ಬಡವಿ ಲಿಂಗದ ‘ಸಿರಿವಂತ’ ಭಕ್ತ

13 Feb, 2018
ಅಶೋಕ ಉಚ್ಚಂಗಿ

ಹಂಪಿಯ ಕಲ್ಲಿನ ರಥದಂತೆ ತನ್ನ ಭವ್ಯತೆಯಿಂದ ಮನಸೆಳೆಯುವುದು ಸುಮಾರು 22 ಅಡಿ ಎತ್ತರದ ಉಗ್ರ ನರಸಿಂಹನ ಶಿಲ್ಪ. ಈ ಭಗ್ನಗೊಂಡ ಕಲ್ಲಿನ ಕಲಾಕೃತಿ ಪಕ್ಕದಲ್ಲೇ ಇದೆ ಸುಮಾರು ಹತ್ತು ಅಡಿ ಎತ್ತರದ ಬಡವಿ ಲಿಂಗ. ಹಂಪಿಯ ಬಹಳಷ್ಟು ಕಲಾಕೃತಿಗಳು ಭಗ್ನಗೊಂಡಿದ್ದರೂ ಈ ಬಡವಿ ಲಿಂಗಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಸದಾ ಹರಿವ ಕಾಲುವೆಯಿಂದಾಗಿ ಸುಮಾರು ಮೂರು ಅಡಿಗಳಷ್ಟು ನೀರಿನಲ್ಲೇ ಮುಳುಗಿರುವ ಈ ಲಿಂಗ ಜಲಕಂಠೇಶ್ವರ ಎಂದೂ ಹೆಸರುವಾಸಿ.

ಸಹಸ್ರಲಿಂಗ, ಕೋಟಿಲಿಂಗ, ಜ್ಯೋತಿರ್ಲಿಂಗ, ದ್ವಾದಶ ಲಿಂಗ, ಸ್ಫಟಿಕ ಲಿಂಗ ಎಂದೆಲ್ಲಾ ಹೆಸರು ಕೇಳಿದ್ದೇವೆ. ಇದಾವುದು ಬಡವಿ ಲಿಂಗ ಎಂಬ ಅಚ್ಚರಿಯೇ? ನಮ್ಮಲ್ಲಿ ದೇವರ ಕುರಿತಾದ ಪೌರಾಣಿಕ, ಜಾನಪದ ಕಥೆಗಳಿಗೇನು ಕಮ್ಮಿಯಿಲ್ಲ. ವಾಸ್ತವ ಏನೇ ಇದ್ದರೂ ಇಂತಹ ಕಥೆಗಳೇ ನಮ್ಮ ಮನದಲ್ಲಿ ಉಳಿಯುತ್ತವೆ, ಜನಜನಿತವಾಗುತ್ತವೆ.

ಹಂಪಿ ದೇಗುಲಗಳ ಸಮೂಹದ ಪ್ರದೇಶದಲ್ಲೇ ಇರುವ ಕೃಷ್ಣ ದೇವಾಲಯಕ್ಕೆ ಹೋಗುವ ಹಾದಿಯಲ್ಲಿ ಬಡವಿ ಲಿಂಗವಿದ್ದು, ಇದರ ಹೆಸರು ರೈತ ಅಜ್ಜಿಯೊಬ್ಬಳ ಭಕ್ತಿಯ ಕಥೆಯೊಂದಿಗೆ ತಳುಕು ಹಾಕಿಕೊಂಡಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸುಪರ್ದಿಗೆ ಹಂಪಿಯು ಒಳಪಟ್ಟು ಇಲ್ಲಿನ ಸ್ಮಾರಕಗಳು ಸಂರಕ್ಷಿಸಲ್ಪಟ್ಟವು. ಕೆಲವು ಭಗ್ನವಾಗದ ದೇಗುಲಗಳಲ್ಲಿ ಮಾತ್ರ ಪೂಜೆಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಪುಟ್ಟ ಗುಡಿಯ ಒಳಗಿರುವ ಈ ಬೃಹತ್ ಬಡವಿ ಲಿಂಗ ಭಗ್ನವಾಗಿರದಿದ್ದರೂ ಇಲ್ಲಿ ಪೂಜೆ ನಡೆಯುತ್ತಿರಲಿಲ್ಲ. ಗುಡಿಯ ಹೊರಭಾಗ, ಗೋಪುರ ಮತ್ತು ಮೇಲ್ಚಾವಣಿಯಷ್ಟೇ ಭಗ್ನಗೊಂಡಿದ್ದು ಇಲ್ಲಿ ನಿತ್ಯಪೂಜೆ ನಡೆಯಬೇಕೆಂದು ಇಚ್ಛಿಸಿದವರು ವಿಜಯನಗರದ ರಾಜವಂಶಸ್ಥರಾದ ಆನೆಗುಂದಿಯ ಕೃಷ್ಣದೇವರಾಯ. ಈ ದೇಗುಲದಲ್ಲಿ ನಿತ್ಯ ಪೂಜೆ ಸಲ್ಲಿಸಲು 1995ರಲ್ಲಿ ಅವರು ಕೃಷ್ಣಭಟ್ಟರನ್ನು ನೇಮಿಸಿದರು.

ಹಂಪಿಗೆ ಬರುವ ಪ್ರವಾಸಿಗರಿಗೆ ಈ ಬಡವಿ ಲಿಂಗದ ದರ್ಶನದ ಅವಕಾಶವಿದೆ. ಶಿವರಾತ್ರಿಯಂದು ನೂರಾರು ಭಕ್ತರು ಈ ದೇಗುಲಕ್ಕೆ ಭೇಟಿ ನೀಡಿ ಈ ಬೃಹದಾಕಾರದ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸುವುದುಂಟು.

ಮೂಲತಃ ತೀರ್ಥಹಳ್ಳಿ ತಾಲ್ಲೂಕು ಕಾಸರವಳ್ಳಿಯವರಾದ ಕೃಷ್ಣಭಟ್ಟರು ಈಗ್ಗೆ ಸುಮಾರು 40 ವರ್ಷಗಳ ಹಿಂದೆ ಅಂದರೆ 1979ರಲ್ಲಿ ಹಂಪಿಯ ವಿರೂಪಾಕ್ಷ ದೇಗುಲದ ಅರ್ಚಕರಾಗಿ ನೇಮಕಗೊಂಡು ಹಂಪಿಯಲ್ಲಿ ನೆಲೆಸಿದರು. ಇವರು ಬಡವಿ ಲಿಂಗದ ಪೂಜೆ ಆರಂಭಿಸಿದ್ದು 1995ರಲ್ಲಿ. ಆನೆಗುಂದಿಯ ರಾಜಮನೆತನದವರು ದೈನಂದಿನ ನೈವೇದ್ಯಕ್ಕೆಂದು 30 ಕಿಲೋ ಅಕ್ಕಿ (ಮೂರು ತಿಂಗಳಿಗೊಮ್ಮೆ), ತಿಂಗಳಿಗೆ ₹300 ಸಂಭಾವನೆ ನೀಡಲಾರಂಭಿಸಿದರು. ಸುಮಾರು 23 ವರ್ಷಗಳ ಹಿಂದಿನಿಂದ ಆರಂಭಗೊಂಡ ಬಡವಿ ಲಿಂಗದ ಪೂಜೆ ಇಂದಿನವರೆಗೂ ನಿರಂತರವಾಗಿ ನಡೆಯುತ್ತಾ ಬಂದಿದೆ.

ಈಗ ಕೃಷ್ಣಭಟ್ಟರ ವಯಸ್ಸು 83 ವರ್ಷ. ನಡು ಬಾಗಿದೆ, ಬೆನ್ನು ಗೂನಾಗಿದೆ, ಕಿವಿ ಮಂದವಾಗಿದೆ, ದೇಹ ಬಡವಾಗಿದೆ. ಜೋರು ಗಾಳಿ ಬೀಸಿದರೆ ಬಿದ್ದು ಬಿಡುತ್ತಾರೋ ಎಂಬಂತಿದ್ದಾರೆ. ಆದರೂ ಬಡವಿ ಲಿಂಗ ಪೂಜೆಯನ್ನು ಬಿಟ್ಟಿಲ್ಲ. ಇವರ ದಿನಚರಿ ಆರಂಭವಾಗುವುದು ಮುಂಜಾನೆ 6 ಗಂಟೆಗೆ. ಮನೆಯಲ್ಲಿ ನಿತ್ಯಪೂಜಾ ವಿಧಿವಿಧಾನಗಳನ್ನು ಅಚ್ಚುಕಟ್ಟಾಗಿ ಪೂರೈಸಿ, ಮನೆಯ ಜಗುಲಿಯಲ್ಲಿ ಕುಳಿತು ದಾರಿಯಲ್ಲಿ ಸಾಗುವ ಪರಿಚಿತರೊಡನೆ ಮಾತಾಡುತ್ತಲೋ, ಹಸುಕರುಗಳನ್ನು ಪ್ರೀತಿಯಿಂದ ತಡವುತ್ತಾ ಉಪಚರಿಸುತ್ತಲೋ ಕಾಲಕಳೆಯುವ ಇವರು ಮಟಮಟ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಒಂದು ಬಕೇಟು ಹಿಡಿದುಕೊಂಡು ಅದರಲ್ಲಿ ವಿಭೂತಿ, ಅರಿಶಿನ-ಕುಂಕುಮ, ನೈವೇದ್ಯಕ್ಕೆಂದು ಒಂದಿಷ್ಟು ಅಕ್ಕಿ ಇಟ್ಟುಕೊಂಡು ದಾರಿಯಲ್ಲಿ ಗಂಟೆ ಹೂವನ್ನೋ, ಕಾಡು ಹೂಗಳನ್ನೋ ಕಿತ್ತುಕೊಂಡು ಊರುಗೊಲಿನ ಸಹಾಯದಿಂದ ನಡೆಯುತ್ತಾ ಬಡವಿ ಲಿಂಗದ ಬಳಿ ಬರುತ್ತಾರೆ.

ತೂರಾಡುವ ಬಡದೇಹವನ್ನು ತಹಬದಿಗೆ ತಂದುಕೊಂಡು ತುಂಡು ಪಂಚೆಯನ್ನು ಸುತ್ತಿಕೊಂಡು ಮಂಡಿವರೆಗೆ ನೀರು ನಿಂತ ಬಡವಿ ಲಿಂಗದ ಗುಡಿಯೊಳಗೆ ಇಳಿಯುವುದರೊಂದಿಗೆ ಇವರ ಪೂಜಾ ಕೈಂಕರ್ಯ ಆರಂಭ. ಇನ್ನೇನು ಬಿದ್ದು ಬಿಡುವರೇನೋ ಎಂಬಂತೆ ತೂರಾಡುತ್ತಿದ್ದರೂ ಹತ್ತು ಅಡಿ ಎತ್ತರದ ಈ ಲಿಂಗದ ಮೇಲೆ ಹತ್ತಿ ಹಳತಾದ ಹೂಗಳನ್ನು, ಭಕ್ತರು ಎಸೆದ ನಾಣ್ಯಗಳನ್ನು ತೆಗೆದು, ನೀರು ಎರಚಿ ಈ ಬೃಹತ್ ಲಿಂಗವನ್ನು ಶುದ್ಧೀಕರಿಸಿ, ಹೂವು, ವಿಭೂತಿ ಅರಿಶಿನ ಕುಂಕುಮವಿಟ್ಟು, ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸುವ ಪರಿ ಅನನ್ಯ.

ಈ ವಯೋವೃದ್ಧರ ಬಡವಿ ಲಿಂಗದ ಪೂಜಾಕೈಂಕರ್ಯ ಪ್ರತಿನಿತ್ಯವೂ ಇದೇ ರೀತಿ ಯಾವುದೇ ಕುಂದಿಲ್ಲದೆ, ಚಾಚೂತಪ್ಪದೆ ನಡೆಯುತ್ತಾ ಬಂದಿದೆ. ಸುಮಾರು ಅರ್ಧಗಂಟೆ ತಣ್ಣನೆಯ ನೀರಲ್ಲಿ ನಿಂತು ನಡೆಸುವ ಪೂಜೆ ನೋಡುಗರಲ್ಲಿ ಭಕ್ತಿ ಹುಟ್ಟಿಸುತ್ತದೆ, ಇಳಿವಯಸ್ಸಿನಲ್ಲೂ ಶ್ರಮಪಡುವ ಇವರ ಬಗ್ಗೆ ಗೌರವ ಮೂಡುವುದು ಸಹಜ. ಇವರು ಯಾರಲ್ಲೂ ಕಾಣಿಕೆ, ದಕ್ಷಿಣೆ ಕೇಳುವುದಿಲ್ಲ. ಪ್ರವಾಸಿಗಳು, ಭಕ್ತರು ಸ್ವಯಂಪ್ರೇರಿತರಾಗಿ ಒಂದಷ್ಟು ಕಾಣಿಕೆ ಸಲ್ಲಿಸುತ್ತಾರೆ. ಕೆರೆಯ ನೀರನು ಕೆರೆಗೆ ಚೆಲ್ಲು ಎಂಬಂತೆ ಕೃಷ್ಣಭಟ್ಟರು ತಮಗೆ ದೊರೆತ ಕಾಣಿಕೆಯ ಬಹುಪಾಲನ್ನು ಗೋಪೂಜೆ ಮತ್ತಿತರ ಧಾರ್ಮಿಕ ಕಾರ್ಯಗಳಿಗೆ ಮೀಸಲಿಟ್ಟಿದ್ದಾರೆ.

ಕೃಷ್ಣಭಟ್ಟರ ಬಡವಿ ಲಿಂಗದ ನಿತ್ಯಪೂಜೆ ಭಕ್ತಿಯ ಸಂದೇಶದ ಜೊತೆಗೆ ಕಾರ್ಯಶ್ರದ್ಧೆ, ಶ್ರಮಜೀವನ ಹಾಗೂ ಇಳಿವಯಸ್ಸಿನಲ್ಲೂ ಸುಮ್ಮನೆ ಕೂರದೆ ದುಡಿದು ತಿನ್ನುವ ಛಲದ ಪಾಠ ಕಲಿಸುತ್ತವೆ. ಬಡವಿ ಲಿಂಗವೇನೂ ಸಾಮಾನ್ಯದ್ದಲ್ಲ. ಹತ್ತು ಅಡಿ ಎತ್ತರವಿದ್ದು ಇದರ ಮೇಲ್ಬದಿಯನ್ನು ದಿನನಿತ್ಯ ಸ್ವಚ್ಛಗೊಳಿಸಿ ಈ ಬೃಹತ್ ಲಿಂಗ ಸಂಪೂರ್ಣ ನೆನೆಯುವಂತೆ ನೀರನ್ನು ಮೊಗೆದು ಎತ್ತರಕ್ಕೆ ಎರಚಿ, ಪೂಜೆ ಸಲ್ಲಿಸುವ ಇವರ ಕಾರ್ಯಶ್ರದ್ಧೆಗೆ ತಲೆದೂಗಲೇಬೇಕು. ಹಂಪಿಯಲ್ಲಿ ಇವರ ಶ್ರಮದ ಜೀವನ ಮನೆಮಾತಾಗಿದೆ. ಇವರೆಂದರೆ ಸ್ಥಳೀಯರಿಗೂ ಗೌರವ.

ಇವರ ನಿಯತ್ತು ಹಾಗೂ ಪರಿಶ್ರಮದ ಜೀವನ ಹಂಪಿಯ ಅನೇಕ ಯುವಕರಿಗೆ ಮಾದರಿಯಾಗಿದೆ. ಕೃಷ್ಣಭಟ್ಟರು ದೇಗುಲದ ಅಂಗಳದಲ್ಲಿ ಕುಳಿತಾಗ ಅನೇಕ ಸ್ಥಳೀಯರು, ಹಂಪಿಯ ಪ್ರವಾಸಿ ಮಾರ್ಗದರ್ಶಿಗಳು ಇವರನ್ನು ಪ್ರೀತಿ ಗೌರವದಿಂದ ಮಾತನಾಡಿಸುತ್ತಾರೆ. ಪ್ರವಾಸಿ ಗೈಡ್‍ಗಳಂತೂ ಪ್ರವಾಸಿಗೆ ಬಡವಿ ಲಿಂಗದ ಕಥೆಯೊಡನೆ ಇಲ್ಲಿ ನಿರಂತರವಾಗಿ ಪೂಜೆ ಸಲ್ಲಿಸುತ್ತಿರುವ ಈ ವಯೋವೃದ್ಧರ ಬಗ್ಗೆ ಹೇಳದೆ ಮುಂದೆ ಹೋಗುವುದಿಲ್ಲ. ಕೃಷ್ಣಭಟ್ಟರೂ ಅಷ್ಟೆ; ಎಲ್ಲರೊಂದಿಗೆ ಸಹೃದಯತೆಯಿಂದ ಮಾತಾಡುತ್ತಾ ಪ್ರವಾಸಿಗಳನ್ನು ಪರಿಚಯ ಮಾಡಿಕೊಳ್ಳುತ್ತಾ ನಾಲ್ಕು ಗಂಟೆಯವರೆಗೆ ಇಲ್ಲಿನ ಕಲ್ಲುಹಾಸಿನ ಮೇಲೆ ಕುಳಿತಿರುತ್ತಾರೆ. ಬೆಳಿಗ್ಗೆಯಿಂದ ಏನನ್ನೂ ಸೇವಿಸದ ಇವರು ಮನೆಗೆ ತೆರಳಿದ ನಂತರವೇ ಊಟ ಮಾಡುವುದು.

ಆರೋಗ್ಯ ಹದಗೆಟ್ಟಿರಲಿ, ಮಳೆ-ಚಳಿ-ಬಿಸಿಲಿರಲಿ ಇವರು ಶಿವಪೂಜೆಯನ್ನು ನಿಲ್ಲಿಸಿದ್ದಿಲ್ಲ. ಅನೇಕ ಬಾರಿ ಇವರು ಈ ದೇಗುಲದಲ್ಲಿ ಬಿದ್ದಿದ್ದಿದೆ. ಇಲ್ಲಿನ ಪ್ರವಾಸಿ ಮಾರ್ಗದರ್ಶಕರೋ, ಗ್ರಾಮಸ್ಥರೋ ಈ ಬಗ್ಗೆ ಮನೆಯವರಿಗೆ ಸುದ್ದಿ ಮುಟ್ಟಿಸಿದ್ದಿದೆ. ಬಿದ್ದು ಪೆಟ್ಟು ಮಾಡಿಕೊಂಡ ಇವರಿಗೆ ಮನೆಮಂದಿ ಎಷ್ಟು ತಿಳಿಹೇಳಿದರೂ ಗಾಯ ವಾಸಿಯಾದ ಬಳಿಕ ಯಥಾಪ್ರಕಾರ ಬಡವಿ ಲಿಂಗದ ಹಾದಿ ಹಿಡಿಯುತ್ತಾರೆ. ‘ನನ್ನ ಶಕ್ತಾನುಸಾರ, ನನ್ನ ಕೈಲಾದ ರೀತಿಯಲ್ಲಿ ಶಿವನ ಅನುಗ್ರಹ ಇರುವವರೆಗೆ ಬಡವಿ ಲಿಂಗಕ್ಕೆ ಪೂಜೆ ಸಲ್ಲಿಸುತ್ತೇನೆ’ ಎನ್ನುತ್ತಾರೆ ಕೃಷ್ಣಭಟ್ಟರು.

ಪೀರ್‌ಸಾಬ್ ಮತ್ತು ಅಬ್ಬಾಸ್‌ ಗೆಳೆತನ

ಕೃಷ್ಣಭಟ್ಟರು ಮನೆಯಿಂದ ಹೊರಟು ಮುಖ್ಯರಸ್ತೆಗೆ ಬರುವುದೇ ತಡ ರಸ್ತೆ ಬದಿಯ ಟೀ ಅಂಗಡಿಯ ಪೀರ್‌ಸಾಬ್ ತಮ್ಮ ಕೆಲಸ ನಿಲ್ಲಿಸಿ ತಮ್ಮ ಬೈಕ್ ಏರಿ ಕೃಷ್ಣಭಟ್ಟರನ್ನು ಕೂರಿಸಿಕೊಂಡು ದೇಗುಲದ ದ್ವಾರದ ಬಳಿ ಇಳಿಸುತ್ತಾರೆ.

ಅಂತೆಯೇ ಸಂಜೆ ದೇಗುಲದ ಮುಂದಿನ ಮುಖ್ಯರಸ್ತೆಗೆ ಈ ವೃದ್ಧರು ನಿಧಾನವಾಗಿ ನಡೆದು ಬರುತ್ತಾರೆ. ‘ಹಲೋ.. ಸೋಡಾ, ಶುಗರ್ ಕೇನ್ ಜ್ಯೂಸ್’ ಎಂದು ಪ್ರವಾಸಿಗಳನ್ನು ಆಕರ್ಷಿಸುವುದರಲ್ಲಿ ಮಗ್ನರಾಗಿದ್ದ ಅಬ್ಬಾಸ್, ತಮ್ಮ ಬೈಕಿನಲ್ಲಿ ಕೃಷ್ಣಭಟ್ಟರನ್ನು ನಿಧಾನವಾಗಿ ಹತ್ತಿಸಿಕೊಂಡು ಮನೆ ತಲುಪಿಸುತ್ತಾರೆ. ಇದು ಪ್ರತಿನಿತ್ಯ ಕಾಣುವ ನೋಟ. ‘ನಮಗೆ ಅಜ್ಜಾರಿದ್ದಾಂಗ್ಹೆ ಸಾರ್ ಇವರು’ ಎನ್ನುವ ಅವರ ಮಾತು ಮನಮುಟ್ಟುತ್ತದೆ. ಕೆಲವೊಮ್ಮೆ ಆಟೊ ಚಾಲಕರು, ಪರಿಚಯಸ್ಥರೂ ಕೃಷ್ಣಭಟ್ಟರನ್ನು ಮನೆ ಮುಟ್ಟಿಸಿದ್ದುಂಟು.

ಈ ಬಡವಿ ಲಿಂಗದ ಸುತ್ತ ಹರಡಿರುವ ಭಕ್ತಿಯ ಉತ್ತುಂಗದ ಕಥೆಗಳಂತೆಯೇ ಈ ಬಡಕಲು ದೇಹದ ಮುದಿ ಅರ್ಚಕರ ಬಡವಿ ಲಿಂಗದ ಮೇಲಿನ ಅದಮ್ಯ ಭಕ್ತಿಯ ಕಥನವೂ ಬಹುಕಾಲ ನಮ್ಮ ಮನದಲ್ಲಿ ಉಳಿಯುತ್ತದೆ.
***
ಛಾಯಾಗ್ರಾಹಕರಿಗೆ ಅಚ್ಚುಮೆಚ್ಚು!

ಹತ್ತು ಅಡಿ ಎತ್ತರದ ಈ ಮೋಹಕ ಬೃಹತ್ ಶಿವಲಿಂಗಕ್ಕೆ ಕೃಷ್ಣಭಟ್ಟರು ಪೂಜೆ ಸಲ್ಲಿಸುವ ವಿಧಾನ ಛಾಯಾಗ್ರಾಹಕರಿಗೆ ಅಚ್ಚುಮೆಚ್ಚು. ಇವರು ನೀರಿನಿಂದ ಆವೃತವಾಗಿರುವ ಬಡವಿ ಲಿಂಗದ ಗುಡಿಯೊಳಗೆ ಇಳಿದು ಪೂಜಾಕಾರ್ಯಗಳನ್ನು ಆರಂಭಿಸುತ್ತಿದ್ದಂತೆ ಪ್ರವಾಸಿಗಳು ತಮ್ಮ ಕ್ಯಾಮೆರಾ, ಮೊಬೈಲುಗಳಲ್ಲಿ ಫೋಟೊ ತೆಗೆಯಲು ಆರಂಭಿಸುತ್ತಾರೆ. ಇವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಕೃಷ್ಣಭಟ್ಟರೊಡನೆ ಫೋಟೊ ತೆಗೆದುಕೊಳ್ಳುತ್ತಾರೆ.

ಛಾಯಾಚಿತ್ರ ಸ್ಪರ್ಧೆಗಳಿಗೆಂದು ಚಿತ್ರ ತೆಗೆಯುವ ವೃತ್ತಿಪರ ಹಾಗೂ ಹವ್ಯಾಸಿ ಛಾಯಾಚಿತ್ರಗಾರರಿಗೂ ಕೃಷ್ಣಭಟ್ಟರ ಪೂಜಾ ವೈಖರಿ ಆಸಕ್ತಿಯ ವಿಷಯ. ಅನೇಕ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಈ ಚಿತ್ರಗಳು ಪ್ರದರ್ಶನಗೊಂಡಿವೆ, ಬಹುಮಾನ ಗಳಿಸಿವೆ. ತಮ್ಮ ದಿನನಿತ್ಯದ ಚಟುವಟಿಕೆಯನ್ನು ಹೊರತುಪಡಿಸಿ ಛಾಯಾಗ್ರಾಹಕರು ಹೇಳಿದಂತೆ ಪೋಸು ಕೊಡಲು ಕೃಷ್ಣಭಟ್ಟರು ಒಪ್ಪುವುದಿಲ್ಲ. ಹಣಕ್ಕಾಗಿ ಹೀಗೆಲ್ಲಾ ಮಾಡುತ್ತಾರೆಂಬ ಆಪಾದನೆ ಹೊರಲು ಇವರು ಸಿದ್ಧರಿಲ್ಲ. ಛಾಯಾಗ್ರಾಹಕರ ಇಂತಹ ಬೇಡಿಕೆಯನ್ನು ನಯವಾಗಿಯೇ ತಿರಸ್ಕರಿಸುತ್ತಾರೆ.

ಚಿತ್ರಗಳು: ಲೇಖಕರವು

Read More

Comments
ಮುಖಪುಟ

ಸಾರ್ವಜನಿಕವಾಗಿ ಸುಳ್ಳು ಹೇಳಿದ ಶಾ

‘ಕಾಂಗ್ರೆಸ್ ಶಾಸಕ ಎನ್‌.ಎ.ಹ್ಯಾರಿಸ್‌ ಮಗ ಮೊಹಮದ್‌ ನಲಪಾಡ್‌ನಿಂದ ಹಲ್ಲೆಗೊಳಗಾಗಿರುವ ವಿದ್ವತ್‌ ನಮ್ಮ ಕಾರ್ಯಕರ್ತ’ ಎಂದು ಮಂಗಳವಾರ ಮಧ್ಯಾಹ್ನ ಬಿ.ಸಿ.ರೋಡ್‌ನಲ್ಲಿ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಸಂಜೆಯ ವೇಳೆಗೆ ಸುರತ್ಕಲ್‌ನಲ್ಲಿ ಅದನ್ನು ಹಿಂಪಡೆದು ಉದ್ದೇಶಪೂರ್ವಕ ವಾಗಿ ಸುಳ್ಳು ಹೇಳಿರುವುದಾಗಿ ಸ್ಪಷ್ಟನೆ ನೀಡಿದರು.

ಅಧಿಕ ಶುಲ್ಕ ವಸೂಲಿ: ಖಾಸಗಿ ಆಸ್ಪತ್ರೆಗಳ ಹಗಲು ದರೋಡೆ

ಔಷಧ, ವೈದ್ಯಕೀಯ ಸಲಕರಣೆಗಳಿಗಾಗಿ ಅಸಹಾಯಕ ರೋಗಿಗಳಿಂದ ಶೇ 1,192 ರಷ್ಟು ಹೆಚ್ಚಿಗೆ ಹಣವನ್ನು ಖಾಸಗಿ ಆಸ್ಪತ್ರೆಗಳು ಲೂಟಿ ಮಾಡಿವೆ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (ಎನ್‌ಪಿಪಿಎ) ವರದಿ ಹೇಳಿದೆ.

ಮುಖ್ಯ ಕಾರ್ಯದರ್ಶಿ ಮೇಲೆ ಎಎಪಿ ಶಾಸಕರ ಹಲ್ಲೆ?

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಿವಾಸದಲ್ಲಿ ಸೋಮವಾರ ರಾತ್ರಿ ಆಮ್‌ ಆದ್ಮಿ ಪಕ್ಷದ(ಎಎಪಿ) ಇಬ್ಬರು ಶಾಸಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಆರೋಪಿಸಿದ್ದಾರೆ.

ಪಾಲಿಕೆ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡನ ದರ್ಪ

ವಿವಾದಿತ ಜಮೀನಿಗೆ ಖಾತೆ ಮಾಡಿಕೊಡದ ಕಾರಣಕ್ಕೆ ಹೊರಮಾವು ಬಿಬಿಎಂಪಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿರುವ ಕಾಂಗ್ರೆಸ್‌ನ ಕೆ.ಆರ್‌.ಪುರ ಬ್ಲಾಕ್‌ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ದಾಖಲೆಗಳ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲು ಯತ್ನಿಸಿದ್ದಾರೆ.

ಸಂಗತ

ಮಾರುತ್ತರ ನೀಡಲು ಸಾಧ್ಯವೇ?

ನುಡಿಯ ಬಗೆಗೆ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ನೀಡುವ ಮೊದಲು ತಾವು ಪ್ರತಿನಿಧಿಸುವ ಕ್ಷೇತ್ರವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ತಮಗೆ ಮತ ನೀಡಿದ ಜನರು ಬಳಸುತ್ತಿರುವ ವಿವಿಧ ಬಗೆಯ ಉಪಭಾಷೆಗಳ ಬಗೆಗೆ ಮಾಹಿತಿಯನ್ನಾದರೂ ಪಡೆದಿದ್ದರೆ ಚೆನ್ನಾಗಿರುತ್ತಿತ್ತು

ಅಸಾಮಾನ್ಯ ಅಸಭ್ಯರು

ಹಿಂದೊಮ್ಮೆ ರೈತರು ಹಾಗೂ ಶರಣರೂ ಎರಡೂ ಆಗಿದ್ದ ಯಡಿಯೂರಪ್ಪನವರು ನಿಮ್ಮ ಮಾತನ್ನು ಖಂಡಿತವಾಗಿ ಕೇಳಿಸಿಕೊಂಡಾರು. ಒಟ್ಟು ಕತೆಯ ನೀತಿಯೆಂದರೆ ಭಾರತೀಯ ರಾಜಕಾರಣವನ್ನು ಯುಬಿ ಸಿಟಿ ಬಾರುಗಳಿಂದ ಕೆಳಗಿಳಿಸಿ ತರಬೇಕಾದ ಜರೂರು ತುಂಬ ಇದೆ!

ಅರಣ್ಯ ಪರಿಸ್ಥಿತಿ ವರದಿ ಮತ್ತು ನೈಜ ಸ್ಥಿತಿ

ಅರಣ್ಯ ಪ್ರದೇಶ ಹೆಚ್ಚಳದ ಹಿಂದಿನ ಹಾಗೂ ಸಮಾಜೋ-–ಆರ್ಥಿಕ ಆಯಾಮಗಳು ಮತ್ತು ಇಲಾಖೆಯ ಆಡಳಿತಾತ್ಮಕ ಜವಾಬ್ದಾರಿಯನ್ನು ವರದಿ ಚರ್ಚಿಸುವುದಿಲ್ಲ

ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟು–ಪರಿಹಾರ

ಭಾರತಕ್ಕೆ ಉಳಿದಿರುವ ದಾರಿಯೆಂದರೆ, ವಿಶ್ವಸಂಸ್ಥೆ ಮತ್ತು ಅಮೆರಿಕದ ಜೊತೆಗೂಡಿ ರಾಜತಾಂತ್ರಿಕ ಮಾರ್ಗದ ಮೂಲಕ ಮಾಲ್ಡೀವ್ಸ್‌ ಬಿಕ್ಕಟ್ಟನ್ನು ಪರಿಹರಿಸಲು ಶ್ರಮಿಸುವುದು.

ವಾಣಿಜ್ಯ

‘ಟಿಟಿಕೆ ಪ್ರೆಸ್ಟೀಜ್’ ಯಶೋಗಾಥೆ

ಟಿಟಿಕೆ ಗ್ರೂ‍ಪ್‌ನ ಅಂಗಸಂಸ್ಥೆಯಾಗಿರುವ ‘ಟಿಟಿಕೆ ಪ್ರೆಸ್ಟೀಜ್‌’, ಬರೀ ಪ್ರೆಷರ್‌ ಕುಕ್ಕರ್‌ ತಯಾರಿಕೆ ಸಂಸ್ಥೆ ಎನ್ನುವ ಗ್ರಾಹಕರ ನಂಬಿಕೆ ಬದಲಿಸಲು ಸಾಕಷ್ಟು ಶ್ರಮಪಟ್ಟಿದೆ. ಪ್ರೆಷರ್‌ ಕುಕ್ಕರ್‌ನಿಂದ ಹಿಡಿದು ವೈವಿಧ್ಯಮಯ ಉತ್ಪನ್ನಗಳ ಮೂಲಕ ಗ್ರಾಹಕರ ಮನ ಗೆದ್ದಿದೆ.

ಗುಂಪು ವಿಮೆ: ಜತೆಗಿರಲಿ ಇನ್ನೊಂದು ವಿಮೆ

ಕಾರ್ಪೊರೇಟ್‌ ಗುಂಪು ಆರೋಗ್ಯ ವಿಮೆ ಖಂಡಿತವಾಗಿಯೂ ಒಳ್ಳೆಯ ಉಪಕ್ರಮ.  ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳನ್ನು ನಿಭಾಯಿಸಲು  ಗುಂಪು ವಿಮೆಯ ಫಲಾನುಭವಿಗಳು  ಪ್ರತ್ಯೇಕ ಸ್ವತಂತ್ರ ವಿಮೆ ಮಾಡಿಸುವುದರಿಂದ ದೊರೆಯುವ ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ.

‘ಎಸ್‍ಎಂಇ’ಗಳ ಡಿಜಿಟಲೀಕರಣಕ್ಕೆ ಸೂಕ್ತ ಸಮಯ

ತಂತ್ರಜ್ಞಾನ ಸ್ಟಾರ್ಟ್‌ಅಪ್‍ಗಳ ಚಿಗುರೊಡೆಯುವಿಕೆ ಹಾಗೂ ಡಿಜಿಟಲ್ ಪಾವತಿಯ ಅಳವಡಿಕೆ ವಿಷಯದಲ್ಲಿ ದಕ್ಷಿಣ ಭಾರತ  ಮುಂಚೂಣಿಯಲ್ಲಿದೆ. ತಂತ್ರಜ್ಞಾನದ ಬೆಂಬಲದಿಂದ  ಇಲ್ಲಿಯ ಹಲವು ಉದ್ಯಮಗಳು  ತಮ್ಮ ವ್ಯವಹಾರವನ್ನು ವಿಸ್ತರಿಸಿವೆ.

ಹಣಕಾಸು ಯೋಜನೆ ಮೇಲೆ ಬಜೆಟ್‌ ಪರಿಣಾಮ

ಕೇಂದ್ರ ಸರ್ಕಾರದ ಬಜೆಟ್‌ ನಿಮ್ಮ ಹಣಕಾಸಿನ ಯೋಜನೆಗಳನ್ನು ಬದಲಾಯಿಸುತ್ತದೆಯೇ ಎನ್ನುವ ಅನುಮಾನಗಳಿಗೆ ಸಂಬಂಧಿಸಿದಂತೆ ವೈಭವ್‌ ಅಗರ್‌ವಾಲ್‌ ವಿವರಗಳನ್ನು ನೀಡಿದ್ದಾರೆ.

ತಂತ್ರಜ್ಞಾನ

ವಾಟ್ಸ್ ಆ್ಯಪ್‌ನಲ್ಲಿ ಹೀಗೂ ಇವೆ ಸುಲಭ ಉಪಾಯಗಳು

ವಾಟ್ಸ್‌ಆ್ಯಪ್‌ನಲ್ಲಿ ಫೋಟೊ ಕಳಿಸಿದರೆ ರೆಸೊಲ್ಯೂಷನ್ ಹೊರಟು ಹೋಗುತ್ತದೆ ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ರೆಸೊಲ್ಯೂಷನ್ ಕಡಿಮೆಯಾಗದಂತೆ ಫೋಟೊಗಳನ್ನು ವಾಟ್ಸ್ ಆ್ಯಪ್ ನಲ್ಲಿಯೂ ಕಳುಹಿಸಬಹುದು.

ಮಾತೇ ಮಂತ್ರವಾದಾಗ!

ನಿತ್ಯ ಬಳಸುವ ಸಾಧನಗಳು ಮತ್ತು ಉಪಕರಣಗಳ ಜತೆ ಮಾತನಾಡಿಸುವಷ್ಟು ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಇಷ್ಟು, ದಿನ ಬಳಸುತ್ತಿದ್ದ ಟೆಕ್ಸ್ಟ್... ಕಮಾಂಡ್‌... ಟಚ್‌ಸ್ಕ್ರೀನ್ ತಂತ್ರಜ್ಞಾನಗಳನ್ನೂ ಮೀರಿ ಈಗ ಮಾತುಗಳೇ ಇನ್‌ಪುಟ್ಸ್‌ ಆಗಿ ಬದಲಾಗಿವೆ.

ಫೇಕ್‍ ನ್ಯೂಸ್ ಬಗ್ಗೆ ಎಚ್ಚರವಿರಲಿ

ಸುಳ್ಳು ಸುದ್ದಿಗಳು ಹೆಚ್ಚಾಗಿ ಆಕರ್ಷಕ ಶೀರ್ಷಿಕೆಗಳನ್ನು ಹೊಂದಿರುತ್ತವೆ. ಈ ಸುದ್ದಿಗಳ ಶೀರ್ಷಿಕೆಗಳು ನೋಡಿದ ಕೂಡಲೇ ಓದುಗರಲ್ಲಿ ಕುತೂಹಲ ಹುಟ್ಟಿಸುವಂತಿದ್ದು, ಒಳಗಿರುವ ಸುದ್ದಿಯಲ್ಲಿ ಶೀರ್ಷಿಕೆಯಲ್ಲಿ ಹೇಳಿದಂತೆ ಇರುವ ವಿಷಯಗಳು ಇರುವುದಿಲ್ಲ.

ಕಣ್ಣೀರಿನಿಂದ ಮಧುಮೇಹ ನಿಯಂತ್ರಣ?

ದೇಹದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುವುದಕ್ಕಾಗಿ, ಇನ್ಸುಲಿನ್ ಚುಚ್ಚು ಮದ್ದು ಬಳಸುವುದು ಅನಿವಾರ್ಯವಾಗಿರುತ್ತದೆ.