ಊರದನಗಳ ಕುರಿತ ನೂರೆಂಟು ನೆನಪುಗಳು

13 Jan, 2018
ಸಹನಾ ಕಾಂತಬೈಲು

ನಮ್ಮ ಊರಿನಲ್ಲಿ ನಾಟಿ ಹಸುವಿಗೆ ಊರದನ ಎಂದು ಕರೆಯುತ್ತೇವೆ. ತೊಂಬತ್ತರ ದಶಕದ ಮಾತು. ಆಗ ನನ್ನ ಮನೆಯಲ್ಲಿ ಮತ್ತು ನಮ್ಮ ಊರಿನಲ್ಲಿ ಊರದನಗಳು ಮಾತ್ರ ಇದ್ದವು. ಎಲ್ಲವೂ ಮಲೆನಾಡು ಗಿಡ್ಡ ಜಾತಿಯವು. ಆಗಿನ್ನೂ ಅಧಿಕ ಹಾಲು ಕೊಡುವ ಜರ್ಸಿ, ಎಚ್.ಎಫ್. ತಳಿಗಳ ಪ್ರವೇಶ ಆಗಿರಲಿಲ್ಲ. ಅವುಗಳಿಗೆ ಈಗಿನ ಹಸುಗಳಿಗೆ ಕೊಡುವಂತೆ ಬಕೆಟ್ ಬಕೆಟ್ ಹಿಂಡಿ ತಿನ್ನಿಸುವ ಕ್ರಮವೂ ಇರಲಿಲ್ಲ. ಅಕ್ಕಚ್ಚು ಕೊಟ್ಟರೆ ಮುಗಿಯಿತು. ಅದೇ ದೊಡ್ಡ ಪೌಷ್ಠಿಕಾಂಶವುಳ್ಳ ಆಹಾರ. ಅಕ್ಕಚ್ಚು ಎಂದರೆ ಮತ್ತೇನಲ್ಲ ಅಕ್ಕಿ-ಬೆಣ್ಣೆ ತೊಳೆದ ನೀರು, ಅನ್ನ ಬಸಿದ ಗಂಜಿ, ನಿನ್ನೆಯ ಸಾರು-ಸಾಂಬಾರು-ಅನ್ನ, ಹೆಚ್ಚಾಗಿ ಉಳಿದ ಮಜ್ಜಿಗೆ ಇವುಗಳನ್ನೆಲ್ಲ ಎಸೆಯದೆ ಒಂದು ದೊಡ್ಡ ಬಾಲ್ದಿಗೆ ಹಾಕಿಟ್ಟು ಹಸುವಿಗೆ ಕುಡಿಯಲು ಕೊಡುವ ಸಮಯದಲ್ಲಿ ಅದಕ್ಕೆ ಸ್ವಲ್ಪ ತೌಡು, ನೀರು, ಉಪ್ಪು ಸೇರಿಸುವುದು. ತೆಳ್ಳಗೆಯೂ ಅಲ್ಲದ ಗಟ್ಟಿಯೂ ಅಲ್ಲದ ಈ ಪಾಕವನ್ನು ಹಸುಗಳು ಇಷ್ಟಪಟ್ಟು ಚಪ್ಪರಿಸಿ ಕುಡಿಯುತ್ತಿದ್ದವು. ಬಾಲ್ದಿ ಸದ್ದು ಮಾಡಿದರೆ ಸಾಕು ಓಡೋಡಿ ಬರುತ್ತಿದ್ದವು. ಆಮೇಲೆ ಒಂದು ಸೂಡಿ ಬೈಹುಲ್ಲನ್ನೋ, ಸ್ವಲ್ಪ ಹಸಿರು ಹುಲ್ಲನ್ನೋ ಹಾಕಿದರೆ ಸಾಕಿತ್ತು. ಅವು ಸಂತೃಪ್ತಿಯಿಂದ ಮೆಲುಕಾಡುತ್ತಾ ಮಲಗಿಕೊಳ್ಳುತ್ತಿದ್ದವು.

ಆಗ ಊರದನಗಳನ್ನು ಯಾರೂ ಕಟ್ಟಿ ಹಾಕಿ ಸಾಕುತ್ತಿರಲಿಲ್ಲ. ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲೇ ಹಾಲು ಕರೆದುಕೊಂಡಾದ ಮೇಲೆ ಹಟ್ಟಿ ಬಾಗಿಲು ತೆರೆದರೆ ಸಾಕು, ಸಾಲಾಗಿ ಶಿಸ್ತಿನ ಸಿಪಾಯಿಗಳ ಹಾಗೆ ಅವೇ ಕಾಡಿನ ದಾರಿ ಹಿಡಿದು ನಡೆಯುತ್ತಿದ್ದವು. ಮತ್ತೆ ಅವು ಬರುತ್ತಿದ್ದದ್ದು ಗೋಧೂಳಿ ಸಮಯಕ್ಕೆ. ಕೆಲವೊಮ್ಮೆ ಚಂದ್ರ ಕಾಣಿಸಿಕೊಂಡ ನಂತರ. ಎಷ್ಟೇ ಹೊತ್ತಿಗೆ ಬರಲಿ ಅವುಗಳ ಹಾಲು ಹಿಂಡುವ ಕೆಲಸವನ್ನು ಅತ್ತೆ ಗೊಣಗದೆ ಶ್ರದ್ಧೆಯಿಂದ ಮಾಡುತ್ತಿದ್ದರು. ಒಮ್ಮೊಮ್ಮೆ ನಡುರಾತ್ರಿ ಹಸುಗಳು ಬಂದು ಹಟ್ಟಿ ಬಾಗಿಲಲ್ಲಿ ನಿಂತು `ಅಂಬಾ' ಎನ್ನುತ್ತಿದ್ದವು. ಹಸುಗಳ ಹಾದಿ ಕಾದುಕಾದು ಆಗಷ್ಟೇ ದಿಂಬಿಗೆ ತಲೆ ಕೊಟ್ಟ ಅತ್ತೆ `ಬಂದೇ' ಎಂದು ಹಸುಗಳಿಗಿಂತ ದೊಡ್ಡ ದನಿಯಲ್ಲಿ ಕೂಗಿಕೊಳ್ಳುತ್ತ ಒಂದು ಕೈಯಲ್ಲಿ ನೀರು ತುಂಬಿದ ಚೆಂಬು, ಇನ್ನೊಂದು ಕೈಯಲ್ಲಿ ಚಿಮಣಿ ದೀಪ ಹಿಡಿದು ಹಾಲು ಕರೆಯಲು ಹೊರಡುತ್ತಿದ್ದರು. ನಿದ್ದೆಯ ಮಂಪರಿನಲ್ಲೇ ಮಾವ `ಜಾಗ್ರತೆ, ಚಿಮಣಿ ದೀಪ ಒಣಗಿದ ಹುಲ್ಲಿಗೆ ತಾಗಿ ಮಾಡಿಗೆ ಬೆಂಕಿ ಹಿಡಿಯುವ ಸಾಧ್ಯತೆ ಇದೆ' ಎಂದು ಪ್ರತಿಬಾರಿ ಹೊಸದೆಂಬಂತೆ ಹೇಳುತ್ತಿದ್ದರು. ಆಗ ಇದ್ದದ್ದು ಒಂದೆರಡು ಹಸುಗಳಲ್ಲ. 25-30 ಇತ್ತು. ಎಲ್ಲದಕ್ಕೂ ಒಂದೊಂದು ಚಂದದ ಹೆಸರು. ಗಂಗೆ, ಗೌರಿ, ಕಾವೇರಿ, ಯಮುನೆ, ಕಪಿಲೆ, ಬೆಳ್ಳಿ, ಕೆಂಪಿ, ಕಾಳಿ, ಜಾನಕಿ, ಭಾಗ್ಯ, ಸೀತೆ... ಹೀಗೆ. ನಾವು ಕಾಳಿ ಎಂದು ಕರೆದರೆ ಆ ಹೆಸರಿನ ದನ ಏನು ಎಂಬಂತೆ ಕಿವಿ ನೆಟ್ಟಗೆ ಮಾಡಿ ನಮ್ಮನ್ನು ನೋಡುವುದೇ ಒಂದು ಸೊಗಸು. ಅವುಗಳನ್ನು ಸ್ವಲ್ಪವೇ ಗಾಳಿ, ಬೆಳಕು ಬರುವ ದೊಡ್ಡ ಗೂಡಿನಂಥ ಕೋಣೆಯೊಳಗೆ ಕೂಡಿ ಹಾಕುತ್ತಿದ್ದೆವು. ಕರುಗಳಿಗೆ ಬೇರೊಂದು ಕೋಣೆ. ನಾನು ಅತ್ತೆಗೆ ನನ್ನ ತವರು ಮನೆಯಲ್ಲಿರುವಂತೆ ತೆರೆದ ಹಟ್ಟಿ ಮಾಡಲು ಮದುವೆಯಾದ ಹೊಸದರಲ್ಲಿ ಹೇಳಿದ್ದೆ. ಅದಕ್ಕೆ ಅವರು `ನಿನ್ನ ಅಮ್ಮನ ಊರಾದರೆ ಪಟ್ಟಣ. ನಮ್ಮ ಊರು ದಟ್ಟ ಕಾಡು ಅಲ್ಲವಾ? ಮೊನ್ನೆ ಮೇಯಲು ಹೋದ ಬಾಣಂತಿ ಗಿರಿಜೆಯನ್ನು ಹುಲಿ ತಿಂದದ್ದು ನೆನಪಿಲ್ಲವಾ? ಅದರ ಕರು ಈಗಲೂ ತಾಯನ್ನು ನೆನೆಸಿಕೊಂಡು ಹೇಗೆ ಬೊಬ್ಬಿರಿಯುತ್ತದೆ ನೋಡು. ಇಲ್ಲಿ ಕೆಲವೊಮ್ಮೆ ರಾತ್ರಿ ಹಟ್ಟಿಗೇ ಬಂದು ಹುಲಿ ಹಸುವನ್ನು ಹಿಡಿದುಕೊಂಡು ಹೋಗುವುದೂ ಉಂಟು. ಹಾಗಾಗಿ ಮಾವ ಈ ತರದ ಹಟ್ಟಿ ಕಟ್ಟಿಸಿದ್ದಾರೆ' ಎಂದಿದ್ದರು.

ಒಂದು ಸಾರಿ ಅತ್ತೆ, ಮಾವ, ಗಂಡ ಜೊತೆಯಲ್ಲಿ ಏನೋ ಕಾರ್ಯದ ನಿಮಿತ್ತ ಬಂಧುಗಳ ಮನೆಗೆ ಹೋಗಿದ್ದರು. ಹಟ್ಟಿ ತುಂಬ ಕೆಸರಾಗಿತ್ತು. ಕೂಲಿಯವರ ಹತ್ತಿರ ಮನೆ ಎದುರು ದಟ್ಟವಾಗಿ ಬೆಳೆದಿದ್ದ ಬಸರಿ ಮರದ ಸೊಪ್ಪು ಕಡಿದು ತಂದು ಹಟ್ಟಿಗೆ ಹಾಕಲು ಹೇಳಿದೆ. ಕೆಲಸ ಮುಗಿಸಿ ಅವರು ಮನೆಗೆ ಹೋದರು. ಹೇಗೆಲ್ಲ ಸೊಪ್ಪು ಹಾಕಿದ್ದಾರೆ ಎಂದು ನೋಡಲು ನಾನು ಹಟ್ಟಿಗೆ ಹೋದೆ. ಮೂರ್ನಾಕು ಹಸುಗಳು ಅಡ್ಡ ಬಿದ್ದು ಹೊರಳಾಡುತ್ತಿದ್ದವು. ಬಾಯಲ್ಲಿ ನೊರೆ ಬರುತ್ತಿತ್ತು. ಇಲ್ಲಿವರೆಗೂ ಚೆನ್ನಾಗಿದ್ದ ಹಸುಗಳಿಗೆ ಇದ್ದಕ್ಕಿದ್ದ ಹಾಗೆ ಏನಾಯ್ತು? ಹುಚ್ಚುಗಿಚ್ಚು ಹಿಡಿಯಿತಾ? ಎಂದು ಗಾಬರಿ ಬಿದ್ದೆ. ಮನೆಯಲ್ಲಿ ನಾನೊಬ್ಬಳೆ. ಯಾರಲ್ಲಿ ಹೇಳುವುದು? ಏನು ಮಾಡುವುದು? ಒಂದೂ ತಿಳಿಯಲಿಲ್ಲ. ಆಗ ಈಗಿನಂತೆ ಫೋನ್, ಮೊಬೈಲ್ ಸೌಕರ್ಯ ಇರಲಿಲ್ಲ. ಗಂಡ ಬರುವುದನ್ನು ಕಾಯದ ಹೊರತು ಬೇರೆ ದಾರಿ ಇರಲಿಲ್ಲ. ಬಂದ ಮೇಲೆ ಅತ್ತೆ ನನಗೆ ಬಸರಿ ಮರದ ಸೊಪ್ಪು ಹಾಕಿಸಿದ್ದಕ್ಕೆ ಜೋರು ಮಾಡಿದರು. `ಅದನ್ನು ಹಸುಗಳು ತಿಂದರೆ ಅದರ ಮೇಣ ಹೊಟ್ಟೆಯಲ್ಲಿ ಗಟ್ಟಿಯಾಗಿ ಮೆಲುಕು ಹಾಕಲು ಆಗದೆ ಸಾಯುತ್ತವೆ. ಕೂಡಲೇ ಡಾಕ್ಟರನ್ನು ಕರೆದು ತಾ' ಎಂದು ಗಂಡನನ್ನು ಗೋಡಾಕ್ಟರ್ ಇರುವಲ್ಲಿಗೆ ಅಟ್ಟಿದರು. ಡಾಕ್ಟರೇನೋ ಬಂದರು. ಆದರೆ ಆ ಹಸುಗಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ನೋವು ಇವತ್ತಿಗೂ ನನ್ನನ್ನು ಬಾಧಿಸುತ್ತದೆ.

ಹೀಗಿರಲು ಒಂದು ಮಳೆಗಾಲದಲ್ಲಿ ಲಚ್ಚುಮಿ ಎಂಬ ಹೆಸರಿನ ಗಬ್ಬದ ಹಸು ಬೆಳಗ್ಗೆ ಮೇಯಲು ಹೋದದ್ದು ರಾತ್ರಿಯಾದರೂ ಬರಲೇ ಇಲ್ಲ. ಒಂದು ದಿನವಾಯಿತು; ಎರಡು ದಿನವಾಯಿತು; ವಾರವಾಯಿತು ಪತ್ತೆಯೇ ಇಲ್ಲ. ಅದರ ಜೊತೆ ಹೋದ ದನಗಳೆಲ್ಲವೂ ಹಿಂತಿರುಗಿದ್ದವು. ಅತ್ತೆ ಕೆಲಸದ ಕರಿಯನನ್ನು ಹುಡುಕಲು ಕಳಿಸಿದರು. ಅವನು ಬೆಳಗ್ಗೆಯಿಂದ ಸಂಜೆವರೆಗೆ ಹುಡುಕಿದರೂ ಹಸು ಸಿಕ್ಕಲಿಲ್ಲ. ನಾನು ಹುಡುಕಲು ಹೊರಟೆ. ಜೋರು ಮಳೆಯನ್ನೂ ಲೆಕ್ಕಿಸದೆ `ಲಚ್ಚುಮೀ' ಎಂದು ಕರೆಯುತ್ತಾ ಕಾಡಲ್ಲಿ ಅಲೆಯತೊಡಗಿದೆ. ದೂರದಿಂದ `ಅಂಬಾ' ಎಂಬ ಧ್ವನಿ ಕೇಳಿಸಿತು. ಶಬ್ದ ಬಂದ ದಿಕ್ಕಿನತ್ತ ನಡೆದೆ. ಲಚ್ಚುಮಿ ಒಂದು ದೊಡ್ಡ ಮರದ ಅಡಿಯಲ್ಲಿ ಚಳಿಗೆ ನಡುಗುತ್ತ ಮುದುರಿ ನಿಂತಿತ್ತು. ಅದು ಒಂದೇ ಅಲ್ಲ ಜೊತೆಯಲ್ಲಿ ಚಿಗರೆ ಮರಿಯಂತಿರುವ ಮುದ್ದಾದ ಕರು. ಮೊಲೆ ತಿನ್ನುತ್ತಿತ್ತು. ಓಡುತ್ತಿತ್ತು. ಮತ್ತೆ ಬಂದು ಮೊಲೆ ತಿನ್ನುತ್ತಿತ್ತು. ಅದುವರೆಗೂ ಹಸುವಿನಂತೆ ಇದ್ದ ಹಸು ಈಗ ನನಗೆ `ಹೂಂ, ಹೂಂ' ಎಂದು ಹೂಂಕರಿಸುತ್ತ್ತ ಹಾಯಲು ಬಂದಿತು. ನಾನೆಲ್ಲಾದರು ಕರುವಿಗೆ ತೊಂದರೆ ಕೊಟ್ಟರೆ ಎಂಬ ಯೋಚನೆ ಅದಕ್ಕೆ. ಅಲ್ಲೇ ಇದ್ದ ಒಂದು ಕೋಲು ಹಿಡಿದು ಹಸುವನ್ನು ಮನೆಗೆ ಹೊರಡಿಸಿದೆ. ಜಪ್ಪಯ್ಯ ಎನ್ನಲಿಲ್ಲ. ಮಾಡುತ್ತೇನೆ ಇದಕ್ಕೆ ಉಪಾಯ ಎಂದು ಕರುವನ್ನು ಅವುಚಿ ಹಿಡಿದುಕೊಂಡು ಮನೆ ಕಡೆ ಓಟಕ್ಕಿತ್ತೆ. ಈಗ ಹಸುವೂ ಓಡುತ್ತಾ ನನ್ನನ್ನು ಹಿಂಬಾಲಿಸತೊಡಗಿತು. ಮತ್ತೊಂದು ಸಾರಿ ಇನ್ನೊಂದು ಹಸು ಮನೆಗೆ ಎರಡು ದಿನವಾದರೂ ಬಂದಿಲ್ಲ ಎಂದು ಕಾಡಲ್ಲಿ ಹುಡುಕಲು ಹೊರಟ ನನಗೆ ಕಂಡದ್ದು ಹುಲಿ ಅರ್ಧಂಬರ್ಧ ತಿಂದು ಬಿಟ್ಟ ಹಸುವಿನ ಕಳೇಬರ.

ನನ್ನ ಮದುವೆಯಾಗಿ ಸುಮಾರು ಐದಾರು ವರ್ಷ ಆಗುವಲ್ಲಿವರೆಗೂ ಅತ್ತೆಯೇ ಹಟ್ಟಿಯ ಸರ್ವಾಧಿಕಾರಿಯಾಗಿದ್ದರು. ನನಗೆ ಹಾಲು ಹಿಂಡುವುದು ಬಿಡಿ ಕೆಚ್ಚಲಿನ ಹತ್ತಿರ ಕೈ ಕೊಂಡುಹೋಗಲೂ ಭಯವಾಗುತ್ತಿತ್ತು. ಒಮ್ಮೆ ಅತ್ತೆ ಮಗಳ ಮನೆಗೆ ಬಾಣಂತನಕ್ಕೆಂದು ಎರಡು ತಿಂಗಳ ಮಟ್ಟಿಗೆ ಹೋಗಲೇಬೇಕಾಯಿತು. ಈಗ ಹಾಲು ಕರೆಯುವ ಜವಾಬ್ದಾರಿ ನನಗೆ. ನಾನು ಹೆದರಿ ಹೆದರಿ ಚೆಂಬು ಹಿಡಿದು ಕೆಚ್ಚಲಿಗೆ ನೀರು ಹಾಕಿ ತೊಳೆದು ಕರುವನ್ನೊಮ್ಮೆ ಅಗಿಯಲು ಬಿಟ್ಟು ಪುನ: ತೊಳೆದು ಇನ್ನೇನು ಹಾಲು ಹಿಂಡಲು ಶುರುಮಾಡಬೇಕು ಹಸು ಮುಖವನ್ನು ನನ್ನತ್ತ ತಿರುಗಿಸಿತು. ಹಾಂ, ಮುಗಿಯಿತು ನನ್ನ ಕತೆ. ಈಗ ಹಸು ಕೊಂಬಿನಿಂದ ನನ್ನನ್ನು ತಿವಿಯದೆ ಬಿಡುವುದಿಲ್ಲ ಅಂದುಕೊಂಡೆ. ಹೆದರಿಕೆಯಿಂದ ಎದೆ ಹೊಡೆದುಕೊಳ್ಳತೊಡಗಿತು. ಆದರೆ ಅದು ಹಾಗೇನೂ ಮಾಡದೆ ನನ್ನನ್ನು ಒಮ್ಮೆ ಮೂಸಿ ನೋಡಿ ತಲೆ ನೆಕ್ಕಿ ಮತ್ತೆ ಅಲುಗಾಡದೆ ನಿಂತಿತು. ನಾನು ಹಾಲು ಕರೆದಾದ ಮೇಲೆಯೇ ಅದು ಸ್ಥಾನಪಲ್ಲಟ ಮಾಡಿದ್ದು. ಆಮೇಲೆ ನನಗೆ ಹಸುಗಳ ಹೆದರಿಕೆ ಸಂಪೂರ್ಣವಾಗಿ ಹೋಯಿತು. ಅವುಗಳು ನನಗೆ ಮನೆ ಮಕ್ಕಳಂತಾದವು. ಅತ್ತೆ ಮಗಳ ಮನೆಯಿಂದೇನೋ ಬಂದರು. ಆದರೆ ಅಂದಿನಿಂದ ನಾನೇ ಹಟ್ಟಿಯ ಯಜಮಾನಿಯಾದೆ.

ಆ ಕಾಲದಲ್ಲಿ ಬಾಳಿ ಬದುಕಿದ ಬಂಗಾರಿ ಎಂಬ ಹೆಸರಿನ ಊರದನವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಹೆಸರಿಗೆ ತಕ್ಕಂತೆ ಬಂಗಾರದ ಬಣ್ಣದಿಂದ ಹೊಳೆವ ಅದಕ್ಕೆ ವಿಪರೀತ ಬುದ್ಧಿ. ಬಾಳೆಹಣ್ಣು ಎಂದರೆ ಪ್ರಾಣ. ಬಾಳೆಹಣ್ಣು ಎಂಬ ಹೆಸರು ಅದರ ಕಿವಿಗೆ ಬಿದ್ದರೆ ಸಾಕು `ಅಂಬಾ' ಎಂದು ಕೂಗುತ್ತಿತ್ತು. ಹಾಗೆಂದು ನಾವು ಬಾಳೆಹಣ್ಣು ಕೊಡಲು ಹೋದರೆ ತಿನ್ನುತ್ತಿರಲಿಲ್ಲ. ಅಲ್ಲಿರುವ ಎಲ್ಲ ಹಸುಗಳಿಗೆ ಮೊದಲು ಒಂದೊಂದು ಕೊಡಬೇಕಿತ್ತು. ಕೊನೆಗೆ ಅದಕ್ಕೆ. ಆಗ ಅದು ಇಡೀ ಗೊನೆ ತಿನ್ನಲೂ ತಯಾರು! ಅದಕ್ಕೆಂದೇ ಬಾಳೆಗೊನೆ ಕಡಿದು ಇಡುತ್ತಿದ್ದೆವು. ಹಲಸಿನ ಹಣ್ಣೆಂದರೆ ಎಲ್ಲ ಹಸುಗಳಿಗೂ ಇಷ್ಟ. ಹಟ್ಟಿಯಿಂದ ಎಷ್ಟೇ ದೂರ ಹಲಸಿನಹಣ್ಣು ತುಂಡುಮಾಡಿದರೂ ಅವುಗಳಿಗೆ ಗೊತ್ತಾಗಿಬಿಡುತ್ತಿತ್ತು. ತಮಗೂ ಕೊಡಬೇಕು ಎಂಬಂತೆ ಹಟ್ಟಿಯ ಮಾಡು ಹಾರಿಹೋಗುವಂತೆ ಕಿರುಚಾಡುತ್ತಿದ್ದವು. ಸೊಳೆಯನ್ನು ನಾವು ತಿಂದು ಎಲ್ಲದಕ್ಕೂ ಉಳಿದ ರಚ್ಚೆ, ಗೂಂಜು, ಬೀಜ ಕೊಟ್ಟ ಮೇಲೆಯೇ ಅವುಗಳ ಅರಚಾಟ ನಿಲ್ಲುತ್ತಿದ್ದದ್ದು.

ಹೋರಿ ಕರು ಹುಟ್ಟಿದ್ದನ್ನು ಸ್ವಲ್ಪ ದೊಡ್ಡದಾದ ಕೂಡಲೇ ಗದ್ದೆ ಬೇಸಾಯ ಮಾಡುವವರಿಗೆ ಕೊಡುತ್ತಿದ್ದೆವು. ಒಮ್ಮೆ ಹೀಗಾಯಿತು. ಸರ್ವಾಂಗ ಸುಂದರ ಗಂಡು ಕರುವೊಂದು ಹಟ್ಟಿಯಲ್ಲಿ ಹುಟ್ಟಿತು. ಅಂಥ ಚಂದದ ಕರುವನ್ನು ಎಂದಿನಂತೆ ಬೇರೆಯವರಿಗೆ ಕೊಡಲು ಮನಸ್ಸಾಗಲಿಲ್ಲ. ಕರು ಬೆಳೆದು ದೊಡ್ಡ ಹೋರಿಯಾಯಿತು. ಸಾಕಲು ಕಷ್ಟ ಎನಿಸತೊಡಗಿತು. ನನ್ನ ಸ್ನೇಹಿತರೊಬ್ಬರು ಹೇಳಿದರು `ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆಯಲ್ಲಿ ಶ್ರೀ ಕಾಲಭೈರವೇಶ್ವರ ಎಂಬ ಪುಣ್ಯಕ್ಷೇತ್ರವಿದೆ. ಅಲ್ಲಿ ಹೋರಿಗಳನ್ನು ಸಾಕುತ್ತಾರೆ. ದೈವೀ ಅಂಶವಿದ್ದ ಹೋರಿಗೆ ಸ್ವಾಮೀಜಿ ಪಟ್ಟ ಸಿಗುತ್ತದೆ'. ಇದನ್ನು ಕೇಳಿ ನನಗೆ ಸಕ್ಕರೆ ಹಾಲು ಕುಡಿದಂತಾಯಿತು. ನನ್ನ ಈ ಹೋರಿಗೆ ಸ್ವಾಮೀಜಿ ಪಟ್ಟ ಸಿಕ್ಕೇ ಸಿಗುತ್ತದೆ ಅಂದುಕೊಂಡೆ. ಏಕೆಂದರೆ ಅದಕ್ಕೆ ಹೋರಿಗಳ ತುಂಟಾಟ ಯಾವುದೂ ಇರಲಿಲ್ಲ. ಸದಾ ಶ್ರೀಮದ್ಗಾಂಭೀರ್ಯದಿಂದ ಇರುತ್ತಿತ್ತು. ಹಸುಗಳ ಹತ್ತಿರ ಹೋಗುವುದಿರಲಿ ಅವುಗಳನ್ನು ಕಂಡರೆ ಸಾಕು ಮಾರು ದೂರ ಓಡುತ್ತಿತ್ತು. ಹಿಂಡಿ, ಹುಲ್ಲು ತಿನ್ನುವ ಹಪಹಪಿಯೂ ಇರಲಿಲ್ಲ. ಚೂರು ಹಸಿ ಹುಲ್ಲು, ಒಂದು ಚೆಂಬು ನೀರು ಇಷ್ಟೇ ಅದರ ಆಹಾರವಾಗಿತ್ತು. ನಾನು `ಜಗದ್ಗುರು' ಎಂದೇ ಅದನ್ನು ಕರೆಯುತ್ತಿದ್ದೆ. ಎಷ್ಟು ಕಷ್ಟವಾದರೂ ಸರಿ ಅದನ್ನು ಕಾಲಭೈರವೇಶ್ವರನಿಗೇ ಸಮರ್ಪಿಸಬೇಕು ಎಂದು ನಿರ್ಧರಿಸಿದೆ. ಒಂದು ಮುಂಜಾವ ನನ್ನ ತಮ್ಮನೊಡಗೂಡಿ ಒಂದು ಗಾಡಿ ಮಾಡಿಕೊಂಡು ಅಲ್ಲಿಗೆ ಹೋದೆ. ತಲುಪುವಾಗ ಮುಸ್ಸಂಜೆಯಾಗಿತ್ತು. ಅಲ್ಲಿ ಒಂದು ಕಡೆ ಕ್ಷೇತ್ರಕ್ಕೆ ಕೊಟ್ಟ ಹಲವು ಹೋರಿಗಳಿದ್ದವು. ಉಕ್ಕಿ ಬರುವ ದು:ಖವನ್ನು ಅದುಮಿ ಹಿಡಿದು ನನ್ನ ಹೋರಿಯನ್ನು ಕಾರ್ಯಕರ್ತರಿಗೆ ಒಪ್ಪಿಸಿದೆ. ಅದು ಸ್ವಾಮೀಜಿ ಪಟ್ಟ ಅಲಂಕರಿಸುವ ಕನಸು ಕಾಣುತ್ತ ಸಾಕಲು ಕಾಣಿಕೆ ಡಬ್ಬಿಗೆ ಕಿಂಚಿತ್ ಹಣವನ್ನೂ ಹಾಕಿದೆ. ನನ್ನ ಕನಸು ಅವರಿಗೆ ಗೊತ್ತಾಗಿರಬೇಕು. ಅವರು ನನ್ನನ್ನು ಪ್ರತ್ಯೇಕವಾಗಿ ಕರೆದು ಹೀಗೆ ಹೇಳಿದರು `ನೀವು ಇನ್ನೊಂದು ಸಾರಿ ಬರುವಾಗ ಇದನ್ನು ನೋಡಬೇಕೆಂದರೆ ನಿಮಗೆ ಸಿಗಲಾರದು. ನಾವು ಅದನ್ನು ಹೊಲ ಉಳುವವರಿಗೆ ಕೊಟ್ಟುಬಿಡುತ್ತೇವೆ. ಇಲ್ಲಿ ನಾಳೆ ಇರುವುದೆಂಬ ಗ್ಯಾರಂಟಿಯೂ ಇಲ್ಲ'. ನನಗೆ ತುಂಬ ನಿರಾಸೆಯಾಯಿತು. ಹಾಗಿದ್ದರೆ ಇಷ್ಟು ದೂರ ಬರಬೇಕಿತ್ತೇ, ಊರಲ್ಲೇ ಯಾರಿಗಾದರೂ ಗದ್ದೆ ಬೇಸಾಯ ಮಾಡುವವರಿಗೆ ಕೊಡಬಹುದಿತ್ತಲ್ಲ ಎಂದು ಮನ ಹೇಳಿತು. ಆದರೆ ನಾನು ಏನೂ ಮಾಡುವ ಹಾಗೆ ಇರಲಿಲ್ಲ. ಎಲ್ಲಾ ಆ ಕಾಲಭೈರವೇಶ್ವರನ ಮಹಿಮೆ ಅಂದುಕೊಂಡು ಸುಮ್ಮನಾದೆ.

ವರ್ಷಗಳುರುಳಿದವು. ಊರದನಗಳ ಸಂಖ್ಯೆ ಹಟ್ಟಿಯಲ್ಲಿ ಕಮ್ಮಿಯಾಗುತ್ತಾ ಬಂತು. ಇದಕ್ಕೆ ಕಾರಣ ಅವಕ್ಕೆ ಗಬ್ಬ ಧರಿಸಲು ಬೇಕಾದ ಹೋರಿಗಳು ಊರಿನಲ್ಲಿ ಇಲ್ಲದೆ ಆದದ್ದು. ಸಂಬಳದಲ್ಲಿ ಏರಿಕೆ, ಕೂಲಿಯಾಳುಗಳ ಅಲಭ್ಯತೆಯ ಪರಿಣಾಮ ಎಲ್ಲರೂ ಗದ್ದೆ ಬೇಸಾಯ ನಿಲ್ಲಿಸಿದ್ದರಿಂದ ಯಾರಿಗೂ ಹೋರಿಯ ಅಗತ್ಯ ಇರಲಿಲ್ಲ. ಅಷ್ಟು ಮಾತ್ರವಲ್ಲ; ಅವುಗಳು ಮೇಯುವ ಕಾಡನ್ನೂ ಜನಗಳು ಆಕ್ರಮಿಸಿ ಕೃಷಿಭೂಮಿಯನ್ನಾಗಿ ಪರಿವರ್ತಿಸಿ ಬೇಲಿ ಹಾಕಿದ್ದರು. ಈಗ ಹಸುಗಳನ್ನು ಕಟ್ಟಿ ಹಾಕಿಯೇ ಸಾಕಬೇಕಾದ ಅನಿವಾರ್ಯತೆ. ಊರದನಗಳನ್ನು ಕಟ್ಟಿ ಹಾಕಿ ಸಾಕಿದರೆ ಹಾಲು ಕಡಿಮೆ. ಅದು ಗಿಂಡಿ ತುಂಬ ಹಾಲು ಕೊಡಬೇಕಾದರೆ ಮೇಯಬೇಕು. ಮೇಯಲು ಮೊದಲಿನಂತೆ ಜಾಗ ಇಲ್ಲ. ಅದರ ಬದಲು ಜರ್ಸಿ ಅಥವಾ ಎಚ್. ಎಫ್. ಹಸುವನ್ನು ಸಾಕಿದರೆ ಕೊಡಗಟ್ಟಲೆ ಹಾಲು ಕರೆಯಬಹುದು ಎಂದು ನಾನು ಲೆಕ್ಕಾಚಾರ ಹಾಕಿ ಪಕ್ಕದ ಊರಿನಿಂದ ಎರಡು ಮಿಶ್ರತಳಿ ಹಸುವನ್ನು ತಂದು ಕಟ್ಟಿದೆ.

ಈಗ ಹಟ್ಟಿಯಲ್ಲಿ ಊರದನ ಇಲ್ಲ. ಅವುಗಳ ಕೊರಳ ಗೆಜ್ಜೆಯ ಕಿಣಿಕಿಣಿ ನಾದ ಇಲ್ಲ. ಬರೀ ನೆನಪುಗಳಷ್ಟೇ ನನ್ನ ಬಳಿ ಉಳಿದಿರುವುದು.

Read More

Comments
ಮುಖಪುಟ

ಅವಕಾಶವಾದಿ ಜೆಡಿಎಸ್‌ನವರನ್ನು ನಂಬಬೇಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

‘ಜೆಡಿಎಸ್‌ನವರು ಅವಕಾಶವಾದಿಗಳು. ಅವರನ್ನು ನಂಬಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜತೆಗೆ ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಗೆಲ್ಲಿಸಲು ಜೆಡಿಎಸ್‌ ಹಿಂಬಾಗಿಲ ರಾಜಕೀಯ: ರಾಹುಲ್ ಗಾಂಧಿ ಆರೋಪ

ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಜೆಡಿಎಸ್‌ ಹಿಂಬಾಗಿಲ ರಾಜಕೀಯ ಮಾಡುತ್ತಿದೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜೆಡಿಎಸ್‌ನವರು ಪರೋಕ್ಷ ‌ಸಹಾಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.

ಉಗ್ರರ ಜತೆಗಿನ ಗುಂಡಿನ ಚಕಮಕಿಯಲ್ಲಿ ನಾಲ್ವರು ಯೋಧರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಉಗ್ರರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ನಾಲ್ವರು ಉಗ್ರರನ್ನೂ ಹತ್ಯೆ ಮಾಡಲಾಗಿದೆ.

ಚೆಕ್‌ ಬೌನ್ಸ್‌ ಪ್ರಕರಣ: ನಿರ್ಮಾಪಕಿ ಜಯಶ್ರೀ ದೇವಿ ಬಂಧನ

ಹನ್ನೊಂದು ವರ್ಷಗಳ ಹಿಂದಿನ ಚೆಕ್‌ ಬೌನ್ಸ್‌ ಪ್ರಕರಣ ಸಂಬಂಧ ನಿರ್ಮಾ‍ಪಕಿ ಜಯಶ್ರೀ ದೇವಿ ಅವರನ್ನು ಚಾಮರಾಜಪೇಟೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಸಂಗತ

ಮೌಲ್ಯ... ಜನತಂತ್ರದ ಅಂತಃಸತ್ವ

ಮತದಾನ ಕೆಳಗಿನಿಂದ ಮೇಲ್ಮುಖವಾಗಿ ಚಲಿಸುವ ಪ್ರಕ್ರಿಯೆ. ಮತದಾರರು ತಮ್ಮ ಮತಗಳನ್ನು ಬೆಂಬಲವಾಗಿ ಅಥವಾ ಪ್ರತಿರೋಧದ ಅಸ್ತ್ರಗಳಾಗಿ ಚಲಾಯಿಸುವ ಸ್ವಾಯತ್ತತೆಯನ್ನು ಪಡೆದಿರುತ್ತಾರೆ. ಈ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಅಂಬೇಡ್ಕರ್‌ ಅವರು ‘ಶಿಕ್ಷಣ, ಸಂಘಟನೆ, ಹೋರಾಟ’ ಎಂಬ ಅನುಭವದ ಅರಿವನ್ನು ಬಹುಜನರಿಗೆ ಕಾಣಿಸಿರುವುದನ್ನು ನಾವು ಮನಗಾಣಬಹುದು.

ಪ್ರಣಾಳಿಕೆಯಲ್ಲಿರಲಿ ಕಾಡಿನ ಹಿತ

ಪರಿಸರ ನಾಶದ ವಿರುದ್ಧ ಈ ಚುನಾವಣಾ ಗಳಿಗೆಯಲ್ಲಾದರೂ ಧ್ವನಿ ಎತ್ತಬೇಕಿದೆ.

ಮೈತ್ರಿ ರಾಜಕೀಯದ ಹೊಸ ಹಾದಿ

ಇದೀಗ ಹಲವು ರಾಜಕೀಯ ಪಕ್ಷಗಳ ‘ಕಾಮನಬಿಲ್ಲು ಒಕ್ಕೂಟ’ ಮಾಡಲೆತ್ನಿಸುತ್ತಿರುವ ಕಾಂಗ್ರೆಸ್, ತನ್ನ ಅಖಿಲ ಭಾರತೀಯ ಪಾರ್ಟಿಯ ಹಮ್ಮು ಬಿಟ್ಟು ಬಾಗಿದರೆ ಮಾತ್ರ ಮುಂಬರುವ ಮಹಾಚುನಾವಣೆಯಲ್ಲಿ ಹೊಸ ಹಾದಿ ಕಂಡೀತು!

ಡಿಜಿಟಲ್ ಮಾರುಕಟ್ಟೆ ಗ್ರಾಹಕಸ್ನೇಹಿಯೇ?

ಇಂದು ಅಂತರರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ. ‘ಡಿಜಿಟಲ್ ಮಾರುಕಟ್ಟೆಯನ್ನು ನ್ಯಾಯಸಮ್ಮತವಾಗಿಸುವುದು’ ಈ ವರ್ಷದ ಘೋಷವಾಕ್ಯ

ವಾಣಿಜ್ಯ

ಕ್ಯಾಂಪ್ಕೊ ಚಾಕಲೇಟ್‌ ಪರಿಮಳ

ಸಹಕಾರಿ ಕ್ಷೇತ್ರದ ಸಂಸ್ಥೆಯಾದ ಕ್ಯಾಂಪ್ಕೊ 2016-17 ನೇ ಸಾಲಿನಲ್ಲಿ ₹1,600 ಕೋಟಿಗೂ ಅಧಿಕ ವ್ಯವಹಾರವನ್ನು ನಡೆಸುವ ಮೂಲಕ 44 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ವರ್ಷ ಸಂಸ್ಥೆಯು ₹26.22 ಕೋಟಿ ನಿವ್ವಳ ಲಾಭ ಗಳಿಸಿದೆ.

‘ಬಾಂಡ್‌ ಗಳಿಕೆ’ ಮತ್ತು ಷೇರುಪೇಟೆ ಸಂಬಂಧ

ಷೇರು ಮಾರುಕಟ್ಟೆಯು ಕುಸಿತದ ಹಾದಿ ಹಿಡಿದಾಗ ಸರ್ಕಾರಿ ಬಾಂಡ್‌ಗಳು ಮಾರುಕಟ್ಟೆಯ ಮೇಲಿನ ಒತ್ತಡವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತವೆ. ಆದ್ದರಿಂದ ಹೂಡಿಕೆದಾರರು ಬಾಂಡ್‌ಗಳು ಗಳಿಸಿಕೊಡುವ ಆದಾಯ ಹಾಗೂ ಷೇರುಪೇಟೆಯಿಂದ ಗಳಿಸಬಹುದಾದ ಆದಾಯಗಳ ನಡುವಿನ ಸಂಬಂಧವನ್ನು ತಿಳಿದುಕೊಳ್ಳುವುದು ಅಗತ್ಯ.

ಪ್ರಶ್ನೋತ್ತರ

ನಿವೇಶನ ನಿಮ್ಮ ಹೆಸರಿನಲ್ಲಿ ಇಲ್ಲದಿರುವುದರಿಂದ ನೀವು ನೇರವಾಗಿ ನಿಮ್ಮ ತಂದೆಯ ನಿವೇಶನದಲ್ಲಿ ಮನೆಕಟ್ಟಲು ಬ್ಯಾಂಕುಗಳು ಸಾಲ ನೀಡುವುದಿಲ್ಲ. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಸಾಲ ತೀರಿಸುವ ಗರಿಷ್ಠ ಅವಧಿ 20 ವರ್ಷಗಳಾದರೂ ಅವಧಿಗೆ ಮುನ್ನ ಸಾಲ ತೀರಿಸುವ ಹಕ್ಕು ನಿಮಗಿದೆ...

ಆರ್ಥಿಕ ನಿರ್ಧಾರಕ್ಕೆ ಮಹಿಳೆ ಹೆಚ್ಚು ಸಮರ್ಥಳು

ಹಣ ಹೂಡಿಕೆ ವಿಚಾರದಲ್ಲಿ ಮಹಿಳೆಯರು, ಪುರುಷರಿಗಿಂತ ಹೆಚ್ಚು ಜಾಣತನದಿಂದ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದು ಅನೇಕ ಅಧ್ಯಯನಗಳಿಂದ ದೃಢಪಟ್ಟಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಹಣವನ್ನೂ ಉಳಿಸುತ್ತಾರೆ. ಹಣಕಾಸಿನ ನಿರ್ವಹಣೆಯ ವಿಚಾರದಲ್ಲಿ ಮಹಿಳೆಯರು ಪುರುಷರಿಗಿಂತ ಬುದ್ಧಿವಂತರು ಎನ್ನುವುದೂ ಸಾಬೀತಾಗಿರುವುದನ್ನು ಅರುಣ್‌ ಥುಕ್ರಾಲ್‌ ಇಲ್ಲಿ ವಿವರಿಸಿದ್ದಾರೆ.

ತಂತ್ರಜ್ಞಾನ

ಚಾರ್ಜಿಂಗ್‌ನ ನಾನಾ ರೂಪ

ಎಲ್ಲ ಸ್ಮಾರ್ಟ್‌ಫೋನ್ ಸಂಸ್ಥೆಗಳು ಅತಿ ವೇಗವಾಗಿ ಚಾರ್ಜ್ ಆಗುವ, ದೀರ್ಘ ಕಾಲ ಚಾರ್ಜ್ ಉಳಿಸಿಕೊಳ್ಳುವ ಅಥವಾ ಕಡಿಮೆ ಚಾರ್ಜ್ ಬಳಸುವ ತಂತ್ರಜ್ಞಾನ ಅಭಿವೃದ್ಧಿ ಕಡೆಗೆ ಗಮನ ನೀಡಿವೆ. ಪ್ರಸ್ತುತ ಫಾಸ್ಟ್ ಚಾರ್ಜಿಂಗ್, ವೈರ್‌ಲೆಸ್‌ ತಂತ್ರಗಳ ಜತೆಗೆ ಲೇಸರ್ ಜಾರ್ಜಿಂಗ್ ಸೇರ್ಪಡೆಯಾಗುತ್ತಿದೆ.

ಫೇಸ್ ಬುಕ್ ಖಾತೆ ಹ್ಯಾಕ್ ಆಗದಂತೆ ಮುಂಜಾಗ್ರತೆ ವಹಿಸುವುದು ಹೇಗೆ ?

ಫೇಸ್‌ಬುಕ್‌ನಲ್ಲಿ ಲಿಂಕ್ ಕ್ಲಿಕ್ ಮಾಡುವಾಗ ಹುಷಾರಾಗಿರಬೇಕು. ಯಾವ ಲಿಂಕ್‌ನಲ್ಲಿ ಏನೇನು ಅಡಗಿದೆಯೋ ಎಂಬುದು ಗೊತ್ತಾಗಲ್ಲ. ಕೆಲವೊಂದು ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನಮ್ಮ ಖಾತೆ ಹ್ಯಾಕ್ ಆಗುವ ಸಾಧ್ಯತೆಯೂ ಇದೆ. ಫೇಸ್‌ಬುಕ್ ಖಾತೆಯ ಸುರಕ್ಷತೆ ಕಾಪಾಡಲು ಫೇಸ್‌ಬುಕ್‌ನಲ್ಲಿಯೇ ಕೆಲವು ಫೀಚರ್‌ಗಳಿವೆ.

ಬದಲಾದವು ಸ್ಮಾರ್ಟ್ ಸಾಧನಗಳು

ಅದೊಂದು ಕಾಲವಿತ್ತು, ರಾತ್ರಿ ಮಲಗುವಾಗ ಅಲಾರಾಂಗೆ ಕೀ ಕೊಟ್ಟು ದಿಂಬಿನ ಬಳಿ ಇಟ್ಟುಕೊಂಡು ನಿದ್ರೆಗೆ ಶರಣಾಗುವುದು. ಸಮಯಕ್ಕೆ ಸರಿಯಾಗಿ ಅದು ರಿಂಗಣಿಸುತ್ತಿತ್ತು. ಹೆಚ್ಚಿನ ಬಾರಿ ಅದು ಇಂತಿಷ್ಟೇ ರಿಂಗ್ ಆಗಿ ನಿಂತು ಬಿಡುತಿತ್ತು. ಅಷ್ಟರದಲ್ಲಿ ಎಚ್ಚರವಾದರೆ ಪರವಾಗಿಲ್ಲ. ಇನ್ನೂ ಕೆಲವರು ರಿಂಗಣಿಸುವುದನ್ನು ಅರ್ಧಕ್ಕೆ ನಿಲ್ಲಿಸಿ ಮತ್ತೆ ನಿದ್ರೆಗೆ ಜಾರುತ್ತಿದ್ದರು.

ಲ್ಯಾಪ್‌ಟಾಪ್‌ ದತ್ತಾಂಶ ರಕ್ಷಣೆ

ಒಂದು ವೇಳೆ ನೀವು ನಿಮ್ಮ ಲ್ಯಾಪ್‌ಟಾಪ್‌ ಕಳೆದುಕೊಂಡರೆ, ಅದಕ್ಕೆ ನೀವು ಪ್ರಬಲ ಪಾಸ್‌ವರ್ಡ್‌ ನೀಡಿದ್ದರೂ, ಅದರಲ್ಲಿ ಇರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಾದರೂ ಸುಲಭವಾಗಿ ಪಡೆದುಕೊಳ್ಳಬಹುದು.