗಿ ಬಳಸಲು ಗ್ರಾಹಕರು ಕೆಲವು ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ.

ಲಾಕರ್‌ಗಳು ಎಂದರೆ ಒಂದು ಕಬ್ಬಿಣದ ದೊಡ್ಡ ಕ್ಯಾಬಿನೆಟ್‌ನಲ್ಲಿ ಹಲವಾರು ಗಾತ್ರಗಳ ಡಬ್ಬಿಗಳು /ಕಂಪಾರ್ಟ್ ಮೆಂಟ್‌ಗಳು ಇರುತ್ತವೆ. ಈ ಕ್ಯಾಬಿನೆಟ್ ಅನ್ನು ಒಂದು ಪ್ರತ್ಯೇಕವಾದ ಕೋಣೆಯಲ್ಲಿ ಇರಿಸಲಾಗುತ್ತದೆ. ಈ ಕೋಣೆಗೆ ಭದ್ರವಾದ ಬಾಗಿಲುಗಳನ್ನು ಅಳವಡಿಸಲಾಗುತ್ತದೆ. ಈ ಕೋಣೆಯಲ್ಲಿ ಒಳಗೆ ಹೋಗಲು ಆಧಿಕೃತ ವ್ಯಕ್ತಿಗಳಿಗೆ ಮಾತ್ರ ಅನುಮತಿ ಇರುತ್ತದೆ. ಲಾಕರ್ ಸೇವೆಗಳನ್ನು, ಗ್ರಾಹಕರ ಕೋರಿಕೆ ಮೇರೆಗೆ, ಹಲವು ಷರತ್ತುಗಳಿಗೆ ಒಳಪಟ್ಟು ಲಭ್ಯವಿದ್ದಲ್ಲಿ ಮಾತ್ರ ನೀಡಲಾಗುತ್ತದೆ. ಈಗಿರುವ ನಿಯಮಗಳ ಪ್ರಕಾರ ಬ್ಯಾಂಕ್ ಲಾಕರ್ ಸೇವೆಯನ್ನು ಬ್ಯಾಂಕ್‌ಗಳು ಬಾಡಿಗೆ ಆಧಾರದ ಮೇಲೆ ನೀಡುತ್ತವೆ.

ಬಾಡಿಗೆದಾರನು ಮೊದಲ ಬಾರಿಗೆ ಲಾಕರ್‌ ಪಡೆಯುವಾಗ ಅವರಿಗೆ ಲಾಕರ್‌ನ ಒಂದು ಕೀಲಿ ಕೈ ನೀಡಲಾಗುತ್ತದೆ. ಜೊತೆಗೆ ಬಾಡಿಗೆದಾರನು ತನ್ನನ್ನು ಗುರುತಿಸಲು ಅನುವಾಗುವಂತೆ ಪಾಸ್ ವರ್ಡ್ ನೀಡಬೇಕು ಹಾಗೂ ಅಂತಹ ಪಾಸ್ ವರ್ಡ್ ಸಂಕೇತವನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಈಗಿನ ನಿಯಮಗಳ ಪ್ರಕಾರ ಬ್ಯಾಂಕ್‌ಗಳು, ತಮ್ಮ ಎಲ್ಲಾ ಗ್ರಾಹಕರನ್ನು ಕನಿಷ್ಠ ಆಪತ್ತು, ಮಧ್ಯಮ ಆಪತ್ತು ಮತ್ತು ಗರಿಷ್ಠ ಆಪತ್ತು ಎಂದು ವರ್ಗೀಕರಿಸಬೇಕಾಗುತ್ತದೆ. ಇದೇ ಮಾದರಿಯಲ್ಲಿ ಲಾಕರ್ ಗಳನ್ನು ಬಾಡಿಗೆ ನೀಡುವಲ್ಲಿನ ಆಪತ್ತುಗಳನ್ನು ಗಣನೆಗೆ ತೆಗೆದುಕೊಂಡು ಪ್ರತಿಯೊಬ್ಬ ಬಾಡಿಗೆದಾರರನ್ನು ಮಧ್ಯಮ ಆಪತ್ತು ಅಥವಾ ಗರಿಷ್ಠ ಆಪತ್ತು ಎಂದು ವರ್ಗಿಕರಿಸಲಾಗುತ್ತದೆ.

ಲಾಕರ್ ಒಳಗೆ ಯಾವ ವಸ್ತುಗಳನ್ನು ಇಡಬಹುದು ಎಂಬುದರ ಬಗ್ಗೆ ಯಾವುದೇ ನಿಯಂತ್ರಣವಿಲ್ಲ. ಕಾನೂನು ಉಲ್ಲಂಘನೆಯಾಗದಂತೆ ಯಾವುದೇ ವಸ್ತುಗಳನ್ನು ಲಾಕರ್‌ಗಳಲ್ಲಿ ಇಡಲು ಬಾಡಿಗೆದಾರರಿಗೆ ಸ್ವಾತಂತ್ರ್ಯವಿರುತ್ತದೆ. ಲಾಕರ್‌ಗಳ ಬಾಹ್ಯ ಸುರಕ್ಷತೆಯನ್ನು ಸಾಮಾನ್ಯ ರೀತಿಯಲ್ಲಿ ಬ್ಯಾಂಕ್ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಲ್ಲಿ ಬ್ಯಾಂಕ್ ಮೇಲಿರುವ ಜವಾಬ್ದಾರಿಯನ್ನು ನಿರ್ವಹಿಸಿದಂತೆ ಪರಿಗಣಿಸಲಾಗುತ್ತದೆ. ಬ್ಯಾಂಕ್‌ನ ಕೈ ಮೀರಿದ ರೀತಿಯಲ್ಲಿ ಲಾಕರ್‌ಗಳಲ್ಲಿನ ವಸ್ತುಗಳು ಹಾಳಾದರೆ ಬ್ಯಾಂಕ್ ಮೇಲೆ ಜವಾಬ್ದಾರಿ ಬರದಿರಬಹುದು.

ಲಾಕರ್ ಪಡೆದಿರುವ ಬಾಡಿಗೆದಾರರನ್ನು ಲಾಕರ್‌ನಲ್ಲಿ ಏನು ಇಡಲಾಗಿದೆ ಎಂದು ಬ್ಯಾಂಕ್ ಕೇಳುವ ವ್ಯವಸ್ಥೆಯನ್ನು ಇಟ್ಟುಕೊಂಡಿಲ್ಲ. ಆದ್ದರಿಂದ ಯಾರಿಗಾದರೂ ನಷ್ಟ ಉಂಟಾದಲ್ಲಿ ಮಾತ್ರ ಆ ಸಂದರ್ಭಕ್ಕೆ ತಕ್ಕಂತೆ ತೀರ್ಮಾನಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಬೆಂಕಿ, ಪ್ರವಾಹ ಅಥವಾ ಇನ್ನಾವುದೇ ನೈಸರ್ಗಿಕ ವಿಕೋಪಗಳಿಂದ ಉಂಟಾದ ನಷ್ಟಗಳಾಗಲಿ ಅಥವಾ ಕಳ್ಳತನ, ದರೋಡೆ, ಮೋಸ, ವಂಚನೆಗಳ ಕಾರಣದಿಂದ ಆಗಲಿ ಲಾಕರ್‌ಗಳಲ್ಲಿನ ವಸ್ತುಗಳಿಗೆ ನಷ್ಟ ಉಂಟಾದರೆ ಬ್ಯಾಂಕ್‌ನ ಬಳಿ ನಷ್ಟದ ಪ್ರಮಾಣ ತಿಳಿದುಕೊಳ್ಳುವ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಬಾಡಿಗೆದಾರರಿಗೆ ಯಾವ ರೀತಿಯಲ್ಲಿ ಪರಿಹಾರ ದೊರಕಬಹುದು ಎಂಬುದನ್ನು ಊಹಿಸುವುದು ಕಷ್ಟ.

ಲಾಕರ್‌ಗಳನ್ನು ವ್ಯಕ್ತಿಗಳು, ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಇಬ್ಬರು ಅಥವಾ ಹೆಚ್ಚು ಜನ, ಪಾಲುದಾರಿಕೆ ಸಂಸ್ಥೆಗಳು, ಕಂಪನಿಗಳು ಹಾಗೂ ಇತರರಿಗೆ ನೀಡಲಾಗುತ್ತದೆ.ಕಿರಿಯ ವಯಸ್ಸಿನವರಿಗೆ ಲಾಕರ್‌ಗಳು ಲಭ್ಯವಿರುವುದಿಲ್ಲ. ಇವುಗಳ ಬಾಡಿಗೆ ಅವುಗಳ ಗಾತ್ರವನ್ನು ಅವಲಂಬಿಸಿರುತ್ತದೆ. ಇವುಗಳನ್ನು ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಬಾಡಿಗೆ ಪಡೆಯುವಂತಿಲ್ಲ. ಬಾಡಿಗೆಯನ್ನು ಅವಧಿ ಪ್ರಾರಂಭದಲ್ಲಿಯೇ ಪಾವತಿಸಬೇಕಾಗುತ್ತದೆ.

ಗ್ರಾಹಕರು ಪ್ರತಿ ಬಾರಿ ಲಾಕರ್ ತೆರೆಯಲು ಬ್ಯಾಂಕ್‌ಗೆ ಭೇಟಿ ನೀಡಿದಾಗ ಲಾಕರ್‌ ತೆರೆದ ಬಗ್ಗೆ ಅವರ ಸಹಿ ಪಡೆಯಲಾಗುತ್ತದೆ. ಲಾಕರ್ ಪಡೆದ ಬಾಡಿಗೆದಾರರಿಗೆ ಮಾತ್ರ ಅವುಗಳನ್ನು ತೆರೆಯಲು ಅವಕಾಶವಿರುತ್ತದೆ. ಸಾಮಾನ್ಯವಾಗಿ ಬಾಡಿಗೆದಾರನು ಲಾಕರ್   ತೆರೆಯಲು ಹೋದಾಗ ಅವರ ಜೊತೆಗೆ ಬ್ಯಾಂಕ್ ಅಧಿಕಾರಿ ತೆರಳಿ ಬಾಡಿಗೆದಾರ ಹಾಗೂ ಬ್ಯಾಂಕ್ ಅಧಿಕಾರಿಯ ಬೀಗದ ಕೈಗಳನ್ನು ಬಳಸಿಕೊಂಡು ಲಾಕರ್ ಬೀಗ ತೆರೆಯಬೇಕಾಗುತ್ತದೆ.

ಲಾಕರ್ ಬಾಗಿಲು ತೆರೆದ ಕೂಡಲೆ ಅಧಿಕಾರಿಯು ಲಾಕರ್ ನಲ್ಲಿರುವ ವಸ್ತುಗಳನ್ನು ನೋಡದೇ ಬಾಡಿಗೆದಾರನು ತನ್ನ ಕೆಲಸವನ್ನು ಏಕಾಂತದಲ್ಲಿ ಮುಗಿಸಿಕೊಂಡು ಬರಲು ಅನುವು ಮಾಡಿಕೊಡಬೇಕಾಗುತ್ತದೆ. ಹೀಗಾಗಿ ಎಷ್ಟೋ ಬಾರಿ ಒಬ್ಬ ಬಾಡಿಗೆದಾರ ಲಾಕರ್ ಕೋಣೆಯಿಂದ ಹೊರಬರುವವರೆಗೆ ಇನ್ನೊಬ್ಬ ಬಾಡಿಗೆದಾರ ಕಾಯಬೇಕಾಗುತ್ತದೆ. ಬಾಡಿಗೆದಾರನು ತನ್ನ ಕೆಲಸವನ್ನು ಏಕಾಂತದಲ್ಲಿ ಮುಗಿಸಿಕೊಂಡು ಬಂದ ಕೂಡಲೆ ಅಧಿಕಾರಿಯು ಲಾಕರ್ ಕೋಣೆಗೆ ತೆರಳಿ ಬಾಡಿಗೆದಾರರು ಲಾಕರ್ ನ್ನು ಸರಿಯಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಲಾಕರ್ ನ ಹೊರಗೆ ಯಾವುದೇ ವಸ್ತುವನ್ನು ಮರೆತು ಹೋಗಿರಬಹುದಾದ ಬಗ್ಗೆ ಪರೀಶೀಲಿಸುವುದು ವಾಡಿಕೆ. ಆ ನಂತರವೇ ಸರದಿಯಲ್ಲಿ ಕಾಯುತ್ತಿರುವ ಬಾಡಿಗೆದಾರನಿಗೆ ಲಾಕರ್ ಕೋಣೆಯಲ್ಲಿ ಹೋಗಲು ಅವಕಾಶ ದೊರಕುತ್ತದೆ. ಆದರೆ, ಇಂದಿನ ಅವಸರದ ಯುಗದಲ್ಲಿ ಈ ಎಲ್ಲಾ ಪದ್ಧತಿಗಳನ್ನೂ ಎಲ್ಲಾ ಕಾಲದಲ್ಲೂ ಪಾಲಿಸುವುದು ಸುಲಭದ ಮಾತಲ್ಲ.

ಎಷ್ಟೋ ಬಾರಿ ಬಾಡಿಗೆದಾರರು ಲಾಕರ್ ಬಾಗಿಲು ಮುಚ್ಚದೆ ಅಥವಾ ಮುಚ್ಚಿದರೂ ಬೀಗ ಹಾಕದೆ ಹೋಗಿರಬಹುದು. ಹಾಗೆ ಆಗಿದ್ದಲ್ಲಿ ಗ್ರಾಹಕನನ್ನು ಕೂಡಲೆ ಕರೆದು ಲಾಕರ್ ಪರಿಶೀಲಿಸಿ ಬಾಗಿಲನ್ನು ಸರಿಯಾಗಿ ಮುಚ್ಚಲು ತಿಳಿಸಬೇಕಾಗುತ್ತದೆ. ಲಾಕರ್ ಬಾಗಿಲಿಗೆ ಕೀಲಿಕೈ ಇಲ್ಲದಿದ್ದಲ್ಲಿ ಹಾಗೂ ಬಾಡಿಗೆದಾರ ಲಭ್ಯವಿಲ್ಲದಿದ್ದಲ್ಲಿ ಮೇಲಧಿಕಾರಿ ಹಾಗೂ ಪಂಚರನ್ನು ಸೇರಿಸಿ ಪಂಚನಾಮೆ ಮಾಡಿಸಿ ಒಂದು ಲಕೋಟೆ/ಚೀಲದಲ್ಲಿಟ್ಟು ಮೊಹರು ಹಾಕಿ ಬಾಡಿಗೆದಾರ ಪಡೆಯಲು ಬರುವವರೆಗೆ ವ್ಯವಸ್ಥಾಪಕರ ಸುಪರ್ದಿನಲ್ಲಿಟ್ಟುಕೊಳ್ಳಬೇಕು. ಲಾಕರ್ ಕೋಣೆಯಲ್ಲಿ ಯಾವುದೇ ಬೆಲೆ ಬಾಳುವ ವಸ್ತುವನ್ನು ಯಾರಾದರೂ ಬಿಟ್ಟು ಹೋಗಿದ್ದಲ್ಲಿ ಅದರ ವಿವರಗಳನ್ನು ಒಂದು ಪ್ರತ್ಯೇಕ ಪುಸ್ತಕದಲ್ಲಿ ದಾಖಲು ಮಾಡಿ ಅವುಗಳನ್ನು ಮ್ಯಾನೇಜರ್‌ ತನ್ನ ಸುಪರ್ದಿನಲ್ಲಿ ಇಟ್ಟುಕೊಳ್ಳಬೇಕು.

ಲಾಕರ್‌ ಒಡೆದು ತೆರೆಯುವ ಸಂದರ್ಭಗಳು

‌ಬಾಡಿಗೆದಾರರು ಕೀಲಿ ಕೈ ಕಳೆದುಕೊಂಡಿದ್ದಲ್ಲಿ. ಲಾಕರ್‌ಗಳ ಬಾಡಿಗೆ ಸುಸ್ತಿಯಾಗಿದ್ದಲ್ಲಿ ನ್ಯಾಯಾಲಯದ ಆದೇಶದ ಪ್ರಕಾರ ಒಡೆದು ತೆರೆಯಬೇಕಿದ್ದಲ್ಲಿ. ಈ ಕಾರಣಕ್ಕೆ ಲಾಕರ್‌ಗಳನ್ನು ಒಡೆದು ತೆರೆದಲ್ಲಿ ಅದಕ್ಕೆ ತಗಲುವ ವೆಚ್ಚವನ್ನು ಬಾಡಿಗೆದಾರರೆ ಭರಿಸಬೇಕು. ಕೆಲವು ಬಾರಿ ಬಾಡಿಗೆದಾರನು ಕಳೆದುಕೊಂಡ ಕೀಲಿಕೈ ಮೂರನೆ ವ್ಯಕ್ತಿಗೆ ದೊರೆತು ಅದನ್ನು ಅವರು ಬ್ಯಾಂಕ್‌ಗೆ ಕೊಡಲು ಬರಬಹುದು. ಅಂತಹ ಕೀಲಿಕೈ ಒಪ್ಪಿಕೊಳ್ಳುವ ಮುನ್ನ ಬ್ಯಾಂಕ್ ಹಲವಾರು ವಿಚಾರಣೆಗಳನ್ನು ನಡೆಸಿ ಪಂಚನಾಮೆ ಮಾಡಿದ ನಂತರವೇ ಕೀಲಿಕೈ ಪಡೆಯಬಹುದು.

ಬಾಡಿಗೆದಾರರ ಕೀಲಿ ಕೈ ಕಳೆದುಹೋದಲ್ಲಿ ಬಾಡಿಗೆದಾರರ ಹೇಳಿಕೆಯನ್ನು ಪಡೆದು ಕಂಪನಿಯಿಂದ ಹೊಸ ಬೀಗ ಮತ್ತು ಬೀಗದ ಕೈ ತರಿಸಿ ಗ್ರಾಹಕ ಹಾಗೂ ಇತರರ ಹಾಜರಿಯಲ್ಲಿ ಲಾಕರ್ ಬೀಗವನ್ನು ಒಡೆದು ಲಾಕರ್ ಒಳಗೆ ಇರುವ ವಸ್ತುಗಳನ್ನು ಎಚ್ಚರದಿಂದ ತೆಗೆದು  ಹೊಸ ಬೀಗವನ್ನು ಅಳವಡಿಸಲಾಗುವುದು. ಇದಕ್ಕೆ ತಗಲುವ ವೆಚ್ಚವನ್ನು ಬಾಡಿಗೆದಾರರೇ ಭರಿಸಬೇಕಾಗುತ್ತದೆ. ಒಂದು ಬ್ಯಾಂಕ್‌ನಲ್ಲಿ ಹಳೆಯ ಬೀಗ ಒಡೆದು ಹೊಸ ಬೀಗ ಅಳವಡಿಸಲು

₹ 2500 ವಸೂಲಿ ಮಾಡಲಾಗುತ್ತದೆ. ಲಾಕರ್‌ಗಳಲ್ಲಿನ ವಸ್ತುಗಳು ಹರಾಜು ಹಾಕಲು ಯೋಗ್ಯವಾಗಿಲ್ಲದಿದ್ದಲ್ಲಿ (ಉದಾ: ವೈಯಕ್ತಿಕ ಕಾಗದ ಪತ್ರಗಳು) ಅಥವಾ ಹರಾಜಿನಿಂದ ಗಳಿಸಿದ ಮೊತ್ತ ಲಾಕರ್ ಬಾಕಿ ಬಾಡಿಗೆ ಮೊತ್ತಕ್ಕಿಂತ ಕಡಿಮೆಯಾದಲ್ಲಿ ಬಾಡಿಗೆದಾರನಿಂದ ವಸೂಲಿ ಮಾಡಲು ಅವಕಾಶವಿರುತ್ತದೆ. ಬಾಡಿಗೆದಾರರು ವರ್ಷಕ್ಕೊಮ್ಮೆಯಾದರೂ ಬ್ಯಾಂಕ್ ಗೆ ಬಂದು ಲಾಕರ್ ತೆಗೆದು ನೋಡಬೇಕು. ಹಾಗೆ ಮಾಡದಿದ್ದಲ್ಲಿ ಬ್ಯಾಂಕ್ ಬಾಡಿಗೆದಾರರನ್ನು ಸಂಪರ್ಕಿಸಿ ಲಾಕರ್ ತೆರೆದುನೋಡಬೇಕು ಎಂದು ತಿಳಿಸಬೇಕು. ಬಾಡಿಗೆದಾರರು ಹೀಗೆ ಮಾಡದಿದ್ದರೆ ಲಾಕರ್‌ಗಳನ್ನು ಹಿಂಪಡೆಯಬಹುದು.

ಬಾಡಿಗೆದಾರರು ಲಾಕರ್‌ಗಳನ್ನು ಹೆಚ್ಚು ಕಾಲ ತೆರೆಯದಿದ್ದರೆ ಬ್ಯಾಂಕ್ ಬಾಡಿಗೆದಾರರಿಗೆ ನೋಟೀಸ್ ನೀಡಿ ಲಾಕರ್  ತೆರೆದು ನೋಡಿಲ್ಲದಿರುವುದನ್ನು ದಾಖಲಿಸಬೇಕು. ಬಾಡಿಗೆದಾರರಿಗೆ ಲಾಕರ್  ತೆರೆಯಲು ಯಾವುದೇ ನಿಜವಾದ ತೊಂದರೆಗಳಿದ್ದಲ್ಲಿ ಅದಕ್ಕೆ ಸ್ವಾಭಾವಿಕವಾಗಿ ಮನ್ನಣೆ ನೀಡಬೇಕಾಗುತ್ತದೆ. ಬ್ಯಾಂಕ್ ಕಳುಹಿಸಿದ ನೋಟೀಸ್‌ಗೆ ಬಾಡಿಗೆದಾರರು ಸ್ಪಂದಿಸದಿದ್ದಲ್ಲಿ ಅಂತಹ ಬಾಡಿಗೆದಾರರಿಗೆ ಮತ್ತೊಂದು ಅವಕಾಶ ನೀಡಬೇಕು. ಅದಕ್ಕೂ ಸ್ಪಂದಿಸದಿದ್ದಲ್ಲಿ ಲಾಕರ್ ಒಡೆದು ತೆಗೆಯಬಹುದು ಹಾಗೂ ಲಾಕರ್ ಗಳಲ್ಲಿನ ವಸ್ತುಗಳನ್ನು ಪಟ್ಟಿ ಮಾಡಿ ಬ್ಯಾಂಕ್ ಸುಪರ್ದಿನಲ್ಲಿಡಲಾಗುವುದು. ಬಾಡಿಗೆದಾರರು ಸಂಸ್ಥೆಯಾಗಿದ್ದಲ್ಲಿ ಅಥವಾ ಸ್ವತಃ ಬಂದು ತೆರೆಯಲು ಸಾಧ್ಯವಾಗದಿದ್ದಲ್ಲಿ   ಲಿಖಿತ ಕೋರಿಕೆ ಸಲ್ಲಿಸಿ ಲಾಕರ್ ತೆರೆಯಲು ತಮ್ಮ ಅಧಿಕೃತ ಪ್ರತಿನಿಧಿಗೆ ಅಧಿಕಾರ ನೀಡಬಹುದು. ನೀವು ಲಾಕರ್ ಸರಿಯಾಗಿ ಮುಚ್ಚದೆ ಬ್ಯಾಂಕ್‌ನಿಂದ ಹೊರನಡೆದಲ್ಲಿ ಅಥವಾ ಬ್ಯಾಂಕ್ ವಿಧಿಸಿರುವ ನಿಯಮಗಳನ್ನು ಪಾಲಿಸದಿದ್ದಲ್ಲಿ ಆಗುವ ಮೊದಲ ನಷ್ಟ ಎಂದರೆ ನಿಮ್ಮ ವಸ್ತುಗಳ ಬಗ್ಗೆಯ ವಿವರಗಳು ಬಹಿರಂಗಗೊಳ್ಳುತ್ತವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡಿರಬೇಕು.

ತೊಂದರೆಗಳು: ಬೆಲೆ ಬಾಳುವ ವಸ್ತುಗಳನ್ನು ಲಾಕರ್‌ನಲ್ಲಿ ಇಡಲು ಹೋಗುವಾಗ ಅಥವಾ ತೆಗೆದುಕೊಂಡು ಬರುವಾಗ ಕಳೆದುಕೊಳ್ಳಬಹುದು ಅಥವಾ ಕಳ್ಳತನಕ್ಕೆ ಒಳಗಾಗಬಹುದು. ಲಾಕರ್‌ನಲ್ಲಿ ಬೆಲೆ ಬಾಳುವ ವಸ್ತು  ಇಡುವ ಅಥವಾ ತೆಗೆದುಕೊಂಡು ಬರುವ ಮುನ್ನ ಮೇಜಿನ ಮೇಲೆ ಇಟ್ಟು ಮರೆತುಬಿಡಬಹುದು. ಕೀಲಿ ಕೈನ್ನು ಲಾಕರ್ ನ ಬಾಗಿಲಿನಲ್ಲಿಯೇ ಇಟ್ಟು ಬಾಗಿಲನ್ನು ಸರಿಯಾಗಿ ಮುಚ್ಚದೆ (ಮತ್ತೆ ತೆರೆಯಲು ಬಾರದಂತೆ) ಮರೆತು ಹೊರಡುವುದು. ಕೀಲಿಕೈನ್ನು ಬಾಗಿಲಿನಿಂದ ತೆರೆದು ಬಾಗಿಲನ್ನು ಸರಿಯಾಗಿ ಬೀಗ ಹಾಕದೆ ಮರೆತು ಹೊರಡುವುದು. ಬೆಲೆ ಬಾಳುವ ವಸ್ತುಗಳನ್ನು ಅಥವಾ ಮಹತ್ವದ ಕಾಗದ ಪತ್ರಗಳನ್ನು ಬೇರೆಲ್ಲೋ ಇಟ್ಟು ಅಥವಾ ಕಳೆದುಕೊಂಡು ಲಾಕರ್‌ನಲ್ಲಿ ಇರಬಹುದು ಎಂದು ತಪ್ಪು ಕಲ್ಪನೆ ಹೊಂದಿ ನಿಶ್ಚಿಂತೆಯಿಂದ ಇರುವುದು.

ಎಲ್ಲಾ ಬಾಡಿಗೆದಾರರೂ ತಮ್ಮ ಲಾಕರ್ ಖಾತೆಗೆ ಕಡ್ಡಾಯವಾಗಿ ನಾಮ ನಿರ್ದೇಶನ ಮಾಡಿರತಕ್ಕದ್ದು. ಬಾಡಿಗೆದಾರನು ನಾಮನಿರ್ದೇಶನ ಮಾಡಿಲ್ಲದಿದ್ದಲ್ಲಿ ಅಥವಾ ನಾಮ ನಿರ್ದೇಶಿತನು ಮರಣ ಹೊಂದಿದ್ದಲ್ಲಿ  ಉತ್ತರಾಧಿಕಾರ ಕಾನೂನು ಅನ್ವಯಗೊಳ್ಳುತ್ತದೆ. ಹೀಗಾಗಿ ಬಾಡಿಗೆದಾರರು ತಮ್ಮ ನಂತರದ ವಾರಸುದಾರರ ಜೊತೆಯಲ್ಲಿ ಮೊದಲನೆಯವರು ಅಥವಾ ಉಳಿದವರು ಪದ್ಧತಿ ಪ್ರಕಾರ ಜಂಟಿ ಖಾತೆ ಹೊಂದಿರುವುದು ಜಾಣತನದ ನಿರ್ಧಾರವಾಗಿರಲಿದೆ.

ಎಚ್ಚರಿಕೆ ಕ್ರಮಗಳು

* ಲಾಕರ್‌ಗಳಲ್ಲಿ ಇಡಲಾಗುವ ವಸ್ತುಗಳ ಪಟ್ಟಿಯನ್ನು ದ್ವಿಪ್ರತಿಯಲ್ಲಿ ತಯಾರಿಸಿ ಒಂದು ಪ್ರತಿಯನ್ನು ಮನೆಯಲ್ಲಿಟ್ಟುಕೊಂಡು ಎರಡನೆ ಪ್ರತಿಯನ್ನು ವಸ್ತುಗಳ ಜೊತೆಗೆ ಲಾಕರ್‌ನಲ್ಲಿಡಬೇಕು

* ಪ್ರತಿಯೊಂದು ವಸ್ತುವಿನ ಛಾಯಾಚಿತ್ರಗಳನ್ನು ಎರಡು-ಮೂರು ಪಾರ್ಶ್ವಗಳಿಂದ ಸೆರೆ ಹಿಡಿದು ನಿಮ್ಮ ಕಂಪ್ಯೂಟರ್‌ನಲ್ಲಿ ಉಳಿಸಿಕೊಳ್ಳಿ

* ಸಾಧ್ಯವಿದ್ದಲ್ಲಿ ಲಾಕರ್‌ನಲ್ಲಿ ಇಡಲಾಗಿರುವ ವಸ್ತುಗಳ ಅಂದಾಜು ಮೌಲ್ಯವನ್ನು ಪ್ರತಿ ಬಾರಿ ನೀವು ಲಾಕರ್‌ನ್ನು ಬಳಸಿದಾಗ ಒಂದು ಡೈರಿಯಲ್ಲಿ ಗುರುತು ಹಾಕಿಕೊಳ್ಳಿ

* ಲಾಕರ್ ಕೋಣೆಗೆ ಹೋಗುವ ಮುನ್ನ ಲಾಕರ್‌ನಲ್ಲಿ ಇಡಲು ಉದ್ದೇಶಿಸಿರುವ, ತೆಗೆದುಕೊಂಡು ಬರಲು ಉದ್ದೇಶಿಸಿರುವ ಅಥವಾ ಪರಿಶೀಲಿಸಲು ಉದ್ದೇಶಿಸಿರುವ ವಸ್ತುಗಳ ಪಟ್ಟಿ ತೆಗೆದುಕೊಂಡು ಹೋಗಿ

* ಹೆಚ್ಚು ವಸ್ತುಗಳನ್ನು ಪರಿಶೀಲಿಸುವ/ಒಯ್ಯುವ ಉದ್ದೇಶವಿದ್ದರೆ ಜೊತೆಯಲ್ಲಿ ನಿಮ್ಮ ಹತ್ತಿರದ ಬಂಧುವನ್ನು ಕರೆದುಕೊಂಡು ಹೋಗಿ

* ಲಾಕರ್ ಖಾತೆಯಲ್ಲಿ ನಿಮ್ಮನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗುವಂತೆ ಎಲ್ಲಾ ದೂರವಾಣಿ ಸಂಖ್ಯೆಗಳನ್ನು ದಾಖಲು ಮಾಡಿಸಿ

Read More

Comments
ಮುಖಪುಟ

ಅವಕಾಶವಾದಿ ಜೆಡಿಎಸ್‌ನವರನ್ನು ನಂಬಬೇಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

‘ಜೆಡಿಎಸ್‌ನವರು ಅವಕಾಶವಾದಿಗಳು. ಅವರನ್ನು ನಂಬಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜತೆಗೆ ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಗೆಲ್ಲಿಸಲು ಜೆಡಿಎಸ್‌ ಹಿಂಬಾಗಿಲ ರಾಜಕೀಯ: ರಾಹುಲ್ ಗಾಂಧಿ ಆರೋಪ

ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಜೆಡಿಎಸ್‌ ಹಿಂಬಾಗಿಲ ರಾಜಕೀಯ ಮಾಡುತ್ತಿದೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜೆಡಿಎಸ್‌ನವರು ಪರೋಕ್ಷ ‌ಸಹಾಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.

ಉಗ್ರರ ಜತೆಗಿನ ಗುಂಡಿನ ಚಕಮಕಿಯಲ್ಲಿ ನಾಲ್ವರು ಯೋಧರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಉಗ್ರರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ನಾಲ್ವರು ಉಗ್ರರನ್ನೂ ಹತ್ಯೆ ಮಾಡಲಾಗಿದೆ.

ಚೆಕ್‌ ಬೌನ್ಸ್‌ ಪ್ರಕರಣ: ನಿರ್ಮಾಪಕಿ ಜಯಶ್ರೀ ದೇವಿ ಬಂಧನ

ಹನ್ನೊಂದು ವರ್ಷಗಳ ಹಿಂದಿನ ಚೆಕ್‌ ಬೌನ್ಸ್‌ ಪ್ರಕರಣ ಸಂಬಂಧ ನಿರ್ಮಾ‍ಪಕಿ ಜಯಶ್ರೀ ದೇವಿ ಅವರನ್ನು ಚಾಮರಾಜಪೇಟೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಸಂಗತ

ಮೌಲ್ಯ... ಜನತಂತ್ರದ ಅಂತಃಸತ್ವ

ಮತದಾನ ಕೆಳಗಿನಿಂದ ಮೇಲ್ಮುಖವಾಗಿ ಚಲಿಸುವ ಪ್ರಕ್ರಿಯೆ. ಮತದಾರರು ತಮ್ಮ ಮತಗಳನ್ನು ಬೆಂಬಲವಾಗಿ ಅಥವಾ ಪ್ರತಿರೋಧದ ಅಸ್ತ್ರಗಳಾಗಿ ಚಲಾಯಿಸುವ ಸ್ವಾಯತ್ತತೆಯನ್ನು ಪಡೆದಿರುತ್ತಾರೆ. ಈ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಅಂಬೇಡ್ಕರ್‌ ಅವರು ‘ಶಿಕ್ಷಣ, ಸಂಘಟನೆ, ಹೋರಾಟ’ ಎಂಬ ಅನುಭವದ ಅರಿವನ್ನು ಬಹುಜನರಿಗೆ ಕಾಣಿಸಿರುವುದನ್ನು ನಾವು ಮನಗಾಣಬಹುದು.

ಪ್ರಣಾಳಿಕೆಯಲ್ಲಿರಲಿ ಕಾಡಿನ ಹಿತ

ಪರಿಸರ ನಾಶದ ವಿರುದ್ಧ ಈ ಚುನಾವಣಾ ಗಳಿಗೆಯಲ್ಲಾದರೂ ಧ್ವನಿ ಎತ್ತಬೇಕಿದೆ.

ಮೈತ್ರಿ ರಾಜಕೀಯದ ಹೊಸ ಹಾದಿ

ಇದೀಗ ಹಲವು ರಾಜಕೀಯ ಪಕ್ಷಗಳ ‘ಕಾಮನಬಿಲ್ಲು ಒಕ್ಕೂಟ’ ಮಾಡಲೆತ್ನಿಸುತ್ತಿರುವ ಕಾಂಗ್ರೆಸ್, ತನ್ನ ಅಖಿಲ ಭಾರತೀಯ ಪಾರ್ಟಿಯ ಹಮ್ಮು ಬಿಟ್ಟು ಬಾಗಿದರೆ ಮಾತ್ರ ಮುಂಬರುವ ಮಹಾಚುನಾವಣೆಯಲ್ಲಿ ಹೊಸ ಹಾದಿ ಕಂಡೀತು!

ಡಿಜಿಟಲ್ ಮಾರುಕಟ್ಟೆ ಗ್ರಾಹಕಸ್ನೇಹಿಯೇ?

ಇಂದು ಅಂತರರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ. ‘ಡಿಜಿಟಲ್ ಮಾರುಕಟ್ಟೆಯನ್ನು ನ್ಯಾಯಸಮ್ಮತವಾಗಿಸುವುದು’ ಈ ವರ್ಷದ ಘೋಷವಾಕ್ಯ

ವಾಣಿಜ್ಯ

ಕ್ಯಾಂಪ್ಕೊ ಚಾಕಲೇಟ್‌ ಪರಿಮಳ

ಸಹಕಾರಿ ಕ್ಷೇತ್ರದ ಸಂಸ್ಥೆಯಾದ ಕ್ಯಾಂಪ್ಕೊ 2016-17 ನೇ ಸಾಲಿನಲ್ಲಿ ₹1,600 ಕೋಟಿಗೂ ಅಧಿಕ ವ್ಯವಹಾರವನ್ನು ನಡೆಸುವ ಮೂಲಕ 44 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ವರ್ಷ ಸಂಸ್ಥೆಯು ₹26.22 ಕೋಟಿ ನಿವ್ವಳ ಲಾಭ ಗಳಿಸಿದೆ.

‘ಬಾಂಡ್‌ ಗಳಿಕೆ’ ಮತ್ತು ಷೇರುಪೇಟೆ ಸಂಬಂಧ

ಷೇರು ಮಾರುಕಟ್ಟೆಯು ಕುಸಿತದ ಹಾದಿ ಹಿಡಿದಾಗ ಸರ್ಕಾರಿ ಬಾಂಡ್‌ಗಳು ಮಾರುಕಟ್ಟೆಯ ಮೇಲಿನ ಒತ್ತಡವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತವೆ. ಆದ್ದರಿಂದ ಹೂಡಿಕೆದಾರರು ಬಾಂಡ್‌ಗಳು ಗಳಿಸಿಕೊಡುವ ಆದಾಯ ಹಾಗೂ ಷೇರುಪೇಟೆಯಿಂದ ಗಳಿಸಬಹುದಾದ ಆದಾಯಗಳ ನಡುವಿನ ಸಂಬಂಧವನ್ನು ತಿಳಿದುಕೊಳ್ಳುವುದು ಅಗತ್ಯ.

ಪ್ರಶ್ನೋತ್ತರ

ನಿವೇಶನ ನಿಮ್ಮ ಹೆಸರಿನಲ್ಲಿ ಇಲ್ಲದಿರುವುದರಿಂದ ನೀವು ನೇರವಾಗಿ ನಿಮ್ಮ ತಂದೆಯ ನಿವೇಶನದಲ್ಲಿ ಮನೆಕಟ್ಟಲು ಬ್ಯಾಂಕುಗಳು ಸಾಲ ನೀಡುವುದಿಲ್ಲ. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಸಾಲ ತೀರಿಸುವ ಗರಿಷ್ಠ ಅವಧಿ 20 ವರ್ಷಗಳಾದರೂ ಅವಧಿಗೆ ಮುನ್ನ ಸಾಲ ತೀರಿಸುವ ಹಕ್ಕು ನಿಮಗಿದೆ...

ಆರ್ಥಿಕ ನಿರ್ಧಾರಕ್ಕೆ ಮಹಿಳೆ ಹೆಚ್ಚು ಸಮರ್ಥಳು

ಹಣ ಹೂಡಿಕೆ ವಿಚಾರದಲ್ಲಿ ಮಹಿಳೆಯರು, ಪುರುಷರಿಗಿಂತ ಹೆಚ್ಚು ಜಾಣತನದಿಂದ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದು ಅನೇಕ ಅಧ್ಯಯನಗಳಿಂದ ದೃಢಪಟ್ಟಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಹಣವನ್ನೂ ಉಳಿಸುತ್ತಾರೆ. ಹಣಕಾಸಿನ ನಿರ್ವಹಣೆಯ ವಿಚಾರದಲ್ಲಿ ಮಹಿಳೆಯರು ಪುರುಷರಿಗಿಂತ ಬುದ್ಧಿವಂತರು ಎನ್ನುವುದೂ ಸಾಬೀತಾಗಿರುವುದನ್ನು ಅರುಣ್‌ ಥುಕ್ರಾಲ್‌ ಇಲ್ಲಿ ವಿವರಿಸಿದ್ದಾರೆ.

ತಂತ್ರಜ್ಞಾನ

ಚಾರ್ಜಿಂಗ್‌ನ ನಾನಾ ರೂಪ

ಎಲ್ಲ ಸ್ಮಾರ್ಟ್‌ಫೋನ್ ಸಂಸ್ಥೆಗಳು ಅತಿ ವೇಗವಾಗಿ ಚಾರ್ಜ್ ಆಗುವ, ದೀರ್ಘ ಕಾಲ ಚಾರ್ಜ್ ಉಳಿಸಿಕೊಳ್ಳುವ ಅಥವಾ ಕಡಿಮೆ ಚಾರ್ಜ್ ಬಳಸುವ ತಂತ್ರಜ್ಞಾನ ಅಭಿವೃದ್ಧಿ ಕಡೆಗೆ ಗಮನ ನೀಡಿವೆ. ಪ್ರಸ್ತುತ ಫಾಸ್ಟ್ ಚಾರ್ಜಿಂಗ್, ವೈರ್‌ಲೆಸ್‌ ತಂತ್ರಗಳ ಜತೆಗೆ ಲೇಸರ್ ಜಾರ್ಜಿಂಗ್ ಸೇರ್ಪಡೆಯಾಗುತ್ತಿದೆ.

ಫೇಸ್ ಬುಕ್ ಖಾತೆ ಹ್ಯಾಕ್ ಆಗದಂತೆ ಮುಂಜಾಗ್ರತೆ ವಹಿಸುವುದು ಹೇಗೆ ?

ಫೇಸ್‌ಬುಕ್‌ನಲ್ಲಿ ಲಿಂಕ್ ಕ್ಲಿಕ್ ಮಾಡುವಾಗ ಹುಷಾರಾಗಿರಬೇಕು. ಯಾವ ಲಿಂಕ್‌ನಲ್ಲಿ ಏನೇನು ಅಡಗಿದೆಯೋ ಎಂಬುದು ಗೊತ್ತಾಗಲ್ಲ. ಕೆಲವೊಂದು ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನಮ್ಮ ಖಾತೆ ಹ್ಯಾಕ್ ಆಗುವ ಸಾಧ್ಯತೆಯೂ ಇದೆ. ಫೇಸ್‌ಬುಕ್ ಖಾತೆಯ ಸುರಕ್ಷತೆ ಕಾಪಾಡಲು ಫೇಸ್‌ಬುಕ್‌ನಲ್ಲಿಯೇ ಕೆಲವು ಫೀಚರ್‌ಗಳಿವೆ.

ಬದಲಾದವು ಸ್ಮಾರ್ಟ್ ಸಾಧನಗಳು

ಅದೊಂದು ಕಾಲವಿತ್ತು, ರಾತ್ರಿ ಮಲಗುವಾಗ ಅಲಾರಾಂಗೆ ಕೀ ಕೊಟ್ಟು ದಿಂಬಿನ ಬಳಿ ಇಟ್ಟುಕೊಂಡು ನಿದ್ರೆಗೆ ಶರಣಾಗುವುದು. ಸಮಯಕ್ಕೆ ಸರಿಯಾಗಿ ಅದು ರಿಂಗಣಿಸುತ್ತಿತ್ತು. ಹೆಚ್ಚಿನ ಬಾರಿ ಅದು ಇಂತಿಷ್ಟೇ ರಿಂಗ್ ಆಗಿ ನಿಂತು ಬಿಡುತಿತ್ತು. ಅಷ್ಟರದಲ್ಲಿ ಎಚ್ಚರವಾದರೆ ಪರವಾಗಿಲ್ಲ. ಇನ್ನೂ ಕೆಲವರು ರಿಂಗಣಿಸುವುದನ್ನು ಅರ್ಧಕ್ಕೆ ನಿಲ್ಲಿಸಿ ಮತ್ತೆ ನಿದ್ರೆಗೆ ಜಾರುತ್ತಿದ್ದರು.

ಲ್ಯಾಪ್‌ಟಾಪ್‌ ದತ್ತಾಂಶ ರಕ್ಷಣೆ

ಒಂದು ವೇಳೆ ನೀವು ನಿಮ್ಮ ಲ್ಯಾಪ್‌ಟಾಪ್‌ ಕಳೆದುಕೊಂಡರೆ, ಅದಕ್ಕೆ ನೀವು ಪ್ರಬಲ ಪಾಸ್‌ವರ್ಡ್‌ ನೀಡಿದ್ದರೂ, ಅದರಲ್ಲಿ ಇರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಾದರೂ ಸುಲಭವಾಗಿ ಪಡೆದುಕೊಳ್ಳಬಹುದು.