ಪ್ರಶ್ನಿಸಬೇಕಾದೆಡೆ ಪ್ರಶಂಸೆಗಿಳಿಯುವ ಪತ್ರಿಕೋದ್ಯಮ

13 Feb, 2018
ನಾರಾಯಣ ಎ

ಇದು ವಿಚಿತ್ರವಾಗಿದೆ! ಒಂದು ತಿಂಗಳ ಹಿಂದೆ ಬಿಡುಗಡೆಯಾಗಿ ಈಗಲೂ ಪ್ರದರ್ಶನ ಕಾಣುತ್ತಿರುವ ಇಂಗ್ಲಿಷ್ ಚಲನಚಿತ್ರ ‘ದ ಪೋಸ್ಟ್’. ಯುದ್ಧದಂತಹ ಸೂಕ್ಷ್ಮ ವಿಚಾರದಲ್ಲೂ ಆಳುವ ಸರ್ಕಾರದ ಹಿತಾಸಕ್ತಿ ಮತ್ತು ದೇಶದ ಹಿತಾಸಕ್ತಿ ಬೇರೆ ಬೇರೆಯಾಗಿಯೇ ಇರುತ್ತವೆ ಎನ್ನುವ ಸಾರ್ವಕಾಲಿಕ ಪ್ರಜಾತಾಂತ್ರಿಕ ಸತ್ಯವನ್ನು ಇದು ಎತ್ತಿಹಿಡಿಯುತ್ತದೆ. ಈ ಸಿನಿಮಾ ನೋಡಿದ ಭಾರತದ ದೊಡ್ಡ ಮಾಧ್ಯಮ ಸಂಸ್ಥೆಯೊಂದರ ಪ್ರವರ್ತಕರಾಗಿರುವ ಸಂಸದರೊಬ್ಬರು (ಹೆಸರು: ರಾಜೀವ್ ಚಂದ್ರಶೇಖರ್) ‘ಇದು ಎಲ್ಲರೂ ಅತ್ಯಗತ್ಯವಾಗಿ ನೋಡಬೇಕಾದ ಅಮೋಘ ಸಿನಿಮಾ’ ಎಂದು ಟ್ವೀಟ್ ಮಾಡಿದರು. ಈ ಹೇಳಿಕೆಯ ಜತೆಗೆ ಸಿನಿಮಾದಲ್ಲಿ ಬಳಸಲಾದ ಅಮೆರಿಕದ ಸುಪ್ರೀಂ ಕೋರ್ಟ್‌ ಹೇಳಿದ ಮಾತೊಂದನ್ನೂ ದಾಖಲಿಸಿದರು: ‘ಮಾಧ್ಯಮಗಳು ಇರುವುದು ಆಳುವವರ (the governors) ಹಿತ ಕಾಯುವುದಕ್ಕಲ್ಲ, ಆಳಿಸಿಕೊಳ್ಳುವವರ (the governed) ಹಿತ ಕಾಯುವುದಕ್ಕೆ’.

ಇಡೀ ಜಗತ್ತೇ ಹೊಗಳುತ್ತಿರುವ, ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ನಿರ್ದೇಶಿಸಿರುವ ಈ ಸಿನಿಮಾವನ್ನು ಸಂಸದರೊಬ್ಬರು ಹೊಗಳಿದ್ದು ವಿಚಿತ್ರವಾಗಿದೆ ಎಂದು ಮೇಲೆ ಹೇಳಿದ್ದು ಯಾಕೆ ಅಂತ ಕೇಳುತ್ತೀರಾ? ಇಲ್ಲಿದೆ ನೋಡಿ ಕಾರಣ. ಸದರಿ ಸಂಸತ್ ಸದಸ್ಯರು ನಡೆಸುವ ಮಾಧ್ಯಮ ವ್ಯವಹಾರಗಳಲ್ಲಿ ಒಂದು ಇಂಗ್ಲಿಷ್ ನ್ಯೂಸ್ ಚಾನೆಲ್ ಕೂಡಾ ಸೇರಿದೆ. ಅವರು ಸಹಪ್ರವರ್ತಕರಾಗಿರುವ ಈ ಚಾನೆಲ್‌ನ ಹೆಸರು ‘ರಿಪಬ್ಲಿಕ್ ಟಿವಿ’ ಅಂತ. ‘ದ ಪೋಸ್ಟ್’ ಯಾವ ಸಂದೇಶವನ್ನು ಸಾರುತ್ತಿದೆಯೋ ಅದಕ್ಕೆ ಸಂಪೂರ್ಣ ತದ್ವಿರುದ್ಧವಾದದ್ದನ್ನೇ ಮಾಡುತ್ತಾ ಬಂದಿದೆ ಈ ವಾರ್ತಾವಾಹಿನಿ.

ಅಮೆರಿಕದ ಅಧ್ಯಕ್ಷ ಮತ್ತು ರಕ್ಷಣಾ ಕಾರ್ಯದರ್ಶಿ ಸೇರಿದಂತೆ ಇಡೀ ಮಿಲಿಟರಿ ವ್ಯವಸ್ಥೆಯು ವಿಯೆಟ್ನಾಂ ಯುದ್ಧಕ್ಕೆ ಸಂಬಂಧಿಸಿದಂತೆ ಜನರಿಗೆ ತಪ್ಪು ಮಾಹಿತಿ ಒದಗಿಸಿದ ಹಗರಣವನ್ನು ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ಬಯಲಿಗೆಳೆದ ಕಥಾನಕವನ್ನು ‘ದ ಪೋಸ್ಟ್’ ಅನಾವರಣಗೊಳಿಸಿದರೆ, ಅದನ್ನು ಹೊಗಳಿ ಟ್ವೀಟಿಸಿದ ಸಂಸದರ ಟಿ.ವಿ. ಚಾನೆಲ್ ಮಿಲಿಟರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಈಗಿನ ಕೇಂದ್ರ ಸರ್ಕಾರದ ವಿರುದ್ಧ ಸಣ್ಣದೊಂದು ಪ್ರಶ್ನೆ ಎತ್ತಿದರೂ ‘ದೇಶದ್ರೋಹ’ ಎಂದು ಅಬ್ಬರಿಸುತ್ತಿರುತ್ತದೆ.

ಎಂತಹ ಕಠಿಣ ಪರಿಸ್ಥಿತಿಯಲ್ಲೂ ಮಾಧ್ಯಮಗಳು ಆಳುವ ಸರ್ಕಾರವನ್ನು ಪ್ರಶ್ನಿಸುವ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬಾರದು ಎನ್ನುವ ಸಂದೇಶವನ್ನು ಸಿನಿಮಾ ಸಾರಿದರೆ, ಸಂಸದರಟಿ.ವಿ.ಯು ಸರ್ಕಾರವನ್ನು ಪ್ರಶ್ನಿಸುವವರ ವಿರುದ್ಧವೇ ದೊಡ್ಡ ಧ್ವನಿಯಲ್ಲಿ ಅರಚುವುದನ್ನು ರೂಢಿಯಾಗಿಸಿಕೊಂಡು ಭಾರತದಲ್ಲಿ ಮಾಧ್ಯಮ ಧರ್ಮಕ್ಕೊಂದು ಹೊಸ ಭಾಷ್ಯ ಬರೆದಿದೆ. ಈ ಕಾರಣಕ್ಕೆ ‘ದ ಪೋಸ್ಟ್’ ಅನ್ನು ಉದ್ಯಮಪತಿ ಸಂಸದರು ಹೊಗಳಿದ್ದು ವಿಚಿತ್ರವಾಗಿದೆ ಅಂತ ಅನ್ನಿಸಿದ್ದು.

ಇದು, ಈ ಸಂಸದರಿಗೆ ಮತ್ತು ಅವರ ಟಿ.ವಿ. ಚಾನೆಲ್‌ಗೆ ಮಾತ್ರ ಸೀಮಿತವಾದ ವಿಚಾರವಲ್ಲ. ಈ ಸಂಸದರು ದೊಡ್ಡ ಸಂಖ್ಯೆಯ ಭಾರತೀಯರ ಪತ್ರಿಕಾ ಮನೋಧರ್ಮದ ಪ್ರತಿನಿಧಿಯಂತೆ ಕಾಣುತ್ತಿದ್ದಾರೆ. ‘ದ ಪೋಸ್ಟ್’ ಸಿನಿಮಾವನ್ನು ಭಾರತದಲ್ಲಿ ನೋಡಿದವರೆಲ್ಲಾ ಮೆಚ್ಚಿಕೊಂಡಿದ್ದಾರೆ. ಇದರಲ್ಲಿ ಮಾಧ್ಯಮೋದ್ಯಮಿಗಳು, ಮಾಧ್ಯಮೋದ್ಯೋಗಿಗಳು ಮತ್ತು ಮಾಧ್ಯಮೋಪಭೋಗಿಗಳು (media consumers) ಎಲ್ಲಾ ಇದ್ದಾರೆ. ಇಷ್ಟೊಂದು ಮಂದಿ ಸಿನಿಮಾದ ಸಂದೇಶವನ್ನು ಮೆಚ್ಚಿಕೊಂಡಿರುವಾಗ ಅದಕ್ಕೆ ಸಂಪೂರ್ಣ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‌ಗಳ ಜನಪ್ರಿಯತೆ ಭಾರತದಲ್ಲಿ ಹೆಚ್ಚುತ್ತಿರುವುದೇಕೆ? ಇದು ಚೋದ್ಯದ ವಿಚಾರ.

‘ದ ಪೋಸ್ಟ್’ ಸಿನಿಮಾಕ್ಕೆ ಭಾರತದಲ್ಲಿ ಕೇಳಿಬರುತ್ತಿರುವ ವ್ಯಾಪಕ ಹೊಗಳಿಕೆಯು ಪತ್ರಿಕಾ ಧರ್ಮಕ್ಕೆ ಸಂಬಂಧಿಸಿದ೦ತೆ ದೊಡ್ಡ ಸಂಖ್ಯೆಯ ಭಾರತೀಯರಲ್ಲಿ ಮನೆ ಮಾಡಿರುವ ಆಷಾಢಭೂತಿತನದ ಪ್ರಕಟಣೆಯಂತೆ ಕಾಣುತ್ತಿದೆ. ಕೆಲವೊಂದು ಸತ್ಯಗಳನ್ನು ಇತರರು ಅನುಸರಿಸುವಾಗ ಅದನ್ನು ಹಾಡಿ ಹೊಗಳುವುದು, ಆದರೆ ಸ್ವಂತ ಬದುಕಿನಲ್ಲಿ ಅದನ್ನು ಅನುಸರಿಸದೆ ಇರುವ ಜಾಯಮಾನ ಇದು. ಇದು, ಸಾರ್ವಜನಿಕ ಬೀದಿಗಳನ್ನು ಸ್ವಚ್ಛವಾಗಿರಿಸುವ ವಿಷಯದಲ್ಲಾದರೂ ಸರಿ; ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಾದರೂ ಸರಿ, ವಿದೇಶದಲ್ಲಿ ಆಗುತ್ತಿರುವುದನ್ನು ಮೆಚ್ಚುತ್ತೇವೆ; ಸ್ವದೇಶದಲ್ಲಿ ಕಣ್ಣುಮುಚ್ಚಿಕೊಳ್ಳುತ್ತೇವೆ.

‘ದ ಪೋಸ್ಟ್’ ಇನ್ನೊಂದು ಸಂದೇಶವನ್ನು ಸಾರುತ್ತದೆ. ಅದು ಇಡೀ ಪತ್ರಿಕಾ ರಂಗದ ವ್ಯಾವಹಾರಿಕ ಮುಖಕ್ಕೆ ಸಂಬಂಧಿಸಿದ್ದು. ಅಮೆರಿಕನ್ ಸರ್ಕಾರವು ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಗೌಪ್ಯಾತಿಗೌಪ್ಯವಾಗಿರಿಸಿದ್ದ ಪೆಂಟಗಾನ್ ಪೇಪರ್ಸ್‌ಗೆ ಸಂಬಂಧಿಸಿದ ವರದಿಯನ್ನು ‘ವಾಷಿಂಗ್ಟನ್ ಪೋಸ್ಟ್’ ಪ್ರಕಟಿಸುವ ಸೂಕ್ಷ್ಮ ನಿರ್ಣಯವನ್ನು ಕೈಗೊಳ್ಳುವ ಮೊದಲು ಪತ್ರಿಕೆಯ ಮಾಲಕಿ ಒಂದು ಮಾತು ಹೇಳುತ್ತಾಳೆ. ಅದನ್ನವಳು ಹೇಳುವುದು ವರದಿ ಪ್ರಕಟಿಸಿದರೆ ಆಗಬಹುದಾದ ನಷ್ಟಗಳನ್ನು ಅವಳಿಗೆ ವಿವರಿಸುತ್ತಿರುವ ಪತ್ರಿಕೆಯ ನಿರ್ದೇಶಕ ಮಂಡಳಿಯ ಸದಸ್ಯರಿಗೆ. ಪತ್ರಿಕೆ ಲಾಭ ಗಳಿಸಬೇಕು, ನಿಜ. ಆದರೆ ಪತ್ರಿಕೆಯೊಂದರ ಲಾಭ– ನಷ್ಟಗಳ ನಿರ್ಣಯ ಅದು ರಾಜಕೀಯ ಅಧಿಕಾರದ ದುರುಪಯೋಗ ಮತ್ತು ಸದುಪಯೋಗದ ಬಗ್ಗೆ ಎಷ್ಟರಮಟ್ಟಿಗೆ ವಸ್ತುನಿಷ್ಠ ವರದಿಗಳನ್ನು ಪ್ರಕಟಿಸುತ್ತದೆ ಎನ್ನುವ ಆಧಾರದಲ್ಲಿ ಮಾತ್ರ ಆಗುತ್ತಿರಬೇಕು. ಇನ್ಯಾವುದಾದರೂ ಕಾರಣಗಳಿಂದ ಲಾಭ ಗಳಿಸುವ ಉದ್ದೇಶ ಇದ್ದರೆ ಪತ್ರಿಕೆಯನ್ನೇ ಯಾಕೆ ನಡೆಸಬೇಕು?

ಸಮಕಾಲೀನ ಭಾರತೀಯ ಮಾಧ್ಯಮೋದ್ಯಮವನ್ನು ಕಣ್ಣಲ್ಲಿ ಕಣ್ಣಿಟ್ಟು ಅಣಕಿಸುವಂತಹ ರೀತಿಯಲ್ಲಿ ಈ ಮಾತುಗಳಿವೆ. ಯಾಕೆಂದರೆ ಭಾರತದ ಮಾಧ್ಯಮಗಳ ಇಂದಿನ ಸ್ಥಿತಿಯು ಮೇಲಿನ ಮಾತುಗಳು ಕಟ್ಟಿಕೊಡುವ ಚಿತ್ರಣಕ್ಕಿಂತಲೂ ಒಂದಂಗುಲ ಕೆಳಗಿಳಿದಿದೆ. ಭಾರತದಲ್ಲಿ ಮಾಧ್ಯಮಗಳು ಲಾಭ ಗಳಿಸಲು ಅಧಿಕಾರದ ಸದುಪಯೋಗ- ದುರುಪಯೋಗಗಳ ಕುರಿತಂತೆ ವಸ್ತುನಿಷ್ಠ ವರದಿಗಳನ್ನು ಜನರ ಮುಂದಿಡಬೇಕು ಎಂಬ ಅನಿವಾರ್ಯ ಇಲ್ಲವಾದ ಸ್ಥಿತಿ ನಿರ್ಮಾಣವಾದದ್ದು ಹಳೆಯ ಕತೆ.

ಈ ಪ್ರಕ್ರಿಯೆಯಲ್ಲಿ ಕೆಲ ಮಾಧ್ಯಮಗಳು ಮನೋರಂಜನೆಯ ಹಾದಿ ಹಿಡಿದರೆ, ಇನ್ನು ಕೆಲವು ಬರೀ ಮಾಹಿತಿ ಒದಗಿಸುವ ನ್ಯೂಸ್ ಲೆಟರ್‌ಗಳಾದವು. ಹೀಗಾಗುವುದಕ್ಕೆ ಪ್ರಸಾರಕ್ಕಿಂತಲೂ ಜಾಹೀರಾತನ್ನೇ ಹೆಚ್ಚಾಗಿ ಅವಲಂಬಿಸಬೇಕಾದ ಮಾಧ್ಯಮೋದ್ಯಮದ ವಿಲಕ್ಷಣ ಆರ್ಥಿಕ ಸ್ಥಿತಿ ಕಾರಣ ಎಂದೂ ಹೇಳಲಾಯಿತು. ಇದು ಇಷ್ಟಕ್ಕೇ ನಿಲ್ಲಲಿಲ್ಲ. ಇದರ ನಂತರದ ಸ್ಥಿತಿಯಲ್ಲಿ ಮಾಧ್ಯಮಗಳು ಸಂಪೂರ್ಣವಾಗಿ ಅಧಿಕಾರಸ್ಥರ, ಜನಪ್ರಿಯ ನಾಯಕರ ತುತ್ತೂರಿಗಳಾಗುವ ಹಾದಿಯಲ್ಲಿ ಸಾಗುತ್ತಿವೆ. ಈ ಹೊಸ ಪರಂಪರೆಯಲ್ಲಿ ಮಾಧ್ಯಮಗಳ ಲಾಭ– ನಷ್ಟ ನಿರ್ಣಯವಾಗುವುದು ಅವು ಅಧಿಕಾರಸ್ಥರ ಜತೆ ಎಷ್ಟರಮಟ್ಟಿಗೆ ಹೊಂದಾಣಿಕೆ ಮಾಡಿಕೊಂಡಿವೆ, ಅಧಿಕಾರಸ್ಥರಿಗೆ ಎಷ್ಟರಮಟ್ಟಿಗೆ ಸಹಕರಿಸುತ್ತಿವೆ ಎನ್ನುವುದರ ಆಧಾರದ ಮೇಲೆ. ಪ್ರಜಾತಂತ್ರಕ್ಕೆ ದೊಡ್ಡ ಅಪಾಯ ಎದುರಾಗುವ ಮುನ್ಸೂಚನೆ ಇದು.

‘ದ ಪೋಸ್ಟ್’ ಸಿನಿಮಾ ಭಾರತದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ವೇಳೆಯಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎರಡು ವಾಹಿನಿಗಳಿಗೆ ಸಂದರ್ಶನ ನೀಡಿದರು (ಝೀ ನ್ಯೂಸ್‌ ಮತ್ತು ಟೈಮ್ಸ್ ನೌ). ಯಾವತ್ತೂ ಮಾಧ್ಯಮಗಳ ಜತೆ ಮಾತನಾಡದ ಪ್ರಧಾನಿ, ಆಗಾಗ ಯಾಕೆ ಕೆಲ ಆಯ್ದ ಟಿ.ವಿ. ಚಾನೆಲ್‌ಗಳ ಜತೆ ಮಾತ್ರ ಮಾತನಾ

ಡುತ್ತಾರೆ ಎನ್ನುವುದು ಯಕ್ಷಪ್ರಶ್ನೆ. ಅದೇನೇ ಇರಲಿ. ಅವರು ಒಬ್ಬ ರಾಜಕಾರಣಿ. ತಮ್ಮ ರಾಜಕೀಯ ಲಾಭ– ನಷ್ಟ ಲೆಕ್ಕ ಹಾಕಿ ಏನು ಮಾಡಬೇಕೋ ಅದನ್ನವರು ಮಾಡಿದ್ದಾರೆ. ಇಲ್ಲಿ ಮುಖ್ಯವಾಗುವುದು ಪ್ರಧಾನಿಯವರು ಯಾವ ರೀತಿಯ ಮಾಧ್ಯಮ ಸಂಬಂಧಗಳನ್ನು ಇಟ್ಟುಕೊಂಡಿದ್ದಾರೆ ಎನ್ನುವುದಲ್ಲ. ಪ್ರಧಾನಿಯ ಸಂದರ್ಶನ ‘ಭಾಗ್ಯ’ ಸಿಕ್ಕ ಎರಡು ಟಿ.ವಿ. ಚಾನೆಲ್‌ಗಳು ಮತ್ತು ಅವರನ್ನು ಸಂದರ್ಶಿಸಿದ ವರದಿಗಾರರ–ಪತ್ರಕರ್ತರ ನಡೆ, ನುಡಿ, ವರ್ತನೆ ಮತ್ತು ಅವರು ಕೇಳಿದ ಪ್ರಶ್ನೆಗಳು.

ಮೂರೂವರೆ ವರ್ಷಗಳಲ್ಲಿ ಪ್ರಧಾನಮಂತ್ರಿಗಳು ಸಂದರ್ಶನ ನೀಡಿದ ಮೂರು ಟೆಲಿವಿಷನ್ ಸಂದರ್ಶನಗಳಲ್ಲಿ (‘ಟೈಮ್ಸ್ ನೌ’ಗೆ ಅವರು ಹಿಂದೊಮ್ಮೆ ಸಂದರ್ಶನ ನೀಡಿದ್ದರು) ಪತ್ರಕರ್ತರು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಕಾಳಜಿ ಇರುವ, ಸ್ವಾಭಿಮಾನದ ಲವಲೇಶವಾದರೂ ಇರುವ ಒಂದೇ ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ‘ನಿಮಗೆ ದಣಿವಾಗುವುದಿಲ್ಲವೇ’, ‘ನಿಮ್ಮ ವಿರೋಧಿಗಳು ಅದ್ಯಾಕೆ ನಿಮ್ಮನ್ನು ಆ ಮಟ್ಟಿಗೆ ಟೀಕಿಸುತ್ತಿದ್ದಾರೆ’... ಇತ್ಯಾದಿ ಪ್ರಶ್ನೆಗಳ ಜತೆಗೆ ಪ್ರಧಾನಮಂತ್ರಿಗಳಿಗೆ ಏನು ಹೇಳಬೇಕಿತ್ತೋ ಅದನ್ನು ಹೇಳಲು ಅನುವಾಗುವಂತಹ ಪ್ರಶ್ನೆಗಳನ್ನೇ ಕೇಳುತ್ತಾ ಸಾಗಿದ ಸಂದರ್ಶನವು ಭಾರತೀಯ ಮಾಧ್ಯಮೋದ್ಯಮ ಕುಸಿದ ಆಳಕ್ಕೆ ಕನ್ನಡಿ ಹಿಡಿಯುತ್ತದೆ. ಪ್ರಧಾನಮಂತ್ರಿಗಳ ಸಂದರ್ಶನವನ್ನು ಓರ್ವ ಸಿನಿಮಾ ನಟನ ಸಂದರ್ಶನದಂತೆ ಈ ಎರಡು ಟಿ.ವಿ. ಚಾನೆಲ್‌ನವರು ಮಾಡಿಮುಗಿಸಿದರು.

ಕೇವಲ ಮೋದಿಯವರ ವಿಚಾರದಲ್ಲೇ ಮಾಧ್ಯಮಗಳು ಈ ತೆವಲಿನತ್ತ ತೆವಳಿವೆ ಎನ್ನುವ ಹಾಗಿಲ್ಲ. ಕನ್ನಡ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಒಂದು ಉದಾಹರಣೆಯನ್ನು ಇಲ್ಲಿ ನೀಡಬಹುದು. ಮಾಜಿ ಮುಖ್ಯಮ೦ತ್ರಿ ಎಸ್.ಎ೦. ಕೃಷ್ಣ ಅವರು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ವಿದೇಶಾ೦ಗ ಸಚಿವರ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯಕ್ಕೆ ಮರಳಿದ ಸ೦ದರ್ಭ ನೆನಪಿಸಿಕೊಳ್ಳಿ. ಕರ್ನಾಟಕಕ್ಕೆ ಅವರು ಬರುತ್ತಿರುವುದರಿ೦ದ ಕಾ೦ಗ್ರೆಸ್ ಪಕ್ಷದ ಕಾರ್ಯಕರ್ತರಿಗಿ೦ತ ಹೆಚ್ಚಿನ ಪುಳಕವನ್ನು ಅನುಭವಿಸಿದ್ದು ಮತ್ತು ಪ್ರಕಟಿಸಿದ್ದು ಮಾಧ್ಯಮಗಳು.

‘ಅವರು (ಕೃಷ್ಣ) ಸುಮ್ಮನೆ ಕುಳಿತುಕೊಳ್ಳುವವರಲ್ಲ. ಅವರು ಇನ್ನೇನು ಪಾ೦ಚಜನ್ಯ ಊದಿಯೇ ಊದುತ್ತಾರೆ. ರಾಜ್ಯದಲ್ಲಿ ಕಾ೦ಗ್ರೆಸ್ಸನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಕ೦ಕಣ ಬದ್ಧರಾಗುತ್ತಾರೆ. ರಾಜ್ಯದಲ್ಲಿ ಕಾ೦ಗ್ರೆಸ್‌ಗೆ ಕಾಯಕಲ್ಪ ನೀಡುವುದಕ್ಕಾಗಿಯೇ ಪಕ್ಷದ ಹೈಕಮಾ೦ಡ್ ಹೀಗೊ೦ದು ನಿರ್ಧಾರ ಕೈಗೊ೦ಡಿದೆ...’ ಹೀಗೆ ಅವರಿಗೇ ಮುಜುಗರವಾಗುವ ರೀತಿಯಲ್ಲಿ ಪತ್ರಿಕೆಗಳಲ್ಲಿ ಬರವಣಿಗೆಗಳು, ಟಿ.ವಿ. ಚಾನೆಲ್‌ಗಳಲ್ಲಿ ಚರ್ಚೆಗಳು ನಡೆಯುತ್ತಿದ್ದವು.

ಅಷ್ಟಕ್ಕೂ ವಿದೇಶಾ೦ಗ ಖಾತೆಯಿ೦ದ ಮಾಜಿ ಮುಖ್ಯಮ೦ತ್ರಿಗಳನ್ನು ಕಾ೦ಗ್ರೆಸ್ ಹೈಕಮಾ೦ಡ್ ಬಿಡುಗಡೆ ಮಾಡಿದ್ದರ ಹಿ೦ದಿನ ನಿಜವಾದ ಕತೆ ಏನು, ವಿದೇಶಾ೦ಗ ಖಾತೆಯಲ್ಲಿ ಅವರ ಸಾಧನೆ-ವೈಫಲ್ಯಗಳೇನು ಎ೦ಬುದರ ಬಗ್ಗೆ ಓದುಗರಿಗೆ ಯಾವ ಮಾಹಿತಿಯೂ ಇ೦ದಿಗೂ ದೊರಕಲಿಲ್ಲ. ರಾಜ್ಯ ರಾಜಕಾರಣದಲ್ಲಿ ಆ ನ೦ತರ ನಡೆದದ್ದೇ ಬೇರೆ. ವಿದೇಶಾ೦ಗ ಖಾತೆಯಿ೦ದ ಬಿಡಿಸಿ ಮಾಜಿ ಮುಖ್ಯಮ೦ತ್ರಿಗಳನ್ನು ಕರ್ನಾಟಕಕ್ಕೆ ಮರಳಿಸುವಲ್ಲಿ ಕಾ೦ಗ್ರೆಸ್ ಹೈಕಮಾ೦ಡ್‌ನ ಉದ್ದೇಶ ಏನಿತ್ತು ಎನ್ನುವುದರ ಬಗ್ಗೆ ಮಾಧ್ಯಮಗಳು ಬರೆದ ಅಷ್ಟೂ ವಿಚಾರಗಳು ಕೇವಲ ಊಹೆ ಎನ್ನುವುದು ಈಗ ಸ್ಪಷ್ಟವಾಗಿದೆ. ವಿಚಾರಗಳ ಬದಲಿಗೆ ಕೆಲ ವ್ಯಕ್ತಿಗಳೇ ಮಾಧ್ಯಮಗಳಿಗೆ ಮುಖ್ಯವಾಗುವುದಕ್ಕೆ ಒಂದು ನಿದರ್ಶನವಿದು.

ಎಲ್ಲಾ ಪಕ್ಷಗಳ ಆಳ್ವಿಕೆಯಲ್ಲೂ, ಎಲ್ಲಾ ಕಾಲದಲ್ಲೂ, ಎಲ್ಲಾ ದೇಶಗಳಲ್ಲೂ ಮಾಧ್ಯಮ ಸ್ವಾತಂತ್ರ್ಯವನ್ನು ಹರಣ ಮಾಡಲು ಸರ್ಕಾರಗಳು ಹವಣಿಸುತ್ತಿವ. ಅದರಲ್ಲಿ ಹೊಸತೇನೂ ಇಲ್ಲ. ಅಧಿಕಾರಸ್ಥರ ಈ ಪ್ರಯತ್ನಗಳನ್ನು ಮಾಧ್ಯಮದ ಮಂದಿ ಯಾವ ರೀತಿಯಲ್ಲಿ ಸ್ವೀಕರಿಸಿದ್ದಾರೆ ಮತ್ತು ಅದಕ್ಕೆ ಎಂತಹ ಪ್ರತಿರೋಧಗಳನ್ನು ಒಡ್ಡಿದ್ದಾರೆ ಎನ್ನುವುದು ಆಯಾ ಕಾಲದ ಮಾಧ್ಯಮಗಳ ಮತ್ತು ಜನತಂತ್ರದ ಸತ್ವ ಏನು ಎನ್ನುವುದನ್ನು ತಿಳಿಸುತ್ತವೆ.

ಸರ್ಕಾರಗಳು ಮಾಧ್ಯಮ ವಿರೋಧಿಯಾಗಿರುತ್ತವೆ ಎನ್ನುವುದು ಸಾರ್ವಕಾಲಿಕ ಸತ್ಯ. ಮಾಧ್ಯಮವಿರೋಧಿ ಸರ್ಕಾರಗಳ ಜತೆ ಮಾಧ್ಯಮಗಳು ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿವೆ ಎನ್ನುವುದು ಆಧುನಿಕ ಭಾರತದ ಸತ್ಯ. ಹಿಂದೆ ತುರ್ತು ಪರಿಸ್ಥಿತಿಯ ಕಾಲದಲ್ಲೂ ಹೀಗೇ ಇರಲಿಲ್ಲವೇ ಎಂದು ಕೆಲವರು ಕೇಳ
ಬಹುದು. ಈ ಪ್ರಶ್ನೆಗೆ ಎರಡು ಪ್ರತಿಕ್ರಿಯೆಗಳಿವೆ. ಮೊದಲನೆಯದ್ದು– ಹಿಂದೆ ಹೀಗೆ ಆಗಿತ್ತು ಎನ್ನುವುದು ಈಗ ಆಗುತ್ತಿದೆ ಎನ್ನುವುದಕ್ಕೆ ಸಮರ್ಥನೆ ಆಗಬಾರದು.

ಎರಡನೆಯದ್ದು– ತುರ್ತುಪರಿಸ್ಥಿಯ ಕಾಲದಲ್ಲಿ ಹೀಗೆಲ್ಲಾ ಆಗಿದ್ದರೆ ಅದರಲ್ಲಿ ವಿಶೇಷವೇನೂ ಇಲ್ಲ. ಅದು ತುರ್ತು ಪರಿಸ್ಥಿತಿ. ಅಂತಹ ಪರಿಸ್ಥಿತಿ ಇಲ್ಲ ಎಂದು ನಂಬಿದ ಈ ಕಾಲದಲ್ಲಿ ಮಾಧ್ಯಮಗಳು ಪ್ರಶ್ನಿಸುವುದನ್ನು ಬಿಟ್ಟು ಪ್ರಶಂಸೆಗೆ ಇಳಿಯುತ್ತಿರುವ ಪರಂಪರೆಯೊಂದು ಹೇಗೆ ಹುಟ್ಟಿಕೊಂಡಿದೆ ಎಂಬುದು ಈಗ ಪ್ರಸ್ತುತವಾಗುವ ಪ್ರಶ್ನೆ. ಈ ಪರಿಸ್ಥಿತಿಯನ್ನು ಒಪ್ಪಿಕೊಳ್ಳುತ್ತಲೇ ಇದಕ್ಕೆ ತದ್ವಿರುದ್ಧ ಮೌಲ್ಯವನ್ನು ಪ್ರತಿಪಾದಿಸುವ ‘ದ ಪೋಸ್ಟ್’ನಂತಹ ಸಿನಿಮಾವನ್ನು ಕೂಡಾ ಮೆಚ್ಚಿಕೊಳ್ಳುವ ಭಾರತೀಯ ಮಾಧ್ಯಮ ಮನೋಭಾವದ ಮರ್ಮ ನಿಜಕ್ಕೂ ವಿಚಿತ್ರ.

Read More

Comments
ಮುಖಪುಟ

ಸಾರ್ವಜನಿಕವಾಗಿ ಸುಳ್ಳು ಹೇಳಿದ ಶಾ

‘ಕಾಂಗ್ರೆಸ್ ಶಾಸಕ ಎನ್‌.ಎ.ಹ್ಯಾರಿಸ್‌ ಮಗ ಮೊಹಮದ್‌ ನಲಪಾಡ್‌ನಿಂದ ಹಲ್ಲೆಗೊಳಗಾಗಿರುವ ವಿದ್ವತ್‌ ನಮ್ಮ ಕಾರ್ಯಕರ್ತ’ ಎಂದು ಮಂಗಳವಾರ ಮಧ್ಯಾಹ್ನ ಬಿ.ಸಿ.ರೋಡ್‌ನಲ್ಲಿ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಸಂಜೆಯ ವೇಳೆಗೆ ಸುರತ್ಕಲ್‌ನಲ್ಲಿ ಅದನ್ನು ಹಿಂಪಡೆದು ಉದ್ದೇಶಪೂರ್ವಕ ವಾಗಿ ಸುಳ್ಳು ಹೇಳಿರುವುದಾಗಿ ಸ್ಪಷ್ಟನೆ ನೀಡಿದರು.

ಅಧಿಕ ಶುಲ್ಕ ವಸೂಲಿ: ಖಾಸಗಿ ಆಸ್ಪತ್ರೆಗಳ ಹಗಲು ದರೋಡೆ

ಔಷಧ, ವೈದ್ಯಕೀಯ ಸಲಕರಣೆಗಳಿಗಾಗಿ ಅಸಹಾಯಕ ರೋಗಿಗಳಿಂದ ಶೇ 1,192 ರಷ್ಟು ಹೆಚ್ಚಿಗೆ ಹಣವನ್ನು ಖಾಸಗಿ ಆಸ್ಪತ್ರೆಗಳು ಲೂಟಿ ಮಾಡಿವೆ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (ಎನ್‌ಪಿಪಿಎ) ವರದಿ ಹೇಳಿದೆ.

ಮುಖ್ಯ ಕಾರ್ಯದರ್ಶಿ ಮೇಲೆ ಎಎಪಿ ಶಾಸಕರ ಹಲ್ಲೆ?

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಿವಾಸದಲ್ಲಿ ಸೋಮವಾರ ರಾತ್ರಿ ಆಮ್‌ ಆದ್ಮಿ ಪಕ್ಷದ(ಎಎಪಿ) ಇಬ್ಬರು ಶಾಸಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಆರೋಪಿಸಿದ್ದಾರೆ.

ಪಾಲಿಕೆ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡನ ದರ್ಪ

ವಿವಾದಿತ ಜಮೀನಿಗೆ ಖಾತೆ ಮಾಡಿಕೊಡದ ಕಾರಣಕ್ಕೆ ಹೊರಮಾವು ಬಿಬಿಎಂಪಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿರುವ ಕಾಂಗ್ರೆಸ್‌ನ ಕೆ.ಆರ್‌.ಪುರ ಬ್ಲಾಕ್‌ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ದಾಖಲೆಗಳ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲು ಯತ್ನಿಸಿದ್ದಾರೆ.

ಸಂಗತ

ಮಾರುತ್ತರ ನೀಡಲು ಸಾಧ್ಯವೇ?

ನುಡಿಯ ಬಗೆಗೆ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ನೀಡುವ ಮೊದಲು ತಾವು ಪ್ರತಿನಿಧಿಸುವ ಕ್ಷೇತ್ರವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ತಮಗೆ ಮತ ನೀಡಿದ ಜನರು ಬಳಸುತ್ತಿರುವ ವಿವಿಧ ಬಗೆಯ ಉಪಭಾಷೆಗಳ ಬಗೆಗೆ ಮಾಹಿತಿಯನ್ನಾದರೂ ಪಡೆದಿದ್ದರೆ ಚೆನ್ನಾಗಿರುತ್ತಿತ್ತು

ಅಸಾಮಾನ್ಯ ಅಸಭ್ಯರು

ಹಿಂದೊಮ್ಮೆ ರೈತರು ಹಾಗೂ ಶರಣರೂ ಎರಡೂ ಆಗಿದ್ದ ಯಡಿಯೂರಪ್ಪನವರು ನಿಮ್ಮ ಮಾತನ್ನು ಖಂಡಿತವಾಗಿ ಕೇಳಿಸಿಕೊಂಡಾರು. ಒಟ್ಟು ಕತೆಯ ನೀತಿಯೆಂದರೆ ಭಾರತೀಯ ರಾಜಕಾರಣವನ್ನು ಯುಬಿ ಸಿಟಿ ಬಾರುಗಳಿಂದ ಕೆಳಗಿಳಿಸಿ ತರಬೇಕಾದ ಜರೂರು ತುಂಬ ಇದೆ!

ಅರಣ್ಯ ಪರಿಸ್ಥಿತಿ ವರದಿ ಮತ್ತು ನೈಜ ಸ್ಥಿತಿ

ಅರಣ್ಯ ಪ್ರದೇಶ ಹೆಚ್ಚಳದ ಹಿಂದಿನ ಹಾಗೂ ಸಮಾಜೋ-–ಆರ್ಥಿಕ ಆಯಾಮಗಳು ಮತ್ತು ಇಲಾಖೆಯ ಆಡಳಿತಾತ್ಮಕ ಜವಾಬ್ದಾರಿಯನ್ನು ವರದಿ ಚರ್ಚಿಸುವುದಿಲ್ಲ

ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟು–ಪರಿಹಾರ

ಭಾರತಕ್ಕೆ ಉಳಿದಿರುವ ದಾರಿಯೆಂದರೆ, ವಿಶ್ವಸಂಸ್ಥೆ ಮತ್ತು ಅಮೆರಿಕದ ಜೊತೆಗೂಡಿ ರಾಜತಾಂತ್ರಿಕ ಮಾರ್ಗದ ಮೂಲಕ ಮಾಲ್ಡೀವ್ಸ್‌ ಬಿಕ್ಕಟ್ಟನ್ನು ಪರಿಹರಿಸಲು ಶ್ರಮಿಸುವುದು.

ವಾಣಿಜ್ಯ

‘ಟಿಟಿಕೆ ಪ್ರೆಸ್ಟೀಜ್’ ಯಶೋಗಾಥೆ

ಟಿಟಿಕೆ ಗ್ರೂ‍ಪ್‌ನ ಅಂಗಸಂಸ್ಥೆಯಾಗಿರುವ ‘ಟಿಟಿಕೆ ಪ್ರೆಸ್ಟೀಜ್‌’, ಬರೀ ಪ್ರೆಷರ್‌ ಕುಕ್ಕರ್‌ ತಯಾರಿಕೆ ಸಂಸ್ಥೆ ಎನ್ನುವ ಗ್ರಾಹಕರ ನಂಬಿಕೆ ಬದಲಿಸಲು ಸಾಕಷ್ಟು ಶ್ರಮಪಟ್ಟಿದೆ. ಪ್ರೆಷರ್‌ ಕುಕ್ಕರ್‌ನಿಂದ ಹಿಡಿದು ವೈವಿಧ್ಯಮಯ ಉತ್ಪನ್ನಗಳ ಮೂಲಕ ಗ್ರಾಹಕರ ಮನ ಗೆದ್ದಿದೆ.

ಗುಂಪು ವಿಮೆ: ಜತೆಗಿರಲಿ ಇನ್ನೊಂದು ವಿಮೆ

ಕಾರ್ಪೊರೇಟ್‌ ಗುಂಪು ಆರೋಗ್ಯ ವಿಮೆ ಖಂಡಿತವಾಗಿಯೂ ಒಳ್ಳೆಯ ಉಪಕ್ರಮ.  ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳನ್ನು ನಿಭಾಯಿಸಲು  ಗುಂಪು ವಿಮೆಯ ಫಲಾನುಭವಿಗಳು  ಪ್ರತ್ಯೇಕ ಸ್ವತಂತ್ರ ವಿಮೆ ಮಾಡಿಸುವುದರಿಂದ ದೊರೆಯುವ ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ.

‘ಎಸ್‍ಎಂಇ’ಗಳ ಡಿಜಿಟಲೀಕರಣಕ್ಕೆ ಸೂಕ್ತ ಸಮಯ

ತಂತ್ರಜ್ಞಾನ ಸ್ಟಾರ್ಟ್‌ಅಪ್‍ಗಳ ಚಿಗುರೊಡೆಯುವಿಕೆ ಹಾಗೂ ಡಿಜಿಟಲ್ ಪಾವತಿಯ ಅಳವಡಿಕೆ ವಿಷಯದಲ್ಲಿ ದಕ್ಷಿಣ ಭಾರತ  ಮುಂಚೂಣಿಯಲ್ಲಿದೆ. ತಂತ್ರಜ್ಞಾನದ ಬೆಂಬಲದಿಂದ  ಇಲ್ಲಿಯ ಹಲವು ಉದ್ಯಮಗಳು  ತಮ್ಮ ವ್ಯವಹಾರವನ್ನು ವಿಸ್ತರಿಸಿವೆ.

ಹಣಕಾಸು ಯೋಜನೆ ಮೇಲೆ ಬಜೆಟ್‌ ಪರಿಣಾಮ

ಕೇಂದ್ರ ಸರ್ಕಾರದ ಬಜೆಟ್‌ ನಿಮ್ಮ ಹಣಕಾಸಿನ ಯೋಜನೆಗಳನ್ನು ಬದಲಾಯಿಸುತ್ತದೆಯೇ ಎನ್ನುವ ಅನುಮಾನಗಳಿಗೆ ಸಂಬಂಧಿಸಿದಂತೆ ವೈಭವ್‌ ಅಗರ್‌ವಾಲ್‌ ವಿವರಗಳನ್ನು ನೀಡಿದ್ದಾರೆ.

ತಂತ್ರಜ್ಞಾನ

ವಾಟ್ಸ್ ಆ್ಯಪ್‌ನಲ್ಲಿ ಹೀಗೂ ಇವೆ ಸುಲಭ ಉಪಾಯಗಳು

ವಾಟ್ಸ್‌ಆ್ಯಪ್‌ನಲ್ಲಿ ಫೋಟೊ ಕಳಿಸಿದರೆ ರೆಸೊಲ್ಯೂಷನ್ ಹೊರಟು ಹೋಗುತ್ತದೆ ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ರೆಸೊಲ್ಯೂಷನ್ ಕಡಿಮೆಯಾಗದಂತೆ ಫೋಟೊಗಳನ್ನು ವಾಟ್ಸ್ ಆ್ಯಪ್ ನಲ್ಲಿಯೂ ಕಳುಹಿಸಬಹುದು.

ಮಾತೇ ಮಂತ್ರವಾದಾಗ!

ನಿತ್ಯ ಬಳಸುವ ಸಾಧನಗಳು ಮತ್ತು ಉಪಕರಣಗಳ ಜತೆ ಮಾತನಾಡಿಸುವಷ್ಟು ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಇಷ್ಟು, ದಿನ ಬಳಸುತ್ತಿದ್ದ ಟೆಕ್ಸ್ಟ್... ಕಮಾಂಡ್‌... ಟಚ್‌ಸ್ಕ್ರೀನ್ ತಂತ್ರಜ್ಞಾನಗಳನ್ನೂ ಮೀರಿ ಈಗ ಮಾತುಗಳೇ ಇನ್‌ಪುಟ್ಸ್‌ ಆಗಿ ಬದಲಾಗಿವೆ.

ಫೇಕ್‍ ನ್ಯೂಸ್ ಬಗ್ಗೆ ಎಚ್ಚರವಿರಲಿ

ಸುಳ್ಳು ಸುದ್ದಿಗಳು ಹೆಚ್ಚಾಗಿ ಆಕರ್ಷಕ ಶೀರ್ಷಿಕೆಗಳನ್ನು ಹೊಂದಿರುತ್ತವೆ. ಈ ಸುದ್ದಿಗಳ ಶೀರ್ಷಿಕೆಗಳು ನೋಡಿದ ಕೂಡಲೇ ಓದುಗರಲ್ಲಿ ಕುತೂಹಲ ಹುಟ್ಟಿಸುವಂತಿದ್ದು, ಒಳಗಿರುವ ಸುದ್ದಿಯಲ್ಲಿ ಶೀರ್ಷಿಕೆಯಲ್ಲಿ ಹೇಳಿದಂತೆ ಇರುವ ವಿಷಯಗಳು ಇರುವುದಿಲ್ಲ.

ಕಣ್ಣೀರಿನಿಂದ ಮಧುಮೇಹ ನಿಯಂತ್ರಣ?

ದೇಹದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುವುದಕ್ಕಾಗಿ, ಇನ್ಸುಲಿನ್ ಚುಚ್ಚು ಮದ್ದು ಬಳಸುವುದು ಅನಿವಾರ್ಯವಾಗಿರುತ್ತದೆ.