,

ಈ ಕ್ಷಣದ ಸ್ತ್ರೀ ಝಲಕುಗಳು

8 Mar, 2018
ಶೈಲಜಾ ಹೂಗಾರ

ಅಲ್ಲಿನ ಚಲನಚಿತ್ರಗಳಲ್ಲಿ ಹೆಣ್ಣಿನ ಚಿತ್ರಣ ಭಾರತದ ಮಟ್ಟಿಗೆ ಹೊಸತಾದ ಅನುಭವವೇ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಣ್ಣೆದುರು ತೆರೆದಿಟ್ಟ ದೃಶ್ಯಸರಣಿ ಅದೆಷ್ಟು ವೈವಿಧ್ಯಮಯ! ಹೆಣ್ಣುಮಕ್ಕಳು ಸ್ವಾತಂತ್ರ್ಯ ಇಲ್ಲದೆ ಅನುಭವಿಸುವ ಹಿಂಸೆಗಳು ನಮಗೇನು ಹೊಸದಲ್ಲ. ಆದರೆ ಸ್ವಾತಂತ್ರ್ಯದ ಹೆಸರಿನಲ್ಲಿ ಹೆಣ್ಣುಮಕ್ಕಳು ಪಡುವ ಬವಣೆಗಳೂ ಅಲ್ಲಿದ್ದವು.
ಹೆಣ್ಣಿನ ಸ್ವಾತಂತ್ರ್ಯ ಎಂದರೇನು? ಹೆಣ್ಣು ಎನ್ನುವುದು ದೇಹವೆ? ಭಾವವೆ? ಮನಸೇ ಅಥವಾ ಕೇವಲ ಹೆರುವ ಸಾಮರ್ಥ್ಯವೆ? ಇದೊಂದು ನಿಲ್ಲದ ಅನ್ವೇಷಣೆ. ಸ್ತ್ರೀ ಸಂವೇದನೆಯ ದೃಷ್ಟಿಕೋನಗಳ ಚಿತ್ರಣಗಳಲ್ಲಿ ಹತ್ತಿಕ್ಕಲ್ಪಟ್ಟ ಆಕೆಯ ವ್ಯಕ್ತಿತ್ವದ ಪದರಗಳು, ಅಭಿವ್ಯಕ್ತಿಯ ಪಲಕುಗಳು ಈಗ ಸಮಕಾಲೀನ ಸಿನಿಮಾಗಳ ಅಲೆಯಲ್ಲಿ ಚರ್ಚೆಗೆ ಮುಕ್ತವಾಗುತ್ತಿವೆ.
ನಾವು ಬೆಳೆದ ಪರಿಸರದ ಹಿನ್ನೆಲೆಯಲ್ಲಿ ಮತ್ತು ಇಂದಿನ ಸಾಮಾಜಿಕ ಬದಲಾವಣೆಯ ಕಾಲದಲ್ಲಿಯೂ ಹೀಗೆ ಬಿಚ್ಚಿಕೊಂಡ ಕಥಾಹಂದರಗಳನ್ನು ಕಂಡು ಬೆಚ್ಚಿಬೀಳುವ ಸರದಿ ನಮ್ಮದು. ಬಹುಶಃ ಬರೀ ಇದು ತಪ್ಪು– ಇದು ಸರಿ ಎಂಬ ಎರಡೇ ಭಾಗಗಳಲ್ಲಿ ಹಂಚಿಹೋದ ನಮ್ಮ ಜೀವನ ಮೌಲ್ಯಗಳ ಅರಿವಿನಲ್ಲಿ ಇದನ್ನು ಕಂಡು ಅರಿಯಲು ಹೋದ ಕಾರಣಕ್ಕೋ ಏನೋ ಕೆಲವು ಪಾತ್ರಗಳು ಅರೆ ಹೀಗೂ ಇರಲು ಸಾಧ್ಯವೆ ಎಂದೆಲ್ಲ ಯೋಚನೆಗೆ ದೂಡಿದ್ದವು.
ಸಿನಿಮಾ ಎನ್ನುವುದು ಕಣ್ಣೆದುರಿನ ವಾಸ್ತವ ಮತ್ತು ಕಲ್ಪನೆಗಳ ಮಿಶ್ರಣ ಮಾಯೆ ಎಂದುಕೊಂಡಿದ್ದ ನಮಗೆ ಆ ವಾಸ್ತವಕ್ಕೂ ಹಲವು ಮುಖಗಳಿವೆ ಎನ್ನುವುದನ್ನು ತೋರಿಸಿದ ಪಾತ್ರಗಳವು. ಒಂದೊಂದು ಸಿನಿಮಾ ಕಟ್ಟಿಕೊಡುವ ಅನುಭವವೂ ಅನನ್ಯ.

ಏಪ್ರಿಲ್ಸ್‌ ಡಾಟರ್:
ಮೆಕ್ಸಿಕೊದ ಸಿನಿಮಾ ‘ಏಪ್ರಿಲ್ಸ್‌ ಡಾಟರ್’ನ ಕಥಾನಾಯಕಿ ಏಪ್ರಿಲ್‌ ಎಂಬ ಮಹಿಳೆಯ 17ರ ಹರಯದ ಮಗಳು ವಲೇರಿಯಾ ಏಳು ತಿಂಗಳ ಗರ್ಭಿಣಿ. ತನ್ನ ಬಾಯ್‌ಫ್ರೆಂಡ್‌ ಮತೆಯೊ ಜೊತೆ ಸಂಸಾರ ಹೂಡುವ ಕನಸು ಕಂಡವಳು. ಹೆರಿಗೆಯ ನಂತರ ತಾಯಿಯ ವರ್ತನೆ, ಅವಳು ನಿಧಾನವಾಗಿ ಎಲ್ಲವನ್ನೂ ತನ್ನ ಹತೋಟಿಗೆ ತೆಗೆದುಕೊಳ್ಳುವ ಬಗೆ ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನೂ ಬಿಚ್ಚಿಟ್ಟ ಪರಿ ಅಬ್ಬಾ!
ಮಗುವಿನ ಆರೈಕೆ, ಪೋಷಣೆಗೆ ಆರ್ಥಿಕವಾಗಿ ಕೂಡ ಬೆಂಬಲವಾಗಿ ನಿಲ್ಲುವ ಏಪ್ರಿಲ್‌, ಕಾನೂನುಪ್ರಕಾರ ಇನ್ನೂ ತಾಯ್ತನ ನಿಭಾಯಿಸಲು ಅಸಮರ್ಥಳಾದ ವಲೇರಿಯಾಳಿಂದ ಮಗುವನ್ನು ದತ್ತು ನೀಡುವಂತೆ ಅನಿವಾರ್ಯತೆ ಸೃಷ್ಟಿಸುತ್ತಾಳೆ. ಮಗುವನ್ನು ತಾಯಿಯಿಂದ ಬೇರ್ಪಡಿಸಿ ಅವಳಿಂದ ಮುಚ್ಚಿಟ್ಟು ಬೇರೆಲ್ಲೊ ಪೋಷಿಸಲು ಅನುವುಮಾಡಿಕೊಟ್ಟಿರುತ್ತಾಳೆ. ಇದನ್ನು ಸಹಿಸದೆ ಅಸಹಾಯಕಳಾಗಿ ಕೂಗಾಡಿದ ಮಗಳನ್ನು ತೊರೆದು ಇದ್ದಕ್ಕಿದ್ದಂತೆ ನಗರಕ್ಕೆ ಹೊರಟುಬಿಡುತ್ತಾಳೆ. ಅಲ್ಲೊಂದು ವಿಚಿತ್ರ ತಿರುವು. ಸಹಜವಾದ ತಂದೆಯ ಮಮಕಾರವನ್ನು ಅಸ್ತ್ರವಾಗಿ ಬಳಸಿ ಮಗು ತನ್ನ ಬಳಿಯೇ ಇದ್ದು, ತಂದೆಯೂ ಜೊತೆಗೇ ಇರಬಹುದು ಎಂಬ ಆಯ್ಕೆಯನ್ನು ಅವನ ಎದುರಿಗಿಡುತ್ತಾಳೆ. ಒಪ್ಪಿದ ಮತೆಯೊ ಖುಷಿಯಾಗಿ ಮಗುವಿನ ಸಾಮೀಪ್ಯ ಅನುಭವಿಸುತ್ತಿರುವಾಗಲೇ ಅವನ ಬೇಕು ಬೇಡಗಳನ್ನೂ ಪರಿಗಣಿಸುತ್ತ ಅವನ ವಿಶ್ವಾಸ ಗಳಿಸುತ್ತಾಳೆ. ಪ್ರಬುದ್ಧ, ಚಟುವಟಿಕೆಯ ಸುಂದರ ಮಹಿಳೆ ಈಗ ಲೈಂಗಿಕವಾಗಿಯೂ ಅವನ ಸಂಗದಲ್ಲಿ!
ಇತ್ತ ಮಗುವಿಲ್ಲದೆ ಖಿನ್ನಳಾದ ವಲೇರಿಯಾಗೆ ಇನ್ನೊಂದು ಆಘಾತ ತರುವ ವಿಷಯ ಆಕೆ ವಾಸವಿರುವ ಸಮುದ್ರ ತೀರದ ಮನೆ ಮಾರಾಟಕ್ಕೆ ಇರುವುದು. ಪತ್ತೆಯೇ ಇಲ್ಲದೆ ಹೋದ ತಾಯಿಯನ್ನು ಕಡೆಗೂ ನಗರಕ್ಕೆ ಹೋಗಿ ಹುಡುಕಿದಾಗ ತನ್ನ ಬಾಯ್‌ಫ್ರೆಂಡ್ ತಾಯಿಯ ಜೊತೆ ಇದರಲ್ಲಿ ಭಾಗಿಯಾಗಿರುವುದು ಇನ್ನೊಂದು ಆಘಾತ ನೀಡುತ್ತದೆ. ಗಾಬರಿಯಲ್ಲಿ ಓಡಿಹೋಗುವ ಭರದಲ್ಲಿ ತಾಯಿ ಮಗುವನ್ನು ಎಲ್ಲೊ ಬಿಟ್ಟು ಹೋಗಿರುತ್ತಾಳೆ. ಕಾನೂನು ಪ್ರಕಾರ ತನ್ನ ಬಾಯ್‌ಫ್ರೆಂಡ್‌ ಜೊತೆ ಇದ್ದರೆ ಮಗುವನ್ನು ತನ್ನ ಸುಪರ್ದಿಗೆ ಪಡೆಯಬಹುದೆಂದು ಹಾಗೇ ಮಾಡುತ್ತಾಳೆ. ತನ್ನ ಬಾಯ್‌ಫ್ರೆಂಡ್‌ ಜೊತೆ ರೈಲು ಟಿಕೆಟ್‌ ಕೌಂಟರಿನ ಸರದಿಯಲ್ಲಿ ನಿಂತಾಗ ಈಗ ಬರುವೆ ಎಂದು ಆಕೆಯೂ ಮಗುವಿನೊಂದಿಗೆ ಓಡಿಹೋಗುವುದರೊಂದಿಗೆ ಕಥೆಯ ಮುಕ್ತಾಯ.
ತಮ್ಮ ಮಕ್ಕಳೆಡೆಗಿನ ಈ ಇಬ್ಬರು ತಾಯಂದಿರ ಸ್ಪಂದನೆ ಯಾರದು ತಪ್ಪು ಯಾರದು ಸರಿ ಎಂದು ನೋಡಹೋದರೆ ಗೊಂದಲ ಮೂಡಿಸಿಬಿಡುತ್ತದೆ. ಕೌಟುಂಬಿಕ ಚೌಕಟ್ಟಿನೊಳಗಡೆ ಇರುವ ವಾತ್ಸಲ್ಯ, ಮಮಕಾರಗಳು ನೀಡುವ ಸುಖ ಸಂತೋಷದ ಜೊತೆಗೇ ವೈಯಕ್ತಿಕ ಇಷ್ಟಾನಿಷ್ಟಗಳು ಮೇಲುಗೈ ಆದಾಗ ಕುಟುಂಬ ಎನ್ನುವ ಪರಿಕಲ್ಪನೆಯೇ ಛಿದ್ರವಾಗುವ ಚಿತ್ರಣ.

ಜಸ್ಟ್ ಲೈಕ್ ಅವರ್ ಪೇರೆಂಟ್ಸ್:
ಬ್ರೆಜಿಲ್ ಸಿನಿಮಾ 'ಜಸ್ಟ್ ಲೈಕ್ ಅವರ್ ಪೇರೆಂಟ್ಸ್'ನಲ್ಲಿ ನಾಯಕಿಗೆ ತನ್ನ 37 ನೇ ವಯಸ್ಸಿನಲ್ಲಿ ತಾಯಿ ಬಿಚ್ಚಿಟ್ಟ ಸತ್ಯ ನಾಯಕಿಯ ತಂದೆ ಬೇರೆ ಒಬ್ಬ ವ್ಯಕ್ತಿ! ಸಿಡಿಲಿನಂತೆ ಎರಗುವ ಕಹಿ ಸತ್ಯ ಅರಗಿಸಿಕೊಳ್ಳಲಾಗದೇ ‘ಅದಕ್ಕೇ ಇರಬೇಕು ಅಪ್ಪ ನಿನ್ನ ಬಿಟ್ಟದ್ದು’ ಎಂದು ಹಂಗಿಸುತ್ತಾಳೆ. ‘ಅದೊಂದು ಪರಾವಲಂಬಿ ಜಿಗಣೆ, ನಾನೇ ಅವನನ್ನು ಬಿಟ್ಟೆ’ ಎಂದು ಅಷ್ಟೇ ವೇಗವಾಗಿ ಆಕೆ ಉತ್ತರಿಸುತ್ತಾಳೆ.
'ಛಿ, ಇನ್ನೆಂದೂ ಆಕೆಯ ಮುಖ ನೋಡುವುದಿಲ್ಲ, ಫೋನಿನಲ್ಲೂ ಮಾತನಾಡುವುದಿಲ್ಲ' ಎಂದು ಉಗ್ರವಾಗಿ ತಾಯಿಯ ನಡೆಯನ್ನು ಪ್ರತಿಭಟಿಸಿದವಳಿಗೆ ತನ್ನ ಕುಟುಂಬದ ಬಗ್ಗೆ, ವೃತ್ತಿ, ಪತಿ ಮತ್ತು ಇಬ್ಬರು ಹೆಣ್ಣುಮಕ್ಕಳ ಬಗ್ಗೆ ಅತೀವ ಅಕ್ಕರೆ ಬೆರೆತ ಹೆಮ್ಮೆ. ಕೊನೆಗೆ ಆದದ್ದಾದರೂ ಏನು? ಏಕೆ ಹೀಗೆ ಮಾಡಿದೆ ಎಂದು ತಾಯಿಯನ್ನ ಕೇಳಲು ಹೋಗುತ್ತಾಳೆ. ‘ಕಾನ್ಫರೆನ್ಸ್ ಒಂದರಲ್ಲಿ ಭೇಟಿಯಾದವನಿಗೆ ಹುಟ್ಟಿದ್ದು ನೀನು’ ಎಂಬ ಮಾತಿಗೆ ‘ಅರೆ ಅದ್ಹೇಗೆ ಅಷ್ಟು ಸುಲಭವಾಗಿ ಹೇಳಿಬಿಟ್ಟೆ? ಯಾರವನು? ಅವನನ್ನೇ ಪ್ರೀತಿಸಿದ್ದರೆ ಇಲ್ಲೇಕೆ ನೀನು? ಅವನೆಲ್ಲಿ?’ ಎನ್ನುತ್ತಾಳೆ.
‘ಅವನೀಗ ಪ್ರಮುಖ ರಾಜಕೀಯ ಪಕ್ಷದ ಮುಖಂಡ, ಅವನ ಫೋನ್ ನಂಬರ್ ಕೂಡ ಬಳಿ ಇಲ್ಲ, ಇತ್ತೀಚೆಗೆ ಸಿಕ್ಕಾಗ ಅವನ ಇಮೇಜಿಗೆ ಧಕ್ಕೆಯಾಗುತ್ತದೆ ಎಂದು ದೂರವೇ ಉಳಿಯುವ ಮಾತು ಕೊಟ್ಟಿದ್ದೇನೆ’ ಎಂದುಬಿಡುತ್ತಾಳೆ ತಾಯಿ. ಇದನ್ನು ಒಪ್ಪಿಕೊಳ್ಳದ ಆಕೆ ತಾನು ತಂದೆ ಎಂದುಕೊಂಡು ಪ್ರೀತಿಯಿಂದ ಒಡನಾಡಿದವನನ್ನೇ ಹುಡುಕಿ ಹೊರಡುತ್ತಾಳೆ. ಗೊಂಬೆಯಾಡಿಸುವ ಅವನ ಜೊತೆ ಈಗ ಕಲಾವಿದೆ ಮತ್ತು ಆಕೆಯ ಹರಯದ ಮಗಳು. ಅವರಿಗೆ ಹೊರೆಯಾದ ತಂದೆಯನ್ನೂ ಅವನ ಹರಯದ ಮಗಳನ್ನೂ ತನ್ನೂರಿಗೇ ಬಂದು ಇರುವಂತೆ ಹೇಳಿ, ಕೈಲಾದ ಆರ್ಥಿಕ ಸಹಾಯ ಮಾಡಿ ಪ್ರತ್ಯೇಕೞಾಗಿ ಹೋಟೆಲೊಂದರಲ್ಲಿ ಇರಿಸಲು ಯೋಜಿಸುತ್ತಾಳೆ.
ತನ್ನ ಜೈವಿಕ ತಂದೆಯನ್ನೂ ಒಮ್ಮೆ ಕಂಡುಬಿಡಲು ಹೊರಡುತ್ತಾಳೆ. ಅವನ ಜೊತೆಗಿನ ಭೇಟಿ, ಮಾತು ಯಾವುದೂ ಅವಳಿಗೆ ಆಪ್ತವೆನಿಸುವುದಿಲ್ಲ. ಅವನ ಉಡುಗೊರೆಯನ್ನೂ ಧಿಕ್ಕರಿಸಿ ಬಂದುಬಿಡುತ್ತಾಳೆ.
ಇತ್ತ ನಾಯಕಿಯ ಪತಿಯೂ ತನ್ನ ವೃತ್ತಿಯ ಒಡನಾಡಿಯ ಜೊತೆ ಗುಟ್ಟಾಗಿ ಸಂಬಂಧ ಬೆಳೆಸಿರುವುದು ತಿಳಿಯುತ್ತದೆ. ಕೇಳಿದರೆ ಅವನು ಒಪ್ಪದೇ ‘ನೀ ನನ್ನ ಜೊತೆ ಆತ್ಮೀಯವಾಗಿದ್ದು ಎಷ್ಟು ಸಮಯವಾಯಿತು, ದೈಹಿಕ ಸಂಪರ್ಕ ಇಲ್ಲದೇ ಮದುವೆ ಉಳಿಯುತ್ತದೆಯೆ?’ ಎಂದೆಲ್ಲ ವಾದ ಮಾಡುತ್ತಾನೆ. ಸರಿ, ಮದುವೆಯ ಬಂಧ ಉಳಿಯಬೇಕು ಎಂದು ಈಕೆಯ ಪ್ರಯತ್ನ. ರಾಜಿಯಾಗಿ ಇಬ್ಬರೂ ಅನ್ಯೋನ್ಯವಾಗಿ ಇರುವ ಸಮಯ ನಾಯಕಿ ನಿರಾಳ. ಈ ಮಧ್ಯೆ ಕ್ಯಾನ್ಸರ್ ಕೊನೆಯ ಹಂತದಲ್ಲಿರುವ ತಾಯಿಯ ಕೊನೆಯಾಸೆಗಳನ್ನೆಲ್ಲ ಪೂರೈಸುವಷ್ಟು ಸಹನೆ.
ಹೀಗೇ ಒಂದು ದಿನ ತಂದೆಯೊಡನೆ ಇರಲು ಬಂದ ಹರಯದ ಮಗಳು ನಾಯಕಿಯ ಮನೆಗೇ ಬಂದು ಇರುವಂತಾಗುತ್ತದೆ. ಒಂದು ಬಾರಿ ಆಕೆಯ ಸ್ನೇಹಿತೆಯೊಂದಿಗೆ ಮನೆಯಲ್ಲೇ ಅತ್ಯಂತ ಆತ್ಮೀಯ ಭಂಗಿಯಲ್ಲಿರುವುದನ್ನು ಕಂಡು ಇವಳು ಸಿಡಿಮಿಡಿ.
ಮಾತಿಗೆ ಮಾತು ಬೆಳೆದಾಗ ಹೀಗೆ ಕುಟುಂಬಸ್ಥರ ಮನೆಯಲ್ಲಿ ಇದೆಲ್ಲ ಸರಿಬರುವುದಿಲ್ಲ ಎಂದು ನಾಯಕಿ. ‘ಅರೆ ಏನು ಕುಟುಂಬ ಕುಟುಂಬ ಅಂತ ನೀನೊಬ್ಬಳೇ ಬಡಿದಾಡುತ್ತೀ, ಅದೆಲ್ಲ ಏನೂ ಇಲ್ಲ. ಅದೊಂದು ಚೌಕಟ್ಟೇ ಅಲ್ಲ. ಸುಮ್ಮನೆ ನೀವೆಲ್ಲ ಕುಟುಂಬ ಉಳಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಒಬ್ಬರಿಗೊಬ್ಬರು ಹುಸಿ ಸೋಗಿನಲ್ಲಿ ಇದ್ದೀರಿ. ಮನುಷ್ಯ ಮೂಲತಃ ಬಹುಸಾಂಗತ್ಯ ಬಯಸುವ ಜೀವಿ ಅಂತೆಲ್ಲ ಮ್ಯಾಗಜಿನ್ ಒಂದರಲ್ಲಿ ಮಾನವ ಶಾಸ್ತ್ರಜ್ಞ ಬರೆದ ಲೇಖನ ಓದಲು ಹೇಳುತ್ತಾಳೆ. ಓದಿದ ಇವಳಿಗೂ ಇರಬಹುದೇನೊ ಎನಿಸತೊಡಗುತ್ತದೆ.
ಈ ನಡುವೆ ಪತಿಯೂ ಬೇರೆಡೆ ಆಕರ್ಷಿತನಾಗಿರುವುದು ದೃಢವಾಗುತ್ತದೆ.
ಈಕೆಯೂ ಅಕಸ್ಮಾತ್ ಆಗಿ ಕೆಲಸದ ನಿಮಿತ್ತ ಪರವೂರಿಗೆ ಹೋದಾಗ ತನ್ನ ಮಕ್ಕಳ ಸಹಪಾಠಿಯ ತಂದೆಯೊಡನೆ ದೈಹಿಕ ಸಂಪರ್ಕ ಸಾಧ್ಯವಾಗುತ್ತದೆ.
ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ತನ್ನ ತಾಯಿ ಅಂದೆಂದೋ ಮಾಡಿದ್ದು ಸಹಜ ಎನಿಸತೊಡಗುತ್ತದೆ.

ದಿ ಫೈನಲ್ ಜರ್ನಿ:
ಜರ್ಮನಿಯ ಸಿನಿಮಾ 'ದಿ ಫೈನಲ್ ಜರ್ನಿ'ಯ ನಾಯಕ 92 ವರ್ಷದ ಎಡ್ವರ್ಡ್. ಪತ್ನಿ ತೀರಿದ ಬಳಿಕ ಅಂತ್ಯಕ್ರಿಯೆ ಮುಗಿದ ನಂತರ ಉಕ್ರೇನ್ ಗೆ ಹೊರಟುಬಿಡುತ್ತಾನೆ. ಆತ ಹೋಗದಂತೆ ಮನವೊಲಿಸಲು ತೆರಳಿದ ಮೊಮ್ಮಗಳು ಅನಿವಾರ್ಯವಾಗಿ ಅವನೊಡನೆ ಪಯಣಿಸುವಂತಾಗುತ್ತದೆ.
ಎರಡನೇ ಮಹಾಯುದ್ಧದಲ್ಲಿ ಹೋರಾಟ ಮಾಡುವಾಗ ಪ್ರೀತಿಸಿದ್ದ ಸ್ವೆಟ್ಲಾನ ಸಿಗಬಹುದೇನೊ ಎಂಬ ದೂರದ ಆಸೆ ಅವನಿಗೆ. ರೈಲಿನಲ್ಲಿ ಪರಿಚಿತನಾದ ಯುವಕನೊಡನೆ ಮೊಮ್ಮಗಳ ಅನುಕೂಲದ ಸಂಬಂಧ. ಮನಸುಗಳು ಬೆರೆಯಲೂ ಎಷ್ಟೋ ಸಮಯ ಹಿಡಿಯುವ ನಿದರ್ಶನಗಳಿರುವಾಗ ಇಲ್ಲಿ ಕ್ಷಣಗಳಲ್ಲೇ ದೇಹ ಬೆಸೆದು ಅಷ್ಟೇ ವೇಗವಾಗಿ ಏನೂ ನಡೆದೇ ಇಲ್ಲ ಎನ್ನುವಂತೆ ಸಹಜವಾಗಿರುವ ಯುವಜೋಡಿ ಆಶ್ಚರ್ಯ ಮೂಡಿಸುತ್ತದೆ. ಅವರು ಎಡ್ವರ್ಡ್ ನ ಆಸೆಗಂತೂ ಒತ್ತಾಸೆಯಾಗಿ ನಿಲ್ಲುತ್ತಾರೆ. ಯುದ್ಧ ಭೂಮಿಯ ಆತಂಕದ ಪಯಣ ಮುಗಿಸಿ ಕಡೆಗೂ ಗಡಿ ತಲುಪಿದವರಿಗೆ ಸ್ವೆಟ್ಲಾನ ಸಿಗದೇ ಹೋದರೂ ಆಕೆಯೂ ಎಡ್ವರ್ಡ್ ನ ಪ್ರೀತಿ‌ ನೆನೆದೇ ಬದುಕಿಹೋಗಿರುವುದನ್ನು ಕಂಡು ಹೃದಯ ತುಂಬಿಬರುತ್ತದೆ. ಮರಳಿ ಬರುವಾಗ ಮೊಮ್ಮಗಳಿಗೆ ತಾಯಿಯೊಬ್ಬಳೇ ಜೊತೆ ಇರುವ ಸ್ಥಿತಿ. ಆದರೆ ಕ್ಷಣಿಕವೆಂದುಕೊಂಡ ಆ ಯುವಕನ ಜತೆಗಿನ ಬಂಧ ಈಗ ಅಷ್ಟೇ ಗಾಢ. ಕಡೆಗೂ ಎಷ್ಟೇ ದಿನವಾದರೂ ಕಾಯುವೆ, ಬರಲೇಬೇಕು ಎಂಬ ಭಾಷೆ ತೆಗೆದುಕೊಂಡು ಅವನಿಂದ ಬೀಳ್ಕೊಂಡು ಮರಳುತ್ತಾಳೆ.

ಲವ್ ಲೆಸ್:
ರಷ್ಯಾದ ಸಿನಿಮಾ 'ಲವ್ ಲೆಸ್' ನಾಯಕಿ ಪ್ರೀತಿ ಎಂದುಕೊಂಡು ಮೊದಲೇ ಗರ್ಭಿಣಿಯಾಗಿ ನಂತರ ಅನಿವಾರ್ಯವಾಗಿ ಮದುವೆಯಾದವಳು. ಎಂದೂ ಇಷ್ಟವಿಲ್ಲದ ಆ ಮಗು ತನಗೆ ಸ್ವಾತಂತ್ರ್ಯವಿಲ್ಲದಂತೆ ಮಾಡಿ ಬೇಡದ ಸಂಬಂಧ ನಿಭಾಯಿಸುವಂತೆ ಮಾಡಿದೆ ಎಂಬ ಸಿಟ್ಟು ಆಕೆಗೆ.
ಮಗುವಿನ ತಂದೆಯೂ ಬೇಸತ್ತು ಬೇರೊಬ್ಬಳ ಪ್ರೀತಿಯಲ್ಲಿ. ಆಕೆಯೂ ಈಗ ಇವನಿಂದಲೇ ಗರ್ಭಿಣಿಯಾಗಿ ಬೇಗ ನಾಯಕನ ಜೊತೆ ಬಾಳಲು ಹಾತೊರೆಯುತ್ತಿದ್ದಾಳೆ. ಈಕೆಯೂ ಅಷ್ಟೆ ಮಗುವಿಗಾಗಿ ಅಲ್ಲ, ಕೇವಲ ತನ್ನನ್ನೇ ಪ್ರೀತಿಸುವ, ಬೆಳೆದ ಮಗಳನ್ನು ದೂರದೂರಿಗೆ ಕಳಿಸಿ ಈಗ ಒಂಟಿಯಾಗಿ ಇರುವ ಸಿರಿವಂತ ಮಧ್ಯವಯಸ್ಕನನ್ನು ಆರಿಸಿಕೊಂಡಿದ್ದಾಳೆ. ಮಗ ಅಲ್ಯೋಷಾ ಬಗ್ಗೆ ಇಬ್ಬರಿಗೂ ಯೋಚನೆಯಿಲ್ಲ. ಇಬ್ಬರೂ ತಮ್ಮ ತಮ್ಮ ಹೊಸ ಸಂಗಾತಿಯೊಂದಿಗೆ ಇಡೀ ರಾತ್ರಿಯನ್ನೇ ರಸಮಯವಾಗಿ ಕಳೆಯುತ್ತ ಮನೆ ಕಡೆ ಸಂಪೂರ್ಣ ಅಲಕ್ಷ್ಯ ತೋರಿದ್ದಾರೆ. ಪರಸ್ಪರ ವಿಚ್ಛೇದನ ನೀಡಿ ತಮ್ಮ ತಮ್ಮ ಸಂಗಾತಿಗಳೊಡನೆ ನೆಲೆಗೊಳ್ಳುವ ಕನಸು ಕಾಣುತ್ತಿರುವವರು, ಮುಂದಿನ ಸುಂದರ ಬದುಕಿಗೆ ಕಾಯುತ್ತಿರುವವರು. ಇದ್ದ ಅಪಾರ್ಟ್ಮೆಂಟ್ ಮಾರಿ ಬೇರೆಯಾಗುವ ಯೋಜನೆ. ಆದರೆ ಮಗನ ಹೊಣೆ ಇಬ್ಬರಿಗೂ ಹೊರೆ. ತಾನು ಯಾರಿಗೂ ಬೇಡದ ಮಗು ಎಂಬ ಅರಿವಾಗಿ
ಇದ್ದಕ್ಕಿದ್ದಂತೆ ಮಗ ಕಾಣೆಯಾಗುತ್ತಾನೆ. ಹುಡುಕಲು ಮಾಡಿದ ಪ್ರಯತ್ನಗಳೆಲ್ಲ ವಿಫಲ. ಇಬ್ಬರೂ ಕುಸಿಯುತ್ತಾರೆ. ಭಾವನಾತ್ಮಕವಾಗಿ ಸೋತು ಕಡೆಗೂ ಸಮಾಧಾನದ ಆಸರೆ ಬಯಸಿ ತಮ್ಮ ತಮ್ಮ ಸಂಗಾತಿಯ ತೆಕ್ಕೆಗೇ ಮರಳುತ್ತಾರೆ.
ಬದುಕು ನಿಲ್ಲುವುದಿಲ್ಲ. ತಾವು ಬಯಸಿದಂತೆಯೇ ಸುಂದರ ಬದುಕನ್ನು ಕಟ್ಟಿಕೊಳ್ಳಲು ಹವಣಿಸುತ್ತಾರೆ. ಆದರೆ ಅತ್ಯಂತ ಸ್ವಾವಲಂಬಿ ಸ್ವತಂತ್ರ ಮನದ ಆಕೆ ಅಲ್ಲಿಯೂ ಅದೇ ಪ್ರತ್ಯೇಕ ಸ್ವತಂತ್ರ ಸ್ವಯಂಕೇಂದ್ರಿತ ಬದುಕನ್ನೇ ಅಪ್ಪಿರುತ್ತಾಳೆ.
ಅವನೂ ಅಷ್ಟೇ, ತನ್ನ ಇಷ್ಟಾನಿಷ್ಟಗಳ ಆದ್ಯತೆ ಬದಲಿಸಿಕೊಳ್ಳದೇ ಆ ಸಂಗಾತಿಯ ಕಡೆಯಿಂದಲೂ ಮೊದಲ ಪತ್ನಿಯ ತರಹದ್ದೇ ಸ್ಪಂದನೆ ಪಡೆಯತೊಡಗಿರುತ್ತಾನೆ.

ರೆಕ್ವಿಯಮ್ ಫಾರ್ ಮಿಸೆಸ್ ಜೆ:
ಸೆರ್ಬಿಯದ ಸಿನಿಮಾ 'ರೆಕ್ವಿಯಮ್ ಫಾರ್ ಮಿಸೆಸ್ ಜೆ' ಪತಿಯನ್ನು ಕಳೆದುಕೊಂಡು ಕೆಲಸವನ್ನೂ ಕಳೆದುಕೊಂಡು ಖಿನ್ನಳಾದ ಮಧ್ಯವಯಸ್ಕಳ ಕತೆ. ವಯಸ್ಸಾದ ತಾಯಿ, ಬೆಳೆದ ಮಗಳು ಮತ್ತು ಶಾಲೆಗೆ ಹೋಗುವ ಇನ್ನೊಬ್ಬ ಮಗಳೂ ಆಕೆಯಲ್ಲಿ ಬದುಕುವ ಆಸೆ ಮೂಡಿಸುವುದಿಲ್ಲ.
ಇತ್ತ ಈಕೆ ಪತಿಯ ಪುಣ್ಯತಿಥಿಯಂದು ಸಾಯುವ ಯೋಜನೆ ಮಾಡುತ್ತಿದ್ದರೆ ಅತ್ತ ಹರಯದ ಮಗಳು ತನ್ನ ಬಾಯ್ ಫ್ರೆಂಡ್ ಜೊತೆ ಇರಲೂ ಆಗದೇ ಮನೆಯ ಜವಾಬ್ದಾರಿಗೆ ಸೋತು ಸಿಡಿಮಿಡಿಗುಟ್ಟುತ್ತಾಳೆ.
ಒಮ್ಮೆ ಬಾಯ್ ಫ್ರೆಂಡಿನೊಂದಿಗೆ ಖಾಸಗಿ ಕ್ಷಣ ಕಳೆಯುವಾಗಲೇ ಬಂದ ಈ ಅಮ್ಮನ ಕಂಡು ಮುಜುಗರ. 'ಛೆ ಈ ಮನೆಯಲ್ಲಿ ನೆಮ್ಮದಿಯಾಗಿ ಏನೂ ಮಾಡುವಂತಿಲ್ಲ, ನನ್ನ ವಾರಿಗೆಯವರೆಲ್ಲ ಆರಾಮಾಗಿ ಮಜವಾಗಿ ಇದ್ದರೆ ನನಗೆ ಏಕೆ ಇಷ್ಟೆಲ್ಲ ಮನೆ ಜವಾಬ್ದಾರಿ' ಅಂತೆಲ್ಲ ಕೂಗಾಡುತ್ತಾಳೆ. ಮುಂದೊಂದು ದಿನ ಆಕೆ ಗರ್ಭಿಣಿ ಎಂದು ಸಣ್ಣ ಮಗಳೂ ಹೇಳುತ್ತಾಳೆ. ತಾನು ಆಗಲೇ ಆಂಟಿ ಆಗುವ ಖುಷಿ ಹುಡುಗಿಗೆ. ಅಕ್ಕನಿಗೆ ಹುಟ್ಟಲಿರುವ ಮಗುವಿಗೆ ಹೆಸರೊಂದನ್ನು ಕೂಡ ಆಕೆ ಯೋಚಿಸಿಟ್ಟುಕೊಂಡಿದ್ದಾಳೆ.
ಆದರೆ ಇದಾವುದೂ ಸಿನಿಮಾ ನಾಯಕಿಯನ್ನು ಆಳವಾದ ಖಿನ್ನತೆಯಿಂದ ಮೇಲಕ್ಕೆತ್ತುತ್ತಿಲ್ಲ.
ಅಂತೂ ಸಾಯುವ ಆಕೆಯ ಯತ್ನ ಫಲಿಸದೇ ಆಕೆ ಮತ್ತೆ ಜೀವನ್ಮುಖಿಯಾಗುತ್ತಾಳೆ.

ಥೆಲ್ಮಾ:
ನಾರ್ವೆಯ ಸಿನಿಮಾ 'ಥೆಲ್ಮಾ' ಸಂಪ್ರದಾಯಸ್ಥ ಧಾರ್ಮಿಕ ಕುಟುಂಬದ ಹುಡುಗಿಯೊಬ್ಬಳು ಬೇರೆ ಊರಿಗೆ ಓದಿಗೆಂದು ಹೋಗಿ ನೆಲೆಸುವ ಕತೆ. ವಯೋಸಹಜ ಕಾಮನೆಗಳು, ಕಟ್ಟಳೆಗಳ ನಡುವೆ ತಾಕಲಾಟ, ಈ ಮಧ್ಯೆ ಆರೋಗ್ಯ ಸಮಸ್ಯೆ. ಆಪ್ತವಾಗುವ ಸ್ನೇಹಿತೆ ಅಂಜಾಳಿಂದಾಗಿ ಈಕೆಗೆ ಹೊಸ ಜಗತ್ತಿನ ಮೋಜು ಮಜಗಳ ಪರಿಚಯ. ಆತ್ಮೀಯತೆ ಬೆಸೆದ ಬಂಧದಲ್ಲಿ ಇಬ್ಬರೂ ಲೈಂಗಿಕವಾಗಿ ಕೂಡ ಒಡನಾಡುತ್ತಾರೆ.
ಈಕೆಗೆ ಇರುವ ಅತಿಮಾನುಷ ಶಕ್ತಿಯ ಅರಿವಾದಾಗ ಕಡೆಗೂ ತನ್ನ ಆಯ್ಕೆ, ಸ್ವಾತಂತ್ರ್ಯವನ್ನೇ ಆದ್ಯತೆ ಮಾಡಿಕೊಳ್ಳುತ್ತಾಳೆ.

ಆನ್ ಬಾಡಿ ಅಂಡ್ ಸೋಲ್:
ಹಂಗೇರಿಯ ಸಿನಿಮಾ 'ಆನ್ ಬಾಡಿ ಅಂಡ್ ಸೋಲ್' ನಾಯಕಿ ಮರಿಯಾಗೆ ಇತರರಂತೆ ಸಹಜವಾದ ಬಯಕೆಗಳೇ ಇಲ್ಲ. ಆಕೆ ಅದಕ್ಕಾಗಿ ಥೆರಪಿಸ್ಟ್ ಬಳಿ ಚಿಕಿತ್ಸೆಗೂ ಹೋಗುತ್ತಿದ್ದಾಳೆ. ಕಸಾಯಿಖಾನೆಯೊಂದರಲ್ಲಿ ಕೆಲಸ ಮಾಡುವ ಈಕೆಗೆ ಹಿರಿಯ ಸಹೋದ್ಯೋಗಿಯೊಬ್ಬನ ಕಡೆ ಮಾತ್ರ ಆಸಕ್ತಿ ಬೆಳೆಯಲು ಕಾರಣ: ಅಕಸ್ಮಾತ್ ಆಗಿ ಒಮ್ಮೆ ಇಬ್ಬರ ಕನಸೂ ಒಂದೇ ತೆರನಾಗಿರುವುದು ಅರಿವಿಗೆ ಬಂದಾಗ.
ಅಲ್ಲಿಂದ ದಿನವೂ ಆಕೆಯ ದಿನದಲ್ಲಿ ಆಸಕ್ತಿಯ ಕ್ಷಣಗಳೆಂದರೆ ಅದು ಹಿಂದಿನ ರಾತ್ರಿ ತಮಗೇನು ಕನಸು ಬಿದ್ದಿತ್ತು ಎಂದು ಹೇಳಿಕೊಳ್ಳುವುದು.
ಕನಸಿನಲ್ಲಿ ಮೊದ ಮೊದಲು ಪುಟ್ಟ ಸರೋವರದ ಆಚೀಚೆ ಹಿಮಾವೃತ ತೀರದಲ್ಲಿ ನಿಂತ ಎರಡು ಜಿಂಕೆಗಳು ಸುಮ್ಮನೆ ನೋಡುವುದು. ಕ್ರಮೇಣ ಒಂದು ರಾತ್ರಿ ಕನಸಿನಲ್ಲಿ ಒಂದು ಜಿಂಕೆ ಇನ್ನೊಂದನ್ನು ಬೆನ್ನಟ್ಟಿ ಓಡುವುದು. ಹೆಚ್ಚೇನೂ ಮುಂದುವರಿಯದ ಕನಸಿನ ಬಗ್ಗೆ ಚರ್ಚಿಸಲೆಂದೇ ಈಕೆ ಫೋನ್ ಖರೀದಿಸಿ ಇಬ್ಬರೂ ಒಂದೇ ಸಮಯಕ್ಕೆ ಮಲಗುವುದು, ಒಮ್ಮೆಯಂತೂ ಇಬ್ಬರೂ ಒಂದೇ ಕಡೆ ಮಲಗಿದರೆ ಹೇಗೆ ಎಂದು ಯೋಚಿಸುವುದು. ಹಾಗೆ ಮಾಡಲು ಹೊರಟರೆ ಇಬ್ಬರಿಗೂ ನಿದ್ದೆ ಬಾರದೇ ಇಬ್ಬರೂ ಇನ್ನೊಬ್ಬರಿಗೆ ತಿಳಿಯದಿರಲಿ ಎಂದು ನಿದ್ದೆಯ ನಟನೆ ಮಾಡಿ ಕಡೆಗೆ ಸಾಕಾಗಿ
ಸರಿ ಸಮಯ ಕಳೆಯಲು ಏನು ಮಾಡುವುದು ಎಂದಾಗ ಆಕೆಗೆ ಹೊಳೆದದ್ದು ಕಾರ್ಡ್ ಆಡುವುದು.
ಇತ್ತ ಥೆರಪಿಸ್ಟ್ ಸಲಹೆಯಂತೆ ಈಕೆ ತನ್ನಲ್ಲಿ ಸಂವೇದನೆಯೇ ಇಲ್ಲವೆ, ಹೇಗೆ ಕಂಡುಕೊಳ್ಳುವುದು ಅಂತೆಲ್ಲ ಅವರ ಸಲಹೆ ಅನುಸರಿಸತೊಡಗಿ ಅವನನ್ನು ಬಹುವಾಗಿ ಹಚ್ಚಿಕೊಂಡದ್ದು ಅರಿವಾಗುತ್ತದೆ. ಪ್ರೀತಿ ವ್ಯಕ್ತಪಡಿಸಲಾಗದೇ ಪರಸ್ಪರಉತ್ಕಟ ಭಾವನೆ ಹೇಳಿಕೊಳ್ಳುವ ಸಂದರ್ಭ ಬಂದಾಗ ಒಂದಾಗುತ್ತಾರೆ.

ನಲು ಆನ್ ದಿ ಬಾರ್ಡರ್:
ಉರುಗ್ವೆಯ ಸಿನಿಮಾ 'ನಲು ಆನ್ ದಿ ಬಾರ್ಡರ್' ಬ್ರೆಜಿಲ್ ಗಡಿಯಲ್ಲಿರುವ ಉರುಗ್ವೆಯ ಸಣ್ಣ ಪಟ್ಟಣವೊಂದರಲ್ಲಿ ವಾಸಿಸುತ್ತಿರುವ ಹದಿನಾರು ವರ್ಷದ ಹುಡುಗಿಯ ಕತೆ. ತಾಯಿಯಿಲ್ಲ. ದೃಷ್ಟಿ ಕಳೆದುಕೊಂಡ 39 ವರ್ಷದ ಅಪ್ಪನ ಜೊತೆ ಆಕೆಯ ಬಂಧ ಗಾಢ. ಲೈಂಗಿಕ ಪ್ರಜ್ಞೆ ಅರಿವಿಗೆ ಬರುವ ಆರಂಭದಲ್ಲಿ ಅಪ್ಪನ ಸ್ಪರ್ಶ ನೀಡುವ ವಿಚಿತ್ರ ಅನುಭವ, ಅವನೆಡೆಗೆ ಕುತೂಹಲ ಬೆಳೆಸುತ್ತದೆ. ಕ್ರಮೇಣ ಸಹಜವಾದ ವರ್ತನೆಯನ್ನು ತನ್ನ ಓರಗೆಯವರ ಒಡನಾಟದಲ್ಲಿ ಮೈಗೂಡಿಸಿಕೊಳ್ಳುತ್ತಾಳೆ.

ಆನ್ ದಿ ಬೀಚ್ ಅಟ್ ನೈಟ್ ಅಲೋನ್:
ಬಾಹ್ಯ ಸೌಂದರ್ಯ ಮುಖ್ಯವಲ್ಲ ಎನ್ನುವ ನಟಿ ಯಂಗಿ ವಿವಾಹಿತನ ಜೊತೆ ಸಂಬಂಧವಿರಿಸಿಕೊಂಡ ರಿಪಬ್ಲಿಕ್ ಅಫ್ ಕೊರಿಯದ ಸಿನಿಮಾ 'ಆನ್ ದಿ ಬೀಚ್ ಅಟ್ ನೈಟ್ ಅಲೋನ್'. ತನ್ನ ಹಳೆಯ ಸಂಬಂಧಿ, ಸ್ನೇಹಿತರನ್ನು ಭೇಟಿ ಮಾಡಲು ಹೋದವಳಿಗೆ ರಾತ್ರಿಯ ಊಟದ ಮೇಜಿನ ಬಳಿ ಕುತೂಹಲ ತಣಿಸಿಕೊಳ್ಳುವ ಚರ್ಚೆ ಎದುರಾಗುತ್ತದೆ. ಸಹಜವಾಗೇ ಮಾತನಾಡುತ್ತ ನಡೆಯುವ ಸಂಭಾಷಣೆ:
'ನೀನು ವಿದೇಶದಲ್ಲಿ ಕೆಲವು ಸಮಯ ಇದ್ದು ಬಂದೆಯಂತಲ್ಲ, ಅಲ್ಲಿ ಹೇಗಿತ್ತು ಜೀವನ? ಹೇಗೆ ಸಮಯ ಕಳೆಯುತ್ತಿದ್ದೆ?'
'ಈಗಲೂ ಪ್ರೀತಿಗಾಗಿ ಕಾದುಕೊಂಡಿರುವೆಯಾ? ಯಾರೊಡನೆಯೂ ಸಂಬಂಧ ಇರಿಸಿಕೊಳ್ಳಲಿಲ್ಲವೆ?'
'ಹಾಗೇನಿಲ್ಲ ಕೆಲವರು ನನ್ನ ಸಂಪರ್ಕಕ್ಕೆ ಬಂದರು'
'ಹೌದಾ ಅವರು ಹೇಗಿರುತ್ತಾರೆ?'
'ಅವರೆಲ್ಲ ತಮ್ಮ ದೇಹದ ಬಗ್ಗೆ ಬಹಳ ಕಾಳಜಿ ವಹಿಸುವವರು'
'ಅದು' ಹೇಗಿತ್ತು ತುಂಬ ದೊಡ್ಡದಾ?' ಎಂದು ಬಿಂದಾಸ್ ಆಗಿ ನಗುತ್ತ ಕೇಳಿದವರಿಗೆ ನಗುತ್ತಲೇ ಆಕೆ 'ಹಾಗೇನಿಲ್ಲ ಅವರಲ್ಲಿಯೂ ಅವರ ಒಟ್ಟಾರೆ ದೇಹದ ಗಾತ್ರಕ್ಕೂ ಅದಕ್ಕೂ ಸಂಬಂಧ ಇರುತ್ತದೆ ಅಂತಿಲ್ಲ' ಎಂಬ ಅರ್ಥದಲ್ಲಿ ಉತ್ತರಿಸುವುದು ಎಲ್ಲರೂ ಓ...ಊ ಎನ್ನುತ್ತ ನಗುವುದು...
ಈ ಸಿನಿಮೋತ್ಸವಗಳ ಸಿನಿಮಾಗಳಲ್ಲಿ ಎಲ್ಲವೂ ಸಹಜ. ಸ್ನೇಹ, ವಾತ್ಸಲ್ಯ, ಪ್ರೀತಿಗಳಂತೆಯೇ ಸಹಜ ಲೈಂಗಿಕ ವರ್ತನೆ ಕೂಡ... ಮರೆಮಾಚುವ ಯಾವ ಪರದೆಯೂ ಇಲ್ಲ.
ಅದೇ ಆಗ ಹರಯಕ್ಕೆ ಕಾಲಿಟ್ಟ ಎಳೆ ಮನಸಿನಲ್ಲೇಳುವ ಲೈಂಗಿಕ ಬಯಕೆ ತುಂಬ ನವಿರಾಗಿ ಸೂಕ್ಷ್ಮವಾಗಿ ಬಿಂಬಿತವಾದ 'ನಲು ಆನ್ ದಿ ಬಾರ್ಡರ್' ಹಾಗೂ ಹರಯದಲ್ಲೇ ಸಲಿಂಗಕಾಮದತ್ತ ಆಕರ್ಷಿತವಾಗುವ 'ಥೆಲ್ಮಾ'ದ ನಾಯಕಿ ಕಟು ಧಾರ್ಮಿಕ ಕಟ್ಟಳೆಗಳನ್ನು ಮೀರಿದ ಪಾಪಪ್ರಜ್ಞೆಯಲ್ಲಿ ಅಂತಹ ಯೋಚನೆ ಕೂಡ ತಪ್ಪು ಎಂದು ನರಳಿದರೂ ಕಡೆಗೆ ವೈಯಕ್ತಿಕ ಸ್ವಾತಂತ್ರ್ಯದ ಎದುರು ಉಳಿದೆಲ್ಲ ಸಂಬಂಧಗಳೂ ಗೌಣ ಎಂದು ಬಿಟ್ಟು ನಡೆದುಬಿಡುವ ಸನ್ನಿವೇಶಳಿವೆ.

ಎ ಫೆಂಟಾಸ್ಟಿಕ್ ವುಮನ್:
ಸ್ಪ್ಯಾನಿಶ್ ಸಿನಿಮಾ 'ಎ ಫೆಂಟಾಸ್ಟಿಕ್ ವುಮನ್' ನಲ್ಲೂ ಲೈಂಗಿಕ ಅಲ್ಪಸಂಖ್ಯಾತೆ ನಾಯಕಿಯ ಪಾತ್ರವನ್ನು ಲೈಂಗಿಕ ಅಲ್ಪ ಸಂಖ್ಯಾತ ನಟಿಯೇ ಮಾಡಿದ್ದು; ಅದರಲ್ಲೂ ತನಗಿಂತ 20 ವರ್ಷ ದೊಡ್ಡವನಾದ ವಿವಾಹಿತನನ್ನು ಪ್ರೀತಿಸುವುದು. ಪತ್ನಿ, ಮಕ್ಕಳಿಂದ ದೂರವಾಗಿ ಒಂಟಿಯಾಗಿರುವ ಅವನ ಜೊತೆ ಇದ್ದಾಗಲೇ ಅವನು ಇದ್ದಕ್ಕಿದ್ದಂತೆ ರಾತ್ರಿ ಅನಾರೋಗ್ಯದಿಂದ ಸಾವನ್ನಪ್ಪುತ್ತಾನೆ. ಅವನ ಕುಟುಂಬ, ಸಮಾಜ ಎಲ್ಲರಿಂದ ಅವಮಾನ ಅನುಭವಿಸುವ ಆಕೆಗೆ ತನಿಖೆಯ ಮಧ್ಯೆ ವೈದ್ಯಕೀಯ ಪರೀಕ್ಷೆಯ ನೆಪದಲ್ಲಿ ಬೆತ್ತಲಾಗುವ ಹಿಂಸೆ.
ಎ ಜಂಟಲ್ ಕ್ರೀಚರ್:
ಫ್ರಾನ್ಸ್‌ ನ ಸಿನಿಮಾ 'ಎ ಜಂಟಲ್ ಕ್ರೀಚರ್' ನಲ್ಲಿ ಕೂಡ ರಷ್ಯಾ ದೇಶದ ಸೆರೆಮನೆಯಲ್ಲಿರುವ ಪತಿಯ ವಿಚಾರ ಅರಿಯಲು ಒಬ್ಬಂಟಿಯಾಗೇ ಹೊರಟಾಕೆ ಅಲ್ಲಿ ಉಳಿದುಕೊಂಡ ಅಪರಿಚಿತರ ಮನೆಯೊಂದರಲ್ಲಿ ಗುಂಪಿನಲ್ಲಿ ಮೋಜು ಮಾಡುವವರು ಬೆತ್ತಲಾಗಲು ಒತ್ತಾಯಿಸುವ ದೃಶ್ಯಗಳು...ಎಲ್ಲವೂ ಅದೆಷ್ಟು ಸಹಜವಾಗಿ ಹೆಣ್ಣು ಮಕ್ಕಳ ಸ್ಥಿತಿ, ಸ್ಥಾನಮಾನ, ತಳಮಳ, ತಲ್ಲಣಗಳನ್ನು ತೆರೆದಿಡುತ್ತವೆ!
ಹೆಚ್ಚೂ ಕಡಿಮೆ ಈ ಎಲ್ಲ ಸಿನಿಮಾಗಳಲ್ಲಿ ಮೂಲತಃ ಭಾವುಕರಾದವರು ಎಂಥ ಸಂದರ್ಭದಲ್ಲೂ ಎದೆಗುಂದದೆ ನಿರ್ವಹಿಸುವ, ಸುಂದರ ನೆಮ್ಮದಿಯ ಬದುಕಿಗೆ ಹಾತೊರೆಯುವ ಹೆಣ್ಣುಮಕ್ಕಳ ಚಿತ್ರಣ ಅದ್ಭುತ.
ಎಷ್ಟೋ ಕಡೆ ಪ್ರೇಕ್ಷಕರೇ ನಿರ್ಣಾಯಕರ ಸ್ಥಾನದಲ್ಲಿ ನಿಲ್ಲಹೋಗಿ ಇದು ಎಷ್ಟು ಸರಿ, ಹೀಗಾಗಬಾರದಿತ್ತು ಎನಿಸುವುದು ಸಾಂಪ್ರದಾಯಿಕ ಮನಸ್ಥಿತಿಗಳಲ್ಲಿ ಇರುವವರಿಗೆ ಮಾತ್ರ. ಉಳಿದಂತೆ ಅವರವರ ಜಾಗದಲ್ಲಿ ನಿಂತು ಅವರು ಹೀಗೆ ವರ್ತಿಸಿದರು ಎಂಬುದಷ್ಟೇ ಕತೆಯ ಸತ್ಯ. ಅಷ್ಟಕ್ಕೂ ಈ ಚಿತ್ರಣಗಳು ಸರಿಯೊ ತಪ್ಪೊ ನಿರ್ಣಯಿಸಲು ನಾವು ಯಾರು?

Read More

Comments
ಮುಖಪುಟ

ಕೇಂದ್ರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಕಾಂಗ್ರೆಸ್ ನೋಟಿಸ್

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಅವಕಾಶ ನೀಡುವಂತೆ ಪ್ರತಿಪಕ್ಷ ಕಾಂಗ್ರೆಸ್ ಸಹ ನೋಟಿಸ್ ನೀಡಿದೆ. ಈ ಕುರಿತು ಮನವಿ ಮಾಡಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಟ್ರಂಪ್‌ ಜತೆ ಪ್ರೀತಿಯಾಗಿತ್ತು: ಮಾಜಿ ರೂಪದರ್ಶಿ ಕರೆನ್‌ ಮ್ಯಾಕ್‌ಡೌಗಲ್‌

’ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಪ್ರೀತಿಸುತ್ತಿದ್ದೆ’ ಎಂದು ಮಾಜಿ ಪ್ಲೇಬಾಯ್‌ ರೂಪದರ್ಶಿ ಕರೆನ್‌ ಮ್ಯಾಕ್‌ಡೌಗಲ್‌ ಬಹಿರಂಗಪಡಿಸಿದ್ದಾರೆ.

‘ರಾಜರಥ’ದ ಪ್ರೀತಿಯ ಪಯಣ

ನೆಲ, ಭಾಷೆಯ ಚೌಕಟ್ಟು ಇಟ್ಟುಕೊಂಡು ಅದಕ್ಕೆ ಪ್ರೀತಿಯ ಹೂರಣ ಬೆರೆಸಿದ ಚಿತ್ರಗಳು ಹೊಸತೇನಲ್ಲ. ಒಂದಿಷ್ಟು ಹಾಸ್ಯ ಲೇಪಿಸಿ ಪ್ರೀತಿ ಮತ್ತು ಬದುಕು ಎರಡನ್ನೂ ‘ರಾಜರಥ’ದಲ್ಲಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅನೂಪ್‌ ಭಂಡಾರಿ.

‘ಪ್ರಧಾನಿ ಮೋದಿಯವರ ಕಳೆದುಹೋದ ಅಂಕಪಟ್ಟಿ ಸಿಕ್ಕಿತು!’ ರಮ್ಯಾ ಟ್ವೀಟ್

ಪ್ರಧಾನಿ ನರೇಂದ್ರ ಮೋದಿಯವರ ಕಳೆದುಹೋದ ಅಂಕ ಪಟ್ಟಿ ಸಿಕ್ಕಿದೆ ಎಂದು ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದು, ರಿ‍ಪೋರ್ಟ್ ಕಾರ್ಡ್ ಎಂಬ ಹೆಸರಿನ ಅಂಕಪಟ್ಟಿಯೊಂದನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಪ್ರಧಾನಿಗೆ ‘ಡಿ’ ಶ್ರೇಣಿ ನೀಡಲಾಗಿದ್ದು, ಪಠ್ಯೇತರ ಚಟುವಟಿಕೆ ವಿಭಾಗದಲ್ಲಿ ‘ಹಿಂಸೆ’ ಮತ್ತು ‘ಕೋಮುವಾದ’ವನ್ನು ಆಯ್ದುಕೊಂಡ ಬಗ್ಗೆ ನಮೂದಿಸಲಾಗಿದೆ. 

ಸಂಗತ

ವಚನ: ಹೊಸಧರ್ಮದ ತಳಹದಿಯಾಗಬಲ್ಲುದೇ?

ವೀರಶೈವದಿಂದ ಪ್ರತ್ಯೇಕಗೊಂಡು ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಡುತ್ತಿರುವವರ ಪರವಾಗಿ ಸಂಪುಟ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ವಚನಗಳೇ ಲಿಂಗಾಯತ ಧರ್ಮ ಪ್ರಮಾಣ ಗ್ರಂಥವೆಂದು ಸಚಿವರೊಬ್ಬರು ಹೇಳಿದ್ದಾರೆ.

ಮೌಲ್ಯ... ಜನತಂತ್ರದ ಅಂತಃಸತ್ವ

ಮತದಾನ ಕೆಳಗಿನಿಂದ ಮೇಲ್ಮುಖವಾಗಿ ಚಲಿಸುವ ಪ್ರಕ್ರಿಯೆ. ಮತದಾರರು ತಮ್ಮ ಮತಗಳನ್ನು ಬೆಂಬಲವಾಗಿ ಅಥವಾ ಪ್ರತಿರೋಧದ ಅಸ್ತ್ರಗಳಾಗಿ ಚಲಾಯಿಸುವ ಸ್ವಾಯತ್ತತೆಯನ್ನು ಪಡೆದಿರುತ್ತಾರೆ. ಈ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಅಂಬೇಡ್ಕರ್‌ ಅವರು ‘ಶಿಕ್ಷಣ, ಸಂಘಟನೆ, ಹೋರಾಟ’ ಎಂಬ ಅನುಭವದ ಅರಿವನ್ನು ಬಹುಜನರಿಗೆ ಕಾಣಿಸಿರುವುದನ್ನು ನಾವು ಮನಗಾಣಬಹುದು.

ಪ್ರಣಾಳಿಕೆಯಲ್ಲಿರಲಿ ಕಾಡಿನ ಹಿತ

ಪರಿಸರ ನಾಶದ ವಿರುದ್ಧ ಈ ಚುನಾವಣಾ ಗಳಿಗೆಯಲ್ಲಾದರೂ ಧ್ವನಿ ಎತ್ತಬೇಕಿದೆ.

ಮೈತ್ರಿ ರಾಜಕೀಯದ ಹೊಸ ಹಾದಿ

ಇದೀಗ ಹಲವು ರಾಜಕೀಯ ಪಕ್ಷಗಳ ‘ಕಾಮನಬಿಲ್ಲು ಒಕ್ಕೂಟ’ ಮಾಡಲೆತ್ನಿಸುತ್ತಿರುವ ಕಾಂಗ್ರೆಸ್, ತನ್ನ ಅಖಿಲ ಭಾರತೀಯ ಪಾರ್ಟಿಯ ಹಮ್ಮು ಬಿಟ್ಟು ಬಾಗಿದರೆ ಮಾತ್ರ ಮುಂಬರುವ ಮಹಾಚುನಾವಣೆಯಲ್ಲಿ ಹೊಸ ಹಾದಿ ಕಂಡೀತು!

ಚಂದನವನ

ನೃತ್ಯ, ನಟನೆ ಮತ್ತು ಮಾನಸಾ

ಕಲಾರಾಧಕರ ಕುಟುಂಬದಿಂದ ಬಂದ ಕೃಷ್ಣಸುಂದರಿ ಓದಿದ್ದು ಪತ್ರಿಕೋದ್ಯಮವಾದರೂ ಬದುಕು ಕಟ್ಟಿಕೊಂಡಿದ್ದು ನಟನಾ ರಂಗದಲ್ಲಿ. ಮನೆಯವರ ಬೆಂಬಲದ ನಡುವೆ ನಟನೆಯಲ್ಲಿಯೇ ಸಾಧನೆಯ ಕನಸು ಕಾಣುತ್ತಿದ್ದಾರೆ...

ಕ್ರೀಡಾಪಟು ಖಳನಟನಾದ ಕಥೆ

ಚೆಲುವರಾಜ್‌ ಅವರದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ. ರಾಷ್ಟ್ರಮಟ್ಟದ ವಾಲಿಬಾಲ್‌ ಆಟಗಾರನಾಗಿದ್ದ ಅವರು ನಟನಾ ಕ್ಷೇತ್ರ ಪ್ರವೇಶಿಸಿದ್ದು ಆಕಸ್ಮಿಕ. ಕಿರುತೆರೆಯಲ್ಲಿ ಖಳನಟನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅವರು ಪೊಲೀಸ್‌ ಅಧಿಕಾರಿಯಾಗಿ ನಟಿಸಿರುವ ‘ಸಮರ್ಥ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

‘ರಾಜರಥ’ದ ಸವಾರಿ

‘ರಾಜರಥ’ ಬಸ್‌ನ ಕಥೆ. ಕನ್ನಡದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಬಸ್‌ಗೆ ಧ್ವನಿಯಾಗಿದ್ದಾರೆ. ತೆಲುಗಿನಲ್ಲಿ ರಾ.ನಾ. ದಗ್ಗುಬಾಟಿ ಧ್ವನಿ ನೀಡಿದ್ದಾರೆ. ಇದು ಕೌಟುಂಬಿಕ ಚಿತ್ರ. ಕಾಲೇಜು ಹುಡುಗ ಮತ್ತು ಹುಡುಗಿಯ ನಡುವೆ ನಡೆಯುವ ಕಥನ’ ಎಂದು ವಿವರಿಸಿದರು ಅನೂಪ್.

‘ವರ್ತಮಾನ’ಕ್ಕೆ ಭವಿಷ್ಯದಲ್ಲಿ ನಂಬಿಕೆ!

ವರ್ತಮಾನ’ದ ಮಹತ್ವ, ಅದನ್ನು ಬದುಕಬೇಕಾದ ರೀತಿ, ಅದನ್ನು ಅರ್ಥಮಾಡಿಕೊಳ್ಳಬೇಕಾದ ಬಗೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಉಮೇಶ್ ಅಂಶಿ. ಅದರ ಹೆಸರೂ ‘ವರ್ತಮಾನ’.