ದತ್ತಾಂಶ ಸಾಗರದ ಹೊಸ ಚಂಡಮಾರುತ

13 May, 2018
ಕೇಶವ ಎಚ್. ಕೊರ್ಸೆ

ಎಪ್ಪತ್ತು- ಎಂಬತ್ತರ ದಶಕದಲ್ಲೇ ಪ್ರವರ್ಧಮಾನಕ್ಕೆ ಬಂದ ಸೂಪರ್ ಕಂಪ್ಯೂಟರ್ ತಂತ್ರಜ್ಞಾನ ಕುರಿತು ಎಲ್ಲರಿಗೂ ಗೊತ್ತು. ಸಂಶೋಧನೆ ಮತ್ತು ಅಭಿವೃದ್ಧಿಗೆ ಅವಶ್ಯವಿರುವ ಅಪಾರ ದತ್ತಾಂಶ ಸಂಗ್ರಹಣೆ, ಅವುಗಳ ವೇಗದ ವರ್ಗೀಕರಣ, ವಿಶ್ಲೇಷಣೆ ಮತ್ತು ಅದರಿಂದ ಹೊರಹೊಮ್ಮಿದ ಮಾಹಿತಿಯ ಬಳಕೆ- ಇವೆಲ್ಲ ಈ ಸೂಪರ್ ಕಂಪ್ಯೂಟರ್‌ನಿಂದ ಸಾಧ್ಯ. ಈ ಕ್ಷೇತ್ರ ಮುಂಚೂಣಿಗೆ ಬಂದಿರುವುದು ಬಹುಪಾಲು ಸರ್ಕಾರಿ ಸ್ವಾಮ್ಯದ ಸಂಶೋಧನಾ ಸಂಸ್ಥೆಗಳಲ್ಲೇ. ಭಾರತವೂ ಇದಕ್ಕೆ ಹೊರತಲ್ಲ. ಬಾಹ್ಯಾಕಾಶ, ದೂರಸಂಪರ್ಕ, ಹವಾಮಾನ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗಳಾಗಿವೆ. ಆದರೆ, ಇದು ಅಪಾರ ಆರ್ಥಿಕ ಹೂಡಿಕೆ ಮತ್ತು ಉತ್ಕೃಷ್ಟ ಮಾನವ ಸಂಪನ್ಮೂಲಗಳನ್ನು ಸತತವಾಗಿ ಬೇಡುವ ಕ್ಷೇತ್ರವಾದ್ದರಿಂದ, ಬೆಳವಣಿಗೆ ಒಂದು ಮಿತಿಯಲ್ಲಿ ಮಾತ್ರ ಸಾಗಿದೆಯೆನ್ನಬೇಕು. 

ಆದರೆ, ಕಳೆದ ದಶಕದಲ್ಲಿ ಜಾಗತಿಕವಾಗಿ ಜರುಗಿದ ದೂರಸಂಪರ್ಕ ಮತ್ತು ಅಂತರ್ಜಾಲ ಕ್ರಾಂತಿಯಿಂದಾಗಿ, ಈ ದತ್ತಾಂಶ ವಿಜ್ಞಾನಕ್ಕೆ ಬೇರೊಂದು ಬಗೆಯ ಚಲನೆ ಮತ್ತು ವೇಗವೇ ದೊರಕಿತು. ಎಲ್ಲೋ ಒಂದೆಡೆ ಭಾರಿ ಪ್ರಮಾಣದ ಮಾಹಿತಿಗಳನ್ನು ಹೊತ್ತು ಕೂರುತ್ತಿದ್ದ ’ಸರ್ವರ್’ ಬದಲಾಗಿ, ಅಂತರ್ಜಾಲಕ್ಕೆ ಜೋಡಣೆಯಾಗಿರುವ ಜಗತ್ತಿನಾದ್ಯಂತದ ಕೋಟ್ಯಂತರ ಕಂಪ್ಯೂಟರುಗಳು ಸಾಮೂಹಿಕವಾಗಿ ಅಪಾರ ಪ್ರಮಾಣದ ದತ್ತಾಂಶ ಸಂಗ್ರಹಿಸಲು (ಕ್ಲೌಡ್ ಕಂಪ್ಯೂಟಿಂಗ್) ಸಾಧ್ಯವಾಯಿತು. ಹೊಸ ಯಂತ್ರಾಂಶ ಮತ್ತು ತಂತ್ರಾಂಶಗಳ ಆವಿಷ್ಕಾರವು ಇದಕ್ಕೆ ಸೂಕ್ತ ನೆಲೆಗಟ್ಟನ್ನೂ ಒದಗಿಸಿದವು. ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತ ಸಾಗಿದ ಅಂತರ್ಜಾಲದ ವೇಗ, ಸಂಖ್ಯಾಶಾಸ್ತ್ರಾಧಾರಿತ ಮೂಲಭೂತ ಸಂಶೋಧನೆ, ಕೃತಕ ಬುದ್ಧಿಮತ್ತೆ ಅಭಿವೃದ್ಧಿ – ಇತ್ಯಾದಿಗಳೆಲ್ಲ ಜೊತೆಯಾಗಿ, ಈ ಮಾಹಿತಿ ವಿಶ್ಲೇಷಣೆ ಕ್ಷೇತ್ರ ಹೊಸ ಸ್ವರೂಪವನ್ನೇ ಪಡೆದವು. ಹೀಗೆ ರೂಪುಗೊಂಡಿದ್ದೇ ಈ ‘ಬಿಗ್-ಡೇಟಾ ವಿಶ್ಲೇಷಣೆ’. 

ಬೃಹತ್ ದತ್ತಾಂಶ ವಿಶ್ಲೇಷಣೆಯಲ್ಲಿ ಹಲವು ಹಂತ ಹಾಗೂ ಆಯಾಮಗಳಿವೆ. ಮೊದಲು, ಮಾಹಿತಿಯ ಮೂಲ ಗುರುತಿಸಿ, ಸತ್ಯಾಸತ್ಯತೆ ಪರಿಶೀಲಿಸುವುದು. ಆ ನಂತರದಲ್ಲಿ, ದತ್ತಾಂಶದ ಸಂಗ್ರಹ, ವರ್ಗಾವಣೆ, ಅವುಗಳ ಹೋಲಿಕೆ ಮತ್ತು ನಿಖರತೆ ಪರೀಕ್ಷಿಸುವುದು. ಆಮೇಲೆ, ಮಾಹಿತಿಗಳ ಪರಸ್ಪರ ಹೋಲಿಕೆ, ಸಂಬಂಧ, ಭವಿಷ್ಯದ ಚಲನಾ ಸಾಧ್ಯತೆ, ಅಂತರ್ಗತ ಸ್ವರೂಪದ ನಮೂನೆಗಳು- ಇವನ್ನೆಲ್ಲ ಅಭ್ಯಸಿಸುವುದು. ಹೀಗೆ, ಯಾವುದೇ ವಿಷಯದಲ್ಲಿ ಸಂಗ್ರಹಿಸಲಾದ ದತ್ತಾಂಶಗಳ ವ್ಯಾಪ್ತಿ, ವೈವಿಧ್ಯ, ವೇಗ, ಹಾಗೂ ನಿಖರತೆಯ ಆಧಾರದ ಮೇಲೆ ಅವುಗಳ ಮೌಲ್ಯ ನಿರ್ಧರಿಸಿ, ಹೊಸಜ್ಞಾನವನ್ನು ಹೆಣೆಯುವ ಕೌಶಲ ಇದು. ಆ ಮೂಲಕ, ಬಾಹ್ಯಾಕಾಶ ವಿಜ್ಞಾನ, ರೋಗವಿಶ್ಲೇಷಣೆ, ಹವಾಮಾನ ಶಾಸ್ತ್ರ, ಪರಿಸರ ವಿಜ್ಞಾನದಂಥ ಯಾವುದೇ ಸಮಕಾಲೀನ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಕ್ರಾಂತಿಕಾರಕ ತಂತ್ರಜ್ಞಾನ ಇದು ಎಂದು ಒಂದೂವರೆ ದಶಕದಿಂದಲೂ ವ್ಯಾಖ್ಯಾನಿಸಲಾಗುತ್ತಿದೆ. 

ಪರಿಸರ ಸಂರಕ್ಷಣಾ ಕ್ಷೇತ್ರವಂತೂ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೆ ಪರಿಣಾಮಕಾರಿಯಾದ ಹೊಸ ಶಸ್ತ್ರ ದೊರಕಿತೆಂದೇ ಭಾವಿಸಿತು. ಪರಿಸರ ವಿಜ್ಞಾನದಲ್ಲಿ ಇದರ ಬಳಕೆಯ ಕುರಿತಾಗಿ, ಈ ದಶಕದ ಆರಂಭದಲ್ಲಿ ಅಮೆರಿಕದ ಷಿಕಾಗೋದ ಇಲಿನಾಯ್ ವಿಶ್ವವಿದ್ಯಾನಿಲಯದಲ್ಲಿ ಜರುಗಿದ ಜಾಗತಿಕ ಸಮ್ಮೇಳನವೊಂದರಲ್ಲಿ ಭಾಗವಹಿಸುವ ಅವಕಾಶವೊಂದು ನನಗೆ ದೊರಕಿತ್ತು. ಈವರೆಗೂ ಸಮಸ್ಯೆಯಾಗಿದ್ದ ‘ಖಚಿತ ದತ್ತಾಂಶದ ಕೊರತೆ’ ಸಮಸ್ಯೆಯನ್ನು ಇದು ನೀಗಿಸುವುದರಿಂದ, ಪರಿಸರ ಸಂರಕ್ಷಣೆಯ ಸಮಸ್ಯೆಗಳನ್ನು ಇನ್ನು ವೇಗವಾಗಿ ಮತ್ತು ಸುಲಭವಾಗಿ ಪರಿಹರಿಸಬಹುದು ಎಂದೇ ತಜ್ಞರು ಅಂದು ಅಭಿಪ್ರಾಯಪಟ್ಟಿದ್ದರು. ಪ್ರದೇಶವೊಂದರ ತಾಪಮಾನ, ಮಳೆ, ತೇವಾಂಶ, ಮಾಲಿನ್ಯದ ಮಟ್ಟ, ಹಸಿರಿನ ಹೊದಿಕೆಯ ಪ್ರಮಾಣ, ಅರಣ್ಯದಲ್ಲಿನ ಬೆಂಕಿ ಅಥವಾ ಅತಿಕ್ರಮಣದಂಥ ಸಾಧ್ಯತೆಗಳು.. ಹೀಗೆ ಯಾವುದೇ ಮಾಹಿತಿಯನ್ನು ನಿಖರವಾಗಿ ದಿನಂಪ್ರತಿ ಉಪಗ್ರಹಗಳ ಸಹಾಯದಿಂದ ದಾಖಲಿಸಲು ಸಾಧ್ಯ ತಾನೇ? ಇವನ್ನೆಲ್ಲ ಬಿಗ್- ಡೇಟಾ ತಂತ್ರಗಳ ಮೂಲಕ ತ್ವರಿತವಾಗಿ ಗುರುತಿಸಿ, ವರ್ಗೀಕರಿಸಿ, ವಿಶ್ಲೇಷಿಸಿ, ಸಮಸ್ಯೆಯನ್ನು ಶೀಘ್ರ ಬಗೆಹರಿಸುವ ವಿಶ್ವಾಸ ಮೂಡಿತ್ತು. ನಮ್ಮ ವಿಶ್ವವಿದ್ಯಾನಿಲಯಗಳು ಈ ಬಗೆಯ ಹಾರೈಕೆಗಳುಳ್ಳ ಪಠ್ಯವನ್ನೇ ಇಂದಿಗೂ ಪಠಿಸುತ್ತಿವೆ! ಆದರೆ, ಕಳೆದೊಂದು ದಶಕದಲ್ಲಿ ಆದದ್ದೇ ಬೇರೆ! ತಂತ್ರಜ್ಞಾನವನ್ನೇನೋ ಪ್ರಯೋಗಾಲಯಗಳು ಅಭಿವೃದ್ಧಿಪಡಿಸಬಹುದು. ಆದರೆ, ಅದು ಸಮಾಜದ ಎಲ್ಲ ಸ್ತರಗಳಿಗೆ ತಲುಪಬೇಕಾದರೆ, ಕಾರ್ಯಸಾಧ್ಯವಾದ ಆರ್ಥಿಕ ಚಟುವಟಿಕೆಯಾಗಿ ಅದು ರೂಪುಗೊಳ್ಳಬೇಕು. ಅಪಾರ ಪ್ರಮಾಣದ ಹಣ ಹೂಡಿಕೆಯಾಗಬೇಕು. ಸರ್ಕಾರಿ ಕ್ಷೇತ್ರವೊಂದರಿಂದ ಮಾತ್ರ ಇದು ಸಾಧ್ಯವಾಗದ ಮಾತು. ಹಾಗಾಗಿ, ಖಾಸಗಿ ಹೂಡಿಕೆ ಅನಿವಾರ್ಯವಾಯಿತು. ಹಣ ಹೂಡಿದ ಉದ್ಯಮಗಳಿಗೆ ಬಹುಬೇಗ ಲಾಭದ ಬೆನ್ನೇರುವ ತವಕವಿರುತ್ತದೆ. ಬಾಹ್ಯಾಕಾಶ ವಿಜ್ಞಾನವೋ, ನದಿಯೊಂದರ ಮಾಲಿನ್ಯಮಟ್ಟವನ್ನು ಗಣಕೀಕರಿಸುವುದೋ, ಅರಣ್ಯ ಅತಿಕ್ರಮಣವನ್ನು ಕಾಲಾನುಕ್ರಮದಲ್ಲಿ ದಾಖಲಿಸುವುದೋ- ಇತ್ಯಾದಿ ದೀರ್ಘಕಾಲೀನ ಸಾರ್ವಜನಿಕ ಕಲ್ಯಾಣದ ಮಾಹಿತಿ ವಿಶ್ಲೇಷಣೆಯಲ್ಲಿ ತೊಡಗಿಕೊಂಡರೆ, ಹೂಡಿಕೆದಾರ ಬಳಿ ಹಣ ಕೊಟ್ಟು ಮಾಹಿತಿಕೊಳ್ಳಲು ಯಾವ ಗ್ರಾಹಕ ಬಂದಾನು? ಹಾಗೆಂದೇ, ಅವರು ಮಾರುಕಟ್ಟೆಯಲ್ಲಿ ಅತಿ ಬೇಗನೆ ಹಣ ಗಳಿಸುವ ಖಾಸಗೀ ಮಾಹಿತಿ ವಿಶ್ಲೇಷಣೆಯತ್ತ ಮುಖ ಮಾಡಿದರು!

ಬಿಗ್- ಡೇಟಾವನ್ನು ಆಧರಿಸಿದ ಬಹುಪಾಲು ಉದ್ಯಮಗಳಿಗೆ ಆಗ ಅದ್ಭುತ ಅವಕಾಶವೆಂದು ತೋರಿದ್ದು, ಗ್ರಾಹಕರ ಪ್ರಸಕ್ತ ಮತ್ತು ಭವಿಷ್ಯದ ನಡವಳಿಕೆಯನ್ನು ಅಭ್ಯಸಿಸುವ ಮತ್ತು ಊಹಿಸುವ ಕೆಲಸ. ಮೂರು ದಶಕಗಳಿಂದ ಮುಕ್ತ ಮಾರುಕಟ್ಟೆ ಜಗತ್ತಿನಾದ್ಯಂತ ವ್ಯಾಪಿಸಿದಂತೆಲ್ಲ, ಗ್ರಾಹಕರನ್ನು ವಿಧವಿಧವಾಗಿ ಆಕರ್ಷಿಸಿ ಸರಕು ಮಾರುವಲ್ಲಿ ಮಾರುಕಟ್ಟೆ ಆರ್ಥಿಕತೆಯು ತೊಡಗಿಕೊಂಡಿದೆಯಷ್ಟೇ? ದೈನಂದಿನ ಬಳಕೆಯ ವಸ್ತುಗಳು, ವಿದ್ಯುನ್ಮಾನ ಉತ್ಪನ್ನಗಳು, ಬಟ್ಟೆ- ಫ್ಯಾಷನ್... ಹೀಗೆ ವೈವಿಧ್ಯಮಯ ಉತ್ಪನ್ನ ಮತ್ತು ಸೇವೆಗಳ ಅಪಾರ ಆಯ್ಕೆಗಳನ್ನು ಬಳಕೆದಾರರ ಎದುರು ಸುರಿಯುವ ಉದ್ಯಮಗಳೇ ಎಲ್ಲೆಡೆ. ಇವರೆಲ್ಲರಿಗೂ ಗ್ರಾಹಕರ ಮನವೊಲಿಸುವುದೇ ದೊಡ್ಡ ಸವಾಲು. ಗ್ರಾಹಕರ ಇಂಗಿತವರಿತು, ಅವರ ಖರೀದಿ ಗುಣವನ್ನು ತಮ್ಮ ಅನುಕೂಲಕ್ಕೆ ಒಗ್ಗಿಸಲು ಅವು ಪ್ರಯತ್ನಿಸುತ್ತಲೇ ಇರುತ್ತವೆ. ಇದಕ್ಕೆ ಜಾಹಿರಾತುಗಳಷ್ಟೇ ಸಾಲವು. ತಮ್ಮ ರಣನೀತಿ ರೂಪಿಸಲು ಗ್ರಾಹಕ ನಡವಳಿಕೆ ಕುರಿತಾಗಿ ಆಳವಾದ ಮಾಹಿತಿಯೂ ಬೇಕು. ಇದಕ್ಕಾಗಿ ಸಾಕಷ್ಟು ಹಣ ಚೆಲ್ಲಲೂ ಅವು ಸಿದ್ಧವಾಗಿರುತ್ತವೆ. ಬಿಗ್ ಡೇಟಾ ಆಧರಿಸಿ ಹೊಸತಾಗಿ ಉದಯಿಸಿದ ಸೇವಾ ಉದ್ಯಮಕ್ಕೆ, ಗ್ರಾಹಕರ ಕೊಳ್ಳುಬಾಕತನವನ್ನು ಪೋಷಿಸುವ ಈ ವ್ಯವಹಾರೋದ್ದಿಮೆಗಳೇ ಮುಖ್ಯ ಗ್ರಾಹಕರಾದರು. ಒಂದೂವರೆ ದಶಕದ ಬೆಳವಣಿಗೆಯಿದು!  

ಹೀಗಾಗಿ, ಗ್ರಾಹಕರ ವರ್ತನೆ ಮತ್ತು ಭವಿಷ್ಯದ ನಡವಳಿಕೆ ಅಧ್ಯಯನವೇ ಇಂದು ಒಂದು ಉದ್ದಿಮೆಯಾಗಿದೆ. ಭೌಗೋಳಿಕತೆ, ವರಮಾನ, ಧರ್ಮ, ಜಾತಿ, ಲಿಂಗ, ಶಿಕ್ಷಣ- ಹೀಗೆ ವೈವಿಧ್ಯಮಯ ಹಿನ್ನೆಲೆಯ ಬಳಕೆದಾರರ ಮನಸ್ಥಿತಿಯನ್ನು ಬಿಗ್ ಡೇಟಾ ತಂತ್ರಜ್ಞಾನ ಬಳಸಿ ಅಂದಾಜಿಸಲಾಗುತ್ತಿದೆ. ಇದಕ್ಕೆಲ್ಲ ಜನರ ನಿಖರವಾದ ಖಾಸಗಿ ಮಾಹಿತಿಗಳೂ ಬೇಕು. ಇದನ್ನು ಸಂಗ್ರಹಿಸುವ ಕೆಲಸ ಸಮಯ ಮತ್ತು ವೆಚ್ಚವನ್ನು ಬೇಡುವ ಪ್ರಕ್ರಿಯೆ. ಈ ಹೊತ್ತಿನಲ್ಲಿ, ವ್ಯಾಪಕವಾಗಿ ಹಬ್ಬಿದ ಸಾಮಾಜಿಕ ಜಾಲತಾಣಗಳು ಅಮೂಲ್ಯವಾದ ವೈಯಕ್ತಿಕ ಮಾಹಿತಿಗಳನ್ನು ಸುಲಭವಾಗಿ ನೀಡುವ ಗಣಿಗಳಾಗಿ ಒದಗಿಬಂದವು. ವ್ಯಕ್ತಿಯ ಕುಟುಂಬ ಪ್ರವರ, ಆಸೆ-ಆಕಾಂಕ್ಷೆ, ಹೀಗೆ ಎಲ್ಲ ಮಾಹಿತಿಗಳೂ ಸುಲಭವಾಗಿ ಈ ದತ್ತಾಂಶ ವಿಶ್ಲೇಷಣೆ ಕಂಪನಿಗಳ ಕೈಸೇರತೊಡಗಿದವು. ಈ ಬಗೆಯಲ್ಲಿ ಸಂಗ್ರಹಿಸಿದ ಕೋಟ್ಯಂತರ ಜನರ ಖಾಸಗಿ ಮಾಹಿತಿಗಳನ್ನು ತಂತ್ರಾಂಶಗಳ ಮೂಲಕ ವಿಶ್ಲೇಷಿಸಿ, ನಾಗರಿಕರ ವರ್ತನೆ ಕುರಿತಾದ ಬೃಹತ್ ಮಾಹಿತಿಕೋಶವನ್ನೇ ರೂಪಿಸಲು ಅವಕ್ಕೆ ಸಾಧ್ಯವಾಯಿತು. ಉತ್ಪನ್ನವೊಂದರ ವಾಣಿಜ್ಯಿಕ ಯಶಸ್ಸಿನ ಸಾಧ್ಯತೆ ಮತ್ತು ಆ ಕುರಿತ ವ್ಯಾಪಾರಿ ನಿರ್ಣಯಗಳನ್ನು ಕೈಗೊಳ್ಳಲು, ಯಾವುದೇ ಉದ್ಯಮಕ್ಕೆ ಈ ಬಗೆಯ ದತ್ತಾಂಶಾಧಾರಿತ ಮಾರ್ಗದರ್ಶನ ಇಂದು ತೀರಾ ಅಗತ್ಯ. ಸಾಬೂನೊಂದರ ಖರೀದಿಯಿಂದ ಪ್ರಾರಂಭಿಸಿ, ಚುನಾವಣೆಯಲ್ಲಿ ಮತ ಚಲಾಯಿಸುವವರೆಗೆ, ನಾಗರಿಕ ವರ್ತನೆಗಳ ಕುರಿತು ಖಚಿತವಾಗಿ ಅಭಿಪ್ರಾಯ ನೀಡುವಷ್ಟು ಈ ದತ್ತಾಂಶ ವಿಶ್ಲೇಷಣೆ ಉದ್ಯಮಗಳು ಇಂದು ಬೆಳೆದಿವೆ.

ಈ ಕೇಂಬ್ರಿಜ್ ಅನಲಿಟಿಕಾ ಅವುಗಳಲ್ಲಿ ಒಂದಷ್ಟೇ. ಭಾರತದಲ್ಲೂ ಇಂಥ ಹಲವಾರು ಉದ್ಯಮಗಳಿದ್ದು, ನಮ್ಮ ನಾಡಿನ ಪ್ರತಿಭಾನ್ವಿತ ಪದವೀಧರರೂ ಅಲ್ಲಿ ದುಡಿಯುತ್ತಿದ್ದಾರೆ. ನಮ್ಮ ಅನೇಕ ವರ್ತನೆಗಳನ್ನು ದಾಖಲಿಸಿ, ಅದೆಷ್ಟೋ ಸರಕು ಮತ್ತು ಸೇವಾ ಉದ್ಯಮಗಳಿಗೆ ಅವು ಈಗಾಗಲೇ ಸೇವೆಯನ್ನು (’ಕನ್ಸಲ್ಟನ್ಸಿ’) ಒದಗಿಸಿರಲೂ ಸಾಕು!

ಎಂಥ ವಿರೋಧಾಭಾಸ! ಜಗತ್ತಿನ ಗಂಭೀರ ಸಮಸ್ಯೆಗಳಿಗೆಲ್ಲ ಪರಿಹಾರ ದೊರಕಿಸುವ ಭರವಸೆಯೊಂದಿಗೆ ಒಂದೂವರೆ ದಶಕಗಳ ಹಿಂದೆ ಮೂಡಿಬಂದ ಈ ತಂತ್ರಜ್ಞಾನ, ಬಳಕೆದಾರರ ಕೊಳ್ಳುಬಾಕತನವನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಮಾತ್ರ ತಲ್ಲೀನವಾಗಿರುವ ಮಾರುಕಟ್ಟೆಯ ಕೈಗೊಂಬೆಯಾಗಿ ಕುಳಿತಿದೆಯಲ್ಲ! ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದಿಂದ ದತ್ತಾಂಶ ಸಂಗ್ರಹಿಸುವ ಕಾಯಕ ಬಹು ಸುಲಭವಾಗುತ್ತಿದೆ. ಅಂತರ್ಜಾಲದಲ್ಲಿ ಸಲೀಸಾಗಿ ದೊರಕುವ ಅಧಿಕೃತ ಜಾಲತಾಣಗಳು, ವಿವಿಧ ದತ್ತಕೋಶಗಳು, ಮಾಹಿತಿ ಹಕ್ಕು ಕಾನೂನಿನ್ವಯ ಸರ್ಕಾರಿ ಹಾಗೂ ಅರೆಸರ್ಕಾರಿ ಸಂಸ್ಥೆಗಳು ಸಾರ್ವಜನಿಕವಾಗಿ ಘೋಷಿಸುವ ಮಾಹಿತಿಗಳು- ಇವೆಲ್ಲ ಅಧಿಕೃತವಾಗಿಯೇ ಈ ಕಂಪನಿಗಳ ಕೈಸೇರುತ್ತಿವೆ. ಇನ್ನು, ಸಾಮಾಜಿಕ ಜಾಲತಾಣಗಳು, ಮೆಟ್ರಿಮೋನಿಯಲ್  ಮತ್ತು ಉದ್ಯೋಗ ಕೊಡಿಸುವ ಜಾಲತಾಣಗಳ ದತ್ತಾಂಶಕೋಶಗಳಿಂದ ಮಾಹಿತಿಯನ್ನು ಒಪ್ಪಿಗೆಯಿಲ್ಲದೆ ಕದಿಯುತ್ತಿರುವುದೂ ಸಾಗಿದೆ. ಹೀಗಾಗಿ, ‘ಆಧಾರ್’ ಅಥವಾ ‘ಜಿ.ಎಸ್.ಟಿ.’ ಯಂಥ ಸರ್ಕಾರಿ ಸೇವೆಗೆ ಪೂರಕವಾಗಿ ಖಾಸಗಿ ಸಹಭಾಗಿತ್ವದಲ್ಲಿ ರೂಪುಗೊಂಡಿರುವ ಬೃಹತ್ ದತ್ತಾಂಶಕೋಶಗಳ ಸುರಕ್ಷತೆ ಕುರಿತು ತೀವ್ರ ಭಯ ಕಾಡಿರುವುದು! ಇನ್ನೂ ಮುಂದುವರಿದು, ಅಂತರ್ಜಾಲದಲ್ಲಿ ರಸಪ್ರಶ್ನೆ, ಸಮೀಕ್ಷೆ ಇತ್ಯಾದಿ ವಿವಿಧ ತಂತ್ರಗಳನ್ನಾಧರಿಸಿ ಅರಿವಿಲ್ಲದೆ ನಾಗರಿಕರ ಮಾಹಿತಿ ಪಡೆಯುವುದೋ, ಅಥವಾ ಅವರ ನಡವಳಿಕೆಯ ಕುರಿತು ಹೊಸದೇ ಅಭಿಪ್ರಾಯಗಳನ್ನು ಮೂಡಿಸುವುದೋ ಕೂಡ ಸಾಗಿದೆ. ದತ್ತಾಂಶ ಸಾಗರದಲ್ಲಿ ಬೀಸುತ್ತಿರುವ ಈ ಹೊಸ ಬಗೆಯ ಸುನಾಮಿ- ಚಂಡಮಾರುತಗಳಿಗೆ ಬಲಿಯಾಗುತ್ತಿರುವುದು ನಾಗರಿಕರ ಖಾಸಗಿತನವಷ್ಟೇ ಅಲ್ಲ, ಭವಿಷ್ಯದ ಸುರಕ್ಷತೆ ಕೂಡ!

ಅಂತರ್ಜಾಲದಲ್ಲಿ ತಡಕಾಡಿದರೆ, ಲಕ್ಷಾಂತರ ರೂಪಾಯಿ ಶುಲ್ಕದೊಂದಿಗೆ ಬಿಗ್- ಡೇಟಾ ತಂತ್ರಜ್ಞಾನದಲ್ಲಿ ತರಬೇತಿ ನೀಡುವ ನೂರಾರು ಕೋರ್ಸ್‌ಗಳು ಕಣ್ಣಿಗೆ ಬೀಳುತ್ತಿವೆ. ಭವಿಷ್ಯದಲ್ಲಿನ ಭಾರಿ ಸಂಬಳದ ಕನಸಿನಿಂದಾಗಿ ಅಪಾರ ಪದವೀಧರರು ಇದರತ್ತ ಸಾಗುತ್ತಲೂ ಇದ್ದಾರೆ. ಸಂಖ್ಯಾಶಾಸ್ತ್ರ ಮತ್ತು ತಂತ್ರಾಂಶಗಳಲ್ಲಿ ಕೌಶಲ್ಯಭರಿತರಾದ ಈ ಅಮೂಲ್ಯ ಯುವಜನ ಸಂಪನ್ಮೂಲ ಹಾಗೂ ಆರ್ಥಿಕ ಸಂಪತ್ತು ಈ ಋಣಾತ್ಮಕ ದಿಶೆಯಲ್ಲಿ ಹರಿಯುತ್ತಿದೆ ಎಂಬುದು ವಿಚಾರಕ್ಕೀಡುಮಾಡುವ ಸಂಗತಿಯಲ್ಲವೆ? ಸಾಮಾಜಿಕ ಭವಿಷ್ಯ: ಸುರಕ್ಷತೆಯ ಹಾದಿ ನಾವಿಂದು ತೇಲುತ್ತಿರುವ ಅಂತರ್ಜಾಲ ಜಗತ್ತಿನ ತಳದಲ್ಲಿ ದತ್ತಾಂಶ ಸಾಗರವೇ ನಿರ್ಮಾಣವಾಗಿದೆ. ದಿನಂಪ್ರತಿ ಒಂದಲ್ಲ ಒಂದು ಬಗೆಯಲ್ಲಿ ನಾವು ಬಳಸುವ ಈ ಮೇಲ್, ಜಾಲತಾಣಗಳ ಸರ್ಫಿಂಗ್, ಸಾಮಾಜಿಕ ಜಾಲತಾಣಗಳಲ್ಲಿನ ಅಪ್ಡೇಟ್...ಈ ಒಂದೊಂದೂ ನಮ್ಮ ನಡವಳಿಕೆಯ ಕುರಿತ ಹತ್ತಾರು ಮಾಹಿತಿಗಳನ್ನು ಈ ಮಾಹಿತಿ ಸಮುದ್ರಕ್ಕೆ ಸೇರಿಸುತ್ತವೆ. ಎಲ್ಲರೂ ಕೆಲವು ಬಿಂದಿಗೆಯಾದರೂ ಸುತ್ತಲಿನ ಸುದ್ದಿಯನ್ನೋ, ತಮ್ಮದೇ ಖಾಸಗೀ ವರ್ತಮಾನವನ್ನೋ ಪ್ರತಿದಿನವೂ ಈ ಸಾಗರಕ್ಕೆ ಸುರಿಯುವವರೇ!

ಜನರಿಂದ ಅಸಾಧಾರಣ ವೈವಿಧ್ಯದ ಮಾಹಿತಿ ದತ್ತಾಂಶವನ್ನು ಶೇಖರಿಸುತ್ತಲೇ ಇರುವ ಸಾಮಾಜಿಕ ಜಾಲತಾಣಗಳೆಂದರೆ ಕೇವಲ ಫೇಸ್ ಬುಕ್, ಟ್ವಿಟರ್, ವಾಟ್ಸ್ ಅಪ್, ಮೈಸ್ಪೇಸ್, ಲಿಂಕ್ಡೆನ್, ಡಿಗ್, ಮೀಟ್- ಅಪ್ ಅಷ್ಟೇ ಅಲ್ಲ. ಈ ಬಗೆಯ ಅಸಂಖ್ಯ ತಾಣಗಳಿವೆ. ಬ್ಲಾಗ್‌ಗಳು, ವ್ಯಾಪಾರಿ ಉದ್ದೇಶದ  ತರಹೇವಾರಿ ಸಂದೇಶಗಳನ್ನು ಸದಾ ಕಳುಹಿಸುವ ಜಾಲತಾಣಗಳು, ಪ್ರಣಯಕ್ಕೆ ಜೊತೆಗಾರರನ್ನು ಸೇರಿಸುವಂಥ ಸೈಟ್‌ಗಳು, ಅಗ್ಗದ ದರಕ್ಕೆ ಆಕಾಶವನ್ನೇ ತಂದಿಡುವ ಭ್ರಮೆ ಹುಟ್ಟಿಸುವ ವಿದ್ಯುನ್ಮಾನ ಪುಟಗಳು, ಇಸ್ಪೀಟ್ ಆಟದಂಥ ಮೋಜಿನಾಟ, ಲಾಟರಿ ತರಹದ ದಿಢೀರ್ ಹಣ ಗಳಿಕೆಯ ಜೂಜಿನ ತಾಣಗಳು.., ಅದೆಷ್ಟು ಬಗೆ! ಸೂಜಿಗಲ್ಲಿನಂತೆ ಆಕರ್ಷಿಸುವ ಅಂತರ್ಜಾಲ ಜಗದ ಈ ನಿಗೂಢ ಶಕ್ತಿಗಳು ಕೇವಲ ಜನರ ಹಣವನ್ನಷ್ಟೇ ಅಲ್ಲ, ಅವರ ಅಮೂಲ್ಯ ಸಮಯ ಮತ್ತು ಖಾಸಗೀ ಮಾಹಿತಿಗಳನ್ನೂ ಕದ್ದೊಯ್ಯುತ್ತಿವೆ! ಈ ತಾಣಗಳ ಮೋಹಕ್ಕೆ ಬೀಳದಿರುವ ಮತ್ತು ಅನಧಿಕೃತ ತಾಣಗಳಲ್ಲಿ ಅನವಶ್ಯಕವಾಗಿ ತಮ್ಮ ಖಾಸಗೀ ವಿಚಾರಗಳನ್ನೋ, ಛಾಯಾಚಿತ್ರಗಳನ್ನೋ ಹಂಚಿಕೊಳ್ಳದಿರುವ ವಿವೇಕ ಇಂದಿನ ತುರ್ತು ಅಗತ್ಯ. ಈ ತಂತ್ರಜ್ಞಾನದ ಎಷ್ಟೆಲ್ಲ ಉಪಯುಕ್ತ ಬಳಕೆ ಸಾಧ್ಯವಿದೆ. ಸಾರ್ವಜನಿಕ ಸೇವೆಗಳ ನ್ಯೂನತೆಗಳಿಗೆ ಪರಿಹಾರ, ಎಲ್ಲರಿಗೂ ಆರೋಗ್ಯಸೇವೆ, ಶಿಕ್ಷಣದಲ್ಲಿ ಕ್ಷಮತೆ, ಬ್ಯಾಂಕಿಂಗ್ ಲೋಪಗಳ ತಡೆಗಟ್ಟುವುದು... ಹೀಗೆ ಹಲವಾರು ಸಾಮಾಜಿಕ ಕ್ಷೇತ್ರಗಳ ಒಳಿತಿನಲ್ಲಿ ಈ ತಂತ್ರಜ್ಞಾನವು ತೊಡಗಿಕೊಳ್ಳಬಹುದು.

ಉದಾಹರಣೆಗೆ, ಪರಿಸರ ಸಂರಕ್ಷಣಾ ಕ್ಷೇತ್ರವನ್ನೇ ಗಮನಿಸೋಣ. ನಾಗರಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ದೇಶದ ಮೂಲೆ ಮೂಲೆಯಿಂದ ನೆಲ-ಜಲ-ಕಾಡು-ಪರಿಸರ ಪರಿಸ್ಥಿತಿಯ ಮಾಹಿತಿಗಳನ್ನೆಲ್ಲ ದಿನಂಪ್ರತಿ ಸಂಗ್ರಹಿಸಲು ಸಾಧ್ಯವಿದೆ. ಕೆರೆ- ನದಿಗಳು ಎಲ್ಲಿ ಮತ್ತು ಹೇಗೆ ಮಲಿನವಾಗುತ್ತಿವೆ? ಯಾವ ಕಾಡು ಅತಿಕ್ರಮಣವಾಗುತ್ತಿದೆ? ಅಭಯಾರಣ್ಯದಂಚಿನ ಆನೆಯ ಹಿಂಡು ಯಾವ ಕಡೆ ಸಾಗುತ್ತಿದೆ? ಮುಂಗಾರಿನ ಮಳೆ ಎಲ್ಲಿಗೆ ತಲುಪಿಲ್ಲ ಅಥವಾ ಎಲ್ಲಿ ಯಾವ ಬೆಳೆಗೆ ಎಂಥ ರೋಗ ಬಂದಿದೆ?... ಇತ್ಯಾದಿ ಕುರಿತಂತೆಲ್ಲ ಖಚಿತ ಮಾಹಿತಿ ಸಂಗ್ರಹಣೆ ನಾಗರಿಕರ ಸಹಭಾಗಿತ್ವದಿಂದ ಸಾಧ್ಯ. ದತ್ತಾಂಶ ವಿಶ್ಲೇಷಣೆ ತಂತ್ರಜ್ಞರು ಈ ಮಾಹಿತಿಗಳನ್ನಾಧರಿಸಿ ಕಾಲ- ದೇಶಕ್ಕನುಗುಣವಾದ ಸೂಕ್ತ ಪರಿಹಾರವನ್ನು ವೇಗವಾಗಿ ಸೂಚಿಸಬಲ್ಲರು. ಅವುಗಳ ಆಧಾರದಲ್ಲಿ ತ್ವರಿತವಾಗಿ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವುದರಿಂದ, ಆಡಳಿತ ವ್ಯವಸ್ಥೆಗೆ ಅದೆಷ್ಟು ಕ್ಷಮತೆ ಬರಬಹುದೆಂದು ಊಹಿಸಿದರೇ ಪುಳಕವಾಗುತ್ತದೆ. ಇಂಥ ಹಲವು ಪ್ರಯತ್ನಗಳು ಪ್ರಯೋಗಾತ್ಮಕವಾಗಿ ಅಲ್ಲಲ್ಲಿ ನಡೆಯುತ್ತಿವೆಯಾದರೂ, ಅವು ತಲುಪಬಹುದಾದ ವ್ಯಾಪ್ತಿ, ಆಳ ಮತ್ತು ದೂರ ಇನ್ನೂ ಬಹಳಷ್ಟಿವೆ. ಸಮಾಜದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ದೊರಕಿಸುವತ್ತ ದತ್ತಾಂಶ ವಿಜ್ಞಾನವನ್ನು ಹೆಚ್ಚೆಚ್ಚು ತೊಡಗಿಸುವ ಅಗತ್ಯವೇನೋ ಇದೆ. ಸಾರ್ವಜನಿಕ ಸಂಶೋಧನಾ ಸಂಸ್ಥೆಗಳು ನೈತಿಕ ಚೌಕಟ್ಟಿನಲ್ಲಿಯೇ ಈ ಬಗೆಯ ಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂದೇನೋ ಅಪೇಕ್ಷಿಸಬಹುದು. ಆದರೆ, ಖಾಸಗಿ ರಂಗದಲ್ಲೇ ಹೆಚ್ಚಾಗಿ ಬೆಳೆದುನಿಂತಿರುವ ಈ ತಂತ್ರಜ್ಞಾನವನ್ನು ಸಮಾಜಮುಖಿಯಾದ ಜನವಿಜ್ಞಾನವನ್ನಾಗಿ ಪಳಗಿಸುವುದು ಈ ಕಾಲಘಟ್ಟದ ಸವಾಲೇ ಸರಿ.

ಅಂಗೈಯಲ್ಲೇ ಭವಿಷ್ಯ ಚಿಂತನೆ! 
ಸಾಮಾಜಿಕ ಜಾಲತಾಣಗಳಂಥ ಅಂತರ್ಜಾಲ ಮಾಧ್ಯಮ ಸಮಾಜದ ಧನಾತ್ಮಕ ಚಲನೆಗೆ ಇಂಧನ ಒದಗಿಸುವ ಅದ್ಭುತ ಶಕ್ತಿಯೂ ಆಗಬಹುದು.  ಪಶ್ಚಿಮದ ವಿಶ್ವವಿದ್ಯಾನಿಲಯಗಳಲ್ಲಿದ್ದಂತೆ, ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ವಿಭಿನ್ನ ವಿಷಯಗಳ ಮಾಹಿತಿಯನ್ನು ಹಂಚಿಕೊಳ್ಳಲೋ, ವಸ್ತುನಿಷ್ಠ ಚರ್ಚೆಗಾಗಿಯೋ ಇವನ್ನು ಪರಿಣಾಮಕಾರಿಯಾಗಿ ಬಳಸಬಹುದಲ್ಲವೆ?

ಹಳ್ಳಿಗಾಡಿನಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಟಾಟಾ ಇನ್‌ಸ್ಟಿಟ್ಯೂಟ್  ಅಥವಾ ನ್ಯಾಶನಲ್ ಲಾ ಯುನಿವರ್ಸಿಟಿಯ ಅಧ್ಯಾಪಕರೋ ಅಥವಾ ವಿದ್ಯಾರ್ಥಿಗಳೊಂದಿಗೋ ಚರ್ಚಿಸುವ ಸಂಭ್ರಮ ಊಹಿಸಿಕೊಳ್ಳಿ. ನಮ್ಮದೇ ಸುತ್ತಲಿನ ರಸ್ತೆ, ವಿದ್ಯುತ್, ನೀರು ಇತ್ಯಾದಿ ಮೂಲಸೌಕರ್ಯಗಳಲ್ಲಿನ ಕೊರತೆಗಳಿಗೆ ಪರಿಹಾರ ಕಂಡುಕೊಳ್ಳುವ ಅಥವಾ ಸ್ಥಳೀಯ ಸರ್ಕಾರವನ್ನು ಎಚ್ಚರಿಸುವ ಫೇಸ್‌ಬುಕ್, ವಾಟ್ಸ್‌ಆ್ಯಪ್ ಗುಂಪುಗಳನ್ನು ರಚಿಸುವ ಉತ್ಸಾಹ ಯುವಕರದ್ದಾಗಬಹುದು.

ತಮ್ಮ ಊರಿನ ಕೃಷಿ ಉತ್ಪನ್ನಗಳನ್ನೋ, ಸಂಗೀತ- ನೃತ್ಯದಲ್ಲಿನ ಉದಯೋನ್ಮುಖ ಕಲಾವಿದರನ್ನೋ ಅಥವಾ ಇನ್ನಾವುದೋ ಕ್ಷೇತ್ರದ ಸ್ಥಳೀಯ ಪ್ರತಿಭಾನ್ವಿತರನ್ನೋ ಹೊರಜಗತ್ತಿಗೆ ಪರಿಚಯಿಸುವ ಕೆಲಸ ಮಾಡಬಹುದು. ಹವಾಮಾನ ಬದಲಾವಣೆ ಕುರಿತ ಸಂಶೋಧನೆ ಮತ್ತು ಪರಿಹಾರ ಸೂತ್ರಗಳಿಗೆ ಈ ಬಗೆಯ ತಳಮಟ್ಟದ ಖಚಿತ ಮಾಹಿತಿಯ ನಿರಂತರ ಪೂರೈಕೆಯ ಅಗತ್ಯವನ್ನು ವಿಜ್ಞಾನಿಗಳು ಪ್ರತಿಪಾದಿಸುತ್ತಲೇ ಇದ್ದಾರೆ.

ಸಾಮಾಜಿಕ ಮಾಧ್ಯಮಗಳನ್ನು ಈ ಬಗೆಯ ಸಾಮೂಹಿಕ ಭವಿಷ್ಯ ಚಿಂತನೆಯಲ್ಲಿ ತೊಡಗಿಸುವ ಕೆಲಸ ಯುವಜನತೆಯದ್ದಾಗಬಹುದು. ಅಂಗೈಯಲ್ಲಿನ ಮೊಬೈಲಿನಲ್ಲಿ ಏನನ್ನು ನೋಡುತ್ತೇವೆ
ಹಾಗೂ ಯಾವುದನ್ನು ದಾಖಲಿಸುತ್ತೇವೆ ಎಂಬುದರಿಂದಲೇ ಸಮಾಜದ, ದೇಶದ ಭವಿಷ್ಯ ಬದಲಾಗಬಹುದು!

ಆರ್ಥಿಕತೆಯ ಹೊಸ ಸಂತಾನ 
ಮಾಹಿತಿಯುಗದಲ್ಲಿ ಜನರ ಖಾಸಗಿ ವಿಷಯಗಳು ಮತ್ತು ಸಾರ್ವಜನಿಕ ಒಳಿತಿನ ನಡುವೆ ಇರುವ ಸಂಬಂಧವೇನು? ಎನ್ನುವುದರ ಕುರಿತ ಚರ್ಚೆ ಆರಂಭವಾಗಿ ದಶಕಗಳೇ ಸಂದವು. ಕೇಂಬ್ರಿಜ್‌ ಅನಲಿಟಿಕಾ ಕಂಪನಿಯು ಕದ್ದು ಸಂಗ್ರಹಿಸಿದ ವೈಯಕ್ತಿಕ ಮಾಹಿತಿಗಳನ್ನಾಧರಿಸಿ, ರಾಜಕೀಯ ಪಕ್ಷವೊಂದಕ್ಕೆ ಚುನಾವಣಾ ಲಾಭ ದೊರಕಿಸುವ ವ್ಯವಹಾರ ಮಾಡಿದೆ ಎನ್ನಲಾದ ಇತ್ತೀಚಿನ ಸುದ್ದಿ ಈ ಚರ್ಚೆಗೆ ಮರುಹುಟ್ಟು ನೀಡಿದೆ. ಭಾರತದಲ್ಲೂ ಇದರ ಹೆಜ್ಜೆ ಮೂಡಿರುವುದು ಇನ್ನಷ್ಟು ಗಾಬರಿ ಮೂಡಿಸಿದೆ. ಈ ವರ್ತಮಾನವನ್ನು ಬಂಡವಾಳಶಾಹಿಗಳು ಮತ್ತು ರಾಜಕೀಯ ಶಕ್ತಿಗಳ ಅವ್ಯವಹಾರಗಳ ಮತ್ತೊಂದು ರೂಪ ಎಂದು ಮಾತ್ರ ಪರಿಗಣಿಸಿದರೆ, ಗಂಭೀರ ವಿದ್ಯಮಾನವೊಂದನ್ನು ಸರಳೀಕರಿಸಿದಂತಾಗುತ್ತದೆ. ವಾಸ್ತವದಲ್ಲಿ, ಇದು ವೇಗವಾಗಿ ಬೆಳೆಯುತ್ತಿರುವ ‘ಬೃಹತ್ ದತ್ತಾಂಶ (ಬಿಗ್- ಡೇಟಾ) ವಿಶ್ಲೇಷಣೆ’ ಉದ್ಯಮ ಕ್ಷೇತ್ರವು ಹುಟ್ಟುಹಾಕಿರುವ ಹೊಸ ಬೆಳವಣಿಗೆಗಳ ಒಂದು ತುಣುಕು ಮಾತ್ರ!

ಇಂದಿನ ಮಾಹಿತಿಯುಗದಲ್ಲಿ ದೇಶ– ಭಾಷೆಗಳ ಗಡಿಮೀರಿ ಜನರೆಲ್ಲ ಅಂತರ್ಜಾಲದಲ್ಲಿ ಬಂದಿಯಾಗುತ್ತಿದ್ದಾರಷ್ಟೇ. ಅಲ್ಲಿ ಅಡಗಿರುವ ನಾಗರಿಕರ ಖಾಸಗಿ ಮಾಹಿತಿಗಳನ್ನೇ ಬಳಸಿ ಹಣ ಗಳಿಸುವ ಹೊಸ ಉದ್ಯಮಗಳು ಇಂದು ಹುಟ್ಟಿಕೊಂಡಿವೆ. ಸಂಕೀರ್ಣವಾಗಿರುವ ಈ ತಂತ್ರಜ್ಞಾನ ಆಧಾರಿತ ಉದ್ಯಮ ವಲಯದ ಪ್ರಾಥಮಿಕ ಸ್ವರೂಪಗಳನ್ನಾದರೂ ಅರ್ಥ ಮಾಡಿಕೊಂಡರೆ, ಇದು ಉಂಟುಮಾಡುತ್ತಿರುವ ಗಂಭೀರ ಸಮಾಜೋ- ಆರ್ಥಿಕ ವಿಪ್ಲವಗಳ ಅರಿವಾದೀತು. ಮಾರುಕಟ್ಟೆ ಆರ್ಥಿಕತೆಯ ಈ ಹೊಸ ಸಂತಾನದ ಚಲನೆಗಳನ್ನು ಕೆಲಮಟ್ಟಿಗಾದರೂ ಸಮಾಜಮುಖಿ ಕಾರ್ಯಗಳತ್ತ ಹೊರಳಿಸುವ ದಾರಿಗಳು ಆಗ ತೋರಿಯಾವು.
(ಲೇಖಕ ಸಂರಕ್ಷಣಾ ಜೀವಶಾಸ್ತ್ರಜ್ಞ)

Comments
ಮುಖಪುಟ

‘ಕುಟುಂಬದ ಹಸ್ತಕ್ಷೇಪಕ್ಕೆ ಅವಕಾಶವೇ ಇಲ್ಲ’

‘ನಾಡಿನ ಜನ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡದೇ ಇದ್ದರೂ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಭರವಸೆ ಈಡೇರಿಸಲು ಸಾಧ್ಯವಾಗದೇ ಇದ್ದರೆ ನಾನು ಈ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ. ನಾನೇ ಹಿಂದೆ ಸರಿಯುತ್ತೇನೆ’ –ಎಚ್.ಡಿ. ಕುಮಾರಸ್ವಾಮಿ.

ಖಾತೆ ಕ್ಯಾತೆ: ವಿಸ್ತರಣೆ ವಿಳಂಬ

ಹಣಕಾಸು ಖಾತೆಗಾಗಿ ಜೆಡಿಎಸ್‌ ಬಿಗಿಪಟ್ಟು ಮುಂದುವರಿಸಿದೆ. ಇದರಿಂದ ಬೆದರಿರುವ ಕಾಂಗ್ರೆಸ್ ವರಿಷ್ಠರು ಈ ಖಾತೆ ಬಿಟ್ಟು ಕೊಡುವ ಆಲೋಚನೆಯಲ್ಲಿ ಇದ್ದಾರೆ. ಇನ್ನುಳಿದ ಖಾತೆಗಳ ಹಂಚಿಕೆ ಬಗ್ಗೆ ಚರ್ಚೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಚಿವ ಸಂಪುಟದ ಉಳಿದ ಸದಸ್ಯರ ಪ್ರಮಾಣ ವಚನಕ್ಕೆ ವಾರಾಂತ್ಯದವರೆಗೆ ಮುಹೂರ್ತ ನಿಗದಿಯಾಗುವ ಲಕ್ಷಣ ಕಾಣಿಸುತ್ತಿಲ್ಲ.

ಶೇನ್ ‘ಸೂಪರ್’ ಆಟ; ಚೆನ್ನೈಗೆ ಕಿರೀಟ

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್‌ 2018ರ ಫೈನಲ್‌ ಪಂದ್ಯದಲ್ಲಿ ಶೇನ್‌ ವಾಟ್ಸನ್ ಅವರ ಭರ್ಜರಿ ಶತಕದ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಅಮೋಘ ಜಯ ಸಾಧಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ರೈತರ ಸಾಲ ಮನ್ನಾ: ಕರ್ನಾಟಕ ಬಂದ್‌ ಅನುಮಾನ?

‘ರೈತರ ಸಾಲ ಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್‌ ನಡೆಸುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸದನದಲ್ಲಿ ಶುಕ್ರವಾರ ಹೇಳಿದ್ದರು. ಬಂದ್‌ ವೇಳೆ ಬಿಗಿ ಭದ್ರತೆ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ (ಡಿಜಿ–ಐಜಿ) ನೀಲಮಣಿ ರಾಜು, ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಂಗತ

ದುರ್ಬಲ ರಾಜಕಾರಣಿಗಳು

ಕಂಡಕಂಡವರಿಗೆಲ್ಲ ಉದ್ದಂಡ, ದೀರ್ಘದಂಡ ನಮಸ್ಕಾರ ಹಾಕಿ, ತಮ್ಮ ವ್ಯಕ್ತಿತ್ವವನ್ನೇ ಇಲ್ಲಗೈಯುತ್ತಿರುವ ರಾಜಕಾರಣಿಗಳು ಈ ರಾಜ್ಯಕ್ಕೆ, ಈ ದೇಶಕ್ಕೆ ಬೇಡವೇ ಬೇಡ

ಇವಿಎಂ ಮತ್ತು ಮುಂದಿನ ಚುನಾವಣೆಗಳು

ಮೇ 12ರಂದು ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯನ್ನು ಮೇ 13ರ ಸಂಚಿಕೆಯಲ್ಲಿ ಎಲ್ಲಾ ಪತ್ರಿಕೆಗಳು ವಿವರವಾಗಿ ದಾಖಲಿಸಿದ್ದವು. ಆದರೆ, ‘ಪ್ರಜಾವಾಣಿ’ಯಲ್ಲಿ ಬಂದ ವಿವರಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಎರಡು ಅಂಶಗಳಿದ್ದುವು. ಈ ಅಂಶಗಳನ್ನು ಓದುಗರು

ಪಾರದರ್ಶಕತೆ ಮುಖ್ಯ

ಇವಿಎಂನ ವಿಶ್ವಾಸಾರ್ಹತೆ ಸಾಬೀತುಪಡಿಸಲು ವಹಿಸುವ ಮುತುವರ್ಜಿಯ ಜೊತೆಜೊತೆಗೆ ಅದರ ದುರ್ಬಳಕೆಗೆ ಇರುವ ಅವಕಾಶಗಳತ್ತ ಕೂಡ ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳು ಗಮನಹರಿಸುವುದು ಅಗತ್ಯ.

ಪ್ರಜಾಪ್ರಭುತ್ವದ ಹೆಚ್ಚುಗಾರಿಕೆ

ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಕಾರಣಕ್ಕಾಗಿ ಪುಟ್ಟ ಪುಟ್ಟ ಸಮುದಾಯಗಳಲ್ಲಿ ಸ್ವಾಭಿಮಾನ ಮತ್ತು ಒಟ್ಟುಗೂಡುವಿಕೆಗೆ ಜೀವ ಬಂದಿದೆ

ಆಟಅಂಕ

ಅಲೋಕ್ ಕನಸುಗಳ ‘ಏಸ್’

‘ಟೆನಿಸ್‌ ದುಬಾರಿ ಆಟವಾಗಿದ್ದು, ಬಡವರ ಕೈಗೆಟುಕುವುದಿಲ್ಲ. ಇದೂ ಒಂದು ರೀತಿಯಲ್ಲಿ ಜೂಜಾಟ ಇದ್ದಂತೆ. ಆಟದಲ್ಲಿ ಕ್ಲಿಕ್‌ ಆದರೆ ನಾವು ಹೂಡಿದ ಹಣ ಬರುತ್ತದೆ; ಇಲ್ಲದಿದ್ದರೆ ಎಲ್ಲವನ್ನೂ ಕಳೆದುಕೊಂಡು ಬರಿದಾಗುತ್ತೇವೆ’ ಎಂಬುದು ಅಲೋಕ್‌ ಅಭಿಪ್ರಾಯ.

ಅವಕಾಶಕ್ಕಾಗಿ ಕಾದವರು...

ಐಪಿಎಲ್‌ 11ನೇ ಆವೃತ್ತಿ ಮುಕ್ತಾಯ ಗೊಂಡಿದೆ. ಪ್ರಶಸ್ತಿ ಕನಸು ಹೊತ್ತು ಭರವಸೆಯಿಂದ ಕಣಕ್ಕೆ ಇಳಿದಿದ್ದ ಎಷ್ಟೋ ತಂಡಗಳು ಪ್ಲೇ ಆಫ್ ಹಂತಕ್ಕೇರುವುದಕ್ಕೂ ಸಾಧ್ಯವಾಗದೆ ನಿರಾಸೆಗೊಂಡಿವೆ. ಇದು ತಂಡಗಳ ಕಥೆಯಾದರೆ, ಆಯ್ಕೆಯಾಗಿಯೂ ಆಡಲು ಸಾಧ್ಯವಾಗದ ಯುವ ಆಟಗಾರರು ಅನೇಕರು ಇದ್ದಾರೆ. ಅವರು ಈಗ ನಿರಾಸೆಗೊಂಡಿದ್ದಾರೆ.
 

ಕೈಗೂಡುವುದೇ ಪದಕದ ಕನಸು?

ಏಳುಬೀಳುಗಳ ನಡುವೆ ಸಾಗುತ್ತಿರುವ ಭಾರತ ಮಹಿಳಾ ಹಾಕಿ ತಂಡ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. 2014ರ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು, ಏಷ್ಯಾ ಕಪ್‌ನಲ್ಲಿ ಚಿನ್ನ, ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಹೀಗೆ ಹಲವು ಪದಕಗಳನ್ನು ಜಯಿಸಿದೆ. ಈ ಎಲ್ಲ ಸಾಧನೆ ಜುಲೈ 21ರಿಂದ ಲಂಡನ್‌ನಲ್ಲಿ ಆರಂಭವಾಗುವ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಪದಕ ಗೆಲ್ಲುವ ಆಸೆಗೆ ಸ್ಫೂರ್ತಿಯಾಗುವುದೇ?  

ಟಾಸ್ ಏನ್ ಆಗುತ್ತೆ..?

ಇದೀಗ ಟಾಸ್ ಹಾಕುವ ಪದ್ಧತಿಯನ್ನು ಕೈಬಿಡಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಚಿಂತನೆ ನಡೆಸಿದೆ. ಇದಕ್ಕೆ ಹಲವು ಹಿರಿಯ ಆಟಗಾರರಿಂದ ಪರ–ವಿರೋಧದ ಚರ್ಚೆಗಳು ಆರಂಭವಾಗಿವೆ.

ಶಿಕ್ಷಣ

ಪರೀಕ್ಷೆ ಎಂಬುದು ಪೆಡಂಭೂತ ಅಲ್ಲ!

ವಿದ್ಯಾರ್ಥಿಗಳು ಯಾವುದೇ ಪರೀಕ್ಷೆಯನ್ನು ಬರೆಯುತ್ತಿರಲಿ. ಪರೀಕ್ಷೆ, ಪರೀಕ್ಷೆ ಎಂದು ಹೆದರಿ ಕೂರಬಾರದು. ಧೈರ್ಯ ಕಳೆದುಕೊಂಡರೆ ಮನಸ್ಸು ಗಲಿಬಿಲಿಯಾಗುತ್ತದೆ. ಮನೆಯಲ್ಲಿಯೇ ಕೃತಕವಾಗಿ ಪರೀಕ್ಷಾ ಕೊಠಡಿಯ ವಾತಾವರಣ ನಿರ್ಮಿಸಿಕೊಂಡು ಈ ಒತ್ತಡವನ್ನು ಅನುಭವಿಸಿ ಗೆಲ್ಲಬೇಕು. ಪರೀಕ್ಷೆ ಪೆಡಂಭೂತವಲ್ಲ; ಅದು ಕಲಿಕೆಯ ಮಾಪಕ. ಸೆಮಿಸ್ಟರ್‌ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಈ ಲೇಖನ ಮಾಹಿತಿಯನ್ನು ನೀಡುತ್ತದೆ.

 

ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್ ಮಾಡುವಾಸೆ...

ಬಿಎ/ಬಿಕಾಂ ಇನ್ ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್‌ಗಳಿವೆ. ಎಂಟಿಎ ಮಾಸ್ಟರ್ ಆಫ್ ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್‌ ಸಹ ಇದೆ. ಇಂಟಿಗ್ರೇಟೆಡ್ ಕೋರ್ಸ್ 5 ವರ್ಷದ್ದು, ಎಂಬಿಎ ಇನ್ ಟ್ರಾವೆಲ್ ಅಂಡ್ ಟೂರಿಸಂ ಇದೆ.

ಪ್ರಜಾವಾಣಿ ಕ್ವಿಜ್ -22

1. ಕರ್ನಾಟಕ ಸಂಗೀತದಲ್ಲಿರುವ ಮೇಳಕರ್ತ ರಾಗಗಳ ಸಂಖ್ಯೆ ಎಷ್ಟು?

ಮರಳಿ ಯತ್ನವ ಮಾಡೋಣ...

ಪರೀಕ್ಷೆಯಲ್ಲಿ ಫೇಲಾದ ಮಾತ್ರಕ್ಕೆ ಜೀವನವೇ ಮುಗಿಯಿತು ಎಂದುಕೊಳ್ಳಬಾರದು. ಬದಲಾಗಿ ‘ಈ ಪರೀಕ್ಷೆಯಲ್ಲಿ ಫೇಲಾದರೆ ಏನಂತೆ ಮುಂದೆ ಬರುವ ಮರುಪರೀಕ್ಷೆ ಬರೆದು ಪಾಸು ಮಾಡೇ ಮಾಡುತ್ತೇನೆ’ ಎಂಬ ಆತ್ಮವಿಶ್ವಾಸದೊಂದಿಗೆ ಹೊಸ ಮಾರ್ಗದೊಂದಿಗೆ ಓದಿದಾಗ ಯಶಸ್ಸು ಖಂಡಿತ ನಿಮ್ಮದೆ...