ಹಾರುವ ಹಕ್ಕಿಯ ವಿಳಾಸ ಹುಡುಕುತ್ತಾ…

13 Feb, 2018
ಸುನೀಲ್ ಬಾರ್ಕೂರ್

ಕಾರವಾರದ ಮೂಲೆಯಲ್ಲಿರುವ ಕೈಗಾ ವಸತಿ ಸಂಕೀರ್ಣಕ್ಕೆ ಕಳೆದ ಭಾನುವಾರ ಮಾಮೂಲಿಯದ್ದಾಗಿರಲಿಲ್ಲ. ಬೆಳಗಿನ ಜಾವ ಐದು ಗಂಟೆಯ ಚಳಿಗೆ ಜನ ಬೆಚ್ಚಗೆ ಹೊದ್ದಿಕೊಂಡು ಮಲಗಿದ್ದರೆ, ಇಲ್ಲಿ 110 ಜನರ ಗುಂಪೊಂದು ಸೈನಿಕರಂತೆ ಸಮವಸ್ತ್ರ ಧರಿಸಿ ಕೋವಿಯಂತಹ ಕ್ಯಾಮೆರಾಗಳನ್ನು ಹೆಗಲಿಗೇರಿಸಿಕೊಂಡು ಸಜ್ಜಾಗಿದ್ದರು.

ಕೈಗಾ ಅರಣ್ಯ ಪ್ರದೇಶಗಳನ್ನು ಜಾಲಾಡಿ, ಪರಿಸರಕ್ಕೆ, ಅಲ್ಲಿನ ನಿವಾಸಿಗಳಿಗೆ ಧಕ್ಕೆಯಾಗದಂತೆ ಹಕ್ಕಿಗಳ ಗಣತಿಯನ್ನು ಮಾಡುವ ಕುರಿತು ಕೆಲವು ಬಹುಮುಖ್ಯ ಸೂಚನೆಗಳನ್ನು ನೀಡಿ ಆ ಒಂಬತ್ತು ತಂಡಗಳನ್ನು ಬೀಳ್ಕೊಡಲಾಯಿತು.

ಪೂರ್ವನಿರ್ಧಾರಿತ ಅರಣ್ಯ ಪ್ರದೇಶಗಳನ್ನು ಪ್ರವೇಶಿಸಿದ ಆ ತಂಡಗಳು ಸೂರ್ಯ ಮೂಡುವ ಮೊದಲೇ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡವು.

ಅಲ್ಲಿಗೆ ದೇಶದಾದ್ಯಂತದ ಪಕ್ಷಿ ಪ್ರೇಮಿಗಳನ್ನು ಒಂದೆಡೆ ಸೇರಿಸಿದ ಕೈಗಾ ಬರ್ಡ್‌ ಮ್ಯಾರಥಾನ್ ವಿಧ್ಯುಕ್ತವಾಗಿ ಆರಂಭಗೊಂಡಿತು.

ಇಷ್ಟಕ್ಕೂ ಈ ಗಣತಿ ಕಾರ್ಯ ಶುರುವಾಗಿದ್ದು ಹೇಗೆ ಗೊತ್ತೆ?

ಅದು 2000ನೇ ಇಸವಿಯ ಆಸುಪಾಸು. ಕಾರವಾರ ತಾಲ್ಲೂಕಿನ ತುತ್ತತುದಿಯಲ್ಲಿರುವ ಕೈಗಾ ಎಂಬ ಪುಟ್ಟ ಹಳ್ಳಿ ದೇಶದ ಗಮನ ಸೆಳೆದಿತ್ತು. ಸಹಜವೇ ಬಿಡಿ, ಕರ್ನಾಟಕದಲ್ಲಿ ಪ್ರಥಮ ಹಾಗೂ ದಕ್ಷಿಣ ಭಾರತದಲ್ಲಿ ಎರಡನೆಯ ಎನಿಸಿದ ಅಣುವಿದ್ಯುತ್ ಕೇಂದ್ರಗಳು ಆಗಷ್ಟೇ ಅಲ್ಲಿ ಕಾರ್ಯಾರಂಭ ಮಾಡಿದ್ದವು. ಇನ್ನೆರಡು ಹೊಸ ಸ್ಥಾವರಗಳ ನಿರ್ಮಾಣ ಕಾರ್ಯವೂ ವೇಗ ಪಡೆದುಕೊಂಡಿತ್ತು.

ಅಣುವಿದ್ಯುತ್ ಕೇಂದ್ರಗಳು ಕೈಗಾದಲ್ಲಿದ್ದರೆ, ನೌಕರರ ಮತ್ತು ಕಾರ್ಮಿಕರ ವಸತಿ ಸಮುಚ್ಛಯಗಳು ಸ್ಥಿತವಾಗಿದ್ದುದು ಅಲ್ಲಿಂದ ಸುಮಾರು 16 ಕಿ.ಮೀ. ದೂರದಲ್ಲಿರುವ ಮಲ್ಲಾಪುರ ಎಂಬ ಇನ್ನೊಂದು ಪುಟ್ಟ ಹಳ್ಳಿಯಲ್ಲಿ. ಈ ಪೂರ್ತಿ ಪ್ರದೇಶವು ಕಾಳಿನದಿಯ ತೀರದಲ್ಲಿದ್ದು ಹಚ್ಚ ಹಸಿರಿನ ದಟ್ಟ ಕಾನನದಿಂದ ಸುತ್ತುವರಿದಿದೆ. ನಗರದ ಜಂಜಾಟದಿಂದ ದೂರಸರಿದು ಇತ್ತ ಬಂದವರಿಗೆ ನಿಸರ್ಗವೇ ಇಲ್ಲಿ ಎಲ್ಲ. ರಾಜ್ಯದ ಅತಿಹೆಚ್ಚು ಮಳೆಬೀಳುವ ಪ್ರದೇಶಗಳಲ್ಲಿ ಒಂದಾಗಿರುವ ಈ ಪ್ರದೇಶವು ಹಸಿರನ್ನು ಹೊದ್ದು ಮಲಗಿದಂತಿದ್ದು ಎಂಥವರಿಗೂ ತನ್ನ ಸೌಂದರ್ಯದಿಂದ ಮನಸೋಲುವಂತೆ ಮಾಡುವುದು ಸುಳ್ಳಲ್ಲ.

ಅಣುವಿದ್ಯುತ್ ನಿಗಮದ ಬೇರೆಯ ಕೇಂದ್ರಗಳಿಂದ ಈ ಸ್ಥಾವರಕ್ಕೆ ವರ್ಗವಾಗಿ ಬಂದಂತಹ ಅನೇಕರಲ್ಲಿ ಕೇರಳ ಮೂಲದ ರಾಜೀವ್‌ ಕೂಡ ಒಬ್ಬರು. ಉತ್ತರ ಪ್ರದೇಶದ ನರೋರ ಅಣುವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡಿ ಬಂದಂತಹ ಅವರಿಗೆ ಪಕ್ಷಿವೀಕ್ಷಣೆ ನೆಚ್ಚಿನ ಹವ್ಯಾಸ. ಅವರ ಹವ್ಯಾಸಕ್ಕೆ ಪೂರಕವಾದಂತೆಯೇ ನಿಸರ್ಗದ ತೊಟ್ಟಿಲಲ್ಲಿ ಕೈಗಾ ಇದ್ದುದರಿಂದ ಸ್ಥಳೀಯವಾಗಿ ಏನಾದರೂ ಪರಿಸರ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಸಕ್ತಿಯೂ ಅವರಲ್ಲಿತ್ತು. ಕೆಲವು ಪರಿಸರಪ್ರೇಮಿ ಗೆಳೆಯರು ಸಂಘಟಿತರಾಗಿ ಒಂದು ತಂಡವನ್ನು ರಚಿಸಿಕೊಂಡರು. ಈ ಸಂಘಟನೆಯ ಮೂಲಕ ಚಾರಣ, ಬೋಟಿಂಗ್‌, ಇಲ್ಲಿನ ಔಷಧೀಯ ಸಸ್ಯಗಳ ಪರಿಚಯ ಯಾತ್ರೆ... ಹೀಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಹೀಗೊಂದು ದಿನ ರಾಜೀವ್‌ಗೆ ಕೇರಳದಲ್ಲಿ ನಡೆಯಲ್ಲಿದ್ದ ಪಕ್ಷಿಗಣತಿಯಲ್ಲಿ ಭಾಗವಹಿಸಲು ಅವಕಾಶವೊದಗಿ ಬಂತು. ‘ನನಗೆ ಅದೊಂದು ಅಪೂರ್ವ ಅನುಭವ ಅಲ್ಲಿಂದ ಬಂದ ನಂತರ ಇಲ್ಲಿಯೂ ಅಂಥದ್ದೊಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಬಗ್ಗೆ ತಲೆಯಲ್ಲಿ ವಿಚಾರ ಕೊರೆಯತೊಡಗಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ರಾಜೀವ್‌ ಕನಸು ನನಸಾಗಿಸಲು ಅವಕಾಶವೊಂದು ಹುಡುಕಿಕೊಂಡು ಬಂತು. 2005ರಲ್ಲಿ ಭಾರತೀಯ ಅಣುಶಕ್ತಿ ನಿಗಮವು ತನ್ನ ಎಲ್ಲ ಸ್ಥಾವರಗಳಲ್ಲಿ ಪರಿಸರ ಪೂರಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಲು ಪರಿಸರ ಮುಂದಾಳತ್ವ ಕಾರ್ಯಕ್ರಮವನ್ನು ಆರಂಭಿಸಿತು. ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿಯೊಡನೆ ಒಪ್ಪಂದ ಮಾಡಿಕೊಂಡ ನಿಗಮವು ಅಲ್ಲಿನ ಪರಿಣತರನ್ನು ತನ್ನ ಸ್ಥಾವರಗಳಿಗೆ ಕಳುಹಿಸಿ ಸ್ಥಳೀಯ ಕಾರ್ಯಕರ್ತರನ್ನು ತರಬೇತಿ ನೀಡಲು ಯೋಜನೆಯನ್ನು ರೂಪಿಸಿತು. ಕೈಗಾ ಆಡಳಿತ ಮಂಡಳಿಯು ಇನ್ನೊಂದು ಹೆಜ್ಜೆ ಮುಂದೆ ಹೋಗಿ ತನ್ನ ನೌಕರರಲ್ಲಿ ಆಸಕ್ತರನ್ನು ಸೇರಿಸಿ ಒಂದು ಸಮಿತಿಯನ್ನು ರಚಿಸಿ ಈ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವ ಜವಾಬ್ದಾರಿ ನೀಡಿತು. ಸಮಿತಿಗೆ ನೇಮಕ ಗೊಂಡಿದ್ದ ರಾಜೀವ್‌ ಅವರು, ಪಕ್ಷಿಗಣತಿಯ ಪ್ರಸ್ತಾವವನ್ನು ಕೈಗಾದ ಆಗಿನ ಸ್ಥಳ ನಿರ್ದೇಶಕ ಜೆ.ಪಿ.ಗುಪ್ತಾ ಅವರ ಮುಂದಿಟ್ಟು ಒಪ್ಪಿಗೆ ಪಡೆದರು.

ಒಪ್ಪಿಗೆಯೇನೋ ದೊರೆಯಿತು ಆದರೆ ಸಂಘಟಿಸುವುದು ಹೇಗೆ ಎಂಬ ಮಂಡೆಬಿಸಿ ಆಯೋಜಕರಿಗೆ ಶುರುವಾಯಿತು. ಕಾರ್ಯಕರ್ತರಾಗಿ ಭಾಗವಹಿಸಲು ಉತ್ಸಾಹಿ ಪಡೆಯೇ ಕೈಗಾದಲ್ಲಿತ್ತು. ಆದರೆ ಹಕ್ಕಿಗಳನ್ನು ನೋಡಿ ಅವುಗಳನ್ನು ಕರಾರುವಾಕ್ಕಾಗಿ ಗುರುತಿಸಬಲ್ಲ ತಜ್ಞರ ಕೊರತೆ ಮುಖ್ಯವಾಗಿ ಇವರಿಗಿತ್ತು.

ಹೀಗಾಗಿ ಆಸುಪಾಸಿನಲ್ಲಿರುವ ಪಕ್ಷಿತಜ್ಞರಿಗಾಗಿ ಹುಡುಕಾಟ ಶುರುವಾಯಿತು. ಅದಾಗಲೇ ಈ ಕ್ಷೇತ್ರದಲ್ಲಿ ತಮ್ಮ ಚಟುವಟಿಕೆಯಿಂದ ಗುರುತಿಸಿಕೊಳ್ಳುತ್ತಿದ್ದ ಉತ್ತರ ಕರ್ನಾಟಕ ಪಕ್ಷಿ ವೀಕ್ಷಕರ ತಂಡವನ್ನು ಸಂಪರ್ಕಿಸಿ ಅಲ್ಲಿಂದ ಕೆಲವು ಪರಿಣತರನ್ನು ಆಹ್ವಾನಿಸಲಾಯಿತು. ಶಿರಸಿಯ ಅರಣ್ಯ ಕಾಲೇಜು ಸಹ ತನ್ನ ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ನಿಯೋಜಿಸಿ ತನ್ನ ಸಹಕಾರ ನೀಡಿತು. ಇವೆಲ್ಲವುದರ ಪರಿಣಾಮವಾಗಿ 20 ಫೆಬ್ರುವರಿ 2011ರಂದು ಪ್ರಥಮ ಕೈಗಾ ಬರ್ಡ್‌ ಮ್ಯಾರಥಾನ್ ಆಯೋಜನೆಗೊಂಡಿತು. 40 ಸದಸ್ಯರನ್ನು ತಲಾ ಹತ್ತರಂತೆ ನಾಲ್ಕು ತಂಡಗಳಾಗಿ ವರ್ಗೀಕರಿಸಿ ನಿರ್ಧರಿಸಿದ ಕ್ಷೇತ್ರಗಳಿಗೆ ಕಳುಹಿಸಲಾಯಿತು. ಬೆಳಗಿನ ಜಾವ 5 ಗಂಟೆಗೆ ಆರಂಭವಾದ ಈ ಪಕ್ಷಿ ಹುಡುಕಾಟ ಪೂರ್ವ ನಿರ್ಧಾರದಂತೆ ಸಾಯಂಕಾಲ ನಾಲ್ಕರವರೆಗೆ ನಡೆಯಿತು.

‘ತಂಡದಲ್ಲಿದ್ದ ಒಂದೆರಡು ಜನ ಪರಿಣತರನ್ನು ಬಿಟ್ಟರೆ ಇನ್ನುಳಿದವರು ಹೊಸತೇನೋ ನಡೆಯುತ್ತಿದೆಯೆಂಬ ಕುತೂಹಲದಿಂದ ಭಾಗವಹಿಸಲು ಬಂದವರು. ಪರಿಣತರು ಹೇಳಿದ್ದನ್ನು ಬರೆದುಕೊಳ್ಳುವುದೇ ನಮ್ಮ ಕೆಲಸವಾಗಿತ್ತೇ ವಿನಃ ಅವುಗಳ ಕುಲ, ಗೋತ್ರ ನಮಗೆ ಗೊತ್ತಾಗುತ್ತಿರಲಿಲ್ಲ. ಹಕ್ಕಿಗಳು ಅತ್ಯಂತ ಸೂಕ್ಷ್ಮಜೀವಿಗಳು. ಹೀಗಾಗಿ ಇಂತಹದ್ದೊಂದು ಗಣತಿಯಲ್ಲಿ ಪಾಲ್ಗೊಳ್ಳುವವರು ಅಲ್ಲಿ ಶಾಂತಿಯಿಂದ ವರ್ತಿಸಬೇಕಾಗಿದ್ದುದು ಅವಶ್ಯ. ನಮಗೆಲ್ಲರಿಗೂ ಅದು ಪ್ರಥಮವಾಗಿದ್ದುದರಿಂದ ಪಿಸುಗುಟ್ಟಿ ಹಕ್ಕಿಗಳು ಓಡಿಹೋಗಿ ನಂತರ ತಂಡದ ನಾಯಕರಿಂದ ಬೈಸಿಕೊಂಡಿದ್ದೂ ಉಂಟು. ನಾನಂತೂ ಕಾಡಿಗೆ ಹೋದಾಗ ದಾರಿ ತಪ್ಪಿ ತಂಡದಿಂದ ಬೇರಾಗಿ ಕೊನೆಗೆ ಇವರನ್ನು ಹುಡುಕುತ್ತಾ ಅಲ್ಲೇ ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನೆಯಲ್ಲಿ ಭಾಗವಹಿಸಿ ಸಹ ಬಂದಿದ್ದೆ’ ಎನ್ನುತ್ತಾರೆ ಕೈಗಾದ ಅನಂತ ಉಪಾಧ್ಯಾಯ.

ಕೈಗಾ ಬರ್ಡ್‌ ಮ್ಯಾರಥಾನ್ 2011ರ ಯಶಸ್ಸು ಸ್ಥಳೀಯರಲ್ಲಿ ಪಕ್ಷಿವೀಕ್ಷಣೆಯ ಬಗ್ಗೆ ಆಸಕ್ತಿಯನ್ನು ಹುಟ್ಟುಹಾಕುವ ಜೊತೆಗೆ ಆಯೋಜಕರಲ್ಲಿಯೂ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವ ನಿಟ್ಟಿನಲ್ಲಿ ಯೋಚಿಸುವಂತೆ ಮಾಡಿತು. ವಾರಾಂತ್ಯದಲ್ಲೋ ರಜಾದಿನಗಳಲ್ಲೋ ತಮ್ಮದೊಂದು ತಂಡಕಟ್ಟಿಕೊಂಡು ಪಕ್ಷಿಗಳನ್ನು ನೋಡುತ್ತಾ ಗುರುತಿಸುವ ಪ್ರಯತ್ನ ಅಲ್ಲಲ್ಲಿ ಆರಂಭವಾದವು. ‘ಪ್ರಥಮ ಮ್ಯಾರಥಾನ್‌ ಸಮಯದಲ್ಲಿ ಕೈಗಾ 1-4 ಸ್ಥಳ ನಿರ್ದೇಶಕ ಜೆ.ಪಿ.ಗುಪ್ತಾ ಮತ್ತು ಕೈಗಾ 1-2ರ ನಿಲಯ ನಿರ್ದೇಶಕ ಎಚ್.ಎನ್.ಭಟ್‌ ಅವರು ಬೆಳಗಿನಿಂದ ರಾತ್ರಿಯವರೆಗೆ ನಮ್ಮೊಡನೆಯೇ ಇದ್ದರು. ಇದು ನಮ್ಮ ಕಾರ್ಯಕ್ರಮವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವತ್ತ ಯೋಚಿಸುವಂತೆ ಮಾಡಿತು’ ಎನ್ನುತ್ತಾರೆ ರಾಜೀವ್‌.

2012ರ ಮ್ಯಾರಥಾನ್‍ಗೆ ಕರಾವಳಿ ಕರ್ನಾಟಕದ ಪಕ್ಷಿವೀಕ್ಷಣಾ ತಂಡ, ಬೆಳಗಾವಿ ಪಕ್ಷಿ ವೀಕ್ಷಕರು ಜೊತೆಗೆ ಅಣುಶಕ್ತಿ ನಿಗಮದ ಮುಂಬೈ ಮುಖ್ಯ ಕಚೇರಿಯ ಸದಸ್ಯರು, ಬಿಎನ್ನೆಚ್ಚೆಸ್ ಸಂಸ್ಥೆ ಹೀಗೆ ಇನ್ನಷ್ಟು ಹೊಸ ತಂಡಗಳ ಹೊಸ ಮುಖಗಳ ಸೇರ್ಪಡೆಯಾಯಿತು. ಅಚ್ಚುಕಟ್ಟಾದ ಆಯೋಜನೆ, ಹಸಿರು ಹೊತ್ತು ಮಲಗಿದಂತಹ ಕಾಡಿನ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಸೇರ್ಪಡೆಯಾಗುತ್ತ ಹೋದ ಹೊಸ ಹೊಸ ಹಕ್ಕಿಗಳು ಈ ಎಲ್ಲ ಕಾರಣಗಳಿಂದ ಬೆಳೆಯುತ್ತಾ ಹೋದ ಕೈಗಾ ಬರ್ಡ್‌ ಮ್ಯಾರಥಾನ್ ಖ್ಯಾತಿ ನಂತರದ ವರ್ಷಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಬ್ಬಿತು. ಇದೇ ಜನವರಿ ಕೊನೆಯ ವಾರದಲ್ಲಿ ನಡೆದ ಎಂಟನೆಯ ಆವೃತ್ತಿಯಲ್ಲಿ ಸ್ಥಳೀಯ ಕೈಗಾ ನೌಕರರು, ಶಿರಸಿಯ ಅರಣ್ಯ ಮಹಾವಿದ್ಯಾಲಯ, ಉತ್ತರ ಕರ್ನಾಟಕ ಪಕ್ಷಿ ವೀಕ್ಷಣಾ ತಂಡ, ಗೋವಾ ಬರ್ಡ್‌ ಕನ್ಸರ್ವೇಷನ್ ನೆಟ್‌ವರ್ಕ್‌, ಗೋವಾ ಮಹಾವಿದ್ಯಾಲಯ, ಬೆಂಗಳೂರು ಪಕ್ಷಿ ವೀಕ್ಷಣಾಕಾರರ ಸಂಘ, ವೈಲ್ಡ್‌ಲೈಫ್‌ ಇನ್‌ಸ್ಟಿಟೂಟ್‌ ಆಫ್‌ ಇಂಡಿಯಾ ಡೆಹ್ರಾಡೂನ್, ಕೇರಳ ಬರ್ಡ್ಸ್ ಹೀಗೆ ರಾಜ್ಯವಷ್ಟೇ ಅಲ್ಲದೇ ದೇಶದ ಎಲ್ಲಾ ಭಾಗದಿಂದ ಬಂದ ಸುಮಾರು 110 ಪಕ್ಷಿ ವೀಕ್ಷಣಾಕಾರರು ಭಾಗವಹಿಸಿದ್ದರು. ಎಂಟು ಹೊಸ ಪಕ್ಷಿಗಳ ಪತ್ತೆಯಾಗಿದ್ದು, ಈವರೆಗೆ ಗಣತಿಯಲ್ಲಿ ಪತ್ತೆಯಾದ ಪಕ್ಷಿಗಳ ಸಂಖ್ಯೆಯು 284ಕ್ಕೆ ತಲುಪಿದೆ.

‘ಮೊದಲು ನಾಲ್ಕು ಪ್ರದೇಶಗಳಿಗೆ ಸೀಮಿತವಾಗಿದ್ದ ಈ ಪಕ್ಷಿ ವೀಕ್ಷಣಾ ಕಾರ್ಯವನ್ನು ನಂತರದ ದಿನಗಳಲ್ಲಿ ಎಂಟಕ್ಕೆ ಏರಿಸಲಾಯಿತು. ಈ ವರ್ಷ ಇನ್ನೊಂದು ಹೊಸ ಪ್ರದೇಶವನ್ನು ಸೇರಿಸಿದ್ದೇವೆ’ ಎನ್ನುತ್ತಾರೆ ತಂಡದ ಸದಸ್ಯ ಮೋಹನದಾಸ.

‘ಬರ್ಡ್‌ ಮ್ಯಾರಥಾನ್‌ ಯಶಸ್ಸು ನಮಗೆ ಇನ್ನಷ್ಟು ಪರಿಸರಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸ್ಫೂರ್ತಿ ನೀಡಿದೆ. ಕಳೆದ ಅಕ್ಟೋಬರ್‌ನಲ್ಲಿ ನಾವು ಸ್ಥಳೀಯವಾಗಿ ಚಿಟ್ಟೆಗಳ ಗಣತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಇದನ್ನೂ ಮುಂಬರುವ ದಿನಗಳಲ್ಲಿ ಬರ್ಡ್‌ ಮ್ಯಾರಥಾನ್‌ ರೀತಿಯಲ್ಲೇ ದೊಡ್ಡ ಪ್ರಮಾಣದಲ್ಲಿ ಆಯೋಜಿಸುವ ವಿಚಾರವಿದೆ’ ಎನ್ನುತ್ತಾರೆ ಕಾರ್ಯಕ್ರಮದ ಸಂಚಾಲಕ ಟಿ. ಪ್ರೇಮಕುಮಾರ್.

ಹೀಗೆ ನಡೆಯುತ್ತದೆ ಗಣತಿ...

ಕೈಗಾದ ಆಸುಪಾಸಿನಲ್ಲಿ ಪಕ್ಷಿ ಗಣತಿಗೆ ಒಟ್ಟು ಒಂಬತ್ತು ಕ್ಷೇತ್ರಗಳನ್ನು ಗುರುತಿಸಲಾಗಿದ್ದು ಪ್ರತಿಕ್ಷೇತ್ರವು ಸುಮಾರು ಎಂಟರಿಂದ ಹತ್ತು ಕಿ.ಮೀ. ವ್ಯಾಪ್ತಿಯನ್ನು ಹೊಂದಿರುತ್ತದೆ. ಪ್ರತಿ ಕ್ಷೇತ್ರಕ್ಕೆ ಹನ್ನೆರಡರಿಂದ ಹದಿನೈದು ಜನರ ತಂಡವು ಭೇಟಿ ನೀಡಿ ಗಣತಿಯನ್ನು ಮಾಡುತ್ತದೆ. ಪ್ರತಿ ತಂಡಕ್ಕೆ ಅತ್ಯಂತ ಅನುಭವಿ ಪಕ್ಷಿತಜ್ಞರನ್ನು ನಾಯಕನನ್ನಾಗಿ ನೇಮಿಸಲಾಗುತ್ತದೆ.

ಉಳಿದಂತೆ ತಂಡವು ಅನುಭವಿಕ, ಆರಂಭಿಕ, ಸ್ಥಳೀಯ ಕ್ಷೇತ್ರಜ್ಞಾನವನ್ನು ಹೊಂದಿರುವವ ಹೀಗೆ ಎಲ್ಲ ರೀತಿಯ ಪಕ್ಷಿಪ್ರಿಯರ ಸಮಾಗಮ ಆಗಿರುತ್ತದೆ. ಈಗಾಗಲೇ ಮ್ಯಾರಥಾನ್‍ನಲ್ಲಿ ಕಂಡು ಬಂದ ಎಲ್ಲ ಪಕ್ಷಿಗಳ ಪಟ್ಟಿ ತಂಡದ ಬಳಿ ಇರುತ್ತದೆ. ತಮ್ಮ ಕ್ಷೇತ್ರದಲ್ಲಿ ಸುತ್ತಾಡುತ್ತ ಹೋದಾಗ ಕಂಡು ಬಂದ ಹಕ್ಕಿಗಳನ್ನು ಅಲ್ಲಿ ನಮೂದಿಸಲಾಗುತ್ತದೆ. ಪ್ರಮಾಣೀಕರಿಸಲು ಈ ಎಲ್ಲ ಹಕ್ಕಿಗಳ ಛಾಯಾಚಿತ್ರಗಳನ್ನೂ ಸೆರೆ ಹಿಡಿಯಲಾಗುತ್ತದೆ. ನಸುಕಿನಿಂದ ಮಧ್ಯಾಹ್ನದವರೆಗೆ ನಡೆಯುವ ಗಣತಿಯ ನಂತರ ಈ ಪಟ್ಟಿಯನ್ನು ಚಿತ್ರಗಳೊಂದಿಗೆ ತಾಳೆಹಾಕಿ ನಾಯಕ ತನ್ನ ತಂಡ ಕಂಡುಹಿಡಿದ ಹಕ್ಕಿಗಳ ಪಟ್ಟಿಯನ್ನು ಪ್ರಕಟಿಸುತ್ತಾನೆ.

ಪಟ್ಟಿಯ ಹೊರತಾಗಿ ಹೊಸ ಪಕ್ಷಿ ಕಂಡಲ್ಲಿ ಅಥವಾ ಹಕ್ಕಿಯ ಪ್ರಜಾತಿಯ ಬಗ್ಗೆ ಗೊಂದಲವಿದ್ದಲ್ಲಿ ಎಲ್ಲ ಪರಿಣತರು ಒಗ್ಗೂಡಿ ಛಾಯಾಚಿತ್ರಗಳನ್ನು ವಿಮರ್ಶಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸುತ್ತಾರೆ. ಪ್ರಸಕ್ತ ವರ್ಷದಲ್ಲಿ ಕಂಡುಬಂದ ಹೊಸ ಹಕ್ಕಿಗಳ ಹೆಸರುಗಳನ್ನು ಸೇರಿಸಿ ಮುಂದಿನ ವರ್ಷದ ಪಟ್ಟಿಯನ್ನು ತಯಾರಿಸಲಾಗುತ್ತದೆ.

ಈ ಏಳು ವರ್ಷಗಳಲ್ಲಿ ಕೈಗಾದಲ್ಲೂ ಸಾಕಷ್ಟು ಪಕ್ಷಿಪ್ರೇಮಿಗಳ ದಂಡೇ ಹುಟ್ಟಿಕೊಂಡಿದ್ದು ಇದರಲ್ಲಿ ಮಹಿಳೆಯರು ಮತ್ತು ಶಾಲಾ ಮಕ್ಕಳೂ ಆಸಕ್ತಿಯಿಂದ ಭಾಗವಹಿಸುತ್ತಿರುವುದು ಉಲ್ಲೇಖನೀಯ. ಇಲ್ಲಿನ ಪಕ್ಷಿ ವೀಕ್ಷಕರಿಗೆ ಹೊರಜಿಲ್ಲೆಯ, ಹೊರರಾಜ್ಯದ ಪಕ್ಷಿ ಸರ್ವೇಕ್ಷಣಾ ಕಾರ್ಯಕ್ರಮಗಳಲ್ಲಿ ಆಹ್ವಾನಿಸುತ್ತಿರುವುದರ ಬಗ್ಗೆ ಆಯೋಜಕರಲ್ಲಿ ಹೆಮ್ಮೆ ಇದೆ. ಪಕ್ಷಿವೀಕ್ಷಣೆಯ ಬಗ್ಗೆ ನಿಮಗೂ ಆಸಕ್ತಿಯಿದೆಯಾ? ಮುಂದಿನ ಆವೃತ್ತಿಗೆ ಈಗಲೇ ತಯಾರಾಗಿ.
***
ಕಂಡದ್ದು ಯಾವ ಪಕ್ಷಿಗಳು?

ಪ್ರಸಕ್ತ ವರ್ಷ ಈ ಮ್ಯಾರಥಾನ್‌ನಲ್ಲಿ ಕಂಡುಬಂದ ಹೊಸ ಪಕ್ಷಿಗಳು ಹೀಗಿವೆ: ಇಂಡಿಯನ್ ಸ್ವಿಫ್ಟ್‌ಲೆಟ್, ವೈಟ್ರಂಪಡ್ ಸ್ಪೇನ್ ಟೇಲ್, ಯುರೇಶಿಯನ್ ಹಾಬಿ, ನಾರ್ದರ್ನ್‌ ಪಿನ್‌ಟೇಲ್, ನಾರ್ದರ್ನ್‌ ಶೆವೇಲಿಯರ್, ಗ್ರೇ ಬೆಲ್ಲಿಡ್ ಕುಕ್ಕೂ, ಗ್ರೇಟರ್ ಸ್ಪಾಟೆಡ್‌ ಈಗಲ್, ಯುರೇಶಿಯನ್ ಸ್ಪ್ಯಾರೊ ಹಾಕ್.

ಚಿತ್ರಗಳು : ಆರ್. ಬೈಯಣ್ಣ, ಹರೀಶ ಕೂಳೂರು, ಜಲಿಲ್ ಬಾರ್ಗಿರ್, ವಿದ್ಯಾ ಬಾರ್ಕೂರ್

Comments
ಮುಖಪುಟ

‘ಕುಟುಂಬದ ಹಸ್ತಕ್ಷೇಪಕ್ಕೆ ಅವಕಾಶವೇ ಇಲ್ಲ’

‘ನಾಡಿನ ಜನ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡದೇ ಇದ್ದರೂ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಭರವಸೆ ಈಡೇರಿಸಲು ಸಾಧ್ಯವಾಗದೇ ಇದ್ದರೆ ನಾನು ಈ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ. ನಾನೇ ಹಿಂದೆ ಸರಿಯುತ್ತೇನೆ’ –ಎಚ್.ಡಿ. ಕುಮಾರಸ್ವಾಮಿ.

ಖಾತೆ ಕ್ಯಾತೆ: ವಿಸ್ತರಣೆ ವಿಳಂಬ

ಹಣಕಾಸು ಖಾತೆಗಾಗಿ ಜೆಡಿಎಸ್‌ ಬಿಗಿಪಟ್ಟು ಮುಂದುವರಿಸಿದೆ. ಇದರಿಂದ ಬೆದರಿರುವ ಕಾಂಗ್ರೆಸ್ ವರಿಷ್ಠರು ಈ ಖಾತೆ ಬಿಟ್ಟು ಕೊಡುವ ಆಲೋಚನೆಯಲ್ಲಿ ಇದ್ದಾರೆ. ಇನ್ನುಳಿದ ಖಾತೆಗಳ ಹಂಚಿಕೆ ಬಗ್ಗೆ ಚರ್ಚೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಚಿವ ಸಂಪುಟದ ಉಳಿದ ಸದಸ್ಯರ ಪ್ರಮಾಣ ವಚನಕ್ಕೆ ವಾರಾಂತ್ಯದವರೆಗೆ ಮುಹೂರ್ತ ನಿಗದಿಯಾಗುವ ಲಕ್ಷಣ ಕಾಣಿಸುತ್ತಿಲ್ಲ.

ಶೇನ್ ‘ಸೂಪರ್’ ಆಟ; ಚೆನ್ನೈಗೆ ಕಿರೀಟ

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್‌ 2018ರ ಫೈನಲ್‌ ಪಂದ್ಯದಲ್ಲಿ ಶೇನ್‌ ವಾಟ್ಸನ್ ಅವರ ಭರ್ಜರಿ ಶತಕದ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಅಮೋಘ ಜಯ ಸಾಧಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ರೈತರ ಸಾಲ ಮನ್ನಾ: ಕರ್ನಾಟಕ ಬಂದ್‌ ಅನುಮಾನ?

‘ರೈತರ ಸಾಲ ಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್‌ ನಡೆಸುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸದನದಲ್ಲಿ ಶುಕ್ರವಾರ ಹೇಳಿದ್ದರು. ಬಂದ್‌ ವೇಳೆ ಬಿಗಿ ಭದ್ರತೆ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ (ಡಿಜಿ–ಐಜಿ) ನೀಲಮಣಿ ರಾಜು, ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಂಗತ

ದುರ್ಬಲ ರಾಜಕಾರಣಿಗಳು

ಕಂಡಕಂಡವರಿಗೆಲ್ಲ ಉದ್ದಂಡ, ದೀರ್ಘದಂಡ ನಮಸ್ಕಾರ ಹಾಕಿ, ತಮ್ಮ ವ್ಯಕ್ತಿತ್ವವನ್ನೇ ಇಲ್ಲಗೈಯುತ್ತಿರುವ ರಾಜಕಾರಣಿಗಳು ಈ ರಾಜ್ಯಕ್ಕೆ, ಈ ದೇಶಕ್ಕೆ ಬೇಡವೇ ಬೇಡ

ಇವಿಎಂ ಮತ್ತು ಮುಂದಿನ ಚುನಾವಣೆಗಳು

ಮೇ 12ರಂದು ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯನ್ನು ಮೇ 13ರ ಸಂಚಿಕೆಯಲ್ಲಿ ಎಲ್ಲಾ ಪತ್ರಿಕೆಗಳು ವಿವರವಾಗಿ ದಾಖಲಿಸಿದ್ದವು. ಆದರೆ, ‘ಪ್ರಜಾವಾಣಿ’ಯಲ್ಲಿ ಬಂದ ವಿವರಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಎರಡು ಅಂಶಗಳಿದ್ದುವು. ಈ ಅಂಶಗಳನ್ನು ಓದುಗರು

ಪಾರದರ್ಶಕತೆ ಮುಖ್ಯ

ಇವಿಎಂನ ವಿಶ್ವಾಸಾರ್ಹತೆ ಸಾಬೀತುಪಡಿಸಲು ವಹಿಸುವ ಮುತುವರ್ಜಿಯ ಜೊತೆಜೊತೆಗೆ ಅದರ ದುರ್ಬಳಕೆಗೆ ಇರುವ ಅವಕಾಶಗಳತ್ತ ಕೂಡ ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳು ಗಮನಹರಿಸುವುದು ಅಗತ್ಯ.

ಪ್ರಜಾಪ್ರಭುತ್ವದ ಹೆಚ್ಚುಗಾರಿಕೆ

ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಕಾರಣಕ್ಕಾಗಿ ಪುಟ್ಟ ಪುಟ್ಟ ಸಮುದಾಯಗಳಲ್ಲಿ ಸ್ವಾಭಿಮಾನ ಮತ್ತು ಒಟ್ಟುಗೂಡುವಿಕೆಗೆ ಜೀವ ಬಂದಿದೆ

ಆಟಅಂಕ

ಅಲೋಕ್ ಕನಸುಗಳ ‘ಏಸ್’

‘ಟೆನಿಸ್‌ ದುಬಾರಿ ಆಟವಾಗಿದ್ದು, ಬಡವರ ಕೈಗೆಟುಕುವುದಿಲ್ಲ. ಇದೂ ಒಂದು ರೀತಿಯಲ್ಲಿ ಜೂಜಾಟ ಇದ್ದಂತೆ. ಆಟದಲ್ಲಿ ಕ್ಲಿಕ್‌ ಆದರೆ ನಾವು ಹೂಡಿದ ಹಣ ಬರುತ್ತದೆ; ಇಲ್ಲದಿದ್ದರೆ ಎಲ್ಲವನ್ನೂ ಕಳೆದುಕೊಂಡು ಬರಿದಾಗುತ್ತೇವೆ’ ಎಂಬುದು ಅಲೋಕ್‌ ಅಭಿಪ್ರಾಯ.

ಅವಕಾಶಕ್ಕಾಗಿ ಕಾದವರು...

ಐಪಿಎಲ್‌ 11ನೇ ಆವೃತ್ತಿ ಮುಕ್ತಾಯ ಗೊಂಡಿದೆ. ಪ್ರಶಸ್ತಿ ಕನಸು ಹೊತ್ತು ಭರವಸೆಯಿಂದ ಕಣಕ್ಕೆ ಇಳಿದಿದ್ದ ಎಷ್ಟೋ ತಂಡಗಳು ಪ್ಲೇ ಆಫ್ ಹಂತಕ್ಕೇರುವುದಕ್ಕೂ ಸಾಧ್ಯವಾಗದೆ ನಿರಾಸೆಗೊಂಡಿವೆ. ಇದು ತಂಡಗಳ ಕಥೆಯಾದರೆ, ಆಯ್ಕೆಯಾಗಿಯೂ ಆಡಲು ಸಾಧ್ಯವಾಗದ ಯುವ ಆಟಗಾರರು ಅನೇಕರು ಇದ್ದಾರೆ. ಅವರು ಈಗ ನಿರಾಸೆಗೊಂಡಿದ್ದಾರೆ.
 

ಕೈಗೂಡುವುದೇ ಪದಕದ ಕನಸು?

ಏಳುಬೀಳುಗಳ ನಡುವೆ ಸಾಗುತ್ತಿರುವ ಭಾರತ ಮಹಿಳಾ ಹಾಕಿ ತಂಡ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. 2014ರ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು, ಏಷ್ಯಾ ಕಪ್‌ನಲ್ಲಿ ಚಿನ್ನ, ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಹೀಗೆ ಹಲವು ಪದಕಗಳನ್ನು ಜಯಿಸಿದೆ. ಈ ಎಲ್ಲ ಸಾಧನೆ ಜುಲೈ 21ರಿಂದ ಲಂಡನ್‌ನಲ್ಲಿ ಆರಂಭವಾಗುವ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಪದಕ ಗೆಲ್ಲುವ ಆಸೆಗೆ ಸ್ಫೂರ್ತಿಯಾಗುವುದೇ?  

ಟಾಸ್ ಏನ್ ಆಗುತ್ತೆ..?

ಇದೀಗ ಟಾಸ್ ಹಾಕುವ ಪದ್ಧತಿಯನ್ನು ಕೈಬಿಡಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಚಿಂತನೆ ನಡೆಸಿದೆ. ಇದಕ್ಕೆ ಹಲವು ಹಿರಿಯ ಆಟಗಾರರಿಂದ ಪರ–ವಿರೋಧದ ಚರ್ಚೆಗಳು ಆರಂಭವಾಗಿವೆ.

ಶಿಕ್ಷಣ

ಪರೀಕ್ಷೆ ಎಂಬುದು ಪೆಡಂಭೂತ ಅಲ್ಲ!

ವಿದ್ಯಾರ್ಥಿಗಳು ಯಾವುದೇ ಪರೀಕ್ಷೆಯನ್ನು ಬರೆಯುತ್ತಿರಲಿ. ಪರೀಕ್ಷೆ, ಪರೀಕ್ಷೆ ಎಂದು ಹೆದರಿ ಕೂರಬಾರದು. ಧೈರ್ಯ ಕಳೆದುಕೊಂಡರೆ ಮನಸ್ಸು ಗಲಿಬಿಲಿಯಾಗುತ್ತದೆ. ಮನೆಯಲ್ಲಿಯೇ ಕೃತಕವಾಗಿ ಪರೀಕ್ಷಾ ಕೊಠಡಿಯ ವಾತಾವರಣ ನಿರ್ಮಿಸಿಕೊಂಡು ಈ ಒತ್ತಡವನ್ನು ಅನುಭವಿಸಿ ಗೆಲ್ಲಬೇಕು. ಪರೀಕ್ಷೆ ಪೆಡಂಭೂತವಲ್ಲ; ಅದು ಕಲಿಕೆಯ ಮಾಪಕ. ಸೆಮಿಸ್ಟರ್‌ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಈ ಲೇಖನ ಮಾಹಿತಿಯನ್ನು ನೀಡುತ್ತದೆ.

 

ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್ ಮಾಡುವಾಸೆ...

ಬಿಎ/ಬಿಕಾಂ ಇನ್ ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್‌ಗಳಿವೆ. ಎಂಟಿಎ ಮಾಸ್ಟರ್ ಆಫ್ ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್‌ ಸಹ ಇದೆ. ಇಂಟಿಗ್ರೇಟೆಡ್ ಕೋರ್ಸ್ 5 ವರ್ಷದ್ದು, ಎಂಬಿಎ ಇನ್ ಟ್ರಾವೆಲ್ ಅಂಡ್ ಟೂರಿಸಂ ಇದೆ.

ಪ್ರಜಾವಾಣಿ ಕ್ವಿಜ್ -22

1. ಕರ್ನಾಟಕ ಸಂಗೀತದಲ್ಲಿರುವ ಮೇಳಕರ್ತ ರಾಗಗಳ ಸಂಖ್ಯೆ ಎಷ್ಟು?

ಮರಳಿ ಯತ್ನವ ಮಾಡೋಣ...

ಪರೀಕ್ಷೆಯಲ್ಲಿ ಫೇಲಾದ ಮಾತ್ರಕ್ಕೆ ಜೀವನವೇ ಮುಗಿಯಿತು ಎಂದುಕೊಳ್ಳಬಾರದು. ಬದಲಾಗಿ ‘ಈ ಪರೀಕ್ಷೆಯಲ್ಲಿ ಫೇಲಾದರೆ ಏನಂತೆ ಮುಂದೆ ಬರುವ ಮರುಪರೀಕ್ಷೆ ಬರೆದು ಪಾಸು ಮಾಡೇ ಮಾಡುತ್ತೇನೆ’ ಎಂಬ ಆತ್ಮವಿಶ್ವಾಸದೊಂದಿಗೆ ಹೊಸ ಮಾರ್ಗದೊಂದಿಗೆ ಓದಿದಾಗ ಯಶಸ್ಸು ಖಂಡಿತ ನಿಮ್ಮದೆ...