ಬೆಂಗಳೂರಿಗೆ ಕಾದಿದೆ ಜಲ ಸಂಕಟ: ತಜ್ಞರ ಕಳವಳ

  • ಬಾಲಸುಬ್ರಮಣಿಯನ್‌

  • ಸುಭಾಷ್‌ ಚಂದ್ರ

  • ಶಿವಕುಮಾರ್

13 Feb, 2018
ಯೋಗಿತಾ ಆರ್‌.ಜೆ.

ಬೆಂಗಳೂರು: ಕೆರೆಗಳ ನಗರ ಎಂದು ಕರೆಸಿಕೊಳ್ಳುತ್ತಿದ್ದ ಸಿಲಿಕಾನ್‌ ಸಿಟಿಯ ಜಲಮೂಲಗಳೆಲ್ಲ ಕಲುಷಿತಗೊಂಡಿದ್ದು, ಕೆಲವೇ ವರ್ಷಗಳಲ್ಲಿ ನೀರಿನ ದಾಹದಿಂದ ತತ್ತರಿಸಲಿದೆ ಎಂದು ಜಲ ತಜ್ಞರು ವಿಶ್ಲೇಷಿಸಿದ್ದಾರೆ.

ನಗರದ ಜನ ಈಗ ಕುಡಿಯುತ್ತಿರುವ ನೀರಿನ ಗುಣಮಟ್ಟವೂ ಸರಿಯಿಲ್ಲ ಎಂಬುದು ಅವರ ಅಭಿಪ್ರಾಯ.

ನಗರದ ಹೃದಯ ಭಾಗದಲ್ಲಿರುವ ಕಾವೇರಿ ನೀರಿನ ಪೈಪ್‌ಗಳು 40–50 ವರ್ಷಗಳಷ್ಟು ಹಳೆಯವು. ಅನೇಕ ಕಡೆ ಕಾವೇರಿ ನೀರು ಹಾಗೂ ಒಳಚರಂಡಿ ನೀರಿನ ಪೈಪ್‌ಲೈನ್‌ಗಳು ಅಕ್ಕಪಕ್ಕದಲ್ಲೇ ಹಾದುಹೋಗಿವೆ. ಕೆಲವೆಡೆ ಪೈಪ್‌ ಒಡೆದು ಒಳಚರಂಡಿ ನೀರು ಕಾವೇರಿ ನೀರಿಗೆ ಸೇರುತ್ತಿದೆ.

ನಗರದ ಪ್ರಮುಖ ಕೆರೆಗಳ ನೀರಿನ ಸ್ಥಿತಿಯಂತೂ ಭಯಾನಕವಾಗಿದೆ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರದ ವರದಿಯೇ ಹೇಳುತ್ತದೆ. ನಗರದ ಕೆರೆಗಳಲ್ಲಿನ ಶೇ 85ರಷ್ಟು ನೀರನ್ನು ಕೇವಲ ಕೃಷಿ ಮತ್ತು ಕೈಗಾರಿಕೆಗಳಿಗಷ್ಟೇ ಉಪಯೋಗಿಸಬಹುದಾಗಿದೆ. ಒಂದೇ ಒಂದು ಕೆರೆಯ ನೀರು ಕುಡಿಯಲು ಅಥವಾ ಸ್ನಾನ ಮಾಡಲು ಯೋಗ್ಯವಾಗಿಲ್ಲ ಎಂಬ ಅಂಶ ವಿಶ್ವಸಂಸ್ಥೆಯ ಅಧ್ಯಯನದಲ್ಲಿದೆ. ಇದನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

ನಗರದ ಕೇಂದ್ರ ಭಾಗದ ಜನರಿಗೆ ನೀರು ಪೂರೈಕೆ ಮಾಡಲು ಜಲಮಂಡಳಿ ಹೆಣಗಾಡುತ್ತಿದೆ. ನಗರಕ್ಕೆ ಹೊಸದಾಗಿ ಸೇರ್ಪಡೆಯಾದ ನಗರಸಭೆ ಹಾಗೂ ಪುರಸಭೆಯ ಜನರಿಗೆ ‘ಲೆಕ್ಕ’ಕ್ಕಷ್ಟೇ ಕಾವೇರಿ ನೀರು ಸರಬರಾಜು ಆಗುತ್ತಿದೆ. ಬೆಂಗಳೂರು ಮಹಾನಗರ ಪ್ರದೇಶ (ಬಿಎಂಆರ್‌) ವ್ಯಾಪ್ತಿಯ ನೀರಿನ ಬೇಡಿಕೆ ಬಗ್ಗೆ ಜಲಮಂಡಳಿ ಲೆಕ್ಕಾಚಾರವನ್ನೇ ಮಾಡಿಲ್ಲ.

ಮೇರೆ ಮೀರಿ ಬೆಳೆಯುತ್ತಿದೆ ನಗರ: 2006ರವರೆಗೆ ಬೆಂಗಳೂರು ಮಹಾನಗರ ಪಾಲಿಕೆಯ (ಬಿಎಂಪಿ) ಸರಹದ್ದು 250 ಚ.ಕಿ.ಮೀ. ಆಗಿತ್ತು. 2007ರಲ್ಲಿ ಬಿಬಿಎಂಪಿ ಸೃಷ್ಟಿಯಾಯಿತು. ಇದರ ವ್ಯಾಪ್ತಿ 800 ಚ.ಕಿ.ಮೀ. ರಾಜಧಾನಿಯ ಸುತ್ತಮುತ್ತಲಿನ ಹಳ್ಳಿಗಳೆಲ್ಲ ಈಗ ಬೆಂಗಳೂರಿನ ಹೊಟ್ಟೆಯೊಳಗೆ ಸೇರಿಕೊಂಡಿವೆ.

ನಗರದ ಜನಸಂಖ್ಯೆ ಪ್ರಸ್ತುತ 1 ಕೋಟಿ ದಾಟಿದೆ. ಮುಂದಿನ 15 ವರ್ಷಗಳಲ್ಲಿ ದುಪ್ಪಟ್ಟು ಆಗಲಿದೆ. ದೆಹಲಿಯ ಈಗಿನ ಜನಸಂಖ್ಯೆ 2.4 ಕೋಟಿ. ಅಲ್ಲಿ ಶೇ 50ರಷ್ಟು ಜನರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರಿನಲ್ಲೂ ಇಂತಹ ಸ್ಥಿತಿ ನಿರ್ಮಾಣವಾಗುವುದನ್ನು ತಳ್ಳಿ ಹಾಕುವಂತಿಲ್ಲ. ನಗರದ ಜನಸಂಖ್ಯೆ 2 ಕೋಟಿ ಆಗಲಿದೆ ಎಂದು ’ಪರಿಷ್ಕೃತ ನಗರ ಮಹಾಯೋಜನೆ–2031’ ಕರಡಿನಲ್ಲಿ ಉಲ್ಲೇಖಿಸಲಾಗಿದೆ.

ನಗರಕ್ಕೆ ಪ್ರತಿನಿತ್ಯ 140 ಕೋಟಿ ಲೀಟರ್‌ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಅಂದರೆ ವರ್ಷಕ್ಕೆ 19 ಟಿಎಂಸಿ ನೀರು ನಗರದ ನೀರಿನ ದಾಹವನ್ನು ಇಂಗಿಸುತ್ತಿದೆ. 110 ಹಳ್ಳಿಗಳ ನೀರಿನ ಬವಣೆ ನೀಗಿಸಲು ಮತ್ತೆ 10 ಟಿಎಂಸಿ ನೀರು ನೀಡುವುದಾಗಿ ರಾಜ್ಯ ಸರ್ಕಾರ ವಾಗ್ದಾನ ಮಾಡಿದೆ. ಈ ನೀರು ಸಿಕ್ಕರೆ ಪ್ರತಿದಿನ 218 ಕೋಟಿ ಲೀಟರ್‌ ಸರಬರಾಜು ಆಗಲಿದೆ. ಇದರಲ್ಲಿ ಶೇ 39ರಷ್ಟು ನೀರು ಪೋಲಾಗುತ್ತಿದೆ. ಅಂದರೆ ನಗರದ ಜನರಿಗೆ 100 ಕೋಟಿ ಲೀಟರ್‌ ನೀರು ಮಾತ್ರ ದೊರೆಯುತ್ತಿದೆ ಎಂದು ಜಲಮಂಡಳಿ ವರದಿಯೇ ತಿಳಿಸುತ್ತದೆ.

ರಾಷ್ಟ್ರೀಯ ಮಾನದಂಡದ ಪ್ರಕಾರ ಮಹಾನಗರದ ಪ್ರತಿ ವ್ಯಕ್ತಿಗೆ ನಿತ್ಯ 150 ಲೀಟರ್‌ ಸಿಗಬೇಕು. ಕೊಳೆಗೇರಿ ನಿವಾಸಿಗಳು ಹಾಗೂ ನಗರ ಬಡವರು ಶೇ 30ರಷ್ಟು ಇದ್ದಾರೆ. ಅವರಿಗೆ ರಾಷ್ಟ್ರೀಯ ಮಾನದಂಡಕ್ಕಿಂತ ತುಂಬಾ ಕಡಿಮೆ ನೀರು ಸಿಗುತ್ತಿದೆ.

ಎಲ್ಲಿಯವರೆಗೆ ಕಾವೇರಿ ನೀರು: ಕಾವೇರಿ ಕಣಿವೆಯಿಂದ ನೀರು ತರುವುದು ತುಂಬಾ ಕಷ್ಟವಾಗಿದ್ದರೂ ತಂದ ನೀರನ್ನು ಬಳಕೆ ಮಾಡಿಕೊಳ್ಳುವಲ್ಲಿ ಸ್ವಲ್ಪವೂ ಜವಾಬ್ದಾರಿ ಕಾಣುತ್ತಿಲ್ಲ. ಒಂದು ದಿನ ಕಾವೇರಿಯೂ ಬತ್ತುತ್ತಾಳೆ. ಆಗ ಎಲ್ಲಿಂದ ನೀರು ಹರಿಸುತ್ತಾರೆ? ಎಂಬ ಪ್ರಶ್ನೆಗಳು ನಾಗರಿಕರಲ್ಲಿ ಮನೆಮಾಡಿವೆ.

‘ಕಾವೇರಿಯಿಂದ 29 ಟಿಎಂಸಿ ಅಡಿ ನೀರು ಮಾತ್ರ ಪಡೆಯಲು ಸಾಧ್ಯ. ಈಗಾಗಲೇ ಅಷ್ಟು ನೀರನ್ನು ಪೂರೈಸುವ ಯೋಜನೆಗಳು ಸಿದ್ಧಗೊಂಡಿವೆ. 2031ರ ಹೊತ್ತಿಗೆ ಪ್ರತಿನಿತ್ಯ 72 ಕೋಟಿ ಲೀಟರ್‌ ನೀರಿನ ಕೊರತೆ ಉಂಟಾಗಲಿದೆ. ಜಲಮಂಡಳಿ ನಗರದ ಮೂರನೇ ಎರಡು ಭಾಗದಷ್ಟು ಪ್ರದೇಶಗಳಿಗೆ ಮಾತ್ರ ನೀರು ಪೂರೈಸುತ್ತಿದೆ. ಕುಡಿಯುವ ನೀರಿನ ಪೂರೈಕೆ ಬಗ್ಗೆ ಸಮಗ್ರ ಯೋಜನೆ ರೂಪಿಸದಿದ್ದರೆ 10 ವರ್ಷಗಳಲ್ಲಿ ನಗರದಲ್ಲಿ ಶೇ 50ರಷ್ಟು ಜನ ನಗರವನ್ನು ತೊರೆಯಲಿದ್ದಾರೆ’ ಎಂದು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಮಣಿಯನ್‌ ಎಚ್ಚರಿಸಿದರು.

ರಾಜ್ಯದ ತೆರಿಗೆ ವರಮಾನಕ್ಕೆ ಬೆಂಗಳೂರು ಶೇ 65ರಷ್ಟು ಕೊಡುಗೆ ನೀಡುತ್ತಿದೆ. ಇಲ್ಲಿಂದ ಶೇ 50ರಷ್ಟು ಜನ ಖಾಲಿಯಾದರೆ ವರಮಾನಕ್ಕೂ ಕುತ್ತು ಬರುತ್ತದೆ. ಆ ಆಯಾಮದಿಂದಲೂ ನಾವು ಚಿಂತಿಸಬೇಕು. ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿರುವುದರಿಂದ ಪರೋಕ್ಷ ಉದ್ಯೋಗಗಳು ಸಾಕಷ್ಟು ಸೃಷ್ಟಿಯಾಗಿವೆ. ಹಾಗಾಗಿ ಇಲ್ಲಿನ ಜಲಮೂಲಗಳನ್ನು ಕುಡಿಯುವ ನೀರಿನ ಆಕರಗಳಾಗಿ ಬಳಸಿಕೊಳ್ಳುವ ಬಗ್ಗೆ ಹೆಚ್ಚು ಚಿಂತಿಸಬೇಕು ಎಂದು ವಿವರಿಸಿದರು.

ಬತ್ತುತ್ತಿವೆ ಕೊಳವೆಬಾವಿಗಳು: ನಗರದಲ್ಲಿ 4 ಲಕ್ಷಕ್ಕೂ ಅಧಿಕ ಕೊಳವೆಬಾವಿಗಳು ಇವೆ ಎಂದು ಅಂದಾಜಿಸಲಾಗಿದೆ. ಕಾವೇರಿ ನೀರಿನ ಸಂಪರ್ಕ ಪಡೆದಿರುವ ಬಹುತೇಕ ಕಟ್ಟಡಗಳ ಮಾಲೀಕರು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಹೆಚ್ಚಿನವರು ಕುಡಿಯುವ ನೀರು ಬಿಟ್ಟು ಉಳಿದ ಕೆಲಸಗಳಿಗೆ ಬಳಸುವುದು ಕೊಳವೆ ಬಾವಿಗಳ ನೀರನ್ನು. ಬೇಸಿಗೆಯಲ್ಲಿ ನೀರಿನ ಬೇಡಿಕೆ ಪ್ರಮಾಣ ಶೇ 30ರಷ್ಟು ಜಾಸ್ತಿಯಾಗುತ್ತದೆ. ನಗರದ ಹೊರವಲಯ ಹಾಗೂ ಪೂರ್ವ ಭಾಗದ ಪ್ರದೇಶದಲ್ಲಿ ಕಾವೇರಿ ನೀರು ದೊರೆಯದ ಕಾರಣ ನೀರಿನ ಬವಣೆ ಹೆಚ್ಚಿದೆ. ಅಂತರ್ಜಲದ ಅತೀ ಅವಲಂಬನೆಯಿಂದಾಗಿ ಕೊಳವೆಬಾವಿಗಳು ಬತ್ತಲಾರಂಭಿಸಿವೆ ಎಂದು ನಿವೃತ್ತ ಭೂವಿಜ್ಞಾನಿ ಕೆ.ಸಿ. ಸುಭಾಸ್‌ಚಂದ್ರ ತಿಳಿಸಿದರು.

ರಾಜಧಾನಿಯಲ್ಲಿರುವ ಕೊಳವೆಬಾವಿಗಳ ಬಗ್ಗೆ ಈವರೆಗೆ ಅಧಿಕೃತ ಸಮೀಕ್ಷೆ ನಡೆದಿಲ್ಲ. ಗೃಹಬಳಕೆಗೆ ಎಷ್ಟು, ನೀರಿನ ವ್ಯಾಪಾರಕ್ಕೆ ಎಷ್ಟು ಮತ್ತು ಕೃಷಿ ಉದ್ದೇಶಕ್ಕಾಗಿ ತೋಡಲಾಗಿರುವ ಕೊಳವೆಬಾವಿಗಳೆಷ್ಟು ಎಂಬ ಖಚಿತ ಮಾಹಿತಿ ಯಾವುದೇ ಇಲಾಖೆಯಲ್ಲಿ, ಪ್ರಾಧಿಕಾರಗಳಲ್ಲಿ ಸಿಗುತ್ತಿಲ್ಲ. ಜತೆಗೆ ಕೊಳವೆಬಾವಿಗಳ ಸಮರ್ಪಕ ನಿರ್ವಹಣೆಯೂ ಆಗುತ್ತಿಲ್ಲ. ನಗರದಲ್ಲಿ ಕೊಳವೆಬಾವಿಗಳು ಕನಿಷ್ಠ 700–800 ಅಡಿಗಳಷ್ಟು ಭೂಗರ್ಭಕ್ಕೆ ಇಳಿಯುತ್ತವೆ. ಹೊರವಲಯದಲ್ಲಂತೂ ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ.

ನಗರದಲ್ಲಿ ಪ್ರಸ್ತುತ 22 ಲಕ್ಷ ಮನೆಗಳಿವೆ. ಈ ಪೈಕಿ 8 ಲಕ್ಷ ಮನೆಗಳಿಗೆ ಕಾವೇರಿ ನೀರಿನ ಸಂಪರ್ಕ ಇದೆ. ಉಳಿದ ಕಡೆಗಳಲ್ಲಿ ಟ್ಯಾಂಕರ್‌ಗಳ ಮೂಲಕ ಕೊಳವೆಬಾವಿ ನೀರನ್ನು ಪೂರೈಕೆಯಾಗುತ್ತಿದೆ. ವಿದ್ಯುತ್, ಸಾರಿಗೆ, ಆಹಾರ, ಹಾಲು ಉತ್ಪಾದನೆ ಮತ್ತು ಸೌಲಭ್ಯಗಳ ನಿರ್ವಹಣೆಗೆ ಖರ್ಚು ಮಾಡುವ ನೀರನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಪ್ರತಿದಿನ ಪ್ರತಿ ವ್ಯಕ್ತಿಗೆ 11,500 ಲೀಟರ್ ನೀರು ಖರ್ಚಾಗುತ್ತದೆ.

‘ಕೆರೆ-ಕಟ್ಟೆ, ನದಿ ನೀರು ಉಳಿತಾಯ ಖಾತೆಯಲ್ಲಿ ಇಟ್ಟ ಹಣದಂತಾದರೆ ಅಂತರ್ಜಲ ಸಂಚಿತ ಠೇವಣಿ. ಉಳಿತಾಯ ಖಾತೆ ಮತ್ತು ಸಂಚಿತ ಠೇವಣಿ ಎರಡನ್ನೂ ಖಾಲಿ ಮಾಡಿದ್ದೇವೆ. ಕಾಂಕ್ರೀಟೀಕರಣದಿಂದಾಗಿ ಮಳೆ ನೀರು ಇಂಗುತ್ತಿಲ್ಲ. ಪ್ರತಿವರ್ಷ 23 ಟಿಎಂಸಿ ಅಡಿಯಷ್ಟು ಪರಿಶುದ್ಧ ನೀರು ವ್ಯರ್ಥವಾಗಿ ಚರಂಡಿ ಪಾಲಾಗುತ್ತದೆ’ ಎಂದು ಜಲತಜ್ಞ ಪ್ರೊ.ಎ.ಆರ್. ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಜಲಮೂಲಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ, ಐದೇ ವರ್ಷದಲ್ಲಿ ನಗರ ಸತ್ತು ಹೋಗಲಿದೆ ಎಂದು ವಿಜ್ಞಾನಿ ಟಿ.ವಿ.ರಾಮಚಂದ್ರ ಎಚ್ಚರಿಸಿದ್ದಾರೆ.

‘ನೀರಿನ ಅಭಾವ ಆಗದು’
‘ಕೆರೆಗಳಿಗೆ ಕೊಳಚೆ ನೀರು ಸೇರದಂತೆ ಎಲ್ಲಾ ಕಡೆಗಳಲ್ಲೂ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದೇವೆ. 2 ಕೋಟಿ ಜನಸಂಖ್ಯೆಯಾದರೂ ನೀರು ಪೂರೈಸಲು ಶಕ್ತರಾಗಿದ್ದೇವೆ. ಕಾವೇರಿ 5ನೇ ಹಂತದ ಮೂಲಕ 110 ಹಳ್ಳಿಗಳಿಗೂ ಕಾವೇರಿ ನೀರು ಪೂರೈಸುತ್ತಿದ್ದೇವೆ’ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದ ಪ್ರಮಾಣದ ಪ್ರಕಾರ ಪ್ರತಿ ವ್ಯಕ್ತಿಗೆ ನಿತ್ಯ 150 ಲೀಟರ್ ನೀರು ಕೊಡಬೇಕು. ಆದರೆ, ತೀವ್ರವಾದ ನೀರಿನ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ. ನಮಗೆ 130 ಲೀಟರ್‌ ನೀರು ಅಷ್ಟೆ ಒದಗಿಸಲು ಸಾಧ್ಯ.

‘ನೀರು ಬಳಕೆಯ ಬಗ್ಗೆ ಜನರಲ್ಲಿಯೂ ಜಾಗೃತಿ ಮೂಡಬೇಕು. ಮಳೆ ನೀರು ಸಂಗ್ರಹವನ್ನು ಕಡ್ಡಾಯಗೊಳಿಸಿದ್ದೇವೆ. ಅಳವಡಿಸಿಕೊಳ್ಳದ 70 ಕಟ್ಟಡಗಳಿಗೆ ದಂಡ ವಿಧಿಸಿದ್ದೇವೆ’ ಎಂದರು.

ಕೇಪ್‌ ಟೌನ್‌ ಆಗಲು ಬಿಡಲ್ಲ: ಜಾವಡೇಕರ್‌
‘ಬೆಂಗಳೂರನ್ನು ಕೇಪ್ ಟೌನ್ ಆಗಲು ಬಿಡುವುದಿಲ್ಲ. ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಗ್ಗೆ ಸ್ಪಷ್ಟ ಭರವಸೆ ನೀಡಲಿದ್ದೇವೆ’ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಹೇಳಿದರು.

ಈ ನಗರದ ನೀರಿನ ಸಮಸ್ಯೆ ನೀಗಿಸಲು ನದಿ ಜೋಡಣೆ, ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಯೋಜನೆಗಳ ಕುರಿತು ಪ್ರಣಾಳಿಕೆ ಪ್ರಸ್ತಾಪಿಸಲಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಸೋಮವಾರ ತಿಳಿಸಿದರು. ಮೋದಿ ಅವರು ಸಿದ್ದರಾಮಯ್ಯ ಅವರಿಂದ ಕಲಿಯಲಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಐಟಿ ಬಿಟಿ ಸಿಟಿಯನ್ನು ಕ್ರೈಂ ಸಿಟಿಯಾಗಿ ಪರಿವರ್ತಿಸಿದ್ದನ್ನೋ ಅಥವಾ ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿಯಾಗಿ ಮಾಡಿದ್ದನ್ನು ಕಲಿಯಬೇಕೇ ಎಂದೂ ಅವರು ಪ್ರಶ್ನಿಸಿದರು.

ನೀರಿನ ದಾಹ ನೀಗಿಸಲು ಏನು ಮಾಡಬೇಕು

* ಶೇ 39ರಷ್ಟು ನೀರು ಪೂರೈಕೆ ವೇಳೆ ಸೋರಿಕೆಯಾಗುತ್ತಿದೆ. ಈ ಪ್ರಮಾಣವನ್ನು  ಶೇ 15–20ಕ್ಕೆ ಇಳಿಯಬೇಕು.
* ನಗರದ ಎಲ್ಲ ಕೊಳಚೆ ನೀರು ಸಂಸ್ಕರಣಾ ಘಟಕಗಳು ಶೇ 100 ಸಾಮರ್ಥ್ಯದಿಂದ ಕಾರ್ಯ ನಿರ್ವಹಿಸಬೇಕು.
* ಸಂಸ್ಕರಿಸಿದ ಶೇ 75ರಷ್ಟು ನೀರನ್ನು ಮರುಬಳಕೆ ಮಾಡಲು ತೃತೀಯ ಹಂತದ ಘಟಕಗಳನ್ನು ನಿರ್ಮಾಣ ಮಾಡಬೇಕು.
* ಬೆಂಗಳೂರು ಮಹಾನಗರ ಪ್ರದೇಶ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಬೇಕು.
* ರಾಜಕಾಲುವೆಗಳಲ್ಲಿ ಕೊಳಚೆ ನೀರಿನ ಹರಿವಿಗೆ ಕಡಿವಾಣ ಹಾಕಬೇಕು.
* ಮಳೆ ನೀರು ಸುಗಮವಾಗಿ ಹರಿಯುವಂತೆ ವ್ಯವಸ್ಥೆ ರೂಪಿಸಬೇಕು.
* ಕುಡಿಯುವ ನೀರಿನ ಉಳಿತಾಯಕ್ಕಾಗಿ ಮನೆಗಳಲ್ಲಿ ಎರಡು ಹಂತದ ಪೈಪ್‌ ವ್ಯವಸ್ಥೆ ಅಳವಡಿಸಬೇಕು.
* ನೀರಿನ ಮಿತ ಬಳಕೆ ಬಗ್ಗೆ ಸ್ವಯಂಸೇವಾ ಸಂಘಟನೆಗಳ ಸಹಕಾರದಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು.
* ನಗರದ ಎಲ್ಲ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಬೇಕು.

*

ಜಾರ್ಜ್‌ ಏಟು – ರಾಮಚಂದ್ರ ತಿರುಗೇಟು
* ಸಚಿವ ಕೆ.ಜೆ.ಜಾರ್ಜ್‌:
ತಜ್ಞರ ಸಮಿತಿ ಕರೆದಾಗ ಏನೂ ಅಭಿಪ್ರಾಯ ಸೂಚಿಸದ ಟಿ.ವಿ.ರಾಮಚಂದ್ರ ಅವರು ಎನ್‌ಜಿಟಿ ವಿಚಾರಣೆ ಸಮಯದಲ್ಲಿ ಮಾಧ್ಯಮಗಳ ಎದುರು ಮಾತನಾಡುತ್ತಾರೆ.

* ಟಿವಿಆರ್‌: ಎನ್‌ಜಿಟಿ ನಿರ್ದೇಶನ ನೀಡಿದ ನಂತರ ಹೆಚ್ಚೆಂದರೆ ಐದು ಬಾರಿ ಸಭೆ ಕರೆದಿರಬಹುದು. ವಿಚಾರಣೆ ನಡೆದ ನಂತರ ನ್ಯಾಯಮಂಡಳಿಗೆ ಉತ್ತರ ಹೇಳುವುದಕ್ಕಾಗಿ ಸಭೆ ಕರೆಯುತ್ತಾರೆ. ಒಂದು ವರ್ಷದ ಹಿಂದೆ ಸಮಿತಿ ನೀಡಿದ ವರದಿಯನ್ನು ಓದುವುದಕ್ಕೇ ಅವರು ಆರು ತಿಂಗಳು ತೆಗೆದುಕೊಂಡಿದ್ದಾರೆ. ಇಲ್ಲಿಯವರೆಗೂ ಅದು ಅನುಷ್ಠಾನಗೊಂಡಿಲ್ಲ. ನನ್ನ ತಾಳ್ಮೆ ಮೀರಿದ್ದರಿಂದ ಮಾಧ್ಯಮದ ಮೂಲಕ ಜನರಿಗೆ ತಿಳಿಸುತ್ತಿದ್ದೇನೆ.

* ಜಾರ್ಜ್‌: ನೀರಿಗೆ ಬೆಂಕಿ ಬೀಳುವಷ್ಟು ಬೆಳ್ಳಂದೂರು ಕೆರೆ ಕಲುಷಿತವಾಗಿಲ್ಲ. ಕಿಡಿಗೇಡಿಗಳು ಹುಲ್ಲಿಗೆ ಹಾಕುತ್ತಿದ್ದಾರೆ. ಹುಲ್ಲನ್ನು ತೆಗೆಯಲು, ತಜ್ಞರ ಸಮಿತಿಯೇ ತಡೆಯಾಗಿದೆ. ಹಾಗಾಗಿ ಕಳೆ ತೆಗೆಯುವ ಕೆಲಸವನ್ನುಸ್ಥಗಿತಗೊಳಿಸಿದೆವು.

* ಟಿವಿಆರ್‌: ಕೆರೆಯಲ್ಲಿ ಬೆಳೆಯುವ ಕಳೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ಕೆರೆಯ ಅಂಚಿನಲ್ಲಿ ಬೆಳೆದಿರುವ ಹುಲ್ಲುಗಳನ್ನು ತೆಗೆಯುವುದರಲ್ಲಿ ಅರ್ಥವಿಲ್ಲ. ಅವುಗಳಿಂದ ಯಾವುದೇ ತೊಂದರೆ ಆಗುತ್ತಿಲ್ಲ ಎನ್ನುವುದು ನನ್ನ ವಾದ.

* ಜಾರ್ಜ್‌: ಬೆಳ್ಳಂದೂರು ಕೆರೆಯಲ್ಲಿ ಮಿಥೇನ್‌ ಅಂಶ ಇದೆ ಎಂದು ಟಿವಿಆರ್‌ ಸ್ವಯಂಪ್ರೇರಿತರಾಗಿ ಪರೀಕ್ಷಿಸಿದ್ದಾರೆ. ಸರ್ಕಾರದ ಅಧಿಕೃತ ವಿಜ್ಞಾನಿ ಅವರಲ್ಲ.

* ಟಿವಿಆರ್‌: ವಿಜ್ಞಾನಿ ಹೇಳಿದ ಸಲಹೆಗಳನ್ನು ತೆಗೆದುಕೊಂಡು ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಬದಲು ಹೀಗೆ ಆರೋಪಗಳನ್ನು ಮಾಡುತ್ತಿದ್ದರೆ, ನಗರದ ಪರಿಸ್ಥಿತಿ ಹೀಗೆಯೇ ಮುಂದುವರಿಯುತ್ತದೆ.

*


Read More

Comments
ಮುಖಪುಟ

ಸಾರ್ವಜನಿಕವಾಗಿ ಸುಳ್ಳು ಹೇಳಿದ ಶಾ

‘ಕಾಂಗ್ರೆಸ್ ಶಾಸಕ ಎನ್‌.ಎ.ಹ್ಯಾರಿಸ್‌ ಮಗ ಮೊಹಮದ್‌ ನಲಪಾಡ್‌ನಿಂದ ಹಲ್ಲೆಗೊಳಗಾಗಿರುವ ವಿದ್ವತ್‌ ನಮ್ಮ ಕಾರ್ಯಕರ್ತ’ ಎಂದು ಮಂಗಳವಾರ ಮಧ್ಯಾಹ್ನ ಬಿ.ಸಿ.ರೋಡ್‌ನಲ್ಲಿ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಸಂಜೆಯ ವೇಳೆಗೆ ಸುರತ್ಕಲ್‌ನಲ್ಲಿ ಅದನ್ನು ಹಿಂಪಡೆದು ಉದ್ದೇಶಪೂರ್ವಕ ವಾಗಿ ಸುಳ್ಳು ಹೇಳಿರುವುದಾಗಿ ಸ್ಪಷ್ಟನೆ ನೀಡಿದರು.

ಅಧಿಕ ಶುಲ್ಕ ವಸೂಲಿ: ಖಾಸಗಿ ಆಸ್ಪತ್ರೆಗಳ ಹಗಲು ದರೋಡೆ

ಔಷಧ, ವೈದ್ಯಕೀಯ ಸಲಕರಣೆಗಳಿಗಾಗಿ ಅಸಹಾಯಕ ರೋಗಿಗಳಿಂದ ಶೇ 1,192 ರಷ್ಟು ಹೆಚ್ಚಿಗೆ ಹಣವನ್ನು ಖಾಸಗಿ ಆಸ್ಪತ್ರೆಗಳು ಲೂಟಿ ಮಾಡಿವೆ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (ಎನ್‌ಪಿಪಿಎ) ವರದಿ ಹೇಳಿದೆ.

ಮುಖ್ಯ ಕಾರ್ಯದರ್ಶಿ ಮೇಲೆ ಎಎಪಿ ಶಾಸಕರ ಹಲ್ಲೆ?

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಿವಾಸದಲ್ಲಿ ಸೋಮವಾರ ರಾತ್ರಿ ಆಮ್‌ ಆದ್ಮಿ ಪಕ್ಷದ(ಎಎಪಿ) ಇಬ್ಬರು ಶಾಸಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಆರೋಪಿಸಿದ್ದಾರೆ.

ಪಾಲಿಕೆ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡನ ದರ್ಪ

ವಿವಾದಿತ ಜಮೀನಿಗೆ ಖಾತೆ ಮಾಡಿಕೊಡದ ಕಾರಣಕ್ಕೆ ಹೊರಮಾವು ಬಿಬಿಎಂಪಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿರುವ ಕಾಂಗ್ರೆಸ್‌ನ ಕೆ.ಆರ್‌.ಪುರ ಬ್ಲಾಕ್‌ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ದಾಖಲೆಗಳ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲು ಯತ್ನಿಸಿದ್ದಾರೆ.

ಸಂಗತ

ಮಾರುತ್ತರ ನೀಡಲು ಸಾಧ್ಯವೇ?

ನುಡಿಯ ಬಗೆಗೆ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ನೀಡುವ ಮೊದಲು ತಾವು ಪ್ರತಿನಿಧಿಸುವ ಕ್ಷೇತ್ರವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ತಮಗೆ ಮತ ನೀಡಿದ ಜನರು ಬಳಸುತ್ತಿರುವ ವಿವಿಧ ಬಗೆಯ ಉಪಭಾಷೆಗಳ ಬಗೆಗೆ ಮಾಹಿತಿಯನ್ನಾದರೂ ಪಡೆದಿದ್ದರೆ ಚೆನ್ನಾಗಿರುತ್ತಿತ್ತು

ಅಸಾಮಾನ್ಯ ಅಸಭ್ಯರು

ಹಿಂದೊಮ್ಮೆ ರೈತರು ಹಾಗೂ ಶರಣರೂ ಎರಡೂ ಆಗಿದ್ದ ಯಡಿಯೂರಪ್ಪನವರು ನಿಮ್ಮ ಮಾತನ್ನು ಖಂಡಿತವಾಗಿ ಕೇಳಿಸಿಕೊಂಡಾರು. ಒಟ್ಟು ಕತೆಯ ನೀತಿಯೆಂದರೆ ಭಾರತೀಯ ರಾಜಕಾರಣವನ್ನು ಯುಬಿ ಸಿಟಿ ಬಾರುಗಳಿಂದ ಕೆಳಗಿಳಿಸಿ ತರಬೇಕಾದ ಜರೂರು ತುಂಬ ಇದೆ!

ಅರಣ್ಯ ಪರಿಸ್ಥಿತಿ ವರದಿ ಮತ್ತು ನೈಜ ಸ್ಥಿತಿ

ಅರಣ್ಯ ಪ್ರದೇಶ ಹೆಚ್ಚಳದ ಹಿಂದಿನ ಹಾಗೂ ಸಮಾಜೋ-–ಆರ್ಥಿಕ ಆಯಾಮಗಳು ಮತ್ತು ಇಲಾಖೆಯ ಆಡಳಿತಾತ್ಮಕ ಜವಾಬ್ದಾರಿಯನ್ನು ವರದಿ ಚರ್ಚಿಸುವುದಿಲ್ಲ

ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟು–ಪರಿಹಾರ

ಭಾರತಕ್ಕೆ ಉಳಿದಿರುವ ದಾರಿಯೆಂದರೆ, ವಿಶ್ವಸಂಸ್ಥೆ ಮತ್ತು ಅಮೆರಿಕದ ಜೊತೆಗೂಡಿ ರಾಜತಾಂತ್ರಿಕ ಮಾರ್ಗದ ಮೂಲಕ ಮಾಲ್ಡೀವ್ಸ್‌ ಬಿಕ್ಕಟ್ಟನ್ನು ಪರಿಹರಿಸಲು ಶ್ರಮಿಸುವುದು.

ವಾಣಿಜ್ಯ

‘ಟಿಟಿಕೆ ಪ್ರೆಸ್ಟೀಜ್’ ಯಶೋಗಾಥೆ

ಟಿಟಿಕೆ ಗ್ರೂ‍ಪ್‌ನ ಅಂಗಸಂಸ್ಥೆಯಾಗಿರುವ ‘ಟಿಟಿಕೆ ಪ್ರೆಸ್ಟೀಜ್‌’, ಬರೀ ಪ್ರೆಷರ್‌ ಕುಕ್ಕರ್‌ ತಯಾರಿಕೆ ಸಂಸ್ಥೆ ಎನ್ನುವ ಗ್ರಾಹಕರ ನಂಬಿಕೆ ಬದಲಿಸಲು ಸಾಕಷ್ಟು ಶ್ರಮಪಟ್ಟಿದೆ. ಪ್ರೆಷರ್‌ ಕುಕ್ಕರ್‌ನಿಂದ ಹಿಡಿದು ವೈವಿಧ್ಯಮಯ ಉತ್ಪನ್ನಗಳ ಮೂಲಕ ಗ್ರಾಹಕರ ಮನ ಗೆದ್ದಿದೆ.

ಗುಂಪು ವಿಮೆ: ಜತೆಗಿರಲಿ ಇನ್ನೊಂದು ವಿಮೆ

ಕಾರ್ಪೊರೇಟ್‌ ಗುಂಪು ಆರೋಗ್ಯ ವಿಮೆ ಖಂಡಿತವಾಗಿಯೂ ಒಳ್ಳೆಯ ಉಪಕ್ರಮ.  ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳನ್ನು ನಿಭಾಯಿಸಲು  ಗುಂಪು ವಿಮೆಯ ಫಲಾನುಭವಿಗಳು  ಪ್ರತ್ಯೇಕ ಸ್ವತಂತ್ರ ವಿಮೆ ಮಾಡಿಸುವುದರಿಂದ ದೊರೆಯುವ ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ.

‘ಎಸ್‍ಎಂಇ’ಗಳ ಡಿಜಿಟಲೀಕರಣಕ್ಕೆ ಸೂಕ್ತ ಸಮಯ

ತಂತ್ರಜ್ಞಾನ ಸ್ಟಾರ್ಟ್‌ಅಪ್‍ಗಳ ಚಿಗುರೊಡೆಯುವಿಕೆ ಹಾಗೂ ಡಿಜಿಟಲ್ ಪಾವತಿಯ ಅಳವಡಿಕೆ ವಿಷಯದಲ್ಲಿ ದಕ್ಷಿಣ ಭಾರತ  ಮುಂಚೂಣಿಯಲ್ಲಿದೆ. ತಂತ್ರಜ್ಞಾನದ ಬೆಂಬಲದಿಂದ  ಇಲ್ಲಿಯ ಹಲವು ಉದ್ಯಮಗಳು  ತಮ್ಮ ವ್ಯವಹಾರವನ್ನು ವಿಸ್ತರಿಸಿವೆ.

ಹಣಕಾಸು ಯೋಜನೆ ಮೇಲೆ ಬಜೆಟ್‌ ಪರಿಣಾಮ

ಕೇಂದ್ರ ಸರ್ಕಾರದ ಬಜೆಟ್‌ ನಿಮ್ಮ ಹಣಕಾಸಿನ ಯೋಜನೆಗಳನ್ನು ಬದಲಾಯಿಸುತ್ತದೆಯೇ ಎನ್ನುವ ಅನುಮಾನಗಳಿಗೆ ಸಂಬಂಧಿಸಿದಂತೆ ವೈಭವ್‌ ಅಗರ್‌ವಾಲ್‌ ವಿವರಗಳನ್ನು ನೀಡಿದ್ದಾರೆ.

ತಂತ್ರಜ್ಞಾನ

ವಾಟ್ಸ್ ಆ್ಯಪ್‌ನಲ್ಲಿ ಹೀಗೂ ಇವೆ ಸುಲಭ ಉಪಾಯಗಳು

ವಾಟ್ಸ್‌ಆ್ಯಪ್‌ನಲ್ಲಿ ಫೋಟೊ ಕಳಿಸಿದರೆ ರೆಸೊಲ್ಯೂಷನ್ ಹೊರಟು ಹೋಗುತ್ತದೆ ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ರೆಸೊಲ್ಯೂಷನ್ ಕಡಿಮೆಯಾಗದಂತೆ ಫೋಟೊಗಳನ್ನು ವಾಟ್ಸ್ ಆ್ಯಪ್ ನಲ್ಲಿಯೂ ಕಳುಹಿಸಬಹುದು.

ಮಾತೇ ಮಂತ್ರವಾದಾಗ!

ನಿತ್ಯ ಬಳಸುವ ಸಾಧನಗಳು ಮತ್ತು ಉಪಕರಣಗಳ ಜತೆ ಮಾತನಾಡಿಸುವಷ್ಟು ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಇಷ್ಟು, ದಿನ ಬಳಸುತ್ತಿದ್ದ ಟೆಕ್ಸ್ಟ್... ಕಮಾಂಡ್‌... ಟಚ್‌ಸ್ಕ್ರೀನ್ ತಂತ್ರಜ್ಞಾನಗಳನ್ನೂ ಮೀರಿ ಈಗ ಮಾತುಗಳೇ ಇನ್‌ಪುಟ್ಸ್‌ ಆಗಿ ಬದಲಾಗಿವೆ.

ಫೇಕ್‍ ನ್ಯೂಸ್ ಬಗ್ಗೆ ಎಚ್ಚರವಿರಲಿ

ಸುಳ್ಳು ಸುದ್ದಿಗಳು ಹೆಚ್ಚಾಗಿ ಆಕರ್ಷಕ ಶೀರ್ಷಿಕೆಗಳನ್ನು ಹೊಂದಿರುತ್ತವೆ. ಈ ಸುದ್ದಿಗಳ ಶೀರ್ಷಿಕೆಗಳು ನೋಡಿದ ಕೂಡಲೇ ಓದುಗರಲ್ಲಿ ಕುತೂಹಲ ಹುಟ್ಟಿಸುವಂತಿದ್ದು, ಒಳಗಿರುವ ಸುದ್ದಿಯಲ್ಲಿ ಶೀರ್ಷಿಕೆಯಲ್ಲಿ ಹೇಳಿದಂತೆ ಇರುವ ವಿಷಯಗಳು ಇರುವುದಿಲ್ಲ.

ಕಣ್ಣೀರಿನಿಂದ ಮಧುಮೇಹ ನಿಯಂತ್ರಣ?

ದೇಹದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುವುದಕ್ಕಾಗಿ, ಇನ್ಸುಲಿನ್ ಚುಚ್ಚು ಮದ್ದು ಬಳಸುವುದು ಅನಿವಾರ್ಯವಾಗಿರುತ್ತದೆ.