ಸೂರ್ಯನ ಅಧ್ಯಯನಕೆ ‘ಆದಿತ್ಯ’

14 Jan, 2018
ಬಿ.ಆರ್. ಗುರುಪ್ರಸಾದ್

ಸೂರ್ಯ. ಜೀವಪೋಷಣೆಯೂ ಸೇರಿದಂತೆ ಭೂಮಿಯ ಮೇಲಿನ ಬಹುತೇಕ ಚಟುವಟಿಕೆಗಳಿಗೆ ಕಾರಣೀಭೂತನಾದ ಈ ಬೃಹತ್ ಆಕಾಶಕಾಯವನ್ನು ಕಂಡು ಮಾನವ ಅನಾದಿಕಾಲದಿಂದಲೂ ಬೆರಗಾಗಿದ್ದಾನೆ. ಭೀತನಾಗಿದ್ದಾನೆ. ಅನೇಕ ಬಗೆಯಲ್ಲಿ ಆರಾಧಿಸಿದ್ದಾನೆ. ಅವಲಂಬಿಸಿದ್ದಾನೆ. ಕಾಲಗಣನೆಗೆ ಸಂಬಂಧಿಸಿದ ಭಾರತದ ಪಂಚಾಂಗಗಳು ಸೂರ್ಯ–ಚಂದ್ರರ ತೋರಿಕೆಯ ಚಲನೆಯನ್ನು ಆಧರಿಸಿವೆ. ಈ ನಿಟ್ಟಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಆಚರಣೆಯೂ ಸೂರ್ಯನನ್ನು ಕುರಿತದ್ದೆ ಆಗಿದ್ದು ಮಕರ ‘ರಾಶಿ’ಗೆ ಅಥವಾ ನಕ್ಷತ್ರಪುಂಜಕ್ಕೆ (ಕೇಪ್ರಿಕಾರ್ನ್‍ಸ್ ಕಾನ್ಸ್ಟಲೇಷನ್) ಸೂರ್ಯನ ‘ಪ್ರವೇಶ’ವನ್ನು ಸೂಚಿಸಿ ಒಂದು ದೃಷ್ಟಿಯಿಂದ ಹೆಚ್ಚು ಬೆಳಕಿರುವ ದಿನಗಳ ಪ್ರಾರಂಭವನ್ನು (ಉತ್ತರಾಯಣ) ಸಾರುತ್ತದೆ.

ಸೂರ್ಯನ ನಿಜ ಸ್ವರೂಪದ ಹೆಚ್ಚಿನ ಅರಿವು ಮೂಡಿದ್ದು ಇಪ್ಪತ್ತನೇ ಶತಮಾನದಲ್ಲಷ್ಟೆ. ವಿಜ್ಞಾನ ಹೆಚ್ಚು ಹೆಚ್ಚು ಬೆಳೆದಂತೆ ಈ ರಾಕೆಟ್ ಯುಗದ ವಿಜ್ಞಾನಿಗಳು ಸೂರ್ಯನೆಂಬ ನಕ್ಷತ್ರವನ್ನು ಕೂಲಂಕಷವಾಗಿ ಅರ್ಥಮಾಡಿಕೊಳ್ಳಲು ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಭೂಮಿಯನ್ನು ಸುತ್ತುತ್ತಿರುವ ಉಪಗ್ರಹಗಳು ಹಾಗೂ ಭೂಮಿಯಿಂದ ಹೊರಹೊರಟ ರೋಬೊ ಅಂತರಿಕ್ಷ ನೌಕೆಗಳು ಅಪಾರವಾದ ನೆರವನ್ನು ನೀಡಿವೆ. ಆದರೆ, ಈ ನೌಕೆಗಳು ಸೂರ್ಯನನ್ನು ಕುರಿತ ಈ ಮೊದಲಿನ ಕೆಲವು ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿರುವುದರೊಂದಿಗೇ ಮತ್ತಷ್ಟು ಗಹನವಾದ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಇದರಿಂದಾಗಿ ಸೂರ್ಯನ ಹೆಚ್ಚಿನ ಅಧ್ಯಯನಕ್ಕಾಗಿ ರೋಬೊ ನೌಕೆಗಳನ್ನು ಹಾರಿಬಿಡುವ ಕಾರ್ಯ ಮುಂದುವರಿಯುತ್ತಲೇ ಇದೆ. ಈ ನಿಟ್ಟಿನಲ್ಲಿ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ‘ಇಸ್ರೋ’ ಸಹ ‘ಆದಿತ್ಯ- ಎಲ್1’ ಎಂಬ ಯೋಜನೆ ಹಾಕಿಕೊಂಡು ಅದನ್ನು ಅನುಷ್ಠಾನಗೊಳಿಸುವಲ್ಲಿ ನಿರತವಾಗಿದೆ.

1957ರಲ್ಲಿ ಅಂತರಿಕ್ಷ ಯುಗ ಆರಂಭವಾದ ನಂತರ ಮಾನವ ನಿರ್ಮಿತ ರೋಬೊ ನೌಕೆಗಳು ಸೌರವ್ಯೂಹದ ಉದ್ದಗಲಕ್ಕೂ ಸಂಚರಿಸಿವೆ. ಮಾನವನ ಈ ರೋಬೊ ಪ್ರತಿನಿಧಿಗಳು ಭೂಮಿಗೆ ಅತಿ ಹತ್ತಿರದಲ್ಲಿರುವ ಆಕಾಶಕಾಯವಾದ ಚಂದ್ರನತ್ತ, ಇಲ್ಲಿನ ಎಲ್ಲ ಗ್ರಹಗಳ, ಅನೇಕ ಉಪಗ್ರಹಗಳ, ಕೆಲವು ಧೂಮಕೇತು ಹಾಗೂ ಕ್ಷುದ್ರಗ್ರಹಗಳತ್ತ (ಆಸ್ಟರಾಯ್ಡ್ಸ್) ತೆರಳಿ ಆ ಕುತೂಹಲಕಾರಿಯಾದ ಲೋಕಗಳನ್ನು ನಮಗೆ ಪರಿಚಯಿಸಿವೆ.

ಭೂಮಿಯಿಂದ ಸೂರ್ಯನಿರುವ ಸರಾಸರಿ ದೂರ ಸುಮಾರು 15 ಕೋಟಿ ಕಿಲೋಮೀಟರ್‌. ಅಷ್ಟು ದೂರ ಅಂತರಿಕ್ಷದ ಭಯಂಕರ ಪರಿಸರದಲ್ಲಿ ತೆರಳಬಲ್ಲ ರೋಬೊ ನೌಕೆಗಳನ್ನು ನಿರ್ಮಿಸುವುದು ಇಂದು ಸಾಧ್ಯವಿದ್ದರೂ 6000 ಡಿಗ್ರಿ ಸೆಲ್ಸಿಯಸ್‌ ಮೇಲ್ಮೈ ಉಷ್ಣತೆಯುಳ್ಳ ಸೂರ್ಯನ ಸಮೀಪಕ್ಕೆ (ಇಲ್ಲಿ ‘ಸಮೀಪ’ ಅಂದರೆ ಕೆಲವೇ ಕೋಟಿ ಕಿಲೋಮೀಟರ್‌ಗಳಷ್ಟು!) ತೆರಳಿದ ಮಾನವನಿರ್ಮಿತ ನೌಕೆಯೊಂದು ಸುಟ್ಟು ಬೂದಿಯಾಗುತ್ತದೆ. ಹಾಗೆ ನೋಡಿದರೆ ಸೂರ್ಯನಿಗೆ ಅತಿ ಸಮೀಪದಲ್ಲಿರುವ ಗ್ರಹವಾದ ಬುಧ (ಮರ್ಕ್ಯುರಿ) ಸೂರ್ಯನಿಂದ ಸುಮಾರು ಆರು ಕೋಟಿ ಕಿಲೋಮೀಟರ್ ಸರಾಸರಿ ದೂರದಲ್ಲಿದೆ.

ಸೌರವ್ಯೂಹದ ಇತರ ಆಕಾಶಕಾಯಗಳ ಸಂಬಂಧದಲ್ಲಿ ಮಾಡಿದಂತೆ ಸೂರ್ಯನ ಸಮೀಪಕ್ಕೆ ರೋಬೊ ಪ್ರತಿನಿಧಿಗಳನ್ನು ಕಳುಹಿಸಲು ಇಂದಿನ ತಂತ್ರಜ್ಞಾನದ ಬಳಕೆಯೊಡನೆ ತನಗೆ ಸಾಧ್ಯವಾಗದಿದ್ದರೂ ಮಾನವ ವಿಶಿಷ್ಟ ವೈಜ್ಞಾನಿಕ ಉಪಕರಣಗಳನ್ನು ಹೊತ್ತ ಉಪಗ್ರಹಗಳನ್ನು ಭೂಕಕ್ಷೆಗೆ ಉಡಾಯಿಸಿ ಅವುಗಳ ಮೂಲಕ ಸೂರ್ಯನ ಅನ್ವೇಷಣೆ ನಡೆಸಿದ್ದಾನೆ. ಇದರೊಂದಿಗೇ ಕೆಲವು ಬಾರಿ ರೋಬೊ ನೌಕೆಗಳನ್ನು ಅಂತರಿಕ್ಷದ ಕೆಲವು ವಿಶೇಷ ಪ್ರದೇಶಗಳಲ್ಲಿ ಸ್ಥಾಪಿಸಿ ಅವು ಸದಾಕಾಲ ಅಲ್ಲಿಂದ ಸೌರವೀಕ್ಷಣೆಯನ್ನು ನಡೆಸುವಂತೆ ಮಾಡಿ ಆ ಮೂಲಕ ಸೂರ್ಯನ ಬಗ್ಗೆ ವಿಪುಲವಾಗಿ ಮಾಹಿತಿಯನ್ನು ಸಂಗ್ರಹಿಸಿದ್ದಾನೆ. ಮತ್ತೆ ಕೆಲವು ಬಾರಿ ತಾನು ಹಾರಿಬಿಟ್ಟ ರೋಬೊ ನೌಕೆಗಳು ವಿಶೇಷ ಪಥಗಳಲ್ಲಿ ಕೋಟ್ಯಂತರ ಕಿಲೋಮೀಟರ್ ಸಂಚರಿಸುವಂತೆ ಮಾಡಿ ಆ ಮೂಲಕ ಸೂರ್ಯನ ಧ್ರುವ ಪ್ರದೇಶಗಳ ಬಗ್ಗೆ ಪರಿಜ್ಞಾನ ಹೊಂದಿದ್ದಾನೆ.

ಸೂರ್ಯನು ಅಪಾರವಾದ ಪ್ರಮಾಣದಲ್ಲಿ ಚಿಮ್ಮುವ ಶಾಖ ಮತ್ತು ಬೆಳಕುಗಳಿಂದಾಗಿಯೇ ಭೂಮಿಯ ಮೇಲಿನ ಬಹುತೇಕ ಚಟುವಟಿಕೆಗಳು ನಡೆದು ಜೀವವನ್ನು ಪೋಷಿಸುವ ಪರಿಸ್ಥಿತಿ ಇಲ್ಲಿ ಅಸ್ತಿತ್ವದಲ್ಲಿದ್ದರೂ ಪ್ರತಿ ಹನ್ನೊಂದು ವರ್ಷಗಳ ಸುಮಾರಿಗೆ ಸೂರ್ಯನ ಚಟುವಟಿಕೆಗಳು ಹೆಚ್ಚಿ ಸೂರ್ಯ ‘ಸಿಟ್ಟಾಗುವುದನ್ನು’, ಆ ಮೂಲಕ ಪರಮಾಣು ಕಣಗಳನ್ನು ಹಾಗೂ ಶಕ್ತಿಯುತವಾದ ವಿಕಿರಣಗಳನ್ನು (ರೇಡಿಯೇಷನ್ಸ್) ಯಥೇಚ್ಛ ಪ್ರಮಾಣದಲ್ಲಿ ಮತ್ತೆ ಮತ್ತೆ ಹೊರಚೆಲ್ಲುವುದು ಮಾನವನಿಗಿಂದು ತಿಳಿದಿದೆ.

ಈ ಪ್ರಬಲ ಕಣ-ವಿಕಿರಣ ಪ್ರವಾಹವೇನಾದರೂ ಭೂಮಿಯಿರುವ ದಿಕ್ಕಿಗೆ ಸಾಗಿ ಬಂದರೆ ನಿತ್ಯ ಜೀವನಕ್ಕಾಗಿ ಬಗೆಬಗೆಯ ತಾಂತ್ರಿಕ ಸಾಧನಗಳನ್ನು ಅವಲಂಬಿಸಿರುವ ಈ ಆಧುನಿಕ ಜಗತ್ತಿಗೆ ನಾನಾವಿಧವಾದ ತೊಂದರೆಗಳು ಎದುರಾಗುತ್ತವೆ. ಈ ಹಿಂದೆ ಇಂತಹ ಅವಲಂಬನೆ ಇಲ್ಲದಿರಲಾಗಿ ಸೂರ್ಯನ ‘ಸಿಟ್ಟಿನಿಂದಾಗುವ’ ಪರಿಣಾಮ ಜನ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿರಲಿಲ್ಲ.

ಇಂದು ನೂರಾರು ಕೃತಕ ಭೂ ಉಪಗ್ರಹಗಳು ಭೂಮಿಯನ್ನು ವಿವಿಧ ಕಕ್ಷೆಯಲ್ಲಿ ಸುತ್ತುತ್ತಾ ಅನೇಕ ಉಪಯುಕ್ತವಾದ ಕಾರ್ಯಗಳನ್ನು ನಿರ್ವಹಿಸುತ್ತಿವೆ. ಆ ಆಧುನಿಕ ಸಾಧನಗಳು ಇಂದು ನೀಡುತ್ತಿರುವ ಸೇವೆಗಳ ಮಹತ್ವದಿಂದಾಗಿ ಅವು ಇಂದು ನಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸುವ ಸಂಪರ್ಕ, ಮನರಂಜನೆ, ಹವಾಮಾನ ಕುರಿತ ಅರಿವು, ಸಾರಿಗೆ ಕ್ಷೇತ್ರಗಳ ಅವಿಭಾಜ್ಯ ಅಂಗವಾಗಿವೆ. ಇವುಗಳ ಸೇವೆ ಹಠಾತ್ತನೆ ಸ್ಥಗಿತವಾದಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ಉಂಟಾಗುವ ಗೊಂದಲ ಊಹಿಸಲೂ ಸಾಧ್ಯವಾಗುವುದಿಲ್ಲ.

ಆದ್ದರಿಂದ ಸೂರ್ಯನ ‘ಸಿಟ್ಟಿನಿಂದಾಗಿ’ ಉಂಟಾಗುವ ಶಕ್ತಿಯುತ ಕಣ ವಿಕಿರಣ ಪ್ರವಾಹವೇನಾದರೂ (ಅವುಗಳ ತೀಕ್ಷ್ಣತೆಯನ್ನು ಆಧರಿಸಿ ಅವುಗಳಿಗೆ ಇಂಗ್ಲಿಷಿನಲ್ಲಿ ಸೋಲಾರ್ ಫ್ಲೇರ್ಸ್‌ ಹಾಗೂ ‘ಕರೋನಲ್ ಮಾಸ್ ಎಜಕ್ಷನ್ಸ್’ ಎಂಬ ಹೆಸರಿದೆ) ಭೂಮಿಯಿರುವ ದಿಕ್ಕಿಗೇ ಬಂದು ಭೂಮಿಯನ್ನು ಆವರಿಸಿರುವ ಅದರ ಕಾಂತಕ್ಷೇತ್ರವನ್ನು ರಾಚಿದರೆ ಅಂತರಿಕ್ಷದಲ್ಲಿರುವ ಉಪಗ್ರಹಗಳ ಕಾರ್ಯನಿರ್ವಹಣೆಗೆ ತಾತ್ಕಾಲಿಕವಾಗಿ ಇಲ್ಲವೇ ಕಾಯಂ ಆಗಿ ಅಡಚಣೆಯುಂಟಾಗುವ ಸಾಧ್ಯತೆಯಿರುತ್ತದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಉಂಟಾಗುವ ಅರಾಜಕತೆ ಅಂಜಿಕೆ ಉಂಟು ಮಾಡುವಂತಿದೆ.

ಅದೇ ರೀತಿ ಸೂರ್ಯನಿಂದ ಬಂದ ಪ್ರಬಲ ಕಣ ಪ್ರವಾಹವು ಭೂಮಿಯ ಕಾಂತಕ್ಷೇತ್ರಕ್ಕೆ ಅಪ್ಪಳಿಸುವುದರಿಂದ ಉಂಟಾಗುವ ‘ಭೂಕಾಂತ ಬಿರುಗಾಳಿ (ಜಿಯೋಮ್ಯಾಗ್ನೆಟಿಕ್ ಸ್ಟಾರ್ಮ್) ಭೂಮಿಯ ಮೇಲಿನ ಕೆಲ, ಅದರಲ್ಲೂ ಧ್ರುವ ಪ್ರದೇಶಗಳಿಗೆ ಸಮೀಪದಲ್ಲಿರುವ ಸ್ಥಳಗಳಲ್ಲಿನ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಹಾನಿಯುಂಟುಮಾಡಿ ಅದನ್ನು ಸ್ಥಗಿತಗೊಳಿಸಬಹುದು. 1989ರಲ್ಲಿ ಅಂತಹ ಒಂದು ಪ್ರಮುಖ ಘಟನೆ ಕೆನಡಾದಲ್ಲಿ ನಡೆದು ಅಲ್ಲಿನ ಜನ ತತ್ತರಿಸಿಹೋಗಿದ್ದರು.

ಆಧುನಿಕ ವೈಜ್ಞಾನಿಕ ಉಪಕರಣಗಳ ಮೂಲಕ ಸೂರ್ಯನನ್ನು ಅಧ್ಯಯನ ಮಾಡುವುದು ಭಾರತದಲ್ಲಿ 19ನೇ ಶತಮಾನದಲ್ಲೇ ಪ್ರಾರಂಭವಾಯಿತು. ಸೂರ್ಯನಲ್ಲಿ ವಿಪುಲವಾದ ಪ್ರಮಾಣದಲ್ಲಿ ಕಂಡುಬರುವ ಹೀಲಿಯಂ ಧಾತು ಮೊದಲಿಗೆ ಗುರುತಿಸಿದವನು 1868ರಲ್ಲಿ ಆಂಧ್ರದ ಗುಂಟೂರಿನಿಂದ ಕಂಡ ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನ ವೀಕ್ಷಣೆ ನಡೆಸಿದ ಪಿಯರ್ ಜಾನ್ಸನ್ ಎಂಬ ಫ್ರೆಂಚ್‌ ವಿಜ್ಞಾನಿ. 1947ರಿಂದ ಇತ್ತೀಚೆಗೆ ಭಾರತದಲ್ಲಿ ಭಾರತೀಯ ವಿಜ್ಞಾನಿಗಳು ಸೂರ್ಯನ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಭಾರತದ ಅಂತರಿಕ್ಷ ಇಲಾಖೆಯ ಅಡಿಯಲ್ಲಿ ಬರುವ ಸೌರವೀಕ್ಷಣಾಲಯವಿದೆ. 1975ರಲ್ಲಿ ಉಡಾಯಿಸಲಾದ ಭಾರತದ ಪ್ರಥಮ ಉಪಗ್ರಹವಾದ ‘ಆರ್ಯಭಟ’ದಲ್ಲೇ ಸೌರವೀಕ್ಷಣಾ ಉಪಕರಣ ಅಳವಡಿಸಲಾಗಿತ್ತು.

ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ‘ಇಸ್ರೋ’ ಇಂದು ‘ಆದಿತ್ಯ- ಎಲ್1’ ಎಂಬ ಸೌರವೀಕ್ಷಣಾ ಅಂತರಿಕ್ಷ ನೌಕೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ‘ಆದಿತ್ಯ’ ಎಂಬುದು ಸೂರ್ಯನ ಇನ್ನೊಂದು ಹೆಸರಾದ್ದರಿಂದ ಅದನ್ನು ಭಾರತದ ಸೌರವೀಕ್ಷಣಾ ನೌಕೆಗೆ ಇಟ್ಟಿರುವುದು ಸಮಂಜಸವಾಗಿದೆ. ಮೊದಲಿಗೆ ‘ಆದಿತ್ಯ’ ಭೂಮಿಯನ್ನು ಸುತ್ತುವ ಒಂದು ವೈಜ್ಞಾನಿಕ ಉಪಗ್ರಹವಾಗಿರುವಂತೆ ಯೋಜಿಸಲಾಗಿತ್ತು. ಹೀಗಾಗಿ ಭೂಮಿಯನ್ನು ಸುತ್ತುತ್ತಲೇ ಅದು ಸೌರವೀಕ್ಷಣೆಯನ್ನು ನಡೆಸುವಂತೆ ಅದನ್ನು ನಿರ್ಮಿಸುವ ಕಾರ್ಯಕ್ರಮವಿತ್ತು. ಆ ಕಾರ್ಯಕ್ಕಾಗಿ ಅದರಲ್ಲಿ ‘ಕರೋನೋಗ್ರಾಫ್‌’ ಎಂಬ ವೈಜ್ಞಾನಿಕ ಉಪಕರಣವನ್ನು ಅಳವಡಿಸಲು ನಿರ್ಧರಿಸಲಾಗಿತ್ತು.

‘ಕರೋನೋಗ್ರಾಫ್‌’ ಎಂಬ ಉಪಕರಣವು ಸೂರ್ಯನಿಂದ ಬಂದ ಬೆಳಕು ದೂರದರ್ಶಕವೊಂದನ್ನು ತಲುಪಿದ ನಂತರ ಆ ಪೈಕಿ ಸೂರ್ಯನ ಪ್ರಖರವಾದ ‘ಮೇಲ್ಮೈಯಿಂದ’ ಬಂದ ಬೆಳಕನ್ನು ತಡೆದು ‘ಸೂರ್ಯಗ್ರಹಣ’ವೊಂದನ್ನು ಕೃತಕವಾಗಿ ಉಂಟು ಮಾಡುತ್ತದೆ. ಆ ಮೂಲಕ ವಿಜ್ಞಾನಿಗಳು ಸೂರ್ಯನ ಹೊರ ವಾತಾವರಣವಾದ ‘ಕಿರೀಟ’ (ಕರೋನಾ)ವನ್ನು ವೀಕ್ಷಿಸಲು ಸಮರ್ಥರಾಗುತ್ತಾರೆ. ಈ ಉಪಕರಣವನ್ನು ಕಂಡುಹಿಡಿಯುವುದಕ್ಕೆ ಮೊದಲು ಕರೋನಾವನ್ನು ವೀಕ್ಷಿಸಲು ಸಂಪೂರ್ಣ ಸೂರ್ಯಗ್ರಹಣವೊಂದಕ್ಕೆ ಕಾಯಬೇಕಾಗುತ್ತಿತ್ತು.

ಕರೋನಾ ವೀಕ್ಷಣೆಗೇಕೆ ಪ್ರಾಮುಖ್ಯ?

ಸೂರ್ಯನ ಮೇಲ್ಮೈಯಲ್ಲಿ ಉಂಟಾಗುವ ಸೌರಕಲೆ (ಸನ್ ಸ್ಪಾಟ್ಸ್), ಸೌರ ಜ್ವಾಲೆ (ಸೋಲಾರ್ ಫ್ಲೇರ್) ಮುಂತಾದ ‘ಭೀಕರ’ ವಿದ್ಯಮಾನಗಳಿಂದ ಜನಿತವಾಗುವ ಬೃಹತ್ ಕಣ ವಿಕಿರಣ ಪ್ರವಾಹವು ತೂರಿಬರುವುದು ಕರೋನಾದ ಮೂಲಕವೇ. ಹೀಗಾಗಿ ಕರೋನಾದ ಸ್ಥಿತಿಯನ್ನು ಅಭ್ಯಸಿಸುವ ಕಾರ್ಯವು ಸೂರ್ಯನಿಂದ ಚಿಮ್ಮಿಬರುವ ಕಣಪ್ರವಾಹವದ ಬಗ್ಗೆ ಸಾಕಷ್ಟು ಮುಂಚೆಯೇ ಅರಿಯುವ ಹಾಗೂ ಆ ಮೂಲಕ ಭೂಮಿಯ ದಿಕ್ಕಿನಲ್ಲಿ ಸಾಗಿಬರುವ ‘ಮಾರಕ’ ಕಣಪ್ರವಾಹದ ಬಗ್ಗೆ ನಿಖರವಾದ ಮುನ್ನೆಚ್ಚರಿಕೆ ನೀಡುವ ದೃಷ್ಟಿಯಿಂದ ವಿಜ್ಞಾನಿಗಳಿಗೆ ಅತ್ಯಂತ ಪ್ರಮುಖವೆನಿಸಿದೆ. ಇದರೊಂದಿಗೇ ಕರೋನಾದ ಲಕ್ಷಾಂತರ ಡಿಗ್ರಿ ಸೆಲ್ಸಿಯಸ್ ಉಷ್ಣತೆಯೂ ಅವರಿಗೆ ಒಗಟಾಗಿದೆ.

ಈ ರೀತಿ ಸೂರ್ಯನ ಕರೋನಾವನ್ನು ಭೂಕಕ್ಷೆಯಿಂದ ಅಭ್ಯಸಿಸುವುದೇ ಬಹುಮಟ್ಟಿಗೆ ಉದ್ದೇಶವಾಗಿದ್ದ ‘ಆದಿತ್ಯ’ ಯೋಜನೆಯನ್ನು ನಂತರ ಮಾರ್ಪಾಡುಮಾಡುವ ಮೂಲಕ ಅದರ ವ್ಯಾಪ್ತಿಯನ್ನು ಹೆಚ್ಚಿಸಲಾಯಿತು. ಇದರಿಂದಾಗಿ ‘ಆದಿತ್ಯ- ಎಲ್1’ ಈಗ ‘ಕರೋನೋಗ್ರಾಫ್‌’ ಸಹ ಸೇರಿದಂತೆ ಏಳು ವೈಜ್ಞಾನಿಕ ಉಪಕರಣಗಳನ್ನು ಉಳ್ಳ ಒಂದು ರೋಬೊ ಅಂತರಿಕ್ಷ ನೌಕೆಯಾಗಿ ಪರಿವರ್ತನೆ ಹೊಂದಿದೆ.

ಸೂರ್ಯನ ಕರೋನಾದಿಂದ ಹೊರಹೊಮ್ಮುವ ಅವಕೆಂಪು (ಇನ್‌ಫ್ರಾ ರೆಡ್), ಅತಿನೇರಳೆ (ಅಲ್ಟ್ರಾವಯೊಲೆಟ್), ಕ್ಷ-ಕಿರಣಗಳು (ಎಕ್ಸ್-ರೇಸ್), ಹಾಗೂ ಬೆಳಕನ್ನು ದಾಖಲುಮಾಡಿಕೊಳ್ಳುವ ಮೂಲಕ ಸೂರ್ಯನ ಕೂಲಂಕಷ ಅಧ್ಯಯನಕ್ಕೆ ನೆರವಾಗುವ ಸಾಮರ್ಥ್ಯವಿರುವಂತೆ ಆ ಉಪಕರಣಗಳನ್ನು ರೂಪಿಸಲಾಗುತ್ತಿದೆ. ಸೂರ್ಯನ ಕರೋನಾದ ಉಷ್ಣತೆಯನ್ನು ಹೆಚ್ಚಿಸುವ, ಸೂರ್ಯನಿಂದ ಹೊರಚಿಮ್ಮುವ ಕಣಪ್ರವಾಹದ (‘ಸೌರಗಾಳಿ’ ಅಥವಾ ಸೋಲಾರ್ ವಿಂಡ್) ವೇಗವನ್ನು ವೃದ್ಧಿಸುವ ಹಾಗೂ ಬೃಹತ್ ಪ್ರಮಾಣದ ಕಣ ವಿಕಿರಣ ಪ್ರವಾಹಕ್ಕೆ ಕಾರಣಿಭೂತವಾದ ಭೌತಿಕ ಕ್ರಿಯೆಗಳ ಮೂಲಭೂತ ಸ್ವರೂಪವನ್ನು ‘ಆದಿತ್ಯ-ಎಲ್1’ದ ಉಪಕರಣಗಳ ಮೂಲಕ ಅರ್ಥಮಾಡಿಕೊಳ್ಳಲು ಭಾರತೀಯ ವಿಜ್ಞಾನಿಗಳು ಉದ್ದೇಶಿಸಿದ್ದಾರೆ.

ಇನ್ನು ‘ಆದಿತ್ಯ-ಎಲ್1’ ನೌಕೆಯ ಅಂತರಿಕ್ಷದಲ್ಲಿನ ‘ತಂಗುದಾಣ’ವೂ ಕುತೂಹಲಕಾರಿಯಾದುದಾಗಿದೆ. ಭೂಮಿಯ ಸುತ್ತಲಿನ ಕಕ್ಷೆಗೆ ಅದನ್ನು ಉಡಾಯಿಸುವುದಕ್ಕೆ ಬದಲಾಗಿ ಅದನ್ನು ಭೂಮಿ ಹಾಗೂ ಸೂರ್ಯರ ನಡುವೆ ಭೂಮಿಯಿಂದ ಹದಿನೈದು ಲಕ್ಷ ಕಿಲೋಮೀಟರ್ ದೂರದಲ್ಲಿರುವ ‘ಎಲ್-1 ಲೆಗ್ರಾಂಜಿಯನ್ ಬಿಂದು’ವಿನ (ಎಲ್-1 ಲೆಗ್ರಾಂಜಿಯನ್ ಪಾಯಿಂಟ್) ಸಮೀಪದ ವಿಶೇಷ ಕಕ್ಷೆಯೊಂದರಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ‘ಆದಿತ್ಯ- ಎಲ್1’ ಆ ಕಕ್ಷೆಯಲ್ಲಿ ಬಹುಮಟ್ಟಿಗೆ ಸ್ಥಿರವಾಗಿ ಇರಲು ಹಾಗೂ ಸೂರ್ಯನನ್ನು ಸದಾಕಾಲ ವೀಕ್ಷಿಸಲು ಸಮರ್ಥವಾಗಿರುತ್ತದೆ. ಭೂಕಕ್ಷೆಯಿಂದ ಈ ಬಗೆಯ ನಿರಂತರವಾದ ವೀಕ್ಷಣೆ ಸಾಧ್ಯವಾಗುವುದಿಲ್ಲ.

‘ಆದಿತ್ಯ-ಎಲ್1’ ನೌಕೆಯನ್ನು ಭಾರತದ ಧ್ರುವೀಯ ಉಪಗ್ರಹ ಉಡಾವಣಾ ವಾಹನದ (ಪಿಎಸ್ಎಲ್‌ವಿ) ಮೂಲಕ ಮುಂದಿನ ಒಂದೆರಡು ವರ್ಷಗಳಲ್ಲಿ ಅಂತರಿಕ್ಷಕ್ಕೆ ಹಾರಿಬಿಡುವ ಉದ್ದೇಶವಿದೆ. ಇದರ ಉಡಾವಣೆಯನ್ನು ಅನೇಕ ವಿಜ್ಞಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.

ಹೀಗೆ ಸಾವಿರಾರು ವರ್ಷಗಳಿಂದಲೂ ಜಗತ್ತಿನ ನಾಗರಿಕತೆಗಳು ಊಟು (ಸುಮೇರಿಯನ್), ರಾ (ಪ್ರಾಚೀನ ಈಜಿಪ್ಟ್), ಸೂರ್ಯ, ಆದಿತ್ಯ (ಭಾರತೀಯ), ಹೀಲಿಯೋಸ್ (ಪ್ರಾಚೀನ ಗ್ರೀಕ್) ಸನ್, ಸಾಲ್ (ಯೂರೋಪಿಯನ್), ಟೋನಟಿಯು (ಅಜ್ಹ್‌ಟೆಕ್ ‘ರೆಡ್’ ಇಂಡಿಯನ್ ನಾಗರಿಕತೆ) ಮುಂತಾದ ಹೆಸರುಗಳಿಂದ ಆರಾಧಿಸಲ್ಪಟ್ಟ ಸೂರ್ಯನನ್ನು ವೈಜ್ಞಾನಿಕ ಹಾಗೂ ಅರ್ಥಮಾಡಿಕೊಳ್ಳುವ, ಜೊತೆಗೆ ಸೂರ್ಯನ ‘ಸಿಟ್ಟನ್ನು’ ಸಮರ್ಥವಾಗಿ ಎದುರಿಸುವ ಪ್ರಯತ್ನವಿಂದು ನಿರಂತರವಾಗಿ ಮುಂದೆ ಸಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ.

Read More

Comments
ಮುಖಪುಟ

ವಿಶ್ವದ ಯೋಶೋಗಾಥೆಯಾದ ಕೊಪ್ಪಳದ ತ್ರಿವಳಿಗಳು !

ಹುಟ್ಟುವಾಗಲೇ ‘ಯಮಪಾಶ’ ಕ್ಕೆ ಸಿಲುಕಿದ್ದ ಈ ಮೂರು ಕಂದಮ್ಮಗಳನ್ನು ಬದುಕಿಸಿದ್ದು ಅಮ್ಮನ ಅದಮ್ಯ ಇಚ್ಛಾ ಶಕ್ತಿ. ಈ ಕಥೆಯೀಗ ವಿಶ್ವದ ‘ಯಶೋಗಾಥೆ’ ಆಗಿದೆ. ಈ ತ್ರಿವಳಿಗಳ ಮರುಜನ್ಮದ ವೃತ್ತಾಂತವನ್ನು ವಿಶ್ವ ಆರೋಗ್ಯ ಸಂಸ್ಥೆ ಜಗದೆಲ್ಲೆಡೆ ಸಾರಲು ಮುಂದಾಗಿದೆ!

ಶಮನವಾಗದ ಬಿಕ್ಕಟ್ಟು

ಸುಪ್ರೀಂ ಕೋರ್ಟ್‌ನಲ್ಲಿ ಉಂಟಾಗಿದ್ದ ಬಿಕ್ಕಟ್ಟು ಇನ್ನೂ ಶಮನವಾಗಿಲ್ಲ. ಆದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮುಂದುವರಿದಿದೆ.

ಸಾಕ್ಷಿಯನ್ನು ಖರೀದಿಸಿಲ್ಲ

ಮಹದಾಯಿ ನ್ಯಾಯಮಂಡಳಿ ಮುಂದೆ ಹಾಜರಾಗಲು ಸಾಕ್ಷಿಯಾಗಿರುವ ಪ್ರೊ. ಎ.ಕೆ. ಗೋಸಾಯಿ ಅವರಿಗೆ ಕರ್ನಾಟಕ ಸರ್ಕಾರ ಹಣ ನೀಡಿದೆ ಎಂದು ಗೋವಾದ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲ್ಯೇಕರ್‌ ಆರೋಪಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ ರೀತಿ ಮರಳು ವಿತರಿಸಿ

‘ರಾಜ್ಯದಲ್ಲಿ ಜಾರಿಯಲ್ಲಿರುವ ಮರಳು ಹರಾಜು ನೀತಿ ಅವೈಜ್ಞಾನಿಕ ಹಾಗೂ ಅವಾಸ್ತವಿಕವಾಗಿದೆ’ ಎಂದು ಹೈಕೋರ್ಟ್‌ ಕಿಡಿ ಕಾರಿದೆ.

ಸಂಗತ

ಮೈಸೂರು ‘ಸಿನಿಮಾ ಭಾಗ್ಯ’ ವಂಚನೆ ಅಕ್ಷಮ್ಯ

ಸಿನಿಮಾ ಎಂಬುದು ಇಪ್ಪತ್ತನೇ ಶತಮಾನದಲ್ಲಿ ತಂತ್ರಜ್ಞಾನ, ದೃಶ್ಯ-ಶಬ್ದ ಕಲೆಗಾರಿಕೆಯ ಹೆಣಿಗೆಯಲ್ಲಿ ಕಲಾಭಿವ್ಯಕ್ತಿಯಾಗಿಯೂ, ರಂಜನೆಯ ಮಾಧ್ಯಮವಾಗಿಯೂ ರೂಪ ಪಡೆಯಿತು. ಬೇರೆಲ್ಲಾ ಕಲಾಭಿವ್ಯಕ್ತಿ ಹಾಗೂ ರಂಜನೋದ್ಯಮಗಳಿಗಿಂತ ಹೆಚ್ಚು ವೇಗವಾಗಿ ಜಗತ್ತಿನಾದ್ಯಂತ ಹರಡಿಕೊಂಡು,

ತಿಳಿವಳಿಕೆ ಕೊರತೆ ಮತ್ತು ಪರಿಣಾಮ

ಪ್ರಚಲಿತ ವಿದ್ಯಮಾನಗಳು ಹಾಗೂ ತಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಜನಸಾಮಾನ್ಯರು ಹೊಂದಿರುವ ತಿಳಿವಳಿಕೆಯ ಮಟ್ಟವನ್ನು ಹೆಚ್ಚಿಸುವಲ್ಲಿ, ರಾಜಕೀಯ ಚರ್ಚೆಗಳಲ್ಲಿ ಬಳಕೆಯಾಗುವ ಪದಗಳು ಮಹತ್ವದ ಪಾತ್ರ ವಹಿಸಿವೆ.

ನಾವು ಮತ್ತು ನಮ್ಮ ದೇಶ

ಹಿಂದೂ ಧರ್ಮ ಇತ್ತೀಚಿನದು ಎನ್ನುವುದಾದರೆ ಇದಕ್ಕೂ ಮೊದಲು ಸಾವಿರಾರು ವರ್ಷಗಳಿಂದ ಇಲ್ಲಿ ಬದುಕಿದ ಜನರಿಗೆ ಯಾವ ಧರ್ಮವೂ ಇರಲೇ ಇಲ್ಲವೇ? ವೇದ ಕಾಲದಲ್ಲಿ ಯಾವ ಧರ್ಮವಿತ್ತು?

ವೈಚಾರಿಕ ಸ್ಪಷ್ಟತೆ ಇಲ್ಲದ ವಾದ

ಭಾರತದ ಅನೇಕ ರಾಜರು ಸೋತದ್ದು ಕುದುರೆಗಳ ಕೊರತೆಯಿಂದಾಗಿ. ಕುದುರೆ ಸೈನ್ಯದ ಕೊರತೆಯಿಂದಾಗಿ ಆನೆಗಳ ಸೈನ್ಯವಿಟ್ಟುಕೊಂಡು, ಕುದುರೆ ಸೈನ್ಯವನ್ನೇ ಹೊಂದಿದ್ದ ಮುಸ್ಲಿಂ ಅರಸರ ಸೈನ್ಯದಿಂದ. ಹಾಗಿರುವಾಗ ಕುದುರೆಯನ್ನು ಕೊಲ್ಲಬಾರದೆಂದಿದ್ದೂ ಸಹಜವೇ.

ವಾಣಿಜ್ಯ

ಬರಲಿವೆ ಅದ್ಭುತ ತಂತ್ರಜ್ಞಾನಗಳು

ಸೃಷ್ಟಿಗೆ ಪ್ರತಿಸೃಷ್ಟಿ ಮಾಡುವ ಕೆಲಸದಲ್ಲಿ ಮಾನವ ಸದಾ ಮಗ್ನನಾಗಿರುತ್ತಾನೆ. ಹೊಸ ಆವಿಷ್ಕಾರಗಳೊಂದಿಗೆ ಬದಲಾಗಿ, ಜೀವನದಲ್ಲಿ ಬದಲಾವಣೆ ತಂದು, ಅಸಾಧ್ಯ ಎನಿಸಿದ್ದನ್ನೂ ಸಾಧ್ಯ ಮಾಡಲು ಪ್ರಯತ್ನಿಸುತ್ತಾನೆ. ಪ್ರಮುಖ ಬದಲಾವಣೆ ತರುವಂತಹ ಭವಿಷ್ಯದ ತಂತ್ರಜ್ಞಾನಗಳ ಕುರಿತಾದ ಒಂದು ಇಣುಕು ನೋಟು ಇಲ್ಲಿದೆ.

ಬದಲಾವಣೆ ಹಾದಿಯಲ್ಲಿ ಜಿಎಸ್‌ಟಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದು ಆರು ತಿಂಗಳು ಪೂರ್ಣಗೊಂಡಿದ್ದು, ಹಲವು ಏರಿಳಿತಗಳ ಹೊರತಾಗಿಯೂ ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯು ನಿಧಾನವಾಗಿ ಸುಸ್ಥಿರಗೊಳ್ಳುತ್ತಿದೆ. ವರ್ತಕರು, ಉದ್ಯಮಿಗಳ ವಹಿವಾಟು ಸರಳೀಕರಣಕ್ಕೆ ಜಿಎಸ್‌ಟಿ ಮಂಡಳಿಯು ಹಲವಾರು ನಿಯಮಗಳಿಗೆ ತಿದ್ದುಪಡಿ ತಂದಿದೆ. ಅವುಗಳನ್ನು ಇಲ್ಲಿ ಹಜರತಅಲಿ ದೇಗಿನಾಳ ಅವರು ವಿವರಿಸಿದ್ದಾರೆ.

ವೈರ್‌ಲೆಸ್‌ ಮೊಬೈಲ್ ಚಾರ್ಜರ್

ಮನೆಗಳಲ್ಲಿ ಐದಾರು ಮೊಬೈಲ್ ಇದ್ದು, ಒಂದೋ-ಎರಡೋ ಚಾರ್ಜರ್ ಇದ್ದವರ ಪರದಾಟ ಮತ್ತು ಚಾರ್ಜಿಂಗ್ ತಾಕಲಾಟಕ್ಕೆ ಈ ನಿಸ್ತಂತು ಚಾರ್ಜರ್ ಇತಿಶ್ರೀ ಹಾಡಲಿದೆ.  ಕ್ರೌಡ್ ಫಂಡಿಂಗ್ ಮೂಲಕ ಈ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಇದನ್ನು ತಯಾರಿಸಿರುವ ಕಂಪನಿ ತಿಳಿಸಿದೆ.

ಈಗ ಸ್ಮಾರ್ಟ್‌ಹೋಂ ಸಮಯ

ಮನೆಯ ಆವರಣ, ಹಿಂಬಾಗಿಲು ಅಥವಾ ಮುಖ್ಯದ್ವಾರದ ಬಳಿ ಕೆಲಸದಾಳು ಅಥವಾ ಯಾರೇ ಸುಳಿದಾಡಿದರೂ, ತಕ್ಷಣ ಮಾಲೀಕನ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ.

ತಂತ್ರಜ್ಞಾನ

ಬರಲಿವೆ ಹೊಸ ತಂತ್ರಜ್ಞಾನಗಳು

ಕೃತಕ ಬುದ್ಧಿಮತ್ತೆ ಮನೆಗಷ್ಟೇ ಅಲ್ಲ ದೇಹಕ್ಕೂ ಆವರಿಸುತ್ತಿದೆ. ಸಂವಹನ ಕ್ಷೇತ್ರದ ಮತ್ತೊಂದು ಮೈಲುಗಲ್ಲು 5ಜಿ ತಂತ್ರಜ್ಞಾನ ಬಳಕೆಗೆ ಸನಿಹವಾಗುತ್ತಿದೆ. ರೋಗಗಳಿಗೆ ಹೊಸ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ದೊರೆಯಲಿದೆ. ಈ ವರ್ಷ ಬಳಕೆಗೆ ಬರಲಿರುವ ಕೆಲವು ವಿಶೇಷ ತಂತ್ರಜ್ಞಾನಗಳ ಮಾಹಿತಿ ಇಲ್ಲಿದೆ.

ಚಾಲಕನಿಲ್ಲದ ಕಾರು ಸವಾಲುಗಳೇನು?

ತಂತ್ರಜ್ಞಾನದಲ್ಲಿನ ಬದಲಾವಣೆಯೊಂದಿಗೆ ಸಮೂಹ ಸಾರಿಗೆ ವ್ಯವಸ್ಥೆಯೂ ಬದಲಾಗುತ್ತಿದೆ. ಸಾರಿಗೆ ವಾಹನಗಳಿಂದ ವಾಯುಮಾಲಿನ್ಯ ಹೆಚ್ಚಳವಾಗುತ್ತಿರುವುದು ಮುಂದುವರಿದ ದೇಶಗಳನ್ನೂ ಕಾಡುತ್ತಿದೆ.

ಜಪಾನ್‌ನಲ್ಲಿ ಮಡಚುವ ಕಾರು

‘ಆ ಜಾಗಕ್ಕೇನೋ ಕಾರಿನಲ್ಲಿ ಹೋಗಬಹುದು. ಆದರೆ, ಕಾರನ್ನು ಎಲ್ಲಿ ಪಾರ್ಕಿಂಗ್ ಮಾಡುವುದು’ ಇದು ಮಹಾನಗರಗಳಲ್ಲಿನ ಕಾರು ಮಾಲೀಕರ ದಿನ ನಿತ್ಯದ ಗೋಳು. ಕಾರಿಗೊಂದು ಸರಿಯಾದ ಜಾಗ ಪತ್ತೆಹಚ್ಚುವುದೇ ಹರಸಾಹಸದ ಕೆಲಸ. ಕಾರು ನಿಲ್ಲಿಸಲು ಜಾಗ ಸಿಕ್ಕರೂ ಅದರ ಭದ್ರತೆ ಕುರಿತು ಆತಂಕವಿರುತ್ತದೆ.

ಫೇಸ್‍‍ಬುಕ್‍‍ನಲ್ಲಿ ಸ್ಲೈಡ್‍ ಶೋ ರಚಿಸಿ

ಫೇಸ್‍‍ಬುಕ್ ಆ್ಯಪ್‍‍ ತೆರೆಯಿರಿ. ‘ಇಲ್ಲಿ ಏನಾದರೂ ಬರೆಯಿರಿ’ ಎಂಬಲ್ಲಿ ಕ್ಲಿಕ್‍‍ ಮಾಡಿ. ಈಗ ಕಾಣುವ ಆಯ್ಕೆಗಳಲ್ಲಿ Slideshow ಎಂಬಲ್ಲಿ ಕ್ಲಿಕ್ಕಿಸಿ. ಈಗ ADD PHOTOS ಎಂಬಲ್ಲಿ ಕ್ಲಿಕ್ ಮಾಡಿ. ಈಗ ನಿಮ್ಮ ಫೋನ್‍‍ನಲ್ಲಿರುವ ಚಿತ್ರಗಳ ಪೈಕಿ ಯಾವ ಚಿತ್ರಗಳನ್ನು ಸ್ಲೈಡ್ ಶೋ ಮಾಡಬೇಕೋ ಆಯಾ ಚಿತ್ರಗಳ ಮೇಲೆ ಕ್ಲಿಕ್ ಮಾಡುತ್ತಾ ಹೋಗಿ.